ಲಕ್ಷ್ಮೀ ದೇವಿಯ ನಿವಾಸ ಸ್ಥಾನ ಯಾವುದು? ಈ ಪ್ರಶ್ನೆಗೆ ಲೇಖನದಲ್ಲಿ ಉತ್ತರ ನೀಡುವುದಕ್ಕೆ ಪ್ರಯತ್ನಿಸಲಾಗುತ್ತದೆ. ಎಲ್ಲರಿಗೂ ತಿಳಿದಿರುವಂತೆ ಆ ಮಹಾವಿಷ್ಣುವಿನ ಎರಡು ಬದಿಗಳಲ್ಲಿ ಭೂದೇವಿ (ವಸುಧಾ) ಹಾಗೂ ಲಕ್ಷ್ಮೀ ದೇವಿ ಇದ್ದಾರೆ. ಅದರಲ್ಲಿ ಲಕ್ಷ್ಮಿಯ ಸ್ಥಾನ ವಿಷ್ಣುವಿನ ಹೃದಯ ಹಾಗೂ ಪಾದದ ಬಳಿ ಆಗಿದೆ. ಇಂಥ ಮಹತ್ವದ ಸ್ಥಾನ ಇರುವ ಲಕ್ಷ್ಮಿಯನ್ನು ಕಂಡು, ಭೂದೇವಿ ಪ್ರಶ್ನೆ ಮಾಡುತ್ತಾಳೆ: “ಪೃಚ್ಛಾಮಹಂ ತೇ ವಸತಿಂ ವಿಭೃತ್ಯಾಃ!” ಅಂದರೆ, ವಿಷ್ಣುವಿನ ಬಳಿ ಅಲ್ಲದೆ ಬೇರೆಲ್ಲಲ್ಲ ನೀನು ವಾಸ ಮಾಡುತ್ತೀಯಾ? ಈ ಪ್ರಶ್ನೆಗೆ ಸ್ವತಃ ಲಕ್ಷ್ಮೀ ನೀಡಿದ ಉತ್ತರ ಹೀಗಿದೆ:
ನಾನು ವಿಷ್ಣವಿನ ಪಾರ್ಶ್ವ ಭಾಗದಲ್ಲಿ ಇರುತ್ತೀನಿ. ಆತನ ಆಜ್ಞೆಯನ್ನು ಮನಸಲ್ಲಿ ಸ್ಮರಿಸುತ್ತಾ, ಎಲ್ಲಿಗೆ ಹೋಗಬೇಕೆಂದು ತಿಳಿಸಿದರೆ ಅಲ್ಲಿಗೆ ಹೋಗುತ್ತೇನೆ. ಯಾರ ಬಳಿಗೆ ಹೋಗುವೆನೋ ಆತನನ್ನು ಲಕ್ಷ್ಮಿಯಿಂದ ಸಂಪನ್ನಗೊಳಿಸುತ್ತೇನೆ. ಹಸುವಿನ ಹೊಸ ಸಗಣಿಯಲ್ಲಿ, ಉನ್ಮತ್ತವಾದ ಆನೆಯಲ್ಲಿ, ಯುವ ಅಶ್ವದಲ್ಲಿ, ದರ್ಪದಿಂದ ಕೂಡಿದಂಥ ಯುವ ಎತ್ತಿನಲ್ಲಿ, ಅಧ್ಯಯನನಿರತ ಬ್ರಾಹ್ಮಣನಲ್ಲಿ ನೆಲೆಸುತ್ತೇನೆ. ಅದೇ ರೀತಿ ಸ್ವಧರ್ಮ ಪಾಲನೆಯ ಉಳಿದೆಲ್ಲರಲ್ಲಿಯೂ ಇರುತ್ತೇನೆ.
ಶ್ರೀದಧಿವಾಮನ ಸ್ತೋತ್ರಮ್: ಮನೆಯಲ್ಲಿ ಸದಾ ಅನ್ನ, ಐಶ್ವರ್ಯ ತುಂಬಿರಲು ಈ ಸಣ್ಣ ಸ್ತೋತ್ರ ದಿನವೂ ಪಠಿಸಿ
ಆಮಲಕ ಪುಷ್ಪ, ಬಿಲ್ವಪತ್ರ, ಗೋವಿನ ಹಾಲು, ಗೋವಿನ ಮೊಸರು, ತುಪ್ಪ, ಜೇನುತುಪ್ಪ, ಹಸಿರು ಹುಲ್ಲಿನಿಂದ ಕೂಡಿದ ಹಾಗೂ ಹಸು ಸಮಚಾರ ಮಾಡುವ ಭೂಮಿಯಲ್ಲಿ, ಯುವತಿ- ಸ್ತ್ರೀ, ಕುಮಾರಿ ಕನ್ಯೆ, ದೇವತೆ, ತಪಸ್ವಿ ಮತ್ತು ಯಜ್ಞ ಮೊದಲಾದವುಗಳನ್ನು ಆಯೋಜನೆ ಮಾಡುವ ವ್ಯಕ್ತಿಗಳಲ್ಲಿ ನಾನು ಇರುತ್ತೇನೆ.
ಶುಕ್ಲಪುಷ್ಪದಲ್ಲಿ, ಪರ್ವತದಲ್ಲಿ, ಫಲದಲ್ಲಿ, ರಮಣೀಯ ಶ್ರೇಷ್ಠ ನದಿಗಳಲ್ಲಿ, ನೀರಿನಿಂದ ತುಂಬಿದ ಸರೋವರಗಳಲ್ಲಿ, ಸತ್ಯಸಂಪನ್ನ ಭೂಮಿಯಲ್ಲಿ ಹಾಗೂ ಕಮಲದಲ್ಲಿ ಇರುತ್ತೇನೆ.
ಗೋವತ್ಸನು, ಚಿಕ್ಕಬಾಲಕರು, ಸಾಧು, ಧರ್ಮ ಪರಾಯಣ, ಸದಾಚಾರ ವ್ಯಕ್ತಿ, ಶಾಸ್ತ್ರಾಧ್ಯನ ಹಾಗೂ ಶಾಸ್ತ್ರ ಚರ್ಚೆಗಳನ್ನು ನಿತ್ಯ ಮಾಡುವಂಥವರು, ಸೌಮ್ಯವಾದ ವೇಷಧಾರಿ, ಸುಂದರ ವೇಷಭೂಷಣ ಧರಿಸುವವರಲ್ಲಿ ನಾನಿರುತ್ತೇನೆ.
ಶುದ್ಧನೂ, ಪವಿತ್ರನೂ, ಇಂದ್ರಿಯಗಳನ್ನು ಜಯಿಸಿದವನು, ನಿರ್ಮಲ ಮನಸ್ಸಿನ ವ್ಯಕ್ತಿಗಳಲ್ಲಿ, ಮೃಷ್ಟಾನ್ನದಲ್ಲಿ, ಅತಿಥಿ ಸೇವೆ ಪರಾಯಣರಲ್ಲಿ, ತನ್ನ ಪತ್ನಿಯಲ್ಲಿ ಸಂತುಷ್ಟನಾಗುವವನಲ್ಲಿ, ಶ್ರೇಷ್ಠ ಧರ್ಮಾತ್ಮನಲ್ಲಿ, ಯುಕ್ತ ಆಹಾರ ಮಾಡುವವರಲ್ಲಿ ನಾನು ಇರುತ್ತೇನೆ.
ಎಲ್ಲ ಜೀವಿಗಳಿಗೂ ಶುಭ ಬಯಸುವವನಲ್ಲಿ, ಧರ್ಮಶೀಲದಲ್ಲಿ, ಕೋಪ ಇಲ್ಲದಂತಹ ವ್ಯಕ್ತಿಯಲ್ಲಿ, ವಿನೀತನಾಗಿ ಇತರರ ಒಳತಿಗಾಗಿ ದುಡಿಯವವರಲ್ಲಿ, ಪತಿವ್ರತಾ ಸ್ತ್ರೀಯರಲ್ಲಿ, ಆ ಮಧುಸೂದನನಲ್ಲಿ ವಾಸಿಸುತ್ತೇನೆ ಎಂಬ ಉತ್ತರವನ್ನು ನೀಡುತ್ತಾಳೆ.
ಧರ್ಮಾತ್ಮನಾದ ವ್ಯಕ್ತಿಗೆ ಲಕ್ಷ್ಮೀ ಅನುಗ್ರಹ ಹಾಗೂ ಅವಳ ಸ್ಥಿರವಾಸ ಇರುತ್ತದೆ. ಲಕ್ಷ್ಮಿಯ ಪ್ರಾಪ್ತಿಗೆ ಬಯಸುವವರು ಶುದ್ಧ ಧರ್ಮವನ್ನು ಆಚರಿಸಬೇಕು.
(ಮಾಹಿತಿ ಮೂಲ: ವಿಷ್ಣು ಸ್ಮೃತಿ- ವೈಷ್ಣವ ಧರ್ಮ ಸೂತ್ರ)
ಲೇಖನ- ಶ್ರೀನಿವಾಸ ಮಠ









