ಪ್ರಧಾನಿ ನರೇಂದ್ರ ಮೋದಿಗೆ ಸುಬ್ರಹ್ಮಣ್ಯನ ಶರಣೊಂದೇ ದಾರಿ: ಲಕ್ಷ ಕದಳಿ ಯಾಗ ರಹಸ್ಯ ಏನು?

A side-by-side collage of Udupi-based astrologer Prakash Ammannaya and Indian Prime Minister Narendra Modi.
ಪ್ರಧಾನಿ ನರೇಂದ್ರ ಮೋದಿ ಹಾಗೂ ಜಾತಕ ವಿಶ್ಲೇಷಣೆ ಮಾಡಿರುವ ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ (ಎಡ ಚಿತ್ರದಲ್ಲಿ).

ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಬಂಧಿಸಿದಂತೆ ಜ್ಯೋತಿಷ್ಯ ರೀತಿಯಾದ ಅತಿ ಮುಖ್ಯವಾದ ಪರಿಹಾರದ ಬಗ್ಗೆ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿಗಳು ಹಾಗೂ ಅಧ್ಯಾತ್ಮ ಚಿಂತಕರಾದ ಪ್ರಕಾಶ್ ಅಮ್ಮಣ್ಣಾಯ ಅವರು ‘ಶ್ರೀಗುರುಭ್ಯೋ.ಕಾಮ್’ ವೆಬ್ ಸೈಟ್ ಗಾಗಿ ಲೇಖನವನ್ನು ಬರೆದಿದ್ದಾರೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಇದರ ಪರಿಣಾಮಗಳು ಈ ಎಲ್ಲವನ್ನೂ ಗಮನಿಸಿದಾಗ ಬಹಳ ಪ್ರಸ್ತುತ ಹಾಗೂ ಅಗತ್ಯವಾದ ಪರಿಹಾರ ಇದಾಗಲಿದೆ- ಸಂಪಾದಕ

ಜ್ಯೋತಿಷಿಯಾಗಿ ಅದು ಯಾವ ಚಿಂತನೆ ಮೂಡಿದರೂ ಮೊದಲಿಗೆ ದೇಶದ ಒಳಿತೇ ಕಣ್ಣೆದುರು ಬರುತ್ತದೆ. ಈಗಲೂ ದೇಶದ ಹಿತವೇ ಮೊದಲಿಗೆ ಎಂಬ ಆಲೋಚನೆಯೇ ಇಲ್ಲಿ ಪದಗಳ ರೂಪದಲ್ಲಿ ಮೂಡುವುದಕ್ಕೆ ಕಾರಣವಾಗಿದೆ. ಈ ಲೇಖನದಲ್ಲಿ ನಾನು ವ್ಯಕ್ತಪಡಿಸುವ ಅಭಿಪ್ರಾಯದ ಬಗ್ಗೆ ಜ್ಯೋತಿಷ್ಯ ಆಧಾರವಾದ ಯಾವುದೇ ಆಕ್ಷೇಪ ಇದ್ದರೂ ಖಂಡಿತಾ ಅದನ್ನು ಸಾರ್ವಜನಿಕವಾಗಿ ವಿಶ್ಲೇಷಣೆ ಮಾಡಬಹುದು. ಹಾಗೂ ವೈಯಕ್ತಿಕವಾಗಿ ನಾನೂ ಪ್ರಾಂಜಲ ಮನಸ್ಸಿಂದಲೇ ಆ ವಿಚಾರಗಳನ್ನು ಸ್ವೀಕರಿಸುತ್ತೇನೆ. ಈಗ ಮೊದಲಿಗೆ ಸಮಸ್ಯೆಗಳದೊಂದು ಪಟ್ಟಿ ಮಾಡಿಬಿಡುತ್ತೇನೆ. 

  • ಪ್ರಧಾನಿ ನರೇಂದ್ರ ಮೋದಿ ಅವರು 2024ನೇ ಇಸವಿಯಲ್ಲಿ ಪ್ರಧಾನಿಯಾಗಿ ಪುನರಾಯ್ಕೆಯಾದ ಸಂದರ್ಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಹೂರ್ತದಲ್ಲಿ ವೈಯಕ್ತಿಕವಾಗಿ ನನಗೆ ಸಮಾಧಾನ ಇರಲಿಲ್ಲ. ಇದನ್ನು ಜ್ಯೋತಿಷ್ಯ ವಿಚಾರಕ್ಕೆ ನಾನು ಚರ್ಚೆ ಮಾಡುವ ಹಾಗೂ ಪ್ರಚಾರದ ಗೀಳಿಗೆ ಬೀಳದ ಕೆಲವರ ಬಳಿ ಹೇಳಿಕೊಂಡಿದ್ದು ಇದೆ. ಆ ದಿನ ಜೂನ್ 9, 2024. ಸ್ಥಳ- ದೆಹಲಿ. ಆ ಸಮಯಕ್ಕೆ ವೃಶ್ಚಿಕ ಲಗ್ನ, ಪರಾಕ್ರಮ- ಸಾಧನ ಸ್ಥಾನದಲ್ಲಿ ಮಾಂದಿ, ಕುಂಭದಲ್ಲಿ ಶನಿ, ಮೀನದಲ್ಲಿ ರಾಹು, ಮೇಷದಲ್ಲಿ ಕುಜ, ವೃಷಭದಲ್ಲಿ ರವಿ, ಬುಧ, ಗುರು ಹಾಗೂ ಶುಕ್ರ. ಕರ್ಕಾಟಕದಲ್ಲಿ ಚಂದ್ರ. ಲಗ್ನಕ್ಕೆ ಏಕಾದಶದಲ್ಲಿ ಕೇತು. ಇನ್ನು ಕೇತು ಇರುವ ಕನ್ಯಾ ರಾಶಿಯ ಅಧಿಪತಿ ಬುಧ, ವೃಷಭದಲ್ಲಿ ಅಸ್ತನಾಗಿದ್ದಾನೆ. ಜೊತೆಗೆ ಶುಕ್ರನೂ ಅಸ್ತನಾಗಿದ್ದಾನೆ. ಅಷ್ಟೇ ಅಲ್ಲ, ಆ ಬುಧ ವೃಶ್ಚಿಕ ಲಗ್ನಕ್ಕೆ ಅಷ್ಟಮಾಧಿಪತಿಯೂ ಹೌದು. ಲಗ್ನಾಧಿಪತಿ ಆಗುವ ಕುಜ ಗ್ರಹವು ಮೇಷದಲ್ಲಿ ಇದ್ದು, ಆ ಲಗ್ನದ ಬಾಧಾಕಾಧಿಪತಿ ಆಗುವ ಶನಿಯು ಕುಂಭದಿಂದ ಮೂರನೇ ಮನೆಯ ದೃಷ್ಟಿಯಲ್ಲಿ ವೀಕ್ಷಣೆ ಮಾಡುತ್ತಾ ಇದ್ದಾನೆ. ಸಿಂಹಾಸನಕ್ಕೆ ಏರುವುದಕ್ಕೆ ಇದು ಸೂಕ್ತ ಮುಹೂರ್ತ ಅಲ್ಲ ಎಂಬುದು ನನ್ನ ಅಧ್ಯಯನದ ಹಿನ್ನೆಲೆಯ ಅಭಿಪ್ರಾಯ. ಈ ಬಗ್ಗೆ ಜ್ಯೋತಿಷಿಗಳು ಶಾಸ್ತ್ರ- ಪ್ರಮಾಣ ಸಮ್ಮತವಾಗಿ ಯಾವ ಅಭಿಪ್ರಾಯಕ್ಕೆ ಬಂದರೂ ಅದನ್ನು ಸ್ವೀಕರಿಸುತ್ತೇನೆ.
  • ಇನ್ನು ನರೇಂದ್ರ ಮೋದಿ ಅವರ ಜನ್ಮ ಜಾತಕದಲ್ಲಿನ ಶನಿ ಗ್ರಹ ಸ್ಥಾನಕ್ಕೆ ಈಗ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಶನಿಯು ಎಂಟನೇ ಮನೆಯಾಗುತ್ತದೆ. ಇದು ಮಂದಾಷ್ಟಮ. ಈ ಹಿಂದೆ ಅಂದರೆ, ಮೂವತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರ ಜೀವನದಲ್ಲಿ ಇಂಥದ್ದೇ ಅಥವಾ ಇದಕ್ಕಿಂತ ಸಂಕಷ್ಟದ ಸಮಯ ಬಂದಿರುತ್ತದೆ. ಏಕೆಂದರೆ ಶನಿ ಗ್ರಹವು ಆಗ ಕೂಡ ಮಂದಾಷ್ಟಮ ಆಗಿರುತ್ತದೆ. ವೈಯಕ್ತಿಕ ಜಾತಕದ ಬಲ ಎಷ್ಟೇ ಇದ್ದರೂ ಅಪಮಾನಕ್ಕೆ ಗುರಿ ಆಗಬೇಕು ಎಂದಿರುವಾಗ ಹಾಗೆ ಆಗಿಯೇ ಆಗುತ್ತದೆ. ಈಗ ಮತ್ತದೇ ಮಂದಾಷ್ಟಮ ಶನಿಯ ಸ್ಥಿತಿ. ಈ ಬಗ್ಗೆ ಹಲವಾರು ಬಾರಿ ಮಾಧ್ಯಮ- ಸಾಮಾಜಿಕ ಮಾಧ್ಯಮ ಎಲ್ಲ ಕಡೆಯೂ ಹೇಳಿದ್ದು ಆಗಿದೆ. ಶನಿಯು ಮೀನ ರಾಶಿಯ ಕೊನೆಯ ಅಂಶದ ಕಡೆಗೆ ಸಾಗಿದಾಗ ಮತ್ತೂ ತೀವ್ರತರವಾದ ಅಪಮಾನಗಳು, ಸಂದಿಗ್ಧ, ಸವಾಲುಗಳು ಎದುರಾಗುತ್ತವೆ. 
  • ಮೋದಿ ಅವರ ಜನ್ಮಜಾತಕ, ದಶಾ- ಭುಕ್ತಿ ಇವೆಲ್ಲವನ್ನೂ ನೋಡಿದಾಗ ಜೊತೆಯಲ್ಲಿ ಇರುವವರೇ ತಂದೊಡ್ಡುತ್ತಿರುವ ಅನಾಹುತ ಎಂಬುದು ಹಾಗೂ ಮುಂದೆಯೂ ಹೀಗೇ ಆಗುತ್ತದೆ ಎಂಬುದನ್ನು ಭವಿಷ್ಯ ನುಡಿಯಬಹುದು. ಅದು ಯಾವುದೇ ಸಮಸ್ಯೆ ಹಾಗೂ ಸವಾಲು ಎದುರಾದರೂ “ಅದು ಅವರ ತಲೆನೋವು ಬಿಡು” ಅಂತಲೋ ಅಥವಾ “ನಿಮ್ಮ ವರ್ಚಸ್ಸಿನ ಮುಂದೆ ಇವು ಯಾವ ಲೆಕ್ಕ” ಅಂತಲೋ ದಾರಿ ತಪ್ಪಿಸಿದಂಥ ಪ್ರಕರಣಗಳು ಸಾಲುಸಾಲಾಗಿ ಕಾಣುತ್ತವೆ. ಗ್ರಹಗತಿಗಳ ಪ್ರಭಾವ- ಪರಿಣಾಮ ಸುತ್ತಮುತ್ತಲು ಇರುವವರ ರೂಪದಲ್ಲಿ ಕಾಡುತ್ತದೆ ಎಂಬುದಕ್ಕೆ ಸರಿಯಾದ ಉದಾಹರಣೆ ಇದು.

ಕರ್ನಾಟಕ ಜ್ಯೋತಿಷಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಕುಕ್ಕೆ ಸುಬ್ರಹ್ಮಣ್ಯದ ಸ್ವರ್ಣಾರ್ಚನೆಗೆ ಸಲಹೆ

ಈಗ ಪರಿಹಾರದ ವಿಚಾರಕ್ಕೆ ಬರೋಣ.

  • ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು, ಆ ದೇವಸೇನಾನಿಯ ದರ್ಶನ ಪಡೆದು ಹೋದರೆ ಒಳ್ಳೆಯದಿತ್ತು ಎಂಬುದನ್ನು ಹಲವು ಬಾರಿ ಬರೆದಿದ್ದೇನೆ. ಆ ನಂತರ ಪರಿಸ್ಥಿತಿ ಮತ್ತಷ್ಟು ಕಠಿಣವಾದಾಗ ಅದೇ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು, ಸ್ವರ್ಣಾರ್ಚನೆ ಮಾಡಿಕೊಂಡು ಹೋದಲ್ಲಿ ರಕ್ಷಣೆ ಸಿಕ್ಕೀತು ಅಂತಲೂ ಬರೆದೆ. ಆದರೆ ಒಮ್ಮೆ ಕೂಡ ಆ ಸುಬ್ರಹ್ಮಣ್ಯನ ದರ್ಶನ- ಸೇವೆಗೆ ಅವಕಾಶ ಸಿಗಲಿಲ್ಲ. ಈಗ ಸ್ಥಿತಿ ಮತ್ತೂ ಜಟಿಲವಾಗಿದೆ. ಈಗಲಾದರೂ ಸುಬ್ರಹ್ಮಣ್ಯನಿಗೆ ಶರಣು ಬಾರದಿದ್ದರೆ ಕಷ್ಟವಿದೆ. ಅದು ಪ್ರಧಾನಿ ಹುದ್ದೆಗೆ ಬಂದ ಸಂಕಷ್ಟ ಅಂತ ಭಾವಿಸದೆ, ಅದು ದೇಶಕ್ಕೆ ಎದುರಾದ ಸವಾಲು ಎಂಬುದಾಗಿ ನನಗೆ ಅನಿಸುತ್ತದೆ. ಆದ್ದರಿಂದ ಶತಾಯಗತಾಯ ಸುಬ್ರಹ್ಮಣ್ಯನ ಆರಾಧನೆಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಾಡಿಕೊಳ್ಳಬೇಕು.

ಸುಬ್ರಹ್ಮಣ್ಯನ ಆರಾಧನೆ ಹೇಗೆ ಮಾಡಿಕೊಳ್ಳಬೇಕು ಎಂಬ ವಿಚಾರಕ್ಕೆ ಬರೋಣ.

  • ಲಕ್ಷ ಕದಳಿ ಯಾಗ ಆಗಬೇಕು. ಅಂದರೆ ಸುಬ್ರಹ್ಮಣ್ಯ ಮೂಲ ಮಂತ್ರದಿಂದ ಒಂದು ಲಕ್ಷ ಬಾಳೇಹಣ್ಣು ಬಳಸಿ ಹೋಮವನ್ನು ಮಾಡಬೇಕು. ಸಮಸ್ಯೆ ಹಾಗೂ ರೋಗ ಈ ಎರಡೂ ಬಲಿತರೆ ಅದಕ್ಕೆ ಮಾಡಿಕೊಳ್ಳಬೇಕಾದ ಪರಿಹಾರ ಕೂಡ ಅಷ್ಟೇ ಪರಿಣಾಮಕಾರಿ ಆಗಿರಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಜೀವನದಲ್ಲಿ ವರ್ಚಸ್ಸು ಉಳಿಯುವುದು, ಬೆಳಗುವುದು ಬಹಳ ಮುಖ್ಯ. ಈ ಮಾತು ಎಲ್ಲರಿಗೂ ಅನ್ವಯ. ಇನ್ನು ದೇಶವನ್ನು ಪ್ರತಿನಿಧಿಸುವ ಪ್ರಧಾನಿಯ ವರ್ಚಸ್ಸು ಕುಂದಿದರೆ ಅದೆಷ್ಟು ಹಿಂಸೆಯಾದೀತು! ಈಗ ಖಂಡಿತಾ ಅತಿಮುಖ್ಯವಾದ ಸಮಯ. ಲಕ್ಷ ಕದಳಿ ಯಾಗದಿಂದ ಸುಬ್ರಹ್ಮಣ್ಯನನ್ನು ಆರಾಧನೆ ಮಾಡಿದಲ್ಲಿ ಮುಂಬರುವ ಕಠಿಣ ದಿನಗಳನ್ನು ಎದುರಿಸುವ ಶಕ್ತಿಯನ್ನು ಆ ಭಗವಂತನೇ ಕೊಡುತ್ತಾನೆ. ಅಷ್ಟೇ ಅಲ್ಲ, ಅವುಗಳಿಂದ ಆಚೆ ಬರಲಿಕ್ಕೆ ಬೇಕಾದ ವಿವೇಚನೆಯನ್ನೂ ಅವನೇ ನೀಡುತ್ತಾನೆ. 

ಕುಮಾರಣ್ಣನಿಗೆ ಮತ್ತೆ ಸಿಎಂ ಯೋಗ: ಉಡುಪಿಯ ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ರಾಜಕೀಯ ವಿಶ್ಲೇಷಣೆ

ಒಂದಾದ ಮೇಲೆ ಒಂದರಂತೆ ಸೂಚನೆ ಸಿಗುತ್ತಿದೆ. ಅದು ರಾಮಮಂದಿರವು ಹಾಗೂ ಈಗ ನೀಟ್ ಪರೀಕ್ಷೆ ವಿಚಾರದಲ್ಲಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಯೂ ಹಾಗೂ ಅದಕ್ಕೆ ಕಾರಣವಾದ ಪ್ರತಿಭಟನೆಯೂ ಎಚ್ಚರಿಕೆಯನ್ನು ನೀಡುತ್ತಿವೆ. ಇಲ್ಲಿ ಹೇಳಿರುವ ಪರಿಹಾರವೂ ಪ್ರಮಾಣ ಸಹಿತವಾದದ್ದು. ಪ್ರಶ್ನಿಸದೆ, ಪರೀಕ್ಷಿಸದೆ ಏನನ್ನೂ ಮಾಡುವುದು ಬೇಡ. ಲಕ್ಷ ಕದಳಿ ಯಾಗದ ಫಲ ಏನು, ಯಾಕೆ ಮಾಡಬೇಕು ಎಂಬಿತ್ಯಾದಿಗಳನ್ನು ತಿಳಿದುಕೊಳ್ಳುವುದು ಯಾವ ಕಷ್ಟದ ವಿಚಾರವೂ ಅಲ್ಲ. 

ಜನ್ಮ ಸಮಯದಲ್ಲಿ ಶನಿ ಸ್ಥಿತನಾಗಿರುವ ರಾಶಿಯಿಂದ ಎಂಟನೆಯ ಮನೆಯಲ್ಲಿ ಗೋಚಾರ ಶನಿ ಸಂಚಾರವು ಸರ್ವಥಾ ಅಪಾಯಕಾರಿ. ಈಗಾಗಲೇ ಅಂಥದ್ದೇ ಗ್ರಹ ಸ್ಥಿತಿಯ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ಆಗುವಂತೆ ಮಾಡಿತು. ಅವರ ವೈಯಕ್ತಿಕ ಜಾತಕದಲ್ಲಿ ಪೂರ್ಣಾಧಿಕಾರ ಯೋಗ ಇದ್ದರೂ ಅದನ್ನು ಮೀರಿ, ಅಧಿಕಾರದಿಂದ ಇಳಿಯುವಂತೆ ಆಯಿತು. 

ಈ ಮೇಲಿನ ಪ್ರತಿ ಪದವೂ ಜ್ಯೋತಿಷಿ ಎಂಬ ಜವಾಬ್ದಾರಿ ಹಾಗೂ ಈ ತನಕ ಒಂದು ಲಕ್ಷಕ್ಕೂ ಹೆಚ್ಚು ಜಾತಕ ವಿಶ್ಲೇಷಣೆ ಮಾಡಿದ ಅನುಭವದಿಂದ ಬಂದಿರುವಂಥದ್ದು. ದೇವರು ಯೋಗವನ್ನು ಕೊಡುತ್ತಾನೆ, ಆದರೆ ಅದನ್ನು ರಕ್ಷಿಸಿಕೊಳ್ಳಬೇಕಾದದ್ದು ಮನುಷ್ಯ ಪ್ರಯತ್ನದಲ್ಲಿ ಇರುತ್ತದೆ.

ಲೋಕಾ ಸಮಸ್ತಾ ಸುಖಿನೋ ಭವಂತು!

ಲೇಖನ- ಪ್ರಕಾಶ್ ಅಮ್ಮಣ್ಣಾಯ 

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts