ಆಗಸ್ಟ್ 12 ರ ಸೂರ್ಯ ಗ್ರಹಣ: ದ್ವಾದಶ ರಾಶಿಗಳ ಮೇಲೆ ಗ್ರಹಣದ ಪ್ರಭಾವ ಏನು?

Surya Grahan: Cosmic Alignment and Astrological Rituals.
ಆಗಸ್ಟ್ 12ರ ಸೂರ್ಯ ಗ್ರಹಣ ಪರಿಣಾಮದ ಪ್ರಾತಿನಿಧಿಕ ಚಿತ್ರಣ.

ಇದೇ ಆಗಸ್ಟ್ 12ನೇ ತಾರೀಕಿನಂದು ಕೇತುಗ್ರಸ್ತ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದ್ದರಿಂದ ಅಥವಾ ಇಲ್ಲಿ ಇದರ ನೇರ ಧಾರ್ಮಿಕ ಆಚರಣೆಗಳು ಇಲ್ಲದಿದ್ದರೂ ಗ್ರಹಣದ ಶಕ್ತಿ ಮತ್ತು ಪ್ರಕೃತಿಯ ಮೇಲಾಗುವ ಇದರ ಸೂಕ್ಷ್ಮ ಪ್ರಭಾವಗಳು ಇಡೀ ಭೂಮಂಡಲದ ಮೇಲೆ ಇದ್ದೇ ಇರುತ್ತವೆ.

ಈ ಬಾರಿಯ ಗ್ರಹಣದ ವಿಶೇಷತೆಯೇನೆಂದರೆ, ಕರ್ಕಾಟಕ ರಾಶಿಯ ಕೊನೆ ಭಾಗದಲ್ಲಿ ಇರುವಂಥ ರವಿ ಗ್ರಹದ ಮೇಲೆ ಸಿಂಹ ರಾಶಿಯ ಆರಂಭದ ಭಾಗದಲ್ಲಿ, ಅಂದರೆ ಕರ್ಕಾಟಕ ಹಾಗೂ ಸಿಂಹ ರಾಶಿಯ ಸಂಧಿಗೆ ಹತ್ತಿರದಲ್ಲಿ ಅಂಶದಲ್ಲಿ ಇರುವಂಥ ಕೇತುವಿನ ಪ್ರಭಾವ ಉಂಟಾಗುತ್ತದೆ. ಇದು ಕಾಲಪುರುಷನ 4ನೇ ಮನೆಯಲ್ಲಿ (ಕರ್ಕಾಟಕ ರಾಶಿ) ಸಂಭವಿಸುತ್ತಿದೆ. ಆಶ್ಲೇಷ ನಕ್ಷತ್ರದಲ್ಲಿ ಈ ಗ್ರಹಣ ಸಂಭವಿಸುತ್ತಿದೆ. ಇದರೊಂದಿಗೆ ಕೇತುವಿನ ಬಲ ಹಾಗೂ ಜನ್ಮ ರಾಶಿಯಿಂದ ಹನ್ನೆರಡು ಮನೆಗಳಲ್ಲಿ ಗ್ರಹಣ ಉಂಟುಮಾಡುವ ಸಮಗ್ರ ಶುಭಾಶುಭ ಫಲಗಳ ವಿಸ್ತೃತ ವಿಶ್ಲೇಷಣೆ ಇಲ್ಲಿದೆ.

ದ್ವಾದಶ ರಾಶಿಗಳ ಮೇಲೆ ಗ್ರಹಣದ ಸಾಮಾನ್ಯ ಪ್ರಭಾವ

ಈ ಬಾರಿಯ ಸೂರ್ಯ ಗ್ರಹಣದಿಂದ ಹನ್ನೆರಡು ರಾಶಿಗಳವರಿಗೆ ದೊರೆಯುವ ಸಾಮಾನ್ಯ ಫಲಗಳ ವಿಂಗಡಣೆ ಹೀಗಿದೆ:

  • ಶುಭ ಫಲಗಳು: ಕುಂಭ, ವೃಷಭ, ಕನ್ಯಾ, ತುಲಾ ರಾಶಿಯವರಿಗೆ ಶುಭ ಫಲಗಳು ದೊರೆಯಲಿವೆ.
  • ಅಶುಭ ಫಲಗಳು: ಕರ್ಕಾಟಕ, ಮೇಷ, ಧನುಸ್ಸು ಹಾಗೂ ಸಿಂಹ ಅಶುಭ ಫಲಗಳು.
  • ಮಿಶ್ರ ಫಲಗಳು: ಮಿಥುನ, ಮೀನ, ಮಕರ, ವೃಶ್ಚಿಕ ರಾಶಿಗಳಿಗೆ ಮಿಶ್ರ ಫಲಗಳು ಅನುಭವಕ್ಕೆ ಬರಲಿವೆ.

27 ನಕ್ಷತ್ರಗಳ ಸ್ವಭಾವ, ಗುಣಲಕ್ಷಣಗಳು: ನಿಮ್ಮ ನಕ್ಷತ್ರದ ಪ್ರಭಾವ ಹೇಗಿದೆ ತಿಳಿಯಿರಿ

ಕೇತು ಸಿಂಹ ರಾಶಿಯಲ್ಲೂ ರವಿ ಕರ್ಕಾಟಕ ರಾಶಿಯಲ್ಲಿಯೂ ಇರುವಾಗ ಕೇತುವಿನಿಂದ ಸೂರ್ಯಗ್ರಹಣ ಹೇಗೆ ಸಂಭವಿಸುತ್ತದೆ ಎಂಬ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಅವರು ವಿವರಿಸಿದ್ದು ಹೀಗೆ: “ಗ್ರಹಣದ ಸಮಯದಲ್ಲಿ ರಾಹು–ಕೇತುಗಳು ರಾಶಿಯ ಸಂಧಿ ಭಾಗದ ಸಮೀಪದಲ್ಲಿ ಇರುವುದರಿಂದ, ಸೂರ್ಯ–ಚಂದ್ರರು ಕರ್ಕಾಟಕದ ಕೊನೆಯ ಭಾಗದ ಆಶ್ಲೇಷಾ ನಕ್ಷತ್ರದಲ್ಲಿ ಇರುವಾಗಲೇ ಗ್ರಹಣ ಯೋಗ ಉಂಟಾಗುತ್ತದೆ. ಗ್ರಹಣಕ್ಕೆ ರಾಶಿ ಬದಲಾವಣೆ ಅಗತ್ಯವಿಲ್ಲ; ನೋಡಲ್ ಅಕ್ಷದ ಸಮೀಪ ಇದ್ದರೆ ಸಾಕು. ಈ ವ್ಯತ್ಯಾಸಕ್ಕೆ ಕಾರಣ: ಖಗೋಳಶಾಸ್ತ್ರದಲ್ಲಿ ಗ್ರಹಣವು ಟ್ರಾಪಿಕಲ್ (ಸಾಯನ) ದೀರ್ಘಾಂಶ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ವೈದಿಕ ಜ್ಯೋತಿಷ್ಯದಲ್ಲಿ ನಾವು ನಿರಯಣ (Lahiri) ರಾಶಿಗಳನ್ನು ಬಳಸುತ್ತೇವೆ. ವಿವಿಧ ಪಂಚಾಂಗಗಳು ಮತ್ತು ಸಾಫ್ಟ್‌ವೇರ್‌ಗಳು ಗ್ರಹಣದ ಪ್ರದರ್ಶನದಲ್ಲಿ ಈ ಎರಡು ಪದ್ಧತಿಗಳನ್ನು ವಿಭಿನ್ನ ರೀತಿಯಲ್ಲಿ ಸಂಯೋಜಿಸುತ್ತವೆ. ಕೇತು ಕರ್ಕಾಟಕ–ಸಿಂಹ ಸಂಧಿಯ (ಗಂಡಾಂತ) ಅತ್ಯಂತ ಸಮೀಪದಲ್ಲಿದ್ದರೆ, ಸೂರ್ಯ–ಚಂದ್ರರು ಕರ್ಕಾಟಕದ ಕೊನೆಯ ಅಂಶದಲ್ಲಿದ್ದರೂ ಗ್ರಹಣ ಸಾಧ್ಯವಾಗುತ್ತದೆ. ಕೆಲವು ವೈದಿಕ ಎಫೆಮೆರಿಸ್‌ಗಳು 2026ರ ಈ ಗ್ರಹಣವನ್ನು ಇದೇ ರೀತಿಯಲ್ಲಿ ವಿವರಿಸುತ್ತವೆ.”

ರವಿಯ ಕಾರಕತ್ವದ ಮೇಲೆ ಗ್ರಹಣ ಬೀರುವ ಪರಿಣಾಮ

ಸೂರ್ಯನು ಆತ್ಮ, ಪಿತೃ (ತಂದೆ), ಅಧಿಕಾರ, ಕೀರ್ತಿ, ಆರೋಗ್ಯ ಮತ್ತು ನಾಯಕತ್ವದ ಕಾರಕನಾಗಿದ್ದಾನೆ. ಸೂರ್ಯ ಗ್ರಹಣದಿಂದ ಈ ಕಾರಕತ್ವಗಳಲ್ಲಿ ಏರುಪೇರುಗಳು ಉಂಟಾಗಲಿದೆ:

  • ಆರೋಗ್ಯ ಮತ್ತು ಶಕ್ತಿ: ಸೂರ್ಯನು ದೇಹದ ಜೀವಶಕ್ತಿಗೆ ಆಧಾರ. ಗ್ರಹಣದ ಪ್ರಭಾವದಿಂದ ಶಾರೀರಿಕ ದಣಿವು ಅಥವಾ ಕಣ್ಣಿಗೆ ಸಂಬಂಧಿಸಿದ ಅಸ್ವಸ್ಥತೆಗಳು ಕಾಡಲಿವೆ.
  • ಉದ್ಯೋಗ ಹಾಗೂ ಅಧಿಕಾರ: ಉನ್ನತ ಹುದ್ದೆಯಲ್ಲಿರುವವರಿಗೆ ಮೇಲಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಅಥವಾ ತರಾತುರಿಯ ನಿರ್ಧಾರಗಳಿಂದ ಅಸಮಾಧಾನ ಉಂಟಾಗಲಿದೆ.

ಕೇತು ಬಲಿಷ್ಠವಾಗುವುದರಿಂದ ಉಂಟಾಗುವ ದುಷ್ಪರಿಣಾಮಗಳು

ಕೇತುವಿನಿಂದ ಸೂರ್ಯನ ಗ್ರಹಣ ಆಗುವುದರಿಂದ ಕೇತುವಿನ ಪ್ರಭಾವ ತೀವ್ರವಾಗಿರುತ್ತದೆ. ಜ್ಯೋತಿಷ್ಯದಲ್ಲಿ ಕೇತುವು ಅನಿರೀಕ್ಷಿತ ಆಘಾತ, ತೀವ್ರ ವೈರಾಗ್ಯ ಮತ್ತು ಗೊಂದಲದ ಕಾರಕನಾಗಿದ್ದಾನೆ. ಕೇತು ಬಲಗೊಳ್ಳುವುದರಿಂದ ಈ ಕೆಳಗಿನ ದುಷ್ಪರಿಣಾಮಗಳು ಗೋಚರಿಸಲಿವೆ:

  • ಮಾನಸಿಕ ಆತಂಕ: ಯಾವುದೇ ಸ್ಪಷ್ಟ ಕಾರಣವಿಲ್ಲದೆ ಮನಸ್ಸಿನಲ್ಲಿ ಭಯ ಅಥವಾ ಅಸ್ಥಿರತೆ ಕಾಡಲಿದೆ. ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗುತ್ತದೆ.
  • ಅನಿರೀಕ್ಷಿತ ಅಡೆತಡೆಗಳು: ನಡೆಯುತ್ತಿರುವ ಕಾರ್ಯಗಳಲ್ಲಿ ದಿಢೀರ್ ತಡೆಗಳು ಅಥವಾ ತಾಂತ್ರಿಕ ತೊಂದರೆಗಳು ಎದುರಾಗಲಿವೆ.

ಉದ್ಯೋಗವೋ ಅಥವಾ ವ್ಯಾಪಾರವೋ? ಈ 4 ರಾಶಿಯವರಿಗೆ ವೃತ್ತಿ ಜೀವನದಲ್ಲಿ ಸದಾ ಗೊಂದಲ!

ಜನ್ಮ ರಾಶಿಯಿಂದ ದ್ವಾದಶ ಭಾವಗಳಲ್ಲಿ ಗ್ರಹಣ ಸಂಭವಿಸಿದರೆ ಉಂಟಾಗುವ ಫಲಗಳು

ಪ್ರತಿ ಭಾವದಲ್ಲೂ ಗ್ರಹಣವು ಬೀರುವ ಪ್ರಭಾವದ ವಿವರಣೆ ಇಲ್ಲಿದೆ:

  1. ಮೊದಲನೇ ಮನೆ (ಜನ್ಮ ರಾಶಿ / ಕರ್ಕಾಟಕ): ಶಾರೀರಿಕ ದಣಿವು, ಮಾನಸಿಕ ಅಸ್ಥಿರತೆ ಮತ್ತು ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಆರೋಗ್ಯದ ಕಡೆ ವಿಶೇಷ ಕಾಳಜಿ ಅಗತ್ಯ.
  2. ಎರಡನೇ ಮನೆ (ಧನ ಸ್ಥಾನ/ಮಿಥುನ): ನಿಮಗೆ ಬರಬೇಕಾದ ಹಣ ಬರುತ್ತದೆ, ಆದರೆ ತಡವಾಗುತ್ತದೆ. ಮಾತಿನಲ್ಲಿ ಕಟುತ್ವ ಹೆಚ್ಚಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಮೂಡಲಿದೆ. ಆರ್ಥಿಕ ವ್ಯವಹಾರದಲ್ಲಿ ಹೆಚ್ಚಿನ ರಿಸ್ಕ್ ಬೇಡ.
  3. ಮೂರನೇ ಮನೆ (ಪರಾಕ್ರಮ / ಸಾಹಸ ಸ್ಥಾನ/ ವೃಷಭ): ಹೊಸ ಧೈರ್ಯ ಮತ್ತು ಸವಾಲುಗಳನ್ನು ಎದುರಿಸುವ ಛಲ ಮೂಡುತ್ತದೆ (ಶುಭ). ಸೋದರ- ಸೋದರಿಯರ ಜೊತೆಗಿನ ಭಿನ್ನಾಭಿಪ್ರಾಯ ದೂರ ಮಾಡಿಕೊಳ್ಳಲು ಅವಕಾಶ. ನಿಮ್ಮ ಕೀರ್ತಿ, ಖ್ಯಾತಿ ಹೆಚ್ಚಾಗುತ್ತದೆ.
  4. ನಾಲ್ಕನೇ ಮನೆ (ಸುಖ / ಮಾತೃ ಸ್ಥಾನ/ ಮೇಷ): ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು. ಮನಸ್ಸಿನಲ್ಲಿ ನೆಮ್ಮದಿ ಕಡಿಮೆಯಾಗಲಿದೆ. ವಾಹನ ಅಥವಾ ಆಸ್ತಿ ವಿಚಾರದಿಂದ ಖರ್ಚು ಹೆಚ್ಚಾಗುತ್ತದೆ.
  5. ಐದನೇ ಮನೆ (ಬುದ್ಧಿ / ಸಂತಾನ ಸ್ಥಾನ/ ಮೀನ): ಈ ಹಿಂದೆ ನೀವು ಪಟ್ಟ ಶ್ರಮಕ್ಕೆ ಈಗ ಫಲ ದೊರೆಯುತ್ತದೆ. ರೆಫರೆನ್ಸ್ ಮೂಲಕ ಹೊಸ ಅವಕಾಶಗಳು ದೊರೆಯಲಿವೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ ಮತ್ತು ಮಕ್ಕಳ ಬಗ್ಗೆ ಆತಂಕ ಮೂಡುತ್ತದೆ. ಷೇರು ಮಾರುಕಟ್ಟೆಯಲ್ಲಿ ಎಚ್ಚರಿಕೆ ಅಗತ್ಯ.
  6. ಆರನೇ ಮನೆ (ಶತ್ರು / ರೋಗ / ಋಣ ಸ್ಥಾನ/ ಕುಂಭ): ಇದು ವಿಶೇಷವಾದ ಶುಭ ಫಲಗಳನ್ನು ನೀಡುತ್ತದೆ. ಸರ್ಕಾರದ ಜೊತೆಗಿನ ವ್ಯಾಜ್ಯಗಳು ಇತ್ಯರ್ಥವಾಗಲು ವೇದಿಕೆ ಸಿಗುತ್ತದೆ. ಶತ್ರುಗಳ ಕಾಟ ತಾನಾಗಿಯೇ ಕಡಿಮೆಯಾಗುತ್ತದೆ ಮತ್ತು ದೀರ್ಘಕಾಲದ ರೋಗಗಳಿಂದ ಚೇತರಿಕೆ ಸಿಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಸಾಲವನ್ನು ತೀರಿಸುವುದಕ್ಕೆ ಸಾಧ್ಯವಾಗುತ್ತದೆ.
  7. ಏಳನೇ ಮನೆ (ದಾಂಪತ್ಯ / ಪಾಲುದಾರಿಕೆ ಸ್ಥಾನ/ ಮಕರ):  ವಿದೇಶದಲ್ಲಿ ವ್ಯಾಸಂಗ, ಉದ್ಯೋಗ ಮಾಡುತ್ತಿರುವವರಿಗೆ ಶುಭ ಸುದ್ದಿ. ಅವಕಾಶಗಳು ದೊರೆಯಲಿವೆ. ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆಯಲ್ಲಿ ಸಣ್ಣಪುಟ್ಟ ತಕರಾರುಗಳು ಮೂಡಬಹುದು.
  8. ಎಂಟನೇ ಮನೆ (ಆಯುಷ್ಯ / ಸಂಕಟ ಸ್ಥಾನ/ ಧನುಸ್ಸು): ಆಯುಷ್ಯ, ಆರೋಗ್ಯ ಹಾಗೂ ಅನಿರೀಕ್ಷಿತ ಆಘಾತಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕು. ದೂರ ಪ್ರಯಾಣಗಳನ್ನು ಸಾಧ್ಯವಾದಷ್ಟು ಮುಂದೂಡುವುದು ಒಳ್ಳೆಯದು.
  9. ಒಂಬತ್ತನೇ ಮನೆ (ಭಾಗ್ಯ / ಧರ್ಮ ಸ್ಥಾನ/ ವೃಶ್ಚಿಕ):  ಪಿತ್ರಾರ್ಜಿತ ಆಸ್ತಿ ವಿಚಾರಗಳಲ್ಲಿನ ವ್ಯಾಜ್ಯ ಬಗೆಹರಿಸಿಕೊಳ್ಳಲು ವೇದಿಕೆ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ಆದರೆ ತಂದೆಯವರ ಆರೋಗ್ಯದಲ್ಲಿ ಏರುಪೇರಾಗಬಹುದು. ದೀರ್ಘ ಪ್ರಯಾಣಗಳಲ್ಲಿ ವಿಳಂಬವಾಗುವ ಸಂಭವವಿದೆ.
  10. ಹತ್ತನೇ ಮನೆ (ಕರ್ಮ / ಉದ್ಯೋಗ ಸ್ಥಾನ/ ತುಲಾ): ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ದೊರೆಯಲಿವೆ. ಮೇಲಧಿಕಾರಿಗಳ ಗಮನ ಸೆಳೆಯುವ ಅವಕಾಶ ಸಿಗುತ್ತದೆ. ಆದರೆ ಅದೇ ಸಮಯದಲ್ಲಿ ವಿಪರೀತ ಕೆಲಸದೊತ್ತಡ ಅನುಭವಕ್ಕೆ ಬರಲಿದೆ. ಆದರೆ ನಿಮ್ಮ ಶ್ರಮಕ್ಕೆ ಉತ್ತಮ ಫಲ ದೊರೆಯುತ್ತದೆ.
  11. ಹನ್ನೊಂದನೇ ಮನೆ (ಲಾಭ ಸ್ಥಾನ/ ಕನ್ಯಾ): ಬಾಕಿ ಉಳಿದುಹೋಗಿದ್ದ ಲಾಭದ ಪ್ರಮಾಣ ಕೈ ಸೇರಲಿದೆ. ಹಳೆಯ ಆದಾಯ ಮೂಲಗಳಿಂದ ಅಥವಾ ನಿರೀಕ್ಷಿತ ಮಾರ್ಗಗಳಿಂದ ಧನಲಾಭವಾಗುವ ಯೋಗವಿದ್ದು, ಸ್ನೇಹಿತರ ಸಹಾಯ ದೊರೆಯಲಿದೆ.
  12. ಹನ್ನೆರಡನೇ ಮನೆ (ವ್ಯಯ / ನಷ್ಟ ಸ್ಥಾನ/ ಸಿಂಹ): ಅನಗತ್ಯ ಖರ್ಚು-ವೆಚ್ಚಗಳು ವಿಪರೀತವಾಗಿ ಹೆಚ್ಚಾಗುತ್ತವೆ. ಆಸ್ಪತ್ರೆ ಖರ್ಚುಗಳು ಅಥವಾ ಅನಿವಾರ್ಯ ವೆಚ್ಚಗಳು ಎದುರಾಗಲಿವೆ. ಹೊಸ ಹೂಡಿಕೆಗಳನ್ನು ಮಾಡಬೇಡಿ.

ರಾಹು ದಶೆ ಫಲಗಳು: 12 ರಾಶಿಗಳ ಮೇಲೆ ರಾಹುವಿನ ಪ್ರಭಾವ, ನಕ್ಷತ್ರವಾರು ದಶೆಯ ಲೆಕ್ಕಾಚಾರ ಇಲ್ಲಿದೆ

ಪರಿಹಾರಗಳು

ಗ್ರಹಣದ ದಿನದಂದು ಗೋಧಿ (ರವಿಗೆ) ಹಾಗೂ ಹುರಳಿ (ಕೇತು ಗ್ರಹಕ್ಕೆ) ಯಥಾ ಶಕ್ತಿ ವೀಳ್ಯದೆಲೆ, ಅಡಿಕೆ, ದಕ್ಷಿಣೆ ಸಹಿತವಾಗಿ ದಾನ ಮಾಡಿ. ಇನ್ನು ಗೋಧಿ ಜೊತೆಗೆ ಕೆಂಪು ವಸ್ತ್ರ ಹಾಗೂ ಹುರುಳಿ ಜೊತೆಗೆ ಬಹು ವರ್ಣದ ವಸ್ತ್ರವನ್ನು ದಾನ ಮಾಡಿ.

ಮಾಹಿತಿ ಮೂಲ: ಜ್ಯೋತಿಷಿ, ಪಂಡಿತ್ ವಿಠ್ಠಲ ಭಟ್

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts