ಶನೈಶ್ಚರ ಜಯಂತಿ 2026: ಸಾಡೇಸಾತ್, ಅಷ್ಟಮ ಶನಿ ದೋಷ ನಿವಾರಣೆಗೆ ಈ ದಿನ ಏನು ಮಾಡಬೇಕು? ಪೂಜಾ ಕ್ರಮ ಮತ್ತು ದಾನಗಳ ವಿವರ

Traditional Shani Dev idol in a South Indian temple with devotees performing oil lamp rituals and offerings during Shanaischara Jayanti.
ಶನೈಶ್ಚರ ಜಯಂತಿ ಮತ್ತು ಅಮಾವಾಸ್ಯೆಯ ಅಂಗವಾಗಿ ದೇವಸ್ಥಾನದಲ್ಲಿ ನಡೆಯುತ್ತಿರುವ ವಿಶೇಷ ಎ ಳ್ಳೆಣ್ಣೆ ದೀಪೋತ್ಸವ ಮತ್ತು ಪೂಜಾ ಕೈಂಕರ್ಯಗಳ ಸಾಂಕೇತಿಕ ಎಐ ಚಿತ್ರ.

ಇದೇ ಮೇ 16ರಂದು ಆಚರಿಸಲಾಗುವ ಶನೈಶ್ಚರ ಅಮಾವಾಸ್ಯೆ ಮತ್ತು ಶನೈಶ್ಚರ ಜಯಂತಿಯ ಕುರಿತಾದ ಸಮಗ್ರ ಮಾಹಿತಿ ಇಲ್ಲಿದೆ. ಸಿಂಹ ರಾಶಿ, ವೃಶ್ಚಿಕ ರಾಶಿ, ಧನುಸ್ಸು, ಕುಂಭ, ಮೀನ ಹಾಗೂ ಮೇಷ ರಾಶಿಯವರು ಈ ವಿಶೇಷ ದಿನದಂದು ಶನೈಶ್ಚರ ಆರಾಧನೆ ಮಾಡುವುದರಿಂದ ಗೋಚಾರದಲ್ಲಿ ಇರುವಂಥ ಅಷ್ಟಮ ಶನಿ, ಪಂಚಮ ಶನಿ, ಅರ್ಧಾಷ್ಟಮ ಶನಿ ಹಾಗೂ ಸಾಡೇಸಾತ್ ನಕಾರಾತ್ಮಕ ಪ್ರಭಾವದಿಂದ ಹೊರಗೆ ಬರುವುದಕ್ಕೆ ಸಹಾಯ ಆಗುತ್ತದೆ. ಇನ್ನು ಜನ್ಮ ಜಾತಕದಲ್ಲಿ ನೀಚ ಸ್ಥಿತಿಯ ಶನಿ ಹಾಗೂ ದುರ್ಬಲ ಶನಿಯ ಪ್ರಭಾವದಿಂದ ರಕ್ಷಣೆ ಪಡೆಯುವುದಕ್ಕೆ ಸಹ ಅನುಕೂಲ ಆಗುತ್ತದೆ.

ಶನೈಶ್ಚರ ಜಯಂತಿ ಮತ್ತು ಅಮಾವಾಸ್ಯೆ: ಮಹತ್ವ

ವೈಶಾಖ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು, ಅಂದರೆ ಈ ಬಾರಿ ಮೇ 16ರಂದು ಶನೈಶ್ಚರ ಅಮಾವಾಸ್ಯೆ ಮತ್ತು ಶನೈಶ್ಚರ ಜಯಂತಿ ಆಚರಿಸಲಾಗುತ್ತಿದೆ. ಇದು ಸೂರ್ಯಪುತ್ರ ಶನಿದೇವನು ಜನಿಸಿದ ದಿನವೆಂದು ಪುರಾಣಗಳು ಹೇಳುತ್ತವೆ. ಈ ದಿನವು ಶನಿಗ್ರಹದ ಪ್ರಭಾವವನ್ನು ಶಾಂತಗೊಳಿಸಲು ಮತ್ತು ಅನುಗ್ರಹ ಪಡೆಯಲು ಅತ್ಯಂತ ಶ್ರೇಷ್ಠವಾದುದು. ಈ ಬಾರಿ ಶನಿವಾರವೇ ಅಮಾವಾಸ್ಯೆ ಬಂದಿರುವುದರಿಂದ ಇದನ್ನು ‘ಶನೈಶ್ಚರ ಅಮಾವಾಸ್ಯೆ’ ಎಂದು ಕರೆಯಲಾಗುತ್ತದೆ, ಇದು ಅತ್ಯಂತ ಅಪರೂಪದ ಮತ್ತು ಪುಣ್ಯದಾಯಕ ದಿನ.

ಶ್ಲೋಕ

ಶನೈಶ್ಚರನನ್ನು ಪ್ರಸನ್ನಗೊಳಿಸಲು ಈ ಕೆಳಗಿನ ಶ್ಲೋಕವನ್ನು ಪಠಿಸಿ:

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |

ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಮ್ ||

ಅರ್ಥ: ಇಂದ್ರನೀಲ ಮಣಿಯಂತೆ ಹೊಳೆಯುವವನೇ, ಸೂರ್ಯನ ಮಗನೇ, ಯಮನ ಅಣ್ಣನೇ, ಛಾಯಾದೇವಿ ಮತ್ತು ಸೂರ್ಯನಿಗೆ ಜನಿಸಿದವನೇ, ಓ ಶನೈಶ್ಚರನೇ ನಿನಗೆ ನಮಸ್ಕಾರಗಳು.

ತಿರುನೆಲ್ಲಾರ್ ದರ್ಬಾರಣ್ಯೇಶ್ವರ ದೇಗುಲ: ಶನಿ ದೋಷ ಮುಕ್ತಿಗೆ ದಕ್ಷಿಣ ಭಾರತದ ಮಹಾ ಕ್ಷೇತ್ರ

ಪೌರಾಣಿಕ ಹಿನ್ನೆಲೆ

ಪುರಾಣಗಳ ಪ್ರಕಾರ, ಸೂರ್ಯದೇವನ ಪತ್ನಿ ಸಂಜ್ಞಾದೇವಿ ಸೂರ್ಯನ ತೇಜಸ್ಸನ್ನು ತಾಳಲಾರದೆ, ತನ್ನ ಪ್ರತಿರೂಪವಾದ ‘ಛಾಯಾ’ಳನ್ನು ಸೃಷ್ಟಿಸಿ ತಂದೆಯ ಮನೆಗೆ ತೆರಳುತ್ತಾಳೆ. ಸೂರ್ಯದೇವ ಮತ್ತು ಛಾಯಾದೇವಿಗೆ ಜನಿಸಿದವನೇ ಶನಿ. ಶನಿ ಜನಿಸಿದಾಗ ಅವನ ಕಡುಗಪ್ಪಾದ ಬಣ್ಣ ಮತ್ತು ತೀಕ್ಷ್ಣ ನೋಟವನ್ನು ಕಂಡು ಸೂರ್ಯದೇವನು ಆಶ್ಚರ್ಯಚಕಿತನಾಗುತ್ತಾನೆ. ನಂತರ ಶನಿದೇವನು ಕಠಿಣ ತಪಸ್ಸು ಮಾಡಿ ಶಿವನಿಂದ ‘ಗ್ರಹಮಂಡಲ’ದಲ್ಲಿ ಸ್ಥಾನ ಪಡೆದು, ಮನುಷ್ಯರ ಕರ್ಮಗಳಿಗೆ ತಕ್ಕ ಫಲ ನೀಡುವ ‘ನ್ಯಾಯಾಧೀಶ’ನ ಪಟ್ಟ ಪಡೆದನು.

ಈ ದಿನ ಮಾಡಬೇಕಾದ ದಾನ ಮತ್ತು ಧರ್ಮ

ಶನಿ ಜಯಂತಿಯಂದು ಮಾಡುವ ದಾನಗಳು ಜಾತಕದಲ್ಲಿನ ಶನಿ ದೋಷ (ಏಳೂವರೆ ಶನಿ, ಅಷ್ಟಮ ಶನಿ) ಪ್ರಭಾವವನ್ನು ಕಡಿಮೆ ಮಾಡುತ್ತವೆ:

