ನಾಗದೋಷ ಪರಿಹಾರಕ್ಕೆ ತಿರುಚೆಂದೂರ್ ಮುರುಗನ್ ಪೂಜೆ

A low-angle shot of the towering, white, ornate gopuram (temple tower) of the Tiruchendur Murugan Temple, viewed from a paved courtyard with devotees in the foreground.
ತಿರುಚೆಂದೂರು ಮುರುಗನ್ ದೇವಾಲಯದ ಗೋಪುರದ ಭವ್ಯ ನೋಟ.

ತಿರುಚೆಂದೂರಿನ ಮುರುಗನ್ ದೇವಾಲಯದ ಬಗ್ಗೆ ಈಗ ಹೇಳಲು ಹೊರಟಿರುವುದು. ಸಮುದ್ರಕ್ಕೆ ಅಂಟಿಕೊಂಡಂತಿರುವ ಈ ದೇವಸ್ಥಾನ ಅಕ್ಷರಶಃ ಅಯಸ್ಕಾಂತ. ನೆತ್ತಿ- ಕಾಲು ಸುಡುತ್ತಿದ್ದರೂ ಅದರ ಪರಿವೆಯೇ ಇಲ್ಲದೆ, ಭಕ್ತಿ ಭಾವದಲ್ಲಿ ತೋಯ್ದ ಜನರು ತಮ್ಮ ಆರಾಧ್ಯದೈವನ ದರ್ಶನ ಪಡೆದು, ಕೆಲವರು ಕಣ್ಣೀರಾಗುತ್ತಾರೆ. ಮತ್ತೆ ಕೆಲವರು ಆತ್ಮಾನಂದದ ಅನುಭೂತಿಯಲ್ಲಿ ತೇಲುತ್ತಾರೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಚೆಂದೂರಿನ ಮುರುಗನ ಬಗ್ಗೆ ಹೇಳಬೇಕೆಂದರೆ, ಅವನ ಆರು ಪಡೆವೀಡುಗಳಲ್ಲಿ ಇದು ಎರಡನೆಯದು. ಆರುಪಡೆ ವೀಡು ಅಂದರೆ, ಮುರುಗನ ಆರು ಮನೆಗಳು ಅಂತ ಅರ್ಥ. ಇನ್ನು ತಿರುಚೆಂದೂರ್ ದೇವಸ್ಥಾನದ ವೈಶಿಷ್ಟ್ಯಗಳು ಹಲವು. ಅವುಗಳನ್ನು ಪಟ್ಟಿ ಮಾಡುವುದಾದರೆ, ಇಲ್ಲಿನ ರಾಜಗೋಪುರ ಪಶ್ಚಿಮಕ್ಕೆ ಇದೆ. ಈ ದೇವಸ್ಥಾನದ ಪೂರ್ವದಲ್ಲಿ ಬಹಳ ಹತ್ತಿರಕ್ಕೆ ಸಮುದ್ರ ಇರುವುದರಿಂದ ಅಡಿಪಾಯದ ರಕ್ಷಣೆಯ ದೃಷ್ಟಿಯಿಂದ ಹೀಗೆ ಮಾಡಲಾಗಿದೆ. 

ಇನ್ನು ಸಣ್ಣ ಬಾವಿಯೊಂದು ಇಲ್ಲಿದೆ. ಅದರ ಹೆಸರು ನಳಿಕಿನರು. ಇದರಲ್ಲಿ ಯಾವಾಗಲೂ ನೀರು ಊಡುತ್ತಾ ಇರುತ್ತದೆ ಮತ್ತು ನೀರು ಸಿಹಿಯಾಗಿರುತ್ತದೆ. ಬಾವಿ ನೀರು ಸಿಹಿಯಾಗಿರುವುದರಲ್ಲಿ ಏನು ವಿಶೇಷ ಎಂಬ ಪ್ರಶ್ನೆ ಮೂಡಬಹುದು. ಆದರೆ ಸಮುದ್ರಕ್ಕೆ ಹತ್ತಿರದಲ್ಲಿಯೇ ಇದ್ದರೂ ಸಿಹಿಯಾದ ರುಚಿ ಹೊಂದಿದೆ ಎಂಬ ಕಾರಣಕ್ಕೆ ಉಲ್ಲೇಖ ಮಾಡಬೇಕು. ಆರಂಭದಲ್ಲಿಯೇ ತಿಳಿಸಿದಂತೆ ಮುರುಗನಿಗೆ ಆರು ಮನೆಗಳು. ಇವುಗಳಲ್ಲಿ ಐದು ಮನೆಗಳು ಬೆಟ್ಟದ ಮೇಲಿದ್ದರೆ, ಈ ತಿರುಚೆಂದೂರಿನ ಮುರುಗನ ಮನೆ ಮಾತ್ರ ಸಮುದ್ರಕ್ಕೆ ಮುಖ ಮಾಡಿ, ಸಮುದ್ರದ ಬಳಿಯೇ ಇದೆ.

ಕರುಂಗಾಲಿ ಮಾಲೆ ಧರಿಸಿದರೆ ಸಿಗುವ ಲಾಭಗಳೇನು? ದಿಂಡಿಗಲ್ ಪಾತಾಳ ಮುರುಗನ್ ದೇವಸ್ಥಾನದ ವಿಶೇಷತೆ, ನಂಬಿಕೆಗಳು

ಸ್ಥಳಪುರಾಣ:

ಈ ಸ್ಥಳದಲ್ಲಿ ಅಸುರನಾದ ಸೂರಪದ್ಮ ಎಂಬುವನಿದ್ದ. ಅವನು ಪದೇಪದೇ ದೇವತೆಗಳಿಗೆ ಹಿಂಸೆ ಕೊಡುತ್ತಿದ್ದ. ಅವನಿಂದ ರಕ್ಷಣೆ ದೊರಕಿಸಿಕೊಡಬೇಕು ಎಂದು ಬೇಡಿಕೊಂಡು, ಈ ದೇವತೆಗಳು ಈಶ್ವರನ ಮೊರೆ ಹೋಗುತ್ತಾರೆ. ಆಗ ಶಿವನು ತನ್ನ ಮೂರನೇ ಕಣ್ಣಿನಿಂದ ಆರು ಮಕ್ಕಳನ್ನು ಸೃಷ್ಟಿಸುತ್ತಾನೆ. ಅವರೆಲ್ಲರನ್ನೂ ಒಟ್ಟುಗೂಡಿಸಿ, ಆರು ಮುಖ, ಹನ್ನೆರಡು ಕೈಗಳ ಒಂದೇ ಶಕ್ತಿಯಾಗಿ ಪಾರ್ವತಿ ಮಾಡುತ್ತಾಳೆ. ಜೊತೆಗೆ ವೇಲಾಯುಧವನ್ನು ನೀಡುತ್ತಾಳೆ. ಐದು ದಿನಗಳು ಸೂರಪದ್ಮನ ಜೊತೆಗೆ ಕಾದಾಟ ನಡೆಸಿದ ನಂತರ ಮುರುಗನು ಆರನೇ ದಿನ ಆ ರಾಕ್ಷಸನನ್ನು ಕೊಲ್ಲುತ್ತಾನೆ. ಹತನಾದ ಸೂರಪದ್ಮ ಮಾವಿನ ಮರವಾಗಿ ಪರಿವರ್ತನೆ ಆಗುತ್ತಾನೆ ಹಾಗೂ ವೇಲು ಎರಡು ಭಾಗಗಳಾಗುತ್ತವೆ. ಅದರಲ್ಲಿ ಒಂದು ತುಂಡು ನವಿಲಾಗಿಯೂ ಮತ್ತೊಂದು ತುಂಡು ಹುಂಜವಾಗಿಯೂ ಪರಿವರ್ತನೆ ಆಗುತ್ತವೆ. ಆಗ ಮುರುಗ ನವಿಲನ್ನು ತನ್ನ ವಾಹನವಾಗಿ ಹಾಗೂ ಹುಂಜವನ್ನು ತನ್ನ ಧ್ವಜವಾಗಿ ಮಾಡಿಕೊಳ್ಳುತ್ತಾನೆ.

ಪವಾಡ:

1646ರಿಂದ 1648ರ ಮಧ್ಯೆ ನಡೆದ ಘಟನೆ ಬಗ್ಗೆ ದೇವಾಲಯದ ಪ್ರಾಕಾರದಲ್ಲಿಯೇ ಚಿತ್ರ ರೂಪದಲ್ಲಿ ದಾಖಲಿಸಲಾಗಿದೆ. ಇಲ್ಲಿನ ದೇವರ ಮೂರ್ತಿಯನ್ನು ಚಿನ್ನದ್ದು ಎಂದುಕೊಂಡು, ಆ ಮೂರ್ತಿ ಹಾಗೂ ನಟರಾಜ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಅದನ್ನು ಡಚ್ ಅಧಿಕಾರಿಗಳು ಸಮುದ್ರದಲ್ಲಿ ತೆಗೆದುಕೊಂಡು ಹೋಗುವಾಗ ಭಾರೀ ಗಾಳಿ, ಅಲೆಗಳ ಹೊಡೆತ ವಿಪರೀತ ಆಗಿ, ಹಡಗು ಮುಳುಗುವ ಪರಿಸ್ಥಿತಿ ಬರುತ್ತದೆ. ಆ ದೇವರೇ ಬುದ್ಧಿ ಕೊಟ್ಟನೇನೋ ಅನ್ನುವ ಹಾಗೆ ಹಡಗಿನಲ್ಲಿದ್ದ ಅಧಿಕಾರಿಗಳು ದೇವರ ಮೂರ್ತಿಗಳನ್ನು ಸಮುದ್ರಕ್ಕೆ ಹಾಕಿಬಿಡ್ತಾರೆ. ಆ ಕೂಡಲೇ ಸಮುದದ್ರವೇ ಪ್ರಶಾಂತವಾಗಿ ಬಿಡುತ್ತದೆ. ಆ ನಂತರ ಸಾಕ್ಷಾತ್ ಮುರುಗನೇ ತನ್ನ ಭಕ್ತರೊಬ್ಬರ ಕನಸಲ್ಲಿ ಬಂದು, ಇಂಥ ಸ್ಥಳದಲ್ಲಿ ತಾನು ಇರುವುದಾಗಿ ಹೇಳುತ್ತಾನೆ. ಆ ನಂತರ ಜನರ ಸಹಾಯ ಪಡೆದು, ಆ ಭಕ್ತ ಮತ್ತೆ ವಿಗ್ರಹವನ್ನು ಅಲ್ಲಿಯೇ ಪ್ರತಿಷ್ಠಾಪನೆ ಮಾಡುತ್ತಾರೆ.

ಡಯಾಬಿಟೀಸ್ ನಿಯಂತ್ರಣಕ್ಕೆ ನಂಬಿಕೆಯ ದೇಗುಲ: ಸಾವಿರ ವರ್ಷಗಳ ಇತಿಹಾಸದ ಕರುಂಬೇಶ್ವರರ್ ದೇವಾಲಯ

ಇತಿಹಾಸ:

ಆದರೆ, ಡಚ್ ಅಧಿಕಾರಿಗಳ ದಾಖಲೆಯಲ್ಲಿ ಬೇರೆಯೇ ರೀತಿಯಲ್ಲಿದೆ. ಅದರ ಪ್ರಕಾರ,  ದೇವತಾ ವಿಗ್ರಹವನ್ನು ತೆಗೆದುಕೊಂಡು ಸಿಲೋನ್ ಗೆ (ಶ್ರೀಲಂಕಾ) ಹೋಗಿ, ಅವುಗಳನ್ನು ವಾಪಸ್ ಕೊಡಬೇಕು ಅಂದರೆ ಒಂದು ಲಕ್ಷ ಹಣವನ್ನು ಕೇಳುತ್ತಾರೆ. ಆಗ ಹಿಂದೂ- ಮುಸ್ಲಿಮರ ನಿಯೋಗವೊಂದು ಸಿಲೋನ್ ನಿಂದ ಆ ಮೂರ್ತಿಯನ್ನು ವಾಪಸ್ ತರಬೇಕು ಅಂತ ಹೊರಡುತ್ತದೆ.  ಈ ಮಧ್ಯೆ ತಿರುವಾಂಕೂರ್ ನ ರವಿವರ್ಮ ಈ ಮೂರ್ತಿಗಳ ಖರೀದಿಗೆ ರಹಸ್ಯ ಮಾತುಕತೆ ನಡೆಸುತ್ತಾರೆ.  ಒಬ್ಬ ವ್ಯಾಪಾರಿ ಜೊತೆಗೆ ಈ ಮೂರ್ತಿಗಳನ್ನು ವಾಪಸ್ ಕಳಿಸುತ್ತಾರೆ; ಅದಕ್ಕೆ ಇಪ್ಪತ್ತೈದರಿಂದ ಮೂವತ್ತು ಸಾವಿರದ ಬೆಲೆ ಹೇಳಲಾಗುತ್ತದೆ.  ಯಾರೂ ಖರೀದಿ ಮಾಡುವುದಕ್ಕೆ ಬಾರದೇ ಇದ್ದಾಗ ಆ ವರ್ತಕ ಸಿಲೋನ್ ನ ಗಾಲೆಗೆ ಬರುತ್ತಾರೆ.  ಆ ನಂತರ ಏನಾಯಿತು ಎಂಬ ಬಗ್ಗೆ ಡಚ್ಚರ ದಾಖಲೆಗಳಲ್ಲಿ ಇಲ್ಲ. 1653ನೇ ಇಸವಿಯಲ್ಲಿ ತಿರುಮಲೈ ನಾಯಕ್ ಮತ್ತು ವಡಮಲೈಯಪ್ಪ ಪಿಳ್ಳೈ ಎಂಬುವರ ಸಮ್ಮುಖದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪನೆ ಆಗಿರುವ ಮಾಹಿತಿ ಇದೆ.

ಪ್ರಾಚೀನತೆ:

ವಾಸ್ತವದಲ್ಲಿ ದೇವಸ್ಥಾನದ ನಿರ್ಮಾಣ ಆಗಿದ್ದು ಯಾವಾಗ ಎಂಬ ಬಗ್ಗೆ ಗೊತ್ತಿಲ್ಲ. ಆದರೆ ನಂಬಿಕೆಗಳ ಪ್ರಕಾರ ಪಾಂಡ್ಯರು ಮತ್ತು ಚೇರರ ಕಾಲದಲ್ಲಿ ನಿರ್ಮಾಣವಾಗಿದೆ ಎಂದು ಕೆಲವರು ನಂಬುತ್ತಾರೆ. ಮತ್ತೆ ಕೆಲವರು ಈ ದೇವಸ್ಥಾನ ಒಂಬತ್ತನೇ ಶತಮಾನದಲ್ಲಿ ವಿಶ್ವಕರ್ಮನಿಂದ ನಿರ್ಮಾಣ ಆಗಿದೆ ಎಂದು ನಂಬುತ್ತಾರೆ.

ಶ್ರೀವಾಂಛಿಯಂ ಶಿವ ದೇವಾಲಯ: ಇಲ್ಲಿ ಯಮಧರ್ಮರಾಜನಿಗೆ ನಡೆಯುತ್ತೆ ಮೊದಲ ಪೂಜೆ!

ಭಕ್ತರ ಬೇಡಿಕೆ ಮತ್ತು ಹರಕೆಗಳು:

ತಿರುಚೆಂದೂರಿಗೆ ಬರುವವ ಭಕ್ತರು ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ದೇವರಿಗೆ ಶರಣಾಗುತ್ತಾರೆ:

  • ನಾಗದೋಷ ಪರಿಹಾರ: ಸುಬ್ರಮಣ್ಯ ಸ್ವಾಮಿಯನ್ನು ನಾಗಗಳ ಅಧಿಪತಿ ಎಂದು ನಂಬಲಾಗಿರುವುದರಿಂದ, ಜಾತಕದಲ್ಲಿರುವ ನಾಗದೋಷಗಳು, ಮದುವೆ ವಿಳಂಬ ಮತ್ತು ಸಂತಾನ ಪ್ರಾಪ್ತಿಗಾಗಿ ಭಕ್ತರು ಇಲ್ಲಿ ಪೂಜೆಗಳನ್ನು ಸಲ್ಲಿಸುತ್ತಾರೆ.
  • ವೃತ್ತಿ ಮತ್ತು ಯಶಸ್ಸು: ಜೀವನದಲ್ಲಿನ ಅಡೆತಡೆಗಳನ್ನು ನಿವಾರಿಸಲು, ಕೆಲಸದಲ್ಲಿ ಯಶಸ್ಸು ಸಿಗಲು ಮತ್ತು ಶತ್ರುಗಳ ಬಾಧೆಯಿಂದ ಮುಕ್ತಿ ಪಡೆಯಲು ಭಕ್ತರು ಇಲ್ಲಿ ವಿಶೇಷ ಪೂಜೆಗಳನ್ನು ಮಾಡಿಸುತ್ತಾರೆ.
  • ಹರಕೆ ಪೂಜೆಗಳು: ತಮ್ಮ ಇಷ್ಟಾರ್ಥಗಳು ಸಿದ್ಧಿಸಿದ ನಂತರ, ಭಕ್ತರು ಕೇಶಮುಂಡನ (ತಲೆಗೂದಲು ಅರ್ಪಣೆ), ತುಲಾಭಾರ, ಮತ್ತು ವಿಶೇಷ ಅಭಿಷೇಕಗಳನ್ನು ಸಲ್ಲಿಸುವ ಮೂಲಕ ಕೃತಜ್ಞತೆ ಸಲ್ಲಿಸುತ್ತಾರೆ.

ದೇವಾಲಯದ ಸಮಯ: 

ಪ್ರತಿದಿನ ಬೆಳಗ್ಗೆ 5ರಿಂದ ಮಧ್ಯಾಹ್ನ 1 ರವರೆಗೆ ಮತ್ತು ಸಂಜೆ 4ರಿಂದ ರಾತ್ರಿ 9ರವರೆಗೆ. ವಿಶೇಷ ದಿನಗಳಲ್ಲಿ ಈ ಸಮಯದಲ್ಲಿ ಬದಲಾವಣೆಗಳು ಆಗಬಹುದು.

ಶ್ರೀರಂಗಂನ ಸಕ್ಕರತ್ತಾ ಆಳ್ವಾರ್ ಸನ್ನಿಧಿಯ ವಿಶೇಷತೆ ಏನು? ಶತ್ರು ಬಾಧೆ ಮತ್ತು ದೃಷ್ಟಿ ದೋಷ ನಿವಾರಣೆಗೆ ಇಲ್ಲಿದೆ ಪರಿಹಾರ

ತಲುಪುವುದು ಹೇಗೆ:

  • ಹತ್ತಿರದ ರೈಲು ನಿಲ್ದಾಣ: ತಿರುಚೆಂದೂರ್ ರೈಲು ನಿಲ್ದಾಣ (ಸುಮಾರು 1.7 ಕಿ.ಮೀ).
  • ಹತ್ತಿರದ ವಿಮಾನ ನಿಲ್ದಾಣ: ತೂತ್ತುಕುಡಿ ವಿಮಾನ ನಿಲ್ದಾಣ (ಸುಮಾರು 39 ಕಿ.ಮೀ).
  • ಬಸ್ ಸಂಪರ್ಕ: ತಿರುಚೆಂದೂರ್ ಬಸ್ ನಿಲ್ದಾಣದಿಂದ ಉತ್ತಮ ಸಾರಿಗೆ ಸೌಲಭ್ಯವಿದೆ.

ಕೊನೆಮಾತು: ಈ ದೇವಸ್ಥಾನಕ್ಕೆ ತೆರಳುವಾಗ ಇಲ್ಲಿನ ತಾಪಮಾನವನ್ನು ಗಮನದಲ್ಲಿಟ್ಟು ಕೊಳ್ಳುವುದು ಒಳ್ಳೆಯದು. ಸಮುದ್ರದ ಸಮೀಪದಲ್ಲಿಯೇ ಇರುವುದರಿಂದ ಧಗೆಯ ಪ್ರಮಾಣ ಸಹ ಹೆಚ್ಚು. ದೈಹಿಕವಾಗಿ ಅಶಕ್ತರಾದವರು, ಬಿಸಿಲು ಹಾಗೂ ಧಗೆಯನ್ನು ತಡೆಯಲು ಸಾಧ್ಯವಿಲ್ಲದವರು ಬೇಕಾದಂಥ ಮುನ್ನೆಚ್ಚರಿಕೆ ಹಾಗೂ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಿ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts