ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನು ಎರಡು ವರ್ಷಕ್ಕಿಂತ ಸ್ವಲ್ಪ ಕಡಿಮೆ ಸಮಯ ಬಾಕಿ ಉಳಿದಿದೆ. ಇಂಥ ಸನ್ನಿವೇಶದಲ್ಲಿ ಸದಾ ಅಧ್ಯಯನಶೀಲರೂ ಚುನಾವಣೆ ಭವಿಷ್ಯ ವಿಶ್ಲೇಷಣೆ ಮಾಡುವುದರಲ್ಲಿ ಬಹಳ ಗಟ್ಟಿಗರೂ ಆದ ಉಡುಪಿಯ ಕಾಪು ಮೂಲದ ಖ್ಯಾತ ಜ್ಯೋತಿಷಿ, ಅಧ್ಯಾತ್ಮ ಚಿಂತಕರೂ ಆದ ಪ್ರಕಾಶ್ ಅಮ್ಮಣ್ಣಾಯ ಅವರು ‘ರಾಜಕೀಯ ಭವಿಷ್ಯ’ ನುಡಿದಿದ್ದಾರೆ. ಈ ಲೇಖನವನ್ನು ಎಕ್ಸ್‌ಕ್ಲೂಸಿವ್ ಆಗಿ ‘ಶ್ರೀಗುರುಭ್ಯೋ.ಕಾಮ್’ ವೆಬ್‌ಸೈಟ್‌ಗಾಗಿಯೇ ನೀಡಿದ್ದಾರೆ. ಏನು ಹೇಳಿದ್ದಾರೆ ಪ್ರಕಾಶ್ ಅಮ್ಮಣ್ಣಾಯ ಅವರು ಎಂಬುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಹಿಂದೊಮ್ಮೆ ಬರೆದಿದ್ದೆ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುತ್ತಾರೆ ಎಂದು. ನನಗೆ ಕೆಲವೊಮ್ಮೆ ಇದ್ದಕ್ಕಿದ್ದಂತೆ ಒಂದೊಂದು ಯೋಚನೆ ಬರೋದಿದೆ. ಆಗ ಕೆಲ ನಾಯಕರ ಜಾತಕ ವಿಮರ್ಶೆ ಮಾಡೋದು ನನ್ನ ಹವ್ಯಾಸವೂ ಸಂಶೋಧನೆಯೂ ಆಗಿದೆ. ಆಗ ಬಿಜೆಪಿ ನಾಯಕರು ಇದು ಅಸಾಧ್ಯ ಎಂದದ್ದಿದೆ. ಯಾಕೆಂದರೆ ಬಿಜೆಪಿ ನಾಯಕರಿಗೆ ನಾವು ಸರಕಾರ ಮಾಡಿಯೇ ಮಾಡ್ತೇವೆ ಎಂಬ ಗರ್ವ ಇತ್ತು. ಇರಲಿ, ಕನ್ನಡಾಂಬೆ ತಾಯಿ ಚಾಮುಂಡೇಶ್ವರಿಗೆ ಎಲ್ಲರೂ ಮಕ್ಕಳಲ್ಲವೇ? ಆಕೆಗೆ ಆ ಪಕ್ಷ ಈ ಪಕ್ಷ ಎಂಬ ಭೇದವಿಲ್ಲ. ಆದರೆ ಆಕೆಯ ಕುಂಕುಮ ಪ್ರಸಾದವನ್ನು ಹಣೆಗೆ ಹಚ್ಚಿಕೊಳ್ಳಲು ನಿರಾಕರಿಸಿದವರಿಗೆ ಅನುಗ್ರಹ ಕಡಿಮೆಯಾದೀತಷ್ಟೆ.
ವಿಷಯಕ್ಕೆ ಬರೋಣ. 2028ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಪೀಠ ಯಾರಿಗೆ?
ಹಿಂದೆಯೂ ಕುಮಾರಣ್ಣ ಸಿಎಂ ಆಗಿಯೇ ಆಗುತ್ತಾರೆ ಎಂದಿದ್ದಕ್ಕೆ ಬಿಜೆಪಿಗರು ನಕ್ಕಿದ್ದರು. ಯೋಗ ಬಲಿಷ್ಠ ಇದ್ದಾಗ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಸಿದ್ಧರಾಮಯ್ಯನವರು ವೇದಿಕೆಯಲ್ಲೇ ನಿಂತು, ಐದು ವರ್ಷ ನಾನೇ ಸಿಎಂ ಎಂದಿದ್ದರು. ಆದರೂ ಹೇಗೆ ಡಿಕೆ ಶಿವಕುಮಾರ್ ಅವರಿಗೆ ಒಲಿಯಿತು?
ಏನೇನೋ ಪೂಜೆ, ಯಾಗ ಮಾಡಿಸಿದರು, ಹಾಗಾಗಿ ಸಿಕ್ಕಿತು ಎಂದವರೂ ಇದ್ದಾರೆ. ಆದರೆ ಪೂಜೆ ಪುನಸ್ಕಾರಗಳಿರೋದು ಅಧಿಕಾರ ಪಡೆಯಲಿಕ್ಕಲ್ಲ. ‘ಈ ರಾಜ್ಯದಲ್ಲಿ ಇಷ್ಟು ವರ್ಷ ಸೇವೆ ಮಾಡಲು ಅವಕಾಶ ಕೊಟ್ಟಂತಹ ಹೇ ದೇವರೇ, ನಿನಗೆ ಶರಣು’ ಎಂದು ಕೃತಜ್ಞತೆ ಸಲ್ಲಿಸಿ, ಮುಂದೆಯೂ ಸೇವಾ ಮನೋಭಾವನೆಯ ಜ್ಞಾನ ನೀಡು ಎಂಬ ಉದ್ದೇಶದಿಂದ, ರಾಜ್ಯದ ರಕ್ಷಣೆ ಮಾಡು ಎಂಬ ಧ್ಯೇಯದಿಂದ ಇರಬೇಕು. ದುರುದ್ದೇಶದಿಂದ ಪೂಜೆ, ಹೋಮ ಮಾಡಿದರೆ ಅದು ಮಾಟವೇ ಆಗುತ್ತದೆ.
2028ಕ್ಕೆ ಗುರುವು ಕನ್ಯಾರಾಶಿಯಲ್ಲಿ ಬಂದಾಗ ಕುಮಾರಸ್ವಾಮಿಯವರ ಜಾತಕದಲ್ಲಿ ಅನುಕೂಲಕರ ಗ್ರಹಸ್ಥಿತಿ ಆಗುತ್ತದೆ:
ವೃಷಭ ಲಗ್ನದ ಏಕಾದಶಕ್ಕೆ ಗುರು ದೃಷ್ಟಿ.
ಚಂದ್ರ ಕರ್ಮಸ್ಥಾನಕ್ಕೆ ಗುರು ದೃಷ್ಟಿ.
ಚಂದ್ರ ರಾಶ್ಯಾಧಿಪತಿ ಬುಧನ ಸ್ಥಿತಿಗೆ ಏಕಾದಶ ಗುರು.
ಜಾತಕದ ಆತ್ಮಕಾರಕ ಗುರುವಿನ ಸ್ಥಿತಿಗೆ ಗೋಚರದ ಗುರು ಏಕಾದಶದಲ್ಲಿ.
ಇತರ ಆಕಾಂಕ್ಷಿಗಳನ್ನು ಶತ್ರು ಎಂದೇ ಭಾವಿಸಬೇಕು. ಆಗ ಷಷ್ಠಾಧಿಪತಿ ಶುಕ್ರನು ಜಾತಕದಲ್ಲಿ ತುಲಾದಲ್ಲಿದ್ದು, ಅದಕ್ಕೆ ವ್ಯಯದಲ್ಲಿ ಗುರು ಇರುತ್ತಾನೆ. ಹೀಗಿದ್ದಾಗ ಶತ್ರು ಪರಾಜಯ ನಿಶ್ಚಿತ. ಎಲ್ಲದಕ್ಕಿಂತಲೂ ಮುಖ್ಯವಾಗಿ, ಆತ್ಮಕಾರಕನಿಗೆ ಅನುಕೂಲ ಸ್ಥಿತಿಯ ಗುರು!
ಇವಿಷ್ಟು ಮುಖ್ಯಮಂತ್ರಿ ಸ್ಥಾನ ಪಡೆಯುವ ಯೋಗಭಾಗ್ಯ.
ಸರ್ವಾಷ್ಟಕವರ್ಗದಲ್ಲಿ ಈ ಕನ್ಯಾರಾಶಿಯು ದುರ್ಬಲ ಆಗಿದ್ದರೆ ಯೋಗಭಂಗವೂ ಆಗುತ್ತದೆ. ಆದರೆ ಇವರ ಜಾತಕದಲ್ಲಿ ಕನ್ಯಾರಾಶಿಯಲ್ಲಿ 37 ಸಂಖ್ಯೆ ಇದೆ. 24ಕ್ಕಿಂತ ಕಡಿಮೆ ಇದ್ದರೆ ಅದು ದುರ್ಬಲ ಯೋಗ ಆಗುತ್ತದೆ. ಇಲ್ಲಿ ಇದು ಅತೀ ಬಲಿಷ್ಠವಾಗಿದೆ.
ಕರ್ನಾಟಕದಲ್ಲಿ ಇಂತಹ ಜಾತಕ ಕೇವಲ ಕುಮಾರಸ್ವಾಮಿಯವರದ್ದು ಮಾತ್ರ ಎಂದು ನಾನು ಹೇಳಲಾರೆ. ಇದಕ್ಕಿಂತಲೂ ಬಲಿಷ್ಠವಾದುದು ಇನ್ನೊಬ್ಬರಲ್ಲಿ ಇರಲೂಬಹುದು. ಆದರೆ ನಾನು ಇಲ್ಲಿ ನನಗೆ ಲಭಿಸಿದ ಜಾತಕದ ವಿಶ್ಲೇಷಣೆ ಮಾಡಿದ್ದಷ್ಟೆ. ಇವರಿಗೆ ಅಂತಹ ಯೋಗ ಇದೆ ಎಂದು ಹೇಳಿದ್ದಷ್ಟೆ.
ಆತ್ಮಕಾರಕ ಗುರು ಆಗಿರುವುದರಿಂದ, ಇವರು ರುದ್ರ ದೇವರ ಪ್ರೀತ್ಯರ್ಥ ಅತಿರುದ್ರ ಯಾಗ ಮಾಡಿದರೆ, ಇವರ ಯೋಗವನ್ನು ಹರಣ ಮಾಡುವ ಗ್ರಹಸ್ಥಿತಿ ಬರಲಾರದು.
ಕರ್ನಾಟಕ ಜ್ಯೋತಿಷಿಯಿಂದ ಪ್ರಧಾನಿ ನರೇಂದ್ರ ಮೋದಿಗೆ ಕುಕ್ಕೆ ಸುಬ್ರಹ್ಮಣ್ಯದ ಸ್ವರ್ಣಾರ್ಚನೆಗೆ ಸಲಹೆ
ಯಾರ್ಯಾರೋ ಯಾವುದು ಯಾವುದೋ ಯಾಗ-ಯಜ್ಞಗಳ ಸಲಹೆ ಮಾಡಿರಬಹುದು. ಆದರೆ ಯಾವುದೇ ದೇವಕಾರ್ಯಗಳು ಆತ್ಮಕಾರಕನ ಅನುಕೂಲ ಸ್ಥಿತಿಗೆ ಪೂರಕವಾಗಿದ್ದರೆ ಮಾತ್ರ ಫಲಿತಕ್ಕೆ ಬರುತ್ತವೆ. ಇದರ ಜತೆಗೆ, ಗುರುವು ಇವರ ಜಾತಕದ ಚಂದ್ರರಾಶಿಯ ಕರ್ಮಸ್ಥಾನವನ್ನೂ ವೀಕ್ಷಿಸುತ್ತಾನೆ. ಆದ್ದರಿಂದ ಕರ್ಮಪರಿವರ್ತನೆಯೂ ಕ್ಷೇತ್ರಾಭಿವೃದ್ಧಿಯೂ ಆಗುತ್ತದೆ. ಇದರ ಜತೆಗೆ ಮತ್ತೊಂದೆಡೆ ಇದು ದುಃಖಸೂಚಕವೂ ಆಗಿರುತ್ತದೆ. ರುದ್ರ ದೇವರ ಆರಾಧನೆಯಿಂದ ದುಃಖ ನಾಶವೂ ಆಗುತ್ತದೆ. ಹೃದಯ ಸಂಬಂಧಿತ ರೋಗ ನಿವಾರಣೆಗೂ ರುದ್ರನ ಅನುಗ್ರಹ ಬೇಕೇ ಬೇಕು.
ಲೇಖನ- ಪ್ರಕಾಶ್ ಅಮ್ಮಣ್ಣಾಯ