  1. ಎಳ್ಳು ಮತ್ತು ಎಣ್ಣೆ ದಾನ: ಕಪ್ಪು ಎಳ್ಳನ್ನು ದಾನ ಮಾಡುವುದು ಅಥವಾ ಶನಿದೇವನಿಗೆ ಎಳ್ಳೆಣ್ಣೆ ದೀಪ ಹಚ್ಚುವುದು ವಿಶೇಷ.
  2. ಕಪ್ಪು ಬಟ್ಟೆ: ಕಪ್ಪು ಬಣ್ಣದ ವಸ್ತ್ರಗಳನ್ನು ದಾನ ಮಾಡಬೇಕು.
  3. ಕಬ್ಬಿಣದ ವಸ್ತುಗಳು: ಕಬ್ಬಿಣದ ಪಾತ್ರೆ ಅಥವಾ ಯಾವುದೇ ಕಬ್ಬಿಣದ ವಸ್ತುವನ್ನು ದಾನ ಮಾಡುವುದು ಶನಿಗೆ ಪ್ರಿಯ.
  4. ಆಹಾರ ದಾನ: ಕಪ್ಪು ಅಕ್ಕಿ- ಉದ್ದಿನ ಕಾಳಿನಿಂದ ಮಾಡಿದ ಅನ್ನ ಅಥವಾ ಆಹಾರವನ್ನು ಬಡವರಿಗೆ ಹಂಚುವುದು.
  5. ಪಾದರಕ್ಷೆ ದಾನ: ಚಪ್ಪಲಿ ಅಥವಾ ಪಾದರಕ್ಷೆಗಳನ್ನು ಕೊಡಿಸುವುದು ಪುಣ್ಯದಾಯಕ.

ಮುಂದಿನ 30 ವರ್ಷಗಳ ಶನಿ ಸಂಚಾರ: ಯಾರಿಗೆ ಸಾಡೇಸಾತಿ? ಯಾರಿಗೆ ಮುಕ್ತಿ? ಸಂಪೂರ್ಣ ಪಟ್ಟಿ ಇಲ್ಲಿದೆ

ಆಚರಣೆಯ ಕ್ರಮಗಳು

  • ಬೆಳಗ್ಗೆ ಬೇಗ ಎದ್ದು ಅಭ್ಯಂಜನ ಸ್ನಾನ ಮಾಡಿ ಶುಚಿಯಾಗಬೇಕು.
  • ಹತ್ತಿರದ ಶನಿದೇವನ ದೇವಸ್ಥಾನಕ್ಕೆ ಭೇಟಿ ನೀಡಿ, ಎಳ್ಳೆಣ್ಣೆ ಅಭಿಷೇಕ ಮಾಡಿಸುವುದು ಉತ್ತಮ (ಗಾಣದಲ್ಲಿ ಎಳ್ಳೆಣ್ಣೆ ಮಾಡಿಸಿ, ಆ ಎಣ್ಣೆಯನ್ನು ದೇವಸ್ಥಾನಕ್ಕೆ ತೆರಳಿ ನೀಡಿ).
  • ಅಶ್ವತ್ಥ ಮರಕ್ಕೆ ಪ್ರದಕ್ಷಿಣೆ ಹಾಕಿ ದೀಪ ಹಚ್ಚುವುದರಿಂದ ಶನಿ ದೋಷಗಳು ನಿವಾರಣೆಯಾಗುತ್ತವೆ.
  • ಈ ದಿನ ಮಾಂಸಾಹಾರ ಸೇವನೆಯಿಂದ ದೂರವಿರಬೇಕು.
  • ಕಪ್ಪು ನಾಯಿ ಅಥವಾ ಕಾಗೆಗಳಿಗೆ ಆಹಾರ ನೀಡುವುದು ಶನಿದೇವನಿಗೆ ಬಹಳ ಪ್ರಿಯವಾದ ಕೆಲಸ.

ದಶರಥ ಕೃತ ಶನಿ ಸ್ತೋತ್ರ: ಸಾಡೇಸಾತಿ ಕಷ್ಟಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ರಾಮಬಾಣ!

ವಿಶೇಷ ಸೂಚನೆ: ಶನಿದೇವನು ಕೇವಲ ಶಿಕ್ಷೆ ನೀಡುವವನಲ್ಲ, ಬದಲಿಗೆ ಮನುಷ್ಯನನ್ನು ಶಿಸ್ತುಬದ್ಧಗೊಳಿಸಿ ಉತ್ತಮ ದಾರಿಗೆ ತರುವ ‘ಕರ್ಮಫಲ ದಾತ’. ಭಕ್ತಿಯಿಂದ ಮತ್ತು ಸತ್ಕರ್ಮಗಳಿಂದ ಅವನನ್ನು ಪೂಜಿಸಿದರೆ ಸಕಲ ಸುಖ-ಸಂತೋಷಗಳು ಲಭಿಸುತ್ತವೆ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts