2026ರ ಜೂನ್ 29ರಿಂದ ಜುಲೈ 23ರವರೆಗೆ ಬುದ್ಧಿಕಾರಕ, ಸಂವಹನಕಾರಕ ಬುಧನು ತನ್ನ ಸ್ವಕ್ಷೇತ್ರ ಮಿಥುನ ರಾಶಿಯಲ್ಲಿ ವಕ್ರೀ ಸಂಚಾರ (Retrograde) ಆರಂಭಿಸುತ್ತಿದ್ದಾನೆ. ಜ್ಯೋತಿಷ್ಯದಲ್ಲಿ ಗ್ರಹಗಳ ವಕ್ರ ಸಂಚಾರಕ್ಕೆ, ಅದರಲ್ಲೂ ಸ್ವಕ್ಷೇತ್ರದಲ್ಲಿ ಆಗುವ ಸಂಚಾರಕ್ಕೆ ಮಹತ್ವದ ಸ್ಥಾನವಿದೆ. ಈ ವಿಶೇಷ ಗೋಚಾರದ ಸಂಪೂರ್ಣ ವಿಶ್ಲೇಷಣೆ, ಜಗತ್ತಿನ ಮೇಲಿನ ಪ್ರಭಾವ ಮತ್ತು ದ್ವಾದಶ ರಾಶಿಗಳ ಫಲ ಇಲ್ಲಿದೆ.
ವಕ್ರ ಗ್ರಹದ ಬಲ ಮತ್ತು ಸ್ವಕ್ಷೇತ್ರದ ಪ್ರಭಾವ
‘ಫಲದೀಪಿಕಾ’ ಹಾಗೂ ‘ಬೃಹತ್ ಪರಾಶರ ಹೋರಾಶಾಸ್ತ್ರ’ದಂಥ ಜ್ಯೋತಿಷ್ಯ ಗ್ರಂಥಗಳ ಪ್ರಕಾರ, ವಕ್ರಿ ಗ್ರಹಗಳು ಅತ್ಯಂತ ಬಲಿಷ್ಠವಾಗಿರುತ್ತವೆ. ಅವುಗಳಿಗೆ ಚೇಷ್ಟಾ ಬಲ ಹೆಚ್ಚಿರುತ್ತದೆ.
ಶ್ಲೋಕ:
ವಕ್ರೀ ಸ್ವೋಚ್ಚೇ ಸಪ್ರಭಃ ಸ್ವಕ್ಷೇತ್ರೇ ಸೌಮ್ಯಖೇಚರಃ ।
ದದ್ಯಾದ್ ರಾಜ್ಯಂ ಪ್ರತಾಪಂ ಚ ಕೀರ್ತಿಂ ಲಕ್ಷ್ಮೀಂ ಸುಖಂ ಬಹು ॥
ಅರ್ಥ: ಶುಭ ಗ್ರಹವಾದ ಬುಧನು ತನ್ನ ಸ್ವಕ್ಷೇತ್ರದಲ್ಲಿ (ಮಿಥುನ) ವಕ್ರಿಯಾದಾಗ, ಉಚ್ಛ ಸ್ಥಾನದಲ್ಲಿದ್ದಷ್ಟೇ ಬಲಶಾಲಿ ಆಗುತ್ತಾನೆ. ಇಂತಹ ಸಮಯದಲ್ಲಿ ವ್ಯಕ್ತಿಗೆ ತೀಕ್ಷ್ಣ ಬುದ್ಧಿಶಕ್ತಿ, ಕೀರ್ತಿ, ಲಕ್ಷ್ಮೀ ಕೃಪೆ ಹಾಗೂ ಸುಖವನ್ನು ನೀಡುವ ಸಾಮರ್ಥ್ಯವನ್ನು ಹೊಂದಿರುತ್ತಾನೆ. ಆದರೆ ವಕ್ರ ಚಲನೆಯು ಹಿಮ್ಮುಖವಾಗಿ ಭಾಸವಾಗುವುದರಿಂದ ಫಲಗಳು ಕೊಂಚ ವಿಳಂಬವಾಗಿ ಅಥವಾ ಒಂದಕ್ಕೆ ಎರಡು ಬಾರಿಗೆ ಎಂಬಂತೆ ಎಳೆದಾಡಿ ಸಿಗುತ್ತವೆ.
ಪರಿವರ್ತನೆ ಯೋಗ: ಜಾತಕದಲ್ಲಿ ಗ್ರಹಗಳ ಸ್ಥಾನ ಬದಲಾವಣೆಯ ರಹಸ್ಯ, ಅದರ ಪವಾಡ ಸದೃಶ ಪ್ರಭಾವ!
ಜಗತ್ತಿನ ಮೇಲೆ (ದೇಶ-ವಿದೇಶ) ಆಗುವ ಪ್ರಭಾವ
ಮಿಥುನ ರಾಶಿಯು ಸಂವಹನ, ತಂತ್ರಜ್ಞಾನ, ವಾಣಿಜ್ಯ ಮತ್ತು ಮಾಧ್ಯಮಗಳನ್ನು ಸೂಚಿಸುತ್ತದೆ. ಬುಧನು ಇಲ್ಲಿ ವಕ್ರಿಯಾಗುವುದರಿಂದ ಜಾಗತಿಕ ಮಟ್ಟದಲ್ಲಿ ಈ ಕೆಳಗಿನ ಬದಲಾವಣೆಗಳು ಆಗುತ್ತವೆ:
- ಸಂವಹನ ಮತ್ತು ತಂತ್ರಜ್ಞಾನ: ಜಾಗತಿಕ ಮಟ್ಟದಲ್ಲಿ ಐಟಿ (IT) ವಲಯ, ಸಾಮಾಜಿಕ ಜಾಲತಾಣಗಳು ಹಾಗೂ ದೂರಸಂಪರ್ಕ ವ್ಯವಸ್ಥೆಯಲ್ಲಿ ಸಾಫ್ಟ್‌ವೇರ್ ದೋಷಗಳು (Glitches) ಅಥವಾ ಸರ್ವರ್ ಸಮಸ್ಯೆಗಳು ಎದುರಾಗಲಿದೆ.
- ಆರ್ಥಿಕತೆ ಮತ್ತು ಷೇರು ಮಾರುಕಟ್ಟೆ: ಬ್ಯಾಂಕಿಂಗ್ ಮತ್ತು ಷೇರು ಮಾರುಕಟ್ಟೆಯಲ್ಲಿ ತೀವ್ರ ಏರಿಳಿತಗಳು ಕಂಡುಬರುತ್ತವೆ. ಹೂಡಿಕೆದಾರರು ಗೊಂದಲಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.
- ಮಾಧ್ಯಮ ಮತ್ತು ರಾಜಕೀಯ: ಸುಳ್ಳು ಸುದ್ದಿ ಅಥವಾ ಹಳೆಯ ವಿವಾದಗಳು ಮರುಜೀವ ಪಡೆದು ರಾಜತಾಂತ್ರಿಕ ವಲಯದಲ್ಲಿ ಗೊಂದಲ ಸೃಷ್ಟಿಸಲಿದೆ. ಪ್ರಮುಖ ಒಪ್ಪಂದಗಳು ತಡವಾಗಲಿದೆ.
ದ್ವಾದಶ ರಾಶಿಗಳ ಮೇಲಿನ ಪ್ರಭಾವ
ಮೇಷ (Aries)
ನಿಮ್ಮ 3ನೇ ಮನೆಯಲ್ಲಿ ಬುಧ ವಕ್ರಿಯಾಗುವುದರಿಂದ ಸಹೋದರರೊಂದಿಗೆ ಭಿನ್ನಾಭಿಪ್ರಾಯ ಬರಬಹುದು. ಪ್ರಯಾಣದಲ್ಲಿ ವಿಳಂಬವಾಗಬಹುದು. ಯಾವುದೇ ಪತ್ರ ವ್ಯವಹಾರ ಮಾಡುವಾಗ ಎಚ್ಚರಿಕೆ ಇರಲಿ.
ವೃಷಭ (Taurus)
2ನೇ ಮನೆಯಲ್ಲಿ (ಧನ ಸ್ಥಾನ) ಬುಧನ ವಕ್ರೀ ಸಂಚಾರದಿಂದ ನಿಮಗೆ ಬರಬೇಕಾದ ಹಳೆಯ ಬಾಕಿ ಹಣ ಕೈ ಸೇರಬಹುದು. ಆದರೆ ಮಾತಿನ ಮೇಲೆ ನಿಯಂತ್ರಣವಿರಲಿ; ಕುಟುಂಬದಲ್ಲಿ ತಪ್ಪು ತಿಳಿವಳಿಕೆಗಳು ಉಂಟಾಗಬಹುದು.
ಮಿಥುನ (Gemini)
ನಿಮ್ಮದೇ ರಾಶಿಯಲ್ಲಿ (1ನೇ ಮನೆ) ಬುಧ ವಕ್ರಿಯಾಗುತ್ತಿದ್ದಾನೆ. ಮಾನಸಿಕ ಗೊಂದಲಗಳು ಹೆಚ್ಚಾಗಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರ ಬೇಡ. ಹಳೆಯ ಯೋಜನೆಗಳನ್ನು ಇನ್ನೊಂದು ಸಲ ಪರಿಶೀಲಿಸಲು ಇದು ಉತ್ತಮ ಅವಕಾಶ. ಆರೋಗ್ಯದ ಕಡೆ ಗಮನವಿರಲಿ.
Planet Combustion ವೈದಿಕ ಜ್ಯೋತಿಷ್ಯದಲ್ಲಿ ಗ್ರಹ ಅಸ್ತ : ಒಂದು ವಿಶ್ಲೇಷಣೆ
ಕಟಕ (Cancer)
12ನೇ ಮನೆಯಲ್ಲಿ ಬುಧನ ಸಂಚಾರದಿಂದ ಅನಗತ್ಯ ಖರ್ಚುಗಳು ಬರಬಹುದು. ವಿದೇಶಿ ವ್ಯವಹಾರಗಳಲ್ಲಿ ತೊಡಗಿಕೊಂಡವರಿಗೆ ಮಿಶ್ರ ಫಲ. ಅಧ್ಯಾತ್ಮದ ಕಡೆ ಒಲವು ಹೆಚ್ಚಾಗಲಿದೆ.
ಸಿಂಹ (Leo)
11ನೇ ಮನೆಯಲ್ಲಿ ಬುಧ ವಕ್ರಿಯಾಗುವುದರಿಂದ ಹಳೆಯ ಸ್ನೇಹಿತರ ಭೇಟಿಯಾಗಲಿದೆ. ವ್ಯಾಪಾರದಲ್ಲಿ ಬಾರದೆ ಹಾಗೇ ಉಳಿದು ಹೋಗಿದ್ದ ಲಾಭದ ಅಂಶ ಮರಳಿ ಬರಲಿವೆ. ಆದಾಯದ ಮೂಲಗಳು ಉತ್ತಮಗೊಳ್ಳಲಿವೆ.
ಕನ್ಯಾ (Virgo)
ಹತ್ತನೇ ಮನೆಯಲ್ಲಿ ಬುಧನ ವಕ್ರ ಚಲನೆಯಿಂದ ಉದ್ಯೋಗ ಕ್ಷೇತ್ರದಲ್ಲಿ ಒತ್ತಡ ಹೆಚ್ಚಾಗಬಹುದು. ಮೇಲಧಿಕಾರಿಗಳೊಂದಿಗೆ ಮಾತನಾಡುವಾಗ ಸಂಯಮವಿರಲಿ. ಹೊಸ ಕೆಲಸಕ್ಕೆ ಕೈ ಹಾಕುವ ಮುನ್ನ ಒಂದಕ್ಕೆ ನಾಲ್ಕು ಬಾರಿ ಯೋಚಿಸಿ.
ರಾಹು ದಶೆ ಫಲಗಳು: 12 ರಾಶಿಗಳ ಮೇಲೆ ರಾಹುವಿನ ಪ್ರಭಾವ, ನಕ್ಷತ್ರವಾರು ದಶೆಯ ಲೆಕ್ಕಾಚಾರ ಇಲ್ಲಿದೆ
ತುಲಾ (Libra)
ಭಾಗ್ಯಸ್ಥಾನದಲ್ಲಿ ಬುಧ ವಕ್ರಿಯಾಗುವುದರಿಂದ ಧಾರ್ಮಿಕ ಕಾರ್ಯಗಳಿಗೆ ಅಡೆತಡೆಗಳು ಬರಬಹುದು. ಉನ್ನತ ಶಿಕ್ಷಣದ ವ್ಯಾಸಂಗದಲ್ಲಿ ಪರಿಶ್ರಮ ಅಗತ್ಯ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಕಡೆ ಗಮನಹರಿಸಿ.
ವೃಶ್ಚಿಕ (Scorpio)
8ನೇ ಮನೆಯಲ್ಲಿ ಬುಧನ ಸಂಚಾರವು ಅನಿರೀಕ್ಷಿತ ಧನಲಾಭ ಅಥವಾ ನೀವು ಈಗಾಗಲೇ ಅರ್ಜಿ ಹಾಕಿಕೊಂಡಿರುವ ವಿಮೆಯ ಹಣವನ್ನು ತಂದುಕೊಡಬಹುದು. ಆದರೆ ಆರೋಗ್ಯದಲ್ಲಿ ಏರುಪೇರಾಗದಂತೆ ಎಚ್ಚರಿಕೆ ವಹಿಸಿ. ರಹಸ್ಯ ಎಂದೆನಿಸಿದ ವಿಷಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ.
ಧನು (Sagittarius)
7ನೇ ಮನೆಯಲ್ಲಿ ಬುಧ ವಕ್ರಿಯಾಗುವುದರಿಂದ ದಾಂಪತ್ಯ ಜೀವನ ಹಾಗೂ ಪಾಲುದಾರಿಕೆ (Partnership) ವ್ಯವಹಾರದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.
ನಿಮ್ಮ ಕುಂಡಲಿಯಲ್ಲಿ ಕುಜ ಎಲ್ಲಿದ್ದಾನೆ? 12 ಭಾವಗಳಲ್ಲಿ ಮಂಗಳನ ಪ್ರಭಾವ ಮತ್ತು ಕುಜ ದೋಷಕ್ಕೆ ಸರಳ ಪರಿಹಾರಗಳು
ಮಕರ (Capricorn)
6ನೇ ಮನೆಯಲ್ಲಿ ಬುಧನ ಸಂಚಾರವು ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸನ್ನು ನೀಡಬಹುದು. ಹಳೆಯ ಸಾಲಗಳಿಂದ ಮುಕ್ತಿ ಸಿಗುವ ಸಾಧ್ಯತೆ ಇದೆ. ಆದರೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು.
ಕುಂಭ (Aquarius)
5ನೇ ಮನೆಯಲ್ಲಿ ಬುಧ ವಕ್ರಿಯಾಗುವುದರಿಂದ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಪ್ರೇಮ ಜೀವನದಲ್ಲಿ ಗೊಂದಲಗಳು ಉಂಟಾಗಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರಿಕೆ ಇರಲಿ.
ಮೀನ (Pisces)
4ನೇ ಮನೆಯಲ್ಲಿ ಬುಧನ ಸಂಚಾರದಿಂದ ಮನೆ ಅಥವಾ ವಾಹನ ರಿಪೇರಿಗಾಗಿ ಖರ್ಚು ಬರಬಹುದು. ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದರೂ ಕೌಟುಂಬಿಕ ವಿಷಯಗಳಲ್ಲಿ ಸನ್ನಿವೇಶ ಹಾಳಾಗದಂತೆ ಕಾಪಾಡಿಕೊಳ್ಳುವುದು ಮುಖ್ಯ.
ನವಗ್ರಹ ಸ್ತೋತ್ರ ಮಾಲೆ: ಗ್ರಹದೋಷ ನಿವಾರಣೆ, ಜೀವನದಲ್ಲಿ ಸಮೃದ್ಧಿಗೆ ದಿವ್ಯ ಮಾರ್ಗ
ವಕ್ರ ಬುಧನಿಗೆ ಸರಳ ಪರಿಹಾರಗಳು:
- ಬುಧವಾರದ ದಿನ ಶ್ರೀ ಮಹಾವಿಷ್ಣು ಅಥವಾ ಶ್ರೀ ಗಣೇಶನ ಆರಾಧನೆ ಮಾಡಿ.
- ಹಸಿರು ಬಣ್ಣದ ಬಟ್ಟೆ ಅಥವಾ ಹೆಸರು ಬೇಳೆಯನ್ನು ಅಥವಾ ಹೆಸರುಕಾಳನ್ನು ದಾನ ಮಾಡಿ.
- ದೈನಂದಿನ ಸಂವಹನದಲ್ಲಿ ಮತ್ತು ಇಮೇಲ್/ಸಂದೇಶಗಳನ್ನು ಕಳುಹಿಸುವ ಮುನ್ನ “ಒಂದಕ್ಕೆ ನಾಲ್ಕು ಬಾರಿ ಪರಿಶೀಲನೆ” ಮಾಡಿಕೊಳ್ಳುವುದು ಉತ್ತಮ.
ಲೇಖನ- ಶ್ರೀನಿವಾಸ ಮಠ









