ತಿರುಮಲದ ವೆಂಕಟೇಶ್ವರನ ದರ್ಶನಕ್ಕೆ 3,550 ಮೆಟ್ಟಿಲು ಏರಿದ ಕರ್ನಾಟಕ ಮೂಲದ 116 ವರ್ಷದ ನವನೀತಮ್ಮ

An elderly woman named Navaneethamma (116 years old) is ‌felicitated by TTD officer in Ranganayakula Mandapam.
116ರ ಇಳಿವಯಸ್ಸಿನಲ್ಲಿ ಅಚಲ ಭಕ್ತಿ! ತಿರುಮಲದ 3,550 ಮೆಟ್ಟಿಲುಗಳನ್ನು ಹತ್ತಿದ ನವನೀತಮ್ಮ.

ಆ ಮಹಾತಾಯಿಯ ಹೆಸರು ನವನೀತಮ್ಮ, ವಯಸ್ಸು 116. ತಿರುಮಲದ ಶ್ರೀನಿವಾಸನ ದರ್ಶನಕ್ಕಾಗಿ 3,550 ಮೆಟ್ಟಿಲುಗಳನ್ನು ಏರಿದ್ದಾರೆ. ಅಂದಹಾಗೆ ನವನೀತಮ್ಮ ಅವರು ಕರ್ನಾಟಕದವರು. ಅಚಲ ಭಕ್ತಿಯ ಮುಂದೆ ಯಾವ ವಯಸ್ಸು, ಯಾವುದು ದುರ್ಬಲ ದೇಹ? ಎಂದು ಹುಬ್ಬೇರಿಸುವಂತೆ ಮಾಡಿದ್ದಾರೆ ಈ ಮಹಾತಾಯಿ.

ಅಲಿಪಿರಿಯ ಮೆಟ್ಟಿಲುಗಳ ಮೇಲೆ ನವನೀತಮ್ಮ ಅವರು ತಮ್ಮ ಕುಟುಂಬದೊಂದಿಗೆ ಸಾಗುತ್ತಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಅಷ್ಟೇ ಅಲ್ಲ, ಭಾರತದಾದ್ಯಂತ ಇದೇ ಸುದ್ದಿ. ಮಾಧ್ಯಮಗಳಲ್ಲಿ ಭಕ್ತಿಯ ಪರಾಕಾಷ್ಠೆ ಹೇಗಿರುತ್ತದೆ ನೋಡಿ ಎಂಬ ಅರ್ಥದ ವರದಿಗಳು ದಂಡಿಯಾಗಿ ಕಾಣಸಿಗುತ್ತಿವೆ.

ಅಲಿಪಿರಿಯ ಪರಿಕ್ರಮ 3,550 ಮೆಟ್ಟಿಲುಗಳು ಹಾಗೂ 11 ಕಿಲೋಮೀಟರ್ ದೂರದ್ದು. ನವನೀತಮ್ಮ ಅವರನ್ನು ಈ ಪರಿಕ್ರಮದಲ್ಲಿ ಕಂಡಂಥವರು ವಿಡಿಯೋ ಮಾಡಿ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

ಎಂಥ ದೈಹಿಕ ಬಲ ಇರುವ ವ್ಯಕ್ತಿಯೇ ಆದರೂ ತಿರುಮಲದ ಈ ಪರಿಕ್ರಮದಲ್ಲಿ ಅಲ್ಲಲ್ಲಿ ವಿಶ್ರಾಂತಿ ಪಡೆಯುತ್ತಾ ಸಾಗುತ್ತಾರೆ. ನವನೀತಮ್ಮ ಅವರಿಗೆ ಕುಟುಂಬ ಸದಸ್ಯರ ಬೆಂಬಲ- ಪ್ರೋತ್ಸಾಹ ಎರಡೂ ಇದೆ.

ತಿರುಮಲ ಕ್ಷೇತ್ರ ಮಹಾತ್ಮೆ: ಶ್ರೀನಿವಾಸನ ದರ್ಶನಕ್ಕೂ ಮುನ್ನ ವರಾಹ ದೇವರ ದರ್ಶನವೇಕೆ?

ಆದರೆ, ಅದಕ್ಕಿಂತ ಹೆಚ್ಚು ನವನೀತಮ್ಮ ಅವರಲ್ಲಿನ ಆ ಅದಮ್ಯ ಭಕ್ತಿಯು ಶಕ್ತಿಯಾಗಿ ಬಲ ನೀಡಿದೆ.

ಯಾವಾಗ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯಿತೋ ತಿರುಮಲ ತಿರುಪತಿ ದೇವಸ್ಥಾನಂನಿಂದ ನವನೀತಮ್ಮ ಮತ್ತು ಕುಟುಂಬದವರಿಗೆ ವಿಐಪಿ ದರ್ಶನ ವ್ಯವಸ್ಥೆ ಮಾಡಿಕೊಡಲಾಗಿದೆ. 

ಈ ವಿಚಾರವನ್ನು ಟಿಟಿಡಿ ಅಧ್ಯಕ್ಷರಾದ ಬಿ.ಆರ್. ನಾಯ್ಡು ಖಾತ್ರಿ ಪಡಿಸಿದ್ದಾರೆ. ನವನೀತಮ್ಮ ಮತ್ತು ಅವರ ಕುಟುಂಬ ಸದಸ್ಯರಿಗೆ ವಿಐಪಿ ಬ್ರೇಕ್ ದರ್ಶನ ವ್ಯವಸ್ಥೆ ಮಾಡಿಕೊಟ್ಟಿದ್ದೇವೆ ಎಂದಿದ್ದಾರೆ.

ಇನ್ನು ರಂಗನಾಯುಕುಲ ಮಂಡಪಂನಲ್ಲಿ ಟಿಟಿಟಿ ಕಾರ್ಯನಿರ್ವಹಣಾಧಿಕಾರಿ ಮುದ್ದದ ರವಿಚಂದ್ರ ಅವರು ವೇದ ಪಂಡಿತರಿಂದ ವೇದೋಕ್ತವಾದ ಆಶೀರ್ವಚನ ಮಾಡಿಸಿ, ನವನೀತಮ್ಮ ಅವರಿಗೆ ರೇಷ್ಮೆ ವಸ್ತ್ರ, ಪವಿತ್ರ ಪ್ರಸಾದವನ್ನು ನೀಡಿದ್ದಾರೆ.

ಇದೇ ವೇಳೆ ನವನೀತಮ್ಮ ಅವರಿಂದ ಆ ಅಧಿಕಾರಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ತಮ್ಮ ಅಜ್ಜಿಗೆ ಹಾಗೂ ಕುಟುಂಬಕ್ಕೆ ದೇವರ ದರ್ಶನ ಮತ್ತು ಈ ವಿಶೇಷ ಗೌರವ ನೀಡಿದ್ದಕ್ಕೆ ನವನೀತಮ್ಮ ಅವರ ಮೊಮ್ಮಗ ಟಿಟಿಡಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ಇನ್ನು ಇದೇ ವೇಳೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನವನೀತಮ್ಮ ಅವರ ಭಕ್ತಿ ಮತ್ತು ಅದರ ಶಕ್ತಿಯನ್ನು ಹೊಗಳಿದ್ದಾರೆ.

ಶುದ್ಧ ಭಕ್ತಿಯ ಮುಂದೆ ವಯಸ್ಸು ಕೇವಲ ಸಂಖ್ಯೆ ಮಾತ್ರ  ಎಂದು ಸಹ ಉಲ್ಲೇಖಿಸಿದ್ದಾರೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts