ಪುರುಷೋತ್ತಮ ಮಾಸದಲ್ಲಿ ಮೊರದ ಬಾಗಿನ ನೀಡುವ ಕ್ರಮ ಹೇಗೆ? ಇಲ್ಲಿದೆ ಡಾ. ಭೀಮಸೇನಾಚಾರ್ಯ ಅತನೂರು ಅವರ ವಿಶೇಷ ಮಾಹಿತಿ

Dr Bhimsenacharya Atanur delivering a spiritual discourse on Adhika Masa significance.
ಅಧ್ಯಾತ್ಮ ಚಿಂತಕರಾದ ಡಾ. ಭೀಮಸೇನಾಚಾರ್ಯ ಅತನೂರು

ಶ್ರೀಗುರುಭ್ಯೋ.ಕಾಮ್ ಓದುಗರಾದ ನರಸಿಂಹ ಕುಲಕರ್ಣಿ ಅವರು “ಶೂರ್ಪವಾಯನ ದಾನ”ದ ಬಗ್ಗೆ ಮಾಹಿತಿ ಕೇಳಿದರು. ಅಧಿಕ ಮಾಸದಲ್ಲಿ ಶೂರ್ಪವಾಯನ ದಾನ ಮಾಡುವುದರ ಫಲ ಏನು? ಯಾರಿಗೆ ಈ ದಾನ ಮಾಡಬೇಕು? ಇದರ ಮಹತ್ವ ಏನು ಎಂಬಿತ್ಯಾದಿ ವಿಚಾರವಾಗಿ ಪಂಡಿತರು, ಅಧ್ಯಾತ್ಮ ಚಿಂತಕರು ಹಾಗೂ ಗುರು ಸಮಾನರಾದ ಡಾ ಭೀಮಸೇನಾಚಾರ್ಯ ಅತನೂರು ತುಂಬ ವಿವರವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದನ್ನು ಅಧ್ಯಾತ್ಮ ಬಂಧುಗಳಿಗೆ ಈ ಲೇಖನದ ಮೂಲಕ ಹಂಚಿಕೊಳ್ಳಲಾಗುತ್ತಿದೆ. ಸದ್ವಿಚಾರಗಳು, ಸತ್ ಚಿಂತನೆಗಳು ಎಲ್ಲೆಡೆ ಹಬ್ಬಲಿ.

ಏನಿದು ಶೂರ್ಪ ವಾಯನ ದಾನ? ಯಾರಿಗೆ ನೀಡಬೇಕು?

ಅಧಿಕ ಮಾಸದಲ್ಲಿ ಶೂರ್ಪ ವಾಯನ ದಾನ ಮಾಡುವುದೆಂದರೆ ಮೊರದ ಬಾಗಿನವನ್ನು ನೀಡುವುದು ಎಂದರ್ಥ. ಇಲ್ಲಿ ಬಾಗಿನ ಅಂದಾಗ ಜತೆಗೆ ವಾಯನವೂ ಇದೆ. ಅಕ್ಕಿ- ಬೇಳೆ ಮೊದಲಾದ ಧಾನ್ಯಗಳು, ಸಾತ್ವಿಕವಾದ ತರಕಾರಿಗಳು, ಹಾಲು- ಮೊಸರು, ತುಪ್ಪ ಸೇರಿದಂತೆ ಒಂದು ಕುಟುಂಬಕ್ಕೆ ಎರಡು ಹೊತ್ತಿನ ಊಟಕ್ಕೆ ಆಗುವಷ್ಟು ಪದಾರ್ಥಗಳನ್ನು ನೀಡಬೇಕು. ಸಾಧ್ಯವಾದಷ್ಟೂ ಅವಿಭಕ್ತ ಕುಟುಂಬದ ಸದಸ್ಯರಿಗೆ ಈ ದಾನವನ್ನು ನೀಡಿದಲ್ಲಿ ಉತ್ತಮ. ಒಂದು ವೇಳೆ ಆ ಥರದ ಕುಟುಂಬ ಲಭ್ಯವಾಗಲಿಲ್ಲ ಎಂದಾದಲ್ಲಿ ದಾನಕ್ಕೆ ಸೂಕ್ತವಾಗುವ ಕುಟುಂಬವೊಂದನ್ನು ಗುರುತಿಸಿಕೊಳ್ಳಬೇಕು. ಬ್ರಾಹ್ಮಣ ದಂಪತಿಯನ್ನು ಕರೆದು, ಅವರಿಗೆ ದಾನ- ದಕ್ಷಿಣೆ- ತಾಂಬೂಲಾದಿಗಳನ್ನು ದಾನವಾಗಿ ನೀಡಬೇಕು. ಅವರಿಗೆ ಭೋಜನ ವ್ಯವಸ್ಥೆಯನ್ನು ಮಾಡಿದರೆ ಮತ್ತೂ ಉತ್ತಮ. ಹಾಗೂ ಈ ಎಲ್ಲವೂ ಶಾಸ್ತ್ರಾಧಾರಿತವಾಗಿ ಹೇಗೆ ಮಾಡಬೇಕು ಎಂಬುದರ ವಿವರಣೆಯಾಗಿದೆ. 

ಅಧಿಕ ಮಾಸ 2026: ಯಾವ ದಾನ ಮಾಡಿದರೆ ಏನು ಫಲ? ಅತಿರಸ ದಾನದ ಮಹತ್ವ ಮತ್ತು ಪೂರ್ಣ ಮಾಹಿತಿ ಇಲ್ಲಿದೆ

ಅಧಿಕ ಮಾಸದಲ್ಲಿ 33 ಸಂಖ್ಯೆಯ ಮಹತ್ವ ಮತ್ತು ಬ್ರಹ್ಮಾಂಡದ ಚಿಂತನೆ

ಇನ್ನು ಅಧಿಕ ಮಾಸದಲ್ಲಿ ಸಂಖ್ಯೆ 33ಕ್ಕೆ ಬಹಳ ಪ್ರಾಮುಖ್ಯ. 33 ಅಪೂಪ, 33 ಹಣ್ಣುಗಳು, 33 ಜೊತೆ ಬಾಗಿನ ಹೀಗೆ ದಾನ ಮಾಡುವುದು ಶ್ರೇಷ್ಠ. ಆದರೆ ಅಧಿಕ ಮಾಸದಲ್ಲಿ ದಾನವೇ ಶ್ರೇಷ್ಠವಾದ್ದರಿಂದ ಆಯಾ ಆಸ್ತಿಕ ಬಂಧುಗಳು, ಶ್ರದ್ಧಾವಂತರು ತಮ್ಮಿಂದ ಸಾಧ್ಯವಾದಷ್ಟನ್ನು ದಾನ- ಧರ್ಮ ಮಾಡುವುದು ಒಳ್ಳೆಯದು. ಇನ್ನು ಮತ್ತೆ ‘ಶೂರ್ಪ ವಾಯನ ದಾನ’ದ ವಿಚಾರಕ್ಕೆ ಬಂದರೆ, ಈ ದಾನ ಮಾಡುವುದರಿಂದ ಬ್ರಹ್ಮಾಂಡವನ್ನೇ ದಾನ ಮಾಡಿದಂಥ ಪುಣ್ಯ ಲಭಿಸುತ್ತದೆ. ಎರಡು ಮೊರಗಳು ಎರಡು ಚಿಪ್ಪಿನಂತೆ, ಅದರೊಳಗೆ ಇರುವ ಪದಾರ್ಥಗಳು ಬ್ರಹ್ಮಾಂಡದಂತೆ. ದಾನ ಮಾಡುವಾಗ ಈ ರೀತಿಯ ಚಿಂತನೆ ಅಗತ್ಯ. 

ವಂಶಾಭಿವೃದ್ಧಿಯ ಸಂಕೇತವಾದ ಬಾಗಿನ ತೂಗುವ ಶಾಸ್ತ್ರ

ಬಾಗಿನ ದಾನ ಮಾಡುವಾಗ ಮಹಿಳೆಯರು ತಮ್ಮ ಸೆರಗಿನ ಭಾಗದಿಂದ ಮೊರದ ಮೇಲ್ಭಾಗವನ್ನು ಮುಚ್ಚಿ ಹಿಡಿಯುತ್ತಾರೆ, ಅದನ್ನು ಪಡೆಯುವವರು ಸಹ ತಮ್ಮ ಕೈಗಳಿಂದ ಮೊರದ ಕೆಳಭಾಗವನ್ನು ಹಿಡಿದು, ನಿಧಾನವಾಗಿ ತೂಗುತ್ತಾರೆ. ಇದರ ಅರ್ಥ ಎರಡೂ ಕುಟುಂಬಗಳಲ್ಲಿ ವಂಶಾಭಿವೃದ್ಧಿ ಆಗಲಿ, ತೊಟ್ಟಿಲು ತೂಗುವಂತಾಗಲಿ ಎಂಬುದರ ಸಂಕೇತ ಅದು. ಅಧಿಕ ಮಾಸದಲ್ಲಿ ದಾನವು ಶ್ರೇಷ್ಠ ಎಂಬುದು ಸತ್ಯ. ಅದರಲ್ಲಿ ಬ್ರಹ್ಮಾಂಡವನ್ನೇ ದಾನ ಮಾಡಿದಂಥ ಫಲ ನೀಡುವ ಬಾಗಿನವನ್ನು ದಾನ ನೀಡುವುದು ಅದೆಷ್ಟು ಶ್ರೇಷ್ಠವಾದದ್ದು ಎಂಬುದು ಅಂದಾಜು ಮಾಡಿಕೊಳ್ಳಬಹುದು. ಈ ದಾನ ಮಾಡುವಾಗ ಸಂಕಲ್ಪ ಸಹ ಮುಖ್ಯವಾಗುತ್ತದೆ. ಆದ್ದರಿಂದ ಕ್ರಮವನ್ನು ಹಾಗೂ ಉದ್ದೇಶವನ್ನು ಅರಿತು ಆಚರಿಸುವ ಕರ್ಮವು ಬಹಳ ವಿಶೇಷ ಎನಿಸುತ್ತದೆ.

2026 ಅಧಿಕ ಜ್ಯೇಷ್ಠ ಮಾಸ: ಈ ತಿಂಗಳಲ್ಲಿ ಮದುವೆ-ಮುಂಜಿ ಏಕೆ ಮಾಡಬಾರದು? ಈ ಅವಧಿಯಲ್ಲಿ ಮಾಡಬೇಕಾದ ದಾನ-ಧರ್ಮಗಳಿವು

ಶ್ರೀನಿವಾಸ ದೇವರಿಗೆ ಧರಣೀ ದೇವಿ ಬಾಗಿನ ನೀಡಿದ ಪೌರಾಣಿಕ ಹಿನ್ನೆಲೆ

ಸಾಕ್ಷಾತ್ ಶ್ರೀನಿವಾಸ ದೇವರು ಕಣಿ ಹೇಳುವ ಮಹಿಳೆ ರೂಪದಲ್ಲಿ ಆಕಾಶ ರಾಜನ ಅರಮನೆಗೆ ಬರುತ್ತಾರೆ. ಆಗ ಸ್ತ್ರೀ ರೂಪದಲ್ಲಿರುವ ಪರಮಾತ್ಮನಿಗೆ ಆ ಆಕಾಶ ರಾಜನ ಹೆಂಡತಿ ಧರಣೀ ದೇವಿಯು ಬಾಗಿನವನ್ನು ನೀಡುತ್ತಾಳೆ. ಆ ಬಾಗಿನದ ಒಳಗೆ ಮುತ್ತು- ರತ್ನ ಸಹಿತ ಎಲ್ಲವೂ ಇದ್ದವು, ಮೊರದ ಬಾಗಿನದ ಮೇಲೆ ಚಿನ್ನದ ಎಳೆಗಳು- ಅಲಂಕಾರ ಇದ್ದವು ಎಂಬುದು ವರ್ಣನೆ. ಈ ವಿಚಾರದಲ್ಲಿ ತಮ್ಮ ಶಕ್ತ್ಯಾನುಸಾರವಾಗಿ ದಾನವನ್ನು ಮಾಡಬಹುದು. ಅಧಿಕ ಮಾಸ- ಇದಕ್ಕೆ ಪುರುಷೋತ್ತಮ ಮಾಸ ಎಂಬ ಹೆಸರೂ ಇದೆ. ಇದರಲ್ಲಿ ಶೂರ್ಪ ವಾಯನ ದಾನ ಮಾಡಬೇಕು ಎಂದಿರುವವರಿಗೆ ಇಲ್ಲಿನ ಮಾಹಿತಿ ಸಹಾಯ ಆಗಲಿ.

ಶ್ರೀಕೃಷ್ಣಾರ್ಪಣಮಸ್ತು

ಮಾಹಿತಿ- ಡಾ. ಭೀಮಸೇನಾಚಾರ್ಯ ಅತನೂರು

ನಿರೂಪಣೆ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts