ಕರ್ನಾಟಕ ಬಿಜೆಪಿ ಕಚೇರಿಗೆ ವಾಸ್ತು ಮಾಡಿಕೊಟ್ಟ ವಾಸ್ತು ಗಂಗಾಧರ್ ವಿಶೇಷ ಸಂದರ್ಶನ

Portrait of renowned Vastu expert Vastu Gangadhar.
ಕರ್ನಾಟಕ ಬಿಜೆಪಿ ಕಚೇರಿಗೆ ವಾಸ್ತು ಮಾರ್ಗದರ್ಶನ ನೀಡಿರುವ ಖ್ಯಾತ ವಾಸ್ತು ತಜ್ಞ ವಾಸ್ತು ಗಂಗಾಧರ್.

ಕುಂದಾಪುರ ಗಂಗಾಧರ್ ಎಂಬುದು ಅವರ ಹೆಸರು. ಆದರೆ ‘ವಾಸ್ತು’ ಗಂಗಾಧರ್ ಎಂಬುದು ಜನರಿಗೆ ಪರಿಚಿತ ಹೆಸರು. ವಾಸ್ತುವಿನಲ್ಲಿ ನಲವತ್ತು ವರ್ಷಕ್ಕೂ ಹೆಚ್ಚಿನ ಅನುಭವ ಇರುವ ವಾಸ್ತು ಗಂಗಾಧರ್ ಅವರನ್ನು ‘ಶ್ರೀಗುರುಭ್ಯೋ.ಕಾಮ್’ ವೆಬ್ ಸೈಟ್ ಗಾಗಿ ಮಾತನಾಡಿಸಲಾಗಿದೆ. ವಾಸ್ತುವನ್ನೇ ಸದಾ ಧೇನಿಸುವ, ಪ್ರತ್ಯಕ್ಷವಾಗಿ, ಫೋನ್ ಮೂಲಕವಾಗಿ, ಯೂಟ್ಯೂಬ್ ಮೂಲಕವಾಗಿ, ಟೀವಿ- ಪತ್ರಿಕಾ ಮಾಧ್ಯಮ ಮೂಲಕವಾಗಿ, ಡಿಜಿಟಲ್ ಮಾಧ್ಯಮಗಳಲ್ಲಿ ಲಕ್ಷಾಂತರ ಜನರಿಗೆ ಮಾರ್ಗದರ್ಶನ ನೀಡಿರುವ ಗಂಗಾಧರ್ ಅವರ ಸಂದರ್ಶನ ಮಾಡುವುದೇ ಒಂದು ಸವಾಲು. ಏಕೆಂದರೆ, ವಾಸ್ತು ಹಾಗೂ ಗಂಗಾಧರ್ ಬೇರೆ ಬೇರೆಯಾಗಿ ವಿಂಗಡಿಸಿ, ಹೇಳುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟು ಅಗಾಧ ಅನುಭವ ಹಾಗೂ ಜ್ಞಾನ ಅವರದು. ಈಗ ವಾಸ್ತು ಹೇಳುವ ಎಷ್ಟೋ ಜನರ ವಯಸ್ಸು ಗಮನಿಸಿದರೆ ಗಂಗಾಧರ್ ಅವರಿಗೆ ಇರುವ ಅನುಭವಕ್ಕಿಂತ ಕಡಿಮೆ ಇದೆ. ಇದನ್ನು ಏಕೆ ಉಲ್ಲೇಖಿಸಬೇಕು ಅಂದರೆ, ವಾಸ್ತುಶಾಸ್ತ್ರದಲ್ಲಿ ಅವರಿಗೆ ಇರುವ ಅಗಾಧ ಜ್ಞಾನವನ್ನು ತಿಳಿಸುವುದಕ್ಕಾಗಿ ಹೇಳಬೇಕು.

ಬ್ಯಾಂಕ್ ಉದ್ಯೋಗಿ ಆಗಿದ್ದ ಗಂಗಾಧರ್ ಅವರು ಕರ್ನಾಟಕದಲ್ಲಿ ಬಿಜೆಪಿ ಕಚೇರಿಗೆ ವಾಸ್ತು ಮಾಡಿಕೊಡುವ ತನಕ ಬೆಳೆದು ಬಂದಿದ್ದಾರೆ. ಈಗಲೂ ನಿರಂತರವಾಗಿ ಜನರಿಗೆ ವಾಸ್ತು ಮಾರ್ಗದರ್ಶನ ನೀಡುತ್ತಲೇ ಇದ್ದಾರೆ. ಗಂಗಾಧರ್ ಅವರ ಜೊತೆಗಿನ ಪ್ರಶ್ನೆ- ಉತ್ತರಗಳು ಇಲ್ಲಿವೆ.

ಪ್ರಶ್ನೆ: ಸೈಟ್ ಮೂಲೆ ಬೆಳೆಯುವುದು ಅಂದ್ರೆ ಏನು?

ಉತ್ತರ: ಸೈಟ್ ಮೂಲೆ ಬೆಳೆಯುವುದು ಅಂದ್ರೆ ಸಾಮಾನ್ಯವಾಗಿ ಯಾವುದೇ ಸೈಟ್ ಆಯತಾಕಾರ ಅಥವಾ ಚೌಕ ಇರುತ್ತದೆ. ಅದನ್ನ 90 ಡಿಗ್ರಿ ಅಂತಾನೂ ಕರೀಬಹುದು. ಅದು 90 ಡಿಗ್ರಿಗಿಂತ ಜಾಸ್ತಿ ಅಥವಾ ಕಡಿಮೆ ಇದ್ದರೆ, ಅದು ಆ ಮೂಲೆ ಬೆಳೆಯುತ್ತದೆ. ಯಾವುದೇ ಒಂದು ಮೂಲೆ 90 ಡಿಗ್ರಿಗಿಂತ ಕಡಿಮೆ ಅಥವಾ ಜಾಸ್ತಿ ಆದಾಗ, ಅಂದ್ರೆ 70 ಡಿಗ್ರಿ, 60 ಡಿಗ್ರಿ, 50 ಡಿಗ್ರಿ, 45 ಡಿಗ್ರಿ ಆದಾಗ, ಆ ಮೂಲೆಗಳು ಬೆಳೆದಂತೆ ಆಗುತ್ತದೆ. ಅದನ್ನ ಮೂಲೆಗಳು ಬೆಳೆಯುವುದು ಅಂತ ಹೇಳುತ್ತಾರೆ. ಇದರಲ್ಲಿ ಅಗ್ನಿ ಮೂಲೆ ಬೆಳೆದರೆ, ಅದು ದೊಡ್ಡ ದೋಷಪೂರಿತ ಸೈಟ್. ನೈಋತ್ಯ ಬೆಳೆದರೆ ಅತಿದೊಡ್ಡ ದೋಷದ ಸೈಟ್. ವಾಯವ್ಯ ಬೆಳೆದರೆ ಅದು ಸಾಧಾರಣವಾಗಿ ಅಗ್ನಿ ಮೂಲೆ ಬೆಳೆದಷ್ಟೇ ವಿರುದ್ಧವಾದ ಸೈಟ್. ಅದರಲ್ಲಿ ಈಶಾನ್ಯ (ಅಂದ್ರೆ ಜನಗಳ ಭಾಷೆಯಲ್ಲಿ ದೇವರ ಮೂಲೆ, ನಾನು ಹೇಳುವುದಾದರೆ ಈಶಾನ್ಯ) – ಈಶಾನ್ಯ ಅಂದ್ರೆ ಸೂರ್ಯ ಹುಟ್ಟುವಂಥ ಅಥವಾ ಜನ ಕರೆಯುವಂತೆ ದೇವರ ಮೂಲೆ ಬೆಳೆದರೆ ಅದು ತುಂಬಾ ಉತ್ತಮ. ಅದು ಯಾವಾಗಲೂ 90 ಡಿಗ್ರಿಗಿಂತ ಕಡಿಮೆ ಇರಬೇಕು. ಇದನ್ನ ಸೈಟ್ ಮೂಲೆ ಬೆಳೆಯುವುದು ಅಂತ ಹೇಳುತ್ತಾರೆ.

ಪ್ರಶ್ನೆ: ಅದೇ ರೀತಿ ಕಟ್ಟಡ ಬೆಳೆಯೋದು ಅಂದರೆ?

ಉತ್ತರ: ಕಟ್ಟಡ ಬೆಳೆಯೋದು ಇದರದ್ದೇ ಇನ್ನೊಂದು ಅರ್ಥ. ಕಟ್ಟಡ ಕೂಡ ಒಂದೇ ಆಯತದಲ್ಲಿ ಇರಬೇಕು, ಒಂದೇ ಚೌಕದಲ್ಲಿ ಇರಬೇಕು. ಚೌಕದಲ್ಲಿ, ಆಯತದಲ್ಲಿ ಇಲ್ದೇನೆ ಇದರಲ್ಲೂ ಅಗ್ನಿ ಮೂಲೆ ಮುಂದಕ್ಕೆ ಹೋಗಿದ್ದರೆ ಅಥವಾ ವಾಯವ್ಯ ಮುಂದಕ್ಕೆ ಹೋಗಿದ್ದರೆ ಅಥವಾ ನೈಋತ್ಯ ಮುಂದಕ್ಕೆ ಹೋಗಿದ್ದರೆ ಅದು ದೋಷಪೂರಿತ ಮನೆ. ಅದರಲ್ಲಿ ಈಶಾನ್ಯ ಮುಂದಕ್ಕೆ ಹೋಗಿದ್ದರೆ ಅದು ಒಳ್ಳೆಯದು ಅಂತ ಅರ್ಥ. ಕೆಲವರು ಈಶಾನ್ಯವನ್ನು ಸ್ವಲ್ಪ ಮುಂದುವರಿಸಿ, 90 ಡಿಗ್ರಿಗಿಂತ ಸ್ವಲ್ಪ ಕಡಿಮೆ ಡಿಗ್ರಿ ಮಾಡಿ ಈಶಾನ್ಯ ಮುಂದುವರಿಸಿ ಈಶಾನ್ಯದಲ್ಲೇ ಬಾಗಿಲು ಇಡ್ತಾರೆ, ಅದು ಅತ್ಯುತ್ತಮ.

ಪ್ರಶ್ನೆ: ಎಷ್ಟು ಬೆಳೆಸಬೇಕು? ಬೆಳೆಸುವುದು ಅಂದ್ರೆ ಎಷ್ಟು ಅಡಿ?

ಉತ್ತರ: ಬೆಳೆಸುವುದು ಅಂದ್ರೆ ಎರಡು ರೀತಿಯಲ್ಲಿದೆ. ಇದನ್ನ ಸಾಧಾರಣವಾಗಿ ಡ್ರಾಯಿಂಗ್ ಅಲ್ಲೇ ತೋರಿಸಬೇಕು ಆದ್ರೂನು ಬೆಳೆಸುವುದು ಅಂದ್ರೆ ಒಂದಡಿ, ಒಂದೂವರೆ ಅಡಿ, ಎರಡಡಿ, ಎರಡೂವರೆ ಅಡಿ ಬೆಳೆಸುವುದು. ಅದನ್ನ ಉತ್ತರ ಈಶಾನ್ಯ ಮುಂದಕ್ಕೆ ತಗೊಂಡು ಹೋಗಬಹುದು ಅಥವಾ ಪೂರ್ವ ಈಶಾನ್ಯ ಮುಂದಕ್ಕೆ ತಗೊಂಡು ಹೋಗಬಹುದು. ಆದ್ರೆ ಇವುಗಳನ್ನ ಮಾಡೋಕೆ ಸಾಧ್ಯ ಇರೋದು ನಮ್ಮದೇ ಆದಂಥ ದೊಡ್ಡ ಜಾಗ ಇದ್ದಾಗ. 17X20, 30X20, 15X30, 40X20 ಈ ಥರ ಸಣ್ಣ ಸಣ್ಣ ಸೈಟ್‌ಗಳಲ್ಲಿ ಇಂಥ ಪ್ರಯೋಗಗಳನ್ನ ಮಾಡೋಕೆ ಹೋಗೋದು ಒಳ್ಳೆಯದಲ್ಲ. BMW ಕಾರ್ ತಗೊಂಡು ಅದನ್ನ ಆಲ್ಟರೇಷನ್ ಮಾಡೋಕೆ ಹೋಗೋದು ಒಳ್ಳೆಯದಲ್ಲ, ಆಲ್ಟೋಸ್ ತಗೊಂಡು ಆಲ್ಟರೇಷನ್ ಮಾಡೋದು ಒಳ್ಳೆಯದು.

ಪ್ರಶ್ನೆ: ಮನೆಯ ಬಾಗಿಲನ್ನ ಮೂಲೆಯಲ್ಲೇ ಯಾಕೆ ಇಡಬೇಕು?  ಮೂಲೆಯಲ್ಲಿ ಒಂದು ಅಡಿ ಗ್ಯಾಪ್ ಕೊಟ್ಟು, ಅಂದ್ರೆ ಒಂದು ಅಡಿ ಬಿಟ್ಟು ಬಾಗಿಲು ಇಡಿ ಅಂತಾರೆ ಕೆಲವರು. ಇನ್ನು ಕೆಲವರು ಮೂಲೆಯಲ್ಲೇ ಇಡಿ ಅಂತಾರೆ. ಯಾವುದು ಸರಿ?

ಉತ್ತರ: ಅರ್ಧ ಅಡಿ, ಒಂದಡಿ, ಒಂದೂವರೆ ಅಡಿ ಗ್ಯಾಪ್ ಕೊಟ್ಟು ಬಿಡೋದು ಉತ್ತಮ. ಮೂಲೆಯಲ್ಲೇ ಇಡೋಕೆ ಆಗೋದು ಇಲ್ಲ, ಯಾಕೆಂದ್ರೆ ಇಟ್ಟಿಗೆ ಆಗಲಿ, ಕಾಂಕ್ರೀಟ್ ಬ್ಲಾಕ್ ಆಗಲಿ ಅದು ಸರಿಯಾಗಿ ಕಚ್ಚಿಕೊಳ್ಳೋದಿಲ್ಲ, ಯಾಕೆಂದ್ರೆ ಮೂಲೆಯಲ್ಲಿ ಸಾಮಾನ್ಯವಾಗಿ ಒಂದು ಪಿಲ್ಲರ್ ಬರುತ್ತೆ. ಆದರೆ ಬಹಳ ಕಡಿಮೆ, ಚಿಕ್ಕದು- ಅಂದ್ರೆ ಐದಡಿಗಿಂತ ಕಡಿಮೆ ಇರೋ ಹಾಲಲ್ಲಿ, ಹಾಲಿನ ಅಗಲ ಐದಡಿಗಿಂತ ಕಡಿಮೆ ಇರೋ ಹಾಲಲ್ಲಿ ಮೂಲೆಯಲ್ಲೇ ಇಡಬೇಕಾಗುತ್ತೆ, ಯಾಕೆಂದ್ರೆ ಅದರಲ್ಲಿ ನಾವು ಎರಡು ಭಾಗಗಳನ್ನ ಮಾಡಿ ಒಂದು ಈಶಾನ್ಯ ಭಾಗ, ಒಂದು ಅಗ್ನೆಯ ಭಾಗ ಅಥವಾ ಒಂದು ವಾಯುವ್ಯ ಭಾಗ ಒಂದು ಈಶಾನ್ಯ ಭಾಗ ಅಂತ ಮಾಡ್ತೀವಿ. ಹಾಗಾಗಿ ಮೂಲೆಯಲ್ಲೇ ಇಡಬೇಕಾಗುತ್ತೆ. ಐದಡಿಗಿಂತ ಅಗಲ ಜಾಸ್ತಿ ಇರೋದಾದ್ರೆ ಒಂದಡಿ ಬಿಟ್ಟು ಇಡಬಹುದು.

ಪ್ರಶ್ನೆ: ಐಡಿಯಲ್ ರೂಫ್ ಹೈಟ್ ಎಷ್ಟು ಸರ್? ಐಡಿಯಲ್ ರೂಫ್ ಹೈಟ್ ಅಂದ್ರೆ ನೀವು ಮನೆಯ ತಾರಸಿಯನ್ನ ಅಂದ್ರೆ ಮೋಲ್ಡ್ ಅನ್ನ ಎಷ್ಟಕ್ಕೆ ಹಾಕ್ಬೇಕು?

ಉತ್ತರ: ಐಡಿಯಲ್ ರೂಫ್ ಅಂದ್ರೆ 10 ಅಡಿಗಿಂತ ಮೇಲೆ 11 ಅಡಿಗಿಂತ ಒಳಗೆ.

ವಾಸ್ತು ಪ್ರಕಾರ ಯಾವ ದಿಕ್ಕಿಗೆ ತಲೆ ಹಾಕಿ ಮಲಗಬೇಕು? ಮಲಗುವ ದಿಕ್ಕು ನಿಮ್ಮ ಅದೃಷ್ಟವನ್ನೇ ಬದಲಿಸಬಲ್ಲದು!

ಪ್ರಶ್ನೆ: ಒಂದು ಮನೆಯಲ್ಲಿ ನೀರು ಈಶಾನ್ಯದಲ್ಲಿದ್ದರೆ ಏನು? ವಾಯವ್ಯ ಅಥವಾ ಆಗ್ನೇಯದಲ್ಲಿದ್ದರೆ ಏನು? ನೈರುತ್ಯದಲ್ಲಿದ್ದರೆ ಏನು? 

ಉತ್ತರ: ಈಶಾನ್ಯ ಮೂಲೆ ಅಂದ್ರೆ ಅದು ಈಶಾನ್ಯ ಅನ್ನೋದು ಮೂರು ಅರ್ಥ ಕೊಡುತ್ತೆ. ಒಂದು ಈಶಾನ್ಯ ಅಂದ್ರೆ ನೀರಿನ ಮೂಲೆ, ಈಶಾನ್ಯ ಅಂದ್ರೆ ಸೂರ್ಯ ಪರಮಾತ್ಮನ ಎನರ್ಜಿ ಅಲ್ಟ್ರಾವೈಲೆಟ್ ರೇಸ್ ಬರುವಂತಹ ಮೂಲೆ. ಈಶಾನ್ಯ ಯಾವಾಗಲೂ ನಮ್ಮ ಮೂಗಿಗೆ ಸಮಾನ. ನಮ್ಮ ಮೂಗು ಮುಂದಕ್ಕೆ ಇರಬೇಕು ಅಂದ್ರೆ ಮೂಗು ಮುಂದಕ್ಕೆ ಇರೋದು ಲಕ್ಷಣ. ಮೂಗು ಲೈಟ್ ವೆಯಿಟ್ ಇರಬೇಕು, ಭಾರ ಇರಬಾರದು. ಯಾಕೆ ಅಂದ್ರೆ ಅದು ನಮ್ಮ ಎನರ್ಜಿ ಲೆವೆಲ್‌ ಅನ್ನು ಇನ್ಕ್ರೀಸ್ ಮಾಡುತ್ತೆ. ಈಶಾನ್ಯ ಓಪನ್ ಆಗಿರಬೇಕು, ಮೂಗಿನ ಎರಡು ಹೊಳ್ಳೆ ಓಪನ್ ಆಗಿರುತ್ತದೆ. ಹಾಗೆ ಈಶಾನ್ಯ ಅನ್ನೋದು. ಈಶಾನ್ಯ ಮೂಲೆ ಇರೋದೇ ಅದು ನೀರು ಇಡುವಂಥ ಜಾಗ. ಅದು ತಗ್ಗು ಮಾಡೋ ದೃಷ್ಟಿಯಿಂದ ಮಣ್ಣನ್ನ ತೆಗೆದು ಸಂಪು, ಬಾವಿ, ಬೋರ್ ಮಾಡುವಂಥ ಜಾಗ. ಅದು ಓಪನ್ ಆಗಿರುವಂಥ ಜಾಗ, ಅದು ಲೈಟ್ ವೇಯ್ಟ್ ಇರುವಂಥ ಜಾಗ ಅಂತ. ಫಾರ್ ಎಕ್ಸಾಂಪಲ್ ಒಂದ್ ಹೇಳೋದಾದ್ರೆ ಮೂಗಿಗೆ ಒಂದು ಸಣ್ಣ ಗಾಯ ಆದ್ರೂನು ಒಂದು ಆರು ತಿಂಗಳು ಬೇಕು ಅದು ನೋವು ನಾವು ಸರಿ ಮಾಡ್ಕೊಳ್ಳೋಕೆ. ಡಾಕ್ಟರ್ ನಮಗೆ ಸ್ಟೆತೋಸ್ಕೋಪ್ ಹಾರ್ಟ್ ಗೇ ಇಡೋದು ನಮ್ಮ ಮೂಗು ಕೆಲಸ ಮಾಡ್ತಾ ಇದ್ದೀಯಾ ನೋಡಕ್ಕೆ. ಹಾಗೆ ಈಶಾನ್ಯ ಅಂದ್ರೆ ಅದು ನೀರಿನ ಮೂಲೇನೂ ಆಯಿತು, ಸೂರ್ಯ ಪರಮಾತ್ಮನ ಶಕ್ತಿ ಬರುವಂಥ ಮೂಲೇನೂ ಆಯಿತು, ಕುಬೇರ ಮನೆಗೆ ಎಂಟರ್ ಆಗೋ ಮೂಲೇನೂ ಆಯಿತು, ಲೈಟ್ ವೇಯ್ಟೂ ಆಯಿತು, ಅದು ಓಪನ್ ಆಯಿತು.

ಪ್ರಶ್ನೆ: ಈಗ ಒಬ್ಬರ ಮನೆಯಲ್ಲಿ ಆಗ್ನೇಯದಲ್ಲಿ ಸಂಪ್ ಇದೆ, ಆಗ್ನೇಯದಲ್ಲಿ ಬೋರ್ ವೆಲ್ ಇದೆ ಅಂತಾದರೆ…? 

ಉತ್ತರ: ಆಗ್ನೇಯದಲ್ಲಿ ಸಂಪ್ ಇದ್ದಾಗ ಏನಾಗುತ್ತೆ ಅಂದ್ರೆ ಆಗ್ನೇಯ ಅನ್ನೋದು ಬೆಂಕಿಯ ಮೂಲೆ ಅಂತ ಕರೆಯೋದು. ಅದು ಹೆಣ್ಣಿನ ಆಡಳಿತದ ಜಾಗ ಅಂತಾನೂ ಅಂದ್ರೆ ನಮ್ಮ ಮನೆಗೆ ಒಂದು ಸೊಸೆ ಬಂದಾಗ ಅಥವಾ ಒಂದು ಹುಡುಗಿ ಬಂದಾಗ ಅವಳು ಅಡುಗೆ ಮಾಡುವಂಥ ಜಾಗ. ಅದು ಬೆಂಕಿಯ ಜಾಗ. ಇಲ್ಲಿ ಬೆಂಕಿಯ ಜಾಗದಲ್ಲಿ ನೀರನ್ನು ಇಟ್ಟಾಗ ನಿಮಗೇ ಗೊತ್ತಿದೆ ಬೆಂಕಿ ಮತ್ತೆ ನೀರು ಯಾವತ್ತೂ ಒಟ್ಟಿಗೆ ಹೋಗೋದಿಲ್ಲ, ವಿರೋಧಿಗಳು. ಅದು ಸೂರ್ಯನ ಬಲಭಾಗ. ಸೋ ಅದು ಅಗ್ನಿ ಅಂದ್ರೆ ಬೆಂಕಿಯ ಜಾಗ ಅಂತ. ಬೆಂಕಿ ಜಾಗದಲ್ಲಿ ನೀರನ್ನು ಇಟ್ಟರೆ ಏನಾಗುತ್ತೆ? ಬೆಂಕಿ ನೀರು ಒಟ್ಟಿಗೆ ಹೋಗೋದಿಲ್ಲ ಆದ್ರಿಂದ ಪ್ರತಿನಿತ್ಯ ಪರಿಣಾಮ ನಿಮ್ಮ ಮನೆಯಲ್ಲಿ ಆಗುತ್ತೆ.

ಪ್ರಶ್ನೆ: ಏನು ಪರಿಣಾಮ ಆಗುತ್ತೆ?

ಉತ್ತರ: ಸಾಮಾನ್ಯವಾಗಿ ಅಗ್ನಿ ಮೂಲೆಯಲ್ಲಿ ನೀರಿದ್ದರೆ ಹೆಣ್ಣುಮಕ್ಕಳು ಆ ಮನೆಯಲ್ಲಿ ವಾಸ ಮಾಡೋಕೆ ಆಗಲ್ಲ. ಅಲ್ಲಿಂದ ಓಡಿಹೋಗೋಣ ಅನ್ನೋ ಹಾಗೆ ಆಗುತ್ತದೆ. ಹೆಣ್ಣುಮಕ್ಕಳು ನೈತಿಕವಾಗಿ ಅತ್ತಿತ್ತ ಹೊರಳುವ ರೀತಿ ಮಾನಸಿಕ ಬದಲಾವಣೆ ಆಗುತ್ತೆ. ಹೆಂಗಸಿಗೆ ಗರ್ಭಕೋಶದ ಸಮಸ್ಯೆ ಬರುವಂಥದ್ದು, ಯುಟರಸ್ ಪ್ರಾಬ್ಲಮ್ ಬರುವಂಥದ್ದು, ಹೆಣ್ಣು ಸಂತಾನದ ದೋಷಗಳು ಹಲವಾರು ರೀತಿ ಇದೆ, ಅದು ಬರುತ್ತದೆ.

ಪ್ರಶ್ನೆ: ನೈರುತ್ಯದಲ್ಲಿ ಸಂಪ್ ಇದ್ರೆ, ನೈರುತ್ಯದಲ್ಲಿ ಬೋರ್ ವೆಲ್ ಇದ್ರೆ ಏನಾಗುತ್ತದೆ? 

ಉತ್ತರ: ನೈರುತ್ಯವನ್ನ ಸಾಮಾನ್ಯವಾಗಿ ಕರೆಯೋದು ಭೂಮಿಯ ಮೂಲೆ ಅಂತ. ಸೌತ್ ವೆಸ್ಟ್ ಕಾರ್ನರ್ ನೈರುತ್ಯ ಭೂಮಿಯ ಮೂಲೆ, ಮಲಗುವ ಮೂಲೆ, ಭಾರವಾದ ಮೂಲೆ, ಎತ್ತರವಾದ ಮೂಲೆ, ತೂಕ ಇಡುವಂಥ ಮೂಲೆ. ಅದು ಮಲಗಬೇಕಾದ ಜಾಗ ಅಥವಾ ಜಾಗದ ಟೋಟಲ್ ಜಾಗದಲ್ಲಿ ಮನೆ ಕಟ್ಟುವ ಮೂಲೆ ಅಂತ. ಆ ಮನೆ ಕಟ್ಟುವ ಮೂಲೆ ಎಂದಿಗೂ ಭೂಮಿಗಿಂತ ಕೆಳಮಟ್ಟಕ್ಕೆ ಹೋಗಬಾರದು. ಭೂಮಿಗಿಂತ ಕೆಳಮಟ್ಟಕ್ಕೆ ಹೋಗುವಂಥದ್ದು ಈಗ ಹೆಣ ಹೂಳುವಂಥದ್ದು ಭೂಮಿಯಲ್ಲಿ, ಎಲ್ಲಾ ಪ್ರಾಣಿಗಳು ಸತ್ತಾಗ ಹೂಳುವಂಥದ್ದು ಭೂಮಿಯಲ್ಲಿ, ಭೂಮಿಯ ಕೆಳಗಡೆಗೆ ಸೂರ್ಯನ ಎನರ್ಜಿ ಬರೋದಿಲ್ಲ. ಮತ್ತೆ ನೈರುತ್ಯದಲ್ಲಿ ಭಾರವಾಗಿರಬೇಕು, ತೂಕವಾಗಿರಬೇಕು, ಎತ್ತರವಾಗಿರಬೇಕು, ಮಲಗುವ ಜಾಗ ಮಾತ್ರ ಇರಬೇಕು. ಅಲ್ಲಿ ನೀರಿಟ್ಟರೆ ಮತ್ತೆ ಪುನಃ ಅದು ತೂಕ ಕಮ್ಮಿ ಆಗುತ್ತೆ, ಅನಾಹುತ ಆಗುತ್ತೆ.

ಪ್ರಶ್ನೆ: ಹಾಗೊಂದು ವೇಳೆ ನೀರು ಇದ್ದರೆ ಏನಾಗುತ್ತೆ?

ಉತ್ತರ: ಗಂಡ ಅಥವಾ ಹೆಂಡತಿ ಅಥವಾ ಮನೆಯ ಯಜಮಾನರು ಸಾಯುವಂಥ ಸಂದರ್ಭ ಜಾಸ್ತಿ.

ಪ್ರಶ್ನೆ: ಅದೇ ಥರ ವಾಯವ್ಯದಲ್ಲಿ ಬೋರ್ ವೆಲ್ ಅಥವಾ ಸಂಪ್ ಇದ್ದರೆ?

ಉತ್ತರ: ವಾಯವ್ಯದಲ್ಲಿದ್ದರೆ ಅದು ಗಾಳಿಯ ಜಾಗ. ಗಾಳಿಯ ಮೂಲೆ ಅಂತಾನೂ ಕರೀತಾರೆ. ವಾಯುವ್ಯ ಅಂದ್ರೆ ಗಾಳಿ. ಸೋ ಅಲ್ಲಿ ತಗ್ಗು ಹಾಕಬಾರದು. ನಮ್ಮಲ್ಲಿ ಹಣ ಬರೋದಿಲ್ಲ, ಗಂಡು ಮಕ್ಕಳು ಹಾಳಾಗ್ತಾರೆ, ಗಂಡು ಸಂತಾನದ ಮೇಲೆ ವ್ಯತಿರಿಕ್ತ ಪರಿಣಾಮ ಬರುತ್ತೆ. ಅದನ್ನ ಯಾವುದೇ ಕಾರಣಕ್ಕೆ ಒಂದು ಲೆವೆಲ್ ಆಗಿ ಮೇಂಟೇನ್ ಮಾಡಬೇಕು, ಸಫಿಷಿಯೆಂಟ್ ಆಗಿ ಕಿಟಕಿಗಳು ಇಟ್ಕೊಂಡು ಓಪನ್ ಇಟ್ಕೋಬೇಕು.

ಪ್ರಶ್ನೆ: ಈಗ ಕಾಮನ್ ಪ್ರಾಬ್ಲಮ್ ಏನು ಅಂದ್ರೆ ಒಂದು ಮದುವೆಗಳು ಆಗ್ತಾ ಇಲ್ಲ. ಅದು ಹೆಣ್ಣುಮಕ್ಕಳು ಇರಲಿ, ಗಂಡುಮಕ್ಕಳು ಇರಲಿ. ಈಗ ವಾಸ್ತುವಿನಲ್ಲಿ ಮದುವೆ ದೋಷ ಯಾರಿಗೆ ಹೆಚ್ಚು?

ಉತ್ತರ: ಮದುವೆ ಆಗದೆ ಇರೋದು ಯಾರೇ ಬೇಕಾದರೂ ಸಂಬಂಧಪಟ್ಟವರು ಬೇಕಾದ್ರೆ ನನ್ನನ್ನ ಕಾಂಟ್ಯಾಕ್ಟ್ ಮಾಡಬಹುದು. ನನ್ನ 98450- 47209ಗೆ ಕಾಂಟ್ಯಾಕ್ಟ್ ಮಾಡಬಹುದು. ನಾನು ಅವರ ಮನೆಯನ್ನ ವಾಸ್ತು ಮಾಡುವುದರ ಮೂಲಕ ಅವರ ಮದುವೆ ಆಗುವ ರೀತಿಯಲ್ಲಿ ಮಾಡಿಕೊಡ್ತೀನಿ. ಈ ದೋಷಗಳು ಬರೋದು ಇಷ್ಟೊತ್ತು ಏನು ಮಾತನಾಡಿದ್ರಿ, ವಾಯವ್ಯ ಡಿಫೆಕ್ಟ್ ಆದ್ರೆ ಗಂಡುಮಕ್ಕಳಿಗೆ ದೋಷ, ಅಗ್ನಿಯ ಡಿಫೆಕ್ಟ್ ಆದ್ರೆ ಹೆಣ್ಣುಮಕ್ಕಳಿಗೆ ದೋಷ. ಈಶಾನ್ಯ ಸರಿ ಇಲ್ಲ ಅಂದ್ರೆ ಇಡೀ ಕುಟುಂಬವೇ ತೊಂದರೆಗೆ ಸಿಕ್ಕಿಕೊಳ್ಳುತ್ತೆ. ನೈರುತ್ಯದಲ್ಲಿ ತೊಂದರೆ ಬಂತು ಅಂದ್ರೆ ಕುಟುಂಬ ಇನ್ನು ಎಂದೆಂದಿಗೂ ಈ ಜಗತ್ತಿನಲ್ಲಿ ಇರೋಕೆ ಆಗೋದಿಲ್ಲ ಅಂತ. ಈ ವಾಸ್ತು ಡಿಫೆಕ್ಟ್ ಅನ್ನು ಈ ರೀತಿ ಸರಿ ಮಾಡೋದ್ರಿಂದ ಮದುವೆ ಆಗೋದ್ರಲ್ಲಿ ಅನುಮಾನಗಳೇ ಇಲ್ಲ.

ಪ್ರಶ್ನೆ: ಲಿಫ್ಟ್ ಯಾವ ದಿಕ್ಕಿನಲ್ಲಿ ಇರಬೇಕು? 

ಉತ್ತರ: ಅಲ್ಲ ಸಾಮಾನ್ಯವಾಗಿ ಲಿಫ್ಟ್ ವಾಯವ್ಯದಲ್ಲಿ, ಆಗ್ನೇಯದಲ್ಲಿ, ನೈರುತ್ಯದಲ್ಲಿ ಹಾಕೋಬಹುದು. ಈಶಾನ್ಯದಲ್ಲಿ ಯಾವುದೇ ಕಾರಣಕ್ಕೆ ಹಾಕಿ ಭಾರ- ತೂಕ, ಎತ್ತರ ಮಾಡಬಾರದು.

ನಿಮ್ಮ ರಾಶಿಗೆ ಯಾವ ದಿಕ್ಕಿನ ಮನೆ ಬಾಗಿಲು ಶ್ರೇಯಸ್ಕರ?

ಪ್ರಶ್ನೆ: ಮತ್ತೆ ಈ ಆಫ್‌ಸೆಟ್ ಮನೆಗಳು ಕಟ್ತಾರಲ್ಲ? ಕೆಳಗಡೆ ಗ್ಯಾಪ್ ಬಿಡ್ತಾರೆ, ಮೇಲ್ಗಡೆ ಕೊನೆವರೆಗೂ ತಗೋತಾರೆ. ಇದು ಆಫ್‌ಸೆಟ್?

ಉತ್ತರ: ಕೆಳಗಡೆಗೆ ಫುಲ್ ಖಾಲಿ ಬಿಡೋದು ಅಷ್ಟು ಶ್ರೇಷ್ಠ ಅಲ್ಲ. ಈಶಾನ್ಯದಲ್ಲಿ ನೀರಿಟ್ಟು ಬಿಟ್ಟು, ನೈರುತ್ಯದಲ್ಲಿ ಒಂದು ರೂಮನ್ನ ಕಟ್ಟಿಕೊಂಡು ಮಿಕ್ಕಿದ್ದೆಲ್ಲಾ ಖಾಲಿ ಬಿಟ್ಟುಕೊಂಡು. ಮಾಡಬಹುದು. ನೈರುತ್ಯದಲ್ಲಿ ಮಾತ್ರ ರೂಮ್ ಕಟ್ಟೋದು ಕಂಪಲ್ಸರಿ. 

ಪ್ರಶ್ನೆ: ಈಗ ಪಶ್ಚಿಮ ಸೈಟ್ ಇರುತ್ತೆ ಸರ್ ಈಗ ನಮಗೆ ಸಿಟಿಯಲ್ಲಿ ಪಾರ್ಕಿಂಗ್ ಇಲ್ಲ ಅಂದ್ರೆ ಹೆಂಗೆ?

ಉತ್ತರ: ಯಾವುದೇ ಮೂಲೆಯಲ್ಲಿ ಯಾವುದೇ ದಿಕ್ಕಿನ ಸೈಟ್ ಇದ್ದರೂ ಕೂಡ ನೈರುತ್ಯದಲ್ಲಿ ಒಂದು ಟೆನ್ ಬೈ ಟೆನ್ ರೂಮನ್ನ ಕಟ್ಟಿಕೊಂಡೇ ಮಿಕ್ಕಿದ್ದು ಮನೆ ಕಟ್ಕೋಬೇಕು. ನೈರುತ್ಯದಲ್ಲಿ ಸ್ಟೇರ್ ಕೇಸ್ (ಮೆಟ್ಟಿಲು) ಹಾಕೋಬಹುದು. ಪಶ್ಚಿಮ ನೈರುತ್ಯ ಅಥವಾ ದಕ್ಷಿಣ ನೈರುತ್ಯದಲ್ಲಿ ಸ್ಟೇರ್ ಕೇಸ್ (ಮೆಟ್ಟಿಲು) ಹಾಕಬಹುದು.

ಪ್ರಶ್ನೆ: ಹಂಗೆ ಮಾಡಿದಾಗ ಕೆಲವು ಸಲ ಆ ಭಾಗ ಬೆಳೆದು ಹೋಗ್ಬಿಡುತ್ತೆ?

ಉತ್ತರ: ಇಲ್ಲ ಇಲ್ಲ, ಬೆಳೆಯೋ ಥರ ಸಂದರ್ಭ ಬರೋದಿಲ್ಲ. ಯಾಕೆಂದ್ರೆ ನಿಮ್ಮ ಹತ್ರ ಅಂಥ ದೊಡ್ಡ ಜಾಗ ಇರೋದಿಲ್ಲ. ಖಂಡಿತ ಬೆಳೆಯೋದಿಲ್ಲ. ಅಲ್ಲಿ ನೈರುತ್ಯದಲ್ಲಿ ಸ್ಟೇರ್ ಕೇಸ್ ಹಾಕಿದಾಗ ಅದರ ಆಗ್ನೇಯದಲ್ಲಿ ಅಥವಾ ವಾಯವ್ಯದಲ್ಲಿ ಕೊಟ್ಟು, ಕೊನೆ ಎಕ್ಸ್‌ಟೆಂಡ್ ಮಾಡ್ಕೊಂಡ್ರೆ ಆಯ್ತು.

ಪ್ರಶ್ನೆ: ನೀವು ಗಮನಿಸಿರುವಂಥ, ಇವತ್ತಿನ ದಿನಮಾನಕ್ಕೆ ಹೆಚ್ಚು ಕಾಮನ್ ಆಗಿ ಕಂಡುಬರುವಂಥ ಏಳು ವಾಸ್ತು ದೋಷಗಳು ಯಾವುವು? ಎಂಥ ಅತಿ ಬುದ್ಧಿವಂತ ಆದ್ರೂ ಅಥವಾ ವಾಸ್ತು ತಿಳಿದಿರೋವನಾದ್ರೂ, ವಾಸ್ತು ತಿಳಿದಿದೆ ಅಂತ ಅನ್ಕೊಂಡಿರೋವನಾದ್ರೂ, ಹಾಗೆ ಅಂದುಕೊಂಡ್ರು ಆ ತಪ್ಪುಗಳನ್ನು ಮಾಡಿಬಿಡ್ತಾರೆ ಅನ್ನೋದು ಯಾವುದು.

ಉತ್ತರ: ಮೊದಲನೆಯ ದೋಷ. ತುಂಬಾ ಸುಂದರವಾದ ಹುಡುಗಿನ ಮದುವೆ ಮಾಡಿಕೊಂಡು ಅವಳನ್ನ ಸಾಕಕ್ಕೆ ಬರದೆ ಇರೋದು. ಅಂದ್ರೆ ನಾರ್ತ್ ಈಸ್ಟ್ ಕಾರ್ನರ್ ಸೈಟ್ (ಉತ್ತರ ಹಾಗೂ ಪೂರ್ವಕ್ಕೆ ರಸ್ತೆ ಇರುವ ಸೈಟು) ತಗೊಂಡು ನಾರ್ತ್ ಈಸ್ಟ್‌ಲ್ಲಿ ಸಫಿಷಿಯೆಂಟ್ ಆಗಿ ಓಪನ್ ಬಿಡದೆ ಇರೋದು, ನಾರ್ತ್ ಈಸ್ಟ್‌‌ ನಲ್ಲಿ ಸಫಿಷಿಯೆಂಟ್ ಜಾಗ ಬಿಟ್ಟಿಲ್ದೆ ಇರೋದು, ನಾರ್ತ್ ಈಸ್ಟ್‌ ನಲ್ಲಿ ಬಾಗಿಲು ಇಡದೆ ಇರೋದು ಒಂದನೆಯ ದೊಡ್ಡ ದೋಷ.

ಎರಡನೆಯ ದೊಡ್ಡ ದೋಷ ಈಶಾನ್ಯದಲ್ಲಿ ಮೆಟ್ಟಿಲು ಹಾಕುವಂಥದ್ದು.

ಮೂರನೆಯ ದೊಡ್ಡ ದೋಷ ಅಗ್ನಿ ಮೂಲೆಯಲ್ಲಿ ಅಥವಾ ವಾಯು ಮೂಲೆಯಲ್ಲಿ ಅಡುಗೆ ಮನೆ ಇಡದೆ ಇರುವಂತದ್ದು. ಯಾಕೆ ವಾಯು ಮೂಲೆಯಲ್ಲಿ ಇಡಬೇಕು ಅಂದ್ರೆ ಬೆಂಕಿ ಮತ್ತೆ ಗಾಳಿ ಸ್ವಲ್ಪ ಸ್ನೇಹಿತರು ಆಗಿರೋದ್ರಿಂದ. ಒಂದು ಹುಡುಗ ಹುಡುಗಿ ಮದುವೆ ಆಗುವುದಕ್ಕೆ ಓಡಿ ಹೋದರೆ ಸ್ನೇಹಿತರ ಮನೆಯಲ್ಲಿ ಹೋಗಿ ಇರೋ ಥರಾನೇ ಒಂದು ವೇಳೆ ಆಗ್ನೇಯದಲ್ಲಿ ಅಡುಗೆ ಮನೆ ಮಾಡಲಿಲ್ಲ ಅಂತಾದರೆ ವಾಯವ್ಯ ಮೂಲೆಯಲ್ಲಿ ಅಡುಗೆ ಮನೆ ಮಾಡಬೇಕು ಈ ಎರಡೂ ಅಲ್ಲದ ಮೂಲೆಯಲ್ಲಿ ಅಡುಗೆ ಮನೆ ಇದ್ದರೆ ಅದು ಇನ್ನೊಂದು ದೊಡ್ಡ ದೋಷ.

ನಾಲ್ಕನೆಯದು ನೈರುತ್ಯದಲ್ಲಿ ಬೆಡ್‌ರೂಮ್ ಮಾಡದೆ ಇರೋದು. ನೈರುತ್ಯದಲ್ಲಿ ಮಾಸ್ಟರ್ ಬೆಡ್‌ರೂಮ್ (ಮನೆಯ ಯಜಮಾನನ ಮಲಗುವ ಕೋಣೆ) ಮಾಡದೆ ಇರೋದು ಇದು ಒಂದು ದೊಡ್ಡ ದೋಷವೇ.

ಆಮೇಲೆ ವಾಯುವ್ಯದಲ್ಲಿ ಅಥವಾ ಆಗ್ನೇಯದಲ್ಲಿ ಬಾವಿ ಅಥವಾ ನೈರುತ್ಯದಲ್ಲಿ ಬಾವಿ, ಬೋರ್ ವೆಲ್ ಅಥವಾ ಸಂಪು ಮಾಡೋದು ಐದನೇ ದೊಡ್ಡ ದೋಷ.

ಈ ಐದು ದೊಡ್ಡ ದೋಷಗಳು ಮಾಡಿದಾಗ ಕೂಡ ಅಕಾಲ ಮರಣ ಆಗುವಂತಹ ಸಾಧ್ಯತೆ ಇರುತ್ತದೆ. 

ಪ್ರಶ್ನೆ: ಓಹೋ ಪ್ರಾಣವೇ ಹೋಗ್ಬಿಡಬಹುದಾ?

ಉತ್ತರ: ಖಂಡಿತ ಖಂಡಿತ. ಮೂರಕ್ಕಿಂತ ಜಾಸ್ತಿ ದೋಷಗಳನ್ನು ಮಾಡಿದಾಗ ಅಕಾಲ ಮರಣ ಆಗುವಂತಹ ಸಂದರ್ಭಗಳು ತುಂಬಾ ಇದಾವೆ.

ಪ್ರಶ್ನೆ: ಇನ್ನೆರಡು ಮುಖ್ಯ ದೋಷಗಳು ಯಾವುವು? 

ಉತ್ತರ: ಇನ್ನು ಎರಡು ಅಂದ್ರೆ ಈಶಾನ್ಯದಲ್ಲಿ ಬಹಳ ಎತ್ತರವಾಗಿ ಕಟ್ಟುಬಿಟ್ಟು. ನೈರುತ್ಯ ತಗ್ಗಾಗಿ ಇಡೋದು. ಅದು ಒಂದು ದೋಷ. ಆಮೇಲೆ ದಕ್ಷಿಣ ಮತ್ತೆ ಪಶ್ಚಿಮವನ್ನು ತುಂಬಾ ಖಾಲಿ ಬಿಟ್ಟು ಉತ್ತರ ಮತ್ತೆ ಪೂರ್ವದಲ್ಲಿ ಮನೆ ಕಟ್ಟೋದು ಇನ್ನೊಂದು ದೊಡ್ಡ ದೋಷ.

ಪಶ್ಚಿಮ ದಿಕ್ಕಿನ ಸೈಟು ಖರೀದಿಸುವುದು ಅಶುಭವೇ? ವಾಸ್ತು ಶಾಸ್ತ್ರದ ನೈಜ ಸತ್ಯ, ಲಾಭಗಳು ಇಲ್ಲಿವೆ!

ಪ್ರಶ್ನೆ: ಮತ್ತೆ ಮುಖ್ಯ ಬಾಗಿಲು ಬಗ್ಗೆ ಹೇಳಿ. 

ಉತ್ತರ: ಮುಖ್ಯ ಬಾಗಿಲು ದಕ್ಷಿಣ ಸೈಟ್ ಆದ್ರೆ ದಕ್ಷಿಣ ಆಗ್ನೇಯದಲ್ಲೇ ಇಡಬೇಕು. ಪಶ್ಚಿಮ ಸೈಟ್ ಆದ್ರೆ ಮುಖ್ಯ ಬಾಗಿಲು ಪಶ್ಚಿಮ ವಾಯವ್ಯದಲ್ಲಿಯೇ ಒಂದು ಬಾಗಿಲು ಇಡಬೇಕು. ಉತ್ತರ ಸೈಟ್ ಆದ್ರೆ ಉತ್ತರ ಈಶಾನ್ಯದಲ್ಲಿ ಒಂದು ಬಾಗಿಲು ಇಡಬೇಕು. ಪೂರ್ವ ಸೈಟ್ ಆದ್ರೆ ಪೂರ್ವ ಈಶಾನ್ಯದಲ್ಲಿ ಒಂದು ಬಾಗಿಲು ಇಡಬೇಕು. ಆದರೆ ಎಲ್ಲಾ ಸಂದರ್ಭಗಳಲ್ಲೂ ಉತ್ತರ ಮತ್ತು ಪೂರ್ವ ಈಶಾನ್ಯಗಳಲ್ಲಿ ಒಂದೊಂದು ಬಾಗಿಲನ್ನು ಇಡುವುದು ಕಡ್ಡಾಯ.

ವಾಸ್ತು ಗಂಗಾಧರ್- ವಾಸ್ತು ತಜ್ಞರು

ಸಂಪರ್ಕ ಸಂಖ್ಯೆ 98450- 47209

ಸಂದರ್ಶನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts