ಇಡೀ ಭಾರತದಲ್ಲಿಯೇ ಖ್ಯಾತಿ ಪಡೆದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಸರ್ಪ ಸಂಸ್ಕಾರ ಪೂಜೆಯ ಕ್ರಮ ಹೇಗೆ, ಶಾಸ್ತ್ರಸಮ್ಮತವಾಗಿ ಮಾಡುವುದು ಹೇಗೆ ಎಂಬಿತ್ಯಾದಿ ವಿಚಾರಗಳನ್ನು ಉಡುಪಿಯ ಕಾಪು ಮೂಲದ ಜ್ಯೋತಿಷಿ ಹಾಗೂ ಅಧ್ಯಾತ್ಮ ಚಿಂತಕರಾದ ಪ್ರಕಾಶ್ ಅಮ್ಮಣ್ಣಾಯ ಅವರು ಲೇಖನ ರೂಪದಲ್ಲಿ ಮುಂದಿಟ್ಟಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಾಸ್ತ್ರದ ವಿಚಾರದಲ್ಲಿ ಆಧಾರ ಸಹಿತವಾಗಿ ಅಭಿಪ್ರಾಯ ಮಂಡನೆ ಮಾಡುವುದಕ್ಕೆ ಬಯಸುವವರು ‘ಶ್ರೀಗುರುಭ್ಯೋ.ಕಾಮ್’ಗೆ ಲೇಖನ ರೂಪದಲ್ಲಿ ಕಳುಹಿಸಬಹುದು. – ಸಂಪಾದಕ, ಶ್ರೀಗುರುಭ್ಯೋ.ಕಾಮ್
ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದಲ್ಲಿ ಆಶ್ಲೇಷಾ ಬಲಿ, ಸರ್ಪ ಸಂಸ್ಕಾರ, ನಾಗಪ್ರತಿಷ್ಠೆ ಮಾಡಿದರೆ ಮಾತ್ರ ಪೂರ್ಣ ಫಲ ಸಿಗುತ್ತದೆ.ಉಳಿದಂತೆ ಬೇರೆ ಮಠ- ಮಂದಿರ, ಖಾಸಗಿ ವಸತಿ ಗೃಹ, ಪುರೋಹಿತರ ಮನೆಗಳಲ್ಲಿ ಅಥವಾ ಯಾವುದೇ ಖಾಸಗಿ ಸ್ಥಳಗಳಲ್ಲಿ ಪೂಜೆ ಮಾಡಿದಲ್ಲಿ ದೋಷ ಪರಿಹಾರ ಆಗುವುದಿಲ್ಲ, ಇದರಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ ಎಂದು ಮಾಧ್ಯಮಗಳಲ್ಲಿ ದೇವಳದ ಆಡಳಿತ ಮಂಡಳಿಯವರು ಪ್ರಕಟಣೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಪಸಂಸ್ಕಾರವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈಗ ಮಾಡುತ್ತಿರುವ ಕ್ರಮಕ್ಕೆ ವಿಶ್ಲೇಷಣಾತ್ಮಕವಾದ ಆಕ್ಷೇಪಣೆಯಾಗಿ ಲೇಖನವನ್ನು ಬರೆಯಲಾಗಿದೆ. ಪ್ರಾಜ್ಞರು ಈ ಬಗ್ಗೆ ಖಂಡಿತಾ ಗಮನ ಹರಿಸಲೇಬೇಕು. ಕ್ಷೇತ್ರದ ಸಾನ್ನಿಧ್ಯದ ಬಗ್ಗೆ ಸರ್ವಥಾ ಆಕ್ಷೇಪ ಇಲ್ಲ. ಆದರೆ ಕ್ರಮ, ಪದ್ಧತಿ ಹಾಗೂ ಪ್ರಮಾಣ ಸಹಿತವಾದ ಉಲ್ಲೇಖದ ಅನುಸಾರವೇ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪೂಜೆ- ಶಾಂತಿ ಪುರಸ್ಸರಾದಿಗಳು ನಡೆಯುತ್ತಿವೆಯೇ?
ಶಾಸ್ತ್ರೋಕ್ತವಾದ ಸರ್ಪ ಸಂಸ್ಕಾರ ಮಾಡಿಸಬೇಕು ಎಂಬುದು ದೋಷ ಇರುವವರ ಆದ್ಯತೆ. ದೇವಸ್ಥಾನಕ್ಕೂ ಆದಾಯ ಬೇಕು, ಭಕ್ತರ ಸೇವೆಯಿಂದ ದೇವರ ಅನುಗ್ರಹವೂ ಬೇಕು ಎಂಬುದು ಇಂಥ ಕಾರ್ಯಕ್ರಮ ಆಯೋಜಿಸುವವರ ತತ್ವ. ಆದರೆ ಅದು ಹೀಗಲ್ಲ. ಎರಡೇ ದಿನದಲ್ಲಿ ಸರ್ಪ ಸಂಸ್ಕಾರ ಮುಗಿಸುವುದು ಯಾವ ತತ್ವ? ಸರಿ, ಬೋಧಾಯನ ಕ್ರಮದಲ್ಲಿ ಹೀಗೂ ಇದೆ ಎನ್ನುತ್ತಾರೆ. ಆದರೆ ಹೆಚ್ಚಾಗಿ ಕ್ಷೇತ್ರಗಳಲ್ಲಿ ಆಶ್ವಲಾಯನ ಸೂತ್ರ ಇರುವುದು. ಬೋಧಾಯನ ಸೂತ್ರ ಇರುವಲ್ಲಿ ಆಗಬಹುದೋ ಏನೋ ಗೊತ್ತಿಲ್ಲ. ಇದು ಅನುಕೂಲ ಶಾಸ್ತ್ರ ಆಗಿದೆಯೇ ಹೊರತು, ತತ್ವಬದ್ಧ ಅಲ್ಲವೇ ಅಲ್ಲ.
ಪ್ರಧಾನಿ ನರೇಂದ್ರ ಮೋದಿಗೆ ಸುಬ್ರಹ್ಮಣ್ಯನ ಶರಣೊಂದೇ ದಾರಿ: ಲಕ್ಷ ಕದಳಿ ಯಾಗ ರಹಸ್ಯ ಏನು?
ಒಬ್ಬ ಸ್ತ್ರೀ ಮುಟ್ಟಾದರೂ ನಾಲ್ಕನೆಯ ದಿನಕ್ಕೆ ಸ್ನಾನ. ಅಂಥದ್ದರಲ್ಲಿ ಸರ್ಪ ಮೃತಿ ದಹನ ಮಾಡಿ, ಎರಡನೆಯ ದಿನವೇ ಸಂಸ್ಕಾರ ಮಾಡುವುದು ಎಷ್ಟು ಸರಿ? ದೋಷ ನಿವಾರಣೆಗೆ ಬೇಕಾದರೆ ನಾಲ್ಕು ದಿನ ಆ ಸ್ಥಳದಲ್ಲಿಯೇ ಉಳಿದುಕೊಳ್ಳಲಿ. ಆದರೆ ಈಗಂತೂ ಕೆಲವು ಗಂಟೆಗಳಲ್ಲಿ ಸರ್ಪ ಸಂಸ್ಕಾರ ಮುಗಿದೇ ಹೋಗುತ್ತದೆ. ಇದು ಭಕ್ತರ ಅನುಕೂಲಕ್ಕಲ್ಲ ಮಾಡಿದ್ದು, ಇದು ಆದಾಯದ ಅನುಕೂಲಕ್ಕೆ ಅಷ್ಟೇ. ಪಕ್ಕದ ಮಠವನ್ನು ಗುರಿ ಮಾಡಿದ್ದಷ್ಟೇ. ಅಲ್ಲಿ ಕ್ರಮ ನಿಯಮದಂತೆ ನಾಲ್ಕು ದಿನ ನಡೆಯುತ್ತದೆ. ಹಾಗೆ ಮಾಡಿದರೆ ಇವರ ಲೋಪ ಗೊತ್ತಾಗೋದಿಲ್ಲವೋ?
ಪ್ರಮಾಣ: ಸರ್ಪ ಕಲ್ಪದಲ್ಲಿ ಹೇಳಿದ ವಾಕ್ಯವಿದು-
ಸ ತು ಸಿನಿವಾಲ್ಯಾಂ, ಪೌರ್ಣಮಾಸ್ಯಾಂ, ಪಂಚಮ್ಯಾಂ, ಆಶ್ಲೇಷಯುಕ್ತ ನವಮ್ಯಾಂ ವಾ ಕಾರ್ಯಃ.
(ಈ ಮೇಲ್ಕಂಡ ದಿನಗಳಲ್ಲಿ ಮಾಡಬೇಕು.)
ಇನ್ನು ಈ ಮುಂದಿನ ದಿನಗಳಲ್ಲಿ ಮಾಡಬಾರದು:
- ಧನಿಷ್ಠಾ ಪಂಚಕೇ (ಧನಿಷ್ಠಾ ನಕ್ಷತ್ರದ ಕೊನೆಯ ಎರಡು ಪಾದ, ಶತಭಿಷಾ, ಪೂರ್ವಾಭಾದ್ರ, ಉತ್ತರಾಭಾದ್ರ, ರೇವತಿ)
- ತ್ರಿಪಾದ ನಕ್ಷತ್ರ (ಕೃತ್ತಿಕಾ ನಕ್ಷತ್ರ, ಪುನರ್ವಸು ನಕ್ಷತ್ರ, ಉತ್ತರ ಫಲ್ಗುಣಿ (ಉತ್ತರಾ) ನಕ್ಷತ್ರ, ವಿಶಾಖ ನಕ್ಷತ್ರ, ಉತ್ತರಾಷಾಢ ನಕ್ಷತ್ರ, ಪೂರ್ವಾಭಾದ್ರ ನಕ್ಷತ್ರ). (ಕೆಲವು ಸಂಪ್ರದಾಯಗಳಲ್ಲಿ ಇದರ ಬಗ್ಗೆ ಭಿನ್ನ ಅಭಿಪ್ರಾಯವಿದೆ).
ಚ ನ ಕಾರ್ಯಃ ಎಂದು ತಿಳಿಸಿದೆ. ಒಂದು ವೇಳೆ ಸರ್ಪವು ಇದೇ ನಕ್ಷತ್ರಗಳಲ್ಲಿ ಸತ್ತು ಹೋಗಿದ್ದರೆ ಪಂಚಕ, ತ್ರಿಪಾದ ಶಾಂತಿ ಕರ್ಮ ಸಹಿತ ಸರ್ಪಸಂಸ್ಕಾರ ಮಾಡಬೇಕಾಗುತ್ತದೆ. ಆದರೆ ಇಲ್ಲಿ ಹೆಚ್ಚಾಗಿ ಜ್ಯೋತಿಷ್ಯರು, “ಹೋಗಿ, ಕುಕ್ಕೆಯಲ್ಲಿ ಸರ್ಪಸಂಸ್ಕಾರ ಮಾಡಿ ಬನ್ನಿ. ನಿಮ್ಮ ಕಾರ್ಯ ಆಗುತ್ತದೆ” ಎಂದು ಸಲಹೆ ಕೊಡುತ್ತಾರೆ. ಸರ್ಪ ಮೃತಿ ಹೊಂದಿದ್ದು ಯಾವ ದಿನದಲ್ಲಿ, ಯಾವ ನಕ್ಷತ್ರದಲ್ಲಿ ಎಂದು ಗೊತ್ತಿರುತ್ತಾ? ಹಾಗಾಗಿ ಈ ದಿನಗಳಲ್ಲಿ ಮಾಡಿದರೆ ದೋಷ ವೃದ್ಧಿಯೇ ಹೊರತು ನಿವೃತ್ತಿಯಾಗದು.
Kaal Sarp Yoga: ಕಾಳಸರ್ಪ ಯೋಗ ಅಂದರೇನು, ಎಷ್ಟು ವಿಧಗಳಿವೆ, ಅದರ ಪರಿಣಾಮಗಳ ವಿವರ ಇಲ್ಲಿದೆ
ಸಾಮಾನ್ಯ ಜಾತಕದಲ್ಲಿ ಸರ್ಪ ಹತ್ಯಾದೋಷ ಹೇಳೋದು ಅಸಾಧ್ಯ. ಏನೋ ವಿಚಾರ ಹೇಳುವಾಗ ಸರ್ಪಬಾಧೆ ಎಂದು ಹೇಳಬಹುದಷ್ಟೇ. ಆಗ ಪೃಚ್ಛಕನು ತಾನು ತಿಳಿದುಕೊಂಡಿದ್ದ ಹತ್ಯಾ ವಿಚಾರವನ್ನು ಹೇಳಿದರೆ ಆಗ ವಿಮರ್ಶೆ ಮಾಡಿ ಹೇಳಬೇಕು. ಅದರಲ್ಲೂ ಸರ್ಪ ಸತ್ತದ್ದು ಯಾವ ದಿನ ಎಂದು ನಿಖರವಾಗಿ ಹೇಳಲು ಅಸಾಧ್ಯ. ಪೃಚ್ಛಕನೇ ಇಂತಹ ದಿನ ಸತ್ತದ್ದು ಎಂದರೆ, ಆ ದಿನವು ಇಂತಹ ಧನಿಷ್ಠಾ ಪಂಚಕ, ತ್ರಿಪಾದ ನಕ್ಷತ್ರವೇ ಆಗಿದ್ದರೆ ಅಲ್ಲಿ ಶಾಂತಿ ಪರಿಹಾರ ಸಹಿತ ಸರ್ಪಸಂಸ್ಕಾರ ಹೇಳಬಹುದು.
ಬಹುಶಃ ಇದು ಕೂಡ ಸಮಂಜಸವಲ್ಲ ಎಂಬುದು ನನ್ನ ಚಿಂತನೆ. ಸರ್ಪ ಸಂಸ್ಕಾರ ಮಾಡಲಿ, ಪಂಚಕ ಶಾಂತಿ ಮಾಡಿಸುವ ಅಗತ್ಯ ಇಲ್ಲ ಎಂಬುದು ನನ್ನ ಚಿಂತನೆ. ಆದರೆ ಇಂತಹ ದಿನಗಳಲ್ಲಿ ಮಾಡಿಸುವುದು ಖಂಡಿತ ಶಾಸ್ತ್ರ ವಿರೋಧವೇ.
ಇಂತಹ ದಿನಗಳನ್ನು ಬಿಟ್ಟರೆ 27 ನಕ್ಷತ್ರಗಳಲ್ಲಿ ಸಿಗುವುದು ಎಷ್ಟು? (27 – 11 = 16 ಮಾತ್ರ).
ಅಂದರೆ, ಕಂಪನಿಗೆ ಹನ್ನೊಂದು ದಿನ ನಷ್ಟವಲ್ಲವೋ? ಅದರ ಜೊತೆಗೆ ಏಕಾದಶಿಯೂ ಬಂದರೆ, ಅದರಲ್ಲೂ ಎರಡೆರಡು ಏಕಾದಶಿ ಬಂದರೆ ನಷ್ಟವಲ್ಲವೋ?
ನಷ್ಟವೋ ಲಾಭವೋ ಕ್ರಿಯೆ-ಕರ್ಮಾದಿಗಳು ದೋಷ ನಿವಾರಣೆಗೆ ವಿಧಿತವಾದದ್ದು. ನನಗೆ ಲಾಭ ಅಂದರೆ ನಾಗದೇವರ ಅನುಗ್ರಹ. ಅದಕ್ಕೇ ಭಂಗ ತಂದುಕೊಂಡರೆ ಹೇಗೆ? ಹಾಗಾಗಿ ಭಕ್ತಾದಿಗಳು ಅವರವರ ಏಳಿಗೆಯ ದೃಷ್ಟಿಯಿಂದ ದೇವಸ್ಥಾನದವರು ಆನ್‌ಲೈನ್‌ನಲ್ಲಿ ದಿನ ಕೊಟ್ಟರೂ ದಿನದ ವಿಮರ್ಶೆ ಮಾಡಿಕೊಳ್ಳಲೇಬೇಕು. ದುರ್ದಿನಗಳಲ್ಲಿ, ಅಪಮುಹೂರ್ತದಲ್ಲಿ ಮಾಡುವ ಯಾವುದೇ ಕಾರ್ಯಗಳು ನಿಷ್ಫಲವೂ ದೋಷವೂ ಆಗುತ್ತದೆ. ಇದು ಭಕ್ತಾದಿಗಳ ಏಳಿಗೆಯ ಚಿಂತನಾ ದೃಷ್ಟಿಯಿಂದ ಶಾಸ್ತ್ರಾಧಾರ ಸಹಿತ ಬರೆದದ್ದು. ಮುಂದೆ ಅವರವರಿಗೆ ಬಿಟ್ಟದ್ದು. ನಾವು ಹೇಳದಿದ್ದರೆ ಅದು ಶಾಸ್ತ್ರ ವಂಚನೆಯಾಗುತ್ತದೆ.
ಮನೆ ಕಟ್ಟುವಾಗ ನಾಗರ ಹಾದಿ ಮುಚ್ಚಿದರೆ ಅಪಾಯ ತಪ್ಪಿದ್ದಲ್ಲ! ಏನಿದು ಸರ್ಪ ವೀಥಿ ನಿರೋಧನ ದೋಷ?
ಎಲ್ಲೆಲ್ಲಿ ಹತ್ಯಾದೋಷ ಬರುತ್ತದೆ?
ಭಯದಿಂದಲೋ, ಉದ್ದೇಶಪೂರ್ವಕವಾಗಿಯೋ, ಅನಿವಾರ್ಯವಾಗಿಯೋ, ವಾಹನಗಳ ಗಾಲಿಗೆ ಸಿಕ್ಕಿಯೋ, ನಾಗ ಬನಗಳಿಗೆ ಬೆಂಕಿ ತಗುಲಿ ಸುಟ್ಟು ಹೋದಾಗ, ಹುತ್ತಗಳ ನಾಶವಾಗಿದ್ದರೆ, ಕೃಷಿಗೆ ಸಹಕರಿಸುವ ಸರೀಸೃಪಗಳನ್ನು ಕೊಂದಾಗ, ನಾಗರಹಾವನ್ನು ಹೊರತುಪಡಿಸಿ ಇತರ ಹಾವುಗಳನ್ನು ಹೊಡೆದು ಸಾಯಿಸಿದರೆ (ನೀಚ ಕುಲದ ನಾಗ) ಹತ್ಯಾದೋಷ ಬರುತ್ತದೆ.
ಕೆಲವೊಂದು ಜಾಗಕ್ಕೇ ದೋಷವಾಗುತ್ತದೆ. ಅಂಥಲ್ಲಿ ಸ್ಥಳದಲ್ಲೇ ಪ್ರತಿಷ್ಠೆ ಮಾಡಬೇಕಾದೀತು. ಇದನ್ನು ಪ್ರಶ್ನಾ ಚಿಂತನೆಯ ಮೂಲಕ ತಿಳಿಯಬಹುದು. ಹಾವಾಡಿಗರು ಹಾವನ್ನು ಮರ್ದನ ಮಾಡಿ ಕುಣಿಸುವುದಕ್ಕೆ ನಾವು ಭಿಕ್ಷೆ ಕೊಟ್ಟರೂ ಅದೂ ಪ್ರೋತ್ಸಾಹಿಸಿದ, ಪ್ರಚೋದಿಸಿದ ದೋಷವಾಗುತ್ತದೆ. ಇದಕ್ಕೆ ನಾಗದೇವರ ದರ್ಶನ, ಕ್ಷೀರಾಭಿಷೇಕ, ಅಂದರೆ ತನು ತಂಬಿಲ ಸೇವೆ ಮಾಡಿಸಿದರೆ ಸಾಕು. ಯಾವುದೇ ಮಾನವ ಸೇವೆಗೆ ಮೀಸಲಿಟ್ಟ ಜಂತುಗಳ, ಪ್ರಾಣಿಗಳ ವಧೆ ಮಾಡಿದರೂ ಅದು ಹತ್ಯಾದೋಷವೇ ಆಗುತ್ತದೆ. ಇಂಥ ಬಾಧೆಗೆ ಅದನ್ನು ನಾಶ ಮಾಡಬಹುದು ಎಂದು ಶಾಸ್ತ್ರದಲ್ಲಿದೆ. ಅಂದರೆ ಜಿರಲೆ, ಸೊಳ್ಳೆ ಇತ್ಯಾದಿ ಕ್ರಿಮಿಗಳು.
ಅನಿವಾರ್ಯ ಆಗಿದ್ದಾಗ ಹುತ್ತ, ಬಿಲಗಳನ್ನು ನಾಶ ಮಾಡಬಾರದು ಎಂದೇನಿಲ್ಲ. ಆದರೆ ಅದರೊಳಗಡೆ ಹಾವುಗಳಿದ್ದರೆ? ಅದಕ್ಕಾಗಿ ನೀರು ಬಿಟ್ಟೋ, ಹೊಗೆ ಹಾಕಿಯೋ ನೋಡಬೇಕು. ಆಗ ಅಲ್ಲಿ ಹಾವು ಇದ್ದರೆ ಅದು ಓಡಿಹೋಗುತ್ತದೆ. ಹುತ್ತ, ಬಿಲಗಳು ಸರೀಸೃಪಗಳಿಗೆ ನೆಲೆ ಇದ್ದಂತೆ.
ಲೇಖನ: ಪ್ರಕಾಶ್ ಅಮ್ಮಣ್ಣಾಯ









