Sri Gurubhyo Logo

Sade Sati Shani: ಸಾಡೇಸಾತ್ ಶನಿ ಎಂದರೇನು, ಈ ಅವಧಿಯಲ್ಲಿ ತೆಗೆದುಕೊಳ್ಳಬೇಕಾದ 7 ಮುಂಜಾಗ್ರತೆಗಳೇನು?

Sade sati
ಸಾಂದರ್ಭಿಕ ಚಿತ್ರ

ಎಲ್ಲ ಭಗವದ್ಭಕ್ತರಿಗೂ ನಮಸ್ಕಾರ. ಈ ಲೇಖನದಲ್ಲಿ ನಿಮಗೆ ಸಾಡೇಸಾತ್ ಅಥವಾ ಏಳರಾಟ ಶನಿ ಅಂದರೇನು, ಆ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಗಳೇನು ಎಂಬ ಬಗ್ಗೆ ತಿಳಿಸಿಕೊಡಲಾಗುವುದು. ಇದಕ್ಕೆ ಮುಖ್ಯವಾಗಿ ಓದುಗರಿಗೆ ತಮ್ಮ ಜನ್ಮ ನಕ್ಷತ್ರ, ರಾಶಿ ತಿಳಿದಿರಬೇಕು. ಆದ್ದರಿಂದ ನಿಮ್ಮ ಹುಟ್ಟಿದ ದಿನಾಂಕ, ಸಮಯ, ಹುಟ್ಟಿದ ಸ್ಥಳದ ಆಧಾರದಲ್ಲಿ ಜಾತಕವೊಂದನ್ನು ಈಗಾಗಲೇ ಮಾಡಿಸಿಟ್ಟುಕೊಂಡಿದ್ದಲ್ಲಿ ಉತ್ತಮ. ಒಂದು ವೇಳೆ ಜಾತಕ ಇಲ್ಲ ಎಂದಾದಲ್ಲಿ ಈಗಲೇ ಜನ್ಮ ಜಾತಕವನ್ನು ಮಾಡಿಸಿಟ್ಟುಕೊಳ್ಳಿ. ಲೇಖನದ ವೇಳೆ ಪ್ರಸ್ತಾವ ಮಾಡುವ ಗ್ರಹ ಸ್ಥಿತಿ, ರಾಶಿ- ನಕ್ಷತ್ರದ ಬಗ್ಗೆ ಓದುವಾಗ ಮಾಹಿತಿ ತಿಳಿಯಲಿಕ್ಕೆ ಹಾಗೂ ಮುಂಜಾಗ್ರತೆ ತೆಗೆದುಕೊಳ್ಳಲಿಕ್ಕೆ ಅನುಕೂಲ ಆಗಲಿದೆ.

ಸಾಡೇಸಾತ್ ಅಥವಾ ಏಳರಾಟ ಶನಿ ಎಂದರೇನು?

ಯಾವುದೇ ವ್ಯಕ್ತಿಯ ಜನ್ಮ ಜಾತಕದಲ್ಲಿ ಚಂದ್ರ ಎಲ್ಲಿರುತ್ತದೋ ಅದನ್ನು ಜನ್ಮ ರಾಶಿ ಎನ್ನಲಾಗುತ್ತದೆ. ಆ ರಾಶಿಗೆ ಹನ್ನೆರಡನೇ ಮನೆ, ಒಂದನೇ ಮನೆ (ಜನ್ಮ ರಾಶಿ) ಹಾಗೂ ಎರಡನೇ ಮನೆಯಲ್ಲಿ ಶನಿ ಗ್ರಹದ ಸಂಚಾರ ಆಗುವಾಗ ಸಾಡೇಸಾತ್ ಅಥವಾ ಏಳರಾಟ ಶನಿ ಎಂದು ಕರೆಯಲಾಗುತ್ತದೆ. ಸಾಡೇಸಾತ್ ಎಂಬುದು ಹಿಂದಿ ಪದ. ಹೀಗೆ ಈ ಪದವನ್ನು ಬಳಸುವುದರ ಹಿಂದೆ ಒಂದು ಲೆಕ್ಕಾಚಾರ ಇದೆ. ಅದೇನೆಂದರೆ, ಶನಿ ಗ್ರಹವು ಒಂದು ರಾಶಿಯಲ್ಲಿ ಎರಡೂವರೆ ವರ್ಷ ಕಾಲ ಸಂಚಾರ ಮಾಡುತ್ತದೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಒಂದು ರಾಶಿಯಲ್ಲಿ ಅತಿ ದೀರ್ಘ ಕಾಲ ಇರುವ ಗ್ರಹ ಸಹ ಶನಿಯೇ. ಇದನ್ನು ಮಂದ ಗ್ರಹ, ಅಂದರೆ ನಿಧಾನಕ್ಕೆ ಚಲಿಸುವಂಥ ಗ್ರಹ ಅಂತಲೂ ಕರೆಯಲಾಗುತ್ತದೆ.

ಹೀಗೆ ಒಂದು ರಾಶಿಯಲ್ಲಿ ಎರಡೂವರೆ ವರ್ಷ ಅಂದರೆ, ಹನ್ನೆರಡು- ಒಂದು ಮತ್ತು ಎರಡನೇ ಮನೆಯಲ್ಲಿ ಶನಿ ಸಂಚರಿಸುವಾಗ ಒಟ್ಟು ಏಳೂವರೆ ವರ್ಷ ಕಾಲ ಆಗುತ್ತದೆ. ಇದನ್ನು ಸಾಡೇಸಾತ್ ಅಥವಾ ಏಳರಾಟ ಶನಿ ಎನ್ನಲಾಗುತ್ತದೆ. ಹೀಗೆ ಮೂರು ಹಂತಗಳಲ್ಲಿ ಶನಿ ಗ್ರಹ ಮನುಷ್ಯರಿಗೆ ಪರೀಕ್ಷೆಗಳು, ಸವಾಲು, ಕಷ್ಟಗಳನ್ನು ತಂದೊಡ್ಡುತ್ತದೆ. ಅದೇ ಸಂದರ್ಭದಲ್ಲಿ ಆ ವ್ಯಕ್ತಿಯಲ್ಲಿ ದೈವ ಭಕ್ತಿಯನ್ನು ಮತ್ತು ಜೀವನದ ಪಾಠಗಳನ್ನು ಕಲಿಸುತ್ತದೆ. ಇನ್ನು ಶನೈಶ್ಚರ ಅಂದರೆ ನ್ಯಾಯದ ತಕ್ಕಡಿ ಇದ್ದಂತೆ. ಈ ಅವಧಿಯಲ್ಲಿ ಒಬ್ಬ ವ್ಯಕ್ತಿ ಅದೆಷ್ಟು ಪ್ರಾಮಾಣಿಕ ನ್ಯಾಯ ತತ್ಪರರಾಗಿರುತ್ತಾರೋ ಅಷ್ಟು ಪ್ರಮಾಣದಲ್ಲಿ ಪರಿಣಾಮವು ಸೌಮ್ಯವಾಗಿ ಇರುತ್ತದೆ.

ಸಾಮಾನ್ಯವಾಗಿ ಸಾಡೇಸಾತ್‌ನ ಆರಂಭದ ಹಂತದಲ್ಲೇ ಶನೈಶ್ಚರ ಶಾಂತಿ ಮಾಡಿಸಿಕೊಳ್ಳುವುದಕ್ಕೆ ಸಲಹೆ ನೀಡಲಾಗುತ್ತದೆ. ಇದರ ಜತೆಗೆ ಈ ಅವಧಿಯ ಉದ್ದಕ್ಕೂ ಈಶ್ವರ, ಆಂಜನೇಯನ ಆರಾಧನೆ ಮಾಡುವಂತೆ ಸೂಚಿಸಲಾಗುತ್ತದೆ. ಆದರೆ ಇದರ ಜತೆಗೆ ಲೋಕಾರೂಢಿಯಲ್ಲಿ ಕೆಲವು ಎಚ್ಚರಿಕೆಗಳನ್ನು ಪಾಲಿಸಿದರೆ ಉತ್ತಮ. ಏಳರಾಟ ಶನಿಯ ಕಾಲದಲ್ಲಿ ಈ ಏಳು ಸಮಸ್ಯೆಗಳು ಎದುರಾಗಬಹುದು. ಇದರಿಂದ ದೂರ ಹೋಗುವ ಹಾಗೆ ಅಥವಾ ಸಾಧ್ಯವಾದಷ್ಟು ಸಮಸ್ಯೆ ದೊಡ್ಡದಾಗದಿರುವಂತೆ ನೋಡಿಕೊಳ್ಳಿ. ಇವಿಷ್ಟು ವಿಚಾರದಲ್ಲಿ ಎಚ್ಚರಿಕೆ ವಹಿಸಿ, ಕಣ್ಣಿಗೆ ಬಂದ ಆಪತ್ತು ರೆಪ್ಪೆಯಲ್ಲಿ ಹೋಯಿತು ಎಂದು ದೊಡ್ಡ ದೊಡ್ಡ ಅಪಾಯಗಳಿಂದ ತಪ್ಪಿಸಿಕೊಳ್ಳಬಹುದು.

ಎಚ್ಚರಿಕೆ- ಒಂದು

ಸಾಡೇಸಾತ್ ಅವಧಿಯಲ್ಲಿ ಕಡಿಮೆ ಬಡ್ಡಿಗೆ ಅಥವಾ ಬಡ್ಡಿಯೇ ಇಲ್ಲದಂತೆ ಹಣ ಕೊಡುವುದಾಗಿ ಜನ ಮುಂದೆ ಬರುತ್ತಾರೆ. ಅಷ್ಟೇ ಅಲ್ಲ, ಅಂಥ ಸಂಸ್ಥೆಗಳು ಮುಂದೆ ಬರಬಹುದು. ಒಂದು ವರ್ಷ ಬಿಟ್ಟು ಕೊಟ್ಟರೂ ಪರವಾಗಿಲ್ಲ ಅಂದಿದ್ದಾರೆ ಸಾಲ ತೆಗೆದುಕೊಂಡು ಬಿಡೋಣ ಎಂದೆನಿಸುತ್ತದೆ. ಹೀಗೆ ಏನೇ ಅಂದರೂ ಯಾವ ಕಾರಣಕ್ಕೂ ಸಾಲವನ್ನು ಮಾಡದಿರಿ. ಆಪ್ತ ಸ್ನೇಹಿತರು, ಸಂಬಂಧಿಕರು, ಉದ್ಯೋಗ ಸ್ಥಳ ಹೀಗೆ ವಿವಿಧ ಕಡೆಗಳಿಂದ ಸಾಲ ತೆಗೆದುಕೊಳ್ಳುವಂತೆ ನಿಮಗೆ ಅವಕಾಶಗಳು ಬರುತ್ತದೆ. ಆದರೆ ಯಾವುದೇ ಕಾರಣಕ್ಕೂ ಅನಿವಾರ್ಯ ಅಲ್ಲದ ಹೊರತು ಸಾಲವನ್ನು ಮಾಡಬೇಡಿ.

ಎಚ್ಚರಿಕೆ- ಎರಡು

ಇನ್ನು ನಿಮ್ಮ ಬಳಿಯೇ ಆಪತ್ಕಾಲಕ್ಕೆ ಅಂತ ಒಂದಿಷ್ಟು ಹಣ ಇಟ್ಟುಕೊಂಡಿದ್ದೀರಿ ಅಥವಾ ಒಡವೆ ಇದೆ, ಆಸ್ತಿ ಮಾರಿದ್ದು ಅಥವಾ ಮನೆಯಲ್ಲಿ ಕೊಟ್ಟಿರುವ ಹಣ ಇದೆ ಅಂತಾದರೆ ಯಾರಿಗೂ ಹೆಚ್ಚಿನ ಬಡ್ಡಿ ಆಸೆಗೋ ಅಥವಾ ಅವರು ತೋರಿಸುವ ಮತ್ಯಾವುದೇ ಆಮಿಷಕ್ಕೋ ಪಿಗ್ಗಿ ಬಿದ್ದು, ಕೈಯಲ್ಲಿನ ಹಣ ನೀಡಬೇಡಿ. ಬ್ಯಾಂಕ್‌ಗಿಂತ ಹೆಚ್ಚಿನ ಬಡ್ಡಿ, ಅವರು ತಮ್ಮದೇ ಮನೆಯ ಅಥವಾ ಬೇರಾವುದೋ ಆಸ್ತಿಯ ಪತ್ರ ನೀಡುತ್ತಾರಂತೆ ಅಥವಾ ಅವರಿಗೆ ಬೇಕಿರುವುದು ಕೇವಲ ಒಂದೆರಡು ತಿಂಗಳಿಗೆ ಮಾತ್ರವಂತೆ. ಹೀಗೆ ಏನೇ ಕಾರಣಗಳು ನಿಮಗೆ ಎದುರಾದರೂ ನಿಮ್ಮ ಹಣವನ್ನು ಮತ್ತೊಬ್ಬರಿಗೆ ನೀಡಬೇಡಿ.

ಎಚ್ಚರಿಕೆ- ಮೂರು

ನನ್ನ ಸಾಮರ್ಥ್ಯಕ್ಕೆ ಈಗ ಕೆಲಸ ಮಾಡುತ್ತಿರುವ ಸಂಬಳಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ದುಡಿಯುವ ತಾಕತ್ತು ಇದೆ. ಆದ್ದರಿಂದ ಇರುವ ಕೆಲಸ ಬಿಟ್ಟು ಸ್ವಂತ ಬಿಜಿನೆಸ್ ಮಾಡ್ತೀನಿ ಅಂತ ಹೊರಡಬೇಡಿ. ಇನ್ನೂ ಮುಂದುವರಿದು ಹೇಳುವುದಾದರೆ, ಈ ಕೆಲಸ ಬಿಟ್ಟು ಬಂದ ತಕ್ಷಣವೇ ಬೇರೆ ದೇಶದಲ್ಲಿ ಅಥವಾ ಬಹಳ ಒಳ್ಳೆ ಕಂಪನಿಯಲ್ಲಿ, ಭಾರೀ ಸಂಬಳದೊಂದಿಗೆ ಕೆಲಸ ಕೊಡಿಸುವುದಾಗಿ ಒಬ್ಬ ದೊಡ್ಡ ಮನುಷ್ಯ ಹೇಳಿದ್ದಾರೆ ಎಂಬ ಕಾರಣಕ್ಕೆ ಹೊಸ ಕೆಲಸ ಖಾತ್ರಿ ಆಗುವ ಮುನ್ನವೇ ಇರುವ ಕೆಲಸ ಬಿಡಬೇಡಿ. ಈ ಅವಧಿಯಲ್ಲಿ ಆಗಾಗ ಅತಿ ಆತ್ಮವಿಶ್ವಾಸ ಮೂಡುತ್ತದೆ.

ಎಚ್ಚರಿಕೆ- ನಾಲ್ಕು

ಈ ಎಚ್ಚರಿಕೆ ಸಂಬಂಧಗಳು, ಸ್ನೇಹಗಳ ವಿಚಾರಕ್ಕೆ. ಪುರುಷರಾದರೆ ಸ್ತ್ರೀಯರ ವಿಚಾರದಲ್ಲಿ, ಇನ್ನು ಸ್ತ್ರೀಯರಾದರೆ ಪುರುಷರ ವಿಚಾರದಲ್ಲಿ ವಿಪರೀತ ಆಸಕ್ತಿ ತೋರಬೇಡಿ. ನಿಮಗೆ ಇದು ಸಹಾಯ ಎಂದು ಎನಿಸುತ್ತದೆ. ಆದರೆ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಅಥವಾ ಅವರಿಗೇನೋ ನಾನು ನೆರವಾಗಿ ಬಿಡ್ತೀನಿ ಅನ್ನೋ ಭ್ರಮೆಗಳು ಬೇಡ. ಏಕೆಂದರೆ ನಿಮ್ಮ ಉದ್ದೇಶಕ್ಕಿಂತ ಹೆಚ್ಚಾಗಿ ಅಪಪ್ರಚಾರಕ್ಕೆ ಆಹಾರ ಆಗುತ್ತೀರಿ. ಇದರಿಂದ ಸಾಂಸಾರಿಕವಾಗಿ ಹಾಗೂ ಸಾಮಾಜಿಕವಾಗಿ ನಿಂದನೆಗೆ ಗುರಿ ಆಗುತ್ತೀರಿ.

ಎಚ್ಚರಿಕೆ – ಐದು

ಈಗಿನ ಎಚ್ಚರಿಕೆ ಮುಖ್ಯವಾಗಿ ಈಗಾಗಲೇ ವ್ಯವಹಾರ- ಉದ್ಯಮವನ್ನು ಮಾಡುತ್ತಿರುವವರಿಗಾಗಿ. ನೀವು ಈಗಾಗಲೇ ಒಂದು ವ್ಯವಹಾರ ಮಾಡುತ್ತಿದ್ದೀರಿ ಅಂತಾದಲ್ಲಿ ನಿಮ್ಮದೇ ಹಣ ಕೈಯಲ್ಲಿ ಇದ್ದರೂ ಅದನ್ನು ಹೊಸದಾಗಿ ವ್ಯಾಪಾರದಲ್ಲಿ ಹೂಡಿಕೆ ಮಾಡಬೇಡಿ, ಇನ್ನು ಸಾಲ ತಂದಂತೂ ಹಾಕಲಿಕ್ಕೆ ಹೋಗಲೇಬೇಡಿ. ಈಗ ಹೇಗಿದೆಯೋ ಹಾಗೇ ನಡೆದುಕೊಂಡು ಹೋಗಲಿ. ಭಾರೀ ಸಲಹೆ- ಸೂಚನೆ ನೀಡುವಂಥವರು, ಭಾರೀ ಲಾಭ ಬರುತ್ತದೆ ಎಂದು ಆಮಿಷ ಒಡ್ಡುವವರು ಸಿಕ್ಕೇ ಸಿಗುತ್ತಾರೆ. ಆದರೆ ಅಂಥ ಮಾತುಗಳು, ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಕಿವಿಗೊಡಬೇಡಿ.

ಎಚ್ಚರಿಕೆ- ಆರು

ಸಾಡೇಸಾತ್ ನಡೆಯುವಾಗ ಅತಿ ಮುಖ್ಯವಾಗಿ ಗಮನಕ್ಕೆ ತೆಗೆದುಕೊಳ್ಳಬೇಕಾದದ್ದು ಆರೋಗ್ಯದ ಬಗ್ಗೆ. ಆದ್ದರಿಂದ ಅನಾರೋಗ್ಯ ವಿಚಾರಗಳನ್ನು ನಿರ್ಲಕ್ಷ್ಯ ಮಾಡಬೇಡಿ. ಇದಕ್ಕೆ ಮನೆಯಲ್ಲೇ ಇಂಥ ಸೊಪ್ಪು, ಇಷ್ಟು ಶುಂಠಿ ತಿಂದರಾಯಿತಂತೆ. ನನಗೇನೋ ಶುಗರ್ ಬಾರ್ಡರ್‌ನಲ್ಲಿದೆ ಅಂತ ಡಾಕ್ಟರ್ ಹೇಳ್ತಾರೆ ಅಷ್ಟೇ, ಅಂಥ ಯಾವ ಲಕ್ಷಣವೂ ಕಾಣ್ತಿಲ್ಲ ಎಂದು ನಿಮಗೆ ನೀವೇ ಸ್ವಯಂ ವೈದ್ಯ ಮಾಡಿಕೊಳ್ಳಬೇಡಿ. ಈ ಅವಧಿಯಲ್ಲಿ ಅಲರ್ಜಿಗಳು, ಮಾತ್ರೆ- ಔಷಧಗಳಿಂದ ಅಲರ್ಜಿ ಅಥವಾ ದೀರ್ಘ ಕಾಲಕ್ಕೆ ಔಷಧೋಪಚಾರ ಮಾಡಿಕೊಳ್ಳಬೇಕಾದ ಸ್ಥಿತಿ ಒದಗಿಬರುತ್ತದೆ. ಆದ್ದರಿಂದ ಈ ಎಚ್ಚರಿಕೆ ಮನಸ್ಸಿನಲ್ಲಿ ಇರಲಿ.

ಎಚ್ಚರಿಕೆ- ಏಳು

ನೀವು ಅದೆಷ್ಟೇ ನಿಷ್ಣಾತ ಚಾಲಕರಿದ್ದರೂ ಸಾಡೇ ಸಾತ್ ಅವಧಿಯಲ್ಲಿ ವಾಹನ ಚಾಲನೆಯಲ್ಲಿ ಅದೆಷ್ಟೇ ಎಚ್ಚರದಿಂದ ಇದ್ದರೂ ಸಾಲುವುದಿಲ್ಲ. ಅದರಲ್ಲೂ ವೃತ್ತಿಯಲ್ಲಿ ಚಾಲಕರೇ ಆಗಿದ್ದಲ್ಲಿ ಮತ್ತೂ ಎಚ್ಚರಿಕೆಯಿಂದ ಇರಬೇಕು. ಕೆಲವರಿಗೆ ಇನ್ನೊಬ್ಬರ ವಾಹನವನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಇರುತ್ತದೆ. ಇದಂತೂ ಖಂಡಿತಾ ಕೂಡದು.

ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.



Latest News

Related Posts