ಇದೇ ಮೇ 15 ರಿಂದ 29 ರವರೆಗೆ ನಡೆಯಲಿರುವ ಬುಧ ಮತ್ತು ಶುಕ್ರ ಗ್ರಹಗಳ ಪರಿವರ್ತನ ಯೋಗದ ಬಗೆಗಿನ ಮಾಹಿತಿ ಪೂರ್ಣ ಲೇಖನ ಇದು. ಈ ಪರಿವರ್ತನ ಯೋಗವು ಜ್ಯೋತಿಷ್ಯ ಶಾಸ್ತ್ರದಲ್ಲಿ ಅತ್ಯಂತ ಅಪರೂಪದ ಮತ್ತು ಶಕ್ತಿಶಾಲಿ ‘ಮಹಾಭಾಗ್ಯ ಯೋಗ’ ಎಂದು ಪರಿಗಣಿಸಲಾಗುತ್ತದೆ. ಬುಧನ ಮನೆಯಾದ ಮಿಥುನದಲ್ಲಿ ಶುಕ್ರ ಹಾಗೂ ಶುಕ್ರನ ಮನೆಯಾದ ವೃಷಭದಲ್ಲಿ ಬುಧನ ಈ ಪರಸ್ಪರ ಸ್ಥಾನ ಬದಲಾವಣೆಯು ರಾಶಿಚಕ್ರದ ಹನ್ನೆರಡು ರಾಶಿಗಳ ಮೇಲೆ ವಿಶಿಷ್ಟ ಪ್ರಭಾವ ಬೀರುತ್ತದೆ.
ವಿಶೇಷವಾಗಿ ಸ್ಥಿರ ರಾಶಿಗಳು (ವೃಷಭ, ಸಿಂಹ) ಮತ್ತು ಉಪಚಯ ಸ್ಥಾನಗಳ ಲಾಭ ಪಡೆಯುವ ರಾಶಿಗಳಿಗೆ (ಕನ್ಯಾ, ತುಲಾ) ಈ ಅವಧಿಯಲ್ಲಿ ಅತ್ಯಂತ ಹೆಚ್ಚಿನ ಧನಲಾಭ, ವೃತ್ತಿಪರ ಯಶಸ್ಸು ಹಾಗೂ ಅದೃಷ್ಟ ಒಲಿಯಲಿದೆ. ಹನ್ನೆರಡು ರಾಶಿಗಳ ಮೇಲಿನ ಸಂಪೂರ್ಣ ಪ್ರಭಾವದ ವಿವರ ಇಲ್ಲಿದೆ:
ಮೇಷ ರಾಶಿ
ಮೇಷ ರಾಶಿಗೆ ಬುಧ ಮತ್ತು ಶುಕ್ರರು 2 ಮತ್ತು 3 ನೇ ಮನೆಗಳ ಅಧಿಪತಿಗಳಾಗಿ, ಈ ಅವಧಿಯಲ್ಲಿ ದ್ವಿತೀಯ (ಧನ) ಮತ್ತು ತೃತೀಯ (ಪರಾಕ್ರಮ) ಸ್ಥಾನಗಳ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ನಿಮ್ಮ ಸಂವಹನ ಶಕ್ತಿ ಅತ್ಯಂತ ಪ್ರಭಾವಶಾಲಿಯಾಗಲಿದ್ದು, ಮಾತುಗಾರಿಕೆಯಿಂದಲೇ ಕೆಲಸಗಳನ್ನು ಸಾಧಿಸಿಕೊಳ್ಳಲಿದ್ದೀರಿ. ಸಹೋದರ-ಸಹೋದರಿಯರಿಂದ ಆರ್ಥಿಕ ಸಹಾಯ ದೊರೆಯಲಿದೆ. ಕಿರು ಪ್ರವಾಸಗಳು ಲಾಭದಾಯಕವಾಗಿರಲಿವೆ. ಹೂಡಿಕೆಯಿಂದ ಉತ್ತಮ ಲಾಭಾಂಶ ಬರಲಿದ್ದು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ. ಕಲಾತ್ಮಕ ಮತ್ತು ಸೃಜನಶೀಲ ರಂಗದಲ್ಲಿ ಇರುವವರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ.
ವೃಷಭ ರಾಶಿ
ನಿಮ್ಮ ರಾಶ್ಯಾಧಿಪತಿ ಶುಕ್ರ ಮತ್ತು ಧನಾಧಿಪತಿ ಬುಧನ ನಡುವೆ ಲಗ್ನ ಹಾಗೂ ಧನ ಸ್ಥಾನಗಳ ಪರಿವರ್ತನೆ ಆಗುತ್ತಿರುವುದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚಾಗಲಿದ್ದು, ಸಮಾಜದಲ್ಲಿ ಗೌರವ ವೃದ್ಧಿಸಲಿದೆ. ಆರ್ಥಿಕ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಲಿದ್ದು, ಸಿಲುಕಿಕೊಂಡಿದ್ದ ಹಣ ಕೈಸೇರಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕೌಟುಂಬಿಕ ಜೀವನದಲ್ಲಿ ಸಂತೋಷ, ನೆಮ್ಮದಿ ನೆಲೆಸಲಿದ್ದು, ಹಿರಿಯರ ಬೆಂಬಲ ಸಿಗಲಿದೆ. ವ್ಯಾಪಾರಸ್ಥರಿಗೆ ಈ ಅವಧಿಯಲ್ಲಿ ನಿರೀಕ್ಷೆಗೂ ಮೀರಿದ ಲಾಭ ಸಿಗುವ ಯೋಗವಿದೆ. ನಿಮ್ಮ ಮಾತಿನ ಚಾತುರ್ಯದಿಂದ ಹೊಸ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗುತ್ತೀರಿ.
ಮಿಥುನ ರಾಶಿ
ಮಿಥುನ ರಾಶಿಯ ಲಗ್ನಾಧಿಪತಿ ಬುಧ ಮತ್ತು ಪಂಚಮಾಧಿಪತಿ ಶುಕ್ರರು ಈ ಅವಧಿಯಲ್ಲಿ 12 ಮತ್ತು 1 ನೇ ಮನೆಗಳ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ವಿದೇಶಿ ಸಂಪರ್ಕಗಳಿಂದ ಅಥವಾ ರಫ್ತು-ಆಮದು ವ್ಯವಹಾರದಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಐಷಾರಾಮಿ ಮತ್ತು ಭೌತಿಕ ಸುಖ-ಸಾಧನಗಳಿಗಾಗಿ ವೆಚ್ಚಗಳು ಹೆಚ್ಚಾಗಲಿವೆ. ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶಗಳು ಒದಗಿ ಬರಬಹುದು. ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸುವುದು ಒಳ್ಳೆಯದು. ಹಳೆಯ ಸಾಲಗಳಿಂದ ಮುಕ್ತಿ ಪಡೆಯಲು ಈ ಅವಧಿ ಪೂರಕವಾಗಿದ್ದು, ಹೂಡಿಕೆ ಮಾಡುವಾಗ ಎಚ್ಚರಿಕೆ ಅಗತ್ಯ.
ಪರಿವರ್ತನೆ ಯೋಗ: ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯ ರಹಸ್ಯ, ಅದರ ಪವಾಡ ಸದೃಶ ಪ್ರಭಾವ!
ಕಟಕ ರಾಶಿ
ನಿಮ್ಮ ರಾಶಿಗೆ 11 ನೇ (ಲಾಭ) ಮತ್ತು 12 ನೇ (ವ್ಯಯ) ಮನೆಗಳ ಅಧಿಪತಿಗಳಾದ ಶುಕ್ರ ಮತ್ತು ಬುಧರು ಈ ಸ್ಥಾನಗಳಲ್ಲಿ ಪರಿವರ್ತನೆ ಹೊಂದುತ್ತಿದ್ದಾರೆ. ಇದು ಮಿಶ್ರಫಲವನ್ನು ನೀಡುವ ಯೋಗವಾಗಿದೆ. ಆದಾಯ ನಿರಂತರವಾಗಿ ಹರಿದುಬಂದರೂ ಅದಕ್ಕೆ ತಕ್ಕಂತೆ ಅನಿರೀಕ್ಷಿತ ವೆಚ್ಚಗಳೂ ಎದುರಾಗಬಹುದು. ದೀರ್ಘಕಾಲದ ಆಸೆಗಳು ಈ ಅವಧಿಯಲ್ಲಿ ಈಡೇರಲಿವೆ. ಸಮಾಜದ ಗಣ್ಯ ವ್ಯಕ್ತಿಗಳ ಭೇಟಿಯಿಂದ ಉದ್ಯೋಗದಲ್ಲಿ ಲಾಭವಾಗಲಿದೆ. ಸ್ನೇಹಿತರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ಸೃಜನಶೀಲ ಕೆಲಸಗಳಿಗೆ ಹಣ ವ್ಯಯವಾಗಲಿದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆದರೆ ಶತ್ರುಗಳ ನಡೆಗಳ ಬಗ್ಗೆ ಸ್ವಲ್ಪ ಜಾಗರೂಕರಾಗಿರುವುದು ಉತ್ತಮ.
ಸಿಂಹ ರಾಶಿ
ಸಿಂಹ ರಾಶಿಗೆ ಈ ಪರಿವರ್ತನೆಯು ಆರ್ಥಿಕವಾಗಿ ಉತ್ತಮ ಫಲವನ್ನು ತರಲಿದೆ. ನಿಮ್ಮ ರಾಶಿಯ ಕರ್ಮಾಧಿಪತಿ (10ನೇ ಮನೆ) ಶುಕ್ರ ಮತ್ತು ಲಾಭಾಧಿಪತಿ (11ನೇ ಮನೆ) ಬುಧನ ನಡುವೆ ಉಂಟಾಗುತ್ತಿರುವ ಈ ಪರಿವರ್ತನೆಯು ಅತ್ಯಂತ ಶಕ್ತಿಶಾಲಿ ‘ಧನ ಯೋಗ’ವನ್ನು ಸೃಷ್ಟಿಸುತ್ತದೆ. ನೀವು ಮಾಡುವ ಉದ್ಯೋಗ ಅಥವಾ ವ್ಯವಹಾರದಲ್ಲಿ ಶ್ರಮಕ್ಕೆ ನಿರೀಕ್ಷೆಗೂ ಮೀರಿದ ಲಾಭ ಮತ್ತು ಆದಾಯ ಹರಿದು ಬರಲಿದೆ. ಉದ್ಯೋಗದಲ್ಲಿ ದೀರ್ಘಕಾಲದಿಂದ ಕಾಯುತ್ತಿದ್ದ ಬಡ್ತಿ, ವೇತನ ಹೆಚ್ಚಳದ ಜೊತೆಗೆ ಉನ್ನತ ಜವಾಬ್ದಾರಿಗಳು ಸಿಗಲಿವೆ. ವ್ಯಾಪಾರಸ್ಥರಿಗೆ ಹೊಸ ಆರ್ಥಿಕ ಒಪ್ಪಂದಗಳು ಕೈಗೂಡಿ, ಹಳೆಯ ಬಾಕಿ ಹಣ ವಾಪಸ್ ಬರಲಿದೆ. ಸಮಾಜದಲ್ಲಿ ಮತ್ತು ಕಚೇರಿಯಲ್ಲಿ ನಿಮ್ಮ ಕೀರ್ತಿ, ಗೌರವ ವೃದ್ಧಿಸಲಿದ್ದು, ಇಚ್ಛಿತ ಆಸೆಗಳೆಲ್ಲವೂ ಈಡೇರಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಗೂ ಈ ಯೋಗವು ಅದ್ಭುತ ಯಶಸ್ಸನ್ನು ತರಲಿದೆ. ನಿಮ್ಮ ರಾಶ್ಯಾಧಿಪತಿಯಾದ ಬುಧ (ಹಾಗೂ ದಶಮಾಧಿಪತಿ) ಮತ್ತು ಭಾಗ್ಯಾಧಿಪತಿಯಾದ ಶುಕ್ರನ ನಡುವೆ 9 ಮತ್ತು 10 ನೇ ಮನೆಗಳ ಪರಿವರ್ತನೆ ಆಗುತ್ತಿದೆ. ಈ ಭಾಗ್ಯ-ಕರ್ಮ ಪರಿವರ್ತನೆಯು ನಿಮ್ಮ ವೃತ್ತಿಜೀವನದಲ್ಲಿ ದೊಡ್ಡ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ. ಕೈಗೆತ್ತಿಕೊಂಡ ಪ್ರತಿಯೊಂದು ಕೆಲಸದಲ್ಲೂ ಅದೃಷ್ಟ ನಿಮ್ಮ ಬೆನ್ನಿಗಿರಲಿದೆ. ಉದ್ಯೋಗ ನಿಮಿತ್ತ ವಿದೇಶ ಪ್ರವಾಸದ ಯೋಗವಿದೆ. ಉನ್ನತಾಧಿಕಾರಿಗಳ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಹೊಸ ಉದ್ಯಮ ಆರಂಭಿಸಲು ಯೋಚಿಸುತ್ತಿದ್ದರೆ ಈ ಅವಧಿ ಅತ್ಯಂತ ಸೂಕ್ತವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ ಹಾಗೂ ಪಿತೃಗಳಿಂದ ಆರ್ಥಿಕ ನೆರವು ಸಿಗಲಿದೆ.
ಅಖಂಡ ಶ್ರೀಮಂತ ಯೋಗ: ನಿಮ್ಮ ಜಾತಕದಲ್ಲಿ ಈ ಅದೃಷ್ಟದ ಯೋಗವಿದೆಯೇ? ಇಲ್ಲಿದೆ ಸಂಪೂರ್ಣ ವಿವರ!
ತುಲಾ ರಾಶಿ
ತುಲಾ ರಾಶಿಗೆ ಭಾಗ್ಯಾಧಿಪತಿ ಬುಧ ಮತ್ತು ರಾಶ್ಯಾಧಿಪತಿ ಶುಕ್ರನ ನಡುವೆ 8 ಮತ್ತು 9 ನೇ ಮನೆಗಳ ಪರಿವರ್ತನೆ ಆಗುತ್ತಿದೆ. ಸಂಶೋಧನೆ, ಗೂಢಶಾಸ್ತ್ರ, ಜ್ಯೋತಿಷ್ಯ ಮತ್ತು ವಿಜ್ಞಾನ ರಂಗದಲ್ಲಿ ಇರುವವರಿಗೆ ಈ ಅವಧಿ ಅತ್ಯಂತ ಯಶಸ್ವಿಯಾಗಲಿದೆ. ಅನಿರೀಕ್ಷಿತವಾಗಿ ಪಿತ್ರಾರ್ಜಿತ ಆಸ್ತಿ ಅಥವಾ ವಿಮೆಯ ಮೂಲಕ ಧನಲಾಭವಾಗುವ ಯೋಗವಿದೆ. ತೀರ್ಥಯಾತ್ರೆಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ. ಕಾರ್ಯಕ್ಷೇತ್ರದಲ್ಲಿ ಕೆಲವು ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು, ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಅವುಗಳನ್ನು ದಾಟಲಿದ್ದೀರಿ. ತಂದೆಯ ಆರೋಗ್ಯದ ಕಡೆಗೆ ಸ್ವಲ್ಪ ಗಮನ ಹರಿಸಬೇಕಾಗಬಹುದು. ಹೂಡಿಕೆಯಲ್ಲಿ ಸದ್ಯಕ್ಕೆ ದೊಡ್ಡ ರಿಸ್ಕ್ ತೆಗೆದುಕೊಳ್ಳಬೇಡಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಗೆ ಅಷ್ಟಮಾಧಿಪತಿ ಬುಧ ಮತ್ತು ಸಪ್ತಮಾಧಿಪತಿ ಶುಕ್ರರು 7 ಮತ್ತು 8 ನೇ ಮನೆಗಳ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ವೈವಾಹಿಕ ಜೀವನದಲ್ಲಿ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಮಿಶ್ರ ಪ್ರತಿಕ್ರಿಯೆ ಇರಲಿದೆ. ಸಂಗಾತಿಯ ಹೆಸರಿನಲ್ಲಿ ಮಾಡುವ ಹೂಡಿಕೆಗಳು ಅಥವಾ ವ್ಯವಹಾರಗಳು ದೊಡ್ಡ ಲಾಭವನ್ನು ತಂದುಕೊಡಲಿವೆ. ವ್ಯಾಪಾರದಲ್ಲಿ ಹೊಸ ಒಪ್ಪಂದಗಳಿಗೆ ಸಹಿ ಹಾಕುವಾಗ ಪ್ರತಿಯೊಂದು ದಾಖಲೆಯನ್ನು ಸೂಕ್ಷ್ಮವಾಗಿ ಪರಿಶೀಲಿಸಿ. ಹಳೆಯ ರಹಸ್ಯಗಳು ಅಥವಾ ವಿಷಯಗಳು ಬೆಳಕಿಗೆ ಬರಬಹುದು. ಆರ್ಥಿಕವಾಗಿ ಹಠಾತ್ ಧನಲಾಭದ ಯೋಗಗಳಿದ್ದರೂ ಆರೋಗ್ಯದ ದೃಷ್ಟಿಯಿಂದ ಉದರ ಸಂಬಂಧಿ ಸಮಸ್ಯೆಗಳ ಬಗ್ಗೆ ಎಚ್ಚರವಿರಲಿ. ಮಾತನಾಡುವಾಗ ಸಂಯಮ ಅಗತ್ಯ.
ಧನು ರಾಶಿ
ಧನು ರಾಶಿಗೆ 6 ಮತ್ತು 7 ನೇ ಮನೆಗಳ ಅಧಿಪತಿಗಳಾದ ಶುಕ್ರ ಮತ್ತು ಬುಧರ ಪರಿವರ್ತನೆ ನಡೆಯುತ್ತಿದೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಠಿಣ ಸ್ಪರ್ಧೆ ಎದುರಾಗಬಹುದು, ಆದರೆ ನಿಮ್ಮ ಕಾರ್ಯದಕ್ಷತೆಯಿಂದ ಶತ್ರುಗಳ ಮೇಲೆ ಜಯ ಸಾಧಿಸಲಿದ್ದೀರಿ. ಕೋರ್ಟ್ ಕಚೇರಿ ವ್ಯಾಜ್ಯಗಳಲ್ಲಿ ನಿಮಗೆ ಸಕಾರಾತ್ಮಕ ತೀರ್ಪು ಬರುವ ಸಾಧ್ಯತೆ ಇದೆ. ಹಳೆಯ ಸಾಲಗಳನ್ನು ತೀರಿಸಲು ಈ ಅವಧಿ ಸುಸಮಯ. ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು, ಅದನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ. ಪಾಲುದಾರಿಕೆ ವ್ಯವಹಾರಸ್ಥರು ವ್ಯವಹಾರದ ಲೆಕ್ಕಾಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಗತ್ಯ. ದೈನಂದಿನ ಆರೋಗ್ಯ ಮತ್ತು ಆಹಾರ ಕ್ರಮದ ಕಡೆಗೆ ಗಮನ ಹರಿಸಿ.
ಮಕರ ರಾಶಿ
ಮಕರ ರಾಶಿಗೆ ಪಂಚಮಾಧಿಪತಿ ಶುಕ್ರ ಮತ್ತು ಷಷ್ಟಾಧಿಪತಿ ಬುಧನ ನಡುವೆ 5 ಮತ್ತು 6 ನೇ ಮನೆಗಳ ಪರಿವರ್ತನೆ ಆಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭವ್ಯ ಯಶಸ್ಸು ಸಿಗಲಿದೆ. ವಿದ್ಯಾಭ್ಯಾಸಕ್ಕಾಗಿ ಸಾಲ ಸೌಲಭ್ಯಗಳನ್ನು ನಿರೀಕ್ಷಿಸುತ್ತಿದ್ದಲ್ಲಿ ಅದು ಸುಲಭವಾಗಿ ಮಂಜೂರಾಗಲಿದೆ. ಪ್ರೇಮ ಜೀವನದಲ್ಲಿ ಇದ್ದ ಭಿನ್ನಾಭಿಪ್ರಾಯಗಳು ದೂರವಾಗಿ ಮಧುರತೆ ಹೆಚ್ಚಾಗಲಿದೆ. ಕಲಾತ್ಮಕ ಕ್ಷೇತ್ರ ಮತ್ತು ಬರವಣಿಗೆಯಲ್ಲಿ ತೊಡಗಿಸಿಕೊಂಡವರಿಗೆ ಹೊಸ ಮನ್ನಣೆ ಸಿಗಲಿದೆ. ಷೇರು ಮಾರುಕಟ್ಟೆ ಅಥವಾ ಯಾವುದೇ ಹೂಡಿಕೆ ಮಾಡುವ ಮುನ್ನ ಪರಿಣತರ ಸಲಹೆ ಪಡೆಯುವುದು ಉತ್ತಮ. ನಿಮ್ಮ ಮಕ್ಕಳ ಪ್ರಗತಿಯನ್ನು ಕಂಡು ಮನಸ್ಸಿಗೆ ನೆಮ್ಮದಿ ಮತ್ತು ಹೆಮ್ಮೆ ಉಂಟಾಗಲಿದೆ.
ಕುಂಭ ರಾಶಿ
ಕುಂಭ ರಾಶಿಗೆ ಸುಖಾಧಿಪತಿ (4ನೇ ಮನೆ) ಶುಕ್ರ ಮತ್ತು ಪಂಚಮಾಧಿಪತಿ (5ನೇ ಮನೆ) ಬುಧನ ನಡುವೆ ಕೇಂದ್ರ ಮತ್ತು ತ್ರಿಕೋಣ ಸ್ಥಾನಗಳ ಪರಿವರ್ತನೆ ಆಗುತ್ತಿದೆ. ಇದು ನಿಮ್ಮ ಜೀವನದಲ್ಲಿ ಭೌತಿಕ ಸುಖಗಳನ್ನು ಹೆಚ್ಚಿಸಲಿದೆ. ಹೊಸ ಮನೆ, ಜಮೀನು ಅಥವಾ ಐಷಾರಾಮಿ ವಾಹನವನ್ನು ಖರೀದಿಸುವ ನಿಮ್ಮ ಕನಸು ಈ ಅವಧಿಯಲ್ಲಿ ನನಸಾಗಬಹುದು. ತಾಯಿಯ ಕಡೆಯಿಂದ ಸಂಪೂರ್ಣ ಸಹಕಾರ ಮತ್ತು ಪ್ರೀತಿ ಸಿಗಲಿದೆ. ಮನೆಯಲ್ಲಿ ಸಡಗರದ ವಾತಾವರಣ ಇರಲಿದ್ದು, ಶುಭ ಕಾರ್ಯಗಳು ಜರುಗಲಿವೆ. ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಪ್ರಗತಿ ಕಂಡುಬರಲಿದೆ. ಸೃಜನಶೀಲ ರಂಗದಲ್ಲಿ ಇರುವವರಿಗೆ ಆರ್ಥಿಕವಾಗಿ ಮತ್ತು ವೃತ್ತಿಪರವಾಗಿ ಇದು ಅತ್ಯಂತ ಲಾಭದಾಯಕ ಸಮಯ.
ಜಾತಕದಲ್ಲಿ ಶಕಟ ಯೋಗವಿದ್ದರೆ ಜೀವನ ಬಂಡಿ ಏರಿಳಿತದ ಹಾದಿಯೇ? ಇಲ್ಲಿದೆ ಸಮಗ್ರ ಮಾಹಿತಿ ಮತ್ತು ಪರಿಹಾರ!
ಮೀನ ರಾಶಿ
ಮೀನ ರಾಶಿಗೆ 3 ಮತ್ತು 4 ನೇ ಮನೆಗಳ ಅಧಿಪತಿಗಳಾದ ಶುಕ್ರ ಮತ್ತು ಬುಧರ ನಡುವೆ ಪರಿವರ್ತನೆ ಯೋಗ ಉಂಟಾಗುತ್ತಿದೆ. ನಿಮ್ಮ ಪರಾಕ್ರಮ ಮತ್ತು ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಣ್ಣ ಪ್ರವಾಸಗಳು ಒದಗಿ ಬರಲಿದ್ದು, ಅವುಗಳಿಂದ ಭವಿಷ್ಯದಲ್ಲಿ ಲಾಭವಾಗಲಿದೆ. ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಸಂಬಂಧಿಸಿದಂತೆ ಇದ್ದ ತೊಂದರೆಗಳು ನಿವಾರಣೆಯಾಗಲಿವೆ. ಮನೆಯ ನವೀಕರಣಕ್ಕಾಗಿ ಹಣ ವ್ಯಯ ಮಾಡಲಿದ್ದೀರಿ. ನೆರೆಹೊರೆಯವರು ಮತ್ತು ಹಿತೈಷಿಗಳಿಂದ ಉತ್ತಮ ಬೆಂಬಲ ಸಿಗಲಿದೆ. ಮಾಧ್ಯಮ, ಮಾರ್ಕೆಟಿಂಗ್, ಬರವಣಿಗೆ ಮತ್ತು ಕಮ್ಯುನಿಕೇಶನ್ ರಂಗದಲ್ಲಿ ಇರುವವರಿಗೆ ಈ 15 ದಿನಗಳ ಅವಧಿಯು ಅತ್ಯಂತ ಸಕಾರಾತ್ಮಕ ಬದಲಾವಣೆ ಹಾಗೂ ಹೊಸ ಆರ್ಥಿಕ ಒಪ್ಪಂದಗಳನ್ನು ತಂದುಕೊಡಲಿದೆ.
ಲೇಖನ- ಶ್ರೀನಿವಾಸ ಮಠ









