ಈ ಲೇಖನದಲ್ಲಿ ಚಾತುರ್ಮಾಸ್ಯ ವ್ರತದ ಬಗ್ಗೆ ತಿಳಿಸಲಾಗುವುದು. ಇದು ಯಾವುದೋ ಒಂದು ಜಾತಿ, ಉಪಪಂಗಡಕ್ಕೆ ಸೀಮಿತವಾದದ್ದು ಅಲ್ಲ. ಎಲ್ಲ ಜಾತಿಯವರೂ ಈ ಚಾತುರ್ಮಾಸ್ಯ ವ್ರತ ಮಾಡಬಹುದು. ಈ ಸಮಯದಲ್ಲಿ ಶ್ರೀಮನ್ನಾರಾಯಣನು (ವಿಷ್ಣು) ಯೋಗನಿದ್ರೆಗೆ ತೆರಳುತ್ತಾನೆ (ಶಯನ ಮಾಡುತ್ತಾನೆ). ಆದ್ದರಿಂದ ಈ ನಾಲ್ಕು ಮಾಸದಲ್ಲಿ ಮದುವೆ, ಉಪನಯನ, ಗೃಹಪ್ರವೇಶದಂತಹ ಶುಭ ಕಾರ್ಯಗಳನ್ನು ಮಾಡದೇ ಇರುವ ಸಂಪ್ರದಾಯವಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ (ಶಯನಿ ಏಕಾದಶಿ) ದಿನದಿಂದ ಚಾತುರ್ಮಾಸ್ಯ ವ್ರತ ಪ್ರಾರಂಭವಾಗುತ್ತದೆ.
ಚಾತುರ್ಮಾಸ್ಯದ ನಾಲ್ಕು ತಿಂಗಳುಗಳಲ್ಲಿ ಪಾಲಿಸಬೇಕಾದ ಮುಖ್ಯವಾದ ನಾಲ್ಕು ವ್ರತಗಳು ಮತ್ತು ಅವುಗಳ ಅವಧಿ:
- ಶಾಕವ್ರತ (ಆಷಾಢ ಶುದ್ಧ ಏಕಾದಶಿಯಿಂದ ಶ್ರಾವಣ ಶುದ್ಧ ದಶಮಿಯವರೆಗೆ)
(ದಿನಾಂಕ: 25-07-2026 ರಿಂದ 23-08-2026)
ಈ ಅವಧಿಯಲ್ಲಿ ತರಕಾರಿ, ಹಣ್ಣು-ಹಂಪಲು, ತೆಂಗಿನಕಾಯಿ, ಬಾಳೆಹಣ್ಣು, ಸುಗಂಧ ದ್ರವ್ಯಗಳನ್ನು ಅಡುಗೆಗೆ, ದೇವರಿಗೆ ನೈವೇದ್ಯ ಮಾಡಲು ಹಾಗೂ ಹಸ್ತೋದಕ ನೀಡಲು ಬಳಸುವಂತಿಲ್ಲ.
- ದಧಿವ್ರತ (ಶ್ರಾವಣ ಶುದ್ಧ ಏಕಾದಶಿಯಿಂದ ಭಾದ್ರಪದ ಶುದ್ಧ ದಶಮಿಯವರೆಗೆ)
(ದಿನಾಂಕ: 23-08-2026 ರಿಂದ 22-09-2026)
ಈ ಅವಧಿಯಲ್ಲಿ ಮೊಸರು ಮತ್ತು ಮೊಸರಿನಿಂದ ತಯಾರಿಸಿದ ಪದಾರ್ಥಗಳ ಸೇವನೆಯನ್ನು ಸಂಪೂರ್ಣವಾಗಿ ವರ್ಜಿಸಬೇಕು.
- ಕ್ಷೀರವ್ರತ (ಭಾದ್ರಪದ ಶುದ್ಧ ಏಕಾದಶಿಯಿಂದ ಆಶ್ವಯುಜ ಶುದ್ಧ ದಶಮಿಯವರೆಗೆ)
(ದಿನಾಂಕ: 22-09-2026 ರಿಂದ 22-10-2026)
ಈ ಅವಧಿಯಲ್ಲಿ ಹಾಲು ಮತ್ತು ಹಾಲಿನಿಂದ ಮಾಡಿದ ಉತ್ಪನ್ನಗಳನ್ನು (ಪಾಯಸ, ಕೋವಾ ಇತ್ಯಾದಿ) ಬಳಸುವಂತಿಲ್ಲ. (ಮಜ್ಜಿಗೆ ಮತ್ತು ತುಪ್ಪಕ್ಕೆ ವಿನಾಯಿತಿ ಇರುತ್ತದೆ).
- ದ್ವಿದಲವ್ರತ (ಆಶ್ವಯುಜ ಶುದ್ಧ ಏಕಾದಶಿಯಿಂದ ಕಾರ್ತೀಕ ಶುದ್ಧ ದಶಮಿಯವರೆಗೆ)
(ದಿನಾಂಕ: 22-10-2026 ರಿಂದ 20-11-2026)
ಈ ಅವಧಿಯಲ್ಲಿ ಎರಡು ಹೋಳಾಗುವ ಬೇಳೆಕಾಳುಗಳು, ದ್ವಿದಲ ಧಾನ್ಯಗಳು, ಬೀಜವಿರುವ ತರಕಾರಿಗಳು ಮತ್ತು ಹುಣಸೇಹಣ್ಣಿನ ಬಳಕೆಯನ್ನು ವರ್ಜಿಸಬೇಕು.
ಚಾತುರ್ಮಾಸ್ಯ ವ್ರತದ ಮಹತ್ವ ಮತ್ತು ಆಧ್ಯಾತ್ಮಿಕ ಹಿನ್ನೆಲೆ
ಚಾತುರ್ಮಾಸ್ಯವು ಕೇವಲ ಆಹಾರ ನಿಯಮಗಳಿಗೆ ಸೀಮಿತವಾದದ್ದಲ್ಲ. ಇದು ಮನಸ್ಸು ಮತ್ತು ದೇಹದ ಶುದ್ಧೀಕರಣದ ಸಮಯ. ಈ ನಾಲ್ಕು ತಿಂಗಳುಗಳಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಕಡಿಮೆ ಮಾಡಿ, ಆಂತರಿಕ ಸಾಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.
- ಆರೋಗ್ಯ ದೃಷ್ಟಿಕೋನ: ಋತುಮಾನ ಬದಲಾವಣೆಯ ಸಮಯದಲ್ಲಿ ದೇಹದ ಜೀರ್ಣಶಕ್ತಿ ಕಡಿಮೆಯಿರುತ್ತದೆ. ಹಾಗಾಗಿ, ಜೀರ್ಣಿಸಲು ಕಷ್ಟವಾಗುವ ಅಥವಾ ಸೋಂಕು ಉಂಟು ಮಾಡಬಹುದಾದ ಆಹಾರಗಳನ್ನು ತ್ಯಜಿಸುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ವೈಜ್ಞಾನಿಕವಾಗಿದೆ.
- ಧಾರ್ಮಿಕ ಸಾಧನೆ: ಈ ನಾಲ್ಕು ತಿಂಗಳಲ್ಲಿ ಪ್ರತಿದಿನ ಜಪ, ತಪ, ಪಾರಾಯಣ, ದಾನ ಮತ್ತು ದೇವರ ಪೂಜೆಗಳನ್ನು ಮಾಡುವುದರಿಂದ ಅನಂತ ಪುಣ್ಯ ಲಭಿಸುತ್ತದೆ. ಕಾರ್ತೀಕ ಮಾಸದ ಉತ್ಥಾನ ದ್ವಾದಶಿಯಂದು (ಉತ್ಥಾನ ಏಕಾದಶಿ/ದ್ವಾದಶಿ) ವಿಷ್ಣುವು ಯೋಗನಿದ್ರೆಯಿಂದ ಏಳುವುದರೊಂದಿಗೆ ಚಾತುರ್ಮಾಸ್ಯ ಸಮಾಪ್ತಿ ಆಗುತ್ತದೆ.
ಸನ್ಯಾಸ ಸ್ವೀಕರಿಸಿದವರು ಈ ಅವಧಿಯಲ್ಲಿ ಪ್ರಯಾಣಗಳನ್ನು ಮಾಡುವುದಿಲ್ಲ. ಒಂದೇ ಸ್ಥಳದಲ್ಲಿ ಇದ್ದು, ಅಲ್ಲಿಯೇ ಅಧ್ಯಯನ, ಭಗವಂತನ ಸ್ಮರಣೆ ಇಂಥ ಆಧ್ಯಾತ್ಮಿಕ ಸಾಧನೆಗಳನ್ನು ಮಾಡುವುದಕ್ಕೆ ಸಮಯವನ್ನು ಮೀಸಲಿಡುತ್ತಾರೆ. ಯತಿಗಳಾದವರಿಗೆ ಚಾತುರ್ಮಾಸ್ಯದ ನಿಯಮ ಮತ್ತೂ ಸ್ಪಷ್ಟವಾಗಿ ತಿಳಿಸಲಾಗಿದೆ.
ಇನ್ನು ಈ ಅವಧಿಯಲ್ಲಿ ಶುಭ ಕಾರ್ಯಗಳನ್ನು ಮಾಡುವುದು ಬೇಡ ಎಂದು ಕೆಲವರು ಪದ್ಧತಿ ಅನುಸರಿಸುವುದು ಇದೆ. ಆದ್ದರಿಂದ ಕಾರ್ತೀಕ ಮಾಸದಲ್ಲಿ ಮದುವೆ ಮೊದಲಾದ ಶುಭ ಕಾರ್ಯಗಳನ್ನು ಮಾಡಿಕೊಳ್ಳುತ್ತಾರೆ. ಅನಿವಾರ್ಯ ಇಲ್ಲ ಎಂಬ ಪಕ್ಷದಲ್ಲಿ ಉತ್ತರಾಯಣದಲ್ಲಿ ದಿನ ನಿಗದಿ ಮಾಡಿಕೊಳ್ಳುವುದೇ ಉತ್ತಮ.
ಇನ್ನು ಚಾತುರ್ಮಾಸ್ಯದಲ್ಲಿ ನಿತ್ಯವೂ ಯಥಾಶಕ್ತಿ ಪಾರಾಯಣ- ಅಧ್ಯಯನ- ಪಾಠ- ಪ್ರವಚನ ಮಾಡಬೇಕಾದ ಪಟ್ಟಿ ಹೀಗಿದೆ:
- ಅಷ್ಟ ಮಹಾಮಂತ್ರಗಳ ಜಪ
- ಚತುರ್ವೇದಗಳು (ಯಥಾಶಕ್ತಿ)
- ಸ್ಮೃತಿಗಳು
- ಅಷ್ಟಾದಶ ಪುರಾಣಗಳು (ಭಾಗವತ ವಿಶೇಷ)
- ರಾಮಾಯಣ- ಮಹಾಭಾರತ
- ಭಗವದ್ಗೀತಾ
- ವಿಷ್ಣುಸಹಸ್ರನಾಮ
- ಪಂಚರಾತ್ರಾಗಮ
- ಬ್ರಹ್ಮಸೂತ್ರಗಳು
ಈ ಅವಧಿಯಲ್ಲಿ ಮಾಡಬೇಕಾದ ದಾನಗಳ ಪಟ್ಟಿ ಹೀಗಿದೆ:
- ಶಾಲಗ್ರಾಮ
- ಗ್ರಂಥದಾನ
- ಪ್ರತಿಮಾದಾನ
- ಭೂದಾನ
- ಸುವರ್ಣದಾನ
- ದ್ರವ್ಯದಾನ
- ಧನದಾನ
- ಧಾನ್ಯದಾನ
- ತಿಲದಾನ
- ಉದಕುಂಭದಾನ
- ಕೊಡೆ, ಪಾದರಕ್ಷೆ,ಉಪ್ಪು, ನೆಲ್ಲಿ ದಾನ
- ತುಪ್ಪ (ಘೃತ)
- ಹಸು
- ದೀಪ
- ಶಾಕ
- ಮೊಸರು
- ಹಾಲು
- ದ್ವಿದಳ
- ಶಯ್ಯಾ
ಚಾತುರ್ಮಾಸ್ಯದಲ್ಲಿ ವ್ರತ ಆರಂಭ ಹಾಗೂ ಸಮಾಪ್ತಿ ಎರಡಕ್ಕೂ ಸಂಕಲ್ಪ ಮಾಡಬೇಕು.
ಲೇಖನ- ಶ್ರೀನಿವಾಸ ಮಠ









