ಮೇ 15 ರಿಂದ ಸೂರ್ಯ ವೃಷಭ ರಾಶಿಗೆ: ಬದಲಾಗಲಿದೆ ಈ ರಾಶಿಗಳ ಅದೃಷ್ಟ

An artistic zodiac wheel showing the Sun transitioning into Taurus, surrounded by symbols of all twelve astrological signs in a cosmic space background.
ವೃಷಭ ಸಂಕ್ರಾಂತಿ 2026: ವೃಷಭ ರಾಶಿಗೆ ಸೂರ್ಯನ ಪ್ರವೇಶ ಮತ್ತು ದ್ವಾದಶ ರಾಶಿಗಳ ಮೇಲೆ ಅದರ ಪ್ರಭಾವ.

ಇದೇ ಮೇ 15ನೇ ತಾರೀಕಿನಂದು ಸೂರ್ಯನು ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಸಂಕ್ರಮಣವನ್ನು ‘ವೃಷಭ ಸಂಕ್ರಾಂತಿ’ ಎಂದು ಕರೆಯಲಾಗುತ್ತದೆ. ದ್ವಾದಶ ರಾಶಿಗಳ ಮೇಲೆ ಈ ಸೂರ್ಯನ ಸಂಚಾರವು ಬೀರುವ ಪ್ರಭಾವದ ವಿವರ ಇಲ್ಲಿದೆ:

ಮೇಷ ರಾಶಿ

ಸೂರ್ಯನು ನಿಮ್ಮ ರಾಶಿಯ ಎರಡನೇ ಮನೆಯಾದ ಧನಸ್ಥಾನಕ್ಕೆ ಪ್ರವೇಶಿಸುತ್ತಾನೆ. ಈ ಸಮಯದಲ್ಲಿ ಆರ್ಥಿಕವಾಗಿ ಮಿಶ್ರ ಫಲಗಳಿವೆ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು, ಆದ್ದರಿಂದ ಮಾತಿನ ಮೇಲೆ ನಿಗಾ ಇರಲಿ. ಸರ್ಕಾರಿ ಕೆಲಸಗಳಲ್ಲಿ ಲಾಭವಾಗುವ ಸಾಧ್ಯತೆಯಿದೆ. ಕಣ್ಣಿನ ಆರೋಗ್ಯದ ಬಗ್ಗೆ ಜಾಗರೂಕತೆ ವಹಿಸಿ. ಹೂಡಿಕೆ ಮಾಡುವ ಮುನ್ನ ಅನುಭವಿಗಳ ಸಲಹೆ ಪಡೆಯುವುದು ಉತ್ತಮ.

ವೃಷಭ ರಾಶಿ

ಸೂರ್ಯನು ನಿಮ್ಮ ರಾಶಿಯಲ್ಲೇ ಸಂಚರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ವೃದ್ಧಿಯಾಗುತ್ತದೆ. ಉದ್ಯೋಗದಲ್ಲಿ ಬಡ್ತಿ ಅಥವಾ ಹೊಸ ಜವಾಬ್ದಾರಿಗಳು ಬರಲಿವೆ. ಆದರೆ ಅಹಂಕಾರವು ನಿಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು, ವಿಶೇಷವಾಗಿ ರಕ್ತದೊತ್ತಡದ ಬಗ್ಗೆ ಗಮನವಿರಲಿ.

ಮಿಥುನ ರಾಶಿ

ಸೂರ್ಯನು ನಿಮ್ಮ ರಾಶಿಯಿಂದ ಹನ್ನೆರಡನೇ ಮನೆಯಲ್ಲಿ ಸಂಚರಿವುದರಿಂದ ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ವಿದೇಶ ಪ್ರವಾಸ ಅಥವಾ ದೂರದ ಪ್ರಯಾಣದ ಯೋಗವಿದೆ. ಆರೋಗ್ಯದ ದೃಷ್ಟಿಯಿಂದ ಈ ಸಮಯ ಸ್ವಲ್ಪ ಸವಾಲಿನದ್ದಾಗಿರುತ್ತದೆ. ಶತ್ರುಗಳ ಬಗ್ಗೆ ಎಚ್ಚರವಿರಲಿ. ನ್ಯಾಯಾಲಯದ ವಿಷಯಗಳಲ್ಲಿ ಹಿನ್ನಡೆ ಆಗದಂತೆ ಜಾಗ್ರತೆ ವಹಿಸಿ. ದಾನ-ಧರ್ಮಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಕರ್ಕಾಟಕ ರಾಶಿ

ಹನ್ನೊಂದನೇ ಮನೆಯಲ್ಲಿ ಸೂರ್ಯನ ಸಂಚಾರವು ನಿಮಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಹಿರಿಯ ಅಧಿಕಾರಿಗಳಿಂದ ಬೆಂಬಲ ಸಿಗಲಿದೆ ಮತ್ತು ಬಾಕಿ ಉಳಿದಿದ್ದ ಹಣ ಕೈಸೇರಲಿದೆ. ಹೊಸ ಉದ್ಯೋಗದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಸಮಾಜದ ಗಣ್ಯ ವ್ಯಕ್ತಿಗಳ ಪರಿಚಯವಾಗಲಿದ್ದು, ಅದು ಭವಿಷ್ಯಕ್ಕೆ ಸಹಕಾರಿಯಾಗಲಿದೆ. ಆರ್ಥಿಕ ಸ್ಥಿತಿ ಭದ್ರವಾಗಲಿದ್ದು, ಹೂಡಿಕೆಯಿಂದ ಲಾಭ ಪಡೆಯುವಿರಿ.

ಸಿಂಹ ರಾಶಿ

ಸೂರ್ಯನು ಹತ್ತನೇ ಮನೆಯಲ್ಲಿ ದಿಗ್ಬಲ ಹೊಂದುತ್ತಾನೆ. ಇದರಿಂದ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸು ಸಿಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಕಾಲ. ಸರ್ಕಾರಿ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ತಂದೆಯ ಕಡೆಯಿಂದ ಆಸ್ತಿ ಅಥವಾ ಸಹಾಯ ದೊರೆಯಲಿದೆ. ಕೆಲಸದ ಒತ್ತಡ ಹೆಚ್ಚಿದ್ದರೂ ನಿಮ್ಮ ದಕ್ಷತೆಯಿಂದ ಎಲ್ಲವನ್ನೂ ನಿಭಾಯಿಸುವಿರಿ.

ಸೂರ್ಯನಿಂದ ಕೇತುವಿನವರೆಗೆ: ನಿಮ್ಮ ಜೀವನದ ಮೇಲೆ ಒಂಬತ್ತು ಗ್ರಹಗಳ ಪರಿಣಾಮ ಹೇಗಿರುತ್ತದೆ?

ಕನ್ಯಾ ರಾಶಿ

ಭಾಗ್ಯಸ್ಥಾನದಲ್ಲಿ ಸೂರ್ಯನ ಸಂಚಾರವು ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಿಸುತ್ತದೆ. ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಸುದ್ದಿಯಿದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ದೀರ್ಘ ಕಾಲದ ಪ್ರಯಾಣದ ಯೋಗವಿದ್ದು, ಅದರಿಂದ ಲಾಭವಾಗಲಿದೆ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸಮಾಧಾನದಿಂದ ವರ್ತಿಸಿ.

ತುಲಾ ರಾಶಿ

ಎಂಟನೇ ಮನೆಯಲ್ಲಿ ಸೂರ್ಯನ ಸಂಚಾರವು ಸ್ವಲ್ಪ ಕಠಿಣ ಫಲಗಳನ್ನು ನೀಡುತ್ತದೆ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಹಠಾತ್ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆರ್ಥಿಕ ವಿಷಯಗಳಲ್ಲಿ ಪಾರದರ್ಶಕತೆ ಇರಲಿ, ಇಲ್ಲದಿದ್ದರೆ ವಿವಾದಗಳು ಉಂಟಾಗಬಹುದು. ಗುಪ್ತ ವಿದ್ಯೆಗಳ ಕಡೆಗೆ ಆಸಕ್ತಿ ಹೆಚ್ಚಲಿದೆ. ಅನಗತ್ಯ ವಾದ-ವಿವಾದಗಳಿಂದ ದೂರವಿರುವುದು ನಿಮ್ಮ ಮಾನಸಿಕ ಶಾಂತಿಗೆ ಒಳ್ಳೆಯದು.

ವೃಶ್ಚಿಕ ರಾಶಿ

ಸಪ್ತಮ ಭಾವದಲ್ಲಿ ಸೂರ್ಯನ ಸಂಚಾರವು ವೈವಾಹಿಕ ಜೀವನದಲ್ಲಿ ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ತರಬಹುದು. ಸಂಗಾತಿಯೊಂದಿಗೆ ಸಮಾಲೋಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ಸಮಾಜದಲ್ಲಿ ನಿಮ್ಮ ವರ್ಚಸ್ಸು ಹೆಚ್ಚಿದರೂ, ಉದ್ವೇಗದಿಂದಾಗಿ ಕೆಲವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. ಸಾರ್ವಜನಿಕ ಜೀವನದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ.

ಧನು ರಾಶಿ

ಆರನೇ ಮನೆಯಲ್ಲಿ ಸೂರ್ಯನ ಸಂಚಾರವು ಶತ್ರುಗಳ ಮೇಲೆ ಜಯ ತಂದುಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ. ದೀರ್ಘಕಾಲದ ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ. ನ್ಯಾಯಾಲಯದ ತೀರ್ಪುಗಳು ನಿಮ್ಮ ಪರವಾಗಿ ಬರುವ ಸಾಧ್ಯತೆಯಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಸಾಲದ ಹೊರೆ ಕಡಿಮೆಯಾಗುವ ಮಾರ್ಗಗಳು ಗೋಚರಿಸಲಿವೆ.

ಹಣೆಬರಹವನ್ನೇ ಬದಲಿಸಬಲ್ಲ ಶಕ್ತಿಶಾಲಿ ಕ್ಷೇತ್ರ: ತಿರುಪತ್ತುರ್ ಬ್ರಹ್ಮಪುರೀಶ್ವರರ್ ದೇವಾಲಯ!

ಮಕರ ರಾಶಿ

ಪಂಚಮ ಭಾವದಲ್ಲಿ ಸೂರ್ಯನ ಪ್ರವೇಶವು ಮಕ್ಕಳ ವಿಷಯದಲ್ಲಿ ಸ್ವಲ್ಪ ಆತಂಕ ತರಲಿದೆ. ಪ್ರೇಮ ಜೀವನದಲ್ಲಿ ಮನಸ್ತಾಪಗಳು ಉಂಟಾಗುವ ಸಾಧ್ಯತೆಯಿದೆ. ಬುದ್ಧಿವಂತಿಕೆಯಿಂದ ಕಾರ್ಯ ನಿರ್ವಹಿಸಿದರೆ ಲಾಭ ಪಡೆಯಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಭಂಗ ಆಗುತ್ತದೆ. ಆದ್ದರಿಂದ ಹೆಚ್ಚಿನ ಶ್ರಮ ಅಗತ್ಯ.

ಕುಂಭ ರಾಶಿ

ನಾಲ್ಕನೇ ಮನೆಯಲ್ಲಿ ಸೂರ್ಯನ ಸಂಚಾರವು ತಾಯಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಮನೆ ಅಥವಾ ವಾಹನ ಖರೀದಿಯ ಯೋಜನೆಗಳು ಸದ್ಯಕ್ಕೆ ಮುಂದಕ್ಕೆ ಹೋಗಲಿದೆ. ವೃತ್ತಿ ಕ್ಷೇತ್ರದಲ್ಲಿ ಕೆಲಸದ ಒತ್ತಡದಿಂದಾಗಿ ಮಾನಸಿಕ ನೆಮ್ಮದಿ ಕಡಿಮೆ ಆಗುತ್ತದೆ. ಕುಟುಂಬದ ಸದಸ್ಯರೊಂದಿಗೆ ಹೊಂದಾಣಿಕೆ ಅಗತ್ಯ. ಹೃದಯದ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.

ಮೀನ ರಾಶಿ

ಮೂರನೇ ಮನೆಯಲ್ಲಿ ಸೂರ್ಯನ ಸಂಚಾರವು ನಿಮ್ಮ ಪರಾಕ್ರಮವನ್ನು ಹೆಚ್ಚಿಸುತ್ತದೆ. ಕಿರಿಯ ಸಹೋದರ-ಸಹೋದರಿಯರ ಜೊತೆಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಲಿದೆ. ಸಣ್ಣ ಪ್ರವಾಸಗಳು ಲಾಭದಾಯಕವಾಗಿರುತ್ತವೆ. ಸಂವಹನ ಕ್ಷೇತ್ರದಲ್ಲಿ ಇರುವವರಿಗೆ ಇದು ಅತ್ಯುತ್ತಮ ಸಮಯ. ನಿಮ್ಮ ಧೈರ್ಯ ಮತ್ತು ನಿರ್ಧಾರಗಳು ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಏರಲು ಸಹಾಯ ಮಾಡುತ್ತವೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts