ಭೂಮಿ, ಸೈಟು ಅಥವಾ ಸ್ವಂತ ಮನೆ ಖರೀದಿಸುವುದು ಅದೆಷ್ಟೋ ಜನರಿಗೆ ಜೀವನದ ದೊಡ್ಡ ಕನಸಾಗಿರುತ್ತದೆ. ಆದರೆ ಜಾತಕದಲ್ಲಿ ಗ್ರಹಗತಿಗಳ ದೋಷ ಅಥವಾ ವಾಸ್ತು ದೋಷಗಳಿದ್ದಾಗ, ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಭೂಮಿ ವ್ಯವಹಾರಗಳಲ್ಲಿ ನಿರಂತರ ವಿಘ್ನಗಳು, ಕೋರ್ಟ್ ವ್ಯಾಜ್ಯಗಳು ಎದುರಾಗುತ್ತವೆ. ಇಂತಹ ಸಂದರ್ಭಗಳಲ್ಲಿ ಶಾಸ್ತ್ರಗಳು ಸೂಚಿಸುವ ಅತ್ಯಂತ ಶಕ್ತಿಶಾಲಿ ಪರಿಹಾರದಲ್ಲಿ ಒಂದು ಶ್ರೀ ತ್ರಿವಿಕ್ರಮ ದೇವರ (ಮಹಾ ವಿಷ್ಣು) ಆರಾಧನೆ. ಇಡೀ ಬ್ರಹ್ಮಾಂಡದ ಭೂಮಿಯನ್ನೇ ತನ್ನ ಪಾದದಿಂದ ಅಳೆದ ದೇವನಾದ್ದರಿಂದ, ಭೂಮಿ ದೋಷಗಳನ್ನು ನಿವಾರಿಸಲು ತ್ರಿವಿಕ್ರಮ ಆರಾಧನೆ ಕೂಡ ಅತ್ಯಂತ ಪ್ರಭಾವಶಾಲಿ.
ಇದರ ಹಿನ್ನೆಲೆ, ಶ್ಲೋಕ ಮತ್ತು ಆರಾಧನಾ ಕ್ರಮದ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ:
ತ್ರಿವಿಕ್ರಮ ದೇವರಿಗೂ ಭೂಮಿಗೂ ಇರುವ ಸಂಬಂಧವೇನು?
ಪುರಾಣಗಳ ಪ್ರಕಾರ, ಬಲಿ ಚಕ್ರವರ್ತಿಯು ಇಡೀ ಭೂಮಂಡಲವನ್ನು ಆಕ್ರಮಿಸಿಕೊಂಡಾಗ, ಭಗವಾನ್ ವಿಷ್ಣುವು ವಾಮನ ಅವತಾರವನ್ನು ತಾಳಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಬಲಿ ಚಕ್ರವರ್ತಿ ಒಪ್ಪಿದ ತಕ್ಷಣ, ವಾಮನನು ದಿವ್ಯವಾದ ತ್ರಿವಿಕ್ರಮ ರೂಪವನ್ನು ತಳೆದು, ತನ್ನ ಒಂದು ಹೆಜ್ಜೆಯಿಂದ ಇಡೀ ಭೂಮಂಡಲವನ್ನು ಆವರಿಸಿಕೊಳ್ಳುತ್ತಾನೆ.
ಅಂದರೆ, ಸಮಸ್ತ ಭೂಮಿಯ ಒಡೆತನ ಮತ್ತು ನಿಯಂತ್ರಣ ಇರುವುದು ತ್ರಿವಿಕ್ರಮ ದೇವರ ಬಳಿ. ನಿಮಗಿರುವ ಭೂಮಿ ವ್ಯಾಜ್ಯಗಳನ್ನು ಬಗೆಹರಿಸಿ, ಸಕಾಲದಲ್ಲಿ ಸ್ವಂತ ಮನೆ ಅಥವಾ ಸೈಟು ಸಿಗುವಂತೆ ಅನುಗ್ರಹಿಸುವ ಸಾಮರ್ಥ್ಯ ಈ ರೂಪಕ್ಕಿದೆ.
ತಿರುಕೋಯಿಲೂರ್ ತ್ರಿವಿಕ್ರಮ ಸ್ವಾಮಿ ದೇವಸ್ಥಾನ ಇತಿಹಾಸ, ದರ್ಶನ ಸಮಯ, ಮಹತ್ವ
ಪಠಿಸಬೇಕಾದ ಶಕ್ತಿಶಾಲಿ ತ್ರಿವಿಕ್ರಮ ಶ್ಲೋಕ
ಭೂಮಿಯ ವಿಘ್ನಗಳು ನಿವಾರಣೆಯಾಗಲು ಪ್ರತಿ ನಿತ್ಯ ಅಥವಾ ಪ್ರತಿ ಶನಿವಾರ ಈ ಕೆಳಗಿನ ಶ್ಲೋಕವನ್ನು ಭಕ್ತಿಯಿಂದ ಪಠಿಸಬೇಕು:
“ತ್ರಿವಿಕ್ರಮೋ ನಮಸ್ತುಭ್ಯಂ ಪ್ರಭೋ ನಾರಾಯಣಾವ್ಯಯ |
ಭೂಮಿ ದೋಷಂ ಹರಸ್ವಾಶು ಸತ್-ಸಂಪತ್ತಿಂ ಪ್ರದೇಹಿ ಮೇ ||”
ಅರ್ಥ:
“ಹೇ ಅವಿನಾಶಿಯಾದ ಪ್ರಭು ನಾರಾಯಣನೇ, ಮೂರು ಲೋಕಗಳನ್ನು ಅಳೆದ ತ್ರಿವಿಕ್ರಮನೇ, ನಿನಗೆ ನಮಸ್ಕಾರಗಳು. ನನ್ನ ಭೂಮಿಗೆ ಸಂಬಂಧಿಸಿದ ಎಲ್ಲಾ ದೋಷಗಳು, ವಿಘ್ನಗಳು ಮತ್ತು ವ್ಯಾಜ್ಯಗಳನ್ನು ಶೀಘ್ರವಾಗಿ ನಿವಾರಿಸು ಹಾಗೂ ನನಗೆ ಸನ್ಮಾರ್ಗದಿಂದ ಲಭಿಸುವ ಭೂ ಸಂಪತ್ತನ್ನು ಕರುಣಿಸು.”
ಶ್ರೀದಧಿವಾಮನ ಸ್ತೋತ್ರಮ್: ಮನೆಯಲ್ಲಿ ಸದಾ ಅನ್ನ, ಐಶ್ವರ್ಯ ತುಂಬಿರಲು ಈ ಸಣ್ಣ ಸ್ತೋತ್ರ ದಿನವೂ ಪಠಿಸಿ
ತ್ರಿವಿಕ್ರಮ ದೇವರ ಆರಾಧನೆ ಹೇಗೆ ಸಹಾಯ ಮಾಡುತ್ತದೆ?
- ರಾಹು-ಕುಜ ದೋಷಗಳ ನಿವಾರಣೆ: ಜಾತಕದಲ್ಲಿ ಭೂಮಿಗೆ ಕಾರಕನಾದ ಕುಜ (ಮಂಗಳ) ಮತ್ತು ಅಡೆತಡೆಗಳನ್ನು ತರುವ ರಾಹು ದೋಷವಿದ್ದರೆ ಅದರ ಸಮಸ್ಯೆಗಳು ಬಗೆಹರಿಯುತ್ತವೆ. ತ್ರಿವಿಕ್ರಮನ ಆರಾಧನೆಯು ಈ ಗ್ರಹಗಳ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡುತ್ತದೆ.
- ಸ್ಥಗಿತಗೊಂಡ ಕೆಲಸಗಳಿಗೆ ವೇಗ: ಸಾಲ ಮಂಜೂರಾತಿ ವಿಳಂಬ, ತಾಂತ್ರಿಕ ತೊಂದರೆಗಳು ಅಥವಾ ದಾಖಲೆಗಳ ಸಮಸ್ಯೆಯಿಂದ ನಿಂತುಹೋಗಿರುವ ಮನೆ ಖರೀದಿಯ ಪ್ರಕ್ರಿಯೆಗೆ ಈ ಪೂಜೆಯಿಂದ ಚಾಲನೆ ಸಿಗುತ್ತದೆ.
- ಕಾನೂನು ಜಯ: ಕೋರ್ಟ್ ಕಚೇರಿಗಳಲ್ಲಿ ಸಿಲುಕಿಕೊಂಡಿರುವ ಭೂಮಿ ವಿವಾದಗಳು ಸೌಹಾರ್ದಯುತವಾಗಿ ಬಗೆಹರಿಯಲು ಮಾನಸಿಕ ಧೈರ್ಯ ಮತ್ತು ಸೂಕ್ತ ಮಾರ್ಗಗಳು ಗೋಚರಿಸುತ್ತವೆ.
ಆರಾಧನಾ ಕ್ರಮ (ವಿಧಿ-ವಿಧಾನ)
ವಾರದ ರಜೆ ಹಾಗೂ ನಿರಾಳ ಮನಸ್ಥಿತಿ ಇರುವ ದಿನದಂದು (ಶನಿವಾರದ ಅವಧಿಯಲ್ಲಿ) ಈ ಪೂಜೆಯನ್ನು ಮಾಡುವುದು ವಿಶೇಷ ಫಲಪ್ರದ.
- ಸಂಕಲ್ಪ: ಮುಂಜಾನೆ ಬೇಗ ಎದ್ದು ಸ್ನಾನ ಮುಗಿಸಿ, ದೇವರ ಕೋಣೆಯಲ್ಲಿ ದೀಪ ಹಚ್ಚಿ, ಮನಸ್ಸಿನಲ್ಲಿಯೇ ನಿಮ್ಮ ಭೂಮಿ ಅಥವಾ ಮನೆ ಖರೀದಿಯ ಸಮಸ್ಯೆಯನ್ನು ವಿನಂತಿಸಿಕೊಂಡು “ವಿಘ್ನಗಳು ನಿವಾರಣೆಯಾಗಲಿ” ಎಂದು ಸಂಕಲ್ಪ ಮಾಡಿ.
- ತುಳಸಿ ಅರ್ಚನೆ: ಶ್ರೀ ಹರಿಗೆ (ವಿಷ್ಣು/ತ್ರಿವಿಕ್ರಮ ಮೂರ್ತಿ ಅಥವಾ ಫೋಟೋಗೆ) ತುಳಸಿ ದಳಗಳನ್ನು ಅರ್ಪಿಸುತ್ತಾ ಮೇಲಿನ ಶ್ಲೋಕವನ್ನು ಕನಿಷ್ಠ 21 ಅಥವಾ 108 ಬಾರಿ ಜಪಿಸಿ.
- ನೈವೇದ್ಯ: ಕೆಂಪು ಬಣ್ಣದ ಹಣ್ಣುಗಳು (ದಾಳಿಂಬೆ, ಸೇಬು) ಅಥವಾ ಪಾಯಸವನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸಿ.
- ದಾನ: ಸಾಧ್ಯವಾದರೆ ಗೋಧಿ ಅಥವಾ ತೊಗರಿ ಬೇಳೆಯನ್ನು ದಾನ ಮಾಡುವುದು ಭೂಮಿ ದೋಷ ನಿವಾರಣೆಗೆ ಉತ್ತಮ.
ಕೊನೆ ಮಾತು: ಭಕ್ತಿಯ ಜೊತೆಗೆ ನಿಮ್ಮ ಪ್ರಯತ್ನವೂ ಮುಖ್ಯ. ತ್ರಿವಿಕ್ರಮನ ಮೇಲೆ ಸಂಪೂರ್ಣ ಭಾರ ಹಾಕಿ, ಸಕಾರಾತ್ಮಕ ಯೋಚನೆಗಳೊಂದಿಗೆ ಮುಂದುವರಿಯಿರಿ. ನಿಮ್ಮ ಸ್ವಂತ ಮನೆಯ ಕನಸು ಶೀಘ್ರದಲ್ಲೇ ನನಸಾಗಲಿ.
ಲೇಖನ- ಶ್ರೀನಿವಾಸ ಮಠ









