ಇದೇ ಜುಲೈ 26ನೇ ತಾರೀಕಿನಿಂದ ಮೀನ ರಾಶಿಯಲ್ಲಿ ಶನಿ ಗ್ರಹದ ವಕ್ರೀ ಸಂಚಾರ ಆರಂಭವಾಗಿದೆ. ಇದೇ ವರ್ಷದ ಡಿಸೆಂಬರ್ 9ನೇ ತಾರೀಕಿನ ತನಕ ಈ ವಕ್ರೀ ಸಂಚಾರ ಇರುತ್ತದೆ. ಯಾವುದೇ ಗ್ರಹವು ವಕ್ರೀ ಸಂಚಾರ ಮಾಡುವಾಗ ಅದಕ್ಕೆ ಬಲ ಹೆಚ್ಚು. ಶನಿಯು ತನ್ನ ಸಹಜ ನಡೆಯನ್ನು ಬಿಟ್ಟು, ಹಿಂದಿನ ರಾಶಿ ಅಥವಾ ನಕ್ಷತ್ರದ ಕಡೆಗೆ ದೃಷ್ಟಿ ಹಾಯಿಸುತ್ತಾ ತೀವ್ರ ಶಕ್ತಿಯೊಂದಿಗೆ ಪ್ರಭಾವ ಬೀರುವುದು. ಜ್ಯೋತಿಷ್ಯ ರೀತಿಯಾಗಿ ಈ ವಿದ್ಯಮಾನಕ್ಕೆ ಹೆಚ್ಚು ಪ್ರಾಶಸ್ತ್ಯ ಇದೆ. ಈಗಾಗಲೇ ಸಾಡೇಸಾತ್ ಪ್ರಭಾವದಲ್ಲಿ ಇರುವ ಕುಂಭ, ಮೀನ, ಮೇಷ ರಾಶಿಯವರು, ಪಂಚಮದ ಸಂಚಾರ ಶನಿಯ ಪ್ರಭಾವದ ವೃಶ್ಚಿಕ ಹಾಗೂ ಅತಿ ಮುಖ್ಯವಾಗಿ ಅಷ್ಟಮ ಶನಿಯ ಪ್ರಭಾವದಲ್ಲಿ ಇರುವ ಸಿಂಹ ರಾಶಿಯವರು ಈ ಕಡೆಗೆ ಗಮನ ನೀಡಿ.
ವಕ್ರ ಗ್ರಹದ ಕುರಿತು ಶ್ಲೋಕ ಪ್ರಮಾಣ
ಶಾಸ್ತ್ರಗಳಲ್ಲಿ ವಕ್ರ ಗ್ರಹದ ಶಕ್ತಿ ಹಾಗೂ ಫಲಗಳ ಕುರಿತು ಪ್ರಮುಖ ಉಲ್ಲೇಖಗಳಿವೆ.
ವಕ್ರೀ ತು ವಕ್ರಭಾವಸ್ಥೋ ವಿಪರೀತಫಲಪ್ರದಃ ।
ಶುಭೋ ವಾ ಅಶುಭೋ ವಾಪಿ ತೀವ್ರಫಲಕರೋ ಗ್ರಹಃ ॥
ಕನ್ನಡ ಅರ್ಥ
ವಕ್ರಗತಿಯಲ್ಲಿ ಇರುವ ಗ್ರಹವು ತಾನು ಇರುವ ಭಾವದ ಫಲಗಳನ್ನು ಸಾಮಾನ್ಯ ರೀತಿಯಲ್ಲಿ ನೀಡದೆ, ಅನೇಕ ಸಂದರ್ಭಗಳಲ್ಲಿ ವಿಪರೀತವಾಗಿ ಅಥವಾ ಅಸಾಮಾನ್ಯ ರೀತಿಯಲ್ಲಿ ನೀಡುತ್ತದೆ. ಆ ಗ್ರಹವು ಸ್ವಭಾವತಃ ಶುಭಗ್ರಹವಾಗಿರಲಿ ಅಥವಾ ಪಾಪಗ್ರಹವಾಗಿರಲಿ, ತನ್ನ ಫಲವನ್ನು ಅತ್ಯಂತ ತೀವ್ರವಾಗಿ (ಬಲವಾಗಿ) ಅನುಭವಕ್ಕೆ ತರುತ್ತದೆ.
ಉತ್ತರಾಯಣಗೋ ಖೇಚರಃ ಶುಭಫಲಪ್ರದೋ ವಕ್ರಗಃ ತಥಾ ।
ಚೇಷ್ಟಾಬಲೇನ ಸಂಯುಕ್ತೋ ಮಂದೋ ಹಿ ತೀವ್ರಫಲಪ್ರದಃ ॥
ಕನ್ನಡ ಅರ್ಥ
ಉತ್ತರಾಯಣದಲ್ಲಿ ಸಂಚರಿಸುವ ಗ್ರಹಗಳು ಶುಭಫಲವನ್ನು ನೀಡುತ್ತವೆ. ಅದೇ ರೀತಿ ವಕ್ರಗತಿಯನ್ನು ಹೊಂದಿರುವ ಗ್ರಹವೂ ವಿಶೇಷ ಫಲದಾಯಕನಾಗಿರುತ್ತಾನೆ. ವಿಶೇಷವಾಗಿ ಚೇಷ್ಟಾಬಲವನ್ನು ಪಡೆದಿರುವ ಶನಿಯು ತನ್ನ ಫಲಗಳನ್ನು ಅತ್ಯಂತ ತೀವ್ರವಾಗಿ ಅನುಭವಕ್ಕೆ ತರುತ್ತಾನೆ.
ಏಳೂವರೆ ಶನಿ ಅಥವಾ ಅಷ್ಟಮ ಶನಿಯ ಕಾಟವೇ? ಶನಿದೇವನೇ ನೀಡಿದ ಈ ಸ್ತೋತ್ರ ಪಠಿಸಿ!
ಮೀನ ರಾಶಿಯಲ್ಲಿ ವಕ್ರಿ ಶನಿಯ ಪರಿಣಾಮ
ಮೀನ ರಾಶಿಯು ಜಲ ತತ್ವದ, ಗುರು ಗ್ರಹ ಆಧಿಪತ್ಯದ ರಾಶಿಯಾಗಿದೆ. ಇದು ಧರ್ಮ, ಜ್ಞಾನ, ಮೋಕ್ಷ, ಚಿಂತನೆ ಮತ್ತು ವಿಶಾಲ ಮನೋಭಾವವನ್ನು ಸೂಚಿಸುತ್ತದೆ. ಮೀನ ರಾಶಿಯಲ್ಲಿ ಶನಿ ವಕ್ರಿಯಾದಾಗ:
- ಆಧ್ಯಾತ್ಮಿಕ ಚಿಂತನೆ: ಜನರ ಮನಸ್ಸಿನಲ್ಲಿ ವೈರಾಗ್ಯ, ಧಾರ್ಮಿಕ ಮನೋಭಾವ ಹೆಚ್ಚುತ್ತದೆ.
- ಆರ್ಥಿಕ ಏರುಪೇರು: ಜಾಗತಿಕ ಮಾರುಕಟ್ಟೆ ಹಾಗೂ ಹೂಡಿಕೆಗಳಲ್ಲಿ ಅನಿರೀಕ್ಷಿತ ಏರುಪೇರು ಕಂಡುಬರುತ್ತದೆ.
- ಭಾವನಾತ್ಮಕ ಒತ್ತಡ: ಮೀನ ಜಲರಾಶಿಯಾದ್ದರಿಂದ ಜನರು ನಿರ್ಧಾರ ತಳೆಯಲು ತಡಕಾಡುವುದು, ಮಾನಸಿಕ ಖಿನ್ನತೆಗೆ ಒಳಗಾಗುವುದು ಹೆಚ್ಚು.
12 ರಾಶಿಗಳ ಮೇಲೆ ವಕ್ರೀ ಶನಿ ಸಂಚಾರದ ಫಲಗಳು
1. ಮೇಷ (Aries)
ಹನ್ನೆರಡನೇ ಮನೆಯಲ್ಲಿ ಶನಿ ವಕ್ರಿ ಆಗುವುದರಿಂದ ಖರ್ಚು- ವೆಚ್ಚಗಳು ಏರಿಕೆಯಾಗಲಿವೆ. ಅನಗತ್ಯ ಪ್ರಯಾಣ ಮತ್ತು ನಿದ್ರಾಹೀನತೆ ಕಾಡಬಹುದು. ಆದರೆ ವಿದೇಶಿ ಸಂಬಂಧಿ ಕೆಲಸಗಳಲ್ಲಿ ಅಥವಾ ದೂರದ ಊರಿನ ಉದ್ಯೋಗದಲ್ಲಿ ಪ್ರಗತಿ ಸಿಗಲಿದೆ. ಆರೋಗ್ಯದ ಕಡೆಗೆ ಕಾಳಜಿ ಅಗತ್ಯ.
2. ವೃಷಭ (Taurus)
ಹನ್ನೊಂದನೇ ಮನೆಯಲ್ಲಿ ವಕ್ರಿ ಶನಿ ನಿಮಗೆ ಉತ್ತಮ ಲಾಭಗಳನ್ನು ತಂದುಕೊಡಲಿದ್ದಾನೆ. ಹಳೆಯ ಬಾಕಿ ವಸೂಲಿಯಾಗಲಿದೆ. ಸ್ನೇಹಿತರಿಂದ ಬೆಂಬಲ ಸಿಗಲಿದೆ. ಆದರೆ ಶ್ರಮಕ್ಕೆ ತಕ್ಕಂತೆ ಫಲ ಸಿಗಲು ಸ್ವಲ್ಪ ವಿಳಂಬವಾಗಬಹುದು. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಅಲಕ್ಷಿಸಬೇಡಿ.
3. ಮಿಥುನ (Gemini)
ಹತ್ತನೇ ಮನೆಯಲ್ಲಿ (ಕರ್ಮ ಸ್ಥಾನ) ಶನಿ ವಕ್ರಿಯಾಗುವುದರಿಂದ ವೃತ್ತಿಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿಗಳು ಬರಲಿವೆ. ಮೇಲಧಿಕಾರಿಗಳ ಜೊತೆ ವ್ಯವಹರಿಸುವಾಗ ತಾಳ್ಮೆಯಿಂದಿರಿ. ಉದ್ಯೋಗ ಬದಲಾವಣೆಗೆ ಇದು ಸೂಕ್ತ ಸಮಯವಲ್ಲ. ಶ್ರಮಕ್ಕೆ ತಕ್ಕಂತೆ ಗೌರವ ಕೊನೆಗೆ ಸಿಗುತ್ತದೆ.
ಸಾಡೇಸಾತ್ ಅಥವಾ ಏಳರಾಟ ಶನಿ ಎಂದರೇನು? ಈ ಅವಧಿಯಲ್ಲಿ ತಪ್ಪಿಯೂ ಮಾಡಬಾರದ 7 ಕೆಲಸಗಳಿವು!
4. ಕರ್ಕಾಟಕ (Cancer)
ಒಂಬತ್ತನೇ ಮನೆಯಲ್ಲಿ ಶನಿ ವಕ್ರಿಯಾಗುವುದರಿಂದ ಭಾಗ್ಯ ವೃದ್ಧಿಗೆ ಕೊಂಚ ಅಡೆತಡೆಗಳು ಎದುರಾಗಲಿದೆ. ತಂದೆಯವರ ಆರೋಗ್ಯದ ಬಗ್ಗೆ ನಿಗಾ ವಹಿಸಿ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ದೂರದ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ.
5. ಸಿಂಹ (Leo)
ಎಂಟನೇ ಮನೆಯಲ್ಲಿ ಶನಿ ವಕ್ರಿಯಾಗುತ್ತಿರುವುದರಿಂದ ‘ಅಷ್ಟಮ ಶನಿ’ಯ ಪ್ರಭಾವ ತೀವ್ರವಾಗಲಿದೆ. ಚಾಲನೆ ಮಾಡುವಾಗ ಮತ್ತು ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಿ. ಇದ್ದಕ್ಕಿದ್ದಂತೆ ಅನಾರೋಗ್ಯ ಅಥವಾ ನಷ್ಟದ ಭಯ ಕಾಡಬಹುದು. ನಾಲಗೆಯ ಮೇಲೆ ಹಿತವಿರಲಿ.
6. ಕನ್ಯಾ (Virgo)
ಏಳನೇ ಮನೆಯಲ್ಲಿ ವಕ್ರಿ ಶನಿ ಇರುವುದರಿಂದ ದಾಂಪತ್ಯ ಜೀವನದಲ್ಲಿ ಹಾಗೂ ಪಾಲುದಾರಿಕೆ ವ್ಯವಹಾರದಲ್ಲಿ ಸಂಯಮ ವಹಿಸಬೇಕು. ಸಣ್ಣಪುಟ್ಟ ವಿಚಾರಗಳೂ ದೊಡ್ಡ ಜಗಳಕ್ಕೆ ಕಾರಣವಾಗಲಿದೆ. ಸಂಗಾತಿಯ ಆರೋಗ್ಯದ ಕಡೆ ಗಮನವಿರಲಿ.
ಮುಂದಿನ 30 ವರ್ಷಗಳ ಶನಿ ಸಂಚಾರ: ಯಾರಿಗೆ ಸಾಡೇಸಾತಿ? ಯಾರಿಗೆ ಮುಕ್ತಿ? ಸಂಪೂರ್ಣ ಪಟ್ಟಿ ಇಲ್ಲಿದೆ
7. ತುಲಾ (Libra)
ಆರನೇ ಮನೆಯಲ್ಲಿ ಶನಿ ವಕ್ರಿಯಾಗುವುದು ನಿಮಗೊಂದು ಶುಭ ಸಂಕೇತ. ಶತ್ರುಗಳ ಮೇಲೆ ಜಯ ಸಿಗಲಿದೆ. ಹಳೆಯ ಸಾಲ ಅಥವಾ ರೋಗಗಳಿಂದ ಮುಕ್ತಿ ಪಡೆಯುವ ಹಾದಿ ಸುಗಮವಾಗಲಿದೆ. ಕೋರ್ಟ್ ಕಚೇರಿ ವ್ಯಾಜ್ಯಗಳಲ್ಲಿ ನಿಮ್ಮ ಪರ ತೀರ್ಪು ಬರುವ ಸಾಧ್ಯತೆ ಇದೆ.
8. ವೃಶ್ಚಿಕ (Scorpio)
ಐದನೇ ಮನೆಯಲ್ಲಿ ಶನಿ ವಕ್ರಿಯಾಗುವುದರಿಂದ ಸಂತಾನದ ವಿಷಯದಲ್ಲಿ ಅಥವಾ ಮಕ್ಕಳ ಶಿಕ್ಷಣದಲ್ಲಿ ಅಡೆತಡೆಗಳು ಬರಬಹುದು. ಪ್ರೇಮಿಗಳಿಗೆ ಮನಸ್ತಾಪ ಎದುರಾಗಲಿದೆ. ಷೇರು ಮಾರುಕಟ್ಟೆ ಹಾಗೂ ಜೂಜಾಟದಂತಹದ್ದರಿಂದ ದೂರವಿರಿ.
9. ಧನುಸ್ಸು (Sagittarius)
ನಾಲ್ಕನೇ ಮನೆಯಲ್ಲಿ ವಕ್ರಿ ಶನಿಯಿಂದ ‘ಅರ್ಧಾಷ್ಟಮ ಶನಿ’ ಪ್ರಭಾವ ಹೆಚ್ಚುತ್ತದೆ. ತಾಯಿಯವರ ಆರೋಗ್ಯ, ಆಸ್ತಿ ಮತ್ತು ವಾಹನಕ್ಕೆ ಸಂಬಂಧಿಸಿದಂತೆ ಚಿಂತೆಗಳು ಎದುರಾಗಲಿದೆ. ಮನೆಯಲ್ಲಿ ನೆಮ್ಮದಿ ಕಾಯ್ದುಕೊಳ್ಳಲು ಮಾತು ನಿಯಂತ್ರಣದಲ್ಲಿರಲಿ.
ದಶರಥ ಕೃತ ಶನಿ ಸ್ತೋತ್ರ: ಸಾಡೇಸಾತಿ ಕಷ್ಟಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ರಾಮಬಾಣ!
10. ಮಕರ (Capricorn)
ಮೂರನೇ ಮನೆಯಲ್ಲಿ ವಕ್ರಿ ಶನಿಯ ಸಂಚಾರ ನಿಮ್ಮ ಸಾಹಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ. ಸಹೋದರರೊಂದಿಗೆ ಭಿನ್ನಾಭಿಪ್ರಾಯ ಮೂಡದಂತೆ ನೋಡಿಕೊಳ್ಳಿ. ಸಣ್ಣ ಪ್ರಯಾಣಗಳಿಂದ ಅನುಕೂಲವಾಗಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.
11. ಕುಂಭ (Aquarius)
ಎರಡನೇ ಮನೆಯಲ್ಲಿ ಶನಿ ವಕ್ರಿಯಾಗುವುದರಿಂದ ಧನಸ್ಥಾನ ಮತ್ತು ಕುಟುಂಬದ ಮೇಲೆ ಪ್ರಭಾವ ಇರುತ್ತದೆ. ಹಣಕಾಸಿನ ಸಂಗ್ರಹದಲ್ಲಿ ತೊಂದರೆ ಅಥವಾ ಅನಿರೀಕ್ಷಿತ ವೆಚ್ಚಗಳು ಬರಲಿದೆ. ಮಾತು ಹಿತವಾಗಿರಲಿ, ಇಲ್ಲವಾದರೆ ಕುಟುಂಬದಲ್ಲಿ ಅಶಾಂತಿ ಉಂಟಾಗುತ್ತದೆ.
12. ಮೀನ (Pisces)
ನಿಮ್ಮದೇ ರಾಶಿಯಲ್ಲಿ ಶನಿ ವಕ್ರಿಯಾಗುತ್ತಿರುವುದರಿಂದ ಮಾನಸಿಕವಾಗಿ ತೀವ್ರ ಒತ್ತಡ, ಆಲಸ್ಯ ಹಾಗೂ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಲಿದೆ. ‘ಸಾಡೇ ಸಾತಿ’ಯ ದ್ವಿತೀಯ ಹಂತ ನಡೆಯುತ್ತಿರುವುದರಿಂದ ದೈಹಿಕ ಶ್ರಮ ಹೆಚ್ಚಿರುತ್ತದೆ.
ತಿರುನೆಲ್ಲಾರ್ ದರ್ಬಾರಣ್ಯೇಶ್ವರ ದೇಗುಲ: ಶನಿ ದೋಷ ಮುಕ್ತಿಗೆ ದಕ್ಷಿಣ ಭಾರತದ ಮಹಾ ಕ್ಷೇತ್ರ
ಪರಿಹಾರಗಳು
ವಕ್ರಿ ಶನಿಯ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಶುಭ ಫಲಗಳನ್ನು ಪಡೆಯಲು:
- ಪ್ರತಿನಿತ್ಯ ಅಥವಾ ಶನಿವಾರದಂದು ಹನುಮಾನ್ ಚಾಲೀಸಾ ಪಠಿಸಿ.
- ಶನಿವಾರ ಕಪ್ಪು ಎಳ್ಳು, ಎಳ್ಳೆಣ್ಣೆ ಅಥವಾ ಕಪ್ಪು ವಸ್ತ್ರವನ್ನು ದಾನ ಮಾಡಿ.
- ‘ಓಂ ಶಂ ಶನೈಶ್ಚರಾಯ ನಮಃ’ ದಿನವೂ 108 ಬಾರಿ ಜಪಿಸಿ.
- ಹಿರಿಯರು, ಶ್ರಮಿಕರು ಮತ್ತು ಅಂಗವಿಕಲರಿಗೆ ಯಥಾಶಕ್ತಿ ಸಹಾಯ ಮಾಡಿ.
ಲೇಖನ- ಶ್ರೀನಿವಾಸ ಮಠ









