ನಿಮ್ಮ ಜನ್ಮಜಾತಕದಲ್ಲಿ ಚಂದ್ರ ನೀಚಸ್ಥಾನದಲ್ಲಿ ಇದೆಯಾ? ಚಂದ್ರ ದುರ್ಬಲ ಆಗಿದೆಯಾ? ಚಂದ್ರ ಪಾಪ ಸ್ಥಿತಿಯನ್ನು ತಲುಪಿದೆಯಾ? ಹೀಗೆ ಚಂದ್ರ ದೋಷದಿಂದ ಕೂಡಿರುವ ಜಾತಕರಿಗೆ ಈ ಕ್ಷೇತ್ರ ಅನುಗ್ರಹವನ್ನು ದೊರಕಿಸುತ್ತದೆ. ಇದನ್ನು ಹೊರತುಪಡಿಸಿ, ಈಗ ಹೇಳುವುದಕ್ಕೆ ಹೊರಟಿರುವುದು ಕಾವೇರಿ ನದಿಯ ದಂಡೆಯಲ್ಲಿ ಇರುವ ಪ್ರಮುಖ ‘ಪಂಚ ರಂಗ ಕ್ಷೇತ್ರಗಳ’ ಪೈಕಿ ಒಂದು ಎನಿಸಿರುವ ‘ತಿರು ಇಂದಲೂರ್’ ಎಂಬಲ್ಲಿ ನೆಲೆಸಿರುವ ಶ್ರೀ ಪರಿಮಳ ರಂಗನಾಥರ್ ದೇವಸ್ಥಾನದ ಬಗ್ಗೆ. ಈ ಸ್ಥಳದಲ್ಲಿ ದೈವಿಕವಾದ ಪರಿಮಳವೊಂದು ಸದಾ ಆವರಿಸಿರುತ್ತದೆ. ಇನ್ನು 108 ದಿವ್ಯ ದೇಶಗಳಲ್ಲಿ ಸಹ ಪರಿಮಳ ರಂಗನಾಥರ್ ಕ್ಷೇತ್ರಕ್ಕೆ ಸ್ಥಾನವಿದೆ. ಅಧ್ಯಾತ್ಮದ ದೃಷ್ಟಿಯಿಂದ ಬಹಳ ಎತ್ತರದಲ್ಲಿರುವ ಈ ಕ್ಷೇತ್ರದ ಮಹಾತ್ಮೆಯನ್ನು ತಿಳಿದುಕೊಂಡರೆ ಅದು ಕೂಡ ಸುಕೃತವೇ.
ದೇವಸ್ಥಾನದ ಸಂಕ್ಷಿಪ್ತ ಮಾಹಿತಿ
- ಮೂಲವರ್ (ಪ್ರಧಾನ ದೇವರು): ಪರಿಮಳ ರಂಗನಾಥರ್ (ಪೆರುಮಾಳ್) – ವೀರ ಶಯನ ಭಂಗಿ (ಮಲಗಿರುವ ಭಂಗಿ).
- ತಾಯಾರ್ (ಅಮ್ಮನವರು): ಪರಿಮಳ ರಂಗನಾಯಕಿ, ಚಂದ್ರ ಶಾಪ ವಿಮೋಚನ ವಲ್ಲಿ.
- ಪವಿತ್ರ ತೀರ್ಥ: ಇಂದು ಪುಷ್ಕರಿಣಿ.
- ಸ್ಥಳದ ಐತಿಹಾಸಿಕ ಹೆಸರು: ತಿರುಇಂದಲೂರ್.
- ನವಗ್ರಹ ಸಂಬಂಧ: ಚಂದ್ರ ದೋಷ ಪರಿಹಾರ ಸ್ಥಳ.
- ದೇವಸ್ಥಾನದ ಇತಿಹಾಸ: 1000 ದಿಂದ 2000 ವರ್ಷಗಳಷ್ಟು ಹಳೆಯದು.
- ದರ್ಶನದ ಸಮಯ: ಬೆಳಗ್ಗೆ 6.30 ರಿಂದ 11.30 ಮತ್ತು ಸಂಜೆ 5 ರಿಂದ ರಾತ್ರಿ 8.30 ರವರೆಗೆ.
ಶ್ರೀವಾಂಛಿಯಂ ಶಿವ ದೇವಾಲಯ: ಇಲ್ಲಿ ಯಮಧರ್ಮರಾಜನಿಗೆ ನಡೆಯುತ್ತೆ ಮೊದಲ ಪೂಜೆ!
ಸ್ಥಳ ಪುರಾಣ ಮತ್ತು ಐತಿಹಾಸಿಕ ಕಥೆಗಳು
ಅಂಬರೀಷ ಮಹಾರಾಜ ಮತ್ತು ಏಕಾದಶಿ ವ್ರತದ ಮಹಿಮೆ:
ಪುರಾಣಗಳ ಪ್ರಕಾರ, ರಾಜ ಅಂಬರೀಷನು ಅತ್ಯಂತ ಭಕ್ತಿಯಿಂದ ಏಕಾದಶಿ ವ್ರತವನ್ನು ಆಚರಿಸುತ್ತಿದ್ದ. ಯಾರಾದರೂ 1000 ಏಕಾದಶಿ ವ್ರತಗಳನ್ನು ಯಶಸ್ವಿಯಾಗಿ ಮುಗಿಸಿದರೆ ಅವರಿಗೆ ದೇವತೆಗಳ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇತ್ತು. ಅಂಬರೀಷನು ತನ್ನ 1000ನೇ ವ್ರತವನ್ನು ಮುಗಿಸಿ, ಮರುದಿನ ನಿಗದಿತ ಸಮಯದಲ್ಲಿ ವ್ರತವನ್ನು ಬಿಡಬೇಕಾದ (ಪಾರಣೆ) ಸಂದರ್ಭ ಬಂದಾಗ, ದೇವತೆಗಳು ಚಿಂತೆಗೀಡಾಗಿ ದೂರ್ವಾಸ ಮುನಿಗಳ ಸಹಾಯವನ್ನು ಕೋರಿದರು.
ದೂರ್ವಾಸ ಮುನಿಗಳು ರಾಜನ ಬಳಿಗೆ ಬಂದು ತನ್ನೊಂದಿಗೆ ಭೋಜನ ಮಾಡುವಂತೆ ಕೇಳಿಕೊಂಡರು. ಇದು ರಾಜನ ಪಾರಣೆಯ ಸಮಯವನ್ನು ಮೀರುವಂತೆ ಮಾಡುವ ಉಪಾಯವಾಗಿತ್ತು. ಸಮಯ ಮೀರಿ ಹೋಗುತ್ತಿರುವುದನ್ನು ಕಂಡ ರಾಜನ ಸಲಹೆಗಾರರು, ವ್ರತವನ್ನು ಶಾಸ್ತ್ರೋಕ್ತವಾಗಿ ಮುಗಿಸಲು ಕೇವಲ ಸ್ವಲ್ಪ ನೀರನ್ನು ಕುಡಿಯುವಂತೆ ರಾಜನಿಗೆ ಸೂಚಿಸಿದರು.
ರಾಜನು ನೀರು ಕುಡಿದದ್ದನ್ನು ನೋಡಿ ಕೋಪಗೊಂಡ ದೂರ್ವಾಸ ಮುನಿಗಳು, ರಾಜನನ್ನು ಕೊಲ್ಲಲು ರಾಕ್ಷಸನೊಬ್ಬನನ್ನು ಕಳುಹಿಸಿದರು.
ಆಗ ಅಂಬರೀಷ ಮಹಾರಾಜನು ಈ ಸ್ಥಳದಲ್ಲಿದ್ದ ವಿಷ್ಣುವಿನ ಶರಣು ಹೋದನು. ಭಗವಂತನು ರಾಜನನ್ನು ಮುನಿಯ ಶಾಪ ಮತ್ತು ರಾಕ್ಷಸನಿಂದ ರಕ್ಷಿಸಿದನು. ಈ ಘಟನೆಯ ನಂತರವೇ ‘ಏಕಾದಶಿ ವ್ರತ’ದ ಮಹತ್ವ ಜಗತ್ತಿಗೆ ಜನಪ್ರಿಯವಾಯಿತು ಎಂದು ಹೇಳಲಾಗುತ್ತದೆ.
‘ಪರಿಮಳ ರಂಗನಾಥರ್’ ಹೆಸರಿನ ಹಿನ್ನೆಲೆ:
ಮತ್ಸ್ಯಾವತಾರದ ಸಮಯದಲ್ಲಿ ವಿಷ್ಣುವು ಮಧು ಮತ್ತು ಕೈಟಭ ಎಂಬ ರಾಕ್ಷಸರನ್ನು ಸಂಹರಿಸಿ, ಅವರಿಂದ ವೇದಗಳನ್ನು ಮರಳಿ ಪಡೆದ. ಆ ವೇದಗಳಿಗೆ ವಿಷ್ಣುವು ದಿವ್ಯವಾದ ಸುಗಂಧವನ್ನು (ಪರಿಮಳ) ನೀಡಿದ ಕಾರಣಕ್ಕಾಗಿ ಇಲ್ಲಿನ ದೇವರಿಗೆ “ಪರಿಮಳ ರಂಗನಾಥರ್” ಎಂಬ ಹೆಸರು ಬಂದಿದೆ.
ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿಶಾಲಿ ಕ್ಷೇತ್ರ: ತಿರುಪತ್ತುರ್ ಬ್ರಹ್ಮಪುರೀಶ್ವರರ್ ದೇವಾಲಯ!
ಚಂದ್ರನ ಶಾಪ ವಿಮೋಚನೆ:
‘ಇಂದಲೂರ್’ ಎಂಬ ಹೆಸರು ‘ಇಂದು’ (ಚಂದ್ರ) ಎಂಬ ಪದದಿಂದ ಬಂದಿದೆ. ಚಂದ್ರನು ದಕ್ಷ ಪ್ರಜಾಪತಿಯ 27 ಹೆಣ್ಣುಮಕ್ಕಳನ್ನು (ನಕ್ಷತ್ರಗಳನ್ನು) ಮದುವೆಯಾಗುವಾಗ ಎಲ್ಲರನ್ನೂ ಸಮನಾಗಿ ಪ್ರೀತಿಸುವುದಾಗಿ ಮಾತು ನೀಡಿದ್ದ. ಆದರೆ ಅವನು ರೋಹಿಣಿಯನ್ನು ಮಾತ್ರ ಹೆಚ್ಚಾಗಿ ಪ್ರೀತಿಸುತ್ತಿದ್ದ. ಇದರಿಂದ ನೊಂದ ಉಳಿದ ಸಹೋದರಿಯರು ತಂದೆಗೆ ದೂರು ನೀಡಿದಾಗ, ಕೋಪಗೊಂಡ ದಕ್ಷನು ಚಂದ್ರನ ತೇಜಸ್ಸು ಪ್ರತಿ 14 ದಿನಗಳಿಗೊಮ್ಮೆ ಕ್ಷೀಣಿಸುವಂತೆ ಶಾಪ ನೀಡಿದ.
ತನ್ನ ತೇಜಸ್ಸನ್ನು ಕಳೆದುಕೊಂಡ ಚಂದ್ರನು ಗುರು ಬೃಹಸ್ಪತಿಯ ಸಲಹೆಯ ಮೇರೆಗೆ ಈ ಸ್ಥಳಕ್ಕೆ ಬಂದು ‘ಇಂದು ಪುಷ್ಕರಿಣಿ’ಯಲ್ಲಿ ಸ್ನಾನ ಮಾಡಿ, ಪೆರುಮಾಳ್ ಮತ್ತು ತಾಯಾರ್‌ರನ್ನು ಕುರಿತು ತಪಸ್ಸು ಮಾಡಿದ.
ಚಂದ್ರನ ಭಕ್ತಿಗೆ ಮೆಚ್ಚಿದ ಭಗವಂತನು ಅವನಿಗೆ ಶಾಪದಿಂದ ಮುಕ್ತಿ ನೀಡಿದ. ಆದ್ದರಿಂದಲೇ ಇಲ್ಲಿನ ಅಮ್ಮನವರಿಗೆ ‘ಚಂದ್ರ ಶಾಪ ವಿಮೋಚನ ವಲ್ಲಿ’ ಎಂಬ ಹೆಸರಿದೆ. ಈ ಕಾರಣದಿಂದಾಗಿ ಇದು ಪ್ರಮುಖ ‘ಚಂದ್ರ ದೋಷ ಪರಿಹಾರ ಸ್ಥಳ’ವಾಗಿದ್ದು, ಇಲ್ಲಿ ಗರ್ಭಗುಡಿಯೊಳಗೆ ಚಂದ್ರನ ವಿಗ್ರಹವೂ ಇರುವುದನ್ನು ಕಾಣಬಹುದು.
ತಿರುಮಂಗೈ ಆಳ್ವಾರ್ ಮತ್ತು ಪೆರುಮಾಳ್ ನಡುವಿನ ವಿಶಿಷ್ಟ ಸಂವಾದ:
ಒಮ್ಮೆ ತಿರುಮಂಗೈ ಆಳ್ವಾರರು ಈ ದೇವಸ್ಥಾನಕ್ಕೆ ಭೇಟಿ ನೀಡಲು ಬಂದಾಗ ಸ್ವಲ್ಪ ತಡವಾಗಿತ್ತು. ವಿಷ್ಣುವು ಆಳ್ವಾರರು ಒಳಗೆ ಬಾರದಂತೆ ದೇವಸ್ಥಾನದ ಬಾಗಿಲನ್ನು ಮುಚ್ಚಿದ. ಇದರಿಂದ ಕೋಪಗೊಂಡ ಆಳ್ವಾರರು ದೇವರೊಂದಿಗೆ ವಾದಕ್ಕಿಳಿದರು.
“ನಾನು ಅಷ್ಟು ದೂರದಿಂದ ನಿನ್ನನ್ನು ಪೂಜಿಸಲು ಬಂದರೆ ನೀನು ಬಾಗಿಲು ಮುಚ್ಚಿ ನಿನ್ನ ಸೌಂದರ್ಯ ಮತ್ತು ದಿವ್ಯತೆಯನ್ನು ನಿನಗಷ್ಟೇ ಸೀಮಿತಗೊಳಿಸಿಕೊಳ್ಳುತ್ತಿದ್ದೀಯಾ?” ಎಂದು ಪ್ರಶ್ನಿಸಿ, ಅಲ್ಲಿಂದ ಹೊರಡಲು ಸಿದ್ಧರಾದರು.
ಆಗ ಪೆರುಮಾಳ್, “ನೀನು ಇತರ ಎಲ್ಲಾ ಪೆರುಮಾಳ್‌ಗಳ ಬಗ್ಗೆ ಹಾಡುತ್ತೀಯಲ್ಲ, ನನ್ನ ಬಗ್ಗೆ ಏಕೆ ಹಾಡುವುದಿಲ್ಲ?” ಎಂದು ಕೇಳಿದಾಗ, ಆಳ್ವಾರರು ಭಗವಂತನನ್ನು ಸ್ತುತಿಸಿ ‘ಪಾಶುರಂ’ಗಳನ್ನು (ಭಕ್ತಿಗೀತೆಗಳು) ಹಾಡಿದರು. ಅದಕ್ಕೆ ಪ್ರಸನ್ನನಾದ ಪೆರುಮಾಳ್ ದೇವಸ್ಥಾನದ ಬಾಗಿಲನ್ನು ತೆರೆದು ದರ್ಶನ ನೀಡಿದ.
ಸಾಲದ ಸುಳಿಯಿಂದ ಮುಕ್ತಿ ನೀಡುವ ಪವಾಡ ಕ್ಷೇತ್ರ ತಿರುಚೆರೈನ ಕಡೈ ನಿವೃತ್ತೀಶ್ವರರ್!
ಕಲೆ ಮತ್ತು ವಾಸ್ತುಶಿಲ್ಪ
ದೇವಸ್ಥಾನವು ಅತ್ಯಂತ ಭವ್ಯವಾದ ವಾಸ್ತುಶಿಲ್ಪವನ್ನು ಹೊಂದಿದೆ. ಅರ್ಧ ಮಂಟಪದ ಮುಂಭಾಗದಲ್ಲಿರುವ ಕಾರಿಡಾರ್‌ನ ಕಂಬಗಳಲ್ಲಿ ಅದ್ಭುತವಾದ ಮತ್ತು ಸೂಕ್ಷ್ಮವಾದ ಕೆತ್ತನೆಗಳಿದ್ದು, ಇವು ಶಿಲ್ಪಕಲಾ ಪ್ರೇಮಿಗಳನ್ನು ಸೆಳೆಯುತ್ತವೆ. ಇಲ್ಲಿ ಕಾವೇರಿ ನದಿಯನ್ನು ಗಂಗಾ ನದಿಗೆ ಸಮಾನ ಎಂದು ಪರಿಗಣಿಸಲಾಗಿದ್ದು, ಗಂಗಾ ನದಿಯು ಪೆರುಮಾಳ್‌ನ ಶಿರೋಭಾಗಕ್ಕೆ ದಿಂಬಿನಂತೆ ಸೇವೆ ಸಲ್ಲಿಸುತ್ತಿರುವುದು ಇಲ್ಲಿನ ವಿಶಿಷ್ಟತೆಯಾಗಿದೆ.
ಲೇಖನ– ಶ್ರೀನಿವಾಸ ಮಠ









