ಮಹಾಭಾರತ, ರಾಮಾಯಣ ಕೇವಲ ಕಥೆಯಲ್ಲ, ನಮ್ಮ ಬದುಕಿನ ಕನ್ನಡಿ: ಇತಿಹಾಸ ತಿರುಚುವ ಹುಚ್ಚಾಟಕ್ಕೆ ಬೀಳಲಿ ಕಡಿವಾಣ!

An elderly man and a young boy looking at a Mahabharata book, with a TV in the background.
ಹಳೆಯ ಮತ್ತು ಹೊಸ ಪೀಳಿಗೆಯ ಮಧ್ಯೆ ಮಹಾಭಾರತದ ಪ್ರಸ್ತುತತೆ.

ಐದು ಸಾವಿರ ವರ್ಷಗಳ ಹಿಂದೆ ನಡೆದ ಒಂದು ಯುದ್ಧ, ಇಂದಿಗೂ ನಮ್ಮ ಮನೆಮನೆಯಲ್ಲಿ ನಡೆಯುತ್ತಿದೆ ಎಂದರೆ ನಂಬುತ್ತೀರಾ? ಮಕ್ಕಳ ಹಠದಲ್ಲಿ ಕೌರವರಿದ್ದಾರೆ, ಅಧಿಕಾರದ ಮದದಲ್ಲಿ ದುರ್ಯೋಧನನಿದ್ದಾನೆ, ಕಪಟದ ಕರಾಮತ್ತಿನಲ್ಲಿ ಶಕುನಿಯಿದ್ದಾನೆ. ಮಹಾಭಾರತ ಕೇವಲ ಕಥೆಯಲ್ಲ, ಅದು ನಮ್ಮದೇ ಬದುಕಿನ ಕನ್ನಡಿ. ಮಹಾಭಾರತ ಓದಿದವನಿಗೆ ಜೀವನದ ಪ್ರತಿ ತಿರುವೂ ಪರಿಚಿತ. ಓದದವನಿಗೆ ಜೀವನವೇ ಮಹಾಭಾರತ. ಹದಿನೆಂಟು ಪರ್ವಗಳು, ಒಂದು ಲಕ್ಷ ಶ್ಲೋಕಗಳು. ಇಷ್ಟೆಲ್ಲ ಓದಲು ಯಾರಿಗೆ ಸಮಯವಿದೆ ಅಂದುಕೊಂಡಿರಾ? ಆದರೆ ಚಿಂತೆ ಬೇಡ. ಮಹಾಭಾರತದ ಸಾರವನ್ನು ಒಂಬತ್ತು ಸಾಲುಗಳಲ್ಲಿ, ಒಂಬತ್ತು ಪಾತ್ರಗಳ ಮೂಲಕ ಇಲ್ಲಿ ಹಿಡಿದಿಟ್ಟಿದ್ದೇವೆ. ಓದಿದರೆ ಜೀವನದ ದಿಕ್ಕೇ ಬದಲಾಗಬಹುದು.

ಮಹಾಭಾರತದ ಒಂಬತ್ತು ನೀತಿಸೂತ್ರಗಳು

  1. ಮಕ್ಕಳ ತಪ್ಪು ಬೇಡಿಕೆಗಳನ್ನೂ ಹಠಮಾರಿತನವನ್ನೂ ಸರಿಯಾದ ಸಮಯದಲ್ಲಿ ನಿಯಂತ್ರಿಸದಿದ್ದರೆ, ಕೊನೆಗೆ ಪೋಷಕರೇ ಅಸಹಾಯಕರಾಗುತ್ತಾರೆ. = ಕೌರವರು
  2. ಎಷ್ಟೇ ಬಲಶಾಲಿಯಾಗಿದ್ದರೂ ಅಧರ್ಮದ ಪಕ್ಷದಲ್ಲಿದ್ದರೆ, ಜ್ಞಾನ, ಅಸ್ತ್ರಬಲ, ವರಗಳು ಎಲ್ಲವೂ ನಿಷ್ಫಲವಾಗುತ್ತವೆ. = ಕರ್ಣ
  3. ಮಕ್ಕಳು ತಾವು ಕಲಿತ ವಿದ್ಯೆಯನ್ನು ದುರುಪಯೋಗಪಡಿಸಿಕೊಂಡು ತಮ್ಮನ್ನೇ ನಾಶಮಾಡಿಕೊಳ್ಳುವಷ್ಟು ಮಹತ್ವಾಕಾಂಕ್ಷೆ ಬೆಳೆಸಿಕೊಳ್ಳದಂತೆ ನೋಡಿಕೊಳ್ಳಿ. = ಅಶ್ವತ್ಥಾಮ
  4. ಎಷ್ಟೇ ಜ್ಞಾನಿ, ಶೂರ, ದಯಾಳುವಾಗಿದ್ದರೂ, ಅನೀತಿವಂತರ ಮುಂದೆ ಮಾಡಿದ ಪ್ರತಿಜ್ಞೆಗೆ ಬದ್ಧನಾಗಿ ಅಸಹಾಯಕನಾದರೆ ಇಡೀ ಬದುಕೇ ವ್ಯರ್ಥವಾಗುತ್ತದೆ. = ಭೀಷ್ಮ ಪಿತಾಮಹ
  5. ಸಂಪತ್ತು, ಶಕ್ತಿ, ಅಧಿಕಾರದ ದುರುಪಯೋಗ ಮತ್ತು ದುಷ್ಟರ ಸಹವಾಸ ಕೊನೆಗೆ ಸ್ವಯಂನಾಶಕ್ಕೆ ಕಾರಣವಾಗುತ್ತವೆ. = ದುರ್ಯೋಧನ
  6. ಸಂಪತ್ತು, ಅಧಿಕಾರ, ಅಜ್ಞಾನ, ಮದ್ಯ, ಮೋಹ ಮತ್ತು ಕಾಮ ವಿವೇಕವಿಲ್ಲದ (ಅಂಧ) ವ್ಯಕ್ತಿಯ ಕೈಗೆ ಸಿಕ್ಕರೆ ಸರ್ವನಾಶ ಖಚಿತ. = ಧೃತರಾಷ್ಟ್ರ
  7. ಜ್ಞಾನ, ಬುದ್ಧಿವಂತಿಕೆ ಮತ್ತು ಸಂಯಮ ಇರುವವನು ಖಂಡಿತ ಗೆಲ್ಲುತ್ತಾನೆ. = ಅರ್ಜುನ
  8. ಮಾಡುವ, ಯೋಚಿಸುವ ಪ್ರತಿಯೊಂದರಲ್ಲೂ ಕುಟಿಲತೆ, ಕಪಟ, ಮೋಸ ತುಂಬಿಕೊಂಡರೆ ಯಾವಾಗಲೂ ಯಶಸ್ಸು ಸಿಗಲಾರದು. = ಶಕುನಿ
  9. ನೀತಿ, ಧರ್ಮ ಮತ್ತು ಕರ್ಮವನ್ನು ನಿಷ್ಠೆಯಿಂದ ಪಾಲಿಸಿದರೆ ಜಗತ್ತಿನ ಯಾವ ಶಕ್ತಿಯೂ ನಿಮ್ಮನ್ನು ಸೋಲಿಸಲಾರದು. = ಯುಧಿಷ್ಠಿರ

ಕಾರಣವೇ ಇಲ್ಲದೆ ಕೋಪ, ಭಯ ಬರುವುದೇಕೆ? ಜಾತಕದಲ್ಲಿದೆ ಉತ್ತರ!

ಆದರೆ, ಪುರಾಣ-ಇತಿಹಾಸಗಳನ್ನೇ ಟಿಆರ್‌ಪಿಗಾಗಿ ತಿರುಚಿ, ಕಮರ್ಷಿಯಲ್ ಆಗಿ ತಮಗೆ ಬೇಕಾದಂತೆ ಸಿನಿಮಾ ಮಾಡಿದರೆ ಏನಾಗುತ್ತದೆ? ದುರುದ್ದೇಶದಿಂದಲೋ, ಮುಂದಿನ ಪೀಳಿಗೆಗೆ ತಪ್ಪು ಸಂದೇಶ ದಾಟುವಂತೆ ತಿರುಚಿದರೆ ಏನು ಗತಿ?

ಯಾವುದೇ ಕಾವ್ಯ ಅಥವಾ ಬರಹವನ್ನು ಆಧಾರವಾಗಿ ತೆಗೆದುಕೊಳ್ಳುವಾಗ ಅದರ ಸ್ವಾದ, ಅದರ ಮೂಲ ಆಶಯ ಉಳಿಯಬೇಕು. ಉದಾಹರಣೆಗೆ ರಾಮಾಯಣ. ಹೆಸರೇ ಹೇಳುವಂತೆ ಅದು ರಾಮನ ಜೀವನ ಕಥನ. ಅವನ ಬದುಕಿನ ಆದರ್ಶಗಳನ್ನು, ಮೇರು ವ್ಯಕ್ತಿತ್ವವನ್ನು ತಿಳಿಸಲೆಂದೇ ವಾಲ್ಮೀಕಿ ರಾಮಾಯಣ ರಚನೆಯಾಯಿತು. ಅದರ ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಇರುವುದು ಅತ್ಯಗತ್ಯ.

ಸಿನಿಮಾ, ವೆಬ್ ಸರಣಿಗಳಿಗೆ ಯಾವ ರೀತಿಯ ಸೆನ್ಸಾರ್ ವ್ಯವಸ್ಥೆ ಇದೆಯೋ ನಾನು ಅರಿಯೆ. ಆದರೆ ನಮ್ಮ ಆತ್ಮದಲ್ಲಿ ಇಳಿದಿರುವ ಈ ನಾಡಿನ ಮಹಾನ್ ಕಾವ್ಯಗಳು, ಆದರ್ಶ ಪುರುಷರು ಮತ್ತು ಉದಾತ್ತ ವಿಚಾರಧಾರೆಗೆ ಜೀರ್ಣೋದ್ಧಾರದ ಅಗತ್ಯವೇ ಇಲ್ಲ. ಅವು ಮೂಲದಲ್ಲಿಯೇ ಅದ್ಭುತವಾಗಿವೆ, ಸತ್ಯವಾಗಿವೆ. ಮಾರ್ಗ ಮತ್ತು ಗುರಿ ಎರಡನ್ನೂ ಅವು ಈಗಾಗಲೇ ಸ್ಪಷ್ಟಪಡಿಸಿವೆ.

ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದು ವಿಪರೀತ ವಿಶಾಲವಾದ ವ್ಯಾಪ್ತಿ ಇರುವಂಥದ್ದು. ಅದನ್ನು ಬಳಸುವುದಕ್ಕೆ ಅರ್ಹತೆ ಗಳಿಸುವುದು ಸಹ ಅಷ್ಟೇ ಮುಖ್ಯ ಎಂಬುದು ಇವತ್ತಿಗೆ ಹೆಚ್ಚು ಪ್ರಸ್ತುತ. ಸೃಜನಾತ್ಮಕ ಸೃಷ್ಟಿಗೆ ಯಾವುದನ್ನು ಮೂಲವಾಗಿ ತೆಗೆದುಕೊಂಡಿದ್ದಾರೋ ಶತಾಯಗತಾಯ ಅದಕ್ಕೆ ನಿಷ್ಠರಾಗಿರಬೇಕು. ಮತ್ತೆ ಅದರೊಳಗೆ ತಮ್ಮ ಸೃಜನಾತ್ಮಕ ಸ್ವಾತಂತ್ರ್ಯ ಸೇರಿಸಬಾರದು. ಮೂಲ- ವ್ಯಾಸಭಾರತ ಅಂದರೆ, ಮೂಲ- ವಾಲ್ಮೀಕಿ ರಾಮಾಯಣ ಅಂದರೆ ಅದೇ ಆಗಿರಬೇಕು. ನೂರಾರು ರಾಮಾಯಣ- ನೂರಾರು ಮಹಾಭಾರತಗಳು ಮೂಲದಿಂದ ಸ್ಫೂರ್ತಿ ಪಡೆದುಕೊಂಡಿವೆ. ಯಾವುದರಿಂದ ಸ್ಫೂರ್ತಿ ಪಡೆದಿದ್ದಾರೋ ಅದರ ಹೆಸರನ್ನೇ ಹಾಕಿಕೊಳ್ಳಲಿ. ಆದರೆ ಆ ಸ್ಫೂರ್ತಿ ಪಡೆದದ್ದಕ್ಕೆ ಸಂಪೂರ್ಣ ನಿಷ್ಠರಾಗಿರಲಿ.

ಅಥರ್ವವೇದದ ಯಕ್ಷ್ಮನಾಶನ ಸೂಕ್ತ: ಅಸಾಧ್ಯ ರೋಗಗಳ ನಿವಾರಣೆಗೆ ಇಲ್ಲಿದೆ ವೇದೋಕ್ತ ಪರಿಹಾರ!

ಆದ್ದರಿಂದ ಕೇಂದ್ರ ಸರ್ಕಾರ ಹನ್ನೊಂದು ಸದಸ್ಯರ ತಂಡವಿರುವ “ಸನಾತನ ಭಾರತೀಯ ಪುರಾಣೇತಿಹಾಸ ರಕ್ಷಣಾ ಸಂಸ್ಥೆ” ಯನ್ನು ರಚಿಸಬೇಕು. ಪುರಾಣ-ಇತಿಹಾಸಗಳು ತಿರುಚದಂತೆ ನೋಡಿಕೊಳ್ಳುವುದು ಈ ಸಂಸ್ಥೆಯ ಹೊಣೆಯಾಗಲಿ, ಮತ್ತು ಅದರ ತೀರ್ಮಾನವೇ ಅಂತಿಮವಾಗಲಿ. ಯಾರು ಬೇಕಾದರೂ ಸಿನಿಮಾ, ನಾಟಕ ಅಥವಾ ಗ್ರಂಥ ರಚಿಸಲಿ, ಆದರೆ ಪ್ರಕಟಿಸುವ ಮುನ್ನ ಈ ಸಂಸ್ಥೆಯ ಒಪ್ಪಿಗೆ ಕಡ್ಡಾಯವಾಗಿರಬೇಕು. ಅನುಮತಿಯಿಲ್ಲದೆ ಪ್ರಕಟಿಸಿದರೆ ಕನಿಷ್ಠ ಏಳು ವರ್ಷ ಸಜೆ ವಿಧಿಸುವ ನಿಯಮ ಜಾರಿಯಾಗಬೇಕು. ಆಗ ಮಾತ್ರ ನಮ್ಮ ಪ್ರಾಚೀನ ತತ್ವಗಳು ಮತ್ತು ಪುರಾಣೇತಿಹಾಸಗಳು ಸುರಕ್ಷಿತವಾಗಿ ಉಳಿಯುತ್ತವೆ.

ಈಚೆಗೆ ಬಿಡುಗಡೆಯಾದ ಒಂದು ಸಿನಿಮಾದ ಟ್ರೇಲರ್ ನೋಡಿಯೇ ಬಹಳ ದಣಿದಿದ್ದೆ. ಈಗ ಅದರ ಬಿಡುಗಡೆಯಾಗಿ, ಸಿನಿಮಾ ನೋಡಿಬಂದವರ ಅಭಿಪ್ರಾಯ ಕೇಳಿಸಿಕೊಂಡ ಮೇಲೆ ಇಷ್ಟು ಬರೆಯಲೇಬೇಕು ಎಂಬ ಅನಿವಾರ್ಯ ಬಂತು. ಅಥವಾ ಉದ್ವೇಗ ಬಂತು ಅಂದುಕೊಳ್ಳಿ. 

ಆಲೋಚಿಸಿ. ಅನುಸರಿಸುವ ಮೊದಲಿಗೆ, ಅಳವಡಿಸಿಕೊಳ್ಳುವ ಬದಲಿಗೆ, ದಯವಿಟ್ಟು ಆಲೋಚಿಸಿ.

ಲೇಖನ- ಪ್ರಕಾಶ್ ಅಮ್ಮಣ್ಣಾಯ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts