Sri Gurubhyo Logo

Dasha Sandhi Shanti: ದಶಾ ಸಂಧಿ ಶಾಂತಿ ಅಂದರೇನು? ಅದನ್ನು ಏಕೆ, ಯಾವಾಗ ಮಾಡಿಸಿಕೊಳ್ಳಬೇಕು?

Dasha Sandhi Shanti
ದಶಾಸಂಧಿ ಶಾಂತಿ (ಸಾಂದರ್ಭಿಕ ಚಿತ್ರ)

ಈ ಲೇಖನದಲ್ಲಿ ದಶಾ ಸಂಧಿ ಶಾಂತಿ ವಿಚಾರವನ್ನು ತಿಳಿಸಲಾಗುವುದು. ಯಾವ ವ್ಯಕ್ತಿಗೆ ತನ್ನ ಜನ್ಮ ದಿನಾಂಕ, ಸಮಯ ಹಾಗೂ ಹುಟ್ಟಿದ ಸಮಯ ತಿಳಿದಿರುತ್ತದೋ ಅಂಥವರು ತಮ್ಮ ಜನ್ಮ ಜಾತಕವನ್ನು ಸಿದ್ಧ ಮಾಡಿಸಿಟ್ಟುಕೊಳ್ಳಬೇಕು. ಏಕೆಂದರೆ ಅದರಲ್ಲಿ ಕೆಲವು ದಶಾ ಕಾಲದ ಬದಲಾವಣೆಗೆ ಮುನ್ನ ಕಡ್ಡಾಯವಾಗಿ ದಶಾ ಸಂಧಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಈಗಾಗಲೇ ಹೇಳಿದಂತೆ ಇದು ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು. ಇಲ್ಲದಿದ್ದಲ್ಲಿ ಆಯಾ ಗ್ರಹದ ಆಧಾರದಲ್ಲಿ ಅದರದೇ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಬಗ್ಗೆ ತಿಳಿಸುವ ಮುನ್ನ, ಮೊದಲಿಗೆ ಯಾವ ದಶೆ ಎಷ್ಟು ಸಮಯ ಅಥವಾ ಅವಧಿ ಇರುತ್ತದೆ ಹಾಗೂ ಯಾವ ನಕ್ಷತ್ರದವರಿಗೆ ಜನನ ಕಾಲದಲ್ಲಿ ಯಾವ ದಶೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಿ.

ರವಿ ದಶೆ- ಆರು ವರ್ಷ- ಕೃತ್ತಿಕಾ, ಉತ್ತರಾ ಫಲ್ಗುಣಿ ಹಾಗೂ ಉತ್ತರಾಷಾಢ

ಚಂದ್ರ ದಶೆ- ಹತ್ತು ವರ್ಷ- ರೋಹಿಣಿ, ಹಸ್ತಾ ಹಾಗೂ ಶ್ರವಣ

ಕುಜ ದಶೆ- ಏಳು ವರ್ಷ- ಮೃಗಶಿರಾ, ಚಿತ್ತಾ ಹಾಗೂ ಧನಿಷ್ಠಾ

ರಾಹು ದಶೆ- ಹದಿನೆಂಟು ವರ್ಷ- ಆರಿದ್ರಾ, ಸ್ವಾತಿ ಹಾಗೂ ಶತಭಿಷಾ

ಗುರು ದಶೆ- ಹದಿನಾರು ವರ್ಷ- ಪುನರ್ವಸು, ವಿಶಾಖ ಹಾಗೂ ಪೂರ್ವಭಾದ್ರಾ

ಶನಿ ದಶೆ- ಹತ್ತೊಂಬತ್ತು ವರ್ಷ- ಪುಷ್ಯ, ಅನೂರಾಧ ಹಾಗೂ ಉತ್ತರಾಭಾದ್ರ

ಬುಧ ದಶೆ- ಹದಿನೇಳು ವರ್ಷ- ಆಶ್ಲೇಷಾ, ಜ್ಯೇಷ್ಠಾ ಹಾಗೂ ರೇವತಿ

ಕೇತು ದಶೆ- ಏಳು ವರ್ಷ- ಮಖಾ, ಮೂಲ ಹಾಗೂ ಅಶ್ವಿನಿ

ಶುಕ್ರ ದಶೆ- ಇಪ್ಪತ್ತು ವರ್ಷ- ಪುಬ್ಬಾ, ಪೂರ್ವಾಷಾಢ ಹಾಗೂ ಭರಣಿ

ದಶಾ ಸಂಧಿ ಶಾಂತಿಗಳು ಯಾವುದಕ್ಕೆ ಮಾಡಬೇಕು?

ಕುಜ ದಶೆ ಮುಗಿದು, ರಾಹು ದಶೆ ಆರಂಭ ಆಗುವಾಗ ದಶಾ ಸಂಧಿ ಶಾಂತಿ ಮಾಡಬೇಕು. ಅದೇ ರೀತಿ ರಾಹು- ಬೃಹಸ್ಪತಿ ಹಾಗೂ ಶುಕ್ರಾದಿತ್ಯ ಸಂಧಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು. ಹೀಗಂದರೆ ರಾಹು ದಶೆ ಮುಗಿದು ಗುರು ದಶೆ ಆರಂಭ ಆಗುವ ಮುನ್ನ ಸಂಧಿ ಶಾಂತಿ ಹಾಗೂ ಶುಕ್ರ ದಶೆ ಮುಗಿದು, ರವಿ ದಶೆ ಶುರು ಆಗುವ ಮುಂಚೆ ಶುಕ್ರಾದಿತ್ಯ ಸಂಧಿ ಶಾಂತಿಯನ್ನು ಮಾಡಿಸಬೇಕು. ನೆನಪಿರಲಿ, ಈ ದಶೆ ಬದಲಾವಣೆ ಕಾಲವನ್ನು ಜಾತಕದಲ್ಲಿ ನೋಡಿಕೊಂಡು, ಸಂಧಿ ಶಾಂತಿಯನ್ನು ಮಾಡಿಸಲೇಬೇಕು.

ಯಾವಾಗ ಶಾಂತಿ ಮಾಡಿಸಿಕೊಳ್ಳಬೇಕು?

ದಶೆಯು ಬದಲಾವಣೆ ಆಗುವ ಕನಿಷ್ಠ ನಲವತ್ತೈದು ದಿನಗಳು ಮೊದಲೇ ದಶಾ ಸಂಧಿ ಶಾಂತಿಯನ್ನು ಮಾಡಿಸಿಕೊಳ್ಳಬೇಕು ಎಂಬುದು ಅಭಿಪ್ರಾಯ. ಅಂದಹಾಗೆ ಕೊನೆಗೊಳ್ಳುವ ದಶಾ ಕಾಲದ ಅಂತಿಮ ಆರು ತಿಂಗಳು ಹಾಗೂ ಇನ್ನೇನು ಆರಂಭ ಆಗಲಿರುವ ದಶೆಯ ಮೊದಲ ಆರು ತಿಂಗಳು ಬಹಳ ಮುಖ್ಯವಾದ ಘಟ್ಟವಾಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

ದಶಾ ಸಂಧಿ ಸಮಯದಲ್ಲಿ ಆಗುವ ತೊಂದರೆಗಳೇನು?

ದಶೆಗಳು ಸಂಧಿಸುವ ಸಮಯದಲ್ಲಿ ಆಗುವ ಸಮಸ್ಯೆಗಳನ್ನು ಎರಡು ರೀತಿಯಲ್ಲಿ ಗಮನಿಸಬಹುದು. ಒಂದು, ನಿರ್ದಿಷ್ಟವಾಗಿ ಆಯಾ ಜಾತಕರಿಗೆ ಆಯಾ ಗ್ರಹದ ಕಾರಕತ್ವ ಅಥವಾ ಅದು ಯಾವ ಮನೆಯಲ್ಲಿ ಸ್ಥಿತವಾಗಿದೆಯೋ ಅದರ ಫಲವನ್ನು ಪಡೆಯುತ್ತಾರೆ, ಅಂದರೆ ಆ ಕಾರಕತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. ಇನ್ನೊಂದು ಸಾಮಾನ್ಯವಾಗಿ ಆಯಾ ವಯಸ್ಸು, ಅವಧಿಗೆ ಸಂಬಂಧಿಸಿದ್ದು. ಉದಾಹರಣೆಗೆ ರಾಹು ದಶೆ ಮುಗಿದು, ಗುರು ದಶೆ ಶುರುವಿನಲ್ಲಿ ಸಣ್ಣದಾದರೂ ಶಸ್ತ್ರ ಚಿಕಿತ್ಸೆ ಆಗುತ್ತದೆ. ಕುಜ ದಶೆ ಮುಗಿದು ರಾಹು ದಶೆ ಆರಂಭವಾಗುವಾಗ ವಿದ್ಯಾಭ್ಯಾಸದಲ್ಲಿ ತೊಂದರೆ, ಅಪಘಾತಗಳು, ಭೂಮಿಗೆ ಸಂಬಂಧಿಸಿದ ತಂಟೆ, ತಕರಾರು ವ್ಯಾಜ್ಯಗಳು ಸಂಭವಿಸುತ್ತವೆ. ಇನ್ನು ಶುಕ್ರ ದಶೆ ಮುಗಿದು ರವಿ ದಶೆ ಶುರುವಿನಲ್ಲಿ ವ್ಯಾಪಾರದಲ್ಲಿ ನಷ್ಟ, ಮದುವೆ ಮುರಿದು ಬೀಳುವುದು, ಕಣ್ಣಿನ ಸಮಸ್ಯೆ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುವುದು ಇತ್ಯಾದಿ ಫಲಗಳನ್ನು ಕಾಣಬೇಕಾಗುತ್ತದೆ.

ದಶಾ ಸಂಧಿ ಸಮಯ ಹೇಗೆ ಗೊತ್ತಾಗುತ್ತದೆ?

ಆರಂಭದಲ್ಲೇ ಹೇಳಿದಂತೆ ಜಾತಕವನ್ನು ಸಿದ್ಧ ಮಾಡಿಸಿಟ್ಟುಕೊಳ್ಳಬೇಕು. ಅದರಲ್ಲಿ ದಶಾ ಹಾಗೂ ಭುಕ್ತಿಯ ಬಗ್ಗೆ ಮಾಹಿತಿ ಇರುತ್ತದೆ. ಅದನ್ನು ಒಮ್ಮೆ ನೋಡಿಕೊಂಡು, ಸಮಯವನ್ನು ಬರೆದಿಟ್ಟುಕೊಂಡು ಬಿಡುವುದು ಉತ್ತಮ. ಶಾಸ್ತ್ರೋಕ್ತವಾಗಿ ಸಂಧಿ ಶಾಂತಿ ಪೂಜೆಯನ್ನು ಮಾಡಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ದೊಡ್ಡ ಮಟ್ಟದಲ್ಲಿ ಆಗಬೇಕಿದ್ದ ಸಮಸ್ಯೆ ಸಣ್ಣ ಮಟ್ಟದಲ್ಲೇ ಅಥವಾ ಅದು ಸಹ ಆಗದಂತೆ ದಾಟಿಕೊಳ್ಳುವುದಕ್ಕೆ ಸಹಾಯ ಆಗುತ್ತದೆ.

ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.

Latest News

Related Posts