ದೀಪಾವಳಿ ಎಂದರೆ ದೀಪಗಳ ಸಾಲು. ಕತ್ತಲೆಯ ಮೇಲೆ ಬೆಳಕಿನ ವಿಜಯ, ಅಧರ್ಮದ ಮೇಲೆ ಧರ್ಮದ ವಿಜಯ, ಅಶುದ್ಧಿಯ ಮೇಲೆ ಶುದ್ಧಿಯ ವಿಜಯವನ್ನು ಈ ಹಬ್ಬ ಸಾರುತ್ತದೆ. ಈ ವರ್ಷ ಹಬ್ಬದ ಸಿದ್ಧತೆ ಏಕಾದಶಿಯಿಂದಲೇ ಆರಂಭವಾಗಿ ಯಮ ದ್ವಿತೀಯದವರೆಗೆ ಏಳು ದಿನ ಸಾಗುತ್ತದೆ. ಯಮದೀಪ ದಾನ, ನೀರು ತುಂಬುವ ಹಬ್ಬ, ನರಕ ಚತುರ್ದಶಿಯ ಅಭ್ಯಂಜನ, ಲಕ್ಷ್ಮೀ ಪೂಜೆ, ಬಲಿ ಪಾಡ್ಯಮಿ, ಗೋ ಪೂಜೆ ಮತ್ತು ಅಕ್ಕ ತಂಗಿಯರ ಮನೆಯ ಭೋಜನ ಎಲ್ಲವೂ ಇದರಲ್ಲಿ ಸೇರಿವೆ.
ಈ ವರ್ಷದ ದಿನಾಂಕಗಳ ಒಂದು ನೋಟ
| ದಿನಾಂಕ | ತಿಥಿ / ದಿನ | ಆಚರಣೆ |
| ನವೆಂಬರ್ 5 (ಗುರುವಾರ) | ಏಕಾದಶಿ | ಉಪವಾಸ, ಹರಿಸ್ಮರಣೆ |
| ನವೆಂಬರ್ 6 (ಶುಕ್ರವಾರ) | ದ್ವಾದಶಿ | ಸಂಜೆ ಯಮದೀಪ ದಾನ |
| ನವೆಂಬರ್ 7 (ಶನಿವಾರ) | ಜಲಪೂರ್ಣ ತ್ರಯೋದಶಿ | ನೀರು ತುಂಬುವ ಹಬ್ಬ |
| ನವೆಂಬರ್ 8 (ಭಾನುವಾರ) | ನರಕ ಚತುರ್ದಶಿ | ಬೆಳಗ್ಗೆ 5.26ಕ್ಕೆ ಚಂದ್ರೋದಯ, ಆರತಿ, ಅಭ್ಯಂಜನ, ಯಮ ತರ್ಪಣ; ಸಂಜೆ ಲಕ್ಷ್ಮೀ ಪೂಜೆ |
| ನವೆಂಬರ್ 9 (ಸೋಮವಾರ) | ಸೋಮವತಿ ಅಮಾವಾಸ್ಯೆ | ಅಮಾವಾಸ್ಯೆ ಆಚರಣೆ |
| ನವೆಂಬರ್ 10 (ಮಂಗಳವಾರ) | ಬಲಿ ಪಾಡ್ಯಮಿ | ಅಭ್ಯಂಗ, ಗೋ ಪೂಜೆ |
| ನವೆಂಬರ್ 11 (ಬುಧವಾರ) | ಯಮ ದ್ವಿತೀಯ | ಅಕ್ಕ ತಂಗಿಯರ ಮನೆಯಲ್ಲಿ ಭೋಜನ |
ಏಕಾದಶಿ (ನವೆಂಬರ್ 5)
ಹಬ್ಬದ ಸಿದ್ಧತೆ ಏಕಾದಶಿಯ ದಿನದಿಂದ ಆರಂಭ. ಈ ದಿನ ಉಪವಾಸ ಅಥವಾ ಲಘು ಆಹಾರ ಸ್ವೀಕರಿಸಿ, ವಿಷ್ಣುಸ್ಮರಣೆ ಮಾಡುವುದು ಸಂಪ್ರದಾಯ. ಮನೆಯ ಸ್ವಚ್ಛತೆ, ಪೂಜಾಕೋಣೆಯ ಶುದ್ಧಿ, ಹಂಡೆ ಮತ್ತು ದೀಪಗಳನ್ನು ತೊಳೆದಿಡುವುದು, ಹಣತೆ, ಬತ್ತಿ, ಎಣ್ಣೆ, ಹೂವು, ರಂಗೋಲಿ ಪುಡಿ ಸಂಗ್ರಹಿಸುವುದು ಈ ದಿನದ ತಯಾರಿ.
ದ್ವಾದಶಿ: ಸಂಜೆ ಯಮದೀಪ ದಾನ (ನವೆಂಬರ್ 6)
ಅಕಾಲ ಮೃತ್ಯು ಭಯ ನಿವಾರಣೆಗಾಗಿ ಯಮಧರ್ಮರಾಜನನ್ನು ಉದ್ದೇಶಿಸಿ ದೀಪ ಹಚ್ಚುವುದೇ ಯಮದೀಪ ದಾನ. ಇದನ್ನು ದ್ವಾದಶಿಯ ಸಂಜೆ ಮಾಡಬೇಕು.
ವಿಧಾನ:
- ಸಂಜೆ ಸೂರ್ಯಾಸ್ತದ ನಂತರ, ಪ್ರದೋಷ ಕಾಲದಲ್ಲಿ ಮಣ್ಣಿನ ಹಣತೆಯನ್ನು ಸಿದ್ಧಪಡಿಸಿ.
- ಅದಕ್ಕೆ ಎಳ್ಳೆಣ್ಣೆ ಅಥವಾ ತುಪ್ಪ ಹಾಕಿ, ಹತ್ತಿಯ ಬತ್ತಿಯಿಂದ ದೀಪ ಹಚ್ಚಿ.
- ಮನೆಯ ಹೊರಗೆ ಅಥವಾ ಹೊಸ್ತಿಲ ಬಳಿ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡಿ. ದಕ್ಷಿಣ ದಿಕ್ಕು ಯಮನ ದಿಕ್ಕು. ಕೆಲವರು ಧಾನ್ಯದ ರಾಶಿಯ ಮೇಲೆ ದೀಪವನ್ನಿಡುತ್ತಾರೆ.
- ಈ ಶ್ಲೋಕ ಹೇಳಿ ಪ್ರಾರ್ಥಿಸಿ:
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾ ಸಹ |
ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ ||
ಅರ್ಥ: ಈ ದೀಪದಾನದಿಂದ ಸೂರ್ಯಪುತ್ರನಾದ ಯಮನು ಮೃತ್ಯು, ಪಾಶ, ದಂಡ, ಕಾಲ ಮತ್ತು ಶ್ಯಾಮಲೆಯೊಂದಿಗೆ ನನ್ನ ಮೇಲೆ ಪ್ರಸನ್ನನಾಗಲಿ.
(ಶ್ಲೋಕದಲ್ಲಿ “ತ್ರಯೋದಶ್ಯಾಂ” ಎಂದಿರುವುದು ಮೂಲ ಪಾಠ. ತಿಥಿಯ ಹೊಂದಾಣಿಕೆಯಂತೆ ಮಾಡಬೇಕು.)
ಜಲಪೂರ್ಣ ತ್ರಯೋದಶಿ: ನೀರು ತುಂಬುವ ಹಬ್ಬ (ನವೆಂಬರ್ 7)
ಇದು ದೀಪಾವಳಿಯ ಮೊದಲ ಹಬ್ಬ. ಸ್ನಾನದ ನೀರು ಕಾಯಿಸುವ ಪಾತ್ರೆ ಚೆನ್ನಾಗಿ ತೊಳೆದು, ಅದಕ್ಕೆ ಸುಣ್ಣ, ಕೆಮ್ಮಣ್ಣು ಅಥವಾ ಅರಿಶಿನ ಕುಂಕುಮ ಹಚ್ಚಿ, ಹೂವಿನ ಮಾಲೆಯಿಂದ ಅಲಂಕರಿಸುತ್ತಾರೆ. ನೀರು ತುಂಬಿ, ಗಂಗೆಯನ್ನು ಆವಾಹಿಸಿ ಪೂಜಿಸುತ್ತಾರೆ. ಈ ನೀರನ್ನೇ ಮರುದಿನ ಬೆಳಗಿನ ಅಭ್ಯಂಜನಕ್ಕೆ ಬಳಸುತ್ತಾರೆ. ಈ ದಿನ ಧನ್ವಂತರಿ ಸ್ಮರಣೆಯೂ ಆರೋಗ್ಯಕ್ಕಾಗಿ ನಡೆಯುತ್ತದೆ.
ಗಂಗಾ ಆವಾಹನ ಶ್ಲೋಕ:
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಽಸ್ಮಿನ್ ಸನ್ನಿಧಿಂ ಕುರು ||
ನರಕ ಚತುರ್ದಶಿ (ನವೆಂಬರ್ 8):
ನರಕಾಸುರನ ಕಥೆ
ಭೂದೇವಿ ಮತ್ತು ವರಾಹರೂಪಿ ವಿಷ್ಣುವಿನ ಮಗನಾದ ನರಕಾಸುರ ಪ್ರಾಗ್ಜ್ಯೋತಿಷಪುರದ ರಾಜ. ವರಬಲದಿಂದ ಮದಗರ್ವಿತನಾಗಿ ದೇವತೆಗಳನ್ನೂ ಋಷಿಗಳನ್ನೂ ಪೀಡಿಸಿದ. ಹದಿನಾರು ಸಾವಿರ ಕನ್ಯೆಯರನ್ನು ಸೆರೆಯಲ್ಲಿಟ್ಟ. ತಾಯಿಯ ಕೈಯಿಂದಲೇ ಅವನಿಗೆ ಮರಣ ಎಂಬ ಮಾತಿತ್ತು. ಶ್ರೀಕೃಷ್ಣನು ಭೂದೇವಿಯ ಅಂಶವಾದ ಸತ್ಯಭಾಮೆಯೊಂದಿಗೆ ಯುದ್ಧಕ್ಕೆ ತೆರಳಿದಾಗ, ಸತ್ಯಭಾಮೆಯೇ ನರಕಾಸುರನನ್ನು ಸಂಹರಿಸಿದಳು. ಸಾಯುವ ಮುನ್ನ ನರಕಾಸುರನು, “ನನ್ನ ಮರಣದ ದಿನವನ್ನು ಲೋಕವೆಲ್ಲ ದೀಪ ಬೆಳಗಿ ಸಂಭ್ರಮಿಸಲಿ” ಎಂದು ಬೇಡಿದ. ಕೃಷ್ಣನು ಸೆರೆಯಲ್ಲಿದ್ದ ಕನ್ಯೆಯರನ್ನು ಬಿಡುಗಡೆ ಮಾಡಿದ. ಅದರ ನೆನಪಿಗಾಗಿ ಈ ದಿನ ಬೆಳಗಿನ ಜಾವ ಸ್ನಾನ ಮಾಡಿ ದೀಪ ಬೆಳಗುವ ಪದ್ಧತಿ ಬಂದಿತು.
ಬೆಳಗ್ಗೆ 5.26ಕ್ಕೆ ಚಂದ್ರೋದಯ: ಆರತಿ ಮತ್ತು ಅಭ್ಯಂಜನ
ನರಕ ಚತುರ್ದಶಿಯಂದು ಬೆಳಗ್ಗೆ 5.26ಕ್ಕೆ ಚಂದ್ರೋದಯ. ಅಭ್ಯಂಜನ ಸ್ನಾನಕ್ಕೆ ಚಂದ್ರೋದಯ ಕಾಲವೇ ಶಾಸ್ತ್ರೀಯ ಮುಹೂರ್ತ. ಆದ್ದರಿಂದ ಕ್ರಮ ಹೀಗಿರಲಿ:
- 5.26ಕ್ಕೆ ಆರತಿ: ಚಂದ್ರೋದಯ ಸಮಯದಲ್ಲಿ ಮನೆಯವರೆಲ್ಲರಿಗೆ ಆರತಿ ಬೆಳಗಿ. ಹಿರಿಯರು ಅಥವಾ ತಾಯಿ ಮನೆಯವರಿಗೆ ಆರತಿ ಮಾಡುವುದು ವಾಡಿಕೆ.
- ಅಭ್ಯಂಜನ ಸ್ನಾನ: ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯನ್ನು ತಲೆ, ಕಿವಿ, ಮೈ, ಕಾಲುಗಳಿಗೆ ಹಚ್ಚಿ, ಸ್ವಲ್ಪ ಹೊತ್ತು ಬಿಟ್ಟು, ಹಿಂದಿನ ದಿನ ಪೂಜಿಸಿದ ಹಂಡೆಯ ಬಿಸಿನೀರಿನಲ್ಲಿ ಸ್ನಾನ ಮಾಡಿ. ಈ ಅಭ್ಯಂಜನವನ್ನು ಎಲ್ಲರೂ ಮಾಡಲೇಬೇಕು. ಸ್ನಾನದ ನೀರಿಗೆ ಅಪಾಮಾರ್ಗ (ಉತ್ತರಾಣಿ) ಎಲೆ ಹಾಕುವ ಪದ್ಧತಿಯೂ ಇದೆ.
- ಯಮ ತರ್ಪಣ: ಸ್ನಾನದ ನಂತರ ಯಮನಿಗೆ ಎಳ್ಳು ನೀರಿನಿಂದ ತರ್ಪಣ ಕೊಡಿ. ಯಮನ ಹದಿನಾಲ್ಕು ನಾಮಗಳು: ಯಮ, ಧರ್ಮರಾಜ, ಮೃತ್ಯು, ಅಂತಕ, ವೈವಸ್ವತ, ಕಾಲ, ಸರ್ವಭೂತಕ್ಷಯ, ಔದುಂಬರ, ದಧ್ನ, ನೀಲ, ಪರಮೇಷ್ಠಿ, ವೃಕೋದರ, ಚಿತ್ರ, ಚಿತ್ರಗುಪ್ತ.
- ಪೂಜೆ: ಹೊಸ ಅಥವಾ ಶುಭ್ರ ವಸ್ತ್ರ ಧರಿಸಿ, ದೇವರಿಗೆ ದೀಪ ಹಚ್ಚಿ, ಕುಲದೇವರು ಮತ್ತು ಶ್ರೀಕೃಷ್ಣನನ್ನು ಪೂಜಿಸಿ, ಸಿಹಿ ನೈವೇದ್ಯ ಅರ್ಪಿಸಿ. ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯಿರಿ.
ಎಣ್ಣೆಯಲ್ಲಿ ಲಕ್ಷ್ಮಿ, ನೀರಿನಲ್ಲಿ ಗಂಗೆ ನೆಲೆಸಿರುತ್ತಾರೆ ಎಂಬುದು ಶಾಸ್ತ್ರವಚನ: “ತೈಲೇ ಲಕ್ಷ್ಮೀರ್ಜಲೇ ಗಂಗಾ ದೀಪಾವಳ್ಯಾಂ ಚತುರ್ದಶೀ“. ಆದ್ದರಿಂದ ಈ ದಿನದ ಸ್ನಾನ ಗಂಗಾಸ್ನಾನಕ್ಕೆ ಸಮ.
ಸಂಜೆ ಲಕ್ಷ್ಮೀ ಪೂಜೆ
ಸಂಜೆ ಮನೆಯನ್ನು ದೀಪಗಳಿಂದ ಅಲಂಕರಿಸಿ. ಹೊಸ್ತಿಲಿಗೆ ರಂಗೋಲಿ ಹಾಕಿ, ಸಾಲು ಹಣತೆ ಹಚ್ಚಿ, ಆಕಾಶಬುಟ್ಟಿ ಕಟ್ಟಿ, ಲಕ್ಷ್ಮೀ ಪೂಜೆ ಮಾಡಿ. ಲಕ್ಷ್ಮಿಗೆ ಹೂವು, ಅರಿಶಿನ- ಕುಂಕುಮ, ಹಣ್ಣು, ಪಾಯಸ, ಸಿಹಿ ತಿನಿಸುಗಳನ್ನು ಅರ್ಪಿಸಿ. ಹೊಸ ಲೆಕ್ಕದ ಪುಸ್ತಕ, ಹಣ ಮತ್ತು ಆಭರಣಗಳನ್ನು ಪೂಜೆಯಲ್ಲಿಡುವ ಪದ್ಧತಿಯೂ ಇದೆ.
