Mars Transit In Taurus: ವೃಷಭದಲ್ಲಿ ಕುಜ ಸಂಚಾರ ಫಲ ಯಾವ ರಾಶಿಯವರಿಗೆ ಹೇಗೆ?

Astrology chart showing Mars transit in Taurus from June 20 to August 2, featuring the 12 zodiac signs with predictions like Gain and Caution.
ವೃಷಭ ರಾಶಿಯಲ್ಲಿ ಕುಜ ಸಂಚಾರ (ಜೂನ್ 20 ರಿಂದ ಆಗಸ್ಟ್ 2): ದ್ವಾದಶ ರಾಶಿಗಳ ಮೇಲಾಗುವ ಗೋಚಾರ ಫಲಗಳ ಒಂದು ನೋಟ.

ಇದೇ ಜೂನ್ 20ನೇ ತಾರೀಕು ಕುಜ ಗ್ರಹ (Mars Transit) ವೃಷಭ ರಾಶಿಯನ್ನು (Taurus Zodiac Sign) ಪ್ರವೇಶ ಮಾಡುತ್ತದೆ. ಆಗಸ್ಟ್ 2ನೇ ತಾರೀಕಿನ ತನಕ ವೃಷಭ ರಾಶಿಯಲ್ಲಿಯೇ ಸಂಚರಿಸಿ, ಆ ನಂತರ ಮಿಥುನ ರಾಶಿಗೆ ಪ್ರವೇಶಿಸುತ್ತದೆ. ಕುಜ ಗ್ರಹಕ್ಕೆ ಮೇಷ- ವೃಶ್ಚಿಕ ರಾಶಿಗಳು ಸ್ವಕ್ಷೇತ್ರ (Own house). ಇನ್ನು ಮಕರ ರಾಶಿಯು ಉಚ್ಚ ಕ್ಷೇತ್ರವಾದರೆ (Exaltation), ಕರ್ಕಾಟಕ ರಾಶಿಯು ನೀಚ ಕ್ಷೇತ್ರವಾಗುತ್ತದೆ (Debilitation). ಮೃಗಶಿರಾ, ಚಿತ್ತಾ ಹಾಗೂ ಧನಿಷ್ಠಾ ನಕ್ಷತ್ರಗಳಿಗೆ ಮಂಗಳ ಅಧಿಪತಿ ಆಗುತ್ತಾನೆ. ಸಾಮಾನ್ಯವಾಗಿ ಕುಜ ದಶೆಯ (Kuja Dasha) ಅವಧಿ ಏಳು ವರ್ಷಗಳಾಗಿರುತ್ತದೆ. ವೃಷಭ ರಾಶಿಯಲ್ಲಿ ಕುಜ ಸಂಚರಿಸುವ ಈ ಅವಧಿಯಲ್ಲಿ ಮೇಷದಿಂದ ಮೀನದ ತನಕ ಹನ್ನೆರಡು ರಾಶಿಗಳ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗುವುದು. ನೆನಪಿನಲ್ಲಿಡಿ, ಇದು ಗೋಚಾರದ ಫಲ ಮಾತ್ರ, ಮುಖ್ಯವಾದ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಿದ್ದಲ್ಲಿ ಜನ್ಮ ಜಾತಕದ ವಿಶ್ಲೇಷಣೆಯನ್ನು (Birth chart analysis) ಮಾಡಿಸಿಕೊಳ್ಳಿ.

ಮೇಷ: ನಿಮ್ಮ ಹಣ ಕೈ ಸೇರುವ ತನಕ ತಾಳ್ಮೆ ಇರಲಿ

ನಿಮ್ಮ ರಾಶಿಗೆ ಎರಡನೇ ಮನೆಯಲ್ಲಿ ಕುಜ ಸಂಚರಿಸುವ ಈ ಅವಧಿಯಲ್ಲಿ ನಿಮಗೆ ಬರಬೇಕಾದ ಹಣವು ಸಿಟ್ಟಿನ ಕಾರಣಕ್ಕೆ ಬಾರದಂತೆ ಆಗುತ್ತದೆ. ಮಾತು- ಬಳಸುವ ಪದಗಳ ಬಗ್ಗೆ ನಿಗಾ ಇರಲಿ. ಅನಾರೋಗ್ಯ ಕಾರಣಕ್ಕೆ ಹೆಚ್ಚಿನ ಹಣವು ನಿಮಗೆ ಖರ್ಚಾಗಲಿದೆ. ನಿಮಗಿಂತ ಬಲಿಷ್ಠರ ವಿರೋಧ ಕಟ್ಟಿಕೊಳ್ಳುವಂತೆ ಆಗಲಿದೆ. ಭೂಮಿ ವ್ಯಾಜ್ಯಗಳು ಇದ್ದಲ್ಲಿ ಅದರ ಸಲುವಾಗಿ ಕೋರ್ಟ್- ಕಚೇರಿ, ಪೊಲೀಸ್ ಸ್ಟೇಷನ್ ಎಂದು ಅಲೆದಾಡುವಂಥ ಸನ್ನಿವೇಶ ಎದುರಾಗಲಿದೆ. ಇತರರ ವ್ಯವಹಾರಗಳಲ್ಲಿ ಮೂಗು ತೂರಿಸುವುದಕ್ಕೆ ಹೋಗಬೇಡಿ. ಇಂಥ ದಿನ ನಿಮಗೆ ಹಣ ನೀಡುವುದಾಗಿ ಹೇಳಿದ್ದವರು ಈಗ ತಮ್ಮಿಂದ ಕೊಡುವುದಕ್ಕೆ ಆಗಲ್ಲ ಎಂದು ನಿರ್ದಾಕ್ಷಿಣ್ಯವಾಗಿ ತಿಳಿಸಲಿದ್ದಾರೆ. ಬಾಯಿಹುಣ್ಣು, ಗಂಟಲು ನೋವು ಇಂಥ ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ಅಥವಾ ಈ ಅವಧಿಯಲ್ಲಿ ಕಾಣಿಸಿಕೊಂಡಲ್ಲಿ ಎಚ್ಚರಿಕೆ ವಹಿಸಿ.

ವೃಷಭ: ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ವಿರೋಧ

ನಿಮ್ಮದೇ ಜನ್ಮ ರಾಶಿಯಲ್ಲಿ ಕುಜ ಗ್ರಹದ ಸಂಚಾರ ಇರುತ್ತದೆ. ಬಿ.ಪಿ., ಇರುವಂಥವರು ಔಷಧೋಪಚಾರ- ವೈದ್ಯೋಪಚಾರ ತೆಗೆದುಕೊಳ್ಳಬೇಕಾಗುತ್ತದೆ. ನೀವೇ ಆಡಿದ ಮಾತನ್ನು “ನಾನು ಹಾಗೆ ಹೇಳಲೇ ಇಲ್ಲ, ನನಗೆ ಗೊತ್ತೇ ಇಲ್ಲ,” ಎಂದು ವಿತಂಡ ವಾದಕ್ಕೆ ಇಳಿಯುತ್ತೀರಿ. ಸಾರ್ವಜನಿಕ ಜೀವನದಲ್ಲಿ ಇರುವಂಥ ವ್ಯಕ್ತಿಗಳು ಭಾರೀ ಪ್ರಮಾಣದ ವಿರೋಧ ಎದುರಿಸುವಂತೆ ಆಗಲಿದೆ. ಭೂಮಿಗೆ ಸಂಬಂಧಿಸಿದ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವೇ ಆಗದ ಸ್ಥಿತಿ ನಿಮ್ಮದಾಗಲಿದೆ. ನಿಮ್ಮಲ್ಲಿ ಯಾರು ಮಾನಸಿಕ ಸಮಸ್ಯೆಗಳಿಗೆ ಔಷಧಿ ತೆಗೆದುಕೊಳ್ಳುತ್ತಾ ಇರುವಿರೋ ಅಂಥವರು ಫಾಲೋ ಅಪ್ ಚೆಕಪ್ ಸರಿಯಾಗಿ ಮಾಡಿಸಿಕೊಳ್ಳಿ. ನಿಮಗಿರುವ ವರ್ಚಸ್ಸು, ಪ್ರಭಾವವನ್ನು ಇತರರು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಪಾರದರ್ಶಕವಾಗಿ ವ್ಯವಹಾರ ಆಗುವುದಕ್ಕೆ ಪ್ರಾಧಾನ್ಯ ನೀಡಿ.

ಮಿಥುನ: ಭೂಮಿ ವ್ಯವಹಾರಗಳಲ್ಲಿ ಮನಸ್ತಾಪ

ನಿಮ್ಮ ರಾಶಿಗೆ ಹನ್ನೆರಡನೇ ಮನೆಯಲ್ಲಿ ಕುಜ ಗ್ರಹ ಸಂಚರಿಸುತ್ತದೆ. ಹೆಚ್ಚಿನ ಖರ್ಚನ್ನು ಮಾಡುವಂತೆ ಆಗುತ್ತದೆ. ಕೃಷಿ ಭೂಮಿ ಇರುವವರು, ಸೈಟು ಇರುವಂಥವರು ಅದರ ಅಳತೆ, ಚಕ್ಕುಬಂದಿ, ದಾಖಲೆ- ಪತ್ರಗಳು ಇತ್ಯಾದಿ ವಿಚಾರಗಳಿಗೆ ಜಗಳ- ಕಲಹ, ಮನಸ್ತಾಪಗಳು ಮಾಡಿಕೊಳ್ಳುವಂತೆ ಆಗಲಿದೆ. ಸೆಕೆಂಡ್ ಹ್ಯಾಂಡ್ ವಾಹನಗಳ ಖರೀದಿಯನ್ನು ಮಾಡದಿರುವುದು ಕ್ಷೇಮ, ಉತ್ತಮ. ಇನ್ನು ನಿಮ್ಮ ವಾಹನ ಹಾಗೂ ಮುಖ್ಯವಾದ ಯಂತ್ರಗಳ ರಿಪೇರಿಗೆ ಹೆಚ್ಚು ಹಣವನ್ನು ವೆಚ್ಚ ಮಾಡುವಂತೆ ಆಗಲಿದೆ.  ಮನೆಯಿಂದ ಹೊರ ಭಾಗದಲ್ಲಿ ಅಥವಾ ದೂರದಲ್ಲಿ ವಾಹನ ನಿಲ್ಲಿಸುವಂಥವರಿಗೆ ಕಿಡಿಗೇಡಿಗಳ ಕೃತ್ಯದಿಂದ ಸಮಸ್ಯೆಗಳು ಎದುರಾಗಲಿವೆ.  ರಿಯಲ್ ಎಸ್ಟೇಟ್, ಕಮಿಷನ್ ಆಧಾರದ ಮೇಲೆ ವ್ಯವಹಾರ ಮಾಡುವಂಥವರಿಗೆ ಹಣಕಾಸಿನ ವಿಚಾರದಲ್ಲಿ ನಷ್ಟ ಉಂಟಾಗಲಿದೆ. 

ನಿಮ್ಮ ಜಾತಕದಲ್ಲಿ ರುಚಕ ಯೋಗವಿದೆಯೇ? ಅದರ ಪೂರ್ಣ ಮಾಹಿತಿ

ಕರ್ಕಾಟಕ: ಲಾಭ – ಆದಾಯದಲ್ಲಿ ಹೆಚ್ಚಳ

ನಿಮ್ಮ ರಾಶಿಗೆ ಹನ್ನೊಂದನೇ ಮನೆಯಲ್ಲಿ ಕುಜ ಸಂಚಾರ ಆಗುತ್ತದೆ. ಬಹಳ ಸಮಯದಿಂದ ನಿಂತುಹೋಗಿದ್ದ ವ್ಯವಹಾರ- ವ್ಯಾಪಾರಗಳಲ್ಲಿ ಪ್ರಗತಿ ಕಾಣಲಿದೆ. ಮಕ್ಕಳ ವಿಚಾರದಲ್ಲಿ ನಿಮಗೆ ಬಹಳ ಚಿಂತೆಯನ್ನು ತಂದೊಡ್ಡಿದ್ದ ಸಂಗತಿಗಳು ಬಗೆಹರಿಯುವ ಸೂಚನೆ ದೊರೆಯಲಿದೆ. ಮಾರ್ಕೆಟಿಂಗ್, ಸೇಲ್ಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಉತ್ತಮವಾದ ಸಮಯ ಇದಾಗಲಿದೆ. ಅಣ್ಣ- ತಮ್ಮಂದಿರು, ಅಕ್ಕ- ತಂಗಿಯರ ಮಧ್ಯೆ ಇರುವಂಥ ಭಿನ್ನಾಭಿಪ್ರಾಯ- ಮನಸ್ತಾಪಗಳು ದೂರವಾಗಲಿದೆ. ಉದ್ಯೋಗ- ವೃತ್ತಿ ಸ್ಥಳದಲ್ಲಿ ನಿಮಗೆ ಹೆಚ್ಚಿನ ಮನ್ನಣೆ ಸಿಗಲಿದೆ. ನಿಮ್ಮಲ್ಲಿ ಕೆಲವರಿಗೆ ತಾತ್ಕಾಲಿಕ ಅವಧಿಗೆ ಉಸ್ತುವಾರಿ ನೋಡಿಕೊಳ್ಳಲು- ತಂಡವನ್ನು ಮುನ್ನಡೆಸಲು ಸೂಚಿಸಲಿದ್ದಾರೆ. ಅಡುಗೆ ಕೆಲಸ ಮಾಡುವವರಿಗೆ, ಗಣಿಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ, ಶಸ್ತ್ರಚಿಕಿತ್ಸೆಗೆ ಬಳಸುವಂಥ ಸಲಕರಣೆಗಳ ವ್ಯವಹಾರ ಮಾಡುವವರಿಗೆ ಲಾಭ- ಆದಾಯ ಹೆಚ್ಚಳ ಆಗಲಿದೆ.

ಸಿಂಹ: ಉದ್ಯೋಗ ಉಳಿಸಿಕೊಳ್ಳುವುದು ಆದ್ಯತೆಯಾಗಲಿ

ನಿಮ್ಮ ರಾಶಿಗೆ ಹತ್ತನೇ ಮನೆಯಲ್ಲಿ ಕುಜ ಗ್ರಹದ ಸಂಚಾರ ಆಗಲಿದೆ. ಉದ್ಯೋಗ ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಲಿದೆ. ಈ ಅವಧಿಯಲ್ಲಿ ಮೇಲಧಿಕಾರಿಗಳ ಜೊತೆಗೆ ಮಾತನಾಡುವಾಗ ಜಾಗ್ರತೆಯಿಂದ ಇರಬೇಕು. ವೇತನ ಹೆಚ್ಚಳ, ಬಡ್ತಿ ಇತ್ಯಾದಿ ವಿಚಾರಗಳಿಗೆ ಪಟ್ಟು ಹಿಡಿಯುವಂಥ ಸಮಯ ಇದಲ್ಲ. ಖಾಸಗಿ ಕಂಪನಿ- ಸಂಸ್ಥೆಗಳಲ್ಲಿ ಉದ್ಯೋಗ ಮಾಡುವಂಥವರು ನಿಮ್ಮ ಕಿವಿಗೆ ಬೀಳುವ ಸುದ್ದಿಯನ್ನು ಪ್ರಚಾರ ಮಾಡುವುದಕ್ಕೆ ಹೋಗಬೇಡಿ. ಯಾಕೆಂದರೆ ಈ ಸಮಯದಲ್ಲಿ ನಿಮ್ಮಲ್ಲಿ ಕೆಲವರು ಉದ್ಯೋಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮಂಗಳವಾರದ ದಿನ ನರಸಿಂಹ ದೇವರ ದೇವಸ್ಥಾನಕ್ಕೆ ತೆರಳಿ, ದರ್ಶನವನ್ನು ಪಡೆದುಕೊಳ್ಳಿ. ಸಾಧ್ಯವಾದಲ್ಲಿ ಮತ್ತು ಆ ದೇವಸ್ಥಾನದಲ್ಲಿ ವ್ಯವಸ್ಥೆಯೂ ಇದ್ದಲ್ಲಿ ಮಧು (ಜೇನುತುಪ್ಪ) ಅಭಿಷೇಕ ಮಾಡಿಸುವುದು ಕ್ಷೇಮ. ಕನ್ಸಲ್ಟೆನ್ಸಿ ಅಥವಾ ಬೇರೆ ಯಾವುದೇ ಜಾಬ್ ಏಜೆನ್ಸಿ ಇಂಥವುಗಳಿಗೆ ಹಣ ಕೊಟ್ಟಲ್ಲಿ, ಅದನ್ನು ಕಳೆದುಕೊಳ್ಳುತ್ತೀರಿ, ಜಾಗ್ರತೆ.

ಕನ್ಯಾ: ತಂದೆ ಆರೋಗ್ಯದ ಕಡೆ ಗಮನವಿರಲಿ

ನಿಮ್ಮ ರಾಶಿಗೆ ಒಂಬತ್ತನೇ ಮನೆಯಲ್ಲಿ ಕುಜ ಗ್ರಹದ ಸಂಚಾರ ಆಗಲಿದೆ. ತಂದೆಯವರು ಹಾಗೂ ತಂದೆ ಸಮಾನರಾದವರ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ಕೆಲವರಿಗೆ ಸಣ್ಣ- ಪುಟ್ಟದಾದರೂ ಆಪರೇಷನ್ ಮಾಡಿಸುವಂಥ ಸನ್ನಿವೇಶ ಎದುರಾಗಬಹುದು. ಆಸ್ತಿಯನ್ನು ಮಾರಾಟಕ್ಕೆ ಇಟ್ಟವರಿಗೆ ನಿರೀಕ್ಷಿತ ರೀತಿಯಲ್ಲಿ ಬೆಳವಣಿಗೆಗಳು ನಡೆಯುವುದಿಲ್ಲ. ಸರ್ಕಾರದಿಂದ ಆಗಬೇಕಾದ ಕಾಗದ- ಪತ್ರ, ದಾಖಲೆಗಳು ಅಂದುಕೊಂಡ ಸಮಯಕ್ಕೆ ಪೂರ್ಣಗೊಳ್ಳದೆ ವಿಳಂಬ ಆಗಲಿದೆ. ಧಾನ್ಯ ವರ್ತಕರು ದೊಡ್ಡ ಮಟ್ಟದ ಹೂಡಿಕೆಯನ್ನು ಮಾಡುವ ಮೊದಲಿಗೆ ಆಲೋಚನೆ ಮಾಡುವುದು ಬಹಳ ಮುಖ್ಯ. ನಿಮ್ಮ ಬಳಿ ಇರುವಂಥ ಹಣವನ್ನು ಮಾತ್ರ ಹೂಡಿಕೆ ಮಾಡಿ. ಹೊರಗಿನಿಂದ ಸಾಲ ತಂದಲ್ಲಿ, ಹೆಚ್ಚಿನ ಬಡ್ಡಿಗೆ ಸಾಲ ತಂದಲ್ಲಿ ನಷ್ಟ, ಅವಮಾನ ಎರಡನ್ನೂ ಅನುಭವಿಸುವಂತೆ ಆಗುತ್ತದೆ. ಗಡುವಿನೊಳಗೆ ಮುಗಿಯಬೇಕಾದ ಕೆಲಸ- ಕಾರ್ಯಗಳಿಗೆ ಪ್ರಾಶಸ್ತ್ಯ ಕೊಡಿ. 

ನಿಮ್ಮ ಕುಂಡಲಿಯಲ್ಲಿ ಕುಜ ಎಲ್ಲಿದ್ದಾನೆ? 12 ಭಾವಗಳಲ್ಲಿ ಮಂಗಳನ ಪ್ರಭಾವ ಮತ್ತು ಕುಜ ದೋಷಕ್ಕೆ ಸರಳ ಪರಿಹಾರಗಳು

ತುಲಾ: ಚರ್ಮದ ಆರೋಗ್ಯದ ಕಡೆಗೆ ಲಕ್ಷ್ಯ ನೀಡಿ

ನಿಮ್ಮ ರಾಶಿಗೆ ಎಂಟನೇ ಮನೆಯಲ್ಲಿ ಕುಜ ಗ್ರಹದ ಸಂಚಾರ ಆಗಲಿದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಈಗಾಗಲೇ ಇದ್ದಲ್ಲಿ ಆ ಕಡೆಗೆ ಹೆಚ್ಚಿನ ಗಮನ ನೀಡಿ. ನಿಮ್ಮಲ್ಲಿ ಕೆಲವರಿಗೆ ಈ ಅವಧಿಯಲ್ಲಿ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಆನ್ ಲೈನ್ ಮೂಲಕ ಔಷಧಿ ತರಿಸಿಕೊಳ್ಳುವುದು, ಸೋಷಿಯಲ್ ಮೀಡಿಯಾಗಳಲ್ಲಿ ನೋಡಿದ ಔಷಧಗಳನ್ನು ಖರೀದಿ ಮಾಡುವುದು ಇಂಥವುಗಳಿಂದ ದೂರ ಇರಿ. ನಿರ್ದಿಷ್ಟ ಔಷಧೋಪಚಾರ ತೆಗೆದುಕೊಳ್ಳುತ್ತಾ ಇರುವವರು ಅದರ ಬ್ರ್ಯಾಂಡ್ ಕೂಡ ನೀವಾಗಿಯೇ ಬದಲಾವಣೆ ಮಾಡಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮಲ್ಲಿ ಕೆಲವರು ಪೊಲೀಸ್ ಸ್ಟೇಷನ್, ಕೋರ್ಟ್- ಕಚೇರಿ ಅಲೆದಾಡುವಂಥ ಸನ್ನಿವೇಶ ಎದುರಾಗಲಿದೆ. ಹಿಮೋಗ್ಲೋಬಿನ್ ಕೊರತೆ ಇರುವಂಥವರು ಸೂಕ್ತ ವೈದ್ಯೋಪಚಾರದ ಕಡೆಗೆ ಗಮನ ನೀಡಿ. ಇನ್ನು ಕಿಡ್ನಿ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಾ ಇರುವವರು ನಿಮಗೆ ಈಗಾಗಲೇ ನೀಡಿರುವ ಮಾರ್ಗದರ್ಶನದಂತೆಯೇ ನಡೆದುಕೊಳ್ಳಿ.                                                                                            

ವೃಶ್ಚಿಕ: ಸಣ್ಣ- ಪುಟ್ಟದಾದರೂ ಅಪಘಾತ ಸಾಧ್ಯತೆ

ನಿಮ್ಮ ರಾಶಿಗೆ ಏಳನೇ ಮನೆಯಲ್ಲಿ ಕುಜ ಸಂಚಾರ ಇರಲಿದೆ. ದಂಪತಿ ಮಧ್ಯೆ ಮನಸ್ತಾಪ- ಭಿನ್ನಾಭಿಪ್ರಾಯ ಕಾಣಿಸಿಕೊಳ್ಳಲಿದೆ. ಇತರರ ವಿಚಾರಗಳಿಗೆ ಗಂಡ- ಹೆಂಡತಿ ಮಧ್ಯೆ ಜಗಳ- ಕಲಹಗಳು ಏರ್ಪಡಲಿವೆ. ರಾಸಾಯನಿಕ ವಸ್ತುಗಳೋ ಅಥವಾ ರಾಸಾಯನಿಕ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಇರುವ ವಸ್ತುಗಳನ್ನೋ ಬಳಸುವಾಗ ಜಾಗ್ರತೆ ಇರಲಿ.  ಸಂಗಾತಿ ಅಥವಾ ಗೆಳೆಯ/ಗೆಳತಿಗೆ ಕರೆಂಟ್ ಶಾಕ್ ಹೊಡೆಯುವುದು, ಅಡುಗೆ ಮಾಡುವಾಗ ಎಣ್ಣೆ ಅಥವಾ ಬಿಸಿ ಪದಾರ್ಥಗಳು ಮೈ ಮೇಲೆ ಹಾರಿ ಗಾಯ ಆಗುವುದು, ಸಣ್ಣ- ಪುಟ್ಟ ಅಪಘಾತಗಳು ಆಗುವುದು… ಇಂಥದ್ದರಿಂದ ಹಣದ ಖರ್ಚು ಹಾಗೂ ಆತಂಕ ಎರಡೂ ಉಂಟಾಗುತ್ತದೆ. ವ್ಯವಹಾರ ಮಾಡಿಯಾಗಿದೆ ಅಂತಾದಲ್ಲಿ ನಿಮ್ಮ ಕೈಗೆ ಹಣ ತಲುಪುವ ತನಕ ತಾಳ್ಮೆಯಿಂದ ವ್ಯವಹರಿಸಿ. 

ಧನುಸ್ಸು: ರಾಜೀ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ

ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಕುಜ ಗ್ರಹದ ಸಂಚಾರ ಆಗುತ್ತದೆ. ದೊಡ್ಡ ಮಟ್ಟದ ಖರ್ಚಿನ ಅಂದಾಜು ನೀವು ಹಾಕಿಕೊಂಡಿದ್ದಲ್ಲಿ ಅದು ಕಡಿಮೆ ಖರ್ಚಿನಲ್ಲಿ ಅಥವಾ ಖರ್ಚೇ ಇಲ್ಲದ ಪೂರ್ಣ ಆಗುವ ಸಾಧ‌್ಯತೆ ಇದೆ. ರಕ್ತಕ್ಕೆ ಸಂಬಂಧಿಸಿದ ಅಲರ್ಜಿ ಇರುವವರು ಆಹಾರ ವಿಚಾರದಲ್ಲಿ ಜಾಗ್ರತೆಯನ್ನು ವಹಿಸಿ. ಆಸ್ತಿ ವ್ಯಾಜ್ಯಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದಕ್ಕೆ ಇದು ಸರಿಯಾದ ಸಮಯ. ಇನ್ನು ಮನೆಯ ಹಿರಿಯರು ನಿಮ್ಮ ಮಕ್ಕಳ ಹೆಸರಿನಲ್ಲಿ ಆಸ್ತಿ ಮಾಡುವುದೋ ಅಥವಾ ಹಣವನ್ನು ಎಫ್.ಡಿ. ಮಾಡುವುದೋ ಅಥವಾ ಷೇರು- ಮ್ಯೂಚುವಲ್ ಫಂಡ್ ಗಳನ್ನು ಮಕ್ಕಳ ಹೆಸರಲ್ಲಿ ಖರೀದಿ ಮಾಡುವುದೋ ಇಂಥ ಯೋಗಗಳಿವೆ. ನಿಮ್ಮಲ್ಲಿ ಕೆಲವರಿಗೆ ಕೋರ್ಟ್- ಕಚೇರಿ, ಪೊಲೀಸ್ ಸ್ಟೇಷನ್ ಮೆಟ್ಟಿಲೇರಿರುವ ವ್ಯವಹಾರವನ್ನು ಮಾತುಕತೆ, ರಾಜೀ- ಸಂಧಾನದ ಮೂಲಕ ಬಗೆಹರಿಸಿಕೊಳ್ಳುವ ಯೋಗ ಇದೆ.

ಕುಜ ದೋಷ, ವಿವಾಹ ವಿಳಂಬ, ಭೂಮಿ ವ್ಯಾಜ್ಯಕ್ಕೆ ಪರಿಹಾರ ನೀಡುವ ಅಪರೂಪದ ಅಂಗಾರಕ ದೇವಾಲಯ – ತುಮಕೂರಿನ ಶ್ರೀಕೃಷ್ಣ ನಗರ

ಮಕರ: ಹೂಡಿಕೆಯಿಂದ ಭಾರೀ ನಷ್ಟ ಸಾಧ್ಯತೆ

ನಿಮ್ಮ ರಾಶಿಗೆ ಐದನೇ ಮನೆಯಲ್ಲಿ ಕುಜ ಗ್ರಹ ಸಂಚರಿಸುತ್ತದೆ. ನೀವು ಬಹಳ ನಿರೀಕ್ಷೆ ಇಟ್ಟುಕೊಂಡು ಮಾಡಿದ್ದ ಹೂಡಿಕೆಯಿಂದ ಭಾರೀ ನಷ್ಟ ಆಗಲಿದೆ. ಉದ್ಯೋಗಸ್ಥರಿಗೆ ನಿಮ್ಮ ವಿರುದ್ಧ ಮೇಲಧಿಕಾರಿಗಳಿಗೆ ದೂರು ಹೋಗಲಿದೆ. ನಿಮ್ಮ ಸ್ವಂತ ವಾಹನವನ್ನು ಇತರರಿಗೆ ನೀಡದಿರುವುದು ಈ ಅವಧಿಯಲ್ಲಿ ಕ್ಷೇಮ, ಉತ್ತಮ. ನಿಮ್ಮ ಮಕ್ಕಳ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸಬೇಕು. ನಿಮ್ಮದೇ ಸಿಟ್ಟಿನ ಕಾರಣಕ್ಕೆ ಕೆಲವು ಅವಕಾಶಗಳನ್ನು ಕಳೆದುಕೊಳ್ಳುವಂತೆ ಆಗಲಿದೆ. ಮೂಲವ್ಯಾಧಿಯಂಥ ಸಮಸ್ಯೆ ಈಗಾಗಲೇ ಇದ್ದಲ್ಲಿ ಹೆಚ್ಚಿನ ಜಾಗ್ರತೆಯಿಂದ ಇರಬೇಕಾಗುತ್ತದೆ. ಪರಿಣತ ವೈದ್ಯರ ಬಳಿ ಸೂಕ್ತ ಔಷಧೋಪಚಾರ ಪಡೆದುಕೊಳ್ಳುವುದಕ್ಕೆ ಪ್ರಾಧಾನ್ಯ ನೀಡಿ. ಇತರರ ಸಾಲಕ್ಕೆ ನೀವೇನಾದರೂ ಜಾಮೀನಾಗಿ ನಿಂತಿದ್ದಲ್ಲಿ ಅದು ನಿಮ್ಮ ಪಾಲಿಗೆ ಸಮಸ್ಯೆಯಾಗಿ ಉದ್ಭವ ಆಗಲಿದೆ.

ಕುಂಭ: ವಾಹನ ಖರೀದಿ ನಿರ್ಧಾರವನ್ನು ಮುಂದಕ್ಕೆ ಹಾಕಿ

ನಿಮ್ಮ ರಾಶಿಗೆ ನಾಲ್ಕನೇ ಮನೆಯಲ್ಲಿ ಕುಜ ಗ್ರಹದ ಸಂಚಾರ ಆಗುತ್ತದೆ. ಸ್ನೇಹಿತರ ಜೊತೆಗೆ ವಿರೋಧ ಕಟ್ಟಿಕೊಳ್ಳುವಂತೆ ಆಗಲಿದೆ. ಯಾವ ಕೆಲಸದಲ್ಲಿಯೂ ವಿರೋಧ ಎದುರಿಸುವಂತೆ ಆಗುತ್ತದೆ. ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ. ಓದಿನಲ್ಲಿ ವಿದ್ಯಾರ್ಥಿಗಳಿಗೆ ಆಸಕ್ತಿ- ಏಕಾಗ್ರತೆ ಎರಡೂ ಕುದುರುವುದಿಲ್ಲ. ತಂದೆ- ತಾಯಿಗಳ ಬಳಿ ದೂರನ್ನು ಸಹ ಒಯ್ಯುವ ಯೋಗ ಇದೆ. ವಾಹನ ಖರೀದಿ ಮಾಡಬೇಕು ಎಂದಿರುವವರು ಈ ನಿರ್ಧಾರವನ್ನು ಮುಂದಕ್ಕೆ ಹಾಕಿಕೊಳ್ಳಿ. ವಿದೇಶದಲ್ಲಿ ವ್ಯಾಸಂಗ ಮಾಡುವುದಕ್ಕೆ ಪ್ರಯತ್ನಿಸುತ್ತಿರುವವರಿಗೆ ವೀಸಾ ಅಥವಾ ಮತ್ತ್ಯಾವುದಾದರೂ ಸಮಸ್ಯೆ ಕಾಣಿಸಿಕೊಳ್ಳಬಹುದು. ನೀವು ಮಾಡಿಕೊಳ್ಳುವ ವಿರೋಧದಿಂದಾಗಿ ನಿಮ್ಮ ವರ್ಚಸ್ಸಿಗೆ ಹಾನಿಯಾಗುವಂಥ ಬೆಳವಣಿಗೆಗಳು ಆಗಲಿವೆ.

ವೈತೀಶ್ವರನ್ ಕೋವಿಲ್: ದೈವಿಕ ವೈದ್ಯನ ನೆಲೆ – ಕಾಯಿಲೆಗಳ ನಿವಾರಣೆ ಮತ್ತು ಕುಜ ದೋಷಕ್ಕೆ ಪರಮೌಷಧ!

ಮೀನ: ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ದೊರೆಯಲಿದೆ

ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಕುಜ ಗ್ರಹ ಸಂಚಾರ ಆಗುತ್ತದೆ. ಈ ಅವಧಿಯಲ್ಲಿ ನಿಮ್ಮ ಆದಾಯದ ಹರಿವು ಹೆಚ್ಚಾಗಲಿದೆ. ಅದೃಷ್ಟದ ಮೇಲೆ ಅವಲಂಬಿತವಾದ ವ್ಯವಹಾರ- ವ್ಯಾಪಾರದಲ್ಲಿ ಲಾಭದ ಪ್ರಮಾಣ ಜಾಸ್ತಿ ಆಗಲಿದೆ. ಸೋದರ- ಸೋದರಿಯರ ಜೊತೆಗೆ ಇರುವಂಥ ಮನಸ್ತಾಪ ದೂರವಾಗಲಿದೆ. ಈ ಹಿಂದೆ ನೀವು ಮಾಡಿಕೊಟ್ಟಂಥ ಕೆಲಸವನ್ನು ಮೆಚ್ಚಿಕೊಂಡಂಥವರು ಈಗ ಮತ್ತೆ ನಿಮಗೆ ಹೊಸ ಕೆಲಸ- ಕಾರ್ಯಗಳನ್ನು ಒಪ್ಪಿಸಿಕೊಡಲು ಮುಂದೆ ಬರಲಿದ್ದಾರೆ. ವ್ಯಾಪಾರಸ್ಥರಾಗಿದ್ದರಲ್ಲಿ ಅದರ ಪ್ರಮೋಷನಲ್ ಚಟುವಟಿಕೆಗಳನ್ನು ಈ ಅವಧಿಯಲ್ಲಿ ಮಾಡಿದಲ್ಲಿ ಉತ್ತಮ ಫಲಿತಾಂಶವನ್ನು ಕಾಣುತ್ತೀರಿ. ಉದ್ಯೋಗ ಬದಲಾವಣೆ, ವಿದೇಶ ಪ್ರಯಾಣಕ್ಕಾಗಿ ಪ್ರಯತ್ನವನ್ನು ಮಾಡುತ್ತಾ ಇರುವವರಿಗೆ ಯಶಸ್ಸು ದೊರೆಯಲಿದೆ.

ಪರಿಹಾರ: ಗೋಚಾರದಲ್ಲಿ ನಕಾರಾತ್ಮಕ ಪ್ರಭಾವ ಇರುವವರು ಮಂಗಳವಾರದ ದಿನ ತೊಗರಿಬೇಳೆ, ಕೆಂಪು ವಸ್ತ್ರ, ತಾಮ್ರದ ತಂಬಿಗೆಯನ್ನು ವೀಳ್ಯದೆಲೆ, ಅಡಿಕೆ, ದಕ್ಷಿಣೆ, ತೆಂಗಿನಕಾಯಿ ಸಹಿತವಾಗಿ ದಾನ ಮಾಡಿ.

ಲೇಖನಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts