ತೆಲುಗು ಭಾಷಿಕ ರಾಜ್ಯಗಳಲ್ಲಿ ಖ್ಯಾತಿ ಗಳಿಸಿರುವಂಥ ಜ್ಯೋತಿಷಿ ವೇಣುಸ್ವಾಮಿ ಅವರು ಜೂನ್ 2, 2026 ರಿಂದ ಆರಂಭವಾಗುವ ‘ಗುರು ಅತಿಚಾರ’ದ (ಗುರು ಗ್ರಹವು ಅತಿ ವೇಗವಾಗಿ ಮೂರು ರಾಶಿಗಳಲ್ಲಿ ಸಂಚರಿಸುವ ಪ್ರಕ್ರಿಯೆ) ಪ್ರಭಾವದ ಕುರಿತು ಸುದೀರ್ಘ ಹಾಗೂ ಸಂಚಲನಾತ್ಮಕ ಭವಿಷ್ಯ ನುಡಿದಿದ್ದಾರೆ. ಜೂನ್ 2 ರಿಂದ ಗುರು ಕರ್ಕಾಟಕ ರಾಶಿಗೂ ಅಕ್ಟೋಬರ್ 31ಕ್ಕೆ ಸಿಂಹ ರಾಶಿಗೂ ಪ್ರವೇಶಿಸಿ, ಆ ನಂತರ ಜನವರಿ 27, 2027ಕ್ಕೆ ಮತ್ತೆ ಕರ್ಕಾಟಕ ರಾಶಿಗೆ ಮರಳಲಿದ್ದಾನೆ. ಈ ಅತಿಚಾರದ ಪ್ರಭಾವವು ಮುಂದಿನ 6 ರಿಂದ 8 ವರ್ಷಗಳ ಕಾಲ ಇರಲಿದ್ದು, ಜಾಗತಿಕವಾಗಿ ಅನೇಕ ಏರುಪೇರುಗಳನ್ನು ಉಂಟುಮಾಡಲಿದೆ.
ಅವರು ನುಡಿದಿರುವ ಎಲ್ಲ ಪ್ರಮುಖ ಭವಿಷ್ಯಗಳ ವಿವರವಾದ ಪಟ್ಟಿ ಇಲ್ಲಿದೆ:
1. ಚಿನ್ನ, ಬೆಳ್ಳಿ ಮತ್ತು ಆರ್ಥಿಕ ಮಾರುಕಟ್ಟೆ
- ಚಿನ್ನದ ದರದಲ್ಲಿ ದಾಖಲೆ: ಗುರು ಗ್ರಹದ ಧಾತು ಚಿನ್ನವಾಗಿರುವುದರಿಂದ 2027ರ ಮೇ ತಿಂಗಳೊಳಗೆ ಬಂಗಾರದ ಬೆಲೆ ಪ್ರತಿ 10 ಗ್ರಾಂಗೆ 2,15,000 ರೂಪಾಯಿ ದಾಟಲಿದೆ. ಹಾಗೂ 2030ರ ಕೊನೆಯ ವೇಳೆಗೆ ಬಂಗಾರದ ಬೆಲೆ ಭಾರಿ ಏರಿಕೆ ಕಂಡು 5 ಲಕ್ಷ ರೂಪಾಯಿ ತಲುಪುವ ಸಾಧ್ಯತೆಯಿದೆ.
- ಹೂಡಿಕೆಗೆ ಸುವರ್ಣಾವಕಾಶ: 2026ರ ವರ್ಷವು ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡಲು ಅತ್ಯಂತ ಅನುಕೂಲಕರವಾಗಿದೆ. ಇದರಲ್ಲಿ ಹೂಡಿಕೆ ಮಾಡಿದರೆ ಭವಿಷ್ಯದಲ್ಲಿ ಭಾರಿ ಲಾಭ ಸಿಗಲಿದೆ.
- ರೂಪಾಯಿ ಪತನ: 2030ರ ಒಳಗಾಗಿ ಭಾರತೀಯ ರೂಪಾಯಿ ಮೌಲ್ಯ ತೀವ್ರವಾಗಿ ಕುಸಿಯಲಿದ್ದು, ಅಮೆರಿಕನ್ ಡಾಲರ್ ಎದುರು 130 ರೂಪಾಯಿ ತಲುಪಲಿದೆ.
- ಆರ್ಥಿಕ ಹಿಂಜರಿತ: ಭಾರತವನ್ನು ತೀವ್ರ ಆರ್ಥಿಕ ಹಿಂಜರಿತ (Economic Recession) ಬಾಧಿಸಲಿದೆ.
2. ಅಂತಾರಾಷ್ಟ್ರೀಯ ರಾಜಕೀಯ ಮತ್ತು ವಿದ್ಯಮಾನಗಳು
- ಅಮೆರಿಕ ಒಕ್ಕೂಟದ ವಿಭಜನೆ: 50 ರಾಜ್ಯಗಳನ್ನು ಒಳಗೊಂಡಿರುವ ಅಮೆರಿಕ ಸಂಯುಕ್ತ ಸಂಸ್ಥಾನವು ಭವಿಷ್ಯದಲ್ಲಿ ಒಂದಾಗಿ ಉಳಿಯುವುದಿಲ್ಲ. ಅದರಿಂದ 2 ರಿಂದ 3 ರಾಜ್ಯಗಳು ಹೊರಬರಲಿವೆ.
- ಡೊನಾಲ್ಡ್ ಟ್ರಂಪ್‌ಗೆ ಪರಾಭವ: 2026ರ ನವೆಂಬರ್ ನಂತರ ಟ್ರಂಪ್ ನಿರ್ಧಾರಗಳಿಂದಾಗಿ ಅವರ ವಿರುದ್ಧ ಅಮೆರಿಕದ ಜನರೇ ಬೀದಿಗಿಳಿದು ಪ್ರತಿಭಟನೆ ಮಾಡಲಿದ್ದಾರೆ. ಚಂದ್ರ ಮಹಾದಶೆಯಲ್ಲಿರುವ ಟ್ರಂಪ್‌ಗೆ ಭಾರಿ ಅಪಮಾನ ಕಾದಿದೆ. ಅಷ್ಟೇ ಅಲ್ಲದೆ, 2027ರ ಸೆಪ್ಟೆಂಬರ್ ಒಳಗಾಗಿ ಅವರಿಗೆ ಪ್ರಾಣಗಂಡ ಅಥವಾ ಪದವಿಗಂಡ ಎದುರಾಗಲಿದೆ.
- ಅಮೆರಿಕಕ್ಕೆ ಹೊಸ ನಾಯಕಿ: ಮುಂದಿನ ದಿನಗಳಲ್ಲಿ ಅಮೆರಿಕ ರಾಜಕಾರಣದಲ್ಲಿ ಡೆಮೋಕ್ರಾಟಿಕ್ ಪಕ್ಷದ ಮಹಿಳಾ ಅಭ್ಯರ್ಥಿ ‘ಅಲೆಕ್ಜಾಂಡ್ರಿಯಾ ಒಕಾಸಿಯೊ-ಕಾರ್ಟೆಜ್’ (AOC) ಅವರಿಗೆ ವಿಪರೀತ ಕ್ರೇಜ್ ಮತ್ತು ಜನಪ್ರಿಯತೆ ಸೃಷ್ಟಿಯಾಗಲಿದೆ.
- ಶತ್ರುಗಳ ಒಕ್ಕೂಟ: ಭಾರತದ ಶತ್ರು ರಾಷ್ಟ್ರಗಳಾದ ಅಮೆರಿಕ, ಇರಾನ್ ಮತ್ತು ಚೀನಾ ಮೂರೂ ಒಂದಾಗಿ ಮೈತ್ರಿ ಮಾಡಿಕೊಂಡು ಭಾರತದ ವಿರುದ್ಧ ಕೆಲಸ ಮಾಡಲಿವೆ.
- ಭಾರತ-ಪಾಕ್ ಯುದ್ಧ ಮತ್ತು PoK ವಶ: ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧ ನಡೆಯುವ ಸಾಧ್ಯತೆಗಳಿದ್ದು, ಅತ್ಯಂತ ಸಂತೋಷದ ವಿಷಯವೆಂದರೆ ಪಾಕ್ ಆಕ್ರಮಿತ ಕಾಶ್ಮೀರ (PoK) ಭಾರತದ ವಶವಾಗಲಿದೆ.
ವೈಭವ್ ಸೂರ್ಯವಂಶಿ ಜಾತಕ ವಿಶ್ಲೇಷಣೆ: ವೇಣು ಸ್ವಾಮಿ ನುಡಿದ ಭವಿಷ್ಯವೇನು?
3. ಭಾರತದ ರಾಜಕೀಯ ಮತ್ತು ವಿಐಪಿಗಳ ಭವಿಷ್ಯ
- ಉತ್ತರ ಪ್ರದೇಶ ಚುನಾವಣೆ: 2027ರ ಯುಪಿ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಗೆಲ್ಲುವುದು ನಿಶ್ಚಿತ. ಆದರೆ ಯೋಗಿ ಆದಿತ್ಯನಾಥ್ ಅವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ.
- ಮುಖ್ಯಮಂತ್ರಿಗಳ ಬದಲಾವಣೆ: ದೇಶದ ಪ್ರಮುಖ ರಾಜಕೀಯ ನಾಯಕರೊಬ್ಬರ ರಾಜೀನಾಮೆ ನಡೆಯಲಿದೆ. ದಿಲ್ಲಿಯ ರೇಖಾ ಗುಪ್ತಾ ಹಾಗೂ ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮ ಅವರಿಗೆ ಪದವಿಗಂಡವಿದ್ದು, ಪ್ರಮುಖ ರಾಜ್ಯಗಳ ಮುಖ್ಯಮಂತ್ರಿಗಳ ಬದಲಾವಣೆಯಾಗಲಿದೆ.
- ತಮಿಳುನಾಡು ಮತ್ತು ವಿಜಯ್: ತಮಿಳುನಾಡು ಮುಖ್ಯಮಂತ್ರಿ ನಟ ವಿಜಯ್ ಅವರಿಗೆ ತೀವ್ರ ಸಮಸ್ಯೆಗಳು ಹಾಗೂ ಸ್ತ್ರೀಮೂಲಕ ಇಬ್ಬಂದಿಗಳು ಎದುರಾಗಲಿವೆ. 2027ರ ಆಸುಪಾಸಿನಲ್ಲಿ ತಮಿಳುನಾಡಿನಲ್ಲಿ ಮತ್ತೆ ಅವಧಿಪೂರ್ವ ಚುನಾವಣೆಗಳು ನಡೆಯುವ ಸಾಧ್ಯತೆಯಿದೆ.
- ಮಮತಾ ಬ್ಯಾನರ್ಜಿ: ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರಿಗೆ ಜೈಲು ಜೀವನ ಅಥವಾ ಪ್ರಾಣಗಂಡ ನಿಶ್ಚಿತವಾಗಿ ಗೋಚರಿಸುತ್ತಿದೆ. ಜೊತೆಗೆ ಬಂಗಾಳದಲ್ಲಿ ಭಾರಿ ಅಶಾಂತಿ, ಹಿಂಸಾಚಾರಗಳು ಉಂಟಾಗಲಿವೆ.
- ಕೇಂದ್ರ ಸಚಿವರ ಬಲವರ್ಧನೆ: ಕೇಂದ್ರ ಸಚಿವರಾದ ಎಸ್. ಜೈಶಂಕರ್ ಮತ್ತು ಅಜಿತ್ ದೋವಲ್ ಅವರ ಪ್ರಾಧಾನ್ಯ ಹೆಚ್ಚಲಿದ್ದು, ಅವರು ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯಲಿದ್ದಾರೆ.
- ಪ್ರಮುಖರ ಅನಾರೋಗ್ಯ ಮತ್ತು ಸಾವು: 2027ರ ಅಂತ್ಯದೊಳಗೆ ನಟರಾದ ಅಮಿತಾಬ್ ಬಚ್ಚನ್, ರಜನಿಕಾಂತ್ ಮತ್ತು ಸಲ್ಮಾನ್ ಖಾನ್ ಅವರಿಗೆ ತೀವ್ರ ಆರೋಗ್ಯದ ತೊಂದರೆಗಳು ಕಾಡಲಿವೆ. ಉದ್ಯಮಿ ಅನಂತ್ ಅಂಬಾನಿ ಅವರಿಗೂ ಆರೋಗ್ಯದ ಸಮಸ್ಯೆ ಕಾಡಲಿದೆ. ದೇಶದ ಅತ್ಯಂತ ಪ್ರಮುಖ ವ್ಯಕ್ತಿಯೊಬ್ಬರ ಮರಣದಿಂದಾಗಿ ಇಡೀ ದೇಶದ ಜನತೆ ಬೀದಿಗಿಳಿಯುವ ಪರಿಸ್ಥಿತಿ ಬರಲಿದೆ.
4. ದೇಶದಲ್ಲಿ ಹಗರಣಗಳು, ಡಿಜಿಟಲ್ ಕ್ರಾಶ್ ಮತ್ತು ಜನಜೀವನ
- ಬ್ಯಾಂಕಿಂಗ್ ಮತ್ತು ಲಾಕರ್ ಹಗರಣ: ಮುಂದಿನ 10 ತಿಂಗಳಲ್ಲಿ ರಾಜಕಾರಣಿಯೊಬ್ಬರ ದೊಡ್ಡ ಆರ್ಥಿಕ ಹಗರಣ ಬಯಲಾಗುತ್ತದೆ. ಭಾರತದ ಎರಡು ಪ್ರಮುಖ ಬ್ಯಾಂಕುಗಳ ನಡುವಿನ ವಂಚನೆಗಳು ಮತ್ತು ಬ್ಯಾಂಕ್ ಲಾಕರ್‌ಗಳಲ್ಲಿಟ್ಟಿರುವ ನಗದು, ಚಿನ್ನ ಮಾಯವಾಗುವ ದೊಡ್ಡ ಸೌಂಡ್ ಮಾಡುವ ಹಗರಣಗಳು ಹೊರಬರಲಿವೆ.
- ನೋಟು ರದ್ದು ಮತ್ತು ಪ್ಲಾಸ್ಟಿಕ್ ಕರೆನ್ಸಿ: 2027ರ ಕೊನೆಯೊಳಗೆ ಪ್ರಸ್ತುತ ಚಲಾವಣೆಯಲ್ಲಿರುವ 500 ರೂಪಾಯಿ ನೋಟು ರದ್ದಾಗಲಿದೆ ಅಥವಾ ಅದರ ಮೇಲಿರುವ ಮಹಾತ್ಮ ಗಾಂಧೀಜಿಯವರ ಚಿತ್ರದ ಬದಲಿ ಬೇರೆ ಚಿತ್ರ ಬರಲಿದೆ. ಮುಂದಿನ ದಿನಗಳಲ್ಲಿ ಭಾರತದಲ್ಲಿ ಪ್ಲಾಸ್ಟಿಕ್ ಕರೆನ್ಸಿ ಪ್ರಾಮುಖ್ಯತೆ ಪಡೆಯಲಿದೆ.
- ಇಂಟರ್ ನೆಟ್ ಸ್ಥಗಿತ: ದೇಶದಲ್ಲಿ ಇಂಟರ್ ನೆಟ್ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಭೀತಿಯಿದೆ. ಇದರಿಂದ ಡಿಜಿಟಲ್ ಕರೆನ್ಸಿ (UPI) ಕೆಲಸ ಮಾಡುವುದಿಲ್ಲ. ಆದ್ದರಿಂದ ಮಧ್ಯಮ ವರ್ಗದ ಜನರು ತಮ್ಮ ಬಳಿ ತುರ್ತು ಖರ್ಚಿಗೆ ‘ಲಿಕ್ವಿಡ್ ಕ್ಯಾಶ್’ (ನಗದು ಹಣ), ಚಿನ್ನ ಮತ್ತು ಬೆಳ್ಳಿಯನ್ನು ಮನೆಯಲ್ಲೇ ಇಟ್ಟುಕೊಳ್ಳುವುದು ಅತ್ಯಗತ್ಯ.
- ತೀವ್ರ ಕೊರತೆ: 2028ರ ವೇಳೆಗೆ ದೇಶದಲ್ಲಿ ಭೀಕರ ಆಹಾರ ಧಾನ್ಯಗಳ ಕೊರತೆ, ಖಾದ್ಯ ತೈಲ (ಅಡುಗೆ ಎಣ್ಣೆ), ಪೆಟ್ರೋಲ್, ಡೀಸೆಲ್ ಮತ್ತು ವಿದ್ಯುತ್ ಕೊರತೆ ಉಂಟಾಗಲಿದೆ. ಜನರು ಸೋಲಾರ್ ವಿದ್ಯುತ್, ಗ್ಯಾಸ್ ಮುಂತಾದ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವುದು ಒಳ್ಳೆಯದು.
ನಕ್ಷತ್ರ ದೋಷ ನಿವಾರಿಸುವ ಅಪರೂಪದ ಮುರುಗನ ಸನ್ನಿಧಿ: ತಮಿಳುನಾಡಿನ ಚೆಯ್ಯೂರು ಕಂದಸ್ವಾಮಿ ದೇವಸ್ಥಾನ
5. ಅಪಘಾತಗಳು, ಉಗ್ರರ ದಾಳಿ ಮತ್ತು ಪ್ರಕೃತಿ ವಿಕೋಪ
- ಭೀಕರ ಭೂಕಂಪ: 2030ರಲ್ಲಿ ಶನಿ ಗ್ರಹವು ರೋಹಿಣಿ ನಕ್ಷತ್ರಕ್ಕೆ ಪ್ರವೇಶ ಮಾಡುವುದರಿಂದ ಅಮೆರಿಕ ಮತ್ತು ಭಾರತ ದೇಶಗಳನ್ನು ಅತ್ಯಂತ ವಿನಾಶಕಾರಿ ಭೂಕಂಪಗಳು ಕಾಡಲಿವೆ.
- ಜಲಪ್ರಳಯ: ಪ್ರಸ್ತುತ ಭಾರತದ ಜಾತಕದಲ್ಲಿ ಕುಜ ಮಹಾದಶೆ ಹಾಗೂ ನರೇಂದ್ರ ಮೋದಿ ಅವರ ಜಾತಕದಲ್ಲಿ ಚಂದ್ರ ಮಹಾದಶೆ ನಡೆಯುತ್ತಿದೆ. ಕುಜನ ಪ್ರಭಾವದಿಂದಾಗಿ ಧಾರ್ಮಿಕ ಕ್ಷೇತ್ರಗಳಾದ ಉತ್ತರಾಖಂಡದ ಕೇದಾರ್‌ನಾಥ್, ಬದ್ರೀನಾಥ್ ಮುಂತಾದ ಕಡೆ ಜಲಪ್ರಳಯ ಅಥವಾ ಭೀಕರ ಪ್ರವಾಹ ಉಂಟಾಗಿ ಭಾರಿ ಜನಹಾನಿ ಸಂಭವಿಸಲಿದೆ.
- ವಿಮಾನ ಮತ್ತು ವಾಹನ ಅಪಘಾತಗಳು: ಮುಂದಿನ ಆರು ತಿಂಗಳ ಕಾಲ ವಿಮಾನ ಅಪಘಾತಗಳ ಸರಣಿ ನಡೆಯುವ ಸಾಧ್ಯತೆಯಿದೆ. ಜನರು ಬೈಕ್, ಕಾರ್‌ಗಳಲ್ಲಿ ಅತಿವೇಗವಾಗಿ ಚಲಿಸುವುದನ್ನು ಬಿಟ್ಟು ಹೆಲ್ಮೆಟ್ ಧರಿಸಿ ಜಾಗರೂಕರಾಗಿರಬೇಕು.
- ಉಗ್ರಗಾಮಿ ದಾಳಿ: ಕಾಶ್ಮೀರ, ಪಂಜಾಬ್ ಹಾಗೂ ದಕ್ಷಿಣ ಭಾರತದ ಕೆಲವು ಪ್ರಮುಖ ಪ್ರದೇಶಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆಯುವ ಮುನ್ಸೂಚನೆ ಇದೆ.
- ಹೊಸ ಸಾಂಕ್ರಾಮಿಕ ರೋಗ: 2020ರಲ್ಲಿ ಕಾಡಿದ್ದ ಕರೋನದಂತಹ ಮತ್ತೊಂದು ಭೀಕರ ಉಪದ್ರವ ಅಥವಾ ಸಾಂಕ್ರಾಮಿಕ ರೋಗ ಇಡೀ ಪ್ರಪಂಚವನ್ನು ಕಾಡಲಿದೆ.
6. ಮಾಧ್ಯಮ, ಸಿನಿಮಾ ರಂಗ ಮತ್ತು ಕೌಟುಂಬಿಕ ಎಚ್ಚರಿಕೆ
- ಚಿತ್ರರಂಗ ದಿವಾಳಿ: ತೆಲುಗು ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಶೇ 90 ರಷ್ಟು ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಗಳು ಆರ್ಥಿಕ ನಷ್ಟ ಅನುಭವಿಸಿ ದಿವಾಳಿಯಾಗಲಿವೆ.
- ಸಂತಾನದಿಂದ ಅವಮಾನ: ಸಿನಿಮಾ ರಂಗ, ರಾಜಕೀಯ ಮತ್ತು ಉದ್ಯಮಿಗಳ ಕುಟುಂಬದಲ್ಲಿರುವ 21 ವರ್ಷದೊಳಗಿನ ಮಕ್ಕಳ ನಡವಳಿಕೆಯಿಂದ ಆ ಕುಟುಂಬಗಳ ಗೌರವ ಹರಾಜಾಗಲಿದೆ, ದೊಡ್ಡ ಮಟ್ಟದ ಕೇಸುಗಳಾಗಲಿವೆ. ಹಾಗೆಯೇ 18 ವರ್ಷದೊಳಗಿನ ಮಕ್ಕಳಿರುವ ಪೋಷಕರು ತಮ್ಮ ಮಕ್ಕಳ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು.
- ಮಾಧ್ಯಮ ಮತ್ತು ಇನ್ ಫ್ಲುಯೆನ್ಸರ್‌ಗಳಿಗೆ ಜೈಲು: ತೆಲುಗು ಹಾಗೂ ದಕ್ಷಿಣ ಭಾರತದ ಮೇನ್‌ಸ್ಟ್ರೀಮ್ ಮೀಡಿಯಾ, ಸೋಶಿಯಲ್ ಮೀಡಿಯಾ ಜರ್ನಲಿಸ್ಟ್‌ಗಳು, ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಇನ್ ಫ್ಲುಯೆನ್ಸರ್‌ಗಳು ಇನ್ಮುಂದೆ ಮಾತನಾಡುವಾಗ ಎಚ್ಚರ ತಪ್ಪಿದರೆ ಹತ್ತಾರು ಕೇಸುಗಳಾಗಿ ಜೈಲು ಪಾಲಾಗಲಿದ್ದಾರೆ. ಟಿವಿ ಚಾನೆಲ್ ಮಾಲೀಕರು ಮತ್ತು ಪತ್ರಕರ್ತರು ಜೈಲಿಗೆ ಹೋಗಲಿದ್ದಾರೆ. ಮುಂದೆ ಜನ ಮಾಧ್ಯಮಗಳ ಸುದ್ದಿಯನ್ನೇ ನಂಬದ ಪರಿಸ್ಥಿತಿ ಬರಲಿದೆ.
- ಬ್ಲಾಕ್‌ಮೇಲರ್‌ಗಳಿಗೆ ಶಿಕ್ಷೆ: ಇತರೆ ಜನರ ವೈಯಕ್ತಿಕ ಚಾಟ್, ವೀಡಿಯೋ, ರಹಸ್ಯಗಳನ್ನು ಸೇವ್ ಮಾಡಿಟ್ಟುಕೊಂಡು ಭವಿಷ್ಯದಲ್ಲಿ ಬ್ಲಾಕ್‌ಮೇಲ್ ಮಾಡಲು ಯತ್ನಿಸುವ ಹುಡುಗ-ಹುಡುಗಿಯರಿಗೆ ಈ ವರ್ಷದಿಂದ ಭಾರಿ ಸಂಕಷ್ಟ ಕಾದಿದೆ. ಆ ವೀಡಿಯೋಗಳೇ ಅವರನ್ನು ಬೀದಿಗೆ ತರಲಿವೆ, ಆದ್ದರಿಂದ ತಕ್ಷಣ ಅಂಥವುಗಳನ್ನು ಡಿಲೀಟ್ ಮಾಡುವುದು ಕ್ಷೇಮ.
7. ರಾಶಿ ಭವಿಷ್ಯ ಮತ್ತು ಪರಿಹಾರಗಳು
- ಅಶುಭ ಮತ್ತು ಕಷ್ಟದ ರಾಶಿಗಳು: ಗುರು ಅತಿಚಾರದ ಕಾರಣದಿಂದ ಮೇಷ, ಸಿಂಹ, ಕುಂಭ ಮತ್ತು ಮೀನ ರಾಶಿಯವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ, ನ್ಯಾಯಾಲಯದ ವಿಷಯಗಳಲ್ಲಿ ಮತ್ತು ಕೌಟುಂಬಿಕವಾಗಿ ಭಾರಿ ಕಷ್ಟಗಳು, ಸವಾಲುಗಳು ಎದುರಾಗಲಿವೆ.
- ಹೆಸರಿನ ಅಕ್ಷರಗಳ ಎಚ್ಚರಿಕೆ: A, C, D, L, M, R, S, T ಈ ಅಕ್ಷರಗಳಿಂದ ಹೆಸರು ಆರಂಭವಾಗುವ ವ್ಯಕ್ತಿಗಳಿಗೆ, ರಾಜ್ಯಗಳಿಗೆ ಮತ್ತು ದೇಶಗಳಿಗೆ ತೀವ್ರ ತೊಂದರೆಗಳು ಬರಲಿವೆ.
- ಶುಭ ರಾಶಿಗಳು: ವೃಷಭ, ಮಿಥುನ, ಕರ್ಕಾಟಕ ಮತ್ತು ತುಲಾ ರಾಶಿಯವರಿಗೆ ಈ ಅವಧಿಯು ಅತ್ಯಂತ ಶುಭದಾಯಕ ಹಾಗೂ ಲಾಭದಾಯಕವಾಗಿರುತ್ತದೆ. ಉಳಿದ ರಾಶಿಗಳಿಗೆ ಮಧ್ಯಮ ಫಲವಿರಲಿದೆ.
ಮಲಗಿರುವ ಶಿವನ ಅಪರೂಪದ ದೇವಸ್ಥಾನ: ಸುರುಟಪಲ್ಲಿ ಪಳ್ಳಿಕೊಂಡೇಶ್ವರ ಸ್ವಾಮಿ ದೇವಾಲಯದ ವಿಶೇಷಗಳು
ವೇಣುಸ್ವಾಮಿ ಅವರು ಸೂಚಿಸಿರುವ ಸರಳ ಪರಿಹಾರಗಳು:
- ಗಡಿಯಾರ ಬದಲಿಸಿ: ಜೂನ್ 2ರ ನಂತರ ಮನೆಯಲ್ಲಿ ಯಾವುದೇ ಗಡಿಯಾರಗಳು (Clock) ನಿಂತುಹೋಗದಂತೆ ನೋಡಿಕೊಳ್ಳಿ. ನಿಂತ ಗಡಿಯಾರಗಳನ್ನು ಬಳಸಬೇಡಿ, ಸಾಧ್ಯವಾದರೆ ಹೊಸ ಕೈ ಗಡಿಯಾರ (Watch) ಕೊಂಡು ಧರಿಸಿ. ನಿಮ್ಮ ಮನೆಯ ಸಮಯ ಸರಿಯಾಗಿದ್ದರೆ ನಿಮ್ಮ ಸಮಯವೂ ಸರಿಯಾಗಿರುತ್ತದೆ.
- ಹಳದಿ ವಸ್ತ್ರ: ಸಾಧ್ಯವಾದಷ್ಟು ಹೆಚ್ಚು ಹಳದಿ ಬಣ್ಣದ ಉಡುಪುಗಳನ್ನು ಧರಿಸಿ.
- ಹಣದ ಉಳಿತಾಯ: ಬೆಟ್ಟಿಂಗ್‌ಗಳು (ಚುನಾವಣೆ, ಕ್ರಿಕೆಟ್ ಜೂಜಾಟ) ಮತ್ತು ಅನಗತ್ಯ ವೆಚ್ಚಗಳಿಂದ ದೂರವಿದ್ದು, ಆರೋಗ್ಯದ ಕಡೆ ಗಮನ ಕೊಡಿ ಮತ್ತು ಹಣವನ್ನು ಉಳಿಸಿ. ಮುಂದೆ ಜನರಿಗೆ ಪ್ರೀತಿಗಿಂತ ಹಣ, ಅನ್ನವೇ ಮುಖ್ಯವಾಗುತ್ತದೆ.
- ದೇವತಾ ಆರಾಧನೆ: ಗುರುವಾರಗಳಂದು ಶ್ರೀಕಾಳಹಸ್ತಿಯಲ್ಲಿರುವ ಮುಖ್ಯ ದ್ವಾರದ ಎದುರಿನ ‘ಗುರು ದಕ್ಷಿಣಾಮೂರ್ತಿ’ಗೆ ವಿಶೇಷ ಪೂಜೆ ಸಲ್ಲಿಸಿ. ಹಿಮಾಚಲ ಪ್ರದೇಶದಲ್ಲಿರುವ ‘ಬಗಲಾಮುಖಿ’ ದೇವಿಯ ದರ್ಶನ ಮಾಡಿ ಅಥವಾ ಬಗಲಾಮುಖಿ ಮೂಲ ಮಂತ್ರವನ್ನು ಜಪಿಸಿ ಮತ್ತು ‘ತಾರಾಪೀಠ’ಕ್ಕೆ ಭೇಟಿ ನೀಡಿ.
ದೇಶ ಮತ್ತು ಜನರೆಲ್ಲರೂ ಚೆನ್ನಾಗಿರಲಿ, ನಾನು ಹೇಳಿದ ಈ ಎಲ್ಲ ಕೆಟ್ಟ ಭವಿಷ್ಯಗಳು ಸುಳ್ಳಾಗಲಿ ಎಂದು ಸರಸ್ವತಿ ದೇವಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಕೊನೆಯಲ್ಲಿ ವೇಣುಸ್ವಾಮಿ ಅವರು ಮಾತು ಮುಗಿಸಿದ್ದಾರೆ.
ಆಧಾರ: ಶ್ರೀ ಮೀಡಿಯಾ ಟ್ರೆಂಡಿಂಗ್ ಯೂಟ್ಯೂಬ್ ಚಾನೆಲ್ ವಿಡಿಯೋ.
ವಿಡಿಯೋ ಲಿಂಕ್: https://www.youtube.com/watch?v=1xSS-n6NvWU
ಲೇಖನ- ಶ್ರೀನಿವಾಸ ಮಠ









