ವಿವಾಹಕ್ಕೆ ಪ್ರಬಲವಾದ ಅಡೆತಡೆಗಳು ಎದುರಾಗುತ್ತಾ ಇದ್ದಲ್ಲಿ ಅದರ ನಿವಾರಣೆಗಾಗಿ ಇರುವಂಥ, ಶೀಘ್ರ ವಿವಾಹ ಯೋಗ ಸಿದ್ಧಿಸುವುದಕ್ಕೆ ಅನುಗ್ರಹ ಮಾಡುವಂಥ ಹೋಮವೊಂದರ ಬಗ್ಗ ಇಲ್ಲಿ ತಿಳಿಸಲಾಗುತ್ತಿದೆ. ಅದರ ಹೆಸರು ಗಂಧರ್ವರಾಜ ಮೂಲಮಂತ್ರ ಹೋಮ. ಇದು ಅತ್ಯಂತ ಪವಿತ್ರ ಹಾಗೂ ಶಕ್ತಿಶಾಲಿ ತಾಂತ್ರಿಕ ಮತ್ತು ವೈದಿಕ ಆಚರಣೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ಮದುವೆಯ ಅಡೆತಡೆಗಳನ್ನು ನಿವಾರಿಸಲು, ಸುಂದರ ಹಾಗೂ ಗುಣವಂತ ಜೀವನಸಂಗಾತಿಯನ್ನು ಪಡೆಯಲು ಮತ್ತು ವೈವಾಹಿಕ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಈ ಹೋಮವನ್ನು ಮಾಡಲಾಗುತ್ತದೆ. ಗಂಧರ್ವರಾಜರಲ್ಲಿ ಪ್ರಮುಖನಾದ ‘ವಿಶ್ವಾವಸು’ ಎಂಬ ಗಂಧರ್ವನನ್ನು ಪ್ರಸನ್ನಗೊಳಿಸಲು ಈ ಹೋಮವನ್ನು ಮಾಡಲಾಗುತ್ತದೆ. ಈ ಹೋಮದ ಮಹತ್ವ, ವಿಧಾನ ಮತ್ತು ಪ್ರಯೋಜನಗಳ ಸವಿಸ್ತಾರ ಲೇಖನ ಇಲ್ಲಿದೆ:
ಗಂಧರ್ವರಾಜ ಯಾರು?
ಗಂಧರ್ವರು ದೇವಲೋಕದ ಗಾಯಕರು, ಕಲಾಕೋವಿದರು ಮತ್ತು ಸೌಂದರ್ಯದ ಅಧಿಪತಿಗಳು. ಗಂಧರ್ವರ ರಾಜನಾದ ವಿಶ್ವಾವಸು ಅತ್ಯಂತ ಪ್ರಮುಖನಾಗಿದ್ದು, ಕನ್ಯೆಯರ ರಕ್ಷಕ ಹಾಗೂ ವಿವಾಹ ಭಾಗ್ಯವನ್ನು ಕರುಣಿಸುವ ದೇವತೆಯಾಗಿದ್ದಾನೆ. ಶ್ರೀವಿದ್ಯಾ ಉಪಾಸನೆಯಲ್ಲಿಯೂ ಇವರ ಆರಾಧನೆಗೆ ವಿಶೇಷ ಸ್ಥಾನವಿದೆ.
ಗಂಧರ್ವರಾಜ ಹೋಮದ ಮಹತ್ವ
ಜಾತಕದಲ್ಲಿರುವ ಕಳತ್ರ ದೋಷ, ಮಾಂಗಲ್ಯ ದೋಷ, ಅಥವಾ ರಾಹು-ಕೇತು, ಶನಿ ಗ್ರಹಗಳ ಪ್ರಭಾವದಿಂದ ಮದುವೆ ತಡವಾಗುತ್ತಿದ್ದರೆ, ಈ ಹೋಮವು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ದಶಾ ಸಂಧಿ ಶಾಂತಿ ಎಂದರೇನು? ಗ್ರಹಗಳ ದಶೆ ಬದಲಾಗುವ ಮುನ್ನ ಈ ಪೂಜೆ ಯಾಕೆ ಕಡ್ಡಾಯ?
