Thirukolur Temple: ಕಳೆದುಹೋದ ಆಸ್ತಿ, ಐಶ್ವರ್ಯ ಮತ್ತೆ ಸಿಗಲು ವೈತಮಾನಿಧಿ ಪೆರುಮಾಳ್ ಕ್ಷೇತ್ರಕ್ಕೆ ಭೇಟಿ ನೀಡಿ

Main entrance and stone carved architecture of Thirukolur Vaithamanidhi Perumal Temple in Tamil Nadu.
ತಮಿಳುನಾಡಿನ ಪ್ರಸಿದ್ಧ ನವತಿರುಪತಿ ಕ್ಷೇತ್ರಗಳಲ್ಲಿ ಒಂದಾದ ತಿರುಕೋಳೂರು ಶ್ರೀ ವೈತಮಾನಿಧಿ ಪೆರುಮಾಳ್ ದೇವಸ್ಥಾನ

ತಿರುಮಲದ ವೆಂಕಟೇಶ್ವರನು ಕುಬೇರನಿಂದ ಸಾಲ ಪಡೆದುಕೊಂಡಿದ್ದಾನೆ ಎಂಬ ಪುರಾಣದ ಮಾಹಿತಿ ನಿಮಗೆ ಗೊತ್ತಿರುತ್ತದೆ. ಆದರೆ ಸ್ವತಃ ಕುಬೇರನಿಗೆ ನವನಿಧಿಗಳನ್ನು ಮತ್ತೆ ಕೊಟ್ಟಂಥ ಮಹಾವಿಷ್ಣುವಿನ ಬಗ್ಗೆ ನಿಮಗೆ ಗೊತ್ತಿದೆಯಾ? ಪಾರ್ವತಿಯಿಂದ ಶಾಪಗ್ರಸ್ತನಾದ ಕುಬೇರನಿಗೆ ‘ವೈತಮಾನಿಧಿ ಪೆರುಮಾಳ್’ ಅನುಗ್ರಹದಿಂದ ಮತ್ತೆ ಸಂಪತ್ತು ಪ್ರಾಪ್ತಿಯಾಯಿತು. ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಚೆಂದೂರು ತಾಲೂಕಿನಲ್ಲಿರುವ ತಿರುಕೋಳೂರು ಒಂದು ಐತಿಹಾಸಿಕ ಮತ್ತು ಧಾರ್ಮಿಕ ಪ್ರಾಮುಖ್ಯ ಹೊಂದಿರುವ ಗ್ರಾಮ. ಇದು ಪ್ರಸಿದ್ಧ ನವತಿರುಪತಿ (ಒಂಬತ್ತು ವೈಷ್ಣವ ದೇವಸ್ಥಾನಗಳು) ಕ್ಷೇತ್ರಗಳಲ್ಲಿ ಒಂದಾಗಿದ್ದು, ನವಗ್ರಹಗಳ ಪೈಕಿ ಅಂಗಾರಕ (ಮಂಗಳ ಗ್ರಹ) ನಿಗೆ ಸಂಬಂಧಿಸಿದ ಅತ್ಯಂತ ಪವಿತ್ರ ಸ್ಥಳವಾಗಿದೆ. ಇಲ್ಲಿ ಭಗವಾನ್ ವಿಷ್ಣುವು ‘ವೈತಮಾನಿಧಿ ಪೆರುಮಾಳ್’ ಆಗಿ ಶಯನ ಮುದ್ರೆಯಲ್ಲಿ ನೆಲೆಸಿದ್ದಾನೆ.

ಸ್ಥಳ ಪುರಾಣ:

ಒಮ್ಮೆ ಕುಬೇರನು ಶಿವ ಮತ್ತು ಪಾರ್ವತಿಯರ ದರ್ಶನ ಪಡೆಯಲು ಕೈಲಾಸಕ್ಕೆ ಹೋಗಿದ್ದ. ಅಲ್ಲಿ ಶಿವನ ಪಕ್ಕದಲ್ಲಿ ಕುಳಿತಿದ್ದ ಪಾರ್ವತಿ ದೇವಿಯ ಅಪೂರ್ವ ಸೌಂದರ್ಯ ಮತ್ತು ತೇಜಸ್ಸನ್ನು ಕಂಡು ಕುಬೇರನು ರೆಪ್ಪೆ ಬಡಿಯದೆ ಆಕೆಯನ್ನೇ ನೋಡತೊಡಗಿದ. ಅವನ ದೃಷ್ಟಿಯಲ್ಲಿ ಯಾವುದೇ ಕೆಟ್ಟ ಆಲೋಚನೆ ಇರದಿದ್ದರೂ ಆ ರೀತಿ ದಿಟ್ಟಿಸಿ ನೋಡಿದ್ದು ದೇವಿಗೆ ಅಪಚಾರವೆನಿಸಿತು. ಅಲ್ಲದೆ, ಕುಬೇರನ ಕಣ್ಣುಗಳಲ್ಲಿ ಸಣ್ಣದೊಂದು ಅಹಂಕಾರದ ಮಿಂಚು ಮೂಡಿತ್ತು.

ಇದರಿಂದ ಕೋಪಗೊಂಡ ಪಾರ್ವತಿ ದೇವಿ, ಕುಬೇರನಿಗೆ ಹೀಗೆ ಶಾಪ ನೀಡಿದಳು:

  1. ನಿನ್ನ ಒಂದು ಕಣ್ಣು ದೃಷ್ಟಿಯನ್ನು ಕಳೆದುಕೊಂಡು ಕುರುಡಾಗಲಿ (ನಂತರ ಶಿವನ ಅನುಗ್ರಹದಿಂದ ಅದು ಹಳದಿ ಬಣ್ಣದ ಸಣ್ಣ ಕಣ್ಣಾಗಿ ಬದಲಾಯಿತು, ಅದಕ್ಕೇ ಕುಬೇರನಿಗೆ ‘ಏಕಾಕ್ಷಿಪಿಂಗಲ’ ಎಂದೂ ಹೆಸರಿದೆ).
  2. ಜಗತ್ತಿನ ಸಕಲ ಸಂಪತ್ತಿಗೆ ಅಧಿಪತಿಯಾಗಿದ್ದೀಯಾ ಎಂಬ ನಿನ್ನ ಅಹಂಕಾರ ಅಳಿಯಲಿ, ನಿನ್ನ ಬಳಿಯಿರುವ ನವನಿಧಿಗಳೂ (ಒಂಬತ್ತು ಪ್ರಕಾರದ ಸಂಪತ್ತುಗಳು) ನಿನ್ನನ್ನು ಬಿಟ್ಟು ತೊಲಗಲಿ.

ಈ ಶಾಪದ ಪ್ರಭಾವದಿಂದ ಕುಬೇರನು ತನ್ನ ಸಂಪತ್ತು, ತೇಜಸ್ಸು ಮತ್ತು ಐಶ್ವರ್ಯವನ್ನೆಲ್ಲ ಕಳೆದುಕೊಂಡು ದರಿದ್ರನಾದನು. ತನ್ನ ತಪ್ಪಿನ ಅರಿವಾಗಿ, ಶಾಪವಿಮೋಚನೆಗಾಗಿ ಭೂಲೋಕಕ್ಕೆ ಬಂದು ತಾಮ್ರಪರಣಿ ನದಿಯ ತಟದಲ್ಲಿರುವ ತಿರುಕೋಳೂರು ಎಂಬ ಈ ಪವಿತ್ರ ಸ್ಥಳದಲ್ಲಿ ವಿಷ್ಣುವನ್ನು ಕುರಿತು ಘೋರ ತಪಸ್ಸು ಮಾಡಿದ.

ಅವನ ತಪಸ್ಸಿಗೆ ಮೆಚ್ಚಿದ ವಿಷ್ಣುವು (ವೈತಮಾನಿಧಿ ಪೆರುಮಾಳ್) ಕುಬೇರನಿಗೆ ಪ್ರತ್ಯಕ್ಷನಾಗಿ, ಅವನಿಂದ ದೂರ ಹೋಗಿದ್ದ ನವನಿಧಿಗಳನ್ನು ತಾನೇ ಕಾವಲು ಕಾಯ್ದು (ವೈತಮಾ ನಿಧಿ), ಅವುಗಳನ್ನು ಮರಳಿ ಕುಬೇರನಿಗೆ ಕೊಡಿಸಿ ಶಾಪವಿಮೋಚನೆ ಮಾಡಿದ ಎಂಬುದು ಈ ಕ್ಷೇತ್ರದ ಐತಿಹ್ಯ.

ಇನ್ನು ತಮಿಳಿನಲ್ಲಿ ‘ಕೋಳ್’ ಎಂದರೆ ರಹಸ್ಯವಾಗಿ ಮಾತನಾಡುವುದು ಎಂದರ್ಥ. ವನದೇವತೆಯರು ಈ ಸ್ಥಳದ ಬಗ್ಗೆ ರಹಸ್ಯವಾಗಿ ಮಾತನಾಡಿಕೊಂಡಿದ್ದರಿಂದ ಈ ಊರಿಗೆ ‘ತಿರುಕೋಳೂರು’ ಎಂಬ ಹೆಸರು ಬಂತು ಎಂಬ ನಂಬಿಕೆಯಿದೆ. ಶಾಸನಗಳಲ್ಲಿ ಇದನ್ನು ‘ರಾಜರಾಜ ಪಾಂಡಿ ನಾಟ್ಟು ತಿರುಕೋಳೂರು’ ಎಂದೂ ಕರೆಯಲಾಗಿದೆ.

ದೇವಸ್ಥಾನದ ಇತಿಹಾಸ ಮತ್ತು ಶಾಸನಗಳು

ಈ ದೇವಸ್ಥಾನವು ಅತ್ಯಂತ ಪುರಾತನವಾಗಿದ್ದು, ಚೋಳ ಮತ್ತು ಪಾಂಡ್ಯ ರಾಜರ ಆಳ್ವಿಕೆಯಲ್ಲಿ ಅಭಿವೃದ್ಧಿ ಕಂಡಿದೆ.

  • ಇಲ್ಲಿನ ಅತ್ಯಂತ ಹಳೆಯ ಶಾಸನವು ಮೊದಲನೇ ರಾಜರಾಜ ಚೋಳನ ಕಾಲದ್ದಾಗಿದೆ.
  • ನಂತರ ಕುಲೋತ್ತುಂಗ ಚೋಳನು ಈ ಇಡೀ ದೇವಸ್ಥಾನವನ್ನು ಪುನರ್ನಿರ್ಮಾಣ ಮಾಡಿದನ.
  • ಕ್ರಿಸ್ತಶಕ 1414ಕ್ಕಿಂತ ಮುಂಚೆ ಇಲ್ಲಿನ ದೇವರನ್ನು ‘ಸಾಲಸಯನತು ಕಿಡಂತ ಎಮ್ಮೆರುಮಾನ್’ ಅಥವಾ ‘ಪಳ್ಳಿಕೊಂಡರುಳಿಯ ಪರಾಸ್ವಾಮಿ’ ಎಂದು ಕರೆಯಲಾಗುತ್ತಿತ್ತು. ನಂತರದ ಶಾಸನಗಳಲ್ಲಿ ‘ವೈತಮಾನಿಧಿ’ ಎಂಬ ಹೆಸರು ಬಳಕೆಗೆ ಬಂತು.
  • ಮಾರ್ವರ್ಮನ್ ಸುಂದರ ಪಾಂಡ್ಯನ್, ಸದಾವರ್ಮ ಚೋಳ ಪಾಂಡ್ಯನ್ ಮುಂತಾದ ರಾಜರು ಈ ದೇವಸ್ಥಾನಕ್ಕೆ ಭಾರಿ ಪ್ರಮಾಣದ ಕೊಡುಗೆಗಳನ್ನು ನೀಡಿದ್ದಾರೆ.

ವಾನಮಾಮಲೈ ತೋತಾದ್ರಿನಾಥ – ತಿರುಕ್ಕುರುಂಗುಡಿ: ದೈಹಿಕ ಬಾಧೆ ನಿವಾರಿಸುವ ಎಣ್ಣೆ ಪ್ರಸಾದದ ಈ ಕ್ಷೇತ್ರದ ಮಹಿಮೆ ನಿಮಗೆ ಗೊತ್ತೇ?

ದೇವಸ್ಥಾನದ ಸಮಯ 

ದೇವಸ್ಥಾನವು ಪ್ರತಿದಿನ ಭಕ್ತರ ದರ್ಶನಕ್ಕಾಗಿ ಕೆಳಗಿನ ಸಮಯಗಳಲ್ಲಿ ತೆರೆದಿರುತ್ತದೆ:

  • ಬೆಳಗ್ಗೆ 7.30 ರಿಂದ ಮಧ್ಯಾಹ್ನ 12 ವರೆಗೆ
  • ಸಂಜೆ 4.30ರಿಂದ ರಾತ್ರಿ 7.30 ವರೆಗೆ

(ಗಮನಿಸಿ: ಹಬ್ಬದ ದಿನಗಳಲ್ಲಿ ಮತ್ತು ಧನುರ್ಮಾಸದಲ್ಲಿ ಸಮಯ ಬದಲಾಗಬಹುದು).

ಭಕ್ತರು ಈ ಕ್ಷೇತ್ರಕ್ಕೆ ಬರುವ ಪ್ರಮುಖ ಉದ್ದೇಶಗಳು

ಈ ದೇವಸ್ಥಾನವು ಧಾರ್ಮಿಕ ಕ್ಷೇತ್ರವಾಗಿಯಷ್ಷ್ಟೇ ಅಲ್ಲದೆ, ಜಾತಕ ದೋಷ ಹಾಗೂ ಆರ್ಥಿಕ ಸಂಕಷ್ಟಗಳಿಗೆ ಪರಿಹಾರ ನೀಡುವ ವಿಶೇಷ ತಾಣವಾಗಿ ಪ್ರಸಿದ್ಧಿಯಾಗಿದೆ. ಭಕ್ತರು ಮುಖ್ಯವಾಗಿ ಈ ಕೆಳಗಿನ ಕಾರಣಗಳಿಗಾಗಿ ಇಲ್ಲಿಗೆ ಬರುತ್ತಾರೆ:

  • ನವನಿಧಿ ಮತ್ತು ಆಸ್ತಿ ಮರುಪ್ರಾಪ್ತಿ: ಸ್ಥಳ ಪುರಾಣದ ಪ್ರಕಾರ ಕುಬೇರನೇ ತನ್ನ ಕಳೆದುಹೋದ ಸಂಪತ್ತನ್ನು ಮರಳಿ ಪಡೆದ ಸ್ಥಳ ಇದಾಗಿದೆ. ಹೀಗಾಗಿ, ವ್ಯಾಪಾರ-ವ್ಯವಹಾರದಲ್ಲಿ ಭಾರಿ ನಷ್ಟ ಅನುಭವಿಸಿದವರು, ಕೈಯಲ್ಲಿದ್ದ ಹಣ ಅಥವಾ ಆಸ್ತಿಯನ್ನು ಕಳೆದುಕೊಂಡವರು, ಮತ್ತು ಸಾಲದ ಸುಳಿಗೆ ಸಿಲುಕಿದವರು ತಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿ ಎಂದು ಇಲ್ಲಿಗೆ ಬಂದು ಪ್ರಾರ್ಥಿಸುತ್ತಾರೆ.
  • ಮಂಗಳ ದೋಷ (ಕುಜ ದೋಷ) ನಿವಾರಣೆ: ನವತಿರುಪತಿ ಕ್ಷೇತ್ರಗಳಲ್ಲಿ ಈ ದೇವಸ್ಥಾನವು ಅಂಗಾರಕ (ಮಂಗಳ ಗ್ರಹ) ನಿಗೆ ಪ್ರೀತ್ಯರ್ಥವಾದದ್ದಾಗಿದೆ. ಜಾತಕದಲ್ಲಿ ಮಂಗಳ ದೋಷವಿದ್ದು ವಿವಾಹ ವಿಳಂಬವಾಗುತ್ತಿದ್ದರೆ, ಅಥವಾ ದಂಪತಿ ಮಧ್ಯೆ ಕಲಹಗಳಾಗುತ್ತಿದ್ದರೆ ಆ ದೋಷದ ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳಲು ಭಕ್ತರು ಇಲ್ಲಿಗೆ ಬರುತ್ತಾರೆ.
  • ಜ್ಞಾನ ಮತ್ತು ಬುದ್ಧಿಶಕ್ತಿ ವೃದ್ಧಿ: ನವತಿರುಪತಿಗಳ ಶ್ರೇಷ್ಠ ಸಂತ ಮಧುರಕವಿ ಆಳ್ವಾರರ ಜನ್ಮಸ್ಥಳ ಇದಾಗಿರುವುದರಿಂದ ಮತ್ತು ಶ್ರೀ ರಾಮಾನುಜಾಚಾರ್ಯರಿಗೆ ಒಬ್ಬ ಸಾಮಾನ್ಯ ಮಹಿಳೆ ಜ್ಞಾನದ ಬೋಧನೆ (ತಿರುಕೋಳೂರು ಪೆಣ್ ಪಿಳ್ಳೈ ರಹಸ್ಯಂ) ಮಾಡಿದ ಪವಿತ್ರ ಭೂಮಿ ಇದಾಗಿರುವುದರಿಂದ, ವಿದ್ಯಾರ್ಥಿಗಳು ಹಾಗೂ ಜ್ಞಾನಾಕಾಂಕ್ಷಿಗಳು ಬುದ್ಧಿಶಕ್ತಿ ಮತ್ತು ಸನ್ಮತಿಗಾಗಿ ಇಲ್ಲಿ ಪ್ರಾರ್ಥಿಸುತ್ತಾರೆ.

ಇಲ್ಲಿನ ವಿಶೇಷ ಪೂಜೆಗಳು ಮತ್ತು ಸೇವೆಗಳು

ವೈತಮಾನಿಧಿ ಪೆರುಮಾಳ್ ದೇವಸ್ಥಾನದಲ್ಲಿ ವೈಖಾನಸ ಆಗಮ ರೀತಿಯಾಗಿ ಪೂಜೆಗಳು ನಡೆಯುತ್ತವೆ. ಇಲ್ಲಿನ ಕೆಲವು ಪ್ರಮುಖ ಪೂಜಾ ವಿಶೇಷಗಳು ಹೀಗಿವೆ:

  • ಕುಬೇರ ಪೂಜೆ ಮತ್ತು ನವನಿಧಿ ಅರ್ಚನೆ: ಭಕ್ತರು ತಮ್ಮ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಸ್ವಾಮಿಗೆ ವಿಶೇಷ ಅರ್ಚನೆಗಳನ್ನು ಮಾಡಿಸುತ್ತಾರೆ. ದೇವಸ್ಥಾನದಲ್ಲಿ ಪೆರುಮಾಳ್ (ವಿಷ್ಣು) ತನ್ನ ತಲೆಯ ಕೆಳಗೆ ನವನಿಧಿಗಳನ್ನಿಟ್ಟುಕೊಂಡು, ಕುಬೇರನ ಕಡೆಗೆ ನೋಡುವ ಭಂಗಿಯಲ್ಲಿದ್ದಾನೆ. ಇಲ್ಲಿ ಭಕ್ತರು ನಾಣ್ಯಗಳನ್ನು ಅಥವಾ ತಮಗೆ ಸಾಧ್ಯವಿರುವ ಕಾಣಿಕೆಯನ್ನು ಅರ್ಪಿಸಿ ಆರ್ಥಿಕ ಅಭಿವೃದ್ಧಿಗಾಗಿ ಸಂಕಲ್ಪ ಪೂಜೆ ಮಾಡಿಸುತ್ತಾರೆ.
  • ಅಂಗಾರಕ (ಮಂಗಳ) ಶಾಂತಿ ಹೋಮ / ಪೂಜೆ: ಮಂಗಳ ಗ್ರಹದ ದೋಷವಿರುವವರು ಇಲ್ಲಿ ತಜ್ಞ ಅರ್ಚಕರ ಮೂಲಕ ಗ್ರಹ ಶಾಂತಿ ಪೂಜೆಗಳನ್ನು ಮಾಡಿಸುತ್ತಾರೆ. ವಿಶೇಷವಾಗಿ ಮಂಗಳವಾರದ ದಿನಗಳಂದು ಇಲ್ಲಿಗೆ ಬಂದು ಸ್ವಾಮಿಗೆ ಕೆಂಪು ವಸ್ತ್ರ, ತೊಗರಿಬೇಳೆ (ಮಂಗಳ ಗ್ರಹದ ಧಾನ್ಯ) ಮತ್ತು ಕೆಂಪು ಹೂವುಗಳನ್ನು ಅರ್ಪಿಸಿ ಪೂಜೆ ಮಾಡಿಸುವುದು ಅತ್ಯಂತ ಶ್ರೇಷ್ಠ ಎನ್ನಲಾಗುತ್ತದೆ.
  • ತಿರುಮಂಜನಂ (ವಿಶೇಷ ಅಭಿಷೇಕ): ಸ್ವಾಮಿಗೆ ಮತ್ತು ತಾಯಿಗೆ ಜನ್ಮ ನಕ್ಷತ್ರಗಳ ದಿನಗಳಲ್ಲಿ ಅಥವಾ ವಿಶೇಷ ಹಬ್ಬಗಳ ಸಂದರ್ಭದಲ್ಲಿ ಹಾಲು, ಜೇನುತುಪ್ಪ, ಎಳನೀರು ಮತ್ತು ಪವಿತ್ರ ದ್ರವ್ಯಗಳಿಂದ ‘ತಿರುಮಂಜನಂ’ (ಅಭಿಷೇಕ) ಸೇವೆ ನಡೆಯುತ್ತದೆ. ಇದನ್ನು ವೀಕ್ಷಿಸುವುದೇ ಒಂದು ಸೌಭಾಗ್ಯ.
  • ಮಧುರಕವಿ ಆಳ್ವಾರ್ ಸನ್ನಿಧಿ ಪೂಜೆ: ದೇವಸ್ಥಾನದ ಆವರಣದಲ್ಲಿ ಮಧುರಕವಿ ಆಳ್ವಾರರಿಗೆ ಪ್ರತ್ಯೇಕ ಸನ್ನಿಧಿಯಿದೆ. ಅವರ ಜನ್ಮ ನಕ್ಷತ್ರವಾದ ಚಿತ್ತಾ ನಕ್ಷತ್ರದ ದಿನದಂದು ಇಲ್ಲಿ ವಿಶೇಷ ಪೂಜೆ ಮತ್ತು ಅವರ ಪ್ರಬಂಧಗಳ (ನಾಲಾಯಿರ ದಿವ್ಯ ಪ್ರಬಂಧ) ಪಾರಾಯಣ ನಡೆಯುತ್ತದೆ.

ಕೆರೆ ತೊಂಡನೂರು: ನೆಗೆಟಿವ್ ಎನರ್ಜಿ ದೂರ ಮಾಡುವ ಯೋಗ ನರಸಿಂಹ ಮತ್ತು ಸಾವಿರ ತಲೆಯ ಸರ್ಪವಾಗಿ ರಾಮಾನುಜರು ದರ್ಶನ ನೀಡಿದ ಪುಣ್ಯಭೂಮಿ!

ಪ್ರಮುಖ ಉತ್ಸವಗಳು

  • ವೈಕಾಸಿ ವಿಶಾಖಂ ಉತ್ಸವ (ಮೇ-ಜೂನ್): ನವತಿರುಪತಿಯ ಎಲ್ಲಾ ಒಂಬತ್ತು ಪೆರುಮಾಳ್‌ಗಳ ಉತ್ಸವ ಮೂರ್ತಿಗಳನ್ನು ಆಳ್ವಾರ್‌ತಿರುನಗರಿಗೆ ತಂದು, ನಮ್ಮಾಳ್ವಾರರ ಸಮ್ಮುಖದಲ್ಲಿ ನಡೆಸುವ ಗರುಡ ಸೇವೆ ಅತ್ಯಂತ ಪ್ರಸಿದ್ಧವಾದದ್ದು. ಈ ಸಮಯದಲ್ಲಿ ತಿರುಕೋಳೂರು ಪೆರುಮಾಳ್ ಕೂಡ ಅಲ್ಲಿಗೆ ಐಶ್ವರ್ಯ ದಾಯಕನಾಗಿ ಭೇಟಿ ನೀಡುತ್ತಾನೆ.
  • ಮಧುರಕವಿ ಆಳ್ವಾರ್ ಅವತಾರ ಉತ್ಸವ: ತಮಿಳಿನ ‘ಚಿತ್ತಿರೈ’ (ಏಪ್ರಿಲ್-ಮೇ) ತಿಂಗಳ ಚಿತ್ತಾ ನಕ್ಷತ್ರದಂದು ಇವರ ಜನ್ಮೋತ್ಸವವನ್ನು ಹತ್ತು ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ನವತಿರುಪತಿ ದೇವಸ್ಥಾನಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ:

ಸಂಖ್ಯೆ. ದೇವಸ್ಥಾನದ ಹೆಸರು ಮುಖ್ಯ ದೇವರು (ಪೆರುಮಾಳ್) ಸಂಬಂಧಿಸಿದ ನವಗ್ರಹ
1 ಶ್ರೀವೈಕುಂಠಂ (Srivaikuntam) ಶ್ರೀ ಕಲ್ಲಪಿರಾನ್ ಪೆರುಮಾಳ್ ಸೂರ್ಯ (Sun)
2 ವರಗುಣಮಂಗೈ (Varagunamangai) ಶ್ರೀ ವಿಜಯಾಸನ ಪೆರುಮಾಳ್ ಚಂದ್ರ (Moon)
3 ತಿರುಕೋಳೂರು (Thirukolur) ಶ್ರೀ ವೈತಮಾನಿಧಿ ಪೆರುಮಾಳ್ ಮಂಗಳ / ಅಂಗಾರಕ(Mars)
4 ತಿರುಪುಳಿಯಂಗುಡಿ(Thirupuliyangudi) ಶ್ರೀ ಕಾಯ್ಸಿನ ವೇಂದನ್ ಪೆರುಮಾಳ್ ಬುಧ (Mercury)
5 ಆಳ್ವಾರ್‌ತಿರುನಗರಿ (Alwarthirunagari) ಶ್ರೀ ಆದಿನಾಥ ಪೆರುಮಾಳ್ ಗುರು / ಬೃಹಸ್ಪತಿ (Jupiter)
6 ತೆಂತಿರುವೇರೈ (Thenthiruperai) ಶ್ರೀ ಮಾಯಕ್ಕೂತ್ತನ್ ಪೆರುಮಾಳ್ ಶುಕ್ರ (Venus)
7 ಪೆರುಂಗuಳಂ (Perungulam) ಶ್ರೀ ಮಾಯಕ್ಕೂತ್ತನ್ / ವೇಂಕಟಾವಾಣನ್ ಶನಿ (Saturn)
8 ಇರಟ್ಟೈ ತಿರುಪತಿ – 1 (Irettaithirupathi) ಶ್ರೀ ರಾಹು ಕಾಲ ಪೆರುಮಾಳ್ ರಾಹು (Rahu)
9 ಇರಟ್ಟೈ ತಿರುಪತಿ – 2 (Irettaithirupathi) ಶ್ರೀ ಕೇತು ಕಾಲ ಪೆರುಮಾಳ್ ಕೇತು (Kethu)

ತಲುಪುವುದು ಹೇಗೆ? 

ತಿರುಕೋಳೂರು ಗ್ರಾಮವು ತಮಿಳುನಾಡಿನ ತೂತುಕುಡಿ ಜಿಲ್ಲೆಯ ತಿರುಚೆಂದೂರು ತಾಲೂಕಿನಲ್ಲಿದೆ. ಇದು ಮತ್ತೊಂದು ನವತಿರುಪತಿ ಕ್ಷೇತ್ರವಾದ ‘ತೆಂತಿರುವೇರೈ’ನಿಂದ ಸುಮಾರು 3 ಕಿ.ಮೀ ನೈಋತ್ಯದಲ್ಲಿದೆ.

  • ಬಸ್ಸು / ರಸ್ತೆ ಮಾರ್ಗ: ತಿರುನೆಲ್ವೇಲಿಯಿಂದ ತಿರುಚೆಂದೂರಿಗೆ ಹೋಗುವ ಬಸ್ಸುಗಳು ತಿರುಕೋಳೂರು ಕ್ರಾಸ್ ಮೂಲಕ ಹಾದುಹೋಗುತ್ತವೆ. ತಿರುನೆಲ್ವೇಲಿಯಿಂದ (ಸುಮಾರು 30 ಕಿ.ಮೀ) ಅಥವಾ ಆಳ್ವಾರ್‌ತಿರುನಗರಿಯಿಂದ ಸ್ಥಳೀಯ ವಾಹನಗಳ ಮೂಲಕ ಸುಲಭವಾಗಿ ತಲುಪಬಹುದು.
  • ರೈಲು ಮಾರ್ಗ: ಹತ್ತಿರದ ಪ್ರಮುಖ ರೈಲು ನಿಲ್ದಾಣವೆಂದರೆ ತಿರುನೆಲ್ವೇಲಿ ಜಂಕ್ಷನ್. ಇಲ್ಲಿಂದ ದೇವಸ್ಥಾನಕ್ಕೆ ಟ್ಯಾಕ್ಸಿ ಅಥವಾ ಬಸ್ಸುಗಳು ಲಭ್ಯವಿವೆ.
  • ವಿಮಾನ ಮಾರ್ಗ: ಹತ್ತಿರದ ವಿಮಾನ ನಿಲ್ದಾಣವೆಂದರೆ ತೂತುಕುಡಿ ವಿಮಾನ ನಿಲ್ದಾಣ ಅಥವಾ ಮದುರೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts