ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಮೂಲಕ ಕ್ರಿಕೆಟ್ ಜಗತ್ತಿಗೆ ಸ್ಫೋಟಕ ಪ್ರವೇಶ ಪಡೆದುಕೊಂಡ ಬ್ಯಾಟರ್ ವೈಭವ್ ಸೂರ್ಯವಂಶಿ. ದಿನದಿನಕ್ಕೂ ಪ್ರಖರ ಸೂರ್ಯನಂತೆ ಆಗುತ್ತಿರುವ ವೈಭವ್ ಜನ್ಮಜಾತಕದ ಬಗ್ಗೆ ತೆಲುಗು ಭಾಷಿಕ ರಾಜ್ಯಗಳಲ್ಲಿ ಬಹು ಜನಪ್ರಿಯ ಜ್ಯೋತಿಷಿಗಳಾದ ವೇಣುಸ್ವಾಮಿ ಅವರು ವಿಶ್ಲೇಷಣೆ ಮಾಡಿದ್ದಾರೆ. ವೇಣುಸ್ವಾಮಿ ಅಂದಾಕ್ಷಣ ಅವರ ಸುತ್ತಮುತ್ತಲ ವಿವಾದಗಳಿಂದಲೂ ಜನಪ್ರಿಯತೆಗೆ ಸಮ ಪ್ರಮಾಣದ ವಿವಾದವನ್ನೂ ಮೈ ಮೇಲೆ ಎಳೆದುಕೊಂಡಿದ್ದಾರೆ.
ಈ ಮಾತನ್ನು ಏಕೆ ಹೇಳಬೇಕಾಗಿದೆ ಅಂದರೆ, ವೇಣು ಸ್ವಾಮಿ ನುಡಿದ ಕೆಲವು ಭವಿಷ್ಯವನ್ನು ಮುಂದೆ ಮಾಡಿಕೊಂಡು, ಆಕ್ಷೇಪ ಮಾಡುವುದು, ಹೀಗಳೆಯುವುದಕ್ಕೆ ಹೆಚ್ಚಿನ ಸಮಯ ಇಡುವ ಬದಲು, ಇವತ್ತಿಗೆ ತೆಲುಗು ಮಾತನಾಡುವ ರಾಜ್ಯಗಳಷ್ಟೇ ಅಲ್ಲದೆ ಅಕ್ಕಪಕ್ಕದ ರಾಜ್ಯಗಳಲ್ಲೂ ಅವರ ಬಗ್ಗೆ, ಅವರು ನುಡಿಯುವ ಭವಿಷ್ಯದ ಬಗ್ಗೆ ಕುತೂಹಲಭರಿತ ಕಣ್ಣು, ಕಿವಿಯೊಂದಿಗೆ ತಿರುಗಿ ನೋಡುವ ಸನ್ನಿವೇಶ ಇದೆ. ಆ ಬಗ್ಗೆ ಆಲೋಚನೆ ಮಾಡುವುದು ಸಹ ಒಂದು ಆಯ್ಕೆಯಿದೆ.
ಈ ಲೇಖನವನ್ನು ಜ್ಯೋತಿಷ್ಯ ವಿಶ್ಲೇಷಣೆಯಾಗಿ ನೋಡಿ ಹಾಗೂ ವೇಣು ಸ್ವಾಮಿಯವರ ಪಾಂಡಿತ್ಯ- ಜ್ಞಾನವನ್ನು ಒರೆ ಹಚ್ಚಿ ನೋಡುವುದಕ್ಕೆ ಹಲವು ವಿಚಾರಗಳು ಇವೆ ಎಂದು ವಿನಂತಿಸುತ್ತಾ ಈಗ ವೈಭವ್ ಸೂರ್ಯವಂಶಿ ಜಾತಕವನ್ನು ವೇಣುಸ್ವಾಮಿಯವರು ಹೇಗೆ ಮಾಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ವೈಭವ್ ಸೂರ್ಯವಂಶಿ ಅವರು ಪೂರ್ವಾಷಾಢ ನಕ್ಷತ್ರ, ಧನುಸ್ಸು ರಾಶಿ.
ವೃಷಭ ಲಗ್ನ
ಮಿಥುನ ರಾಶಿಯಲ್ಲಿ ಕೇತು
ಕನ್ಯಾ ರಾಶಿಯಲ್ಲಿ ಶನಿ
ಧನುಸ್ಸು ರಾಶಿಯಲ್ಲಿ ರಾಹು-ಚಂದ್ರ
ಕುಂಭ ರಾಶಿಯಲ್ಲಿ ಶುಕ್ರ
ಮೀನ ರಾಶಿಯಲ್ಲಿ ಕುಜ, ಗುರು, ರವಿ, ಬುಧ.
ವೈಭವ್ ಸೂರ್ಯವಂಶಿ ಜಾತಕವು ವಿನೋದ್ ಕಾಂಬ್ಳಿ ಎಂಬ ಮಾಜಿ ಕ್ರಿಕೆಟಿಗನ ಜೊತೆಗೆ ಬಹಳ ಸಾಮ್ಯತೆ ಇದೆ. ಅಗಾಧ ಪ್ರತಿಭೆ ಇದ್ದ ಹೊರತಾಗಿಯೂ ಕಾಂಬ್ಳಿ ವೃತ್ತಿ ಜೀವನ ಅಷ್ಟೇನೂ ಚೆನ್ನಾಗಿ ಆಗಲಿಲ್ಲ. ಅದಕ್ಕೆ ಭಾರತದಲ್ಲಿನ ರಾಜಕಾರಣ- ಕ್ರೀಡಾ ರಾಜಕಾರಣದ ಕಡೆಗೆ ಬೊಟ್ಟು ಮಾಡಿ ತೋರಿಸಬೇಕಾಗುತ್ತದೆ. ವೈಭವ್ ಸೂರ್ಯವಂಶಿ ವೃತ್ತಿ ಬದುಕಿನಲ್ಲೂ ಈ ರೀತಿ ರಾಜಕಾರಣದ ಕಾರಣದಿಂದ ಆತನಿಗೆ ಸಲ್ಲಬೇಕಾದ ಗೌರವ- ಯಶಸ್ಸು ಸಿಗದಂತೆ ಆಗುವ ಲಕ್ಷಣಗಳು ಕಾಣುತ್ತಾ ಇವೆ. ಈ ರಾಜಕಾರಣವನ್ನು ತಡೆದುಕೊಳ್ಳುವ ಶಕ್ತಿ ವೈಭವ್ ಸೂರ್ಯವಂಶಿಗೆ ಇಲ್ಲ.
ಲಗ್ನಕ್ಕೆ ಪಂಚಮದಲ್ಲಿ ಶನಿ ಗ್ರಹ ಇದ್ದು, ಮೀನ ರಾಶಿಯಲ್ಲಿ ಇರುವಂಥ ನಾಲ್ಕು ಗ್ರಹಗಳಾದ ಕುಜ, ಗುರು, ರವಿ, ಬುಧ- ಹೀಗೆ ನಾಲ್ಕು ಗ್ರಹಗಳ ಮೇಲೆ ಶನಿ ಗ್ರಹದ ಪೂರ್ಣ ದೃಷ್ಟಿ ಇದೆ. ಇವತ್ತಿಗೆ ಸ್ಫೋಟಕ ಬ್ಯಾಟಿಂಗ್ ಮೂಲಕವಾಗಿ ಹೆಸರು ಪಡೆದುಕೊಳ್ಳುತ್ತಾ ಇರುವ ವೈಭವ್ ಸೂರ್ಯವಂಶಿಗೆ ಬ್ಯಾಟಿಂಗ್ ನಲ್ಲಿ ಎಲ್ಲ ದಾಖಲೆಗಳನ್ನು ಮುರಿಯುವ ಸಾಮರ್ಥ್ಯ- ಶಕ್ತಿ ಖಂಡಿತಾ ಇದೆ. ಆದರೆ ಕ್ರೀಡೆಯಲ್ಲಿ ಇರುವ ರಾಜಕಾರಣವನ್ನು ಮೆಟ್ಟಿ ನಿಲ್ಲುವುದಕ್ಕೆ ಸಾಧ್ಯ ಇದೆಯಾ ಎಂಬುದನ್ನು ಗಮನಿಸಬೇಕು.
ಇನ್ನು ಆರು ತಿಂಗಳು- ವರ್ಷದ ನಂತರ, ಬಹಳ ದೊಡ್ಡ ತಿರುವು ಬರುತ್ತದೆ. ವೃಷಭ ಲಗ್ನಕ್ಕೆ ಎಂಟನೇ ಸ್ಥಾನದಲ್ಲಿ, ಅಂದರೆ ಧನುಸ್ಸು ರಾಶಿಯಲ್ಲಿ ರಾಹು- ಚಂದ್ರ ಇದ್ದು, ಸರಿಯಾದ ನಿರ್ಣಯ ತೆಗೆದುಕೊಳ್ಳುವುದಕ್ಕೆ ಸಾಧ್ಯವಾ? ಈ ಅಂಶವನ್ನು ಕುತೂಹಲದಿಂದ ಕಾದು ನೋಡಬೇಕಿದೆ.
ಬಹಳ ಎಚ್ಚರಿಕೆಯಿಂದ ತೀರ್ಮಾನ ಮಾಡಿದರೆ ಕ್ರಿಕೆಟ್ ನಲ್ಲಿ ವೈಭವ್ ಸೂರ್ಯವಂಶಿ ಕ್ರಿಕೆಟ್ ನಲ್ಲಿ ಅದ್ಭುತವಾದ ದಾಖಲೆಗಳನ್ನು ಮಾಡಿ, ಈತನಿಗೆ ಸಮನಾದ ಮತ್ತೊಬ್ಬ ಕ್ರಿಕೆಟರ್ ಇಲ್ಲ ಎಂದೆನಿಸಿಕೊಳ್ಳುವುದು ಹೌದು.
ಜಾತಕ ವಿಶ್ಲೇಷಣೆ- ವೇಣು ಸ್ವಾಮಿ
ನಿರೂಪಣೆ- ಶ್ರೀನಿವಾಸ ಮಠ