ಗಂಧರ್ವರಾಜ ಮೂಲಮಂತ್ರ
ಈ ಹೋಮದಲ್ಲಿ ಅತ್ಯಂತ ಪ್ರಧಾನವಾದುದು ಗಂಧರ್ವರಾಜ ಮೂಲಮಂತ್ರ. ಇದನ್ನು ಅತ್ಯಂತ ಶ್ರದ್ಧೆಯಿಂದ ಪಠಿಸಲಾಗುತ್ತದೆ:
“ಓಂ ವಿಶ್ವಾವಸು ಗಂಧರ್ವರಾಜ ಕನ್ಯಾ ಸಲಿಲಾಂ ಪ್ರದಾತಾ ।
ಶೀಘ್ರಂ ವಿವಾಹಸಿದ್ಧ್ಯರ್ಥಂ ವಧೂಂ (ಅಥವಾ ವರಂ) ಮಹ್ಯಂ ಪ್ರಯಚ್ಛ ಸ್ವಾಹಾ॥”
(ಗಮನಿಸಿ: ಯುವಕರು ತಮಗಾಗಿ ಜಪಿಸುವಾಗ ‘ವಧೂಂ’ ಎಂದೂ, ಕನ್ಯೆಯರು ಜಪಿಸುವಾಗ ‘ವರಂ’ ಎಂದೂ ಮಂತ್ರದಲ್ಲಿ ಬದಲಾಯಿಸಿಕೊಳ್ಳಬೇಕು).
ಹೋಮದ ಪ್ರಮುಖ ವಿಧಾನಗಳು
ಗಂಧರ್ವರಾಜ ಹೋಮವನ್ನು ಪುರೋಹಿತರ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಬೇಕು. ಇದರ ಮುಖ್ಯ ಹಂತಗಳು ಈ ಕೆಳಗಿನಂತಿವೆ:
- ಸಂಕಲ್ಪ: ಪೂಜೆ ಅಥವಾ ಹೋಮದ ಉದ್ದೇಶವನ್ನು (ಶೀಘ್ರ ವಿವಾಹ ಸಿದ್ಧಿ ಅಥವಾ ದಾಂಪತ್ಯ ಸುಖ) ದೇವರಿಗೆ ಸಂಕಲ್ಪ ಮಾಡುವುದು.
- ಗಣಪತಿ ಪೂಜೆ: ಯಾವುದೇ ವಿಘ್ನಗಳು ಬಾರದಂತೆ ಮೊದಲು ಗಣೇಶನನ್ನು ಆರಾಧಿಸುವುದು.
- ಕಲಶ ಸ್ಥಾಪನೆ ಮತ್ತು ಆವಾಹನೆ: ಕಲಶವನ್ನು ಸ್ಥಾಪಿಸಿ, ಅದರಲ್ಲಿ ಗಂಧರ್ವರಾಜ ವಿಶ್ವಾವಸುವನ್ನು ಆವಾಹನೆ (ಆಹ್ವಾನ) ಮಾಡಲಾಗುತ್ತದೆ.
- ಮೂಲಮಂತ್ರ ಜಪ: ಹೋಮದ ಅಗ್ನಿ ಪ್ರಜ್ವಲಿಸುವ ಮುನ್ನ ಗಂಧರ್ವರಾಜ ಮೂಲಮಂತ್ರವನ್ನು ನಿಗದಿತ ಸಂಖ್ಯೆಯಲ್ಲಿ (ಉದಾಹರಣೆಗೆ 108 ಅಥವಾ 1008 ಬಾರಿ) ಜಪಿಸಲಾಗುತ್ತದೆ.
- ಹವನ (ಹೋಮ): ಶುದ್ಧ ಹಸುವಿನ ತುಪ್ಪ, ಪವಿತ್ರ ಸಮಿಧೆಗಳು (ಕಟ್ಟಿಗೆ), ಒಣ ಹಣ್ಣುಗಳು ಮತ್ತು ವಿಶೇಷವಾಗಿ ಮಲ್ಲಿಗೆ ಅಥವಾ ಕೆಂಪು ಗುಲಾಬಿ ಹೂವುಗಳನ್ನು ಅಗ್ನಿಗೆ ಆಹುತಿಯಾಗಿ ನೀಡಿ ಹೋಮ ಮಾಡಲಾಗುತ್ತದೆ.
- ಪೂರ್ಣಾಹುತಿ ಮತ್ತು ಪ್ರಸಾದ: ಕೊನೆಯಲ್ಲಿ ಪೂರ್ಣಾಹುತಿ ನೀಡಿ, ಹೋಮದ ರಕ್ಷೆ (ಭಸ್ಮ) ಯನ್ನು ಹಣೆಗೆ ಧರಿಸಲಾಗುತ್ತದೆ.
- ಗಂಧರ್ವರಾಜ ವಿಶ್ವಾವಸುವು ಸೌಂದರ್ಯ, ಆಕರ್ಷಣೆ ಮತ್ತು ಪ್ರೇಮದ ಅಧಿಪತಿ. ಬಿಳಿ ಹೂವು ಶುಭ್ರತೆ, ಸದ್ಗುಣ ಮತ್ತು ಪವಿತ್ರತೆಯ ಸಂಕೇತ. ಮನಸ್ಸಿಗೆ ಒಪ್ಪುವ, ಸದ್ಗುಣಶೀಲಳಾದ ಕನ್ಯೆಯನ್ನು ಅಥವಾ ವರನನ್ನು ಪಡೆಯಲು ಬಿಳಿ ಹೂವುಗಳನ್ನು (ಉದಾಹರಣೆಗೆ ಮಲ್ಲಿಗೆ, ಬಿಳಿ ಕಮಲ ಇತ್ಯಾದಿ ಹೂವುಗಳು) ಬಳಸಲಾಗುತ್ತದೆ. ಜೇನುತುಪ್ಪ (ಮಧು)ವು ಮಧುರತೆ, ಆಕರ್ಷಣೆ ಮತ್ತು ಪ್ರೀತಿಯ ಸಂಕೇತ. ಹಾಗಾಗಿ, ಬಿಳಿ ಹೂವನ್ನು ಜೇನುತುಪ್ಪದಲ್ಲಿ ಅದ್ದಿ ಮೂಲಮಂತ್ರದೊಂದಿಗೆ ಅಗ್ನಿಗೆ ಆಹುತಿ ನೀಡುವುದರಿಂದ, ಬರಲಿರುವ ವೈವಾಹಿಕ ಜೀವನದಲ್ಲಿ ಮತ್ತು ದಾಂಪತ್ಯದಲ್ಲಿ ಮಾಧುರ್ಯ ಹಾಗೂ ಆಕರ್ಷಣೆ ನೆಲೆಸುತ್ತದೆ ಎಂಬುದು ನಂಬಿಕೆ. ಕೆಲವು ಸಂಪ್ರದಾಯಗಳಲ್ಲಿ ಕೇವಲ ಜೇನುತುಪ್ಪ ಮಾತ್ರವಲ್ಲದೆ, ತುಪ್ಪ, ಜೇನುತುಪ್ಪ ಮತ್ತು ಸಕ್ಕರೆ/ಬೆಲ್ಲ ಸೇರಿಸಿದ ‘ಮಧುಪರ್ಕ’ದಲ್ಲೂ ಹೂವನ್ನು ಅದ್ದಿ ಆಹುತಿ ಕೊಡುವ ಕ್ರಮವಿದೆ.
ರಾವಣ ಸಂಹಿತೆ: ಜೀವನದ ಅದೃಷ್ಟ ಬದಲಿಸಬಲ್ಲ 100 ಜ್ಯೋತಿಷ್ಯ ರಹಸ್ಯಗಳು ಮತ್ತು ಪರಿಹಾರಗಳು!
ಗಂಧರ್ವರಾಜ ಹೋಮದ ಪ್ರಯೋಜನಗಳು
- ಶೀಘ್ರ ವಿವಾಹ ಯೋಗ: ವಯಸ್ಸು ಮೀರಿದರೂ ಮದುವೆ ಕುದುರದೆ ತೊಂದರೆ ಅನುಭವಿಸುತ್ತಿರುವ ಯುವಕ-ಯುವತಿಯರಿಗೆ ಶೀಘ್ರದಲ್ಲೇ ಯೋಗ್ಯ ಸಂಬಂಧ ಕೂಡಿಬರುತ್ತದೆ.
- ಗ್ರಹದೋಷ ನಿವಾರಣೆ: ಜಾತಕದಲ್ಲಿ ಮದುವೆಗೆ ತಡೆಯೊಡ್ಡುವ ಕುಜ ದೋಷ (ಮಂಗಳ ದೋಷ), ಸಪ್ತಮ ಭಾವದ ದೋಷಗಳು ಹಾಗೂ ಕಳತ್ರ ದೋಷಗಳು ನಿವಾರಣೆಯಾಗುತ್ತವೆ.
- ಉತ್ತಮ ಜೀವನಸಂಗಾತಿ: ರೂಪವಂತ, ಗುಣವಂತ ಹಾಗೂ ಸುಸಂಸ್ಕೃತ ಜೀವನಸಂಗತಿ ಲಭಿಸಲು ಈ ಹೋಮ ಸಹಕಾರಿ.
- ದಾಂಪತ್ಯದಲ್ಲಿ ಸಾಮರಸ್ಯ: ಈಗಾಗಲೇ ಮದುವೆಯಾಗಿದ್ದು, ಗಂಡ-ಹೆಂಡತಿಯ ನಡುವೆ ಸದಾ ಕಲಹಗಳಿದ್ದರೆ, ಮನಸ್ತಾಪಗಳು ದೂರವಾಗಿ ಪ್ರೀತಿ ಮತ್ತು ಸಾಮರಸ್ಯ ಮೂಡುತ್ತದೆ.
- ಆಕರ್ಷಣೆ ಮತ್ತು ಆತ್ಮವಿಶ್ವಾಸ: ಗಂಧರ್ವರ ಅನುಗ್ರಹದಿಂದ ವ್ಯಕ್ತಿತ್ವದಲ್ಲಿ ಆಕರ್ಷಣೆ ಮತ್ತು ಕಲಾತ್ಮಕ ಕೌಶಲಗಳು ವೃದ್ಧಿಸುತ್ತವೆ.
ಹೋಮಕ್ಕೆ ಸೂಕ್ತ ಸಮಯ
- ಈ ಹೋಮವನ್ನು ಮಾಡಲು ಶುಕ್ಲ ಪಕ್ಷದ ಶುಕ್ರವಾರ, ಹುಣ್ಣಿಮೆ ಅಥವಾ ಉತ್ತರಾಫಲ್ಗುಣಿ, ರೋಹಿಣಿ, ಹಸ್ತಾ, ಅನೂರಾಧಾ ನಕ್ಷತ್ರಗಳಿರುವ ದಿನಗಳು ಅತ್ಯಂತ ಶ್ರೇಷ್ಠ.
- ಬೆಳಗಿನ ಜಾವ (ಬ್ರಾಹ್ಮಿ ಮುಹೂರ್ತ ಅಥವಾ ಸೂರ್ಯೋದಯದ ಸಮಯ) ಈ ಪೂಜೆಗೆ ಅತ್ಯಂತ ಪ್ರಶಸ್ತ.
ವಿಶೇಷ ಸೂಚನೆ: ಗಂಧರ್ವರಾಜ ಹೋಮವನ್ನು ಮನೆಯಲ್ಲಿ ಅಥವಾ ದೇವಸ್ಥಾನಗಳಲ್ಲಿ ಮಾಡಿಸಬಹುದು. ಹೋಮ ಮಾಡಲು ಸಾಧ್ಯವಾಗದವರು ಪ್ರತಿನಿತ್ಯ ಮನೆಯ ದೇವರ ಕೋಣೆಯಲ್ಲಿ ಗಂಧರ್ವರಾಜ ಮೂಲಮಂತ್ರವನ್ನು ಕನಿಷ್ಠ 21 ಅಥವಾ 108 ಬಾರಿ ಜಪಿಸುವುದರಿಂದಲೂ ಸತ್ಫಲಗಳನ್ನು ಕಾಣಬಹುದು.
ಲೇಖನ- ಶ್ರೀನಿವಾಸ ಮಠ









