ಜನ್ಮ ಜಾತಕದಲ್ಲಿ ಗ್ರಹಗಳು ಉಚ್ಚ ಸ್ಥಿತಿಯಲ್ಲಿ ಇದ್ದಾಗ ಅದ್ಭುತ ಫಲವನ್ನು ನೀಡುತ್ತವೆ ಎಂಬುದೇನೋ ನಿಜ. ಆದರೆ ಅದರ ನೆಗೆಟಿವ್ ಪರಿಣಾಮ ಸಹ ಹಾಗೇ ಇರುತ್ತದೆ. ಆದ್ದರಿಂದ ಒಂದು ಜಾತಕದಲ್ಲಿ ಗ್ರಹ ಉಚ್ಚ ಸ್ಥಿತಿಯಲ್ಲಿದೆ ಎಂದು ಸಂತೋಷ ಪಡುವುದರ ಜೊತೆಗೆ ಅದರ ಪೂರ್ಣ ಫಲವನ್ನು ಪಡೆಯುವುದಕ್ಕೆ ಬೇಕಾದ ಗುಣ- ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಹಾಗಿದ್ದರೆ ರವಿ ಸೇರಿದಂತೆ ನವಗ್ರಹಗಳು ಉಚ್ಚ ಸ್ಥಿತಿಯಲ್ಲಿ ಇದ್ದಾಗ ಅವು ಬೀರುವ ನೆಗೆಟಿವ್ ಪ್ರಭಾವ ಏನು ಎಂಬುದರ ಬಗ್ಗೆ ತಿಳಿದುಕೊಳ್ಳಿ. ಹಾಗೇ ನಿಮ್ಮ ಜಾತಕವನ್ನು ನೋಡಿಕೊಳ್ಳಿ, ಯಾವ ಗ್ರಹ ಉಚ್ಚ ಸ್ಥಿತಿಯಲ್ಲಿದೆ ಎಂಬುದರ ಪರೀಕ್ಷೆ ಮಾಡಿಕೊಳ್ಳಿ. ಅದಕ್ಕೂ ಮೊದಲು ಯಾವ ಗ್ರಹವು ಯಾವ ರಾಶಿಯಲ್ಲಿ ಇದ್ದರೆ ಉಚ್ಚ ಸ್ಥಿತಿ ಎಂಬುದನ್ನು ತಿಳಿದುಕೊಂಡು ಬಿಡಿ.
ರವಿ- ಮೇಷ
ಚಂದ್ರ- ವೃಷಭ
ಕುಜ- ಮಕರ
ಬುಧ- ಕನ್ಯಾ
ಗುರು- ಕರ್ಕಾಟಕ
ಶುಕ್ರ- ಮೀನ
ರಾಹು- ವೃಷಭ/ಮಿಥುನ
ಕೇತು- ವೃಶ್ಚಿಕ/ಧನುಸ್ಸು
ರವಿ ಉಚ್ಚ ಸ್ಥಿತಿಯಲ್ಲಿದ್ದರೆ:
ರವಿ ಗ್ರಹಗಳಿಗೆಲ್ಲ ರಾಜ. ಆ ಗ್ರಹವೇ ಉಚ್ಚ ಸ್ಥಿತಿಯಲ್ಲಿ ಇದ್ದಾಗ ಒಂದು ಬಗೆಯ ಅಹಂಕಾರ ತಲೆಯ ಮೇಲೆ ಕಿರೀಟದಂತೆ ಕೂತು ಬಿಡುತ್ತದೆ. ಯಾರ ಮಾತನ್ನೂ ಕೇಳುವುದಿಲ್ಲ. ಎಷ್ಟೋ ಕೇಳಿಸಿಕೊಳ್ಳುವುದೂ ಇಲ್ಲ. ಅಹಂಕಾರಿ, ಮೊಂಡು- ಹಠದ ಸ್ವಭಾವ ಹೀಗೆಲ್ಲ ಹಣೆಪಟ್ಟಿ ಇವರಿಗೆ ಮೆತ್ತಿಕೊಳ್ಳುತ್ತದೆ. ಆ ಕಾರಣದಿಂದ ಇವರಿಗೆ ಸರಿ- ತಪ್ಪುಗಳ ಬಗ್ಗೆ ಹೇಳುವುದಕ್ಕೆ ಕೂಡ ಸ್ನೇಹಿತರು- ಸಂಬಂಧಿಗಳು ಹೆದರುವಂತಾಗುತ್ತದೆ. ಅಥವಾ ನಮಗ್ಯಾಕೆ ಬೇಕು, ಅವರೇ ಸರಿ ಮಾಡಿಕೊಳ್ಳಲಿ ಎಂದು ಇತರರು ಇವರಿಂದ ದೂರ ಉಳಿದುಬಿಡುತ್ತಾರೆ. ರವಿ ಉಚ್ಚನಾಗಿದ್ದರೆ ತಾವು ಹಿಡಿದ ಕೆಲಸವೇನೋ ಮುಗಿಸುತ್ತಾರೆ. ಆದರೆ ಅಷ್ಟರಲ್ಲಿ ಕೂಗಾಟ, ಕಿರುಚಾಟ, ಸುತ್ತಮುತ್ತಲಿನವರಿಗೆ ನೆಮ್ಮದಿ ಹಾಳು ಎಲ್ಲ ಆಗಿಬಿಟ್ಟಿರುತ್ತದೆ.
ಚಂದ್ರ ಉಚ್ಚ ಸ್ಥಿತಿಯಲ್ಲಿದ್ದರೆ:
ಚಂದ್ರ ಅಂದರೆ ಮನಸಿನ ಕಾರಕ. ಇವರಿಗೆ ವಿಪರೀತ ಖುಷಿ- ಸಂತೋಷ ಇದ್ದಾಗ ತಾವು ಏನು ಹೇಳುತ್ತಾ ಇದ್ದೇವೆ, ಮಾಡುತ್ತಾ ಇದ್ದೇವೆ ಎಂಬ ಬಗ್ಗೆ ವಿವೇಚನೆ- ಪರಿವೆ ಇರುವುದಿಲ್ಲ. ಒಂದು ವಿಷಯದ ಆಳಾಂತರಾಳಕ್ಕೆ ಇಳಿದು, ಕೆಲವು ಸಮಯ ಕಳೆದು ಹೋಗಿಬಿಡುತ್ತಾರೆ. ಇವರು ವಾಸ್ತವಕ್ಕೆ ಬರುವುದರೊಳಗಾಗಿ ಏನೇನೋ ಬದಲಾವಣೆ ಆಗಿಹೋಗಿರುತ್ತದೆ. ಬಡಪೆಟ್ಟಿಗೆ ಏನನ್ನೂ ಬಿಟ್ಟುಕೊಡದ ಗಟ್ಟಿ ಮನಸ್ಸಿನ ಇವರಿಗೆ ಯಾವುದರ ಅಳತೆ ಎಷ್ಟು ಎಂಬ ಬಗ್ಗೆ ಸರಿಯಾದ ವಿವೇಚನೆ ಖಂಡಿತಾ ಬೇಕು. ತಮ್ಮ ಮನಸ್ಥಿತಿಯನ್ನು ಹೇಗೆ ಸಂಭಾಳಿಸಬೇಕು ಎಂಬ ತಿಳಿವಳಿಕೆ ಮುಖ್ಯ. ಯಾರೆಲ್ಲ ವೃಷಭ ರಾಶಿಯವರು ಇದ್ದೀರೋ ಎಲ್ಲರಿಗೂ ಇದೇ ಮಾತು ಅನ್ವಯ. ಏಕೆಂದರೆ ಯಾರದೆಲ್ಲ ವೃಷಭ ರಾಶಿಯೋ ಅವರಿಗೆ ಚಂದ್ರ ಉಚ್ಚ ಸ್ಥಿತಿಯಲ್ಲಿ ಇರುತ್ತಾನೆ.
ಶುಭ ಸಂಖ್ಯೆ- ಸೂಕ್ತ ಬಣ್ಣ: ನಿಮ್ಮ ವಾಹನ ಪ್ರಯಾಣವನ್ನು ಸುಖಮಯವಾಗಿಸಲು ಇಲ್ಲಿವೆ ಟಿಪ್ಸ್
ಕುಜ ಉಚ್ಚ ಸ್ಥಿತಿಯಲ್ಲಿದ್ದರೆ:
ಸಿಕ್ಕಾಪಟ್ಟೆ ಎನರ್ಜಿ. ಯಪ್ಪಾ, ಇವರಿಗೆ ಸುಸ್ತು ಆಗುವುದೇ ಇಲ್ಲವಾ ಎಂಬ ರೀತಿಯಲ್ಲಿ ಚಟುವಟಿಕೆಯಿಂದ ಓಡಾಡುತ್ತಾಲೇ ಇರುತ್ತಾರೆ. ಆದರೆ ಅದಕ್ಕೆ ಒಂದು ಉದ್ದೇಶ ಬೇಕಲ್ಲವಾ, ಅದರ ಕಡೆಗೆ ಗಮನ ನೀಡದೆ ಎನರ್ಜೆಟಿಕ್ ಆಗಿ ಓಡಾಡುತ್ತಲೇ ಇರುತ್ತಾರೆ. ಅದೇನೋ ಸದಾ ಒಂದಲ್ಲಾ ಒಂದು ಕೆಲಸ ಮಾಡುತ್ತಲೇ ಇರುತ್ತಾರೆ, ಆದರೆ ಅದಕ್ಕೆ ತಕ್ಕ ರಿಸಲ್ಟ್ ಬರ್ತಾ ಇಲ್ಲ ಅನ್ನೋದು ಇವರದೇ ಆಕ್ಷೇಪ ಆಗಿರುತ್ತದೆ ಹಾಗೂ ಸುತ್ತಮುತ್ತಲಿನವರು ಸಹ ಹೇಳುತ್ತಾ ಇರುತ್ತಾರೆ. ಹೀಗೆ ಗ್ರಹ ಸ್ಥಿತಿ ಇರುವವರ ಇನ್ನೊಂದು ಸಮಸ್ಯೆ ಏನೆಂದರೆ, ತಾಳ್ಮೆ ಇರುವುದಿಲ್ಲ. ಅಡುಗೆ ಆಗುವ ತನಕ ಇರುವವರು ಆಮೇಲೆ ಅದು ಆರುವ ತನಕ ಇರಲ್ಲವಂತೆ ಎಂಬ ಮಾತಿನಂತೆ ಪರಿಸ್ಥಿತಿ. ಕೆಲಸ ಕೈಗೂಡುವ ಹೊತ್ತಿಗೆ ತಾಳ್ಮೆ ಕಳೆದುಕೊಂಡು, ಸ್ವತಃ ಇವರೇ ಮುಜುಗರಕ್ಕೆ ಗುರಿ ಆಗುತ್ತಾರೆ.
ಬುಧ ಉಚ್ಚ ಸ್ಥಿತಿಯಲ್ಲಿದ್ದರೆ:
ಹೀಗೆ ಇರುವವರು ಅತಿ ವಿಶ್ಲೇಷಣೆ ಮಾಡುವ ಸ್ವಭಾವದವರು. ಅತಿಯಾದ ಆಲೋಚನೆ ಮಾಡಬೇಡ ಎಂದು ಯಾರಾದರೂ ಪದೇ ಪದೇ ಅನ್ನಿಸಿಕೊಳ್ಳುತ್ತಾ ಇದ್ದಲ್ಲಿ ಒಮ್ಮೆ ನಿಮ್ಮ ಜಾತಕ ನೋಡಿಕೊಳ್ಳಿ; ಬುಧ ಉಚ್ಚ ಸ್ಥಿತಿಯಲ್ಲಿಯೇ ಇರಬಹುದು. ಏಕೆಂದರೆ ಒಂದು ವಿಚಾರದಲ್ಲಿ ಏನೆಲ್ಲ ಆಗು- ಹೋಗುಗಳು, ಒಳಿತು- ಕೆಡುಕುಗಳು, ಸಾಧಕ- ಬಾಧಕಗಳು ಅನ್ನುವುದನ್ನು ಯೋಚಿಸ್ತಾರೆ, ಯೋಚಿಸ್ತಾರೆ, ಆಲೋಚನೆ ಮಾಡುತ್ತಲೇ ಇರುತ್ತಾರೆ. ಅಷ್ಟರಲ್ಲಿ ಗಡುವು ಮೀರಿ ಹೋಗುವ ಸಮೀಪ ಬಂದು ಬಿಟ್ಟಿರುತ್ತದೆ. ಆಗ ಆತುರಾತುರವಾಗಿ ಅನುಷ್ಠಾನಕ್ಕೆ ಇಳಿಯುತ್ತಾರೆ. ಇವರು ಬುದ್ಧಿವಂತರು, ವಿಪರೀತ ಆಲೋಚನೆ ಮಾಡುವವರು, ಚಾಕಚಕ್ಯತೆಯಿಂದ ಪರಿಸ್ಥಿತಿಯನ್ನು ಸಂಭಾಳಿಸುತ್ತಾರೆ. ಅದೇ ರೀತಿ ಈ ಗುಣವೇ ಇತರರು ಇವರ ಬಗ್ಗೆ ಇತರರು ರೇಜಿಗೆ ಮಾಡಿಕೊಳ್ಳುವಷ್ಟು ಅತಿ ಮಾಡುತ್ತಾರೆ.
ವಾಸ್ತುಶಾಸ್ತ್ರ ಸಮಗ್ರ ಮಾರ್ಗದರ್ಶಿ: ಸುಖ-ಶಾಂತಿಯ ಮನೆಗೆ ಸರಳ ಸೂತ್ರಗಳು
ಶುಕ್ರ ಉಚ್ಚ ಸ್ಥಿತಿಯಲ್ಲಿದ್ದರೆ:
ಬೇಕು ಬೇಕು ಬೇಕು… ಹೀಗೆ ಶುಕ್ರ ವಿಲಾಸಿ, ಆಡಂಬರದ ವಸ್ತುಗಳ ಬಗ್ಗೆ ವಿಪರೀತದ ವ್ಯಾಮೋಹ ಕೊಡುತ್ತಾನೆ. ದುಬಾರಿ ವಸ್ತುಗಳು, ಜನರು, ಮನೆಯ ಅಲಂಕಾರ, ಒಡವೆ- ವಸ್ತುಗಳು, ಪರ್ ಫ್ಯೂಮ್, ಬ್ರ್ಯಾಂಡೆಡ್ ವಸ್ತುಗಳು ಇವುಗಳ ಕಡೆಗಿನ ವ್ಯಾಮೋಹ ಕಡಿಮೆ ಆಗುವುದೇ ಇಲ್ಲ. ಇವರ ಜತೆಗೆ ಶಾಪಿಂಗ್ ಹೋಗುವವರು ಬಹಳ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಇವರು ಖರೀದಿ ಮಾಡುವ ರೀತಿಯನ್ನು ನೋಡಿ, ತಮಗೆ ಬೇಡದಿದ್ದರೂ ವಸ್ತುಗಳನ್ನು ಖರೀದಿಸುವ ಮನಸ್ಸಾಗಿ ಕೈಯಲ್ಲಿರುವ ಹಣವನ್ನು ಖರ್ಚು ಮಾಡಿಕೊಳ್ಳುವಂತೆ ಆಗುತ್ತದೆ. ಆದರೆ ಯಾರಿಗೆ ಶುಕ್ರ ಉಚ್ಚ ಸ್ಥಿತಿಯಲ್ಲಿ ಇರುತ್ತಾನೋ ಅವರೇನೂ ತಮ್ಮ ಕೈ ಖಾಲಿಯಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಶುಕ್ರನ ಅನುಗ್ರಹದಿಂದ ಹಣದ ಹೊಂದಾಣಿಕೆ, ಹಣದ ಆದಾಯ ಮೂಲ ಯಾವುದೂ ಬಾಧಿಸುವುದಿಲ್ಲ.
ಶನಿ ಉಚ್ಚ ಸ್ಥಿತಿಯಲ್ಲಿದ್ದರೆ:
ಹೀಗೆ ಗ್ರಹ ಸ್ಥಿತಿ ಇರುವವರಿಗೆ ಭಾವನಾತ್ಮಕ ಸಂಗತಿಗಳು ಅಂತ ಯಾವುದೂ ಕಾಡುವುದೇ ಇಲ್ಲ. ತಮ್ಮ ಪಾಡಿಗೆ ತಮಗೆ ಬೇಕಾದ್ದನ್ನು ತಮ್ಮದೇ ನಿಯಮದ ಅಡಿಯಲ್ಲಿ ಮಾಡಿಕೊಳ್ಳುತ್ತಾ ಹೋಗುತ್ತಾರೆ. ಇದರ ಜೊತೆಗೆ ಅತಿಯಾದ ಶಿಸ್ತು ಸೇರಿಕೊಂಡು ಬಿಟ್ಟಿರುತ್ತದೆ. ಅದೆಂಥ ದೊಡ್ಡ ಗೆಲುವು ಬಂದರೂ ಸಾಧನೆ ಮಾಡಿದರೂ ಸಂಭ್ರಮಿಸುವ ಮನಸ್ಥಿತಿ ಇರುವುದಿಲ್ಲ. ಹಾಗೊಂದು ವೇಳೆ ಸಂಭ್ರಮ ಪಟ್ಟರೋ ಅದು ಕೂಡ ಉಳಿದವರ ಜೊತೆಗೆ ಹೋಲಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಶನಿ ಗ್ರಹ ಯಾವ ಸ್ಥಾನದಲ್ಲಿ ಉಚ್ಚ ಸ್ಥಿತಿ ತಲುಪಿದೆ ಎಂಬುದರ ವಿಶ್ಲೇಷಣೆ ಮಾಡಿ, ಇವರ ಗುಣದಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಲು ಸೂಚಿಸಲೇ ಬೇಕು. ಇಲ್ಲದಿದ್ದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಥರ ಯಾಂತ್ರಿಕವಾಗಿ ಜೀವನ ನಡೆಸುವ ರೀತಿಯಲ್ಲಿ ಆಗಿಬಿಡುತ್ತಾರೆ.
ಜ್ಯೋತಿಷ್ಯ- ವಿಜ್ಞಾನದ ಸಮನ್ವಯಕಾರ: ಜ್ಯೋತಿರ್ವಿಜ್ಞಾನದ ಮಹಾಪುರುಷ ವರಾಹಮಿಹಿರ
ಗುರು ಉಚ್ಛ ಸ್ಥಿತಿಯಲ್ಲಿದ್ದರೆ:
ಈ ರೀತಿ ಗ್ರಹ ಸ್ಥಿತಿ ಇರುವವರಿಗೆ ಜ್ಞಾನ, ತಿಳಿವಳಿಕೆ, ಬುದ್ಧಿವಂತಿಕೆ ಸಿಕ್ಕಾಪಟ್ಟೆ ಇರುತ್ತದೆ. ಆ ಬಗ್ಗೆ ಇವರಿಗಿರುವ ಹೆಮ್ಮೆಯ ಕಾರಣಕ್ಕೆ ಇತರರ ಸಲಹೆ- ಮಾರ್ಗದರ್ಶನಗಳನ್ನು ಬಹಳ ನಿರ್ಲಕ್ಷ್ಯ ಮಾಡುವಂತೆ ಆಗುತ್ತದೆ. ತಮ್ಮ ಬುದ್ಧಿವಂತಿಕೆ ಬಗೆಗಿನ ಚಿಂತನೆ ಅಹಂಕಾರವಾಗಿ ಪರಿವರ್ತನೆ ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಆದರೆ ಆ ಭಾವನೆಯು ತಲೆ ಹೊಕ್ಕದಂತೆ ಇರುವುದು ಸಹ ಗುರು ಗ್ರಹ ಉಚ್ಚ ಸ್ಥಿತಿಯಲ್ಲಿ ಇರುವವರಿಗೆ ಬಹಳ ಸವಾಲಾಗಿ ಪರಿಣಮಿಸುತ್ತದೆ. ಇತರರು ಇವರ ಬುದ್ಧಿವಂತಿಕೆ- ಜ್ಞಾನವನ್ನು ಹೊಗಳಿದರೆ ಅದರಿಂದ ಉಬ್ಬಿಹೋಗಿ, ಕೆಲವು ಅತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ. ಈ ಬಗ್ಗೆ ಮುನ್ನೆಚ್ಚರಿಕೆಯನ್ನು ವಹಿಸಲೇಬೇಕು. ವಿನಯವಂತಿಕೆ ಮೈಗೂಡಿಸಿಕೊಂಡರೆ, ಎಲ್ಲರ ಅಭಿಪ್ರಾಯಕ್ಕೂ ಗೌರವ ನೀಡಿದರೆ ಒಳ್ಳೆಯದು.
ರಾಹು ಉಚ್ಚ ಸ್ಥಿತಿಯಲ್ಲಿದ್ದರೆ:
ರಾಹು ಗ್ರಹ ಯಾರಿಗೆ ಉಚ್ಚ ಸ್ಥಿತಿಯಲ್ಲಿ ಇರುತ್ತಾರೋ ಅಂಥವರಿಗೆ ವಾಸ್ತವದ ಚಿಂತನೆಗಿಂತ ವಿಪರೀತದ ಆಸೆಯು ಬರುತ್ತದೆ. ಎಲ್ಲವನ್ನೂ ತನ್ನದಾಗಿಸಿಕೊಳ್ಳುವ- ತಮ್ಮದು ಮಾಡಿಕೊಳ್ಳುವ ಧಾವಂತ ಯಾವಾಗಲೂ ಇರುತ್ತದೆ. ಆದರೆ ಸಂತೃಪ್ತಿ ಎಂಬುದು ಸಿಗುವುದಿಲ್ಲ. ಒಂದರ ನಂತರ ಮತ್ತೊಂದು, ಆ ನಂತರ ಇನ್ನೊಂದು ಹೀಗೆ ಕೊನೆಯಿಲ್ಲದ ಬೇಕುಗಳಿಂದಾಗಿ ಇವರಲ್ಲೊಂದು ತಹತಹ- ಚಡಪಡಿಕೆ ಕಾಡುತ್ತಲೇ ಇರುತ್ತವೆ. ಮೊದಲಿಗೆ ಈ ರೀತಿ ಗ್ರಹ ಸ್ಥಿತಿಯವರು ಮಾನಸಿಕವಾಗಿ ವಸ್ತು- ವಿಷಯಗಳ ಬಗ್ಗೆ ತೃಪ್ತಿಯ ಭಾವವೊಂದನ್ನು ಪಡೆದುಕೊಳ್ಳುವುದು ಒಳ್ಳೆಯದು. ಇನ್ನು ತಮ್ಮ ಅಗತ್ಯ ಏನಿದೆಯೋ ಅದಕ್ಕೆ ಮಾತ್ರ ಗಮನ ಹರಿಸಬೇಕು. ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಬೇಕು ಅಥವಾ ಕೇವಲ ವಸ್ತುಗಳ ಖರೀದಿಗಾಗಿಯೇ ಪದೇಪದೇ ಸಾಲವನ್ನು ಮಾಡುವುದು ನಿಲ್ಲಿಸಬೇಕು.
ನಿಮ್ಮ ಜನನ ಸಂಖ್ಯೆ ನಿಮ್ಮ ಬಗ್ಗೆ ಏನು ಹೇಳುತ್ತದೆ? 1 ರಿಂದ 9 ಸಂಖ್ಯೆಗಳ ಅದೃಷ್ಟದ ರಹಸ್ಯ ಇಲ್ಲಿದೆ!
ಕೇತು ಉಚ್ಚ ಸ್ಥಿತಿಯಲ್ಲಿದ್ದರೆ:
ಯಾರಿಗೆ ಕೇತು ಉಚ್ಚ ಸ್ಥಿತಿಯಲ್ಲಿ ಇರುತ್ತದೋ ಅಂಥವರ ಅಧ್ಯಾತ್ಮ ಪಯಣದಲ್ಲಿ ಬಹಳ ದೂರ ಸಾಗುತ್ತಾರೆ ಹಾಗೂ ಎತ್ತರಕ್ಕೆ ಏರುತ್ತಾರೆ. ಇಂಥ ಜಾತಕರಲ್ಲಿ ಅವರ ವಯಸ್ಸಿಗೆ ಮೀರಿದ ಪ್ರಬುದ್ಧತೆ ಇರುತ್ತದೆ. ತಮಗಿಂತ ಹಿರಿಯ ವಯಸ್ಸಿನವರ ಜೊತೆಗೆ ಸ್ನೇಹ- ಒಡನಾಟ ಜ್ಞಾನ- ತಿಳಿವಳಿಕೆ ನೀಡುವುದರ ಜೊತೆಗೆ ಬದುಕಿನ ಬಗೆಗೆ ಇತರರು ಗಾಬರಿ ಆಗುವ ಮಟ್ಟಿಗೆ ವೈರಾಗ್ಯವನ್ನು ನೀಡುತ್ತದೆ. ಲೌಕಿಕ ಜೀವನದ ಸಂತಸ ಕ್ಷಣಗಳನ್ನು ಅನುಭವಿಸುವುದು ಇವರಿಗೆ ಕಷ್ಟವಾಗುತ್ತದೆ. ಈ ಸ್ವಭಾವದಿಂದಾಗಿ ಇತರರು ಇವರ ಬಗ್ಗೆ ಬೇಸರ ಮಾಡಿಕೊಳ್ಳುತ್ತಾರೆ. ಅದರಲ್ಲೂ ವಿವಾಹದ ನಂತರದಲ್ಲಿ ಹೆಂಡತಿ- ಮಕ್ಕಳಿಗೆ ಇವರ ಅಧ್ಯಾತ್ಮ- ವೈರಾಗ್ಯದ ಸ್ವಭಾವ ಬೇಸರಕ್ಕೆ ಹಾಗೂ ಸಿಟ್ಟಿಗೆ ಕಾರಣ ಆಗುತ್ತದೆ. ಆದ್ದರಿಂದ ಈ ಎಲ್ಲದರ ಬಗ್ಗೆ ಎಚ್ಚರಿಕೆಯೊಂದು ಬೇಕು.
ಲೇಖನ- ಶ್ರೀನಿವಾಸ ಮಠ









