Sri Gurubhyo Logo

ಆ ಭಗವಂತನೇ ರಾಮಾನುಜಾಚಾರ್ಯರಿಂದ ಮಂತ್ರೋಪದೇಶ ಪಡೆದು ವೈಷ್ಣವ ನಂಬಿ ಎನಿಸಿದ ವಿಶಿಷ್ಟ ಕ್ಷೇತ್ರ ತಿರುಕ್ಕುರುಂಗುಡಿ

Malai Nambi
ಮಲೈನಂಬಿ ದೇವಾಲಯದ ಹೊರಭಾಗ

ದೇವರ ಮಹಿಮೆ, ಕ್ಷೇತ್ರ ವಿಶೇಷ ಕೇಳುವುದು ಮನಸ್ಸಿಗೆ ಉಲ್ಲಾಸವನ್ನು ನೀಡುವಂಥದ್ದು. ಬೇಕಾದಷ್ಟು ದೇವಸ್ಥಾನ, ಪುಣ್ಯಕ್ಷೇತ್ರಗಳು ಇದ್ದರೂ ನಮ್ಮ ವೆಬ್ ಸೈಟ್ ಮೂಲಕ ಆಯ್ದ ಪುಣ್ಯಕ್ಷೇತ್ರಗಳ ಮಾಹಿತಿಯನ್ನು ನೀಡಬೇಕು ಎನ್ನುವುದು ನಮ್ಮ ಉದ್ದೇಶ. ಅದರ ಫಲವಾಗಿಯೇ ನಿಮ್ಮೆದುರು ಈ ಲೇಖನ ಇದೆ. ಈ ಕ್ಷೇತ್ರದ ವೈಶಿಷ್ಟ್ಯ, ಅಲ್ಲಿಗೆ ತೆರಳುವ ಮಾರ್ಗ ಇತ್ಯಾದಿ ವಿವರಗಳನ್ನು ಸಹ ನೀಡಲಾಗಿದೆ. ಉದ್ದೇಶ ಏನೆಂದರೆ, ಅಲ್ಲಿಗೆ ಭೇಟಿ ನೀಡಬೇಕು ಎಂದಿದ್ದಲ್ಲಿ ಮಾಹಿತಿಯಿಂದ ಸಹಾಯ ಆಗುತ್ತದೆ ಎಂದಷ್ಟೇ. ಈ ದೇವಾಲಯ ದರ್ಶನದ ಮೊದಲ ಭಾಗವನ್ನು ನಿಮ್ಮೆದುರು ಇಡಲಾಗುತ್ತಿದೆ, ಒಪ್ಪಿಸಿಕೊಳ್ಳಿ. – ಸಂಪಾದಕ

ಆ ಪುಣ್ಯಕ್ಷೇತ್ರದ ಹೆಸರು ತಿರುಕ್ಕುರುಂಗುಡಿ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಇರುವಂಥ ಅದ್ಭುತವಾದ ಸ್ಥಳ ಇದು. ಕನ್ಯಾಕುಮಾರಿಯ ಉತ್ತರಕ್ಕೆ ಕೇವಲ ನಲವತ್ತು ಕಿಲೋಮೀಟರ್ ದೂರದಲ್ಲಿದೆ ತಿರುಕ್ಕುರುಂಗುಡಿ. ಶ್ರೀವೈಷ್ಣವರ ನೂರಾ ಎಂಟು ದಿವ್ಯಕ್ಷೇತ್ರಗಳಲ್ಲಿ ಒಂದು. ಈ ಸ್ಥಳದಲ್ಲಿ ಹಾಗೂ ಸುತ್ತಮುತ್ತ ವಿಷ್ಣುವಿನ ಐದು ಮೂರ್ತಿಗಳಿವೆ. ಇಲ್ಲಿ ಮುಖ್ಯವಾಗಿ ಆರಾಧಿಸುವ ದೇವರನ್ನು ವೈಷ್ಣವ ನಂಬಿ ಎನ್ನಲಾಗುತ್ತದೆ. ಹೀಗೆ ಕರೆಯುವುದರ ಹಿಂದೆ ಬಹಳ ಆಸಕ್ತಿಕರವಾದ ಹಾಗೂ ರೋಮಾಂಚನ ಆಗುವಂಥ ಐತಿಹ್ಯ ಹಾಗೂ ಆಸ್ತಿಕ ಜನರ ಮಧ್ಯೆ ಪ್ರಚಲಿತದಲ್ಲಿ ಇರುವ ಕಥೆಯೊಂದಿದೆ. ಅದೇನೆಂದರೆ, ಇಲ್ಲಿನ ದೇವರು ತಾನೇ ಸ್ವತಃ ಕೇಳಿ, ರಾಮಾನುಜಾಚಾರ್ಯರಿಂದ ಮಂತ್ರೋಪದೇಶ ಪಡೆದನಂತೆ.  ಅಂದರೆ ತಾನೇ ಅನುಯಾಯಿಯ ರೂಪದಲ್ಲಿ ಬಂದು, ಮಂತ್ರೋಪದೇಶಕ್ಕಾಗಿ ರಾಮಾನುಜಾಚಾರ್ಯರಲ್ಲಿ ಕೇಳಿದಾಗ, ಹೀಗೆ ಉಪದೇಶ ಮಾಡುವುದಕ್ಕೆ ಗುರು ಸ್ಥಾನವನ್ನು ನೀಡಬೇಕು, ಪ್ರತ್ಯೇಕವಾದ ಆಸನವನ್ನು ನೀಡಬೇಕು ಎಂದು ಕೇಳಿದರಂತೆ ಆಚಾರ್ಯರು. ಅದೇ ರೀತಿ ಅವರಿಗೆ ಇಲ್ಲಿ ಆಸನ ನೀಡಲಾಗಿದೆ, ಅದು ಇಂದಿಗೂ ಅಲ್ಲಿ ಇದೆ ಎನ್ನುತ್ತಾರೆ. ಹೀಗೆ ರಾಮಾನುಜಾಚಾರ್ಯರಿಂದ ಮಂತ್ರೋಪದೇಶ ಪಡೆದು, ಶ್ರೀವೈಷ್ಣವ ದೀಕ್ಷೆ ತೆಗೆದುಕೊಂಡಿದ್ದರಿಂದ ಇಲ್ಲಿನ ದೇವರನ್ನು ವೈಷ್ಣವ ನಂಬಿ ಎನ್ನಲಾಗುತ್ತದೆ.

stream in Thirukkurungudi
ಪ್ರಕೃತಿ ಸೌಂದರ್ಯ ಬಿಂಬಿಸುವ ಹರಿಯುವ ನೀರು

ಇನ್ನು ಈ ಸ್ಥಳದಲ್ಲಿ ಶಿವನಿಗೆ ಸುದರ್ಶನ ಮಂತ್ರವನ್ನು ವಿಷ್ಣು ಬೋಧಿಸಿದ ಬಗ್ಗೆಯೂ ಉಲ್ಲೇಖ ಇದೆ. ಮಹಾವಿಷ್ಣುವು ವರಾಹ ರೂಪವನ್ನು ತಾಳಿದಾಗ ತನ್ನ ರೂಪವನ್ನು ಕುಗ್ಗಿಸಿಕೊಂಡು, ಈ ಸ್ಥಳದಲ್ಲಿ ಇದ್ದುದರಿಂದ ಕುರುಂಕುಡಿ ಎಂದು ಕರೆಯಲಾಗುತ್ತದೆ.

ತಿರುಮಂಗೈ ಆಳ್ವಾರ್ ಪರಮಪದಿಸಿದ ಸ್ಥಳ

ತಿರುಕ್ಕುರುಂಗುಡಿ ಎಂಬುದು ತಿರುಮಂಗೈ ಆಳ್ವಾರ್ ಎಂಬ ಮಹಾಮಹಿಮರು ಪರಮ ಪದಿಸಿದ ಸ್ಥಳವೂ ಹೌದು. ಈ ಸ್ಥಳದಲ್ಲಿ ಇರುವ ತೆಂಗಿನ ಮರವೊಂದರ ಬಗ್ಗೆ ತುಂಬ ವಿಶೇಷವಾಗಿ ಹೇಳಲಾಗುತ್ತದೆ. ಅದೇನೆಂದರೆ, ಒಂದು ತೆಂಗಿನ ಮರದಲ್ಲಿ ನಾಲ್ಕು ತಲೆಗಳು ಬಂದಿವೆ, ಇದು ವಿರಳಾತಿವಿರಳ ಎಂಬುದು ಸ್ಥಳೀಯರು ಹೇಳುವ ಮಾತು. ಇನ್ನು ಈ ಸ್ಥಳದಲ್ಲಿ ನಮ್ ಪಾಡ್ವಾನ್ ಎಂಬ ಮಹಾಮಹಿಮರ ಬಗ್ಗೆ ಕೂಡ ಕಥೆಗಳಾಗಿ ಹೇಳಲಾಗುತ್ತದೆ. ಅದನ್ನು ಇಲ್ಲಿನ ಸ್ಥಳೀಯರಿಂದಲೇ ಕೇಳಿದರೆ ಬಹಳ ಚಂದ. 

ಇನ್ನು ತಿರುಕ್ಕುರುಗುಂಡಿಯಲ್ಲಿ  ಇರುವ ಐದು ನಾರಾಯಣನ ಸಾನ್ನಿಧ್ಯದ ಬಗ್ಗೆ ಹೇಳುವುದಾದರೆ, ಮೊದಲನೆಯದು- ನಿಂಡ್ರಾನ್ ವಿಷ್ಣು (ನಿಂತಿರುವ ವಿಷ್ಣು), ಇರುಂದಾನ್ ವಿಷ್ಣು (ಕೂತಿರುವಂಥ ಭಂಗಿಯ ವಿಷ್ಣು), ಕಿಡಂದಾನ್ ವಿಷ್ಣು (ಶಯನ ಭಂಗಿಯಲ್ಲಿ ಇರುವ ವಿಷ್ಣು)- ಈ ಮೂರು ಸಹ ಒಂದು ಕಡೆ ಇದೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಬ್ರಹ್ಮಚಾರಿ ನಂಬಿ (ವಿಷ್ಣು) ಹಾಗೂ ಮಲೈ ಮೇಲ್ ನಂಬಿ (ಬೆಟ್ಟದ ಮೇಲಿರುವ ವಿಷ್ಣು) ಹೀಗೆ ಐದು ವಿಷ್ಣು ಸಾನ್ನಿಧ್ಯಗಳಿವೆ.

ಈ ಸ್ಥಳಕ್ಕೆ ತೆರಳಬೇಕೆಂದರೆ ವಿಮಾನದಲ್ಲಿ ಹೋಗಬೇಕು ಅಂದುಕೊಳ್ಳುವವರಿಗೆ ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣ ಬಹಳ ಸಮೀಪದಲ್ಲಿದೆ. ಅಲ್ಲಿಂದ ನೂರರಿಂದ ನೂರಾ ಐದು ಕಿಲೋಮೀಟರ್ ಆಗಬಹುದು. ಇನ್ನು ಮದುರೈ ಕಡೆಯಿಂದಲೂ ಹೋಗಬಹುದು.

ತಿರುಕ್ಕುರುಂಗುಡಿ ಬಹಳ ವಿಶಾಲವಾದ ದೇವಾಲಯ. ಕೈಶಿಕ ಪುರಾಣ ನಡೆದಂಥ ಸ್ಥಳ ಇದು ಎಂಬುದು ಐತಿಹ್ಯ. ಆ ಕಾರಣಕ್ಕೆ ಕೈಶಿಕ ಏಕಾದಶಿ ಇಲ್ಲಿ ಬಹಳ ವಿಶೇಷ. ಆ ದಿನದಂದು ಕೈಶಿಕ ಪುರಾಣವನ್ನು ಇಡೀ ರಾತ್ರಿ ನಾಟಕದ ರೀತಿಯಲ್ಲಿ ಪ್ರದರ್ಶಿಸಲಾಗುತ್ತದೆ. ಇನ್ನು ಮಲೈ ಮೇಲ್ ನಂಬಿ ಎಂದು ಹೇಳಿದ ಸ್ಥಳಕ್ಕೆ ಇಲ್ಲಿ ಲಭ್ಯ ಇರುವ ಸ್ಥಳೀಯ ಜೀಪ್ ಬಳಸಿಕೊಳ್ಳಬೇಕಾಗುತ್ತದೆ. ಅದೇ ರೀತಿ ಮಹೇಂದ್ರ ಗಿರಿ ಎಂಬ ಬೆಟ್ಟ ಸಹ ಇಲ್ಲಿದೆ. ಆಂಜನೇಯ ಲಂಕೆಗೆ ಹಾರಿದ್ದು ಇದೇ ಬೆಟ್ಟದಿಂದ ಎಂಬುದು ಸಹ ಸ್ಥಳೀಯರ ನಂಬಿಕೆ.

ವಾನಮಾಮಲೈ ತೋತಾದ್ರಿನಾಥ

ಇನ್ನು ತಿರುಕ್ಕುರುಂಗುಡಿ ಎಂಬ ಈ ಸ್ಥಳದಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿ ಶ್ರೀವೈಷ್ಣವರ ಮತ್ತೊಂದು ದಿವ್ಯದೇಶ ಇದೆ. ಆ ಸ್ಥಳದ ಹೆಸರು ವಾನಮಾಮಲೈ. ಇಲ್ಲಿ ಬೆಟ್ಟದ ಮೇಲೆ ಸ್ವಯಂಭು ಆದ ದೇವರ ವಿಗ್ರಹ ಇದ್ದು, ಇಲ್ಲಿನ ದೇವರನ್ನು ತೋತಾದ್ರಿನಾಥ ಎಂದು ಕರೆಯಲಾಗುತ್ತದೆ. ಈ ಸ್ಥಳದ ಹೆಸರು ನಾಂಗುನೇರಿ. ಇಲ್ಲಿನ ಮೂಲ ದೇವರಿಗೆ ತೋತಾದ್ರಿನಾಥ ಎಂದು ಕರೆದರೆ,  ಉತ್ಸವ ಮೂರ್ತಿಯ ಹೆಸರು ದಯಾನಾಯಕನ್. 

ಕೂತಿರುವ ಭಂಗಿಯಲ್ಲಿ ಇರುವ ತೋತಾದ್ರಿನಾಥನ ಜತೆಗೆ ಶ್ರೀದೇವಿ ಹಾಗೂ ಭೂದೇವಿ ಸಹ ಇದ್ದಾರೆ. ಈ ಸ್ಥಳದಲ್ಲಿ ಪುಷ್ಕರಣಿಯೊಂದಿದ್ದು, ಇದನ್ನು ಇಂದ್ರ ಪುಷ್ಕರಣಿ ಎನ್ನಲಾಗುತ್ತದೆ. ಇನ್ನು ಇಲ್ಲಿ ಆ ಭಗವಂತನು ಬ್ರಹ್ಮ, ಇಂದ್ರ, ಭೃಗು ಮಹರ್ಷಿ ಮತ್ತು ಮಾರ್ಕಂಡೇಯರಿಗೆ ಅನುಗ್ರಹ ಮಾಡಿದ್ದರ ಬಗ್ಗೆ ಕೂಡ ಉಲ್ಲೇಖ ಇದೆ. ಈ ಸ್ಥಳದಲ್ಲಿ ಊರ್ವಶಿ ಹಾಗೂ ತಿಲೋತ್ತಮೆ ಆ ಭಗವಂತನ ಆರಾಧನೆ ಮಾಡಿದ್ದಾರೆ ಎಂಬ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ. ಆ ಕಾರಣದಿಂದ ಇಲ್ಲಿನ ಮೂಲ ದೇವರ ಪ್ರಾಕಾರದ ಬಳಿ ಅವರ ಚಿತ್ರಗಳಿವೆ.

ಈ ಸ್ಥಳದಲ್ಲಿ ತೋತಾದ್ರಿನಾಥನಿಗೆ ನಿತ್ಯವೂ ಎಣ್ಣೆ ಅಭ್ಯಂಜನ ನಡೆಯುತ್ತದೆ. ಅದರ ಹಿಂದೆ ಕಥೆಯೊಂದಿದ್ದು, ಅದು ಹೀಗಿದೆ: ಅದೊಮ್ಮೆ ಶ್ರೀವರ ಎಂಬ ರಾಜನೊಬ್ಬನಿದ್ದ. ಅವನ ಕನಸಿನಲ್ಲಿ ಭಗವಂತ ಬಂದು, ನಾನು ಭೂಮಿಯ ಒಳಗಿದ್ದೇನೆ, ಮೇಲೆ ಕರೆದುಕೊಂಡು ಬಾ ಎಂದು ಹೇಳಿದನಂತೆ. ಆ ಕಾರಣಕ್ಕಾಗಿ ಭೂಮಿಯನ್ನು ಗಡಪಾರೆಯಲ್ಲೆ ಅಗೆಯುವಾಗ ಅದರ ಪೆಟ್ಟು ದೇವರಿಗೆ ತಾಗಿ, ತಲೆಯಲ್ಲಿ ಒಂದು ಹನಿ ರಕ್ತ ಬಂತಂತೆ. ಗಾಬರಿಯಾದ ರಾಜ, ಆ ದೇವರಲ್ಲಿ ಕ್ಷಮೆ ಕೇಳಿದನಂತೆ. ಅದಕ್ಕೆ ಭಗವಂತ, ತೈಲ ತೆಗೆದುಕೊಂಡು ಬಾ ಎಂದು, ಅದನ್ನು ಹಚ್ಚಿಕೊಂಡರಂತೆ. ಅಂದು ಆದ ಪೆಟ್ಟಿಗೆ ಔಷಧಿ ಎಂಬಂತೆ ಎಣ್ಣೆ ಬಾವಿಯನ್ನು ಮಾಡಿಸಿ, ಆ ಎಣ್ಣೆಯನ್ನು ಭಗವಂತನಿಗೆ ನಿತ್ಯವೂ ಹಚ್ಚುತ್ತಾ ಬರಲಾಗುತ್ತಿದೆಯಂತೆ. ಹೀಗೆ ಇಂದಿಗೂ ನಡೆದುಬರುತ್ತಿದೆ. ಆ ಭಗವಂತನಿಗೂ ನಿತ್ಯವೂ ಇಲ್ಲಿ ಎಣ್ಣೆಯ ಅಭ್ಯಂಜನ ಆಗುತ್ತದೆ. ಇಲ್ಲಿಯ ವಿಶೇಷಗಳಲ್ಲಿ ಇದೂ ಒಂದು. 

ಹೀಗೆ ದೇವರಿಗೆ ಅಭ್ಯಂಜನವಾದ ಎಣ್ಣೆ ಒಂದು ಕಡೆ ಶೇಖರಣೆ ಆಗುತ್ತದೆ. ಹಾಗೆ ಶೇಖರಣೆ ಆದ ಎಣ್ಣೆಯನ್ನು ಇಲ್ಲಿಗೆ ಭೇಟಿ ನೀಡುವ ಭಕ್ತರು ಪ್ರಸಾದ ರೂಪದಲ್ಲಿ ಖರೀದಿ ಮಾಡಿಕೊಳ್ಳುತ್ತಾರೆ. ಆ ಎಣ್ಣೆಯನ್ನು ಬಳಸಿದರೆ ದೈಹಿಕ ಬಾಧೆಗಳು ದೂರವಾಗುತ್ತವೆ ಎಂಬುದು ಜನರ ನಂಬಿಕೆ. ಆ ಎಣ್ಣೆಯಲ್ಲಿ ಔಷಧೀಯ ಗುಣಗಳಿವೆ ಎಂಬುದು ಭಕ್ತರ ನಂಬಿಕೆಯಾಗಿದೆ. ಅಂದಹಾಗೆ ಇಲ್ಲಿಗೆ ತೆರಳುವ ಭಕ್ತರು ಸಹ ಎಣ್ಣೆಯನ್ನು ದೇವರಿಗೆ ಸಮರ್ಪಿಸಬಹುದು.

Mahendra Giri
ಮಹೇಂದ್ರಗಿರಿ

ಈ ಐದು ವಿಚಾರಗಳನ್ನು ತಿಳಿದುಕೊಳ್ಳಬೇಕು

ಯಾವುದೇ ದಿವ್ಯ ದೇಶಗಳಿಗೆ ಹೋದರೂ ಐದು ವಿಚಾರದ ಬಗ್ಗೆ ತಿಳಿದುಕೊಂಡು ಬರಬೇಕು ಎನ್ನುತ್ತಾರೆ ಶ್ರೀನಿವಾಸ ರಾಮಾನುಜನ್. ಒಂದು, ಆ ಊರಿನ ಹೆಸರು, ಎರಡನೆಯದು ಅಲ್ಲಿನ ಮೂಲದೇವರು- ಉತ್ಸವ ಮೂರ್ತಿಯ ಹೆಸರು, ಇನ್ನು ಆ ದೇವಾಲಯದಲ್ಲಿನ ದೇವಿಯ ಹೆಸರು. ಇಂಥ ಸ್ಥಳಗಳಲ್ಲಿ ಒಂದೊಂದು ವಿಮಾನದ ಹೆಸರು ಇರುತ್ತದೆ, ಅದನ್ನು ತಿಳಿಯಬೇಕು. ಹಾಗೂ ಕೊನೆಯದು ಹಾಗೂ ಮುಖ್ಯವಾದದ್ದು ಆ ಸ್ಥಳದಲ್ಲಿನ ಪುಷ್ಕರಣಿ ಹೆಸರು. ಈ ಬಗ್ಗೆ ತಿಳಿಯಬೇಕು ಎನ್ನುತ್ತಾರೆ.

ಅದಕ್ಕೆ ಒಂದು ಉದಾಹರಣೆ ಎಂಬಂತೆ ವಾನಮಾಮಲೈ ಬಗ್ಗೆ ಹೇಳಿದ್ದಾರೆ. ಊರಿನ ಹೆಸರು- ವಾನಮಾಮಲೈ, ಮೂಲದೇವರ ಹೆಸರು- ತೋತಾದ್ರಿನಾಥ, ಉತ್ಸವಮೂರ್ತಿ- ದಯಾನಾಯಕ, ಪುಷ್ಕರಣಿ- ಇಂದ್ರ ಪುಷ್ಕರಣಿ, ವಿಮಾನ- ನಂದವತನ ವಿಮಾನ, ದೇವಿ ಹೆಸರು- ಶ್ರೀವರಮಂಗೈ ದೇವಿ.

ತಿರುಕ್ಕುರುಂಗುಡಿ, ವಾನಮಾಮಲೈ, ಮಹೇಂದ್ರಗಿರಿ ಈ ಎಲ್ಲ ಸ್ಥಳವೂ ಅಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪ್ರಕೃತಿ ಸೌಂದರ್ಯದ ಖನಿ. ಸುತ್ತಮುತ್ತಲೂ ಮಹಿಮಾನ್ವಿತವಾದ, ಆಧ್ಯಾತ್ಮಿಕವಾಗಿ ಪ್ರಾಶಸ್ತ್ಯ ಪಡೆದ ಹಲವಾರು ಕ್ಷೇತ್ರಗಳಿವೆ. ಇಲ್ಲಿಗೆ ಭೇಟಿ ನೀಡಿದವರ ಅಭಿಪ್ರಾಯವೇ ಹೇಳುವುದಾದರೆ, ಈ ಸ್ಥಳದ ಭೇಟಿಯಿಂದ ಅಧ್ಯಾತ್ಮದ ಜತೆಗೆ, ದೇಹ- ಮನಸ್ಸಿಗೂ ಸಮಾಧಾನ ನೀಡುತ್ತದೆ.

(ಫೋಟೋ, ಸ್ಥಳದ ಮಾಹಿತಿ, ವಿಶೇಷ ತಿಳಿಸಿಕೊಟ್ಟವರು ಸಿ.ವಿ. ಭರತ್ (ನಿವೃತ್ತ ಉಪನ್ಯಾಸಕರು) ಹಾಗೂ ಅವರ ಮಗ ಶ್ರೀನಿವಾಸ ರಾಮಾನುಜನ್)

Latest News

Related Posts