Sri Gurubhyo Logo

Astrology birth stars: ಅಶ್ವಿನಿಯಿಂದ ರೇವತಿ ತನಕ ಇಪ್ಪತ್ತೇಳು ನಕ್ಷತ್ರಗಳ ಗುಣ- ಸ್ವಭಾವದ ವಿವರಣೆ ಇಲ್ಲಿದೆ

Manjunath Bhardwaj with Pejawar Seer
ಪೂಜ್ಯರಾದ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ತೀರ್ಥರ ಜತೆಗೆ ಮಂಜುನಾಥ್ ಭಾರದ್ವಾಜ್

ನಕ್ಷತ್ರದ ಆಧಾರದಲ್ಲಿ ಒಬ್ಬ ವ್ಯಕ್ತಿಯ ಗುಣ- ಸ್ವಭಾವ ಹೇಗಿರುತ್ತದೆ ಎಂಬುದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವರಿಸಲಾಗಿದೆ. ಇದೇ ಸಂಪೂರ್ಣವಾಗಿ ಅನ್ವಯಿಸುತ್ತದೆಯೇ ಎಂದು ಕೇಳಿದರೆ, ಖಂಡಿತಾ ಇಲ್ಲ ಎಂಬ ಉತ್ತರ ನೀಡಬೇಕಾಗುತ್ತದೆ. ಹಾಗಿದ್ದಲ್ಲಿ ಪ್ರಭಾವ ಬೀರುವ ಇತರ ಅಂಶಗಳು ಯಾವುವು? ಆ ವ್ಯಕ್ತಿಯ ಜನ್ಮ ಜಾತಕದಲ್ಲಿನ ದ್ವಾದಶ ಭಾವಗಳು, ಗ್ರಹ ಸ್ಥಿತಿ, ರಾಶಿ, ರಾಶ್ಯಾಧಪತಿ ಹೀಗೆ ನಾನಾ ವಿಚಾರಗಳಿವೆ. ಆದರೆ ನಕ್ಷತ್ರದ ಪ್ರಭಾವವನ್ನು ತೆಗೆದುಹಾಕುವುದಕ್ಕೆ ಸಾಧ್ಯವಿಲ್ಲ. ಅಶ್ವಿನಿ ನಕ್ಷತ್ರದಿಂದ ರೇವತಿ ಪರ್ಯಂತವಾಗಿ ಇಪ್ಪತ್ತೇಳು ನಕ್ಷತ್ರಗಳ ಗುಣ- ಸ್ವಭಾವ ಏನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಅಶ್ವಿನಿ

ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯಾಗಲಿ, ಪುರುಷರಾಗಲೀ ಇವರಿಗೆ ಅಲಂಕಾರ ಮಾಡಿಕೊಳ್ಳುವುದರಲ್ಲಿ ಬಹಳ ಆಸಕ್ತಿ ಇರುತ್ತದೆ. ಒಪ್ಪ- ಓರಣವಾಗಿ ಕಾಣಿಸಿಕೊಳ್ಳಬೇಕು ಎಂದು ಬಯಸುವ ಮಂದಿ ಇವರು. ಈ ನಕ್ಷತ್ರದಲ್ಲಿ ಜನಿಸಿದ ಪುರುಷರು ಸ್ಫುರದ್ರೂಪಿಗಳು ಎಂಬ ಅಭಿಪ್ರಾಯ ಶಾಸ್ತ್ರಕಾರರಲ್ಲಿದೆ. ಶ್ರೀಮಂತಿಕೆ ಇರುತ್ತದೆ. ವಾದವೋ- ಜಗಳವೋ ಮಾಡುತ್ತಿದ್ದಾರೆಂದರೆ ತಮಗೆ ಗೆಲುವು ಸಿಗುವವರೆಗೆ ಬಿಡದ ಜನ ಇವರು. ಜನರನ್ನು ಇವರ ಮಾತುಗಳಿಂದ ಆಕರ್ಷಿಸುತ್ತಾರೆ. ಅನುಸರಿಸುವಂತೆ ಮಾಡುತ್ತಾರೆ. ತಾವು ಹೇಳಬೇಕಾದ ಸಂಗತಿಯನ್ನು ಯಾವುದೇ ಮುಲಾಜು ನೋಡದೆ ನಿಷ್ಠುರವಾಗಿ ಹೇಳುತ್ತಾರೆ.

ಭರಣಿ

ಈ ನಕ್ಷತ್ರದಲ್ಲಿ ಜನಿಸಿದವರು ಅಂದುಕೊಂಡ ಕೆಲಸವನ್ನು ಪಟ್ಟು ಬಿಡದೆ ಮಾಡುವಂಥವರು. ಅಂದರೆ, ದೃಢವಾದ ಮನಸ್ಸಿರುತ್ತದೆ. ಸತ್ಯವನ್ನು ಮಾತನಾಡುವುದಕ್ಕೆ ಇಷ್ಟ ಪಡುವಂಥವರು. ಈ ನಕ್ಷತ್ರ ಜಾತರಿಗೆ ಸುಖ ಪಡುವಂಥ ಯೋಗ ಇರುತ್ತದೆ. ಆದರೆ ಇವರು ತಂದೆ- ತಾಯಿಯಿಂದ ದೂರ ಇರಬೇಕಾದ ಸನ್ನಿವೇಶ ಎದುರಾಗುತ್ತದೆ. ಪುರುಷರಾದಲ್ಲಿ ಸ್ತ್ರೀಯರ ಬಗ್ಗೆ ಆಸಕ್ತಿ ಜಾಸ್ತಿ ಇರುತ್ತದೆ. ಅದೇನು ಮರೆವೋ ಅಥವಾ ಧೋರಣೆಯೋ ಇವರಿಗೆ ಉಪಕಾರ ಸ್ಮರಣೆ ಕಡಿಮೆ ಎಂಬುದು ಶಾಸ್ತ್ರಕಾರರ ಅಭಿಮತ. 

ಕೃತ್ತಿಕಾ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಭೋಜನಾಸಕ್ತಿ ಜಾಸ್ತಿ. ಅಂದರೆ ಅಳತೆ ಮೀರಿ ಉಣ್ಣುವಂಥವರು. ವಿವಾಹಕ್ಕೆ ಹೊರತಾದ ಸ್ತ್ರೀ ಸಂಗವನ್ನು ಸೂಚಿಸುತ್ತದೆ. ಪಾಪ ಕರ್ಮಾಸಕ್ತಿ, ಕೆಟ್ಟ ಮಾತುಗಳನ್ನು ಆಡುವವರು. ಇವರು ಸಾರ್ವಜನಿಕ ಜೀವನದಲ್ಲಿ ಇದ್ದರೆ ಪ್ರಭಾವಿಗಳಾಗಿರುತ್ತಾರೆ. ಸಣ್ಣ ಮಟ್ಟದಲ್ಲಾದರೂ ಸುಳ್ಳಾಡುವವರು ಇವರು. ಹಣಕಾಸಿನ ಅಗತ್ಯ ಇರುವಾಗ ಹೇಗಾದರೂ ಅದನ್ನು ಹೊಂದಿಸಿಕೊಳ್ಳಬಲ್ಲ ಚಾಕಚಾಕ್ಯತೆ ಇವರಲ್ಲಿ ಇರುತ್ತದೆ.

ರೋಹಿಣಿ

ಈ ನಕ್ಷತ್ರದಲ್ಲಿ ಹುಟ್ಟಿದವರಿಗೆ ಶುಚಿ- ಸ್ವಚ್ಛತೆಗೆ ಹೆಚ್ಚು ಆದ್ಯತೆ. ಮಾತುಗಳು ಸುಮಧುರವಾಗಿರುತ್ತವೆ. ಪ್ರಾಣಿಗಳ ಬಗ್ಗೆ ಭಾರೀ ಪ್ರೀತಿ ಇರುತ್ತದೆ. ಯಾವುದೇ ವಿಚಾರವನ್ನು ಒಮ್ಮೆ ನಿರ್ಧರಿಸಿಕೊಂಡ ಮೇಲೆ ಪದೇ ಪದೇ ಬದಲಾವಣೆ ಮಾಡದಂಥ ಸ್ವಭಾವದವರು. ಅಂದರೆ ಸ್ಥಿರವಾದ ಬುದ್ಧಿ ಇರುತ್ತದೆ. ಆದರೆ ಬೇರೆಯವರು ತಪ್ಪನ್ನು ಮಾಡಿದಾಗ ಕಾಲ, ಸ್ಳಳ ಮತ್ಯಾವುದೇ ಪರಾಮರ್ಶೆ ಮಾಡದೆ ನೇರವಾಗಿ ಹೇಳುವಂಥವರು.

ಮೃಗಶಿರಾ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಚಂಚಲ ಚಿತ್ತ ಇರುತ್ತದೆ. ಯಾವುದೇ ಕಷ್ಟದ ಕೆಲಸ ವಹಿಸಿದರೂ ಅದೆಂಥ ಸವಾಲಿನದೇ ಆದರೂ ಕೆಲಸ ಪೂರ್ಣ ಮಾಡಿಕೊಂಡು ಬರುವಂಥ ಚಾತುರ್ಯ ಇವರಿಗೆ ಇರುತ್ತದೆ. ಲೈಂಗಿಕ ಆಸಕ್ತಿ ಜಾಸ್ತಿ ಇರುತ್ತದೆ. ಇದರರ್ಥ ನಕಾರಾತ್ಮಕವಾಗಿ ತೆಗೆದುಕೊಳ್ಳುವುದಲ್ಲ. ಯಾವುದಾದರೂ ವಿಷಯದಲ್ಲಿ ಪರಿಣತಿಯನ್ನು ಪಡೆಯುತ್ತಾರೆ. ಸಂಚಾರದಲ್ಲಿ ಸಂತೋಷವನ್ನು ಕಾಣುವಂಥವರು. ಆಗಿಂದಾಗ ಆರೋಗ್ಯ ಸಮಸ್ಯೆಗಳು ಕಾಡುತ್ತಿರುತ್ತವೆ. ಮೂರನೇ ವ್ಯಕ್ತಿಗೆ ತಲುಪದಂತೆ ವಿಷಯವನ್ನು ಸಂಬಂಧಪಟ್ಟವರಿಗೆ ಮುಟ್ಟಿಸುವುದರಲ್ಲಿ ಚಾಣಾಕ್ಷರು. ಇವರಿಗೆ ತಮ್ಮ ಬಗ್ಗೆಯೇ ಒಂದು ರೀತಿ ಅಹಂಕಾರ ಇರುತ್ತದೆ.

ಆರಿದ್ರಾ

ಈ ನಕ್ಷತ್ರದಲ್ಲಿ ಜನಿಸಿದವರು ಮನಸ್ಸಿನಲ್ಲಿ ಒಂದನ್ನು ಎಣಿಸುತ್ತಾರೆ, ಮಾತಿನಲ್ಲಿ ಇನ್ನೊಂದನ್ನು ಆಡುತ್ತಾರೆ ಹಾಗೂ ಅನುಷ್ಠಾನಕ್ಕೆ ತರುವುದು ಇನ್ನೇನೋ ಆಗಿರುತ್ತದೆ. ಇದರರ್ಥ ಈ ಪೈಕಿ ಯಾವುದಾದರೂ ಸರಿಯಾಗಿರಬಹುದು, ಅಥವಾ ಯಾವುದಾದರೂ ತಪ್ಪಾಗಬಹುದು. ವಸ್ತುಗಳ ಖರೀದಿ- ಮಾರಾಟದ ವಿಚಾರದಲ್ಲಿ ಇವರು ನಿಪುಣರು.ಆರೋಗ್ಯ ಇವರಿಗೆ ಆಗಾಗ ಕೈ ಕೊಡುತ್ತದೆ. ವಿನಾಕಾರಣ ಆದರೂ ಶೋಕ ಪಡುವಂಥ ಜನರಿವರು. ಈ ನಕ್ಷತ್ರದಲ್ಲಿ ಹುಟ್ಟಿದವರು ಸಿಟ್ಟನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.

ಪುನರ್ವಸು

ಈ ನಕ್ಷತ್ರದಲ್ಲಿ ಜನಿಸಿದವರು ಎಂಥ ಅನುಕೂಲಸ್ಥರೇ ಅಗಿದ್ದರೂ ಕಷ್ಟಗಳನ್ನು ಸಹಿಸಿಕೊಳ್ಳುವಂಥ ಸಹಿಷ್ಣುತೆ ಇರುತ್ತದೆ. ನೈತಿಕವಾಗಿ ಬದುಕುವುದಕ್ಕೆ ಹೆಚ್ಚಿನ ಆದ್ಯತೆ ನೀಡುವಂಥ ಜನರು ಇವರು. ಎಷ್ಟು ಕಡಿಮೆ ಆದಾಯ ಇದ್ದರೂ ಅದರಲ್ಲೇ ತೃಪ್ತಿ ಕಾಣುವಂಥವರು. ಕವಿ ಮನಸ್ಸಿನವರು. ಸಂಗಾತಿಯನ್ನು ಅದ್ಭುತವಾಗಿ ರಮಿಸುವಂಥವರು. ಶಾಸ್ತ್ರಗಳಲ್ಲಿ ನಂಬಿಕೆ ಇರುವಂಥವರು. ಭೂಮಿಯ ಮೂಲಕ ಧನವನ್ನು ಸಂಪಾದಿಸುವಂಥವರು. ತುಂಬ ದೊಡ್ಡ ಸಂಸಾರ ಅಥವಾ ಕೂಡು ಕುಟುಂಬದಲ್ಲಿ ಇರುವಂಥವರು.

ಪುಷ್ಯ

ಈ ನಕ್ಷತ್ರದಲ್ಲಿ ಜನಿಸಿದವರು ಶಾಂತ ಚಿತ್ತದವರಾಗಿರುತ್ತಾರೆ.ಗುಣ ಸಂಪನ್ನರಾಗಿರುತ್ತಾರೆ. ವಿವಿಧ ಶಾಸ್ತ್ರಗಳ ಪ್ರವೇಶ, ಪರಿಚಯ ಇವರಿಗೆ ಇರುತ್ತದೆ. ಉಚ್ಚಾರಣೆ ಸ್ವಷ್ಟವಾಗಿ ಇರುತ್ತದೆ. ಮಕ್ಕಳಿಂದ ಸಂತೋಷ ಪಡುವ ಯೋಗ ಇವರದಾಗಿರುತ್ತದೆ. ದೇವತಾ ಆರಾಧನೆಯಲ್ಲಿ ಬಹಳ ಭಕ್ತಿಯಿಂದ ತೊಡಗಿಕೊಳ್ಳುವಂಥವರು. ಧರ್ಮಾಚರಣೆಯಲ್ಲಿ ನಂಬಿಕೆ, ಶ್ರದ್ಧೆ ಇರುವಂಥವರು. ಪ್ರಮುಖ ರಾಜಕೀಯ ಹುದ್ದೆಗಳಲ್ಲಿ ಇರುವಂಥವರಿಗೆ ಆಪ್ತರಾಗಿರುತ್ತಾರೆ.

ಆಶ್ಲೇಷಾ

ಈ ನಕ್ಷತ್ರದಲ್ಲಿ ಜನಿಸಿದವರು ನಿಷ್ಠುರವಾದಿಗಳಾಗಿರುತ್ತಾರೆ. ತಮಗೆ ಅನಿಸಿದ್ದನ್ನು ಹೇಳಿಬಿಡುವ ಇವರು, ಅದರ ಪರಿಣಾಮಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಸ್ವಲ್ಪ ಮಟ್ಟಿಗೆ ಸ್ವಾರ್ಥಿಗಳಾಗಿ ಇರುತ್ತಾರೆ, ಇತರರ ಬಗ್ಗೆ ಆಲೋಚನೆ ಮಾಡುವಂಥವರಲ್ಲ. ಏನೂ ಉಪಯೋಗ ಅಂತಿಲ್ಲದಿದ್ದರೂ ಸಂಚಾರ ಮಾಡುವಂಥವರು, ಖರ್ಚಿನ ಮೇಲೆ ಹಿಡಿತ ಇಲ್ಲದಂಥವರು. ಸಮಾಜದ ದೃಷ್ಟಿಯಿಂದ ಯಾವ ಕೆಲಸ ಕೆಟ್ಟದ್ದು ಎಂದಿರುತ್ತದೋ ಅದನ್ನು ಮಾಡುವುದಕ್ಕೆ ಹಿಂಜರಿಕೆ ಇಲ್ಲದವರು.

ಮಖಾ

ಈ ನಕ್ಷತ್ರದಲ್ಲಿ ಜನಿಸಿದವರು ಎಂಥ ಶತ್ರುವಿನ ಸಿಟ್ಟನ್ನಾದರೂ ಸಮಾಧಾನ ಪಡಿಸುವಂಥ ಸಾಮರ್ಥ್ಯ ಇರುವಂಥವರು. ಇವರ ಜೀವಿತ ಕಾಲಾವಧಿಯಲ್ಲಿ ನಾನಾ ಬಗೆಯ ಭೋಗಗಳನ್ನು ಅನುಭವಿಸುತ್ತಾರೆ. ಸೇವಕರಿಂದ ಸೇವೆಗಳನ್ನು ಪಡೆಯುವ ಯೋಗ ಇವರ ಪಾಲಿಗೆ ಇರುತ್ತದೆ. ಸಂಗಾತಿಯ ಮಾತಿಗೆ ಮನ್ನಣೆ ನೀಡುವಂಥವರು. ಸರ್ಕಾರ ಮಟ್ಟದಲ್ಲಿ ಇವರ ಮಾತಿಗೆ, ಶಿಫಾರಸಿಗೆ ಗೌರವ ಇರುವಂಥ ಹುದ್ದೆಯನ್ನು ಪಡೆಯುವಂಥವರು. ದೊಡ್ಡ ದೊಡ್ಡ ಉದ್ಯಮಗಳನ್ನು ನಡೆಸುತ್ತಾರೆ. ಮಾತಾ- ಪಿತೃ ಭಕ್ತಿ, ದೈವ ಭಕ್ತಿ ಹೆಚ್ಚಾಗಿ ಇರುತ್ತದೆ.

ಪುಬ್ಬಾ

ಈ ನಕ್ಷತ್ರದಲ್ಲಿ ಜನಿಸಿದವರು ಸೊಗಸಾದ ಮಾತುಗಾರರು. ಶ್ರೀಮಂತರಿಗೆ ಅಗತ್ಯ ಇರುವ ಕೆಲಸಗಳನ್ನು ಮಾಡಿಕೊಡುತ್ತಾ ಆ ಮೂಲಕವಾಗಿ ಸಮಪಾದನೆ ಮಾರ್ಗ ಮಾಡಿಕೊಳ್ಳುವಂಥವರು. ಇವರಿಗೆ ಸಮಯಕ್ಕೆ ಸರಿಯಾಗಿ ಆಡಬೇಕಾದ ಮಾತು, ನಡವಳಿಕೆ ತುಂಬ ಚೆನ್ನಾಗಿ ಗೊತ್ತಿರುತ್ತದೆ. ಈ ನಕ್ಷತ್ರದ ಪುರುಷರು ಬಹಳ ಆಕರ್ಣೀಯವಾಗಿ ಇರುತ್ತಾರೆ. ವಿಷಯ ಪರಿಣತರಿಂದ ಮಾನ್ಯತೆಯನ್ನು ಪಡೆಯುತ್ತಾರೆ.

ಉತ್ತರಾ ಫಲ್ಗುಣಿ

ಈ ನಕ್ಷತ್ರದಲ್ಲಿ ಜನಿಸಿದವರು ಬಹಳ ಸೂಕ್ಷ್ಮ ಸ್ವಭಾವದವರಾಗಿರುತ್ತಾರೆ. ವಿದ್ಯೆಗೆ ತುಂಬ ಪ್ರಾಮುಖ್ಯ ನೀಡುತ್ತಾರೆ. ಸ್ವತಃ ಇವರಿಗೆ ವಿವಿಧ ವಿಷಯಗಳ ಬಗ್ಗೆ ಆಳವಾದ ಜ್ಞಾನ, ಮಾಹಿತಿ ಇರುತ್ತದೆ. ವಾಹನ, ಸಕಲ ಸವಲತ್ತುಗಳಿಂದ ಕೂಡಿರುವ ಮನೆ, ನೆಮ್ಮದಿವಂತ ಕುಟುಂಬದ ಹಿನ್ನೆಲೆ ಇವರಿಗಿರುತ್ತದೆ. ಯಾರಾದರೂ ಇವರಿಗೆ ಸಹಾಯ ಮಾಡಿದಲ್ಲಿ ಉಪಕಾರ ಸ್ಮರಣೆ ಇರುತ್ತದೆ. ಇತರರನ್ನು ಸಂತೋಷ ಪಡಿಸುವುದನ್ನು ಇಷ್ಟ ಪಡುವಂಥವರು ಇವರು.

ಹಸ್ತಾ

ಈ ನಕ್ಷತ್ರದಲ್ಲಿ ಜನಿಸಿದವರು ಸದಾ ಉತ್ಸಾಹದಿಂದ ಕಂಡು ಬರುತ್ತಾರೆ. ಆಗಾಗ ಏನಾದರೂ ತಿನ್ನುತ್ತಲೇ ಇರುವ, ಪಾನೀಯಗಳನ್ನು ಸೇವಿಸುವುದಕ್ಕೆ ಬಯಸುವಂಥ ಜನ ಇವರು. ಇತರರ ತಪ್ಪುಗಳನ್ನು ಮರೆಯದ, ಕ್ಷಮಿಸದ ಸ್ವಭಾವದವರು. ಹಣ ಕೈಯಲ್ಲಿ ಇರಬೇಕು, ಅಂದರೆ ಹೂಡಿಕೆಗೆ ಎಷ್ಟು ಪ್ರಾಶಸ್ತ್ಯ ನೀಡುತ್ತಾರೋ ಇಲ್ಲವೋ ಅಗತ್ಯ ಬಂದಾಗ ತಕ್ಷಣವೇ ಹಣ ಒದಗಿಬರಬೇಕು ಎಂದು ಯೋಜನೆ ರೂಪಿಸುತ್ತಾರೆ. ಹೊಸ ಹಾಗೂ ಸವಾಲಿನ ಕೆಲಸಗಳನ್ನು ಮಾಡುವುದರಲ್ಲಿ ಆಸಕ್ತಿ ಹೆಚ್ಚಿರುತ್ತದೆ. ಸಮಸ್ಯೆಗಳು ಬಂದಾಗ ಸುಳ್ಳು ಹೇಳಿ ತಪ್ಪಿಸಿಕೊಳ್ಳುವುದರಲ್ಲಿ ನಿಸ್ಸೀಮರು.

ಚಿತ್ತಾ

ಈ ನಕ್ಷತ್ರದವರ ಅಂತರಂಗ ಹೀಗೇ ಎಂದು ಅಂದಾಜಿಸುವುದೇ ಕಷ್ಟ. ಚಿತ್ರ ವಿಚಿತ್ರವಾದ ಉಡುಗೆ- ತೊಡುಗೆಗಳು, ಆಭರಣಗಳನ್ನು ಧರಿಸುವುದಕ್ಕೆ ಇಷ್ಟ ಪಡುವಂಥ ಜನರಿವರು. ಯಾವುದೇ ಕಾರಣಕ್ಕೂ ಎಷ್ಟೇ ಹತ್ತಿರದವರಿಗೂ ಗುಟ್ಟನ್ನು ಬಿಟ್ಟುಕೊಡದ ಸ್ವಭಾವದವರು. ದೈಹಿಕವಾಗಿ ಸ್ವಲ್ಪ ಮಟ್ಟಿಗೆ ಬಲ ಕಡಿಮೆ ಇರುತ್ತದೆ. ಮಾತನಾಡುವ ವಿಚಾರದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಂಥವರು. ಇವರಿಗೆ ದೈವ ಭಕ್ತಿ ಹೆಚ್ಚಾಗಿರುತ್ತದೆ.

ಸ್ವಾತಿ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಎಷ್ಟು ಸಮಯವಾದರೂ ಕಾದು ತಮ್ಮ ಕೆಲಸವನ್ನು ಮುಗಿಸಿಕೊಳ್ಳುವಂಥ ಸಂಯಮ, ತಾಳ್ಮೆ ಇರುತ್ತದೆ. ಒಮ್ಮೆ ಬೇಡ ಅಂದುಕೊಂಡಿದ್ದರ ಕಡೆಗೆ ಮತ್ತೆ ತಲೆ ಹಾಕಿಯೂ ಮಲಗದಂಥ ಕಾಠಿಣ್ಯ ಇವರಲ್ಲಿ ಕಾಣಬಹುದು. ತಮ್ಮ ಪ್ರಿಯವಾದ ಮಾತುಗಳ ಮೂಲಕ ಎಲ್ಲ ಸ್ತರ, ವರ್ಗದ ಸ್ನೇಹಿತರನ್ನು ಹೊಂದಿರುತ್ತಾರೆ. ಯಜ್ಞ- ಯಾಗ, ದೊಡ್ಡ ದೊಡ್ಡ ದೇವತಾ ಆರಾಧನೆಯಲ್ಲಿ ಇವರು ಭಾಗೀ ಆಗುತ್ತಾರೆ. ಧರ್ಮಾಕರ್ಮಗಳ ವಿವೇಚನೆ ಇವರಲ್ಲಿ ಹೆಚ್ಚಾಗಿರುತ್ತದೆ.

ವಿಶಾಖ

ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ವಾಕ್ ಸಾಮರ್ಥ್ಯದಿಂದಾಗಿ ಎಂಥ ವಿಚಾರವನ್ನಾದರೂ ಮತ್ತೊಬ್ಬರಿಗೆ ಮೆಚ್ಚಿಸಬಲ್ಲರು, ಒಪ್ಪಿಸಬಲ್ಲವರಾಗಿರುತ್ತಾರೆ. ಹಣ ಖರ್ಚು ಮಾಡುವಾಗ ಸಾವಿರ ಬಾರಿ ಆಲೋಚನೆ ಮಾಡುತ್ತಾರೆ. ತನಗಿಂತ ಮೇಲ್ ಸ್ತರಕ್ಕೆ ದಾಟಿ ಹೋದವರ ಬಗ್ಗೆ ಅಸೂಯೆ ಪಡುವಂಥವರಾಗಿರುತ್ತಾರೆ. ಲೈಂಗಿಕ ವಿಚಾರದಲ್ಲಿ ಇದು ಸರಿ- ಇದು ತಪ್ಪು ಎಂಬ ವಿವೇಚನೆ ಇಲ್ಲದಂಥವರು. ವಿಪರೀತ ಕೋಪ ಹಾಗೂ ವಿಪರೀತ ಸಮಾಧಾನ ಎರಡೂ ಗುಣಗಳ ಮಿಶ್ರಣ ಇವರಾಗಿರುತ್ತಾರೆ. ಹೆಂಡತಿ ಮಾತಿಗೆ ಭಾರೀ ಮನ್ನಣೆ ನೀಡುತ್ತಾರೆ.

ಅನೂರಾಧ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಸಮಾಧಾನವಾಗಿ ಕೂತು ಆಹಾರ ಸೇವಿಸುವಂಥ ಯೋಗ ಕಡಿಮೆ. ಆ ಸಮಯಕ್ಕೆ ಏನಾದರೊಂದು ಸುದ್ದಿ, ಆತುರದ ಪ್ರಯಾಣ ಬರುತ್ತದೆ. ಇವರಿಗೆ ತಾವು ಜನಿಸಿದ ಸ್ಥಳದಿಂದ ಬೇರೆ ಜಾಗ, ದೇಶದಲ್ಲಿ ನೆಲೆಸುವ ಯೋಗ ಇರುತ್ತದೆ. ಕಲೆಯ ಬಗ್ಗೆ ಆಸಕ್ತಿ ಹಾಗೂ ಸ್ವತಃ ಪರಿಣತಿಯನ್ನು ಪಡೆಯುವ ಸಾಧ್ಯತೆ ಇರುತ್ತದೆ. ಸಮಾಜದಲ್ಲಿ ಇವರಿಗೆ ಹಾಗೂ ಇವರ ಕುಟುಂಬದವರಿಗೆ ಪೂಜ್ಯ ಸ್ಥಾನ ಇರುತ್ತದೆ. ಆದರೆ ದ್ವೇಷಸಾಧನೆ ಮಾಡುವ ಸ್ವಭಾವ ಇವರದಾಗಿರುತ್ತದೆ.

ಜ್ಯೇಷ್ಠಾ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸ್ನೇಹ ಬಳಗ ಇರುವುದಿಲ್ಲ. ಏಕಾಂತದಲ್ಲಿ ಅಥವಾ ಒಂಟಿಯಾಗಿರುವಾಗ ಸಂತೋಷದಿಂದ ಇರುತ್ತಾರೆ. ಆದರೆ ವಿಪರೀತ ಸಿಟ್ಟಿನ ಸ್ವಭಾವ ಇರುತ್ತದೆ. ಇದರಿಂದಲೇ ತಮ್ಮ ಏಳ್ಗೆಗೆ ಸಮಸ್ಯೆ ಮಾಡಿಕೊಳ್ಳುತ್ತಾರೆ. ಯಾರಿಗಾದರೂ ತೊಂದರೆ ನೀಡಬೇಕು ಎಂದು ತೀರ್ಮಾನಿಸಿದರೆ ಕೈ ತೊಳೆದು, ಬೆನ್ನು ಬೀಳುವುದು ಅಂತಾರಲ್ಲ ಹಾಗೆ ಸಿಕ್ಕಾಪಟ್ಟೆ ಕಾಡಿಬಿಡುತ್ತಾರೆ. ಇವರು ಕವಿಗಳಾಗಿಯೂ ಹೆಸರು ಪಡೆಯುವ ಸಾಧ್ಯತೆ ಇರುತ್ತದೆ.

ಮೂಲಾ

ಈ ನಕ್ಷತ್ರದಲ್ಲಿ ಜನಿಸಿದವರು ಮಾನಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಾರೆ. ತಮ್ಮ ಕಷ್ಟಗಳನ್ನು ಹೊರಗೆ ತೋರಿಸಿಕೊಳ್ಳುವುದಕ್ಕೆ ಬಯಸದ ಇವರು, ತಮ್ಮ ಅನುಕೂಲಗಳ ಬಗ್ಗೆಯೇ ಹೇಳಿಕೊಳ್ಳುವ ಮೂಲಕ ಇತರರು ಇವರನ್ನು ತಪ್ಪಾಗಿ ತಿಳಿಯುವಂತೆ ಮಾಡಿಕೊಳ್ಳುತ್ತಾರೆ. ಇವರು ಎಂಥ ಕುಟುಂಬದ ಹಿನ್ನೆಲೆಯಲ್ಲಿ ಇದ್ದರೂ ವಾಹನ ಸೌಖ್ಯ ತುಂಬ ಚೆನ್ನಾಗಿರುತ್ತದೆ. ಸದಾ ಏನಾದರೊಂದು  ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿರುತ್ತಾರೆ. ಎಂಥ ಕೆಟ್ಟ ಸನ್ನಿವೇಶದಲ್ಲಿ ಆತ್ಮವಿಶ್ವಾಸ, ಧೈರ್ಯ ಬಿಟ್ಟುಕೊಡುವುದಿಲ್ಲ.

ಪೂರ್ವಾಷಾಢ

ಈ ನಕ್ಷತ್ರದಲ್ಲಿ ಜನಿಸಿದವರ ಸ್ನೇಹ ವಲಯ ಗಟ್ಟಿಯಾಗಿರುತ್ತದೆ, ಇವರಿಗೆ ಆಪ್ತರಾದವರು ಅಷ್ಟು ಸುಲಭಕ್ಕೆ ದೂರವಾಗಲು ಆಗುವುದಿಲ್ಲ ಅಥವಾ ಇವರು ದೂರ ಆಗುವುದಕ್ಕೆ ಬಿಡುವುದಿಲ್ಲ. ತಮ್ಮ ಮನಸ್ಸಿನಲ್ಲಿ ಇರುವ ವಿಚಾರವನ್ನು ಎದುರಿನಲ್ಲಿ ಇರುವವರಿಗೆ ದಾಟಿಸುವುದರಲ್ಲಿ ಇವರು ಚಾಣಾಕ್ಷರು. ಒಪ್ಪಿಕೊಂಡ ಕೆಲಸವನ್ನು ತುಂಬ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ತಮ್ಮ ಪರಿಚಯಗಳು, ಪ್ರಭಾವದಿಂದಾಗಿ ಜನಪ್ರಿಯರಾಗಿರುತ್ತಾರೆ.

ಉತ್ತರಾಷಾಢ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಎದುರಿನ ವ್ಯಕ್ತಿಯಿಂದ ರಹಸ್ಯಗಳನ್ನು ಹೊರಗೆ ಎಳೆಯುವುದರಲ್ಲಿ ಸಿದ್ಧಹಸ್ತರು. ಇವರಿಗೆ ನೆರವು- ಸಹಾಯ ಮಾಡಿದವರಿಗೆ ತಮ್ಮಿಂದ ಸಾಧ್ಯವಾದಷ್ಟು ಅನುಕೂಲ ಮಾಡಬೇಕು ಎಂದು ಆಲೋಚಿಸುತ್ತಾರೆ. ಕಷ್ಟದಲ್ಲಿ ಇರುವವರ ಬಗ್ಗೆ ದಯಾ ಇರುತ್ತದೆ. ಗುರು- ಹಿರಿಯರಿಗೆ ಗೌರವ ನೀಡುವುದರಲ್ಲಿ ಬಹಳ ನಿರ್ದಿಷ್ಟ ಆಲೋಚನೆ ಇರುತ್ತದೆ. ಸಭೆ- ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಸಂಘಟನಾತ್ಮಕವಾಗಿ ಚಟುವಟಿಕೆಯಿಂದ ಇರುತ್ತಾರೆ.

ಶ್ರವಣ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಕೇಳಿಸಿಕೊಳ್ಳುವ ತಾಳ್ಮೆ, ಕುತೂಹಲ ಜಾಸ್ತಿ ಇರುತ್ತದೆ. ಮಿತ್ರರನ್ನು ಆರಿಸಿಕೊಳ್ಳುವ ವಿಚಾರದಲ್ಲಿ ಎಚ್ಚರಿಕೆಯಿಂದ ಇರುತ್ತಾರೆ. ಕುಟುಂಬಕ್ಕೆ ಮೊದಲ ಪ್ರಾಶಸ್ತ್ಯ ನೀಡುತ್ತಾರೆ. ತಮ್ಮ ವ್ಯಾಪ್ತಿಯೊಳಗೆ ಖ್ಯಾತರಾಗಿರುತ್ತಾರೆ. ಮಾನಸಿಕವಾಗಿ ಸ್ಥಿರತೆ ಸಾಧಿಸುವುದು ಇವರಿಗೆ ಸವಾಲಿನ ವಿಷಯವಾಗಿರುತ್ತದೆ. ಯಾವುದೇ ಕೆಲಸದಲ್ಲಿ ಆರಂಭದಲ್ಲಿ ಇರುವ ಉತ್ಸಾಹ ಅಂತಿಮ ಹಂತದ ತನಕ ಉಳಿಸಿಕೊಳ್ಳುವುದು ಮುಖ್ಯ.

ಧನಿಷ್ಠಾ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹಣದ ಪ್ರಾಮುಖ್ಯ ಜಾಸ್ತಿ. ದುಡಿಮೆಗೆ ಯಾವುದೆಲ್ಲ ದಾರಿ ಇದೆ, ತಮ್ಮ ಹೆಸರನ್ನೇ ಬ್ರ್ಯಾಂಡ್ ಆಗಿ ಮಾಡುವುದು ಹೇಗೆ ಎಂಬುದರ ಬಗ್ಗೆ ಸದಾ ಆಲೋಚನೆ ಮಾಡುತ್ತಾ ಇರುತ್ತಾರೆ. ತಮ್ಮ ಒಟ್ಟು ದುಡಿಮೆಯಲ್ಲಿ ಒಂದಿಷ್ಟು ಅಂಶವನ್ನಾದರೂ ದಾನ ಕಾರ್ಯಗಳಿಗಾಗಿ ಮೀಸಲಿಡಬೇಕು ಎಂದುಕೊಳ್ಳುತ್ತಾರೆ. ವಯಸ್ಸಾದವರು, ಆಶಕ್ತರಿಗೆ ಹೇಗಾದರೂ ಸೇವೆ ಸಲ್ಲಿಸಬೇಕು ಎಂದು ಚಿಂತಿಸುವ ಇವರು, ಭವಿಷ್ಯಕ್ಕಾಗಿ ಉಳಿತಾಯ ಮಾಡುವುದು ಆತ್ಮಗೌರವ ಕಾಪಾಡಿಕೊಳ್ಳುವುದಕ್ಕಾಗಿ ಎಂದುಕೊಳ್ಳುತ್ತಾರೆ.

ಶತಭಿಷಾ

ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಅಗತ್ಯಗಳು ಹಾಗೂ ಬೇಡವಾದದ್ದರ ಬಗ್ಗೆ ತುಂಬ ಸ್ಪಷ್ಟವಾಗಿರುತ್ತಾರೆ. ಇವರು ಸಾಮಾನ್ಯವಾಗಿ ತಮ್ಮ ಮುಂದಿನ ಯೋಜನೆಗಳ ಗುಟ್ಟನ್ನು ಯಾರಿಗೂ ಬಿಟ್ಟುಕೊಡುವುದಿಲ್ಲ. ಅಷ್ಟೇ ಅಲ್ಲ, ಇವರು ಮುಂದೇನು ಮಾಡುತ್ತಾರೆ ಎಂದು ಅಂದಾಜು ಮಾಡುವುದು ಸಹ ಕಷ್ಟ. ತನಗೆ ಅನುಕೂಲ ಆಗುವಂಥ ಕೆಲಸಗಳನ್ನು ಮಾತ್ರ ಮಾಡುವಂಥ ಲೆಕ್ಕಾಚಾರದ ವ್ಯಕ್ತಿಗಳು ಇವರು. ತಲೆನೋವು, ಶೀತಸಮಸ್ಯೆ ಇವರನ್ನು ಕಾಡುತ್ತದೆ.

ಪೂರ್ವಾಭಾದ್ರ

ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಸಿಟ್ಟಿನ ಕಾರಣಕ್ಕೆ ಪದೇಪದೇ ತಪ್ಪುಗಳನ್ನು ಮಾಡುತ್ತಾರೆ. ಪುರುಷರು ಸ್ತ್ರೀಯರ ವಿಚಾರದಲ್ಲಿ ಆತ್ಮಾಭಿಮಾನಕ್ಕೆ ಪೆಟ್ಟು ಬೀಳುವಂಥ ಅನುಭವವೊಂದು ಪಡೆಯುತ್ತಾರೆ. ಇವರಿಗೆ ಹಣಕಾಸಿನ ಹರಿವಿಗೆ ಸಮಸ್ಯೆ ಆಗುವುದಿಲ್ಲ. ಹಣದ ಅಗತ್ಯ ಇದ್ದಾಗ ಸ್ನೇಹಿತರೋ ಸಂಬಂಧಿಕರೋ ಯಾರಿಂದಲಾದರೂ ದೊರೆಯುತ್ತದೆ.ಇತರರಿಗೆ ಇವರು ಸಹಾಯ ಮಾಡಬೇಕು ಅಂದರೆ ಹತ್ತಾರು ಬಾರಿ ಆಲೋಚಿಸುತ್ತಾರೆ. ಕಾರ್ಯತಂತ್ರ ಹೆಣೆಯುವುದರಲ್ಲಿ ಇವರು ನಿಷ್ಣಾತರು. ವಿವಾದಗಳಿಂದ ದೂರ ಇರುವುದಕ್ಕೆ ಬಯಸುತ್ತಾರೆ.

ಉತ್ತರಾಭಾದ್ರ

ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಜೀವನದುದ್ದಕ್ಕೂ ಹಣಕಾಸಿನ ಏರಿಳಿತ ಕಾಣುತ್ತಲೇ ಇರುತ್ತಾರೆ. ಆದರೆ ಧಾರ್ಮಿಕ ವ್ಯಕ್ತಿಗಳಾಗಿರುತ್ತಾರೆ, ಅಧ್ಯಾತ್ಮದ ಬಗ್ಗೆ ಆಸಕ್ತಿ ಹೆಚ್ಚಾಗಿರುತ್ತದೆ. ಇವರು ಆಲಸಿಗರಾಗುತ್ತಾರೆ. ತಮಗೆ ಏನು ದೊರೆಯುತ್ತದೋ ಅದರ ಬಗ್ಗೆ ಧನ್ಯತಾ ಭಾವ ಇವರಲ್ಲಿ ಇರುತ್ತದೆ. ಶತ್ರುಗಳು ಸಹ ಇವರು ನಡೆದುಕೊಳ್ಳುವ ರೀತಿಗೆ ಮೆಚ್ಚುಗೆ ಸೂಚಿಸುತ್ತಾರೆ. ಹೊಸ ಕೆಲಸಗಳನ್ನು ಮಾಡುವುದರಲ್ಲಿ, ತಾವು ಆ ತನಕ ಮಾಡದ ಸವಾಲಿನ ಕೆಲಸಗಳ ಬಗ್ಗೆ ಆಸಕ್ತಿ ಇರುತ್ತದೆ.

ರೇವತಿ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ವಿದೇಶಗಳಲ್ಲಿ ಪ್ರವಾಸ ಮಾಡುವುದು ಇಷ್ಟವಾಗುತ್ತದೆ. ಪ್ರತಿಸ್ಪರ್ಧಿಗಳು ಹೂಡಿರುವ ತಂತ್ರಕ್ಕೆ ಪ್ರತಿ ತಂತ್ರ ರೂಪಿಸುವುದರಲ್ಲಿ ಇವರು ಬಹಳ ನಿಷ್ಣಾತರಾಗಿರುತ್ತಾರೆ. ಇವರ ಕೈಯಲ್ಲಿ ಹಣ ಇದ್ದರೆ ಅದರ ಖರ್ಚನ್ನು ಅಥವಾ ವಿತರಣೆಯನ್ನು ಮಾಡುವುದರಲ್ಲಿ ಚಂಚಲತೆ ಕಾಡುತ್ತದೆ. ಆದರೆ ತೀರ್ಮಾನಗಳನ್ನು ಜಾರಿಗೆ ತರುವುದರಲ್ಲಿ ಮನಸ್ಸನ್ನು ಹತೋಟಿಗೆ ಇರಿಸಿಕೊಳ್ಳಬಲ್ಲರು. ಬಹಳ ವೇಗವಾಗಿ ನಿರ್ಧಾರಗಳನ್ನು ಮಾಡುತ್ತಾರೆ. ಇವರೊಂದಿಗಿನ ಜಗಳ ಬಹಳ ಅಪಾಯಕಾರಿ.

ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.

Latest News

Related Posts