ಸೋಮವತಿ ಅಮಾವಾಸ್ಯೆ (ನವೆಂಬರ್ 9)
ಅಮಾವಾಸ್ಯೆ ಸೋಮವಾರದಂದು ಬಂದರೆ ಅದನ್ನು ಸೋಮವತಿ ಅಮಾವಾಸ್ಯೆ ಎನ್ನುತ್ತಾರೆ. ಇದು ವಿಶೇಷ ಪುಣ್ಯದಾಯಕ ದಿನ ಎಂದು ನಂಬಿಕೆ. ಪಿತೃಗಳ ಸ್ಮರಣೆ, ದಾನ, ಅಶ್ವತ್ಥ ವೃಕ್ಷ ಪ್ರದಕ್ಷಿಣೆ ಮತ್ತು ಶಿವನ ಆರಾಧನೆ ಈ ದಿನ ಮಾಡುತ್ತಾರೆ. ಕುಟುಂಬದ ಪದ್ಧತಿಯಂತೆ ಪಿತೃ ತರ್ಪಣ ಅಥವಾ ದಾನ ಮಾಡಬಹುದು.
ಬಲಿ ಪಾಡ್ಯಮಿ: ಅಭ್ಯಂಗ ಮತ್ತು ಗೋ ಪೂಜೆ (ನವೆಂಬರ್ 10)
ವಾಮನನು ಮೂರು ಹೆಜ್ಜೆ ಭೂಮಿ ಕೇಳಿ, ಬಲಿ ಚಕ್ರವರ್ತಿಯನ್ನು ಪಾತಾಳಕ್ಕೆ ಕಳುಹಿಸಿದನು. ಬಲಿಯ ದಾನಶೀಲತೆಯನ್ನು ಮೆಚ್ಚಿ, ವರ್ಷಕ್ಕೊಮ್ಮೆ ಭೂಲೋಕಕ್ಕೆ ಬಂದು ತನ್ನ ಪ್ರಜೆಗಳನ್ನು ಕಾಣುವ ವರ ನೀಡಿದನು. ಆ ದಿನವೇ ಬಲಿ ಪಾಡ್ಯಮಿ. ಬಲಿ ಪೂಜೆ ಮಾಡಿ, “ಇಡಾ ಪೀಡಾ ಟಳಿ ಬಲಿರಾಜ್ಯ ಬರಲಿ” ಎಂದು ಸ್ಮರಿಸುವ ಪದ್ಧತಿ ಕೆಲವೆಡೆ ಇದೆ.
- ಅಭ್ಯಂಗ: ಈ ದಿನವೂ ಎಣ್ಣೆ ಹಚ್ಚಿ ಅಭ್ಯಂಗ ಸ್ನಾನ ಮಾಡಿ.
- ಗೋ ಪೂಜೆ: ಹಸು ಮತ್ತು ಕರುವನ್ನು ತೊಳೆದು, ಅರಿಶಿನ ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ, ಆರತಿ ಬೆಳಗಿ ಪೂಜಿಸಿ. ಬೆಲ್ಲ, ಅಕ್ಕಿ, ಬಾಳೆಹಣ್ಣು, ಹುಲ್ಲು ಅರ್ಪಿಸಿ. ಹಸುವಿನಲ್ಲಿ ಸಕಲ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯಿಂದ ಈ ಪೂಜೆ. ಮನೆಯಲ್ಲಿ ಹಸು ಇಲ್ಲದಿದ್ದರೆ ಹತ್ತಿರದ ಗೋಶಾಲೆಗೆ ಮೇವು ದಾನ ಮಾಡಬಹುದು.
ಯಮ ದ್ವಿತೀಯ: ಅಕ್ಕ ತಂಗಿಯರ ಮನೆಯಲ್ಲಿ ಭೋಜನ (ನವೆಂಬರ್ 11)
ಯಮುನೆಯು ತನ್ನ ಅಣ್ಣ ಯಮನನ್ನು ಮನೆಗೆ ಕರೆದು ಆರತಿ ಬೆಳಗಿ ಭೋಜನ ಬಡಿಸಿದಳು. ಸಂತುಷ್ಟನಾದ ಯಮನು, “ಈ ದಿನ ಸಹೋದರಿಯ ಮನೆಯಲ್ಲಿ ಊಟ ಮಾಡುವ ಸಹೋದರನಿಗೆ ಅಕಾಲ ಮೃತ್ಯು ಭಯ ಇರುವುದಿಲ್ಲ” ಎಂದು ವರ ನೀಡಿದನು. ಅದರಂತೆ ಈ ದಿನ ಸಹೋದರರು ಅಕ್ಕ- ತಂಗಿಯರ ಮನೆಗೆ ಹೋಗಿ ಭೋಜನ ಮಾಡುತ್ತಾರೆ. ಸಹೋದರಿಯರು ಆರತಿ ಬೆಳಗಿ, ತಿಲಕವಿಟ್ಟು, ಸಿಹಿ ಬಡಿಸುತ್ತಾರೆ. ಸಹೋದರರು ಉಡುಗೊರೆ ನೀಡಿ ಆಶೀರ್ವದಿಸುತ್ತಾರೆ. ಇದು ಸಹೋದರ ಸಹೋದರಿಯರ ಬಾಂಧವ್ಯವನ್ನು ಬೆಸೆಯುವ ಹಬ್ಬ.
ಹಬ್ಬದ ಸಿದ್ಧತೆಯ ಪಟ್ಟಿ
- ಮಣ್ಣಿನ ಹಣತೆಗಳು, ಹತ್ತಿ ಬತ್ತಿ, ಎಳ್ಳೆಣ್ಣೆ, ತುಪ್ಪ
- ಅಭ್ಯಂಜನಕ್ಕೆ ಕೊಬ್ಬರಿ ಅಥವಾ ಎಳ್ಳೆಣ್ಣೆ, ಸೀಗೆಕಾಯಿ ಅಥವಾ ಕಡಲೆಹಿಟ್ಟು, ಉತ್ತರಾಣಿ ಎಲೆ
- ಹಂಡೆ ಅಲಂಕಾರಕ್ಕೆ ಅರಿಶಿನ, ಕುಂಕುಮ, ಹೂವಿನ ಹಾರ
- ಎಳ್ಳು ಮತ್ತು ತರ್ಪಣ ಸಾಮಗ್ರಿ
- ಲಕ್ಷ್ಮೀ ಪೂಜೆಗೆ ಹೂವು, ಹಣ್ಣು, ನೈವೇದ್ಯ
- ಗೋ ಪೂಜೆಗೆ ಹಾರ, ಬೆಲ್ಲ, ಹುಲ್ಲು
- ಹೊಸ ಅಥವಾ ಶುಭ್ರ ವಸ್ತ್ರ, ಸಿಹಿ ತಿನಿಸು
ಜೀವನದ ಕಠಿಣ ಪರಿಸ್ಥಿತಿಗಳನ್ನು ಗೆಲ್ಲಲು ಭೀಷ್ಮರು ನೀಡಿದ 16 ಅಮೋಘ ಸೂತ್ರಗಳೇನು?
ಕೊನೆಮಾತು
ಏಕಾದಶಿಯ ಸಂಯಮದಿಂದ ಯಮ ದ್ವಿತೀಯದ ಬಾಂಧವ್ಯದವರೆಗೆ ಈ ಹಬ್ಬ ನಮ್ಮನ್ನು ಶುದ್ಧಿ, ಭಕ್ತಿ, ದಾನ, ಕೃತಜ್ಞತೆ ಮತ್ತು ಕುಟುಂಬ ಪ್ರೀತಿಯ ಹಾದಿಯಲ್ಲಿ ಕರೆದೊಯ್ಯುತ್ತದೆ. ಅಭ್ಯಂಜನ ದೇಹ- ಮನಸ್ಸುಗಳನ್ನು ಶುದ್ಧಗೊಳಿಸುತ್ತದೆ, ದೀಪ ಅಜ್ಞಾನದ ಕತ್ತಲನ್ನು ಓಡಿಸುತ್ತದೆ. ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
ಲೇಖನ- ಶ್ರೀನಿವಾಸ ಮಠ









