ನರಸಿಂಹ ಜಯಂತಿ ವಿಶೇಷ: ನರಸಿಂಹ ಅವತಾರ ಎತ್ತಿದ್ದೇಕೆ? ಇಲ್ಲಿದೆ ಈ ಪವಿತ್ರ ದಿನದ ಮಹತ್ವ

An AI-generated artistic illustration of Lord Narasimha emerging from a pillar, protecting Prahlada, with 'Narasimha Jayanti' written in Kannada text.
ಭಕ್ತ ಪ್ರಹ್ಲಾದನ ರಕ್ಷಕ, ಅಧರ್ಮ ನಾಶಕ ನರಸಿಂಹ ಜಯಂತಿಯ ಶುಭಾಶಯಗಳು

ವಿಷ್ಣುವಿನ ದಶಾವತಾರಗಳಲ್ಲಿ ಬಹಳ ವಿಶಿಷ್ಟವಾದದ್ದು ಹಾಗೂ ಭಕ್ತರ ಬಗ್ಗೆ ವಿಷ್ಣುವಿಗೆ ಇರುವ ಅನನ್ಯ ಪ್ರೀತಿ- ಅಂತಃಕರಣದ ಪರಾಕಷ್ಟೆ ಅಂದರೆ ಅದು ನರಸಿಂಹಾವತಾರ. ತನ್ನ ಭಕ್ತನಾದ ಪ್ರಹ್ಲಾದನ ಸಲುವಾಗಿಯೇ ನಾರಸಿಂಹ ಅವತಾರವನ್ನೇ ಎತ್ತಿದ ಆ ಭಗವಂತನ ಬಗ್ಗೆ ಎಷ್ಟು ವಿವರಿಸಿದರೂ ಕಡಿಮೆಯೇ. ಇದೇ ಏಪ್ರಿಲ್ 30ನೇ ತಾರೀಕು ನರಸಿಂಹ ಜಯಂತಿ ಇದೆ.

ಆ ದಿನದ ವಿಶೇಷ ಏನೆಂದರೆ, ನರಸಿಂಹ ಅವತಾರ ಎತ್ತಿದ ದಿನವದು. ದುಷ್ಟನಾದ ಹಿರಣ್ಯಕಶಿಪುವನ್ನು ಸಂಹರಿಸಿ, ಭಕ್ತ ಪ್ರಹ್ಲಾದನನ್ನು ರಕ್ಷಿಸಲು ಕಂಬದಿಂದ ಉದ್ಭವಿಸಿದ ಮಹಾವಿಷ್ಣುವಿನ ಅತ್ಯಂತ ಶಕ್ತಿಯುತ ಅವತಾರವೇ ಶ್ರೀ ನರಸಿಂಹ. ವೈಶಾಖ ಮಾಸದ ಶುಕ್ಲ ಪಕ್ಷದ ಚತುರ್ದಶಿಯಂದು ಸಂಧ್ಯಾಕಾಲದಲ್ಲಿ ಅಧರ್ಮದ ನಾಶಕ್ಕಾಗಿ ಭಗವಂತನು ಈ ರೂಪವನ್ನು ಧರಿಸಿದ. 

ನರಸಿಂಹ ದೇವರ ಅವತಾರ ಹಾಗೂ ವಿಶೇಷತೆಗಳು

ನರಸಿಂಹ ಅವತಾರವು ಶಕ್ತಿ ಮತ್ತು ಧೈರ್ಯದ ಪ್ರತೀಕ. ಜ್ಯೋತಿಷ್ಯ ಮತ್ತು ಪುರಾಣಗಳ ಹಿನ್ನೆಲೆಯಲ್ಲಿ ಈ ಕೆಳಗಿನ ಅಂಶಗಳು ಪ್ರಮುಖವಾಗಿ ಉಲ್ಲೇಖಿಸುವಂಥದ್ದಾಗಿವೆ:

  • ಜನ್ಮ ನಕ್ಷತ್ರ: ಸ್ವಾತಿ ನಕ್ಷತ್ರ.
  • ವಿಶೇಷ ವಾರ (ಮಂಗಳವಾರ): ನರಸಿಂಹ ದೇವರಿಗೆ ಮಂಗಳವಾರ ಅತ್ಯಂತ ಪ್ರಿಯವಾದ ದಿನ. ಮಂಗಳ ಗ್ರಹವು ಶೌರ್ಯ ಮತ್ತು ಸಾಹಸದ ಸಂಕೇತವಾಗಿದ್ದು, ಉಗ್ರಸ್ವರೂಪಿಯಾದ ನರಸಿಂಹನ ಆರಾಧನೆಗೆ ಈ ವಾರ ಅತ್ಯಂತ ಪ್ರಶಸ್ತ. ಶತ್ರು ಬಾಧೆ ನಿವಾರಣೆಗೆ ಮತ್ತು ಜಾತಕದಲ್ಲಿನ ಕುಜ (ಮಂಗಳ) ದೋಷದ ಶಾಂತಿಗಾಗಿ ಮಂಗಳವಾರ ನರಸಿಂಹನನ್ನು ಪೂಜಿಸುವುದು ವಿಶೇಷ ಫಲದಾಯಕ.
  • ತಿಥಿ: ವೈಶಾಖ ಶುಕ್ಲ ಚತುರ್ದಶಿ.

ವರ್ಷದ 364 ದಿನ ಶ್ರೀಗಂಧದ ಲೇಪನದಲ್ಲಿರುವ ನರಸಿಂಹ! ಸಿಂಹಾಚಲಂ ಕ್ಷೇತ್ರದ ಪೌರಾಣಿಕ ಹಿನ್ನೆಲೆ ನಿಮಗೆ ಗೊತ್ತೇ?

ದೇವರಿಗೆ ಪ್ರಿಯವಾದ ಪುಷ್ಪಗಳು ಮತ್ತು ನೈವೇದ್ಯ

ನರಸಿಂಹ ಸ್ವಾಮಿಯು ತೇಜೋಮಯ ಮತ್ತು ಉಗ್ರ ಸ್ವರೂಪಿಯಾಗಿದ್ದರೂ ಭಕ್ತರ ಪಾಲಿಗೆ ಪರಮ ದಯಾಳು. ದೇವರಿಗೆ ಇಷ್ಟವಾದ ಅರ್ಪಣೆಗಳು ಹೀಗಿವೆ:

  • ಪ್ರಿಯವಾದ ಪುಷ್ಪಗಳು: ಕೆಂಪು ಬಣ್ಣದ ಹೂವುಗಳೆಂದರೆ ದೇವರಿಗೆ ಬಹಳ ಪ್ರೀತಿ. ಪೂಜೆಯಲ್ಲಿ ಕೆಂಪು ದಾಸವಾಳ, ಕೆಂಪು ಕಮಲ ಮತ್ತು ತುಳಸಿ ದಳಗಳನ್ನು ವಿಶೇಷವಾಗಿ ಬಳಸಲಾಗುತ್ತದೆ.
  • ನೈವೇದ್ಯ: ದೇವರ ಉಗ್ರತೆಯನ್ನು ಶಾಂತಗೊಳಿಸಲು ತಂಪಾದ ಪದಾರ್ಥಗಳಾದ ಬೆಲ್ಲದ ಪಾನಕ, ಮಜ್ಜಿಗೆ ಮತ್ತು ಹೆಸರುಬೇಳೆ ಕೋಸಂಬರಿಯನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ.

ಅತ್ಯಂತ ಹಳೆಯ ಹಾಗೂ ಪ್ರಸಿದ್ಧ ನರಸಿಂಹ ಕ್ಷೇತ್ರಗಳು

ನರಸಿಂಹನ ದರ್ಶನದಿಂದಲೇ ಪಾಪಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ. ಭಾರತದ ಪುರಾತನ ಕ್ಷೇತ್ರಗಳೆಂದರೆ:

  1. ಅಹೋಬಿಲಂ (ಆಂಧ್ರಪ್ರದೇಶ): ಇದು ನರಸಿಂಹ ಅವತಾರ ಉದ್ಭವಿಸಿದ ಮೂಲ ಸ್ಥಾನವೆಂದು ನಂಬಲಾಗುವ ಅತ್ಯಂತ ಪ್ರಾಚೀನ ಕ್ಷೇತ್ರ.
  2. ಮಂಗಳಗಿರಿ ಪಾನಕ ನರಸಿಂಹ: ಇಲ್ಲಿನ ವಿಗ್ರಹವು ಪಾನಕವನ್ನು ಕುಡಿಯುವುದು ಇಲ್ಲಿನ ವಿಶೇಷ. ಇದು ಅತ್ಯಂತ ಪುರಾತನ ಬೆಟ್ಟದ ಮೇಲಿರುವ ದೇವಾಲಯ.
  3. ಹಂಪಿ ಉಗ್ರ ನರಸಿಂಹ (ಕರ್ನಾಟಕ): ವಿಜಯನಗರದ ಅರಸರ ಕಾಲದ ಈ ಬೃಹತ್ ಏಕಶಿಲಾ ವಿಗ್ರಹವು ನರಸಿಂಹ ದೇವರ ವೈಭವಕ್ಕೆ ಸಾಕ್ಷಿಯಾಗಿದೆ.

ಭಕ್ತಿ ಮತ್ತು ಸಾಹಿತ್ಯದ ಸಂಗಮ: ಶ್ರೀಪಾದರಾಜರು ಸ್ಥಾಪಿಸಿದ ಚೀಕಲಪರ್ವಿಯ ಶ್ರೀ ಲಕ್ಷ್ಮೀ ನರಸಿಂಹ ಕ್ಷೇತ್ರ

ಆಚರಣೆಯ ಫಲ

ನರಸಿಂಹ ಜಯಂತಿಯ ದಿನದಂದು ಉಪವಾಸವಿದ್ದು, ಮಂಗಳವಾರದ ಈ ಪವಿತ್ರ ದಿನದಂದು ನರಸಿಂಹ ಅಷ್ಟೋತ್ತರ ಅಥವಾ ಮಂತ್ರಗಳನ್ನು ಪಠಿಸುವುದರಿಂದ ಮನುಷ್ಯನಿಗೆ ಧೈರ್ಯ ಲಭಿಸುತ್ತದೆ, ಸಾಲಬಾಧೆಗಳು ತೀರುತ್ತವೆ ಮತ್ತು ಸಕಲ ವಿಘ್ನಗಳು ನಿವಾರಣೆಯಾಗುತ್ತವೆ.

“ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ | 

ನೃಸಿಂಹಂ ಭೀಷಣಂ ಭದ್ರಂ ಮೃತ್ಯು ಮೃತ್ಯುಂ ನಮಾಮ್ಯಹಂ ||”

ಸಮಸ್ತರಿಗೂ ನರಸಿಂಹ ಜಯಂತಿಯ ಶುಭಾಶಯಗಳು. ಶ್ರೀ ಲಕ್ಷ್ಮೀ ನರಸಿಂಹ ದೇವರು ಎಲ್ಲರಿಗೂ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ನೀಡಲಿ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts