ರವಿ- ರಾಹು ಹಾಗೂ ರವಿ- ಕೇತು ಈ ಎರಡು ಯುತಿಗಳ ಒಳ್ಳೆ ಫಲಗಳನ್ನು ನೀಡುವುದಿಲ್ಲ. ಆದರೆ ಆಗಸ್ಟ್ 17 ರಿಂದ ರವಿ- ಕೇತು ಯುತಿ ಸಿಂಹ ರಾಶಿಯಲ್ಲಿ ಆಗಿದೆ. ಸೆಪ್ಟೆಂಬರ್ 17 ರವರೆಗೆ ಇದೇ ರೀತಿ ಇರುತ್ತದೆ. ರವಿಗೆ ಸಿಂಹ ರಾಶಿ ಸ್ವಕ್ಷೇತ್ರವೂ ಹೌದು. ಆದರೂ ಕೇತು ಗ್ರಹ ಅದೇ ರಾಶಿಯಲ್ಲಿ ಈಗಾಗಲೇ ಇರುವುದರಿಂದ ಗೋಚಾರ ರೀತಿಯಾಗಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಯವರ ಮೇಲೆ ಏನು ಪ್ರಭಾವ ಬೀರುತ್ತದೆ ಎಂಬುದರ ವಿವರಣೆಯಾಗಿ ಈ ಲೇಖನ ನಿಮ್ಮೆದುರು ಇದೆ.
1. ಮೇಷ ರಾಶಿ
ನಿಮ್ಮ ರಾಶಿಯಿಂದ ಐದನೇ ಮನೆಯಲ್ಲಿ ಈ ಯುತಿ ಆಗುತ್ತಿದೆ. ಹೀಗಾಗಿ ಮಕ್ಕಳ ಆರೋಗ್ಯ ಮತ್ತು ಅವರ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು. ಷೇರು ಮಾರುಕಟ್ಟೆ ಅಥವಾ ಸಟ್ಟಾ ವ್ಯವಹಾರಗಳಲ್ಲಿ ಕೈ ಹಾಕುವಾಗ ಎಚ್ಚರವಿರಲಿ. ಕಲೆ, ಸಾಹಿತ್ಯದಂತಹ ಸೃಜನಶೀಲ ಕ್ಷೇತ್ರದಲ್ಲಿರುವವರಿಗೆ ಹೊಸ ಅವಕಾಶಗಳು ಸಿಕ್ಕರೂ ನಿರೀಕ್ಷಿತ ಫಲಕ್ಕಾಗಿ ಹೆಚ್ಚು ಬೆವರು ಹರಿಸಬೇಕಾಗುತ್ತದೆ.
2. ವೃಷಭ ರಾಶಿ
ನಾಲ್ಕನೇ ಮನೆಯಲ್ಲಿ ರವಿ-ಕೇತುಗಳ ಸಂಯೋಗ ಇರುವುದರಿಂದ ತಾಯಿಯ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳಿಗೂ ಮನಸ್ತಾಪಗಳು ಮೂಡಲಿದೆ. ಹೊಸ ಆಸ್ತಿ ಅಥವಾ ವಾಹನ ಖರೀದಿಸುವ ಯೋಚನೆಯಿದ್ದರೆ ಕಾಗದಪತ್ರಗಳನ್ನು ಒಂದಕ್ಕೆ ನಾಲ್ಕು ಬಾರಿ ಪರಿಶೀಲಿಸುವುದು ಉತ್ತಮ. ಮನಸ್ಸಿನ ಶಾಂತಿಗಾಗಿ ಯೋಗ, ಪ್ರಾಣಾಯಾಮ ಮಾಡಿಕೊಳ್ಳಿ.
3. ಮಿಥುನ ರಾಶಿ
ನಿಮಗೆ ಮೂರನೇ ಮನೆಯ ಸಂಚಾರ ಆಗಿರುವುದರಿಂದ ಧೈರ್ಯ ಹಾಗೂ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಲ್ಲಿ ಮನಸ್ಸು ತೊಡಗಿಕೊಳ್ಳುತ್ತದೆ. ಒಡಹುಟ್ಟಿದವರ ಜತೆ ಅನಗತ್ಯ ವಾಗ್ವಾದಗಳಿಗೆ ಅವಕಾಶ ಕೊಡಬೇಡಿ. ಈ ಅವಧಿಯಲ್ಲಿ ಮಾಡುವ ಸಣ್ಣಪುಟ್ಟ ಪ್ರಯಾಣಗಳು ನಿಮಗೆ ಹೊಸ ಪರಿಚಯ ಹಾಗೂ ಲಾಭವನ್ನು ತಂದುಕೊಡಲಿವೆ.
ಸೂರ್ಯನಿಂದ ಕೇತುವಿನವರೆಗೆ: ನಿಮ್ಮ ಜೀವನದ ಮೇಲೆ ಒಂಬತ್ತು ಗ್ರಹಗಳ ಪರಿಣಾಮ ಹೇಗಿರುತ್ತದೆ?
4. ಕರ್ಕಾಟಕ ರಾಶಿ
ಎರಡನೇ ಮನೆಯಲ್ಲಿ ಈ ಯುತಿ ಆಗುತ್ತಿರುವುದರಿಂದ ಮಾತಿನಲ್ಲಿ ಸ್ವಲ್ಪ ಕಠೋರತೆ ಇರಲಿದೆ. ಹೀಗಾಗಿ ಮಾತನಾಡುವಾಗ ಸಂಯಮ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಆರ್ಥಿಕ ವ್ಯವಹಾರಗಳಲ್ಲೂ ಲೆಕ್ಕಾಚಾರವಿರಲಿ, ಇಲ್ಲದಿದ್ದರೆ ಅನವಶ್ಯಕ ಖರ್ಚುಗಳು ಕೈಸುಡಲಿದೆ. ಕಣ್ಣು ಅಥವಾ ಹಲ್ಲಿನ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
5. ಸಿಂಹ ರಾಶಿ
ನಿಮ್ಮದೇ ರಾಶಿಯಲ್ಲಿ ಸೂರ್ಯ-ಕೇತುಗಳ ಯುತಿ ಆಗಲಿದೆ. ಮೈಯಲ್ಲಿ ಹೊಸ ಚೈತನ್ಯ ಹಾಗೂ ತೇಜಸ್ಸು ಮೂಡಿದರೂ ಅತಿಯಾದ ಕೋಪ ಅಥವಾ ಅಹಂಕಾರದಿಂದ ನಿಮ್ಮ ಕೆಲಸಗಳೇ ಕೆಡಬಹುದು. ಆರೋಗ್ಯದ ವಿಚಾರದಲ್ಲಿ ಕಿಂಚಿತ್ ನಿರ್ಲಕ್ಷ್ಯವೂ ಬೇಡ. ಉದ್ಯೋಗ ಅಥವಾ ವ್ಯವಹಾರದಲ್ಲಿ ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳುವ ಮುನ್ನ ಹಿರಿಯರ ಸಲಹೆ ಪಡೆದುಕೊಳ್ಳಿ.
6. ಕನ್ಯಾ ರಾಶಿ
ಹನ್ನೆರಡನೇ ಮನೆಯಲ್ಲಿ ಈ ಸಂಚಾರ ಇರುವುದರಿಂದ ಖರ್ಚು-ವೆಚ್ಚಗಳು ಹೆಚ್ಚಾಗುವ ಲಕ್ಷಣಗಳಿವೆ. ದೂರದ ಪ್ರಯಾಣ ಅಥವಾ ವಿದೇಶಿ ಮೂಲಗಳಿಂದ ಲಾಭ ಸಿಗುವ ಸಾಧ್ಯತೆಯಿದೆ. ಮನಸ್ಸಿನಲ್ಲಿ ಅತಿಯಾದ ಆಲೋಚನೆಗಳಿಂದ ನಿದ್ರಾಹೀನತೆ ಕಾಡಬಹುದು. ಕಾನೂನುಬಾಹಿರ ಚಟುವಟಿಕೆಗಳು ಹಾಗೂ ವಿರೋಧಿಗಳಿಂದ ಆದಷ್ಟು ದೂರವಿರಿ.
7. ತುಲಾ ರಾಶಿ
ಹನ್ನೊಂದನೇ ಮನೆಯಲ್ಲಿ ರವಿ-ಕೇತುಗಳ ಸಂಯೋಗ ಇರುವುದರಿಂದ ಆರ್ಥಿಕವಾಗಿ ಆದಾಯ ಉತ್ತಮವಾಗಿರಲಿದೆ. ಹಳೆಯ ಹೂಡಿಕೆಗಳು ಅಥವಾ ಆಪ್ತ ಸ್ನೇಹಿತರಿಂದ ಉತ್ತಮ ನೆರವು ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ-ಪ್ರತಿಷ್ಠೆ ಹೆಚ್ಚುತ್ತದೆ. ಆದರೆ ಸ್ನೇಹಿತರ ಜತೆ ಮಾತನಾಡುವಾಗ ಎಚ್ಚರವಿರಲಿ, ಸಣ್ಣಪುಟ್ಟ ಮಾತುಗಳು ತಪ್ಪುಗ್ರಹಿಕೆಗೆ ದಾರಿ ಮಾಡಿಕೊಡಬಹುದು.
ಗುಡ್ಡಟ್ಟು ಶ್ರೀ ವಿನಾಯಕ: 10 ವರ್ಷ ವೇಯ್ಟಿಂಗ್ ಲಿಸ್ಟ್ ಇರುವ ‘ಆಯಿರಕೊಡ’ ಸೇವೆಯ ಮಹಿಮೆ!
8. ವೃಶ್ಚಿಕ ರಾಶಿ
ಹತ್ತನೇ ಮನೆಯಲ್ಲಿ ಈ ಯುತಿ ಸಂಭವಿಸುತ್ತಾ ಇರುವುದರಿಂದ ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಜತೆ ಹೊಂದಾಣಿಕೆ ಅಗತ್ಯ. ಕಚೇರಿಯಲ್ಲಿ ಕೆಲಸದೊತ್ತಡ ನಿಮ್ಮನ್ನು ಹೈರಾಣಾಗಿಸಲಿದೆ. ವ್ಯಾಪಾರಸ್ಥರಿಗೆ ಮಾರುಕಟ್ಟೆಯಲ್ಲಿ ಕಠಿಣ ಸ್ಪರ್ಧೆ ಎದುರಾಗಲಿದೆ. ಗುರಿ ಮುಟ್ಟಲು ಸಾಮಾನ್ಯಕ್ಕಿಂತ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ.
9. ಧನುಸ್ಸು ರಾಶಿ
ಒಂಬತ್ತನೇ ಮನೆಯಲ್ಲಿ ರವಿ-ಕೇತುಗಳ ಸಂಯೋಗ ಇರುವುದರಿಂದ ತಂದೆಯ ಆರೋಗ್ಯದ ಕಡೆ ಕಣ್ಣಿಡಿ. ಅವರ ಜತೆಗಿನ ಒಡನಾಟದಲ್ಲೂ ತಾಳ್ಮೆ ಇರಲಿ. ದೂರದ ಪ್ರಯಾಣ ಮಾಡುವಾಗ ಎಕರ ವಹಿಸಿ. ಆಧ್ಯಾತ್ಮಿಕ ಚಿಂತನೆಗಳು ಹೆಚ್ಚಾಗಲಿದ್ದು, ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಏಕಾಗ್ರತೆಯಲ್ಲಿ ಸಣ್ಣಪುಟ್ಟ ವ್ಯತ್ಯಯವಾಗಲಿದೆ.
10. ಮಕರ ರಾಶಿ
ಎಂಟನೇ ಮನೆಯಲ್ಲಿ ಈ ಸಂಯೋಗ ಇರುವುದರಿಂದ ಅನಿರೀಕ್ಷಿತ ಧನಾಗಮ ಅಥವಾ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಒಳಿತು-ಕೆಡಕುಗಳೆರಡೂ ಇರಬಹುದು. ಆರೋಗ್ಯದ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಬೇಡಿ. ವಾಹನ ಚಾಲನೆ ಮಾಡುವಾಗ ಮತ್ತು ಪ್ರಯಾಣದ ವೇಳೆ ಅತ್ಯಂತ ಎಚ್ಚರಿಕೆ ಅಗತ್ಯ. ರಹಸ್ಯ ಶತ್ರುಗಳ ಬಗ್ಗೆ ಜಾಗ್ರತೆ ಇರಲಿ.
11. ಕುಂಭ ರಾಶಿ
ಏಳನೇ ಮನೆಯಲ್ಲಿ ರವಿ-ಕೇತು ಯುತಿ ಇರುವುದರಿಂದ ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರದಲ್ಲಿ ಬಿರುಕು ಮೂಡದಂತೆ ಎಚ್ಚರ ವಹಿಸಿ. ಸಂಗಾತಿಯ ಆರೋಗ್ಯದ ಬಗ್ಗೆಯೂ ಕಾಳಜಿ ಇರಲಿ. ವ್ಯವಹಾರದಲ್ಲಿ ಪಾಲುದಾರರ ಜತೆ ಎಲ್ಲವನ್ನೂ ಪಾರದರ್ಶಕವಾಗಿ ಇಟ್ಟುಕೊಳ್ಳಿ. ಅನಗತ್ಯ ವಾದ-ವಿವಾದಗಳಿಗೆ ಹೋಗದಿರುವುದೇ ಜಾಣತನ.
Thirukolur Temple: ಕಳೆದುಹೋದ ಆಸ್ತಿ, ಐಶ್ವರ್ಯ ಮತ್ತೆ ಸಿಗಲು ವೈತಮಾನಿಧಿ ಪೆರುಮಾಳ್ ಕ್ಷೇತ್ರಕ್ಕೆ ಭೇಟಿ ನೀಡಿ
12. ಮೀನ ರಾಶಿ
ಆರನೇ ಮನೆಯಲ್ಲಿ ಈ ಸಂಚಾರ ಇರುವುದರಿಂದ ಶತ್ರುಗಳ ಕಾಟದಿಂದ ಮುಕ್ತಿ ಸಿಗಲಿದೆ. ಕೋರ್ಟ್-ಕಚೇರಿ ವಿಚಾರಗಳು ಅಥವಾ ಹಳೆಯ ಸಾಲದ ಬಾಧೆಯಿಂದ ಹೊರಬರುವ ದಾರಿ ಗೋಚರಿಸಲಿದೆ. ಹೊಟ್ಟೆಗೆ ಸಂಬಂಧಿಸಿದ ಅಜೀರ್ಣ ಅಥವಾ ಉದರ ಸಮಸ್ಯೆಗಳು ಕಾಡಬಹುದು, ಹಾಗಾಗಿ ಹೊರಗಿನ ತಿಂಡಿ-ತೀರ್ಥಗಳ ವಿಚಾರದಲ್ಲಿ ಎಚ್ಚರಿಕೆ ಇರಲಿ.
ಲೇಖನ- ಶ್ರೀನಿವಾಸ ಮಠ









