ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸಂಚಾರ ಮತ್ತು ಸಂಯೋಗಗಳು ಜಗತ್ತಿನ ಮೇಲೂ ಮನುಕುಲದ ಮೇಲೂ ಪ್ರಭಾವ ಬೀರುತ್ತವೆ. 2026ರ ಅಕ್ಟೋಬರ್ 31ರಂದು ದೇವಗುರು ಬೃಹಸ್ಪತಿ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಅಲ್ಲಿ ಈಗಾಗಲೇ ಸಂಚರಿಸುತ್ತಿರುವ ಕೇತುವಿನೊಂದಿಗೆ ಗುರುವಿನ ಯುತಿ (ಸಂಯೋಗ) ಆಗುತ್ತದೆ. ಸಿಂಹ ರಾಶಿಯ ಅಧಿಪತಿ ರವಿ ಆಗಿದ್ದು, ಅಲ್ಲಿ ಈ ಗುರು- ಕೇತು ಯುತಿ ಆಗುತ್ತದೆ. ಈ ಯುತಿ ಎರಡು ಹಂತಗಳಲ್ಲಿ ನಡೆಯುತ್ತದೆ:
- ಮೊದಲ ಹಂತ (ಸಿಂಹ ರಾಶಿ): ಅಕ್ಟೋಬರ್ 31, 2026ರಿಂದ ಡಿಸೆಂಬರ್ 2026ರ (ಐದನೇ ತಾರೀಕಿನ ತನಕ) ಆರಂಭದವರೆಗೆ. ಕೇತು ಡಿಸೆಂಬರ್ ಆರಂಭದಲ್ಲಿ ಸಿಂಹದಿಂದ ಕರ್ಕಾಟಕಕ್ಕೆ ಸಾಗುತ್ತಾನೆ. ಆಗ ಯುತಿ ತಾತ್ಕಾಲಿಕವಾಗಿ ಕೊನೆಗೊಳ್ಳುತ್ತದೆ.
- ಎರಡನೇ ಹಂತ (ಕರ್ಕಾಟಕ ರಾಶಿ): ಜನವರಿ 24, 2027ರ ಸುಮಾರಿಗೆ ಗುರು ವಕ್ರಗತಿಯಲ್ಲಿ ಕರ್ಕಾಟಕಕ್ಕೆ ಮರಳುತ್ತಾನೆ. ಅಲ್ಲಿ ಆಗಲೇ ಇರುವ ಕೇತುವಿನೊಂದಿಗೆ ಯುತಿ ಮತ್ತೆ ಆರಂಭವಾಗಿ 2027ರ ಜೂನ್ ಅಂತ್ಯದವರೆಗೆ ಮುಂದುವರಿಯುತ್ತದೆ.
ಕಾಲಪುರುಷನ ಕ್ರಮದಲ್ಲಿ ಸಿಂಹ 5ನೇ ಮನೆ (ರವಿಯ ಕ್ಷೇತ್ರ), ಕರ್ಕಾಟಕ 4ನೇ ಮನೆ (ಚಂದ್ರನ ಕ್ಷೇತ್ರ). ಈ ಎರಡೂ ಹಂತಗಳ ವಿಶ್ಲೇಷಣೆ ಇಲ್ಲಿದೆ.
(ಗಮನಿಸಿ: ದಿನಾಂಕಗಳು ಪಂಚಾಂಗ ಗಣನೆಗೆ ಅನುಗುಣವಾಗಿ ಒಂದೆರಡು ದಿನ ವ್ಯತ್ಯಾಸವಾಗಬಹುದು. ನಿಖರ ದಿನಾಂಕಕ್ಕೆ ನಿಮ್ಮ ಸ್ಥಳೀಯ ಪಂಚಾಂಗವನ್ನು ನೋಡಿ.)
ಗುರು-ಕೇತು ಸಂಯೋಗದ ಸ್ವರೂಪ
ಬೃಹಸ್ಪತಿ ಜ್ಞಾನ, ಧರ್ಮ, ಕಾನೂನು, ನೈತಿಕತೆ ಮತ್ತು ವಿಸ್ತರಣೆಯ ಕಾರಕ. ಕೇತು ವೈರಾಗ್ಯ, ತೀವ್ರತೆ, ಅತೀಂದ್ರಿಯ ಅನುಭವ, ಭ್ರಮೆ ಮತ್ತು ಬೇರ್ಪಡುವಿಕೆಯ ಕಾರಕ.
ಈ ಸಂಯೋಗವನ್ನು ಸಾಮಾನ್ಯವಾಗಿ ಜ್ಞಾನ ಮತ್ತು ಮೋಕ್ಷ ಕಾರಕಗಳ ಸಂಯೋಗ ಎಂದು ಕರೆಯಲಾಗುತ್ತದೆ. ಇದು ಆಧ್ಯಾತ್ಮಿಕ ಅನ್ವೇಷಣೆ, ಆಳವಾದ ಚಿಂತನೆ ಮತ್ತು ಲೌಕಿಕ ವಿಷಯಗಳಿಂದ ವಿರಕ್ತಿಯನ್ನು ಸೂಚಿಸುತ್ತದೆ. ಅದೇ ಸಮಯದಲ್ಲಿ ಸಾಂಪ್ರದಾಯಿಕ ನಂಬಿಕೆಗಳ ಬಗ್ಗೆ ಪ್ರಶ್ನೆ, ಗೊಂದಲ ಮತ್ತು ದ್ವಂದ್ವಕ್ಕೂ ಕಾರಣವಾಗಲಿದೆ.
ಗುರು-ರಾಹು ಸೇರಿದಾಗ ಉಂಟಾಗುವ ಯೋಗವನ್ನು “ಗುರುಚಂಡಾಲ ಯೋಗ” ಎನ್ನುತ್ತಾರೆ. ಗುರು-ಕೇತು ಯುತಿಯನ್ನು ಆ ಹೆಸರಿನಿಂದ ಕರೆಯುವುದು ಸಾಂಪ್ರದಾಯಿಕವಾಗಿ ಸರಿಯಲ್ಲ. ಇನ್ನೊಂದು ಅಂಶ: ಕರ್ಕಾಟಕವು ಗುರುವಿನ ಉಚ್ಚ ರಾಶಿ, ಸಿಂಹ ಅವನಿಗೆ ಮಿತ್ರ ರಾಶಿ. ಹಾಗಾಗಿ ಗುರುವಿನ ಬಲ ಕೇತುವಿನ ಕಠಿಣ ಪ್ರಭಾವವನ್ನು ಸ್ವಲ್ಪ ಮಟ್ಟಿಗೆ ತಗ್ಗಿಸಬಲ್ಲದು.
ನಿಮ್ಮ ಜಾತಕದಲ್ಲಿ ಹಂಸ ಯೋಗವಿದೆಯೇ? ಸುಖ, ಶಾಂತಿ, ಅಖಂಡ ಭಾಗ್ಯದ ರಾಜಯೋಗ
ಜಗತ್ತಿನ ಮೇಲೆ ಒಟ್ಟಾರೆ ಪರಿಣಾಮ
- ಆರ್ಥಿಕ ಕ್ಷೇತ್ರ: ಷೇರು ಮಾರುಕಟ್ಟೆಗಳಲ್ಲಿ ಹಠಾತ್ ಏರಿಳಿತ ಸಾಧ್ಯ. ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಗಳು ಕಠಿಣ ನಿಯಮಗಳನ್ನು ಅಥವಾ ನಂಬಿಕೆಯ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ.
- ಧರ್ಮ, ಕಾನೂನು, ಶಿಕ್ಷಣ: ಧಾರ್ಮಿಕ ಸಂಸ್ಥೆಗಳು, ನ್ಯಾಯಾಂಗ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ವಿವಾದ ಅಥವಾ ನೈತಿಕ ಪ್ರಶ್ನೆಗಳು ತಲೆದೋರಲಿದೆ. ಕಾನೂನುಗಳಲ್ಲಿ ಕಠಿಣ ತಿದ್ದುಪಡಿಗಳಾಗಲಿವೆ.
- ವಿಜ್ಞಾನ ಮತ್ತು ತಂತ್ರಜ್ಞಾನ: ಹೊಸ ಅನ್ವೇಷಣೆಗಳ ಜೊತೆಗೆ ಸೈಬರ್ ಭದ್ರತೆ, ಕೃತಕ ಬುದ್ಧಿಮತ್ತೆ (AI) ಮತ್ತು ರಹಸ್ಯ ತಂತ್ರಜ್ಞಾನಗಳ ದುರ್ಬಳಕೆಯ ಬಗ್ಗೆ ಕಳವಳ ಹೆಚ್ಚಲಿದೆ.
ಸಿಂಹ ರಾಶಿಯ ಹಂತ (ಅಕ್ಟೋಬರ್ 31 – ಡಿಸೆಂಬರ್ ಆರಂಭ, 2026)
ಸಿಂಹ ಸೂರ್ಯನ ಆಧಿಪತ್ಯದ ಅಗ್ನಿ ತತ್ವದ ರಾಶಿ. ಇದು ಅಧಿಕಾರ, ನಾಯಕತ್ವ, ರಾಜಕೀಯ ಮತ್ತು ಸರ್ಕಾರವನ್ನು ಸೂಚಿಸುತ್ತದೆ.
- ರಾಜಕೀಯ ನಾಯಕತ್ವ: ಪ್ರಮುಖ ರಾಷ್ಟ್ರಗಳ ನಾಯಕರು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ. ಅವರ ಜನಪ್ರಿಯತೆಗೆ ಪರೀಕ್ಷೆ ಎದುರಾಗಲಿದೆ ಅಥವಾ ನಾಯಕತ್ವ ಬದಲಾವಣೆಗಳು ಆಗುತ್ತವೆ.
- ಅಹಂ ಮತ್ತು ಅಧಿಕಾರದ ಸಂಘರ್ಷ: ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮತ್ತು ಉದ್ವಿಗ್ನತೆ ಹೆಚ್ಚಲಿದೆ.
- ಮನರಂಜನೆ ಮತ್ತು ಮಾಧ್ಯಮ: ಸಿನಿಮಾ, ಕ್ರೀಡೆ, ಮಾಧ್ಯಮ ಕ್ಷೇತ್ರಗಳ ಕೆಲವು ಪ್ರಮುಖರಿಗೆ ಕಾನೂನು ಅಥವಾ ನೈತಿಕ ತೊಡಕುಗಳು ಎದುರಾಗಲಿವೆ.
ಕರ್ಕಾಟಕ ರಾಶಿಯ ಹಂತ (ಜನವರಿ – ಜೂನ್ 2027)
ಕರ್ಕಾಟಕ ಚಂದ್ರನ ಆಧಿಪತ್ಯದ ಜಲ ತತ್ವದ ರಾಶಿ. ಇದು ಜನಸಾಮಾನ್ಯರು, ಮನಸ್ಸು, ಆಂತರಿಕ ಭದ್ರತೆ, ಕೃಷಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಸೂಚಿಸುತ್ತದೆ.
- ಸಾರ್ವಜನಿಕ ಆರೋಗ್ಯ ಮತ್ತು ಭಾವನೆಗಳು: ಜನರಲ್ಲಿ ಆತಂಕ ಮತ್ತು ಅಸುರಕ್ಷತೆಯ ಭಾವನೆ ಹೆಚ್ಚಲಿದೆ. ಆರೋಗ್ಯ ಕ್ಷೇತ್ರ ಮತ್ತು ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಹೆಚ್ಚಿನ ಎಚ್ಚರ ಬೇಕು.
- ಕೃಷಿ ಮತ್ತು ಆಹಾರ: ಹವಾಮಾನ ವೈಪರೀತ್ಯ, ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಕೃಷಿ ಉತ್ಪನ್ನಗಳ ಬೆಲೆಯಲ್ಲಿ ವ್ಯತ್ಯಾಸವಾಗಲಿವೆ. ಆಹಾರ ಭದ್ರತೆಯ ಚರ್ಚೆ ಮುನ್ನೆಲೆಗೆ ಬರಲಿದೆ.
- ಆಂತರಿಕ ಭದ್ರತೆ: ದೇಶಗಳೊಳಗೆ ಆಂತರಿಕ ಕಲಹ, ಪ್ರತಿಭಟನೆ ಅಥವಾ ಗಡಿ ಭಾಗಗಳಲ್ಲಿ ಉದ್ವಿಗ್ನತೆ ಉಂಟಾಗಲಿವೆ.
ಸಿಂಹ ರಾಶಿಯ ಹಂತದಲ್ಲಿ ದ್ವಾದಶ ರಾಶಿಗಳ ಫಲ
(ಚಂದ್ರ ರಾಶಿಯನ್ನು ಆಧರಿಸಿದ ಸಾಮಾನ್ಯ ಗೋಚಾರ ಫಲ)
- ಮೇಷ: ಮಕ್ಕಳು ಅಥವಾ ವಿದ್ಯಾಭ್ಯಾಸದ ವಿಷಯದಲ್ಲಿ ಕೆಲವು ಚಿಂತೆಗಳು ಎದುರಾಗಲಿವೆ. ಸಟ್ಟಾ ವ್ಯವಹಾರದ ಹೂಡಿಕೆಯಲ್ಲಿ ನಷ್ಟವಾಗದಂತೆ ಎಚ್ಚರ ವಹಿಸಿ.
- ವೃಷಭ: ಭೂಮಿ, ವಾಹನ ಮತ್ತು ತಾಯಿಯ ಆರೋಗ್ಯದ ವಿಚಾರದಲ್ಲಿ ಕಿರಿಕಿರಿ ಉಂಟಾಗಲಿದೆ. ಕುಟುಂಬದಲ್ಲಿ ಅನಗತ್ಯ ವಾಗ್ವಾದ ಬೇಡ.
- ಮಿಥುನ: ಧೈರ್ಯ, ಸಾಹಸ ಹೆಚ್ಚಿದರೂ ಮಾತಿನಲ್ಲಿ ಸಂಯಮ ಇರಲಿ. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಬಾರದಂತೆ ನೋಡಿಕೊಳ್ಳಿ.
- ಕರ್ಕಾಟಕ: ಹಣಕಾಸು ಮತ್ತು ಮಾತಿನ ಮೇಲೆ ಹತೋಟಿ ಅಗತ್ಯ. ಹಣದ ವಿಷಯದಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸಿ.
- ಸಿಂಹ: ತಮ್ಮ ರಾಶಿಯಲ್ಲೇ ಯುತಿ ಇರುವುದರಿಂದ ಆರೋಗ್ಯದ ಕಡೆ ಗಮನ ಕೊಡಿ. ಆತ್ಮವಿಶ್ವಾಸದ ಕೊರತೆ ಅಥವಾ ಅತಿಯಾದ ಅಹಂನಿಂದ ದೂರವಿರಿ.
- ಕನ್ಯಾ: ಅನಗತ್ಯ ಖರ್ಚು ಹೆಚ್ಚಲಿದೆ. ದೂರ ಪ್ರಯಾಣದಲ್ಲಿ ಆರೋಗ್ಯ ಮತ್ತು ಲಗೇಜ್ ಬಗ್ಗೆ ಎಚ್ಚರ ಇರಲಿ.
- ತುಲಾ: ಹಿರಿಯರ ಬೆಂಬಲ ಸಿಕ್ಕರೂ ಸ್ನೇಹಿತರ ವಲಯದಲ್ಲಿ ತಪ್ಪು ತಿಳಿವಳಿಕೆ ಮೂಡಬಹುದು. ಆರ್ಥಿಕ ಯೋಜನೆಗಳಲ್ಲಿ ಜಾಗರೂಕರಾಗಿರಿ.
- ವೃಶ್ಚಿಕ: ವೃತ್ತಿಜೀವನದಲ್ಲಿ ಮೇಲಧಿಕಾರಿಗಳೊಂದಿಗೆ ಸಮಾಧಾನದಿಂದ ವರ್ತಿಸಿ. ಕೆಲಸದ ಒತ್ತಡ ಹೆಚ್ಚಲಿದೆ.
- ಧನು: ಅದೃಷ್ಟದ ಜೊತೆಗೆ ಮಾನಸಿಕ ಅಶಾಂತಿಯೂ ಕಾಡಲಿದೆ. ದೂರ ದೇಶದ ಪ್ರಯಾಣದಲ್ಲಿ ತೊಂದರೆಗಳು ಎದುರಾಗಲಿವೆ.
- ಮಕರ: ಅನಿರೀಕ್ಷಿತ ಖರ್ಚು ಮತ್ತು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ.
- ಕುಂಭ: ವೈವಾಹಿಕ ಜೀವನ ಮತ್ತು ಪಾಲುದಾರಿಕೆ ವ್ಯವಹಾರಗಳಲ್ಲಿ ಹೊಂದಾಣಿಕೆ ಅತ್ಯಗತ್ಯ. ಅನಗತ್ಯ ವಾದ-ವಿವಾದ ತಪ್ಪಿಸಿ.
- ಮೀನ: ಶತ್ರುಗಳ ಕಾಟವಿದ್ದರೂ ಧೈರ್ಯದಿಂದ ಎದುರಿಸುವಿರಿ. ಸಾಲ ಮತ್ತು ದೈನಂದಿನ ಆರೋಗ್ಯದ ಬಗ್ಗೆ ಎಚ್ಚರ ಇರಲಿ.
ಜಾತಕದಲ್ಲಿ ಶಕಟ ಯೋಗವಿದ್ದರೆ ಜೀವನ ಬಂಡಿ ಏರಿಳಿತದ ಹಾದಿಯೇ? ಇಲ್ಲಿದೆ ಸಮಗ್ರ ಮಾಹಿತಿ ಮತ್ತು ಪರಿಹಾರ!
ಕರ್ಕಾಟಕ ರಾಶಿಯ ಹಂತದಲ್ಲಿ ದ್ವಾದಶ ರಾಶಿಗಳ ಫಲ
- ಮೇಷ: ಮನೆಯ ವಾತಾವರಣ ಮತ್ತು ಖರ್ಚು-ವೆಚ್ಚಗಳ ಮೇಲೆ ಹಿಡಿತ ಇರಲಿ. ಮನಸ್ಸಿನ ನೆಮ್ಮದಿಗೆ ಧ್ಯಾನ ಉತ್ತಮ.
- ವೃಷಭ: ನಿಮ್ಮ ಧೈರ್ಯ ಮತ್ತು ಪರಿಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಸಣ್ಣ ಪ್ರಯಾಣಗಳಿಂದ ಅನುಕೂಲವಾಗುತ್ತದೆ.
- ಮಿಥುನ: ಕುಟುಂಬದ ಆರ್ಥಿಕ ನಿರ್ಧಾರಗಳಲ್ಲಿ ಎಚ್ಚರ ಇರಲಿ. ಮಾತಿನ ಚಾತುರ್ಯದಿಂದ ಕೆಲವು ಕೆಲಸಗಳನ್ನು ಸಾಧಿಸುವಿರಿ.
- ಕರ್ಕಾಟಕ: ನಿಮ್ಮ ರಾಶಿಯಲ್ಲೇ ಗುರು-ಕೇತು ಇರುವುದರಿಂದ ಆರೋಗ್ಯ ಮತ್ತು ವೈಯಕ್ತಿಕ ನಿರ್ಧಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ.
- ಸಿಂಹ: ದೂರ ಪ್ರಯಾಣ ಅಥವಾ ವಿದೇಶಿ ಮೂಲಗಳಿಂದ ಖರ್ಚು ಹೆಚ್ಚಲಿದೆ. ನಿದ್ರಾಹೀನತೆ ಕಾಡಲಿದೆ.
- ಕನ್ಯಾ: ಆರ್ಥಿಕ ಲಾಭ ಬಂದರೂ ಹೂಡಿಕೆಗೆ ಮುನ್ನ ತಜ್ಞರ ಸಲಹೆ ಪಡೆಯಿರಿ. ಸ್ನೇಹಿತರೊಂದಿಗೆ ವೈಮನಸ್ಯ ಬೇಡ.
- ತುಲಾ: ಉದ್ಯೋಗದಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತವೆ. ಸಮಾಜದಲ್ಲಿ ಕೀರ್ತಿ-ಪ್ರತಿಷ್ಠೆ ಹೆಚ್ಚುತ್ತದೆ.
