ನ ಗುರೋರಧಿಕಂ- ಗುರುವಿಗಿಂತ ಹೆಚ್ಚಿನವರು ಯಾರೂ ಇಲ್ಲ ಎಂಬುದನ್ನು ಸಾರುವ ಮಾತಿದು. ಇದೇ ಜುಲೈ 29ನೇ ತಾರೀಕು ಬುಧವಾರದಂದು ಗುರುಪೂರ್ಣಿಮೆ ಇದೆ. ಆಷಾಢ ಮಾಸದ ಪೂರ್ಣಿಮೆ ದಿನದಂದು ಆಚರಿಸುವ ಗುರು ವಂದನೆ ಸಮಯ ಇದು. ಸನಾತನ ಧರ್ಮದಲ್ಲಿ ಗುರುವಿಗೆ ಪರಮೋಚ್ಚ ಸ್ಥಾನವನ್ನು ನೀಡಲಾಗಿದೆ. “ಗುರುಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ” ಎಂಬ ಮಾತಿನಂತೆ, ಗುರುವನ್ನು ತ್ರಿಮೂರ್ತಿಗಳ ಸ್ವರೂಪವೆಂದು ಭಾವಿಸಲಾಗುತ್ತದೆ. ಅಜ್ಞಾನವೆಂಬ ಕತ್ತಲೆಯನ್ನು ದೂರಾಗಿಸಿ, ಜ್ಞಾನವೆಂಬ ಬೆಳಕನ್ನು ನೀಡುವ ಮಾರ್ಗದರ್ಶಕನೇ ಗುರು. ಅಂತಹ ಪವಿತ್ರ ಗುರು ಪರಂಪರೆಗೆ ಗೌರವ ಸಲ್ಲಿಸುವ ಹಾಗೂ ಕೃತಜ್ಞತೆ ವ್ಯಕ್ತಪಡಿಸುವ ಪವಿತ್ರ ದಿನವೇ ಗುರುಪೂರ್ಣಿಮೆ.
ಗುರುಪೂರ್ಣಿಮೆಯ ಹಿನ್ನೆಲೆ ಮತ್ತು ಐತಿಹಾಸಿಕ ಮಹತ್ವ
ಆಷಾಢ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು (ಹುಣ್ಣಿಮೆ) ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನಕ್ಕೆ ಸನಾತನ ಧರ್ಮದಲ್ಲಿ ವಿಶೇಷವಾದ ಮೂರು ಮುಖ್ಯ ಐತಿಹಾಸಿಕ ಹಿನ್ನೆಲೆಗಳಿವೆ:
- ವೇದವ್ಯಾಸರ ಜಯಂತಿ (ವ್ಯಾಸ ಪೂರ್ಣಿಮೆ):
ಸನಾತನ ಧರ್ಮದ ಮಹಾನ್ ಮುನಿ ಕೃಷ್ಣದ್ವೈಪಾಯನ (ವೇದವ್ಯಾಸರು) ಜನಿಸಿದ ಪವಿತ್ರ ದಿನವಿದು. ವ್ಯಾಸರು ನಾಲ್ಕು ವೇದಗಳನ್ನು ವಿಭಾಗಿಸಿ, 18 ಪುರಾಣಗಳು, ಉಪನಿಷತ್ತುಗಳು ಹಾಗೂ ಮಹಾಭಾರತದಂತಹ ಮಹಾಗ್ರಂಥಗಳನ್ನು ಜಗತ್ತಿಗೆ ನೀಡಿದ ಆದಿಗುರು. ಆದ್ದರಿಂದ ಈ ದಿನವನ್ನು ‘ವ್ಯಾಸ ಪೂರ್ಣಿಮೆ’ ಎಂದೂ ಕರೆಯಲಾಗುತ್ತದೆ. - ಶಿವನ ದಕ್ಷಿಣಾಮೂರ್ತಿ ಸ್ವರೂಪ:
ಪುರಾಣಗಳ ಪ್ರಕಾರ, ಪರಮಶಿವನು ‘ಆದಿಗುರು’ವಾಗಿ (ದಕ್ಷಿಣಾಮೂರ್ತಿ) ರೂಪ ತಳೆದು ಸಪ್ತರ್ಷಿಗಳಿಗೆ ಆತ್ಮಜ್ಞಾನ ಹಾಗೂ ಯೋಗವಿದ್ಯೆಯನ್ನು ಬೋಧಿಸಲು ಪ್ರಾರಂಭಿಸಿದ್ದು ಇದೇ ಆಷಾಢ ಪೂರ್ಣಿಮೆಯಂದು. - ಚಾತುರ್ಮಾಸ್ಯ ವ್ರತದ ಆರಂಭ:
ಮುನಿಗಳು, ಸನ್ಯಾಸಿಗಳು ಹಾಗೂ ಗುರುಗಳು ಒಂದೆಡೆ ನೆಲೆಸಿ, ತಪಸ್ಸು ಮತ್ತು ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ‘ಚಾತುರ್ಮಾಸ್ಯ ವ್ರತ’ವು ಈ ದಿನದಿಂದಲೇ ಪ್ರಾರಂಭವಾಗುತ್ತದೆ.
ಜ್ಯೋತಿಷ್ಯ- ವಿಜ್ಞಾನದ ಸಮನ್ವಯಕಾರ: ಜ್ಯೋತಿರ್ವಿಜ್ಞಾನದ ಮಹಾಪುರುಷ ವರಾಹಮಿಹಿರ
ಗುರುಪೂರ್ಣಿಮೆಯ ಆಚರಣಾ ವಿಧಾನ
ಗುರುಪೂರ್ಣಿಮೆಯು ಕೇವಲ ಒಂದು ಹಬ್ಬವಲ್ಲ, ಅದು ಶಿಷ್ಯನೊಬ್ಬ ತನ್ನ ಅಹಂಕಾರವನ್ನು ತೊರೆದು ಗುರುವಿನ ಚರಣಗಳಿಗೆ ಶರಣಾಗುವ ದಿವ್ಯ ಸಂದರ್ಭ.
- ಗುರು ಪೂಜೆ: ಶಿಷ್ಯರು ತಮ್ಮ ಆಧ್ಯಾತ್ಮಿಕ ಹಾಗೂ ವಿದ್ಯಾಗುರುಗಳಿಗೆ ಪಾದಪೂಜೆ ಮಾಡಿ, ಅವರಿಗೆ ಹೂವು, ಹಣ್ಣು, ವಸ್ತ್ರ ಮತ್ತು ದಕ್ಷಿಣೆ ನೀಡಿ ಆಶೀರ್ವಾದ ಪಡೆಯುತ್ತಾರೆ.
- ವ್ಯಾಸ ಪೂಜೆ: ಮಠ-ಮಾನ್ಯಗಳಲ್ಲಿ ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ವೇದವ್ಯಾಸರ ಪಟ ಅಥವಾ ವಿಗ್ರಹಕ್ಕೆ ವಿಶೇಷ ಪೂಜೆ ಹಾಗೂ ಹೋಮಗಳನ್ನು ನೆರವೇರಿಸಲಾಗುತ್ತದೆ.
- ಸ್ವಾಧ್ಯಾಯ ಮತ್ತು ಜಪ: ಈ ದಿನ ಭಗವದ್ಗೀತೆ, ಉಪನಿಷತ್ತುಗಳ ಅಧ್ಯಯನ ಮಾಡುವುದು, ಗುರುಮಂತ್ರ ಜಪಿಸುವುದು ಮತ್ತು ಜ್ಞಾನ ಚಿಂತನೆಯಲ್ಲಿ ತೊಡಗುವುದು ಶ್ರೇಷ್ಠ.
ಸನಾತನ ಧರ್ಮದಲ್ಲಿ ಗುರುವಿನ ಮಹತ್ವ
ಸನಾತನ ಪರಂಪರೆಯಲ್ಲಿ ಗುರುವಿನ ಸ್ಥಾನವು ದೇವರಿಗಿಂತಲೂ ಮಿಗಿಲಾದುದು. ದೇವರೆಡೆಗೆ ಸಾಗುವ ಮಾರ್ಗವನ್ನು ತೋರಿಸುವವನೇ ಗುರು.
“ಗುರುರ್ಗೋವಿಂದೋ ಮೇ ಖಡೇ ಕಿಸ್ಕೆ ಲಾಗೂಂ ಪಾಯ್ |
ಬಲಿಹಾರೀ ಗುರು ಆಪ್ನೇ ಗೋವಿಂದ ದಿಯೋ ಬತಾಯ್ ॥“
ಕಬೀರದಾಸರ ದೋಹಾದಂತೆ, ಮುಖಾಮುಖಿ ದೇವರು ಮತ್ತು ಗುರು ನಿಂತಾಗ, ಮೊದಲ ಪ್ರಣಾಮ ಗುರುವಿಗೇ ಸಲ್ಲಬೇಕು; ಏಕೆಂದರೆ ದೇವರಿರುವ ಹಾದಿಯನ್ನು ತೋರಿಸಿಕೊಟ್ಟವನೇ ಗುರು.
ಅಜ್ಞಾನ (ಗು) ಎಂಬ ಅಂಧಕಾರವನ್ನು ನಿವಾರಿಸಿ, ಜ್ಞಾನ (ರು) ಎಂಬ ಪ್ರಕಾಶವನ್ನು ಚೆಲ್ಲುವ ದಿವ್ಯ ಶಕ್ತಿಯೇ ಗುರು. ಆಧ್ಯಾತ್ಮಿಕ ಸಾಧನೆಯಲ್ಲಿ ಗುರುವಿನ ಕೃಪೆಯಿಲ್ಲದೆ ಮುಕ್ತಿ ಅಥವಾ ಜ್ಞಾನೋದಯ ಸಾಧ್ಯವಿಲ್ಲ ಎಂಬುದು ಸನಾತನ ಧರ್ಮದ ನಂಬಿಕೆ.
ಗುರುಪೂರ್ಣಿಮೆಯ ಪ್ರಾಮುಖ್ಯ
ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮತ್ತು ಮಾಹಿತಿ ನಮಗೆ ಸುಲಭವಾಗಿ ಸಿಗಬಹುದು, ಆದರೆ ಸರಿಯಾದ ದಾರಿ, ಜೀವನ ಮೌಲ್ಯ ಹಾಗೂ ಆತ್ಮಶಾಂತಿ ಸಿಗಬೇಕಾದರೆ ನಮಗೊಬ್ಬ ಸದ್ಗುರುವಿನ ಮಾರ್ಗದರ್ಶನ ಅಗತ್ಯ. ಪೋಷಕರು, ಶಾಲಾ-ಕಾಲೇಜಿನ ಶಿಕ್ಷಕರು, ಸಮಾಜಕ್ಕೆ ಒಳ್ಳೆಯದನ್ನು ಬೋಧಿಸುವ ಮಾರ್ಗದರ್ಶಕರು – ಎಲ್ಲರೂ ಗುರುವಿನ ಸ್ವರೂಪವೇ.
ಗುರುಪೂರ್ಣಿಮೆಯು ನಮಗೆ ವಿದ್ಯೆ ಮತ್ತು ಜ್ಞಾನ ನೀಡಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವ ಸುಸಂದರ್ಭ. ನಮ್ಮೊಳಗಿನ ಅಹಂಕಾರವನ್ನು ಕಳೆದುಕೊಂಡು, ನಮ್ರತೆಯಿಂದ ಜ್ಞಾನವನ್ನು ಸ್ವೀಕರಿಸುವುದೇ ಈ ಪವಿತ್ರ ದಿನದ ನಿಜವಾದ ಸಂದೇಶ.
ಲೇಖನ- ಶ್ರೀನಿವಾಸ ಮಠ









