ಗ್ರಹಗಳ ಸಂಚಾರವು ಪ್ರತಿಯೊಬ್ಬರ ಜೀವನ ಹಾಗೂ ಜಗತ್ತಿನ ವಿದ್ಯಮಾನಗಳ ಮೇಲೆ ಗಾಢವಾದ ಪ್ರಭಾವ ಬೀರುತ್ತದೆ. ಶೌರ್ಯ, ಸಾಹಸ, ಆಕ್ರಮಣಶೀಲತೆ ಮತ್ತು ಭೂಮಿಗೆ ಕಾರಕನಾದ ಕುಜ (ಮಂಗಳ) ಗ್ರಹವು ಆಗಸ್ಟ್ 2ರಿಂದ ಸೆಪ್ಟೆಂಬರ್ 18ರವರೆಗೆ ಮಿಥುನ ರಾಶಿಯಲ್ಲಿ ಸಂಚಾರ ಮಾಡಲಿದೆ. ಕುಜ ಗ್ರಹಕ್ಕೆ ಮಿಥುನ ರಾಶಿಯು ಶತ್ರು ಕ್ಷೇತ್ರವಾಗಿದ್ದು (ಮಿಥುನದ ಸ್ವಾಮಿ ಬುಧ, ಹಾಗೂ ಕುಜ-ಬುಧರ ಮಧ್ಯೆ ಶತ್ರುತ್ವವಿದೆ), ಈ ಸಂಚಾರವು ಎಲ್ಲ ರಾಶಿಗಳ ಮೇಲೆ ವಿವಿಧ ರೀತಿಯ ಪ್ರಭಾವಗಳನ್ನು ಉಂಟು ಮಾಡಲಿದೆ.
ಕುಜನು ಮಿಥುನ ರಾಶಿ ಸಂಚಾರದ ವೇಳೆ ಪರಿಣಾಮಗಳು
ಮಾತು ಮತ್ತು ಸಂವಹನದಲ್ಲಿ ಆಕ್ರಮಣಶೀಲತೆ: ಮಿಥುನ ರಾಶಿಯು ಮಾತು, ಬರವಣಿಗೆ, ಮತ್ತು ಸಂವಹನವನ್ನು ಸೂಚಿಸುತ್ತದೆ. ಈ ರಾಶಿಯಲ್ಲಿ ಕುಜನ ಸಂಚಾರ ಇರುವುದರಿಂದ ಜನರು ಮಾತನಾಡTಡುವಾಗ ಅಥವಾ ವಾದ-ವಿವಾದಗಳಲ್ಲಿ ತೊಡಗಿದಾಗ ಕೋಪ ಮತ್ತು ಆತುರ ಹೆಚ್ಚಾಗುತ್ತದೆ.
ಶೀಘ್ರ ನಿರ್ಧಾರಗಳು ಮತ್ತು ಅಪಾಯಗಳು: ಕುಜನ ಪ್ರಭಾವದಿಂದ ಕೆಲಸಗಳಲ್ಲಿ ವೇಗ ಕಂಡುಬಂದರೂ ಆತುರದಿಂದ ಕೈಗೊಳ್ಳುವ ನಿರ್ಧಾರಗಳು ತಪ್ಪುಗಳಿಗೆ ದಾರಿ ಮಾಡಿಕೊಡಲಿದೆ. ವ್ಯಾಪಾರ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಎಚ್ಚರಿಕೆ ವಹಿಸಬೇಕು.
ತಾಂತ್ರಿಕ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಸ್ಪರ್ಧೆ: ಮೀಡಿಯಾ, ಪತ್ರಿಕೋದ್ಯಮ, ಐಟಿ ಮತ್ತು ಸಂವಹನ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಸವಾಲುಗಳು ಹೆಚ್ಚಾಗಲಿವೆ. ಪ್ರತಿಸ್ಪರ್ಧಿಗಳನ್ನು ಎದುರಿಸಲು ಹೆಚ್ಚಿನ ಶ್ರಮ ಪಡಬೇಕು.
ನಿಮ್ಮ ಕುಂಡಲಿಯಲ್ಲಿ ಕುಜ ಎಲ್ಲಿದ್ದಾನೆ? 12 ಭಾವಗಳಲ್ಲಿ ಮಂಗಳನ ಪ್ರಭಾವ ಮತ್ತು ಕುಜ ದೋಷಕ್ಕೆ ಸರಳ ಪರಿಹಾರಗಳು
ಮೇಷದಿಂದ ಮೀನ ರಾಶಿಯವರೆಗೆ ಫಲಾಫಲಗಳು
1. ಮೇಷ ರಾಶಿ (Aries)
- ಪ್ರಭಾವ: ಧೈರ್ಯ ಮತ್ತು ಪರಾಕ್ರಮ ಹೆಚ್ಚಾಗುತ್ತದೆ. ಕಿರಿಯ ಸಹೋದರರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಲಿದೆ.
- ಪರಿಹಾರ: ಮಾತಿನಲ್ಲಿ ಸಂಯಮವಿರಲಿ, ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
2. ವೃಷಭ ರಾಶಿ (Taurus)
- ಪ್ರಭಾವ: ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಅನವಶ್ಯಕ ಖರ್ಚುಗಳು ಅಥವಾ ಕುಟುಂಬದಲ್ಲಿ ಹಣಕಾಸಿನ ವಿಚಾರವಾಗಿ ಚರ್ಚೆಗಳು ನಡೆಯಲಿವೆ.
- ಪರಿಹಾರ: ಉಳಿತಾಯದ ಕಡೆ ಗಮನ ಹರಿಸಿ ಮತ್ತು ಹೂಡಿಕೆ ಮಾಡುವಾಗ ಜಾಗರೂಕರಾಗಿರಿ.
3. ಮಿಥುನ ರಾಶಿ (Gemini)
- ಪ್ರಭಾವ: ಕುಜನು ನಿಮ್ಮದೇ ರಾಶಿಯಲ್ಲಿ ಇರುವುದರಿಂದ ಕೋಪ, ಚಡಪಡಿಕೆ ಮತ್ತು ಮಾನಸಿಕ ಅಶಾಂತಿ ಹೆಚ್ಚಾಗುತ್ತದೆ. ಆರೋಗ್ಯದ ಕಡೆ ಗಮನ ಹರಿಸಿ.
- ಪರಿಹಾರ: ಯೋಗ ಮತ್ತು ಧ್ಯಾನದಿಂದ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಿ.
4. ಕರ್ಕಾಟಕ ರಾಶಿ (Cancer)
- ಪ್ರಭಾವ: ದೂರ ಪ್ರಯಾಣಗಳು ಅಥವಾ ವಿದೇಶಿ ಮೂಲಗಳಿಂದ ಅನಿರೀಕ್ಷಿತ ಖರ್ಚುಗಳು ಎದುರಾಗಲಿವೆ. ನಿದ್ರಾಹೀನತೆ ಅಥವಾ ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳಲಿದೆ.
- ಪರಿಹಾರ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ, ವಿಶ್ರಾಂತಿಗೆ ಆದ್ಯತೆ ನೀಡಿ.
ಕುಜ ದೋಷ, ವಿವಾಹ ವಿಳಂಬ, ಭೂಮಿ ವ್ಯಾಜ್ಯಕ್ಕೆ ಪರಿಹಾರ ನೀಡುವ ಅಪರೂಪದ ಅಂಗಾರಕ ದೇವಾಲಯ – ತುಮಕೂರಿನ ಶ್ರೀಕೃಷ್ಣ ನಗರ
5. ಸಿಂಹ ರಾಶಿ (Leo)
- ಪ್ರಭಾವ: ಆದಾಯದ ಮಾರ್ಗಗಳಲ್ಲಿ ಏರಿಳಿತ ಉಂಟಾಗಲಿದೆ. ಸ್ನೇಹಿತರಿಂದ ಅಥವಾ ಹಿರಿಯರಿಂದ ನಿರೀಕ್ಷೆ ಮಾಡುತ್ತಿದ್ದ ಸಹಕಾರದಲ್ಲಿ ವಿಳಂಬ ಆಗಲಿದೆ.
- ಪರಿಹಾರ: ಆರ್ಥಿಕ ಯೋಜನೆಗಳಲ್ಲಿ ಎಚ್ಚರಿಕೆ ವಹಿಸಿ, ವಾದ-ವಿವಾದಗಳಿಂದ ದೂರವಿರಿ.
6. ಕನ್ಯಾ ರಾಶಿ (Virgo)
- ಪ್ರಭಾವ: ವೃತ್ತಿಜೀವನದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಅಥವಾ ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯಗಳು ಮೂಡದಂತೆ ಎಚ್ಚರ ವಹಿಸಿ. ಕೆಲಸದ ಒತ್ತಡ ಹೆಚ್ಚಿರಲಿದೆ.
- ಪರಿಹಾರ: ತಾಳ್ಮೆಯಿಂದ ಕೆಲಸ ಮಾಡಿ, ಕಚೇರಿ ರಾಜಕೀಯದಿಂದ ದೂರವಿರಿ.
7. ತುಲಾ ರಾಶಿ (Libra)
- ಪ್ರಭಾವ: ಅದೃಷ್ಟದ ಬಲ ಸ್ವಲ್ಪ ಮಟ್ಟಿಗೆ ಕಡಿಮೆ ಆಗಲಿದೆ. ಇದರಿಂದಾಗಿ ಮಾಡುವ ಕೆಲಸಗಳಲ್ಲಿ ವಿಳಂಬವೂ ಆಗುತ್ತದೆ. ತಂದೆಯ ಆರೋಗ್ಯದ ಕಡೆ ನಿಗಾ ವಹಿಸಿ.
- ಪರಿಹಾರ: ಧಾರ್ಮಿಕ ಕಾರ್ಯಗಳಲ್ಲಿ ಅಥವಾ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ.
ಜಾತಕದಲ್ಲಿ ಗ್ರಹದೋಷವೇ? ದಶಾಸಂಧಿ ನವಗ್ರಹ ಶಾಂತಿ ಮಾಡಿಸುವ ಮುನ್ನ ಈ ಶಾಸ್ತ್ರೋಕ್ತ ನಿಯಮಗಳು ತಿಳಿದಿರಲಿ!
8. ವೃಶ್ಚಿಕ ರಾಶಿ (Scorpio)
- ಪ್ರಭಾವ: ಅನಿರೀಕ್ಷಿತ ಬದಲಾವಣೆಗಳು ಮತ್ತು ಆರೋಗ್ಯದ ಸಮಸ್ಯೆಗಳು ಎದುರಾಗಲಿದೆ. ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ಅಗತ್ಯ.
- ಪರಿಹಾರ: ಹಠಾತ್ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಮತ್ತು ರಸ್ತೆ ಸುರಕ್ಷೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
9. ಧನು ರಾಶಿ (Sagittarius)
- ಪ್ರಭಾವ: ದಾಂಪತ್ಯ ಜೀವನದಲ್ಲಿ ಅಥವಾ ಪಾಲುದಾರಿಕೆ ವ್ಯವಹಾರಗಳಲ್ಲಿ ಸಣ್ಣಪುಟ್ಟ ಘರ್ಷಣೆಗಳು ಉಂಟಾಗುತ್ತವೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
- ಪರಿಹಾರ: ಸಂವಹನ ನಡೆಸುವಾಗ ಧ್ವನಿಯು ಮೃದುವಾಗಿರಲಿ ಮತ್ತು ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
10. ಮಕರ ರಾಶಿ (Capricorn)
- ಪ್ರಭಾವ: ಶತ್ರುಗಳ ಕಾಟ ಅಥವಾ ಸ್ಪರ್ಧೆಗಳು ಹೆಚ್ಚಾಗಲಿವೆ. ಹಳೆಯ ಆರೋಗ್ಯ ಸಮಸ್ಯೆಗಳು ಮರುಕಳಿಸಲಿದೆ.
- ಪರಿಹಾರ: ಕಾನೂನು ವಿಚಾರಗಳಲ್ಲಿ ಎಚ್ಚರಿಕೆ ಇರಲಿ. ಶ್ರಮಕ್ಕೆ ತಕ್ಕ ಫಲ ಸಿಗಲು ಹೆಚ್ಚು ಪರಿಶ್ರಮ ಬೇಕಾಗುತ್ತದೆ.
11. ಕುಂಭ ರಾಶಿ (Aquarius)
- ಪ್ರಭಾವ: ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾಧಿಸುವುದಕ್ಕೆ ಕಷ್ಟ ಆಗಲಿದೆ. ಪ್ರೇಮ ವಿಚಾರಗಳಲ್ಲಿ ಅಥವಾ ಮಕ್ಕಳ ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸುವುದು ಅವಶ್ಯಕ.
- ಪರಿಹಾರ: ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಮತ್ತು ಮಕ್ಕಳೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ.
12. ಮೀನ ರಾಶಿ (Pisces)
- ಪ್ರಭಾವ: ಭೂಮಿ, ಮನೆ ಅಥವಾ ವಾಹನಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಂದರೆಗಳು ಅಥವಾ ವಿಳಂಬ ಆಗಲಿದೆ. ತಾಯಿಯ ಆರೋಗ್ಯದ ಕಡೆ ಗಮನ ಹರಿಸಿ.
- ಪರಿಹಾರ: ಮನೆ ಅಥವಾ ವಾಹನಕ್ಕೆ ಸಂಬಂಧಿಸಿದ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ.
ವೈತೀಶ್ವರನ್ ಕೋವಿಲ್: ದೈವಿಕ ವೈದ್ಯನ ನೆಲೆ – ಕಾಯಿಲೆಗಳ ನಿವಾರಣೆ ಮತ್ತು ಕುಜ ದೋಷಕ್ಕೆ ಪರಮೌಷಧ!
ಕೊನೆಮಾತು:
ಮಿಥುನ ರಾಶಿಯಲ್ಲಿ ಕುಜನ ಈ ಸಂಚಾರವು ಮೂಲತಃ ಜಾಗರೂಕತೆಯಿಂದ ಇರಬೇಕಾದ ಅವಧಿಯಾಗಿದೆ. ಆತುರವನ್ನು ಕೈಬಿಟ್ಟು, ತಾಳ್ಮೆ ಮತ್ತು ವಿವೇಚನೆಯಿಂದ ವರ್ತಿಸಿದರೆ ಯಾವುದೇ ದೊಡ್ಡ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬಹುದು.
ಲೇಖನ- ಶ್ರೀನಿವಾಸ ಮಠ









