ಪಿತೃಪಕ್ಷದ ಕಾಲಾವಧಿ
ಈ ವರ್ಷ ಪಿತೃಪಕ್ಷವು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 10ರ ತನಕ ಇದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಿಂದ ಆರಂಭವಾಗಿ ಅದೇ ಮಾಸದ ಅಮಾವಾಸ್ಯೆ ತನಕ ಪಿತೃಪಕ್ಷ ಅಂತಲೂ ಸರ್ವಪಿತೃ ಮಹಾಲಯ ಅಂತಲೂ ಆಚರಿಸುವುದು ಶಾಸ್ತ್ರದ ಹಿನ್ನೆಲೆಯಾಗಿದೆ.
ಇದೇ ಅವಧಿಯಲ್ಲಿ ಯಾಕೆ ಪಕ್ಷ ಮಾಡಬೇಕು?
ಮನುಷ್ಯರ ಲೆಕ್ಕದಲ್ಲಿನ ಒಂದು ತಿಂಗಳು ಅಂದರೆ, ಅದು ಪಿತೃ ದೇವತೆಗಳಿಗೆ ಒಂದು ದಿನ. ಅವರ ಪಾಲಿಗೆ ಶುಕ್ಲ ಪಕ್ಷ ಎಂಬುದು ಹಗಲಾದರೆ, ಕೃಷ್ಣ ಪಕ್ಷವು ರಾತ್ರಿ. ಹೀಗೆ ಪಿತೃ ದೇವತೆಗಳಿಗೆ ನೀಡುವ ತಿಲ ತರ್ಪಣ ಮತ್ತು ಪಿಂಡ ಪ್ರದಾನವು ಅವರಿಗೆ ಇಡೀ ವರ್ಷಕ್ಕೆ ಸಾಕಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಪಕ್ಷವನ್ನು ಮಾಡಲಾಗುತ್ತದೆ.
ಈ ಪಿತೃಪಕ್ಷದಲ್ಲಿ ಯಾವುದೇ ಇತರ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಪಿತೃಗಳ ಸ್ಮರಣೆ, ಅವರಿಗೆ ಪಿಂಡ ಪ್ರದಾನ ಮಾಡುವುದಕ್ಕೆ ಅಂತಲೇ ಸಂಪೂರ್ಣವಾಗಿ ಮೀಸಲಾಗಿರುತ್ತದೆ. ಆದ್ದರಿಂದ ಮದುವೆ, ಉಪನಯನ, ಗೃಹಪ್ರವೇಶ ಇವೇ ಮೊದಲಾದ ಕಾರ್ಯಗಳನ್ನು ಮಾಡುವುದಿಲ್ಲ.
ಮಹಾಲಯ ಎಂದರೇನು?
“ಮಹಾ” ಅಂದರೆ ಭಾರೀ ಅಥವಾ ದೊಡ್ಡದು ಎಂಬ ಅರ್ಥ. “ಲಯ” ಅಂದರೆ ನಾಶ. ದೇವತೆಗಳು ಮತ್ತು ರಾಕ್ಷಸರ ನಡುವೆ ನಡೆದ ಯುದ್ಧದಲ್ಲಿ, ಅದೂ ಭಾದ್ರಪದ ಬಹುಳ (ಕೃಷ್ಣಪಕ್ಷ)ದಲ್ಲಿ ಹಲವು ದೇವತೆಗಳು ಹಾಗೂ ಋಷಿಗಳು ರಾಕ್ಷಸರಿಂದ ಸಾವನ್ನಪ್ಪುತ್ತಾರೆ. ಈ ದೇವತೆಗಳು ಹಾಗೂ ಋಷಿಗಳು ನಮ್ಮ ಹಿರಿಯರಿದ್ದಂತೆ, ಹಾಗೂ ಇದು ಮಹಾಲಯದ ಅವಧಿಯಲ್ಲಿ ನಡೆದದ್ದರಿಂದ ಇದನ್ನು ಮಹಾಲಯ ಎನ್ನಲಾಗುತ್ತದೆ.
ವಿದೇಶಿ ನೆಲದಲ್ಲಿ ಶ್ರಾದ್ಧ ಕರ್ಮ: ಮನುಸ್ಮೃತಿ, ಪರಾಶರ ಸ್ಮೃತಿಯ ಉಲ್ಲೇಖಗಳೇನು?
ದ್ವಾದಶ ಪಿತೃಗಳು – ನಾಲ್ಕು ವರ್ಗಗಳು
ಈ ಪಿತೃಪಕ್ಷದಲ್ಲಿ ದ್ವಾದಶ ಪಿತೃಗಳಿಗೂ ಪಿಂಡವನ್ನು ಪ್ರದಾನ ಮಾಡಬೇಕು. ಇವುಗಳನ್ನು ನಾಲ್ಕು ವರ್ಗಗಳಲ್ಲಿ ವಿಂಗಡಿಸಲಾಗಿದೆ:
- ಪಿತೃವರ್ಗ: ಪಿತೃ, ಪಿತಾಮಹ, ಪ್ರಪಿತಾಮಹ (ತಂದೆ, ಅಜ್ಜ, ಮುತ್ತಜ್ಜ)
- ಮಾತೃವರ್ಗ: ಮಾತೃ, ಪಿತಾಮಹಿ, ಪ್ರಪಿತಾಮಹಿ (ತಾಯಿ, ತಂದೆಯ ತಾಯಿ ಹಾಗೂ ಅಜ್ಜನ ತಾಯಿ)
- ಮಾತಾಮಹ ವರ್ಗ: ಮಾತಾಮಹ, ಮಾತು: ಪಿತಾಮಹ, ಮಾತು: ಪ್ರಪಿತಾಮಹ (ತಾಯಿಯ ತಂದೆ, ತಾಯಿಯ ತಾತ ಹಾಗೂ ತಾಯಿಯ ಮುತ್ತಾತ)
- ಮಾತಾಮಹಿ ವರ್ಗ: ಮಾತಾಮಹಿ, ಮಾತು: ಪಿತಾಮಹಿ, ಮಾತು: ಪ್ರಪಿತಾಮಹಿ (ತಾಯಿಯ ತಾಯಿ; ತಾಯಿಯ ಅಜ್ಜಿ, ತಾಯಿಯ ಮುತ್ತಜ್ಜಿ)
ಪಿಂಡ ಪ್ರದಾನ ಮಾಡಬಹುದಾದ ಸಂಬಂಧಿಕರು
ಒಂದು ವೇಳೆ ಮೃತಪಟ್ಟಿದ್ದಲ್ಲಿ, ಈ ಕೆಳಗಿನವರಿಗೆಲ್ಲ ಪಕ್ಷದಲ್ಲಿ ಪಿಂಡ ಪ್ರದಾನ ಮಾಡಲಾಗುತ್ತದೆ: ಹೆಂಡತಿ, ಮಗ, ಅಣ್ಣ-ತಮ್ಮಂದಿರು, ಅಣ್ಣ-ತಮ್ಮಂದಿರ ಪತ್ನಿಯರು, ತಂದೆಯ ಅಣ್ಣತಮ್ಮಂದಿರು, ತಂದೆಯ ಅಣ್ಣ-ತಮ್ಮಂದಿರ ಪತ್ನಿಯರು, ಸೋದರ ಮಾವಂದಿರು, ಸೋದರ ಮಾವಂದಿರ ಪತ್ನಿಯರು, ಸ್ವಂತ ಮಗಳು, ಅಳಿಯ, ಸ್ವಂತ ಅಕ್ಕ-ತಂಗಿಯರು, ಅಕ್ಕತಂಗಿಯರ ಪತಿ, ಅಕ್ಕತಂಗಿಯರ ಮಕ್ಕಳು, ತಂದೆಯ ಅಕ್ಕತಂಗಿಯರು ಮತ್ತು ಅವರ ಪತಿ, ತಾಯಿಯ ಅಕ್ಕತಂಗಿಯರು ಮತ್ತು ಅವರ ಪತಿ, ಮಾವ, ಅತ್ತೆ, ಹೆಂಡತಿಯ ಅಣ್ಣ-ತಮ್ಮಂದಿರು ಮತ್ತು ಅವರ ಹೆಂಡತಿ, ವಿದ್ಯೆ ಕಲಿಸಿದ ಗುರು ಮತ್ತು ಅವರ ಹೆಂಡತಿ, ಆಚಾರ್ಯರು (ಕುಟುಂಬ ಪುರೋಹಿತರು) ಮತ್ತು ಅವರ ಹೆಂಡತಿ, ಶಿಷ್ಯ, ಸ್ನೇಹಿತರು.
ಈ ಸಂಬಂಧಿಕರ ಪೈಕಿ ಯಾರ ಹೆಸರು ಗೊತ್ತಿಲ್ಲವೋ, ಮಹಿಳೆಯರಿಗೆ “ಯಜ್ಞಮ್ಮ” ಹಾಗೂ ಪುರುಷರಿಗೆ “ಯಜ್ಞಪ್ಪ” ಎಂಬ ಹೆಸರು ಬಳಸಲಾಗುತ್ತದೆ. ಗೋತ್ರ ಗೊತ್ತಿಲ್ಲದಿದ್ದರೆ “ಕಾಶ್ಯಪ ಗೋತ್ರ” ಎಂದು ಹೇಳಲಾಗುತ್ತದೆ.
ಪಿತೃಪಕ್ಷದಲ್ಲಿ ಮನೆಯಲ್ಲಿ ಸಾಕಿದ್ದ ನಾಯಿಗೂ ಸ್ಮರಣೆ ಮಾಡಿ, ಪಿಂಡ ಪ್ರದಾನ ಮಾಡಲಾಗುತ್ತದೆ.
ಪಿತೃಪಕ್ಷದಲ್ಲಿ ಮಾಡಲಾಗದಿದ್ದರೆ ಏನು ಮಾಡಬೇಕು?
ಆಷಾಢ ಹುಣ್ಣಿಮೆ ನಂತರದ ಐದನೇ ಪಕ್ಷ, ಹೀಗಂದರೆ, ಆಷಾಢದ ಕೃಷ್ಣ (ಮೊದಲು), ಶ್ರಾವಣದ ಶುಕ್ಲ (ಎರಡು), ಶ್ರಾವಣದ ಕೃಷ್ಣ (ಮೂರು), ಭಾದ್ರಪದ ಶುಕ್ಲ (ನಾಲ್ಕು) ಹಾಗೂ ಭಾದ್ರಪದ ಕೃಷ್ಣ (ಐದನೆಯದು) ಪಕ್ಷದಲ್ಲಿ ಪಿತೃಗಳು ಆಹಾರಕ್ಕಾಗು ಬರುತ್ತಾರೆ. ಆದ್ದರಿಂದ ಮಹಾಲಯವನ್ನು ಆಗ ಮಾಡಲೇಬೇಕೆ ಎಂಬುದಕ್ಕೆ ಉತ್ತರವಿದು. ಏನಾದರೂ ಅನಿವಾರ್ಯ ಕಾರಣಗಳಿಂದ ಮಾಡಲು ಆಗದಿದ್ದಲ್ಲಿ:
- ಪಿತೃಪಕ್ಷದಲ್ಲಿ ಆಗದಿದ್ದರೆ, ಆಶ್ವೀಜ ಮಾಸದಲ್ಲಿ ಪಂಚಮಿ ತನಕ (ತುಲಾ ಮಾಸದಲ್ಲಿ) ಪಕ್ಷವನ್ನು ಮಾಡಬಹುದು.
- ಆಗಲೂ ಆಗದಿದ್ದಲ್ಲಿ, ರವಿಯು ವೃಶ್ಚಿಕ ರಾಶಿಯನ್ನು ದಾಟುವ ಮುಂಚೆ ಮಾಡಬೇಕು.
- ದೀಪಾವಳಿ ಅಮಾವಾಸ್ಯೆ ದಿನದಂದೂ ಮಾಡುವುದಕ್ಕೆ ಅವಕಾಶ ಇದೆ.
- ಆಷಾಢ ಮಾಸದ ಹುಣ್ಣಿಮೆ ನಂತರದ ಐದು ಪಕ್ಷಗಳು ಪಿತೃ ಕಾರ್ಯಗಳಿಗೆ ಅಂತಲೇ ಮೀಸಲಿರುವಂಥವು. ಆಗ ಪಿತೃ ಕಾರ್ಯಗಳನ್ನು ಮಾಡುವುದು ಶ್ರೇಷ್ಠ.
ಪಕ್ಷವನ್ನು ಯಾವ ದಿನ ಮಾಡಬೇಕು?
ಸಾಧ್ಯವಿದ್ದಲ್ಲಿ ಪಿತೃಪಕ್ಷದಲ್ಲಿ ಎಲ್ಲ ದಿನವೂ (ಏಕಾದಶಿ-ದ್ವಾದಶಿ ಹೊರತುಪಡಿಸಿ) ತರ್ಪಣವನ್ನು ನೀಡಬೇಕು. ಎಲ್ಲ ದಿನ ಮಾಡಲು ಆಗದಿದ್ದಲ್ಲಿ, ತಂದೆಯು ಮೃತಪಟ್ಟಿದ್ದ ತಿಥಿಯಂದು ಮಾಡಬೇಕು (ಉದಾ: ಚತುರ್ಥಿ ಸಾವನ್ನಪ್ಪಿದ್ದರೆ ಚತುರ್ಥಿಯಂದು). ಆ ದಿನ ಮಾಡಲಾಗದಿದ್ದರೆ, ಈ ಕೆಳಗಿನ ದಿನಗಳನ್ನು ಹೊರತುಪಡಿಸಿ ಪಿತೃಪಕ್ಷದ ಉಳಿದ ಯಾವ ದಿನವಾದರೂ ಮಾಡಬಹುದು:
- ನವಮಿ (ಅವಿಧವಾ ನವಮಿ – ಮುತ್ತೈದೆಯರ ಪಕ್ಷ ಮಾಡುವ ದಿನ)
- ಏಕಾದಶಿ (ಉಪವಾಸ)
- ದ್ವಾದಶಿ (ಯತಿಗಳಿಗಾಗಿ ಮೀಸಲಿಟ್ಟ ದಿನ)
- ಚತುರ್ದಶಿ (ಅಪಘಾತದಲ್ಲಿ, ಶಸ್ತ್ರಗಳಿಂದ ಮೃತಪಟ್ಟವರಿಗೆ ಕಾರ್ಯ ಮಾಡುವ ದಿನ – ಘಾತ ಚತುರ್ದಶಿ)
ಮೊದಲ ವರ್ಷದ ನಿಯಮ
ಒಬ್ಬ ವ್ಯಕ್ತಿ ಸಾವನ್ನಪ್ಪಿ, ಒಂದು ಸಂವತ್ಸರ ಪೂರ್ತಿಯಾಗಿ ವರ್ಷಾಬ್ದಿಕ ಮೊದಲಾದವು ಆಗಿ, ಸಾಂವತ್ಸರಿಕ ಶ್ರಾದ್ಧ ಆದ ನಂತರದಲ್ಲಿಯೇ ಪಕ್ಷವನ್ನು ಮಾಡಬೇಕು. ವರ್ಷದೊಳಗೆ ಪಕ್ಷವನ್ನು ಮಾಡುವುದಕ್ಕೆ ಬರುವುದಿಲ್ಲ.
ಅಶಕ್ತತೆ ಅಥವಾ ಆರ್ಥಿಕ ಅನಾನುಕೂಲತೆ ಇದ್ದಾಗ
ದೈಹಿಕವಾಗಿ ಸಂಪೂರ್ಣ ಅಶಕ್ತರಾಗಿದ್ದರೂ, ಇನ್ನೊಬ್ಬರನ್ನು ನೇಮಿಸಿ ಅವರ ಮೂಲಕವಾದರೂ ಮಹಾಲಯವನ್ನು ಮಾಡಬೇಕು ಎಂಬುದು ಶಾಸ್ತ್ರವಚನ. ಆರ್ಥಿಕವಾಗಿಯೂ ಅನುಕೂಲವಿಲ್ಲದಿದ್ದರೆ, ದಕ್ಷಿಣ ದಿಕ್ಕಿನತ್ತ ತಿರುಗಿ ಎರಡೂ ಕೈಗಳನ್ನು ಮೇಲಕ್ಕೆತ್ತಿ, ಆರ್ಥಿಕ ಅನುಕೂಲಗಳಿಲ್ಲದ್ದರಿಂದ ಮಹಾಲಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಿತೃ ದೇವತೆಗಳ ಕ್ಷಮೆಯನ್ನು ಕೋರಬೇಕು ಎಂಬ ಶಾಸ್ತ್ರವಚನ ಇದೆ.
ದ್ವಾದಶಿ ತಿಥಿಯಂದು ಗೋದಾನ ಮಾಡುವುದು ಅಕ್ಷಯ ಪುಣ್ಯವೇಕೆ? ಗೋಗ್ರಾಸ ಮಂತ್ರ, ದಾನದ ಕ್ರಮಗಳು
ಮಹಾಲಯದ ಮಹತ್ವ
ಗತಿಸಿದ ಹಿರಿಯರು ತಮ್ಮ ವಂಶದಲ್ಲಿ ಅನ್ನಾಹಾರವನ್ನು ನೀಡುತ್ತಾರೆ ಎಂಬ ನಿರೀಕ್ಷೆಯಿಂದ ಪಿತೃ ಲೋಕದಿಂದ ಬರುತ್ತಾರೆ. ಆಗ ಅವರನ್ನು ಬರೀ ಕೈಯಲ್ಲಿ ಕಳಿಸಿದರೆ ಅದು ವಂಶಕ್ಕೇ ಶ್ರೇಯಸ್ಸಲ್ಲ ಎಂಬುದು ಶಾಸ್ತ್ರಗಳಲ್ಲಿ ಉಲ್ಲೇಖ ಆಗಿರುವ ಅಂಶ. ಅನಿವಾರ್ಯವಾದ ಅಸೌಕರ್ಯಗಳಿದ್ದಲ್ಲಿ ಈ ಕಾರ್ಯ ಮಾಡಲಾಗದಿರುವುದು ಬೇರೆ. ಆದರೆ ಮಹಾಲಯವನ್ನು ಮಾಡುವುದಕ್ಕೆ ಸಾಧ್ಯವಿದ್ದರೂ ನಿರ್ಲಕ್ಷ್ಯ ಮಾಡಿದಲ್ಲಿ ಶ್ರೇಯಸ್ಸಲ್ಲ ಎಂಬ ಅಂಶವನ್ನು ಹಲವು ಋಷಿಗಳು, ಶಾಸ್ತ್ರಕಾರರು ಅಭಿಪ್ರಾಯ ಪಡುತ್ತಾರೆ.
“ಪ್ರತಿ ಸಾಂವತ್ಸರಿಕ ಶ್ರಾದ್ಧ ಮಾತ್ರ ಮಾಡುತ್ತೇವೆ, ಪಿತೃಪಕ್ಷದಲ್ಲಿ ಏನೂ ಮಾಡುವುದಿಲ್ಲ. ನಮ್ಮಲ್ಲಿ ಆ ಪದ್ಧತಿಯಿಲ್ಲ, ಅಣ್ಣ-ತಮ್ಮ-ಚಿಕ್ಕಪ್ಪ-ದೊಡ್ಡಪ್ಪ ಯಾರೋ ಒಬ್ಬರು ಮಾಡುತ್ತಾರೆ, ಆದ್ದರಿಂದ ನಾವು ಮಾಡುವುದಿಲ್ಲ” ಎಂಬುದೆಲ್ಲ ಕಾರ್ಯದ ಬಗೆಗಿನ ಅಶ್ರದ್ಧೆ ಅನ್ನಿಸಿಕೊಳ್ಳುತ್ತದೆಯೇ ವಿನಾ ವಿನಾಯಿತಿ ಆಗುವುದಿಲ್ಲ.
ಹೇಗೆ ಮಾಡಬೇಕು, ಎಲ್ಲಿ ಮಾಡಬೇಕು ಎಂಬ ಬಗ್ಗೆ ಮಾಹಿತಿ ಇಲ್ಲದಿದ್ದಲ್ಲಿ, ಗುರುಗಳು-ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಮಹಾಲಯವನ್ನು ಮಾಡಬೇಕು. ಏಕೆಂದರೆ, ನಮಗೆ ಜನ್ಮ ನೀಡಿದ ಮಾತಾ-ಪಿತೃಗಳಿಗೆ ಹಾಗೂ ನಾವು ಜನಿಸಿದ ವಂಶಕ್ಕೆ ಮಾಡುವ ಋಣ ಸಂದಾಯದ ಅವಕಾಶ ಇದು.
ಲೇಖನ – ಶ್ರೀನಿವಾಸ ಮಠ









