“ಗ್ರಹಗಳಲ್ಲಿ ಒಮ್ಮತವಿಲ್ಲ, ಜಗತ್ತಿನಲ್ಲೂ ಒಮ್ಮತವಿಲ್ಲ” – ಇದು ಸದ್ಯದ ಮಟ್ಟಿಗೆ ಹೇಳಬಹುದಾದ ಜ್ಯೋತಿಷ್ಯದ ಒಕ್ಕಣೆಯ ವಿಶ್ಲೇಷಣೆ.ಜಾಗತಿಕವಾಗಿಯೇ ಒಂದು ಬಗೆಯ ವಿಚಿತ್ರ ಸನ್ನಿವೇಶ ತಲೆದೋರಿದೆ.
ಈಗಿನ ಪರಿಸ್ಥಿತಿಗೆ ಸದ್ಯದ ಗೋಚಾರ ಸ್ಥಿತಿ ಹೇಗೆ ಕೊಡುಗೆಯನ್ನು ಕೊಡುತ್ತಿದೆ ಗೊತ್ತೇ? ಗೋಚರದಲ್ಲಿ ಯಾವಾಗಲೂ ಗ್ರಹಗಳು ಒಂದಕ್ಕೊಂದು ಹೇಗೆ ನಿಂತಿವೆ ಎಂಬುದು ಮುಖ್ಯ. ಒಂದು ಗ್ರಹ ಬಲಿಷ್ಠವಾಗಿದೆಯೇ ಎಂಬುದಷ್ಟೇ ಅಲ್ಲ, ಅದು ತನ್ನ ರಾಶ್ಯಾಧಿಪತಿಗೆ, ತನ್ನ ಸಹಗ್ರಹಗಳಿಗೆ ಅನುಕೂಲವಾಗಿದೆಯೇ ಎಂದೂ ನೋಡಬೇಕು. ಸದ್ಯದ ಗೋಚರದಲ್ಲಿ ಹೆಚ್ಚಿನ ಗ್ರಹಗಳು ಷಷ್ಟಾಷ್ಟಮ (6-8) ಮತ್ತು ದ್ವಿರ್ದ್ವಾದಶ (2-12) ಸಂಬಂಧದಲ್ಲಿವೆ. ಅಂದರೆ ಯಾರೂ ಯಾರಿಗೂ ಬೆಂಬಲವಾಗಿಲ್ಲ.
ಕುಂಡಲಿಯಲ್ಲಿ ಗ್ರಹ ಸ್ಥಿತಿ
ಕುಜ: ಕರ್ಕಾಟಕ (ನೀಚ)
ಗುರು, ಕೇತು, ಮಾಂದಿ: ಸಿಂಹ
ರವಿ, ಬುಧ: ತುಲಾ (ರವಿ ನೀಚ)
ಚಂದ್ರ, ಶುಕ್ರ: ಕನ್ಯಾ (ಶುಕ್ರ ನೀಚ)
ರಾಹು: ಕುಂಭ
ಶನಿ: ಮೀನ
ಇಲ್ಲಿ ರವಿ, ಕುಜ, ಶುಕ್ರ ಮೂವರೂ ನೀಚ ಸ್ಥಿತಿಯಲ್ಲಿದ್ದಾರೆ. ಇದು ಈ ಗೋಚರದ ಅತಿ ಮುಖ್ಯ ಮತ್ತು ಗಂಭೀರ ಅಂಶವಾಗಿದೆ.
ಹಿಟ್ಲರ್ ಪುನರಾವತಾರವೇ ಟ್ರಂಪ್? ಪ್ರಕಾಶ್ ಅಮ್ಮಣ್ಣಾಯ ಆಘಾತಕಾರಿ ಜ್ಯೋತಿಷ್ಯ ವಿಶ್ಲೇಷಣೆ
ಷಷ್ಟಾಷ್ಟಮ ಸಂಬಂಧಗಳು
ಶನಿ ಮತ್ತು ರವಿ: ರವಿ ಗ್ರಹ ತುಲಾದಲ್ಲಿ, ಶನಿ ಮೀನದಲ್ಲಿದ್ದಾನೆ. ಶನಿ ಜನಸಾಮಾನ್ಯರು, ಶ್ರಮಿಕರು ಮತ್ತು ನ್ಯಾಯದ ಕಾರಕ. ರವಿ ಸರ್ಕಾರ,ಅಧಿಕಾರ ಮತ್ತು ನಾಯಕತ್ವದ ಕಾರಕ. ಇವರಿಬ್ಬರ ನಡುವೆ ಷಷ್ಟಾಷ್ಟಮ ಇರುವುದರಿಂದ ಆಡಳಿತ ಮತ್ತು ಜನತೆಯ ನಡುವೆ ಅಂತರ ಹಾಗೂ ಅಪನಂಬಿಕೆ ಹೆಚ್ಚುತ್ತದೆ. ನಾಯಕರ ನಿರ್ಧಾರಗಳಿಗೆ ಜನರ ವಿರೋಧ, ಪ್ರತಿಭಟನೆ, ಒತ್ತಡದ ವಾತಾವರಣ ಕಾಣಿಸುತ್ತದೆ.
ಶನಿ ಮತ್ತು ಗುರು: ಮೀನದಲ್ಲಿ ಶನಿ ಹಾಗೂ ಸಿಂಹದಲ್ಲಿ ಗುರು (ಶನಿ ನಿಂತ ರಾಶಿಯ ಅಧಿಪತಿ ಗುರು). ಗುರು ಧರ್ಮ, ಕಾನೂನು,ಹಣಕಾಸು ಮತ್ತು ವಿವೇಕದ ಕಾರಕ. ಶನಿಗೆ ಗುರುವಿನ ಬೆಂಬಲ ಸಿಗದಿದ್ದರೆ ವ್ಯವಸ್ಥೆಗಳು ಸಡಿಲವಾಗುತ್ತವೆ, ನ್ಯಾಯ ವಿಳಂಬವಾಗುತ್ತದೆ,ಹಾಗೂ ಆರ್ಥಿಕ ನೀತಿಗಳಲ್ಲಿ ಗೊಂದಲ ಉಂಟಾಗುತ್ತದೆ.
ಕುಜ ಮತ್ತು ರಾಹು: ಕರ್ಕಾಟಕದಲ್ಲಿ ಕುಜ ಹಾಗೂ ಕುಂಭದಲ್ಲಿ ರಾಹು. ಕುಜ ಸೈನ್ಯ, ಶಸ್ತ್ರ ಮತ್ತು ಬೆಂಕಿಯ ಕಾರಕ. ರಾಹು ಕುಟಿಲತೆ,ವಿದೇಶ ಸಂಬಂಧ ಮತ್ತು ಹೊಸ ತಂತ್ರಜ್ಞಾನದ ಕಾರಕ. ಇವರ ಷಷ್ಟಾಷ್ಟಮದಿಂದ ಗಡಿ ಉದ್ವಿಗ್ನತೆ, ಅನಿರೀಕ್ಷಿತ ದಾಳಿಗಳು, ಸೈಬರ್ ಅಥವಾ ತಾಂತ್ರಿಕ ಸಂಘರ್ಷ, ಅಪಘಾತ ಮತ್ತು ಅಗ್ನಿ ಭಯಗಳ ಸೂಚನೆ ಇದೆ.
ದ್ವಿರ್ದ್ವಾದಶ ಸಂಬಂಧಗಳು
ರವಿ ಮತ್ತು ಶುಕ್ರ: ತುಲಾದಲ್ಲಿ ರವಿ ಹಾಗೂ ಕನ್ಯಾದಲ್ಲಿ ಶುಕ್ರ (ರವಿ ಇರುವ ರಾಶ್ಯಾಧಿಪತಿ ಶುಕ್ರ). ಶುಕ್ರ ಹಣ, ವ್ಯಾಪಾರ ಮತ್ತು ರಾಜತಾಂತ್ರಿಕತೆಯ ಕಾರಕ. ಅಧಿಕಾರಕ್ಕೂ ಆರ್ಥಿಕತೆಗೂ ಹೊಂದಾಣಿಕೆ ಇಲ್ಲ. ಸರ್ಕಾರಗಳ ಆರ್ಥಿಕ ನಿರ್ಧಾರಗಳು ಮಾರುಕಟ್ಟೆಗೆ ಪೂರಕವಾಗದೆ ಉದ್ಯಮ ವಲಯದಲ್ಲಿ ಅಸಮಾಧಾನ ಉಂಟಾಗುತ್ತದೆ.
ರಾಹು ಮತ್ತು ಶನಿ: ಕುಂಭದಲ್ಲಿ ರಾಹು, ಮೀನದಲ್ಲಿ ಶನಿ (ರಾಹು ಇರುವ ರಾಶ್ಯಾಧಿಪತಿ ಶನಿ). ರಾಹುವಿಗೆ ಶನಿಯ ಹಿಡಿತ ಇಲ್ಲ. ತಂತ್ರಜ್ಞಾನ,ವಿದೇಶ ಒಪ್ಪಂದ ಮತ್ತು ವಲಸೆ ವಿಷಯಗಳಲ್ಲಿ ನಿಯಂತ್ರಣ ತಪ್ಪುತ್ತದೆ, ವ್ಯವಸ್ಥೆ ಮತ್ತು ನಿಯಮಗಳ ನಡುವೆ ಅಂತರ ಬೆಳೆಯುತ್ತದೆ.
ಬುಧ ಮತ್ತು ಶುಕ್ರ: ತುಲಾದಲ್ಲಿ ಬುಧ, ಕನ್ಯಾದಲ್ಲಿ ಶುಕ್ರ. ವ್ಯಾಪಾರ, ಸಂವಹನ ಮತ್ತು ಮಾಧ್ಯಮದ ಕಾರಕ ಬುಧ ಹಾಗೂ ಹಣದ ಕಾರಕ ಶುಕ್ರ ಪರಸ್ಪರ ಸಹಕರಿಸುತ್ತಿಲ್ಲ. ವ್ಯಾಪಾರ ಮಾತುಕತೆಗಳು ಮುರಿಯುವುದು, ಸುಂಕ ಮತ್ತು ಒಪ್ಪಂದಗಳ ಜಗಳ, ಸುಳ್ಳು ಸುದ್ದಿಯ ಹಾವಳಿ ಕಾಣಿಸಬಹುದು.
ಕುಜ ಮತ್ತು ಕೇತು: ಕರ್ಕಾಟಕದಲ್ಲಿ ಕುಜ, ಸಿಂಹದಲ್ಲಿ ಕೇತು. ಕುಜನ ಶಕ್ತಿಗೆ ಕೇತು ಬೆಂಬಲ ನೀಡುತ್ತಿಲ್ಲ. ಹೋರಾಟಗಳು ನಿರ್ದಿಷ್ಟ ಗುರಿ ಇಲ್ಲದೆ ಎಳೆಯುತ್ತವೆ, ಯಾರಿಗೂ ನಿರ್ಣಾಯಕ ಗೆಲುವು ಸಿಗುವುದಿಲ್ಲ.
ನಿಮ್ಮ ಜಾತಕದಲ್ಲಿ ಮಾಂದಿ ಎಲ್ಲಿದ್ದಾನೆ? 12 ಮನೆಗಳ ಫಲಗಳ ಕಂಪ್ಲೀಟ್ ಗೈಡ್
ಬಾಧಾಸ್ಥಾನ ಮತ್ತು ನೀಚ ಸ್ಥಿತಿಯ ಪ್ರಭಾವ
ರವಿ ಮೇಲಿನ ಬಾಧೆ: ರವಿ ಇರುವ ರಾಶಿಗೆ ಗುರು ಮತ್ತು ಕೇತು ಬಾಧಾಸ್ಥಾನದಲ್ಲಿದ್ದಾರೆ. ಇದರಿಂದ ನಾಯಕತ್ವದ ತೀರ್ಮಾನಗಳಿಗೆ ಧಾರ್ಮಿಕ, ನೈತಿಕ ಮತ್ತು ಕಾನೂನು ಅಡೆತಡೆಗಳು ಎದುರಾಗುತ್ತವೆ. ಆಡಳಿತದ ಯೋಜನೆಗಳು ಮಧ್ಯದಲ್ಲಿ ನಿಲ್ಲುವ ಸಾಧ್ಯತೆ ಇದೆ.
ಗುರು ಮೇಲಿನ ದುರಿತ: ಗುರು ಇರುವ ರಾಶ್ಯಾಧಿಪತಿ ರವಿ ಗುರುವಿಗೆ ದುರಿತ ಸ್ಥಾನದಲ್ಲಿದ್ದಾನೆ (ಸಿಂಹದಲ್ಲಿ ಗುರು, ಅಲ್ಲಿಂದ ಮೂರನೇ ಮನೆ ತುಲಾದಲ್ಲಿ ರವಿ ನೀಚನಾಗಿದ್ದಾನೆ). ಗುರುವಿನ ಮನೆಯ ಯಜಮಾನನೇ ದುರ್ಬಲನಾಗಿರುವುದರಿಂದ ಗುರುವಿನ ಫಲಗಳು (ಹಣಕಾಸು, ನ್ಯಾಯ, ಮಾರ್ಗದರ್ಶನ) ಪೂರ್ಣವಾಗಿ ಸಿಗುವುದಿಲ್ಲ. ವಿವೇಕದ ನಾಯಕತ್ವ ಕೊರತೆಯಾಗಿ ತೀರ್ಮಾನಗಳು ತರಾತುರಿಯದ್ದಾಗುತ್ತವೆ.
ಜಗತ್ತಿನ ಪ್ರಸ್ತುತ ವಿದ್ಯಮಾನಗಳೊಂದಿಗೆ ಹೋಲಿಕೆ
ಈ ಗ್ರಹ ಸ್ಥಿತಿಯ ಸಾರಾಂಶ ಹೀಗಿದೆ: ಆಡಳಿತ ಮತ್ತು ಜನ, ಆರ್ಥಿಕತೆ ಮತ್ತು ನೀತಿ, ಯುದ್ಧ ಮತ್ತು ಶಾಂತಿ, ತಂತ್ರಜ್ಞಾನ ಮತ್ತು ನಿಯಂತ್ರಣ – ಎಲ್ಲವೂ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ಇಂದಿನ ಜಗತ್ತನ್ನು ನೋಡಿದರೆ ಇದೇ ಚಿತ್ರ ಕಾಣುತ್ತದೆ.
ಅಂತರರಾಷ್ಟ್ರೀಯ ಮಾತುಕತೆಗಳು: ಜಾಗತಿಕ ವೇದಿಕೆಗಳಲ್ಲಿ ರಾಷ್ಟ್ರಗಳ ನಡುವೆ ಒಮ್ಮತದ ನಿರ್ಣಯ ಸಾಧ್ಯವಾಗುತ್ತಿಲ್ಲ. ಮಾತುಕತೆಗಳು ಪ್ರಾರಂಭವಾಗುತ್ತವೆ, ಆದರೆ ಫಲಿತಾಂಶ ಬರುವುದಿಲ್ಲ.
ಸಂಘರ್ಷಗಳು ಹಾಗೂ ಒಪ್ಪಂದಗಳು: ಕದನವಿರಾಮಗಳು ಮುರಿಯುತ್ತಿದ್ದು, ಸಂಘರ್ಷಗಳು ಮುಗಿಯದೆ ಸುಮ್ಮನೆ ಎಳೆಯುತ್ತಿವೆ.ವ್ಯಾಪಾರ ಒಪ್ಪಂದ, ಸುಂಕ ಮತ್ತು ಆರ್ಥಿಕ ನಿರ್ಬಂಧಗಳ ವಿಷಯದಲ್ಲಿ ತೀವ್ರ ಅನಿಶ್ಚಿತತೆ ಇದೆ.
ಸಾಮಾಜಿಕ ಅಸಮಾಧಾನ ಹಾಗೂ ತಂತ್ರಜ್ಞಾನ: ಹಲವು ದೇಶಗಳಲ್ಲಿ ಸರ್ಕಾರದ ಬಗ್ಗೆ ಜನರ ಅಸಮಾಧಾನ ಮತ್ತು ಪ್ರತಿಭಟನೆಗಳು ಕಾಣಿಸುತ್ತಿವೆ. ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ (AI) ಮತ್ತು ಸಾಮಾಜಿಕ ಮಾಧ್ಯಮದ ಮೇಲೆ ನಿಯಂತ್ರಣದ ಚರ್ಚೆ ತೀವ್ರವಾಗಿದೆ, ಆದರೆ ಸ್ಪಷ್ಟ ನಿಯಮಗಳಿಲ್ಲ.
ಪ್ರಧಾನಿ ನರೇಂದ್ರ ಮೋದಿಗೆ ಸುಬ್ರಹ್ಮಣ್ಯನ ಶರಣೊಂದೇ ದಾರಿ: ಲಕ್ಷ ಕದಳಿ ಯಾಗ ರಹಸ್ಯ ಏನು?
ಮುಂದಿನ ದಿನಗಳು ಹಾಗೂ ವೈಯಕ್ತಿಕ ಸಲಹೆ
ಈ ಸ್ಥಿತಿ ಇನ್ನೂ ಕೆಲವು ದಿನ ಮುಂದುವರಿಯುತ್ತದೆ. ಅಲ್ಲಿಯವರೆಗೆ ಯಾರಿಗೂ ಯಾರ ಮೇಲೂ ವಿಶ್ವಾಸ ಮೂಡದ ವಾತಾವರಣ ಇರುತ್ತದೆ.ಗ್ರಹಗಳ ಚಲನೆಯಿಂದ ಈ ಸಂಬಂಧಗಳು ಬದಲಾದ ಮೇಲೆ ಮಾತ್ರ ಕ್ರಮೇಣ ಸಮನ್ವಯದ ಸೂಚನೆಗಳು ಕಾಣಿಸಬಹುದು.
ವೈಯಕ್ತಿಕ ಎಚ್ಚರಿಕೆಗಳು: ಇಂತಹ ಸಮಯದಲ್ಲಿ ದೊಡ್ಡ ನಿರ್ಧಾರಗಳು, ಹೊಸ ಒಪ್ಪಂದಗಳು ಮತ್ತು ಹೂಡಿಕೆಗಳನ್ನು ತರಾತುರಿಯಿಲ್ಲದೆ ತೂಗಿ ನೋಡುವುದು ಒಳ್ಳೆಯದು. ವಾಗ್ವಾದ, ವಾಹನ ಚಾಲನೆ ಮತ್ತು ಬೆಂಕಿಯ ವಿಷಯಗಳಲ್ಲಿ ಎಚ್ಚರ ಅಗತ್ಯ. ಸಂಯಮ ಮತ್ತು ಸಹನೆಯೇ ಈ ಅವಧಿಯ ಅತ್ಯುತ್ತಮ ಪರಿಹಾರ.
ಲೇಖನ: ಪ್ರಕಾಶ್ ಅಮ್ಮಣ್ಣಾಯ
ನಿರೂಪಣೆ: ಶ್ರೀನಿವಾಸ ಮಠ