- ವೃಶ್ಚಿಕ: ಧಾರ್ಮಿಕ ಕಾರ್ಯಗಳಲ್ಲಿ ಒಲವು ಹೆಚ್ಚುತ್ತದೆ. ಗುರುಗಳ ಅಥವಾ ಹಿರಿಯರ ಮಾರ್ಗದರ್ಶನದಿಂದ ಸಂಕಷ್ಟಗಳು ದೂರಾಗುತ್ತವೆ.
- ಧನು: ಆರೋಗ್ಯ ಮತ್ತು ಅನಿರೀಕ್ಷಿತ ಧನನಷ್ಟದ ಬಗ್ಗೆ ಎಚ್ಚರ ಇರಲಿ. ಹೊಸ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಚೆನ್ನಾಗಿ ಯೋಚಿಸಿ.
- ಮಕರ: ಸಂಗಾತಿಯೊಂದಿಗೆ ಹೊಂದಾಣಿಕೆ ಮುಖ್ಯ. ಪಾಲುದಾರಿಕೆ ವ್ಯವಹಾರಗಳಲ್ಲಿ ಪಾರದರ್ಶಕತೆ ಇರಲಿ.
- ಕುಂಭ: ಶತ್ರುಗಳ ಸಂಚು ವಿಫಲವಾಗುತ್ತದೆ. ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಜಾಗರೂಕರಾಗಿರಿ.
- ಮೀನ: ಸೃಜನಶೀಲ ಕ್ಷೇತ್ರಗಳಲ್ಲಿರುವವರಿಗೆ ಉತ್ತಮ ಅವಕಾಶಗಳು ಸಿಗುತ್ತವೆ. ಮಕ್ಕಳ ಆರೋಗ್ಯದ ಬಗ್ಗೆ ಗಮನವಿರಲಿ.
ಈ ಫಲಗಳು ಕೇವಲ ಚಂದ್ರ ರಾಶಿಯ ಆಧಾರದ ಸಾಮಾನ್ಯ ಸೂಚನೆಗಳು. ವೈಯಕ್ತಿಕ ಜಾತಕ ಮತ್ತು ದಶಾ–ಭುಕ್ತಿಯ ಆಧಾರದ ಮೇಲೆ ಫಲ ಬದಲಾಗುತ್ತದೆ.
ದೋಷ ಪರಿಹಾರ ಮತ್ತು ಸಾಂಪ್ರದಾಯಿಕ ಉಪಾಯಗಳು
ಗುರು-ಕೇತು ಯುತಿಯಿಂದ ಮಾನಸಿಕ ಅಸ್ಥಿರತೆ ಮತ್ತು ಅಡೆತಡೆಗಳು ಉಂಟಾಗುತ್ತವೆ ಎಂಬ ನಂಬಿಕೆಯಿದ್ದು, ಅವುಗಳ ಪರಿಹಾರಕ್ಕೆ ಸಂಪ್ರದಾಯದಲ್ಲಿ ಈ ಕ್ರಮಗಳನ್ನು ಸೂಚಿಸಲಾಗಿದೆ:
- ಉಪಾಸನೆ ಮತ್ತು ಜಪ: ಪ್ರತಿದಿನ ಬೆಳಗ್ಗೆ ಗುರು ಮತ್ತು ಕೇತುವಿನ ಪ್ರೀತ್ಯರ್ಥ ಮಂತ್ರ ಜಪಿಸಿ. ಗುರುವಾರ ದಕ್ಷಿಣಾಮೂರ್ತಿ, ಶ್ರೀ ರಾಘವೇಂದ್ರ ಸ್ವಾಮಿಗಳು ಅಥವಾ ಗುರುಗಳ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿ.
- ರುದ್ರಾಭಿಷೇಕ ಮತ್ತು ಹೋಮ: ಶಿವಾರಾಧನೆ ಕೇತು ಮತ್ತು ಗುರುವಿನ ದುಷ್ಪ್ರಭಾವವನ್ನು ತಗ್ಗಿಸುತ್ತದೆ ಎಂಬ ನಂಬಿಕೆಯಿದೆ. ಸೋಮವಾರ ಅಥವಾ ಪ್ರದೋಷ ಕಾಲದಲ್ಲಿ ಶಿವನಿಗೆ ಬಿಲ್ವಪತ್ರೆ ಅರ್ಚನೆ ಮತ್ತು ಜಲಾಭಿಷೇಕ ಮಾಡಿಸುವುದು ಒಳ್ಳೆಯದು.
- ದಾನ: ಕಡಲೆಬೇಳೆ, ಅರಿಶಿನ, ಹಳದಿ ಬಟ್ಟೆ ಮುಂತಾದ ಹಳದಿ ಬಣ್ಣದ ವಸ್ತುಗಳನ್ನು ಅರ್ಹರಿಗೆ ಅಥವಾ ಗುರುಗಳಿಗೆ ದಾನ ಮಾಡುವುದು ಗುರುವಿನ ಬಲ ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಕೇತುವಿನ ಪ್ರಭಾವ ತಗ್ಗಿಸಲು ಕಪ್ಪು-ಬಿಳುಪು ಮಿಶ್ರಿತ ಹೊದಿಕೆ ಅಥವಾ ಬಟ್ಟೆಯನ್ನು ಬಡವರಿಗೆ ನೀಡಬಹುದು.
- ಹಿರಿಯರು ಮತ್ತು ಗುರುಗಳ ಗೌರವ: ಗುರು ಜ್ಞಾನ ಮತ್ತು ಹಿರಿಯರ ಸಂಕೇತ. ತಂದೆ-ತಾಯಿ, ಗುರುಗಳು ಮತ್ತು ಹಿರಿಯರನ್ನು ಗೌರವಿಸಿ ಅವರ ಆಶೀರ್ವಾದ ಪಡೆಯುವುದು ಅತ್ಯಂತ ಮುಖ್ಯ ಪರಿಹಾರ.
- ಪಠಣ: ವಿಷ್ಣು ಸಹಸ್ರನಾಮ, ಗಣೇಶ ಸ್ತೋತ್ರ ಅಥವಾ ಮಹಾಮೃತ್ಯುಂಜಯ ಮಂತ್ರವನ್ನು ನಿಯಮಿತವಾಗಿ ಪಠಿಸುವುದರಿಂದ ಏಕಾಗ್ರತೆ ಹೆಚ್ಚಿ ಆತಂಕ ಮತ್ತು ನಕಾರಾತ್ಮಕ ಆಲೋಚನೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.
27 ನಕ್ಷತ್ರಗಳ ಸ್ವಭಾವ, ಗುಣಲಕ್ಷಣಗಳು: ನಿಮ್ಮ ನಕ್ಷತ್ರದ ಪ್ರಭಾವ ಹೇಗಿದೆ ತಿಳಿಯಿರಿ
ಕೊನೆಮಾತು:
ಈ ಹಿಂದೆ ಧನುಸ್ಸು ರಾಶಿಯಲ್ಲಿ ಗುರು– ಕೇತು ಸಂಯೋಗ ಆಗಿತ್ತು. ಆ ವೇಳೆ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಮುತ್ಸದ್ದಿಗಳು, ರಾಜಕೀಯ ನೇತಾರರು, ಪ್ರಮುಖ ನಾಯಕರ ನಿರ್ಗಮನ (ತೀರಿಕೊಂಡರು) ಆಯಿತು. ಅದರಲ್ಲೂ ಈ ಬಾರಿ ಗುರುವಿನ ಅತಿಚಾರ ಸಂಚಾರ ಇರುವುದರಿಂದ ಈ ರೀತಿಯ ಪರಿಣಾಮ ಮತ್ತೂ ತೀವ್ರ ಹಾಗೂ ಭಯಾನಕವಾಗಿಯೂ ಆಗುತ್ತದೆ. ಅಧ್ಯಯನಾಸಕ್ತರು ಈ ಬಗ್ಗೆ ಖಂಡಿತವಾಗಿಯೂ ವಿಶ್ಲೇಷಣೆ ಮಾಡಬಹುದು.
ಲೇಖನ: ಶ್ರೀನಿವಾಸ ಮಠ









