2026ರ ಆಗಸ್ಟ್ 28ರಂದು ಶತಭಿಷಾ ನಕ್ಷತ್ರದ ಕುಂಭ ರಾಶಿಯಲ್ಲಿ ರಾಹುಯುತ ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ ಈ ಗ್ರಹಣವು ನಮ್ಮ ದೇಶದಲ್ಲಿ ಗೋಚರಿಸುವುದಿಲ್ಲವಾದ್ದರಿಂದ, ಧಾರ್ಮಿಕವಾಗಿ ಗೋಚರ ಅಥವಾ ಗ್ರಹಣ ಆಚರಣೆಗಳು ಇಲ್ಲಿ ಅನ್ವಯಿಸುವುದಿಲ್ಲ. ಆದರೂ ಜ್ಯೋತಿಷ್ಯದ ಪ್ರಕಾರ ಗ್ರಹಣದ ಶಕ್ತಿಯು ನಕ್ಷತ್ರ ಹಾಗೂ ಗೋಚಾರದ ಮೂಲಕ ದ್ವಾದಶ ರಾಶಿಗಳ ಮೇಲೆ ವಿಶೇಷ ಪ್ರಭಾವ ಬೀರುತ್ತದೆ. ಗ್ರಹಣವು ಯಾವ ರಾಶಿಯಲ್ಲಿ ಅಥವಾ ಯಾವ ಭಾವದಲ್ಲಿ ಸಂಭವಿಸುತ್ತದೆಯೋ ಅದರ ಆಧಾರದ ಮೇಲೆ ಶುಭ, ಅಶುಭ ಹಾಗೂ ಮಿಶ್ರ ಫಲಗಳು ಉಂಟಾಗಲಿವೆ. ಪ್ರತಿಯೊಂದು ರಾಶಿಗೂ ದೊರೆಯುವ ಫಲಗಳ ವಿವರ ಇಲ್ಲಿದೆ:
ರಾಶಿಫಲಗಳ ವಿಂಗಡಣೆ
- ಶುಭ ಫಲಗಳು: ಧನುಸ್ಸು, ಕನ್ಯಾ, ಮೇಷ ಹಾಗೂ ವೃಷಭ ರಾಶಿಯವರಿಗೆ ಈ ಗ್ರಹಣವು ಅನುಕೂಲಕರ ಫಲಗಳನ್ನು ನೀಡಲಿದೆ.
- ಅಶುಭ ಫಲಗಳು: ಕುಂಭ, ಮೀನ, ಕರ್ಕಾಟಕ ಹಾಗೂ ವೃಶ್ಚಿಕ ರಾಶಿಯವರು ಈ ಅವಧಿಯಲ್ಲಿ ಎಚ್ಚರಿಕೆ ವಹಿಸಬೇಕು.
- ಮಿಶ್ರ ಫಲಗಳು: ಮಕರ, ಸಿಂಹ, ಮಿಥುನ ಹಾಗೂ ತುಲಾ ರಾಶಿಯವರಿಗೆ ಲಾಭ-ನಷ್ಟಗಳೆರಡೂ ಸಮಾನವಾಗಿರಲಿದೆ.
ಮೇಷ ರಾಶಿ (ಶುಭ ಫಲ)
ಮೇಷ ರಾಶಿಯವರಿಗೆ ಈ ಬಾರಿಯ ಚಂದ್ರಗ್ರಹಣವು ಅನುಕೂಲಕರವಾದ ಶುಭ ಫಲಗಳನ್ನು ತರಲಿದೆ. ದೀರ್ಘಕಾಲದ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡಗಳು ಕ್ರಮೇಣ ನಿವಾರಣೆಯಾಗಿ ಉತ್ಸಾಹ ಹೆಚ್ಚಾಗಲಿದೆ. ವೃತ್ತಿಜೀವನದಲ್ಲಿ ನೀವು ಮಾಡುವ ಉತ್ತಮ ಪ್ರಯತ್ನಗಳಿಗೆ ಮೇಲಧಿಕಾರಿಗಳಿಂದ ತಕ್ಕ ಮನ್ನಣೆ ಹಾಗೂ ಪ್ರಶಂಸೆ ದೊರೆಯಲಿದೆ. ಆರ್ಥಿಕವಾಗಿ ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಹಾಗೂ ಧನಾಗಮವಾಗುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸಲಿದ್ದು, ಸ್ನೇಹಿತರ ಹಾಗೂ ಬಂಧುಗಳ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ವೃಷಭ ರಾಶಿ (ಶುಭ ಫಲ)
ವೃಷಭ ರಾಶಿಯವರಿಗೆ ಈ ಗ್ರಹಣವು ಸಮೃದ್ಧಿ ಮತ್ತು ಯಶಸ್ಸನ್ನು ತರುವ ಶುಭ ಫಲವನ್ನು ಕರುಣಿಸಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಅಥವಾ ಬಡ್ತಿ ದೊರೆಯುವ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ. ವ್ಯಾಪಾರಸ್ಥರಿಗೆ ನಿರೀಕ್ಷೆಗೂ ಮೀರಿ ಲಾಭ ಆಗುತ್ತದೆ, ಹೊಸ ವ್ಯಾಪಾರ ವಿಸ್ತರಣೆಗೆ ಇದು ಸಕಾಲವಾಗಿದೆ. ಸಮಾಜದಲ್ಲಿ ನಿಮ್ಮ ಕೀರ್ತಿ-ಪ್ರತಿಷ್ಠೆ ಹೆಚ್ಚಾಗಲಿದ್ದು, ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ಭವಿಷ್ಯದ ಯೋಜನೆಗಳಿಗೆ ಬೆಂಬಲ ಸಿಗಲಿದೆ. ಆರೋಗ್ಯವು ಸಹಕರಿಸಲಿದ್ದು, ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದೆ.
ಮಿಥುನ ರಾಶಿ (ಮಿಶ್ರ ಫಲ)
ಮಿಥುನ ರಾಶಿಯವರಿಗೆ ಈ ಗ್ರಹಣದ ಪ್ರಭಾವದಿಂದ ಮಿಶ್ರ ಫಲಗಳು ದೊರೆಯಲಿವೆ. ವೃತ್ತಿಪರ ಜೀವನದಲ್ಲಿ ಮಿಶ್ರ ಅನುಭವಗಳಾಗಲಿದ್ದು, ಕೆಲವೊಮ್ಮೆ ಅನಿರೀಕ್ಷಿತ ಸವಾಲುಗಳನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು. ಆರ್ಥಿಕ ವಿಚಾರದಲ್ಲಿ ಆದಾಯ ಹಾಗೂ ಖರ್ಚುಗಳೆರಡೂ ಸಮಾನವಾಗಿ ಇರಲಿದ್ದು, ಹಣಕಾಸಿನ ನಿರ್ವಹಣೆಯಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಕುಟುಂಬದ ಸದಸ್ಯರ ಆರೋಗ್ಯದ ಕಡೆಗೆ ಗಮನಹರಿಸಬೇಕು. ಪ್ರಯಾಣ ಮಾಡುವಾಗ ಅಥವಾ ಪ್ರಮುಖ ದಾಖಲೆಗಳಿಗೆ ಸಹಿ ಹಾಕುವಾಗ ಜಾಗರೂಕರಾಗಿರುವುದು ಅಗತ್ಯ.
ಕರ್ಕಾಟಕ ರಾಶಿ (ಅಶುಭ ಫಲ)
ಕರ್ಕಾಟಕ ರಾಶಿಯವರು ಈ ಗ್ರಹಣದ ಅವಧಿಯಲ್ಲಿ ಎಚ್ಚರಿಕೆ ವಹಿಸುವುದು ಅತ್ಯಗತ್ಯ, ಇದು ಅಶುಭ ಫಲಗಳನ್ನು ಸೂಚಿಸುತ್ತಿದೆ. ಆರೋಗ್ಯದ ವಿಚಾರದಲ್ಲಿ ಉದಾಸೀನತೆ ಬೇಡ; ವಿಶೇಷವಾಗಿ ಹೊಟ್ಟೆ ಅಥವಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಲಿದೆ. ಆರ್ಥಿಕ ಮುಗ್ಗಟ್ಟು ಅಥವಾ ಅನವಶ್ಯಕ ಖರ್ಚುಗಳು ಹೆಚ್ಚಾಗುವ ಸಂಭವವಿರುವುದರಿಂದ ಯಾವುದೇ ದೊಡ್ಡ ಮೊತ್ತದ ಸಾಲ ಅಥವಾ ಹೂಡಿಕೆಯಿಂದ ದೂರವಿರಿ. ಮಾತಿನಲ್ಲಿ ಹಾಗೂ ವರ್ತನೆಯಲ್ಲಿ ಸಂಯಮದಿಂದ ಇರುವುದರಿಂದ ಜಗಳ ಅಥವಾ ಮನಸ್ತಾಪಗಳನ್ನು ತಪ್ಪಿಸಲು ಸಹಾಯ ಆಗುತ್ತದೆ.
ಸಿಂಹ ರಾಶಿ (ಮಿಶ್ರ ಫಲ)
ಸಿಂಹ ರಾಶಿಯವರಿಗೆ ಈ ಚಂದ್ರಗ್ರಹಣವು ಮಿಶ್ರ ಫಲಗಳ ನೀಡಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲು ಸ್ವಲ್ಪ ಹೆಚ್ಚು ಪರಿಶ್ರಮ ಮತ್ತು ತಾಳ್ಮೆ ಬೇಕಾಗುತ್ತದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಅಥವಾ ಆರ್ಥಿಕ ಒಪ್ಪಂದಗಳಲ್ಲಿ ಸ್ಪಷ್ಟತೆ ಇಟ್ಟುಕೊಳ್ಳುವುದು ಒಳಿತು. ಇಲ್ಲದಿದ್ದರೆ ಭಿನ್ನಾಭಿಪ್ರಾಯ ಮೂಡಬಹುದು. ಸಂಗಾತಿಯೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸುವುದರಿಂದ ಮನಸ್ತಾಪಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ಹೆಚ್ಚಿನ ನೆಮ್ಮದಿ ಮತ್ತು ಧೈರ್ಯ ದೊರೆಯುತ್ತದೆ.
ಕನ್ಯಾ ರಾಶಿ (ಶುಭ ಫಲ)
ಕನ್ಯಾ ರಾಶಿಯವರಿಗೆ ಈ ಗ್ರಹಣದ ಪ್ರಭಾವದಿಂದ ಜೀವನದ ವಿವಿಧ ರಂಗಗಳಲ್ಲಿ ಶುಭ ಫಲಗಳು ಗೋಚರಿಸಲಿವೆ. ನಿಮ್ಮ ಬುದ್ಧಿವಂತಿಕೆ ಮತ್ತು ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವು ಕಠಿಣ ಸಂದರ್ಭಗಳಲ್ಲೂ ನಿಮಗೆ ಜಯ ತಂದುಕೊಡಲಿದೆ. ವಿದ್ಯಾರ್ಥಿಗಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧಗೊಳ್ಳುತ್ತಿರುವವರಿಗೆ ಉತ್ತಮ ಕಾಲಘಟ್ಟ ಇದಾಗಿದೆ. ವ್ಯಾಪಾರದಲ್ಲಿ ಹೊಸ ಯೋಜನೆಗಳು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬರಲಿದ್ದು, ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ ಮತ್ತು ಶುಭ ಕಾರ್ಯಗಳು ನಡೆಯಲಿವೆ.
ಕೇಮದ್ರುಮ ಯೋಗ: ರಾಜವಂಶದಲ್ಲಿ ಹುಟ್ಟಿದರೂ ದಾರಿದ್ರ್ಯ ತರುವ ದೋಷವೇ? ವೈದಿಕ ಜ್ಯೋತಿಷ್ಯದ ಶಾಸ್ತ್ರೋಕ್ತ ವಿವರಣೆ
ತುಲಾ ರಾಶಿ (ಮಿಶ್ರ ಫಲ)
ತುಲಾ ರಾಶಿಯವರಿಗೆ ಈ ಅವಧಿಯಲ್ಲಿ ಲಾಭ ಹಾಗೂ ನಷ್ಟಗಳೆರಡೂ ಸಮಾನವಾಗಿ ಪ್ರಾಪ್ತಿಯಾಗಲಿವೆ. ವೃತ್ತಿಜೀವನದಲ್ಲಿ ನಿತ್ಯದ ಕೆಲಸಗಳು ಸರಾಗವಾಗಿ ಸಾಗಿದರೂ ನಿರೀಕ್ಷಿತ ದೊಡ್ಡ ಬದಲಾವಣೆಗಳು ಅಥವಾ ಬಡ್ತಿಗಾಗಿ ಸ್ವಲ್ಪ ಕಾಯಬೇಕಾಗುತ್ತದೆ. ಕೌಟುಂಬಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಿ, ಮರೆಯಾಗುವ ಸಾಧ್ಯತೆಯಿದೆ. ಆದರೆ ಪರಸ್ಪರ ಮಾತುಕತೆಯಿಂದ ಎಲ್ಲವೂ ಸರಿಹೋಗುತ್ತದೆ. ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡದೆ ಸಮತೋಲಿತ ಆಹಾರ ಶೈಲಿಯನ್ನು ಅನುಸರಿಸುವುದು ಒಳ್ಳೆಯದು.
ವೃಶ್ಚಿಕ ರಾಶಿ (ಅಶುಭ ಫಲ)
ವೃಶ್ಚಿಕ ರಾಶಿಯವರಿಗೆ ಈ ಗ್ರಹಣದ ಸಂಚಾರವು ಅಶುಭ ಫಲಗಳನ್ನು ತರಲಿದ್ದು, ಪ್ರತಿ ಹೆಜ್ಜೆಯಲ್ಲೂ ಎಚ್ಚರಿಕೆ ಅಗತ್ಯ. ಮಾನಸಿಕ ಆತಂಕಗಳು ಅಥವಾ ಯಾವುದೇ ಆಧಾರವಿಲ್ಲದ ಚಿಂತೆಗಳು ನಿಮ್ಮನ್ನು ಕಾಡಲಿವೆ. ಆದ್ದರಿಂದ ಧ್ಯಾನ ಅಥವಾ ಯೋಗದ ಮೊರೆ ಹೋಗಿ. ವ್ಯಾಪಾರ ಅಥವಾ ವೃತ್ತಿಯಲ್ಲಿ ಸ್ಪರ್ಧಿಗಳಿಂದ ಅಥವಾ ವಿರೋಧಿಗಳಿಂದ ಕೆಲವು ತೊಡಕುಗಳು ಎದುರಾಗಲಿವೆ. ಹಣಕಾಸಿನ ವಿಷಯದಲ್ಲಿ ಯಾವುದೇ ದೊಡ್ಡ ನಿರ್ಧಾರಗಳನ್ನು ಅಥವಾ ಸಾಲದ ವ್ಯವಹಾರಗಳನ್ನು ಈ ಸಮಯದಲ್ಲಿ ಮುಂದೂಡುವುದು ಉತ್ತಮ.
ಧನುಸ್ಸು ರಾಶಿ (ಶುಭ ಫಲ)
ಧನುಸ್ಸು ರಾಶಿಯವರಿಗೆ ಈ ಚಂದ್ರಗ್ರಹಣವು ಅನುಕೂಲಕರವಾದ ಶುಭ ಫಲಗಳನ್ನು ನೀಡಲಿದೆ. ದೈವಿಕ ಚಿಂತನೆಗಳು ಹೆಚ್ಚಾಗುವುದರೊಂದಿಗೆ ನಿಮ್ಮ ದೀರ್ಘಕಾಲದ ಕನಸುಗಳು ಅಥವಾ ಆಸೆಗಳು ಸಾಕಾರಗೊಳ್ಳುವ ಸಮಯ ಇದು. ದೂರಯಾಣ ಅಥವಾ ವಿದೇಶಿ ಸಂಪರ್ಕಗಳಿಂದ ವ್ಯಾಪಾರಸ್ಥರಿಗೆ ದೊಡ್ಡ ಮಟ್ಟದ ಆರ್ಥಿಕ ಲಾಭ ಸಿಗುವ ಯೋಗವಿದೆ. ಸಮಾಜದಲ್ಲಿ ನಿಮ್ಮ ಗೌರವ ಹಾಗೂ ಖ್ಯಾತಿ ಉತ್ತುಂಗಕ್ಕೇರಲಿದೆ ಮತ್ತು ಹಿರಿಯರ ಆಶೀರ್ವಾದದಿಂದ ಪ್ರಮುಖ ಕಾರ್ಯಗಳು ವಿಘ್ನವಿಲ್ಲದೆ ನೆರವೇರುತ್ತವೆ.
ಜಾತಕದಲ್ಲಿ ಶಕಟ ಯೋಗವಿದ್ದರೆ ಜೀವನ ಬಂಡಿ ಏರಿಳಿತದ ಹಾದಿಯೇ? ಇಲ್ಲಿದೆ ಸಮಗ್ರ ಮಾಹಿತಿ ಮತ್ತು ಪರಿಹಾರ!
ಮಕರ ರಾಶಿ (ಮಿಶ್ರ ಫಲ)
ಮಕರ ರಾಶಿಯವರಿಗೆ ಈ ಗ್ರಹಣವು ಮಿಶ್ರ ಫಲಗಳನ್ನು ನೀಡಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗಲು ಸ್ವಲ್ಪ ವಿಳಂಬವಾಗಬಹುದು, ಆದರೆ ಅಂತಿಮವಾಗಿ ನಿಮ್ಮ ಕೆಲಸಗಳು ಯಶಸ್ವಿಯಾಗುತ್ತವೆ. ಹಣಕಾಸಿನ ವಿಚಾರದಲ್ಲಿ ಕೈಯಲ್ಲಿ ಧನವಿದ್ದರೂ ಅನಿರೀಕ್ಷಿತ ಖರ್ಚುಗಳು ಎದುರಾಗುವ ಸಂಭವವಿದೆ. ಬಜೆಟ್ ಕಾಪಾಡಿಕೊಳ್ಳಿ. ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಇಟ್ಟುಕೊಳ್ಳುವುದು ನಿಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡುತ್ತದೆ. ಆರೋಗ್ಯದ ದೃಷ್ಟಿಯಿಂದ ದಿನಚರಿಯಲ್ಲಿ ನಿಯಮಿತ ವ್ಯಾಯಾಮವನ್ನು ರೂಢಿಸಿಕೊಳ್ಳಿ.
ಕುಂಭ ರಾಶಿ (ಅಶುಭ ಫಲ)
ನಿಮ್ಮದೇ ರಾಶಿಯಲ್ಲಿ ಈ ಗ್ರಹಣ ಸಂಭವಿಸುತ್ತಿರುವುದರಿಂದ ವಿಶೇಷ ಎಚ್ಚರಿಕೆ ಹಾಗೂ ಜಾಗರೂಕತೆ ವಹಿಸುವುದು ಅತ್ಯವಶ್ಯಕ, ಏಕೆಂದರೆ ಇದು ಅಶುಭ ಫಲಗಳನ್ನು ನೀಡಲಿದೆ. ಶಾರೀರಿಕ ಆಯಾಸ, ಮಾನಸಿಕ ಒತ್ತಡ ಅಥವಾ ಉತ್ಸಾಹದ ಕೊರತೆ ನಿಮ್ಮ ದೈನಂದಿನ ಕೆಲಸಗಳ ಮೇಲೆ ಪರಿಣಾಮ ಬೀರಲಿದೆ. ನಿರ್ಧಾರಗಳನ್ನು ಕೈಗೊಳ್ಳುವಾಗ ಆತುರ ಬೇಡ, ಹಿರಿಯರ ಅಥವಾ ಅನುಭವಿಗಳ ಸಲಹೆಯನ್ನು ಪಡೆದು ಮುಂದಕ್ಕೆ ಹೆಜ್ಜೆ ಇಡುವುದು ಬುದ್ಧಿವಂತಿಕೆ. ಅನವಶ್ಯಕ ವಾಗ್ವಾದಗಳಿಂದ ದೂರವಿರಿ ಮತ್ತು ಆರೋಗ್ಯದ ಕಡೆಗೆ ಆದ್ಯತೆ ನೀಡಿ.
ಮೀನ ರಾಶಿ (ಅಶುಭ ಫಲ)
ಮೀನ ರಾಶಿಯವರಿಗೆ ಈ ಗ್ರಹಣದ ಪ್ರಭಾವದಿಂದ ಪ್ರತಿಕೂಲವಾದ ಅಶುಭ ಫಲಗಳು ಎದುರಾಗಲಿದೆ. ಖರ್ಚು ವೆಚ್ಚಗಳು ನಿಮ್ಮ ಆದಾಯಕ್ಕಿಂತ ಹೆಚ್ಚಾಗುವ ಸಂಭವವಿರುವುದರಿಂದ ಆರ್ಥಿಕ ಮುಗ್ಗಟ್ಟನ್ನು ತಪ್ಪಿಸಲು ಹಣಕಾಸಿನ ನಿರ್ವಹಣೆ ಅಗತ್ಯ. ಯಾವುದೇ ಪ್ರಮುಖ ಅಥವಾ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಅಥವಾ ನಿದ್ರಾಹೀನತೆ ಕಾಡಲಿದೆ. ಆದ್ದರಿಂದ ವಿಶ್ರಾಂತಿಗೆ ಹೆಚ್ಚಿನ ಗಮನ ನೀಡಿ. ಧೈರ್ಯ ಮತ್ತು ಸಂಯಮದಿಂದ ಈ ಅವಧಿಯನ್ನು ದಾಟುವುದು ಸೂಕ್ತ.
27 ನಕ್ಷತ್ರಗಳ ಸ್ವಭಾವ, ಗುಣಲಕ್ಷಣಗಳು: ನಿಮ್ಮ ನಕ್ಷತ್ರದ ಪ್ರಭಾವ ಹೇಗಿದೆ ತಿಳಿಯಿರಿ
ಪರಿಹಾರ:
ರಾಹು ಮತ್ತು ಚಂದ್ರನ ದೋಷ ನಿವಾರಣೆಗಾಗಿ ದಾನ ಮಾಡಿ. ಮಾನಸಿಕ ಅಸ್ಥಿರತೆ ಮತ್ತು ನೆಗೆಟಿವ್ ಎನರ್ಜಿಯನ್ನು ದೂರವಿಡಲು ರಾಹುವಿಗಾಗಿ ಉದ್ದು ಹಾಗೂ ಚಂದ್ರನಿಗಾಗಿ ಅಕ್ಕಿಯನ್ನು ದಾನ ಮಾಡುವುದು ಶ್ರೇಯಸ್ಕರವಾಗಿದೆ. ಇದರೊಂದಿಗೆ ಬಿಳಿ ವಸ್ತ್ರದ ಮೇಲೆ ಚಂದ್ರ ಬಿಂಬ ಇಟ್ಟು ದಾನ ನೀಡುವುದರಿಂದ ಚಂದ್ರಬಲ ಹೆಚ್ಚಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ.
ಲೇಖನ- ಶ್ರೀನಿವಾಸ ಮಠ









