ಈ ಲೇಖನದಲ್ಲಿ ಮೂರ್ನಾಲ್ಕು ವಿಚಾರಗಳನ್ನು ನಿಮ್ಮೆದುರು ಇಡುತ್ತಿದ್ದೇನೆ. ಈ ಮಾಹಿತಿಯನ್ನು ನೀಡಿದವರು ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟುವಿನ ಭುವನಗಿರಿ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಯರ ವೃಂದಾವನ ಪೂಜಾ ಕೈಂಕರ್ಯವನ್ನು ಮಾಡುತ್ತಾ ಬರುತ್ತಿರುವ ಅನುಮಾನ ತೀರ್ಥಾಚಾರ್ ಅವರು.
ಪಂಚಾಮೃತ ಅಭಿಷೇಕದ ನಂತರ ಮತ್ತೊಮ್ಮೆ ಕ್ಷೀರಾಭಿಷೇಕ
ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಮಠ-ಮಾನ್ಯಗಳಲ್ಲಿ ಪಂಚಾಮೃತ ಅಭಿಷೇಕ ಮಾಡುವುದನ್ನು ನೀವು ನೋಡಿರಬಹುದು ಅಥವಾ ಮಾಡಿರಬಹುದು. ಹಾಲು, ಮೊಸರು, ತುಪ್ಪ, ಬೆಲ್ಲದ ಪುಡಿ ಮತ್ತು ಜೇನುತುಪ್ಪದಿಂದ ದೇವರ ವಿಗ್ರಹ, ಸಾಲಿಗ್ರಾಮ ಮೊದಲಾದವುಗಳಿಗೆ ಪಂಚಾಮೃತ ಅಭಿಷೇಕ ಮಾಡಿದ ನಂತರ, ಕೊನೆಯಲ್ಲಿ ಮತ್ತೊಮ್ಮೆ ಹಾಲಿನಿಂದ ಅಭಿಷೇಕ ಮಾಡಬೇಕು. ಇದನ್ನು ‘ಅಮೃತಾಭಿಷೇಕ’ ಎಂದು ಕರೆಯಲಾಗುತ್ತದೆ. ಪಂಢರಾಪುರದಲ್ಲಿ ವಿಠ್ಠಲನಿಗೆ ಹೀಗೇ ಮಾಡುತ್ತಾರೆ. ಪಂಚಾಮೃತ ಅಭಿಷೇಕದ ನಂತರ ಬೆಳ್ಳಿ ಕೊಡದಲ್ಲಿ ಕ್ಷೀರವನ್ನು ತುಂಬಿ ಈ ಅಮೃತಾಭಿಷೇಕವನ್ನೂ ಮಾಡಬೇಕು.
ವಿದೇಶಿ ನೆಲದಲ್ಲಿ ಶ್ರಾದ್ಧ ಕರ್ಮ: ಮನುಸ್ಮೃತಿ, ಪರಾಶರ ಸ್ಮೃತಿಯ ಉಲ್ಲೇಖಗಳೇನು?
ಕಾಶಿಯಲ್ಲಿ ನೇರಳೆಹಣ್ಣು ಮತ್ತು ಅನ್ನವನ್ನು ಏಕೆ ವರ್ಜಿಸಬಾರದು?
ಕಾಶಿಗೆ ಹೋದವರು ತಮಗೆ ಬಹಳ ಇಷ್ಟವಾದದ್ದನ್ನು ವರ್ಜಿಸುತ್ತಾರೆ – ಇದು ವೈರಾಗ್ಯದ ಪ್ರತೀಕ. ಎಷ್ಟೋ ಮಂದಿ ತಮಗೆ ಇಷ್ಟವಾದ ಸಿಹಿ ಪದಾರ್ಥ, ತರಕಾರಿಗಳನ್ನು ಇನ್ನು ಮುಂದೆ ತೆಗೆದುಕೊಳ್ಳುವುದಿಲ್ಲ ಎಂದು ಸಂಕಲ್ಪ ಮಾಡಿ ವರ್ಜಿಸಿ ಬರುತ್ತಾರೆ. ಆದರೆ ನೇರಳೆಹಣ್ಣನ್ನು ಯಾವುದೇ ಕಾರಣಕ್ಕೂ ವರ್ಜಿಸಬಾರದು – ಏಕೆಂದರೆ ನಾವು ವಾಸಿಸುವುದೇ ಜಂಬೂದ್ವೀಪದಲ್ಲಿ, ಮತ್ತು ‘ಜಂಬೂ’ ಎಂದರೆ ನೇರಳೆ ಎಂದು ಅರ್ಥ. ನಮ್ಮ ದೇಶದ ಸುತ್ತಲೂ ಇರುವುದು ಲವಣ ಸಮುದ್ರ. ಆದ್ದರಿಂದ ನಮ್ಮ ದೇಹಕ್ಕೆ ಇದರ ಸೇವನೆ ಅವಶ್ಯ. ಇನ್ನು ಅನ್ನವನ್ನು ವರ್ಜಿಸಬಾರದು ಎಂಬುದಕ್ಕೆ ಕಾರಣ, ದಶಮಿ ಮತ್ತು ದ್ವಾದಶಿಯಂದು ಅನ್ನವನ್ನು ಕಡ್ಡಾಯವಾಗಿ ಸ್ವೀಕರಿಸಬೇಕಾಗುತ್ತದೆ ಎಂಬ ಶಾಸ್ತ್ರ ಸಮ್ಮತ ನಿಯಮ.
ನೆಲ್ಲಿಕಾಯಿ ಮತ್ತು ತುಳಸಿ ಸಸಿಗಳ ಮೂಲ
ಸಮುದ್ರ ಮಥನದ ನಂತರ ಅಮೃತ ಸಿಕ್ಕಾಗ, ಅದನ್ನು ಕಂಡು ಮಹಾವಿಷ್ಣು ಆನಂದಬಾಷ್ಪ ಸುರಿಸಿದನಂತೆ. ಆ ಕಣ್ಣೀರಿನ ಹನಿಗಳಿಂದ ಎರಡು ಸಸಿಗಳು ಹುಟ್ಟಿಕೊಂಡವು – ಒಂದು ನೆಲ್ಲಿಕಾಯಿ, ಮತ್ತೊಂದು ತುಳಸಿ. ಆದ್ದರಿಂದ ದೇವರ ಪೂಜೆಗೆ ಯಾವುದೇ ಕಾಲದಲ್ಲಿಯೂ ತುಳಸಿ ದಳವನ್ನು ಅರ್ಪಿಸಬೇಕು. ಇನ್ನು ಚಾತುರ್ಮಾಸ್ಯದಲ್ಲಿ ಕೆಲವರು ನೆಲ್ಲಿಕಾಯಿಯನ್ನು ಬಳಸುವುದಿಲ್ಲ ಎನ್ನುತ್ತಾರೆ. ಆದರೆ ಕಾರ್ತೀಕ ಮಾಸದಲ್ಲಿ ಧಾತ್ರಿಹವನದಲ್ಲಿ ಹೊಸ ನೆಲ್ಲಿಕಾಯಿಯನ್ನು ಸ್ವೀಕರಿಸಲಾಗುತ್ತದೆ. ಹೊಸ ನೆಲ್ಲಿಕಾಯಿ ಬಳಸುವುದು ಸರಿಯಾದರೂ, ಹಳೆಯ ನೆಲ್ಲಿಕಾಯಿಯನ್ನು ಬಳಸಬಾರದು ಎಂಬ ನಿಯಮವಿಲ್ಲ. ವಿಷ್ಣುವಿನ ಕಣ್ಣಿನ ಹನಿಯಿಂದ ಹುಟ್ಟಿದ ಸಸಿಯಾದ್ದರಿಂದ ನೆಲ್ಲಿಕಾಯಿಯನ್ನು ಸರ್ವಥಾ ಸ್ವೀಕರಿಸಬಹುದು, ಸ್ವೀಕರಿಸಬೇಕು ಕೂಡ.
ಷೋಡಶೋಪಚಾರ ರಾಜೋಪಚಾರ ಪೂಜೆ ಎಂದರೇನು? ದೇವರ ಪೂಜೆಯ 16 ವಿಧದ ಸೇವೆಗಳ ವಿವರ
ಪ್ರಜಾತೀರ್ಥ ಮತ್ತು ಸೋದರಮಾವನ ಪಾತ್ರ
ಶಿಶು ಜನನದ ನಂತರ, ಹೊಕ್ಕುಳ ಬಳ್ಳಿಯನ್ನು ಬೇರ್ಪಡಿಸುವ ಮುನ್ನ ‘ಪ್ರಜಾತೀರ್ಥ’ ದಾನ ಮಾಡಬೇಕು ಎಂಬ ಸಂಪ್ರದಾಯವಿದೆ. ಭಾಗವತದಲ್ಲಿ ಬರುವಂತೆ, ಅಭಿಮನ್ಯುವಿನ ಮಗ ಪರೀಕ್ಷಿತ ಹುಟ್ಟಿದಾಗ, ಹೊಕ್ಕುಳ ಬಳ್ಳಿ ಬೇರ್ಪಡಿಸುವ ಮುನ್ನ ಆತನ ಅಜ್ಜ ಧರ್ಮರಾಯ ಪ್ರಜಾತೀರ್ಥ ದಾನ ಮಾಡಿದ್ದನು. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ – ಮಗು ಜನಿಸಿದ ಮೇಲೆ ಅದು ‘ಜಾತಶೌಚ’ (ವೃದ್ಧಿ) ಆಗುತ್ತದೆ, ಮತ್ತು ಈ ವೃದ್ಧಿ ಪ್ರಾರಂಭವಾಗುವುದು ಹೊಕ್ಕುಳ ಬಳ್ಳಿ ಬೇರ್ಪಟ್ಟ ನಂತರವಷ್ಟೇ. ಆದ್ದರಿಂದ ಸಾಧ್ಯವಾದಲ್ಲಿ, ಶಿಶು ಜನನದ ನಂತರ ಆದರೆ ಹೊಕ್ಕುಳ ಬಳ್ಳಿ ಬೇರ್ಪಡಿಸುವ ಮೊದಲು ಈ ಪ್ರಜಾತೀರ್ಥ ದಾನ ಮಾಡಿದರೆ ಅಪಾರ ಪುಣ್ಯಫಲಗಳು ದೊರೆಯುತ್ತವೆ.
ಶಾಸ್ತ್ರ ಪ್ರಕಾರ ಮಗುವಿನ ಸೋದರಮಾವನೇ ಹೊಕ್ಕುಳ ಬಳ್ಳಿಯನ್ನು ಬೇರ್ಪಡಿಸಬೇಕು. ಹಿಂದೆ ಮನೆಗಳ ಸೂತಿಕಾಗೃಹಗಳಲ್ಲಿ ಹೆರಿಗೆಯಾಗುತ್ತಿದ್ದಾಗ ಸೋದರಮಾವ ಈ ಶಾಸ್ತ್ರ ನಡೆಸುತ್ತಿದ್ದರು. ಇಂದೂ ಸಹ, ವೈದ್ಯರ ಅನುಮತಿ ಮತ್ತು ಅವಕಾಶ ಇದ್ದಲ್ಲಿ, ಸೋದರಮಾವ ಈ ಶಾಸ್ತ್ರವನ್ನು ನೆರವೇರಿಸಬಹುದು.
ದೇವರಿಗೆ ಪ್ರಿಯವಾದ ತೀರ್ಥ- ಪಂಚಾಮೃತ ಸಿದ್ಧಪಡಿಸುವ ಸರಿಯಾದ ವಿಧಾನ, ಮಹತ್ವ
ವೀಳ್ಯದೆಲೆಯ (ನಾಗವಲ್ಲಿ) ಮೂಲ
ಸಮುದ್ರ ಮಥನದ ನಂತರ ಸೃಷ್ಟಿಯಾದ ಅಮೃತವನ್ನು ಎಲ್ಲ ದೇವತೆಗಳಿಗೂ ಹಂಚಿದ ಬಳಿಕ, ಕೊನೆಗೆ ಇಂದ್ರನಿಗೆ ಬಂತು. ಅದನ್ನು ಸ್ವೀಕರಿಸಿದ ಇಂದ್ರನು ಅಮೃತದ ಪಾತ್ರೆಯನ್ನು ತನ್ನ ಆನೆ ಐರಾವತವನ್ನು ಕಟ್ಟಿ ಹಾಕಿದ್ದ ಸ್ಥಳದಲ್ಲಿಟ್ಟನಂತೆ. ಆಗ ಐರಾವತಕ್ಕೆ ಮದ ಬಂದು, ಅದರ ತಲೆಯಿಂದ ಸುರಿದ ಮದ ದ್ರವ್ಯದ ಹನಿಗಳು ಪಾತ್ರೆಯಲ್ಲಿ ಉಳಿದಿದ್ದ ಒಂದೆರಡು ಅಮೃತ ಹನಿಗಳೊಂದಿಗೆ ಬೆರೆತವು. ಅದರಿಂದ ಉದ್ಭವಿಸಿದ್ದೇ ವೀಳ್ಯದೆಲೆ. ಸಂಸ್ಕೃತದಲ್ಲಿ ಆನೆಗೆ ‘ನಾಗ’ ಎನ್ನುತ್ತಾರೆ – ಬಳ್ಳಿಗೆ ವಲ್ಲಿ ಎನ್ನಲಾಗುತ್ತದೆ. ಆನೆಯ ಮದ ಜಲದಿಂದ ಹುಟ್ಟಿದ ಬಳ್ಳಿಯಾದ್ದರಿಂದ ವೀಳ್ಯದೆಲೆಗೆ ‘ನಾಗವಲ್ಲಿ’ ಎಂಬ ಹೆಸರು ಬಂತು. ಈ ಕಾರಣದಿಂದಲೇ ಯಾವುದೇ ಮಾಸ-ಸಮಯದಲ್ಲಿಯೂ ದೇವರಿಗೆ ವೀಳ್ಯದೆಲೆಯನ್ನು ಅರ್ಪಿಸಬಹುದು.
ಮಾಹಿತಿ: ಅನುಮಾನ ತೀರ್ಥಾಚಾರ್
ನಿರೂಪಣೆ: ಶ್ರೀನಿವಾಸ ಮಠ









