ಜ್ಯೋತಿಷ್ಯದಲ್ಲಿ ರಾಜಯೋಗಗಳಿಗೆ ವಿಶೇಷವಾದ ಸ್ಥಾನವಿದೆ. ಜಾತಕದಲ್ಲಿ ಗ್ರಹಗಳ ನಿರ್ದಿಷ್ಟ ಸ್ಥಾನ ಮತ್ತು ಸಂಯೋಗದಿಂದ ಕೆಲವು ಶುಭ ಯೋಗಗಳು ರೂಪುಗೊಳ್ಳುತ್ತವೆ. ಇವುಗಳಲ್ಲಿ ಹರ್ಷ ಯೋಗ, ಸರಳ ಯೋಗ ಮತ್ತು ವಿಮಲ ಯೋಗ ಎಂಬ ಮೂರು ಯೋಗಗಳನ್ನು ಒಟ್ಟಾಗಿ “ವಿಪರೀತ ರಾಜಯೋಗ” ಎಂದು ಕರೆಯಲಾಗುತ್ತದೆ. ಈ ಮೂರು ಯೋಗಗಳ ಅರ್ಥ, ಅವು ಸೃಷ್ಟಿಯಾಗುವ ವಿಧಾನ, ಅವುಗಳ ಫಲಗಳು ಮತ್ತು ಉದಾಹರಣೆಗಳ ವಿವರಣೆ ಇಲ್ಲಿದೆ.
ಹರ್ಷ ಯೋಗ (Harsha Yoga) ಅಂದರೇನು?
ಜಾತಕದಲ್ಲಿ 6ನೇ ಮನೆಯು ರೋಗ, ಶತ್ರು, ಋಣ (ಸಾಲ) ಮತ್ತು ಕಷ್ಟಗಳನ್ನು ಸೂಚಿಸುತ್ತದೆ. ಈ 6ನೇ ಮನೆಯು ದುಸ್ಥಾನವಾಗಿದ್ದರೂ 6ನೇ ಮನೆಯ ಅಧಿಪತಿಯು ಜಾತಕದಲ್ಲಿ ಮತ್ತೊಂದು ದುಸ್ಥಾನದಲ್ಲಿ ಅಂದರೆ 6, 8 ಅಥವಾ 12ನೇ ಮನೆಯಲ್ಲಿ ಕುಳಿತಾಗ ಹರ್ಷ ಯೋಗ ಸೃಷ್ಟಿಯಾಗುತ್ತದೆ.
ಹೇಗೆ ಸೃಷ್ಟಿಯಾಗುತ್ತದೆ?
- 6ನೇ ಮನೆಯ ಸ್ವಾಮಿಯು 6, 8 ಅಥವಾ 12ನೇ ಮನೆಯಲ್ಲಿ ಸ್ಥಿತನಾಗಿರಬೇಕು.
- ಉದಾಹರಣೆಗೆ: ಮೇಷ ಲಗ್ನದ 6ನೇ ಮನೆ ಕನ್ಯಾ ರಾಶಿಯಾಗುತ್ತದೆ. ಇದರ ಅಧಿಪತಿ ಬುಧ. ಈ ಬುಧನು ಜಾತಕದಲ್ಲಿ 6, 8 ಅಥವಾ 12ನೇ ಮನೆಯಲ್ಲಿ ಬಲವಾಗಿ ಕುಳಿತರೆ ಹರ್ಷ ಯೋಗ ಉಂಟಾಗುತ್ತದೆ.
ಫಲಗಳು ಮತ್ತು ಉದಾಹರಣೆಗಳು
- ಫಲ: ಈ ಯೋಗದ ಪ್ರಭಾವದಿಂದ ವ್ಯಕ್ತಿಯು ದೈಹಿಕವಾಗಿ ಆರೋಗ್ಯವಂತನಾಗಿರುತ್ತಾನೆ. ಶತ್ರುಗಳನ್ನು ಧೈರ್ಯದಿಂದ ಎದುರಿಸಿ ಜಯ ಸಾಧಿಸುತ್ತಾನೆ. ಎಷ್ಟೇ ಸಾಲದ ಬಾಧೆಗಳಿದ್ದರೂ ಅವುಗಳಿಂದ ಸುಲಭವಾಗಿ ಹೊರಬರುವ ಮಾರ್ಗ ದೊರೆಯುತ್ತದೆ. ಜೀವನದಲ್ಲಿ ಅನಿರೀಕ್ಷಿತ ಸಂತೋಷ, ಸಮೃದ್ಧಿ ಮತ್ತು ಕೀರ್ತಿ ಲಭಿಸುತ್ತದೆ.
- ಉದಾಹರಣೆ: ಒಬ್ಬ ವ್ಯಕ್ತಿಗೆ ವ್ಯವಹಾರದಲ್ಲಿ ಅಥವಾ ಬ್ಯಾಂಕಿನಲ್ಲಿ ಭಾರಿ ಸಾಲದ ಹೊರೆ ಇರುತ್ತದೆ. ಆದರೆ ಹರ್ಷ ಯೋಗದ ಪ್ರಭಾವದಿಂದ ಅನಿರೀಕ್ಷಿತ ಧನಲಾಭ ಅಥವಾ ಬಡ್ತಿ ಸಿಕ್ಕು ಆ ಸಾಲವನ್ನು ಸಂಪೂರ್ಣವಾಗಿ ತೀರಿಸಲು ಸಾಧ್ಯವಾಗುತ್ತದೆ ಮತ್ತು ಶತ್ರುಗಳ ಕುತಂತ್ರಗಳು ವಿಫಲಗೊಳ್ಳುತ್ತವೆ.
ಪರಿವರ್ತನೆ ಯೋಗ: ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯ ರಹಸ್ಯ, ಅದರ ಪವಾಡ ಸದೃಶ ಪ್ರಭಾವ!
ಸರಳ ಯೋಗ (Sarala Yoga) ಅಂದರೇನು?
ಜಾತಕದಲ್ಲಿ 8ನೇ ಮನೆಯು ಆಯುಸ್ಸು, ಅನಿರೀಕ್ಷಿತ ತೊಂದರೆಗಳು, ಅಡಚಣೆಗಳು ಮತ್ತು ಗುಪ್ತ ವಿಷಯಗಳನ್ನು ಸೂಚಿಸುತ್ತದೆ. ಈ 8ನೇ ಮನೆಯ ಅಧಿಪತಿಯು ಜಾತಕದಲ್ಲಿ ಮತ್ತೊಂದು ದುಸ್ಥಾನವಾದ 6, 8 ಅಥವಾ 12ನೇ ಮನೆಯಲ್ಲಿ ನೆಲೆಸಿದಾಗ ಸರಳ ಯೋಗ ಉಂಟಾಗುತ್ತದೆ.
ಹೇಗೆ ಸೃಷ್ಟಿಯಾಗುತ್ತದೆ?
- 8ನೇ ಮನೆಯ ಸ್ವಾಮಿಯು 6, 8 ಅಥವಾ 12ನೇ ಮನೆಯಲ್ಲಿರಬೇಕು.
- ಉದಾಹರಣೆಗೆ: ವೃಷಭ ಲಗ್ನದ 8ನೇ ಮನೆ ಧನುರ್ ರಾಶಿಯಾಗುತ್ತದೆ. ಇದರ ಅಧಿಪತಿ ಗುರು. ಈ ಗುರುವು 6, 8 ಅಥವಾ 12ನೇ ಮನೆಯಲ್ಲಿ ನೆಲೆಸಿದರೆ ಸರಳ ಯೋಗ ಸೃಷ್ಟಿಯಾಗುತ್ತದೆ.
ಫಲಗಳು ಮತ್ತು ಉದಾಹರಣೆಗಳು
- ಫಲ: ಈ ಯೋಗವು ವ್ಯಕ್ತಿಗೆ ಧೈರ್ಯ, ನಿರ್ಭೀತ ಮನೋಭಾವ ಮತ್ತು ಸ್ಥೈರ್ಯವನ್ನು ನೀಡುತ್ತದೆ. ಎಷ್ಟೇ ಕಷ್ಟದ ಪರಿಸ್ಥಿತಿಗಳು ಬಂದರೂ ಅವುಗಳನ್ನು ಸರಳವಾಗಿ ಮತ್ತು ಧೈರ್ಯದಿಂದ ಎದುರಿಸಿ ಗೆಲ್ಲುವ ಶಕ್ತಿ ಇರುತ್ತದೆ. ಸಮಾಜದಲ್ಲಿ ಗೌರವ, ದೀರ್ಘ ಆಯುಷ್ಯ ಮತ್ತು ಉನ್ನತ ವಿದ್ಯಾಭ್ಯಾಸದ ಪ್ರಾಪ್ತಿಯಾಗುತ್ತದೆ.
- ಉದಾಹರಣೆ: ಜೀವನದಲ್ಲಿ ಒಮ್ಮೆಲೆ ದೊಡ್ಡ ಆಘಾತಗಳು ಅಥವಾ ವಿಪತ್ತುಗಳು ಎದುರಾದರೂ ಆ ವ್ಯಕ್ತಿ ಯಾವುದಕ್ಕೂ ಹೆದರದೆ ತನ್ನ ತಾಳ್ಮೆ ಮತ್ತು ಬುದ್ಧಿವಂತಿಕೆಯಿಂದ ಆ ಬಿಕ್ಕಟ್ಟನ್ನು ಮೆಟ್ಟಿ ನಿಂತು ಯಶಸ್ಸಿನ ಮೆಟ್ಟಿಲೇರುತ್ತಾನೆ.
3. ವಿಮಲ ಯೋಗ (Vimala Yoga) ಅಂದರೇನು?
ಜಾತಕದಲ್ಲಿ 12ನೇ ಮನೆಯು ಖರ್ಚು, ನಷ್ಟ, ವಿದೇಶ ಪ್ರಯಾಸ ಮತ್ತು ಮೋಕ್ಷವನ್ನು ಸೂಚಿಸುತ್ತದೆ. ಈ 12ನೇ ಮನೆಯ ಅಧಿಪತಿಯು ದುಸ್ಥಾನಗಳಾದ 6, 8 ಅಥವಾ 12ನೇ ಮನೆಯಲ್ಲಿ ನೆಲೆಸಿದಾಗ ವಿಮಲ ಯೋಗ ರೂಪುಗೊಳ್ಳುತ್ತದೆ.
ಹೇಗೆ ಸೃಷ್ಟಿಯಾಗುತ್ತದೆ?
- 12ನೇ ಮನೆಯ ಸ್ವಾಮಿಯು 6, 8 ಅಥವಾ 12ನೇ ಮನೆಯಲ್ಲಿರಬೇಕು.
- ಉದಾಹರಣೆಗೆ: ಮಿಥುನ ಲಗ್ನದ 12ನೇ ಮನೆ ವೃಷಭ ರಾಶಿಯಾಗುತ್ತದೆ. ಇದರ ಅಧಿಪತಿ ಶುಕ್ರ. ಈ ಶುಕ್ರನು 6, 8 ಅಥವಾ 12ನೇ ಮನೆಯಲ್ಲಿ ಸ್ಥಿತನಾದರೆ ವಿಮಲ ಯೋಗ ಉಂಟಾಗುತ್ತದೆ.
ಫಲಗಳು ಮತ್ತು ಉದಾಹರಣೆಗಳು
- ಫಲ: ವಿಮಲ ಯೋಗವುಳ್ಳ ವ್ಯಕ್ತಿಗಳು ಸದಾಚಾರದ ಗುಣಗಳನ್ನು ಹೊಂದಿರುತ್ತಾರೆ. ಇವರು ಹಣವನ್ನು ಅನಗತ್ಯವಾಗಿ ಖರ್ಚು ಮಾಡದೆ, ಸತ್ಕಾರ್ಯಗಳಿಗೆ ಮತ್ತು ಧರ್ಮ ಕಾರ್ಯಗಳಿಗೆ ಬಳಸುತ್ತಾರೆ. ಮನಸ್ಸಿನಲ್ಲಿ ಸಾತ್ವಿಕತೆ, ಶಾಂತಿ ಮತ್ತು ಉನ್ನತ ಚಿಂತನೆಗಳು ಇರುತ್ತವೆ. ಸಮಾಜದಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸುತ್ತಾರೆ.
- ಉದಾಹರಣೆ: ಒಬ್ಬ ವ್ಯಕ್ತಿಯು ತನ್ನ ಗಳಿಕೆಯ ಬಹುಪಾಲನ್ನು ಸಮಾಜಮುಖಿ ಕಾರ್ಯಗಳಿಗೆ, ದಾನ-ಧರ್ಮಗಳಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಬಳಸುತ್ತಾನೆ. ಈತನ ಈ ನಿಸ್ವಾರ್ಥ ಸ್ವಭಾವದಿಂದ ಸಮಾಜದಲ್ಲಿ ಅಪಾರ ಗೌರವ ಮತ್ತು ಮನ್ನಣೆ ಸಿಗುತ್ತದೆ.
ಅಖಂಡ ಶ್ರೀಮಂತ ಯೋಗ: ನಿಮ್ಮ ಜಾತಕದಲ್ಲಿ ಈ ಅದೃಷ್ಟದ ಯೋಗವಿದೆಯೇ? ಇಲ್ಲಿದೆ ಸಂಪೂರ್ಣ ವಿವರ!
ಕೊನೆ ಮಾತು
ಹರ್ಷ, ಸರಳ ಮತ್ತು ವಿಮಲ ಯೋಗಗಳು ಜಾತಕದ ದುಸ್ಥಾನಗಳ (6, 8, 12) ಅಧಿಪತಿಗಳಿಂದಲೇ ನಿರ್ಮಾಣವಾದರೂ ಇವು ವಿಪರೀತ ರಾಜಯೋಗದ ಅಡಿಯಲ್ಲಿ ಬರುವುದರಿಂದ ವ್ಯಕ್ತಿಯ ಜೀವನದಲ್ಲಿ ಕಷ್ಟಗಳ ನಂತರ ಮಹತ್ತರವಾದ ಯಶಸ್ಸನ್ನು ತಂದುಕೊಡುತ್ತವೆ. ಅಂದರೆ, “ಕಷ್ಟಗಳೇ ಮೆಟ್ಟಿಲುಗಳಾಗಿ” ವ್ಯಕ್ತಿಯು ಜೀವನದಲ್ಲಿ ಉನ್ನತ ಮಟ್ಟಕ್ಕೇರಲು ಈ ಯೋಗಗಳು ಪ್ರಭಾವಶಾಲಿಯಾಗಿ ಸಹಕರಿಸುತ್ತವೆ.
ಲೇಖನ- ಶ್ರೀನಿವಾಸ ಮಠ









