ಒಬ್ಬ ವ್ಯಕ್ತಿಯ ಜನುಮ ದಿನ ಬಂತು ಅಂದರೆ ಸಂಭ್ರಮವೋ ಸಂಭ್ರಮ ಎಂಬುದು ಸಾಮಾನ್ಯ ವಿದ್ಯಮಾನ. ಆದರೆ ಆ ವ್ಯಕ್ತಿಯ ಜನನ ಸಮಯದಲ್ಲಿ ಯಾವ ಮಾಸ, ವಾರ, ನಕ್ಷತ್ರ, ತಿಥಿ ಇತ್ತು ಎಂಬುದುನ್ನು ಒಂದು ಕಡೆ ದಾಖಲಿಸಿಟ್ಟುಕೊಳ್ಳಬೇಕು. ಒಂದು ವೇಳೆ ಜನನ ಸಮಯದ ಅದೇ ಮಾಸದಲ್ಲಿ ಆ ವ್ಯಕ್ತಿ ಜನಿಸಿದ ಅದೇ ತಿಥಿ, ವಾರ ಮತ್ತು ನಕ್ಷತ್ರ ಪುನರಾವರ್ತನೆ ಆಗಿದೆ ಎಂದಾದಲ್ಲಿ ಕಡ್ಡಾಯವಾಗಿ ಜ್ಯೋತಿಷಿಗಳ ಬಳಿ ಜಾತಕದ ವಿಶ್ಲೇಷಣೆ ಮಾಡಿಸಿಕೊಂಡು, ಆರೋಗ್ಯ, ಆಯುಷ್ಯ, ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯನ್ನು ವಹಿಸಬೇಕು ಮತ್ತು ಅಗತ್ಯ ಇದೆ ಎಂದಾದಲ್ಲಿ ಹೋಮ, ಶಾಂತಿ- ಜಪ ಮೊದಲಾದವುಗಳನ್ನು ಮಾಡಿಸಿಕೊಳ್ಳುವುದು ಕ್ಷೇಮ- ಉತ್ತಮ. ಈ ವಿಚಾರದಲ್ಲಿ ನಾವು ಗಮನಿಸಲೇಬೇಕಾದ ಕೆಲವು ಜ್ಯೋತಿಷ್ಯದ ಎಚ್ಚರಿಕೆಗಳನ್ನು ಇಲ್ಲಿ ತಿಳಿಯೋಣ.
ಪಂಚಾಂಗದ ವಿಶೇಷತೆ ಮತ್ತು ಎಚ್ಚರಿಕೆ
ಪಂಚಾಂಗ ಎಂದರೆ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಈ ಐದೂ ಅಂಗಗಳನ್ನು ಸೇರುವುದು ಅಂತ ಅರ್ಥ. ಒಂದು ಮಗು ಜನಿಸಿದ ಸಮಯದಲ್ಲಿ ಈ ಐದೂ ಅಂಶಗಳ ಸ್ಥಿತಿ ಹೇಗಿತ್ತು ಎಂಬುದು ಅತ್ಯಂತ ಮುಖ್ಯ. ಪ್ರತಿವರ್ಷ ಜನ್ಮದಿನವನ್ನು ಆಚರಿಸುವಾಗ, ಅಂದು ಪಂಚಾಂಗದ ಯಾವೆಲ್ಲಾ ಅಂಶಗಳು ಪುನರಾವರ್ತನೆಗೊಳ್ಳುತ್ತಿವೆ ಎಂಬುದನ್ನು ಗಮನಿಸಬೇಕು. ಒಬ್ಬ ವ್ಯಕ್ತಿ ಜನಿಸಿದ ದಿನದಂದು ಇದ್ದ ತಿಥಿ, ವಾರ ಮತ್ತು ನಕ್ಷತ್ರ – ಈ ಮೂರೂ ಅಂಶಗಳು ಆತ ಹುಟ್ಟಿದ ಆ ವರ್ಷದ ಜನ್ಮದಿನದಂದು ಮತ್ತೆ ಒಟ್ಟಾಗಿ ಬಂದರೆ, ಆ ವರ್ಷ ಅತ್ಯಂತ ಜಾಗರೂಕತೆಯಿಂದ ಇರಬೇಕು ಎಂಬುದು ಜ್ಯೋತಿಷ್ಯದ ನಿಯಮ. ಇದು ಸಂವತ್ಸರ ಮತ್ತು ಮಾಸದ ಆಧಾರದ ಮೇಲೆ ಪುನರಾವರ್ತನೆಗೊಳ್ಳುವ ವಿಶೇಷ ಸ್ಥಿತಿಯಾಗಿದೆ.
ನರಸಿಂಹ ದೇವರಿಗೆ ಜೇನುತುಪ್ಪದ ಅಭಿಷೇಕದ ಫಲಗಳೇನು? ಪೂರ್ಣ ಮನ್ಯುಸೂಕ್ತದ ವಿವರ ಇಲ್ಲಿದೆ
ಶನಿ ಗ್ರಹದ ಪ್ರಭಾವ
ಪಂಚಾಂಗದ ಪುನರಾವರ್ತನೆಯ ಜೊತೆಗೆ ಶನಿ ಗ್ರಹದ ಗೋಚಾರ ಫಲವನ್ನು ಪರಿಶೀಲಿಸುವುದು ಅನಿವಾರ್ಯ.
- ಅಪಾಯದ ಮುನ್ಸೂಚನೆ: ನಿಮ್ಮ ಜನ್ಮ ಲಗ್ನದಿಂದ ಅಥವಾ ಜನನ ಕಾಲದಲ್ಲಿ ಚಂದ್ರ ಇದ್ದಂಥ ರಾಶಿಯಿಂದ ಶನಿ ಗ್ರಹವು ಎಂಟನೇ ಮನೆಯಲ್ಲಿ ಸಂಚರಿಸುತ್ತಿದ್ದರೆ, ಅದನ್ನು ಜ್ಯೋತಿಷ್ಯದಲ್ಲಿ ಎಚ್ಚರಿಕೆಯ ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ಇದು ಆರೋಗ್ಯ ಮತ್ತು ಆಯುಷ್ಯದ ಮೇಲೆ ಪ್ರಭಾವ ಬೀರುತ್ತದೆ.
- ಸಮನ್ವಯತೆ: ಒಂದು ವೇಳೆ ಜನ್ಮದಿನದಂದು ಪಂಚಾಂಗದ ಮೂರು ಮುಖ್ಯ ಅಂಶಗಳು ಪುನರಾವರ್ತನೆಗೊಂಡು, ಅದೇ ಸಮಯದಲ್ಲಿ ಶನಿ ಗ್ರಹವು ನಿಮ್ಮ ಜಾತಕದ ಅಶುಭ ಸ್ಥಾನದಲ್ಲಿ (ಉದಾಹರಣೆಗೆ 8ನೇ ಮನೆ) ಸಂಚರಿಸುತ್ತಿದ್ದರೆ, ಅಂತಹ ಸಂದರ್ಭದಲ್ಲಿ ಆತಂಕ ಪಡುವ ಬದಲು ಮುನ್ನೆಚ್ಚರಿಕೆ ವಹಿಸಬೇಕು.
ಪರಿಹಾರವೇನು?
ಪಂಚಾಂಗದ ಪುನರಾವರ್ತನೆಯಾದ ಆ ವರ್ಷದಲ್ಲಿ ಶನಿ ಗ್ರಹದ ಸ್ಥಿತಿಯೂ ಪ್ರತಿಕೂಲವಾಗಿದ್ದರೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬದಲಾಗಿ:
- ನವಾಂಶ ಕುಂಡಲಿ: ಮೊದಲು ಪರಿಣತ ಜ್ಯೋತಿಷಿಗಳನ್ನು ಸಂಪರ್ಕಿಸಿ, ನಿಮ್ಮ ನವಾಂಶ ಕುಂಡಲಿಯನ್ನು ಪರಿಶೀಲಿಸಿಕೊಳ್ಳಿ.
- ಶಾಂತಿ ಪೂಜೆ: ಅಗತ್ಯವಿದ್ದರೆ ಮೃತ್ಯುಂಜಯ ಹೋಮ ಅಥವಾ ಜ್ಯೋತಿಷಿಗಳ ಸಲಹೆಯ ಮೇರೆಗೆ ಶಾಂತಿ ಪೂಜೆಗಳನ್ನು ಮಾಡಿಸಿಕೊಳ್ಳುವುದು ಕ್ಷೇಮ.
ಒಂದು ಸರಳ ಉದಾಹರಣೆ
ಉದಾಹರಣೆಗೆ, ಒಂದು ಮಗು ಹುಟ್ಟಿದ ದಿನ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಅಷ್ಟಮಿ, ಭಾನುವಾರ ಮತ್ತು ರೋಹಿಣಿ ನಕ್ಷತ್ರ ಇತ್ತು ಎಂದಿಟ್ಟುಕೊಳ್ಳೋಣ. ಮುಂದಿನ ವರ್ಷಗಳಲ್ಲಿ ಜನ್ಮದಿನದಂದು ಮತ್ತೆ ಅದೇ ಮಾಸ, ಪಕ್ಷ, ತಿಥಿ, ವಾರ ಮತ್ತು ನಕ್ಷತ್ರ ಬಂದಾಗ ಅಥವಾ ಈ ಐದರಲ್ಲಿ ಮೂರು ಅಂಶಗಳು ಪುನರಾವರ್ತನೆ ಆದಾಗ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಆ ನಂತರ, ಗೋಚಾರದಲ್ಲಿ ಶನಿ ಗ್ರಹವು ನಿಮ್ಮ ಜನ್ಮ ಲಗ್ನ ಅಥವಾ ರಾಶಿಯಿಂದ ಎಂಟನೇ ಸ್ಥಾನದಲ್ಲಿ ಸಂಚರಿಸುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಿ. ವೃಷಭ ರಾಶಿಗೆ ಧನುಸ್ಸು ರಾಶಿಯಲ್ಲಿ ಶನಿ ಸಂಚರಿಸುತ್ತಿದ್ದರೆ, ಇನ್ನು ಜನನ ಕಾಲದಲ್ಲಿ ಮೀನ ರಾಶಿಯಲ್ಲಿ ಶನಿ ಇದ್ದು ಗೋಚಾರದಲ್ಲಿ ತುಲಾ ರಾಶಿಯಲ್ಲಿ ಶನಿ ಸಂಚರಿಸುತ್ತಿದ್ದರೆ, ಇನ್ನು ಸಿಂಹ ಲಗ್ನವಾಗಿದ್ದು ಮೀನ ರಾಶಿಯಲ್ಲಿ ಶನಿ ಸಂಚರಿಸುತ್ತಿದ್ದರೆ ಕೂಡಲೇ ಜ್ಯೋತಿಷಿಗಳ ಬಳಿ ಜಾತಕ ಪರಿಶೀಲನೆ ಮಾಡಿಸಿಕೊಳ್ಳಬೇಕು.
- ನಿಮ್ಮ ಜನನ ಕಾಲದ ಪಂಚಾಂಗದಲ್ಲಿ ಮೂರು ಅಂಶಗಳು ಪುನರಾವರ್ತನೆ ಆಗಿರಬೇಕು.
- ನಿಮ್ಮ ಜನ್ಮ ರಾಶಿ ಅಥವಾ ನಿಮ್ಮ ಜನನ ಕಾಲದಲ್ಲಿ ಶನಿ ಇದ್ದ ರಾಶಿ ಅಥವಾ ನಿಮ್ಮ ಜನ್ಮ ಲಗ್ನದಿಂದ ಎಂಟನೇ ಮನೆಯಲ್ಲಿ ಶನಿ ಗ್ರಹ ಗೋಚಾರ ಸಂಚಾರ ಮಾಡುತ್ತಿರಬೇಕು.
ಅಂಥ ಸಮಯದಲ್ಲಿ ಅಗತ್ಯ ಕಂಡುಬಂದಲ್ಲಿ ಶಾಂತಿ- ಹೋಮ, ಜಪ ಮೊದಲಾದ ಅಗತ್ಯ ಪೂಜೆ- ಪುರಸ್ಸರಾದಿಗಳನ್ನು ಮಾಡಿಕೊಳ್ಳಬೇಕು.
ದಶಾ ಸಂಧಿ ಶಾಂತಿ ಎಂದರೇನು? ಗ್ರಹಗಳ ದಶೆ ಬದಲಾಗುವ ಮುನ್ನ ಈ ಪೂಜೆ ಯಾಕೆ ಕಡ್ಡಾಯ?
ಕೊನೆಯ ಮಾತು:
ಜ್ಯೋತಿಷ್ಯವು ನಮಗೆ ಮುನ್ನೆಚ್ಚರಿಕೆ ನೀಡುವ ಒಂದು ಮಾರ್ಗದರ್ಶಿಯಷ್ಟೇ. ಭಯಪಡುವುದಕ್ಕಿಂತ, ಗ್ರಹಗತಿಗಳನ್ನು ಅರ್ಥ ಮಾಡಿಕೊಂಡು ಸರಿಯಾದ ಸಮಯದಲ್ಲಿ ಸೂಕ್ತ ಪರಿಹಾರ ಕೈಗೊಳ್ಳುವುದರಿಂದ ಬದುಕಿನ ಹಾದಿಯನ್ನು ಸುಗಮವಾಗಿಸುತ್ತದೆ.
ಮಾಹಿತಿ ಮೂಲ- ಪ್ರಕಾಶ್ ಅಮ್ಮಣ್ಣಾಯ
ಲೇಖನ- ಶ್ರೀನಿವಾಸ ಮಠ









