ಉಡುಪಿ ಕೃಷ್ಣ ಮಠ ಅಷ್ಟಮಂಗಲದ ಬಗ್ಗೆ ಅಷ್ಟ ಪ್ರಶ್ನೆಗಳೂ, ಅಷ್ಟ ಮಠಗಳೂ, ಉದಯ ಕುಮಾರ ಸರಳತ್ತಾಯರ ಉತ್ತರಗಳೂ

ಶಿರೂರು ಮಠ- ಕೃಷ್ಣ ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ
ಶಿರೂರು ಮಠ- ಕೃಷ್ಣ ಮಠದ ದಿವಾನರಾದ ಡಾ. ಉದಯ ಕುಮಾರ್ ಸರಳತ್ತಾಯ

ಉಡುಪಿಯ ಕೃಷ್ಣಮಠದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆ “ಸೋಷಿಯಲ್ ಮೀಡಿಯಾ ಬಿರುಗಾಳಿ” ಎಬ್ಬಿಸಿದೆ. ಅದರ ಬೆನ್ನಿಗೆ ವಿವಿಧ ರೀತಿಯ ಚರ್ಚೆಗಳು ನಡೆಯುತ್ತಾ ಇವೆ. ಈ ಹಿನ್ನೆಲೆಯಲ್ಲಿ ಉಡುಪಿ ಕೃಷ್ಣ ಮಠ–ಶಿರೂರು ಮಠದ ದಿವಾನರಾದ ಉದಯಕುಮಾರ ಸರಳತ್ತಾಯ ಅವರು ‘ಶ್ರೀಗುರುಭ್ಯೋ.ಕಾಮ್’ ಜೊತೆಗೆ ವಿಸ್ತೃತವಾಗಿ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಮಂಗಲ ಪ್ರಶ್ನೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಸಮಗ್ರವಾಗಿ ಕಟ್ಟಿಕೊಡುವ ಪ್ರಯತ್ನವನ್ನು ಈ ಲೇಖನವು ಮಾಡಲಿದೆ. ಉದಯಕುಮಾರ ಸರಳತ್ತಾಯ ಅವರ ಮುಂದೆ ಇಟ್ಟ ಪ್ರಶ್ನೆಗಳಿಗೆ ಅವರು ನೀಡಿದ ಉತ್ತರಗಳನ್ನು ಓದಿಕೊಳ್ಳಿ.

“ಕೃಷ್ಣ ಮಠಕ್ಕೆ ಸಂಬಂಧಿಸಿದ ಸಮಗ್ರ ಪ್ರಶ್ನೆ”

ಪ್ರಶ್ನೆ: ಕೃಷ್ಣಮಠಕ್ಕೆ ಸಂಬಂಧಿಸಿದಂತೆ ಇಷ್ಟು ಸಮಗ್ರವಾಗಿ ಅಷ್ಟಮಂಗಲ ಪ್ರಶ್ನೆ ಇಟ್ಟಿರುವುದು ಇದೇ ಮೊದಲೇ?

“ಈ ರೀತಿ ಸಮಗ್ರವಾಗಿ ಕೃಷ್ಣ ಮಠಕ್ಕೆ ಸಂಬಂಧಿಸಿದ ಅಷ್ಟಮಂಗಲ ಪ್ರಶ್ನೆಯನ್ನು ಇಟ್ಟಿದ್ದು ಬಹುಶಃ ಇದೇ ಮೊದಲು. ಈ ಹಿಂದೆಲ್ಲ ಮಾಡಿರಬಹುದಾದರೂ ಅದು ಒಂದು ನಿರ್ದಿಷ್ಟ ವಿಷಯಕ್ಕೆ ಒಳಗೊಂಡಂತೆ ಇರುತ್ತಿತ್ತು. ಆದರೆ ಮೊದಲ ಬಾರಿಗೆ ಕೃಷ್ಣ ಮಠ–ಅದಕ್ಕೆ ಕರುಳಬಳ್ಳಿಯಂತಿರುವ ಅಷ್ಟ ಮಠಗಳಿಗೆ ಆಗುವಂತೆ ಅಷ್ಟಮಂಗಲ ಪ್ರಶ್ನೆಯನ್ನು ಇಡಲಾಯಿತು.

ಅಷ್ಟೇ ಅಲ್ಲ, ಲೋಕಾ ಸಮಸ್ತ ಸುಖಿನೋ ಭವಂತು ಎಂಬುದು ನಮ್ಮ ದೇಶದ ಮಣ್ಣಿನ ಗುಣ. ಅದರಲ್ಲೂ ಮಠದ ಪರಂಪರೆಯೂ ಇಲ್ಲಿ ಇರುವುದರಿಂದ ಇಡೀ ಲೋಕಕ್ಕೆ ಸಂಬಂಧಿಸಿದಂತೆಯೂ ಪ್ರಶ್ನೆಯನ್ನು ಇಡಲಾಯಿತು. ಅದಕ್ಕೆ ಬಂದ ಉತ್ತರವನ್ನೇ ನಾವು ಈ ಲೋಕದ ಮುಂದೆ ಇಟ್ಟಿದ್ದೇವೆ.

ಅನಾಹುತ ಆಗುವ ಮುನ್ಸೂಚನೆ ಹಾಗೂ ಅದಕ್ಕೆ ಮಾಡಿಕೊಳ್ಳಬಹುದಾದ ಸರಳ–ಪರಿಣಾಮಕಾರಿ ಹಾಗೂ ದೈವಿಕ ಪರಿಹಾರವನ್ನು ಪಡೆದುಕೊಂಡು, ಜನರ ಮುಂದೆ ಇಟ್ಟಿದ್ದೇವೆ.”

“ಅಷ್ಟಮಂಗಲ ನಡೆಸಿಕೊಟ್ಟವರು ಯಾರು?”

ಪ್ರಶ್ನೆ: ಈ ಅಷ್ಟಮಂಗಲ ಪ್ರಶ್ನೆಯನ್ನು ನಡೆಸಿಕೊಟ್ಟವರು ಯಾರು? ಇದರ ಪ್ರಕ್ರಿಯೆ ಹೇಗಿತ್ತು?

“ಬೇಳ ಪದ್ಮನಾಭ ಶರ್ಮರು ಹಾಗೂ ಹದಿನೆಂಟು ವಿದ್ವಾಂಸರು ಈ ಅಷ್ಟಮಂಗಲ ಪ್ರಶ್ನೆಯಲ್ಲಿ ಪಾಲ್ಗೊಂಡಿದ್ದರು. ಜುಲೈ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಈ ಪ್ರಶ್ನೆ ನಡೆಯಿತು.

ಶಬರಿಮಲೆ, ಗುರುವಾಯೂರು ಸೇರಿದಂತೆ ದೇಶದ ವಿವಿಧೆಡೆ ಅಷ್ಟಮಂಗಲ ಪ್ರಶ್ನೆಯನ್ನು ನಡೆಸಿಕೊಟ್ಟು, ಪರಿಹಾರವನ್ನು ಸೂಚಿಸಿದವರು ಪದ್ಮನಾಭ ಶರ್ಮರು. ಅಷ್ಟೇ ಅಲ್ಲ, ಶ್ರೀಲಂಕಾದಲ್ಲಿ ಅರಾಜಕತೆ ಸೃಷ್ಟಿಯಾದಾಗಲೂ ಅಲ್ಲಿನ ರಾಜರು ಪದ್ಮನಾಭ ಶರ್ಮರನ್ನು ಕರೆಸಿ ಪ್ರಶ್ನೆ ಇರಿಸಿದ್ದರು. ಅಂಥ ಗಟ್ಟಿಗರಿಂದಲೇ ಈ ಅಷ್ಟಮಂಗಲ ಮಾಡಿಸಲಾಗಿದೆ.

ಇನ್ನು ಸಾಂದರ್ಭಿಕವಾಗಿ ಹೇಳುತ್ತಾ ಇದ್ದೇನೆ. ಇದಕ್ಕಾಗಿ ಒಟ್ಟು ಈ ಪ್ರಶ್ನೆಯ ಪ್ರಕ್ರಿಯೆಯಲ್ಲಿ ಹತ್ತು ಲಕ್ಷ ರೂಪಾಯಿಯಷ್ಟು ವೆಚ್ಚ ಬಂದಿದೆ. ಇದನ್ನು ಕೃಷ್ಣ ಮಠದ ಒಳಿತಿಗೆ–ಜಗತ್ತಿನ ಒಳಿತಿಗೆ ಅಂತಲೇ ಅಂದುಕೊಂಡು ಮಾಡಿದ್ದೇವೆ ವಿನಾ ಇದರಲ್ಲಿ ಬೇರೆ ಯಾವ ಹಿತಾಸಕ್ತಿ ಇಲ್ಲ.”

ಉಡುಪಿ ಪರ್ಯಾಯ 2026: ಶ್ರೀಗುರುಭ್ಯೋ.ಕಾಮ್‌ನಲ್ಲಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಎಕ್ಸ್‌ಕ್ಲೂಸಿವ್ ಸಂದರ್ಶನ

“ಏನಿದು ಪರಿಹಾರ?”

ಪ್ರಶ್ನೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಸೂಚಿಸಲಾದ ಪರಿಹಾರವೇನು?

“ಮುಂದಿನ ಡಿಸೆಂಬರ್ ತನಕ ಭಾರತವೂ ಒಳಗೊಂಡಂತೆ ಇಡೀ ವಿಶ್ವಕ್ಕೆ ತೊಂದರೆಗಳು ಎದುರಾಗುತ್ತವೆ ಎಂಬ ಉತ್ತರ ಬಂತು.

ಅದಕ್ಕೆ ಪರಿಹಾರವಾಗಿ ಹದಿನೆಂಟು ಕೋಟಿ ರಾಮನಾಮ ಜಪ, ಒಂದು ಕೋಟಿ ಕೃಷ್ಣ ಮಂತ್ರ ಜಪ ಹಾಗೂ ಹತ್ತು ಲಕ್ಷ ಬಾರಿ ವಿಷ್ಣು ಸಹಸ್ರನಾಮ ಪಾರಾಯಣ ಆಗಬೇಕು. ಇದರಿಂದ ಅನಾಹುತ ಪ್ರಮಾಣ ತಗ್ಗುತ್ತದೆ, ವೈಯಕ್ತಿಕ ಮಟ್ಟದಲ್ಲಿ ಹೆಚ್ಚಿನ ಕ್ಷೋಭೆ ಆಗುವುದಿಲ್ಲ ಎಂಬ ಪರಿಹಾರ ಬಂತು.

ಇದು ಎಲ್ಲ ಜಾತಿ, ಧರ್ಮ, ದೇಶವನ್ನು ಮೀರಿದ ಪರಿಹಾರ. ಇದರಲ್ಲಿ ಕೃಷ್ಣ ಮಠಕ್ಕೆ ಒಂದು ರೂಪಾಯಿ ಕೊಡುವಂಥದ್ದಿಲ್ಲ.

ಆದರೆ ನಾವು ಒಂದು ವೆಬ್‌ಸೈಟ್ ಮಾಡಿ, ಈ ಜಪ, ಪಾರಾಯಣದ ಲೆಕ್ಕವನ್ನು ಇಡುವುದಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶ ಇಟ್ಟುಕೊಂಡಿದ್ದೇವೆ. ಅದನ್ನು ಬಿಟ್ಟರೆ ಜಗತ್ತಿನ ಯಾವ ತುದಿಯಲ್ಲಿದ್ದರೂ ನಿಮ್ಮ ಮನೆಯಲ್ಲಿ ಈ ರಾಮ, ಕೃಷ್ಣ ಮಂತ್ರ ಜಪ ಹಾಗೂ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ, ಜಗತ್ತಿನ ಒಳಿತಿಗೆ ಬೇಡಿಕೊಳ್ಳಿ ಎಂಬುದಷ್ಟೇ ನಮ್ಮ ಮನವಿ.”

“ಏನಿದು ಕಾಳಸರ್ಪ ಯೋಗದ ವಿಚಾರ?”

ಪ್ರಶ್ನೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಕಾಳಸರ್ಪ ಯೋಗದ ವಿಚಾರವೂ ಬಂದಿದೆ ಎನ್ನಲಾಗುತ್ತಿದೆ. ಇದರ ಬಗ್ಗೆ ಏನು ಹೇಳುತ್ತೀರಿ?

“ರಾಹು ಹಾಗೂ ಕೇತು ಗ್ರಹದ ಮಧ್ಯೆ ಉಳಿದ ಏಳು, ಅಂದರೆ ರವಿ, ಚಂದ್ರ, ಕುಜ, ಬುಧ, ಗುರು, ಶುಕ್ರ, ಶನಿ ಗ್ರಹಗಳು ಬಂದರೆ ಇದನ್ನು ಕಾಳಸರ್ಪ ಯೋಗ ಎಂದು ಕರೆಯಲಾಗುತ್ತದೆ. ಇದು ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದ ಗ್ರಹ ಸ್ಥಿತಿಯ ಯೋಗವನ್ನು ಶಿರೂರು ಮಠದ ಸ್ವಾಮಿಗಳು ತಿಳಿಸಿದ್ದಾರೆ.

ಇದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಂಥ ವಿಚಾರ. ಇದಕ್ಕೂ ಕೂಡ ನಾವು ವಿಶೇಷ ಪರಿಹಾರ ನಾವೇ ಮಾಡುತ್ತೇವೆ, ಬನ್ನಿ, ಹಣ ಕೊಡಿ ಎಂದು ಯಾರನ್ನೂ ಕರೆಯುತ್ತಿಲ್ಲ.

ಜಗತ್ತಿನ ಕ್ಷೇಮಕ್ಕೆ, ಜನರ ಕ್ಷೇಮಕ್ಕೆ ಈ ಅನಾಹುತದಿಂದ ಹೊರಬರಲು ನೀವಿರುವ ಸ್ಥಳಗಳಲ್ಲಿಯೇ ರಾಮ ತಾರಕ ಮಂತ್ರ, ಕೃಷ್ಣ ಮಂತ್ರ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿಕೊಳ್ಳಿ ಎಂದು ಮಾರ್ಗದರ್ಶನ ಮಾಡುತ್ತಾ ಇದ್ದೇವೆ.

ಇದಕ್ಕಾಗಿ ಒಂದು ವೆಬ್‌ಸೈಟ್ ಮಾಡಿ, ಅದರಲ್ಲಿ ಅಂಕಿಯನ್ನು ದಾಖಲಿಸುವುದಕ್ಕೆ ಸಹಾಯ ಮಾಡಬೇಕು ಎಂಬುದು ಮಾತ್ರ ನಮ್ಮ ಉದ್ದೇಶ ವಿನಾ ಮತ್ತೇನೂ ಇಲ್ಲ.”

ಉಡುಪಿ ಪರ್ಯಾಯ 2026: ಶೀರೂರು ಮಠದ ಶ್ರೀ ವೇದವರ್ಧನ ತೀರ್ಥರ ಪೀಠಾರೋಹಣ, ಪರಂಪರೆಯ ಇತಿಹಾಸ

“ಶಿರೂರು ಮಠದ ಪರ್ಯಾಯದಲ್ಲಿ ಬರೀ ವಿವಾದಗಳೇ ಆಗುತ್ತಿದೆಯಲ್ಲ?”

ಪ್ರಶ್ನೆ: ಶಿರೂರು ಮಠದ ಪರ್ಯಾಯದ ಅವಧಿಯಲ್ಲಿ ಬರೀ ವಿವಾದಗಳೇ ಆಗುತ್ತಿವೆ ಎಂಬ ಚರ್ಚೆ ನಡೆಯುತ್ತಿದೆಯಲ್ಲ?

“ಶಿಸ್ತು ಅನ್ನೋದು ಕೇಳಿಸಿಕೊಳ್ಳುವುದಕ್ಕೆ ಸುಂದರವಾದ ಪದ. ಅದನ್ನೇ ಅನುಸರಿಸಬೇಕು, ಎಲ್ಲರೂ ಅಳವಡಿಸಿಕೊಳ್ಳಬೇಕು ಅಂದಾಗ ಕೆಲವರಿಗೆ–ಮತ್ತೆ ಕೆಲವು ಬಾರಿ ಹಲವರಿಗೆ ಇರುಸು ಮುರುಸು ಆಗುತ್ತದೆ.

ಮಾಹಿತಿಗೆ ಅಂತ ಹೇಳುತ್ತೀನಿ. ಪರ್ಯಾಯದ ಆರಂಭದಲ್ಲಿಯೇ ವಸ್ತ್ರ ಸಂಹಿತೆ ತಂದೆವು. ದರ್ಶನಕ್ಕೆ ಸರತಿ ವ್ಯವಸ್ಥೆ, ಬಯೋಮೆಟ್ರಿಕ್ ಹೀಗೆ ಕೆಲವು ಶಿಸ್ತಿನ ನಿಯಮ ತಂದೆವು.

ಹೊರಗಿಂದ ಇದು ಕೇಳುವುದಕ್ಕೆ ಹಿತ. ಆದರೆ ಕೆಲವರಿಗೆ ಅದನ್ನು ಅನುಸರಿಸುವುದು ಹಿತವಾದದ್ದಲ್ಲ. ಅಷ್ಟೇ ಅಲ್ಲ, ಮತ್ತೆ ಕೆಲವರಿಗೆ ಇದರ ಶ್ರೇಯಸ್ಸು, ಇನ್ನಿತರ ವಿಚಾರಗಳು ಸಹನೀಯ ಅಲ್ಲ.

ಈಗ ಉಡುಪಿ ಮಠದಲ್ಲಿ ಚೌಕಿ ಊಟದಲ್ಲಿ ಏನೆಲ್ಲ ಆಹಾರ ಪದಾರ್ಥ ಇರುತ್ತವೋ ಅವೇ ಉಳಿದ ಸಾಮಾನ್ಯ ಅನ್ನ ಸತ್ರದಲ್ಲೂ ಪ್ರವಾಸಿಗರಿಗೂ ದಾನಿಗಳಿಗೂ ಉಣಬಡಿಸಲಾಗುತ್ತಾ ಇದೆ. ಇದನ್ನು ತಾವೇ ಸ್ವತಃ ಪರೀಕ್ಷಿಸಬಹುದು.

ಮತ್ತು ಹೀಗೆ ಮಾಡುವುದು ಸುಲಭದ ಸಂಗತಿಯೂ ಅಲ್ಲ. ಶ್ರಮ–ಪ್ರೀತಿ ಹಾಗೂ ಅದಕ್ಕಿಂತ ಹೆಚ್ಚಾಗಿ ಶ್ರದ್ಧೆ–ಸಂಪನ್ಮೂಲಗಳನ್ನು ನಿರೀಕ್ಷಿಸುವ ಸಂಗತಿ. ಆ ಕೃಷ್ಣನ ಅನುಗ್ರಹದಿಂದ ಇದು ನಡೆಯುತ್ತಾ ಬಂದಿದೆ. ಇಂಥ ಸಂಗತಿಗಳು ಪರೀಕ್ಷೆಗಳನ್ನು ತಂದೊಡ್ಡುತ್ತವೆ.”

“ಬರೀ ಇಷ್ಟಕ್ಕೆ ವಿವಾದಗಳು ತಂದು ನಿಮ್ಮ ಮೇಲೆ ಹಾಕುತ್ತಾ ಇದ್ದಾರೆ ಅನ್ನಿಸುತ್ತಾ?”

ಪ್ರಶ್ನೆ: ಇಂಥ ಕೆಲವು ವಿಚಾರಗಳಿಗೇ ವಿವಾದಗಳನ್ನು ಸೃಷ್ಟಿಸಿ ನಿಮ್ಮ ಮೇಲೆ ಹಾಕಲಾಗುತ್ತಿದೆ ಅನ್ನಿಸುತ್ತಿದೆಯೇ?

“ಈ ಬಾರಿ ಶಿವರಾತ್ರಿಯ ವೇಳೆ ಉಡುಪಿ ಕೃಷ್ಣ ಮಠದಲ್ಲಿ ರುದ್ರ ಪಾರಾಯಣವನ್ನು ಮಾಡಿಸಲಾಯಿತು. ಲೋಕದ ಕಣ್ಣಿಗೆ ಕಾಣುವ ತಾತ್ವಿಕ–ಮತ ಭೇದ ಇವೆಲ್ಲವನ್ನೂ ಪಕ್ಕಕ್ಕೆ ಇಟ್ಟು, ಆಹ್ವಾನ ಕೊಟ್ಟು, ಈ ರುದ್ರ ಪಾರಾಯಣವನ್ನು ಮಾಡಿಸಿದೆವು.

ದ್ವೈತ–ಅದ್ವೈತ ಎಂಬ ಅಭಿಪ್ರಾಯ ಭೇದವನ್ನು ಪಕ್ಕಕ್ಕೆ ಸರಿಸಿ, ಮುಂದಕ್ಕೆ ಹೆಜ್ಜೆ ಇಡುವ ಪ್ರಯತ್ನ ಅದಾಗಿತ್ತು.

ಒಂದು ಅನಿರೀಕ್ಷಿತ–ಅನಪೇಕ್ಷಿತ ಘಟನೆಯಿಂದ (ಶಂಕರಾಚಾರ್ಯರ ನಿಂದನೆಗೆ ಸಂಬಂಧಿಸಿದ ಉಪನ್ಯಾಸ) ಆಗಿನ ಪ್ರಯತ್ನವನ್ನು ಯಾರೂ ಸ್ಮರಿಸದಂತೆ ಆಗಿಹೋಯಿತು.

ಈ ಶಂಕರಾಚಾರ್ಯರ ನಿಂದನೆ ಪ್ರಕರಣ ಎಂಬುದಿದೆಯಲ್ಲ, ಅದರಿಂದ ನಮ್ಮ ನಿಜ ಪ್ರಯತ್ನಗಳು, ಪ್ರಾಂಜಲ ಮನಸ್ಸಿನಿಂದ ನಡೆಸಿದಂಥ ಕೆಲಸಗಳು ನೇಪಥ್ಯಕ್ಕೆ ಸರಿದು ಬಿಡುವಂತೆ ಆಯಿತು.

ಯಾರು ಹೀಗೆಲ್ಲ ಮಾಡುತ್ತಾರೆ, ಯಾಕೆ ಮಾಡುತ್ತಾರೆ ಎಂಬ ಪ್ರಶ್ನೆಯನ್ನು ದಯವಿಟ್ಟು ಕೇಳಬೇಡಿ. ಯಾಕೆ ಅಂದರೆ, ಅದಕ್ಕೆ ಉತ್ತರ ನಮಗೂ ಗೊತ್ತಿಲ್ಲ.

ಯಾವುದೋ ಒಂದು ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲೋ ಅಥವಾ ಒಂದು ಯೂಟ್ಯೂಬ್ ಚಾನೆಲ್‌ನಲ್ಲೋ ಮಾಡುವ ಅಪಪ್ರಚಾರಕ್ಕೆ ಒಬ್ಬೊಬ್ಬರಿಗೇ ಉತ್ತರ ಕೊಡುವಷ್ಟು ಸಮಯ ಆ ಭಗವಂತ ನಮಗೆ ಕೊಟ್ಟಿಲ್ಲ.

ಆದರೆ, ಈ ಬಗ್ಗೆ ಯಾರು ನಮ್ಮನ್ನು ಸಂಪರ್ಕಿಸಿ, ಉತ್ತರ ಕೇಳಿದರೋ ಅವರೆಲ್ಲರಿಗೂ ವಿನಯಪೂರ್ವಕವಾಗಿ ಉತ್ತರಿಸಿದ್ದೇವೆ.”

“ಉಡುಪಿ ಕೃಷ್ಣ ಮಠಕ್ಕೆ ಸಂಬಂಧಿಸಿದಂತೆ ಏನು ಉತ್ತರ ಬಂತು?”

ಪ್ರಶ್ನೆ: ಅಷ್ಟಮಂಗಲ ಪ್ರಶ್ನೆಯಲ್ಲಿ ಉಡುಪಿ ಕೃಷ್ಣ ಮಠಕ್ಕೆ ಸಂಬಂಧಿಸಿದಂತೆ ಏನು ಉತ್ತರ ಬಂತು?

“ಉಡುಪಿ ಕೃಷ್ಣ ಮಠದಲ್ಲಿ ನಡೆಯುವ ಅನ್ನದಾನ, ಕೃಷ್ಣನ ಕೈಂಕರ್ಯ, ಸಮಾಜ ಸೇವೆ, ದೇವತಾ ಕಾರ್ಯಗಳು ಇವೆಲ್ಲವೂ ಸೇರಿ ಇಲ್ಲಿನ ಸಾನ್ನಿಧ್ಯವು ಪ್ರಬಲವಾಗಿದೆ ಎಂಬ ಉತ್ತರ ಬಂತು.

ಅದೇ ರೀತಿ ಕೆಲವು ಬದಲಾವಣೆ ಹಾಗೂ ಮಾಡಿಕೊಳ್ಳಬೇಕಾದ ಪರಿಹಾರದ ಬಗ್ಗೆ ಕೂಡ ತಿಳಿಸಲಾಗಿದೆ.

ಆರಂಭದಲ್ಲಿಯೇ ಹೇಳಿದಂತೆ ಅಷ್ಟಮಂಗಲ ಪ್ರಶ್ನೆಯಲ್ಲಿ ಬಂದಂಥ ಸಲಹೆ–ಮಾರ್ಗದರ್ಶನವನ್ನು ಕೃಷ್ಣ ಮಠಕ್ಕೆ ಸಂಬಂಧಿಸಿದ ಎಲ್ಲ ಮಠಗಳಿಗೂ ತಲುಪಿಸಿದ್ದೇವೆ.

ಕೃಷ್ಣ ಜಯಂತಿ ನಂತರದಲ್ಲಿ ಈ ಬಗ್ಗೆ ಚರ್ಚೆ ಮಾಡಿ, ಮುಂದಕ್ಕೆ ಹೆಜ್ಜೆ ಇಡುತ್ತೇವೆ. ಈಗ ಇನ್ನೂ ಒಂದು ದಿನ ಪ್ರಶ್ನೆ ಇಡಲಿಕ್ಕೆ ಇದೆ. ಆ ದಿನ ಮುಂದಿನ ಕಾರ್ಯವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಸೂಚನೆಗಳು ದೊರೆಯುತ್ತವೆ.

ಕೃಷ್ಣ ಮಠದ ವಿಚಾರ ಏನಿದೆ, ಅದು ಅಷ್ಟ ಮಠದ ಸ್ವಾಮಿಗಳು ಒಟ್ಟಾಗಿ ಮಾಡಲಿರುವ ಕೆಲಸ ಆಗಲಿದೆ. ಜಗತ್ತಿನ ಹಿತ–ಒಳಿತಿಗಾಗಿ ಮಾಡಬೇಕಾದದ್ದಕ್ಕೆ ಸದ್ಯದಲ್ಲೇ ಚಾಲನೆ ಕೊಡಲಾಗುವುದು.

ಇನ್ನು ನಮಗೆ ಹಣ ಮಾಡಬೇಕು ಅಂತಲೋ ಇದರಿಂದ ನಿಧಿ ಸಂಗ್ರಹಿಸಬೇಕು ಅಂತಲೋ ಎಳ್ಳಿನ ಕಾಳಿನಷ್ಟೂ ಉದ್ದೇಶ ಇಲ್ಲ.

ಇಂಥ ಮಾತುಗಳನ್ನು ಕೇಳುವ ಪರಿಸ್ಥಿತಿ ಬಂದದ್ದು ಕಾಲದ ವೈಪರೀತ್ಯ ಹಾಗೂ ನಮ್ಮ ತಾಳ್ಮೆ–ಸತ್ವ–ತತ್ವ ನಿಷ್ಠೆಯ ಪರೀಕ್ಷೆಯೂ ಇರಬಹುದು.”

ಮುಂಜಾನೆಯಿಂದ ರಾತ್ರಿಯವರೆಗೆ ಶೀರೂರು ಶ್ರೀಗಳ ನಿರಂತರ ಅಧ್ಯಯನ ಮತ್ತು ಅನುಷ್ಠಾನ: ಇಲ್ಲಿದೆ ವಿಶೇಷ ಮಾಹಿತಿ

“ಈಗಿನ ಅಷ್ಟಮಂಗಲ ಪ್ರಶ್ನೆಯ ಬಗೆಗಿನ ಚರ್ಚೆಯ ನಂತರದಲ್ಲಿ ನಿಮಗೆ ಅನಿಸಿದ್ದು ಏನು?”

ಪ್ರಶ್ನೆ: ಅಷ್ಟಮಂಗಲ ಪ್ರಶ್ನೆಯ ಕುರಿತು ಈಗ ನಡೆಯುತ್ತಿರುವ ಚರ್ಚೆಗಳ ಹಿನ್ನೆಲೆಯಲ್ಲಿ ನಿಮಗೆ ಅನಿಸಿದ್ದು ಏನು?

“ಕಾಲವು ಎಲ್ಲವನ್ನೂ ನೆನಪಿಟ್ಟುಕೊಳ್ಳುತ್ತದೆ. ಇತಿಹಾಸದಲ್ಲಿ ಒಳ್ಳೆಯದೂ ಉಳಿದುಕೊಂಡಿದೆ, ಕೆಟ್ಟದ್ದೂ ಉಳಿದುಕೊಂಡಿದೆ.

ಶಿರೂರು ಮಠದ ಪರ್ಯಾಯದ ಅವಧಿಯಲ್ಲಿ ಆದ ಕಾರ್ಯಗಳ ಶ್ರೇಯ ಅದು ಕೃಷ್ಣ ಮಠದ್ದು. ಆ ಕೃಷ್ಣನದ್ದು. ನಡೆಸಿಕೊಳ್ಳುವವನು ಅವನೇ.

ನಿನ್ನ ಚಿತ್ತಕ್ಕೆ ಬಂದದ್ದು, ಎನ್ನ ಚಿತ್ತಕ್ಕೆ ಬರಲಯ್ಯ ಎಂದು ಮುಂದಕ್ಕೆ ಸಾಗುತ್ತಿರಬೇಕು.

ಇದು ಅನ್ನಿಸಿಕೆಗಳನ್ನು ಹೇಳುವ, ಅದರ ಬಗ್ಗೆ ಮಾತನಾಡುವ ಸಮಯವಲ್ಲ. ಕೆಲಸ ಮಾಡುವ ವೇಳೆ. ಈಗ ಅಧೀರರಾಗಿ ಕೂರಬಾರದು.

ಇದು ನಮ್ಮ ವಿಶ್ವಾಸ ಹಾಗೂ ಸಂಕಲ್ಪ ಎರಡೂ ಹೌದು.”

ಸಂದರ್ಶನ: ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts