ಇದೇ ಜೂನ್ 22ರಂದು ಬುದ್ಧಿಕಾರಕ ಬುಧ ಗ್ರಹವು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದೆ. ಅಲ್ಲಿ ಅದಾಗಲೇ ಜಲತತ್ವದ ರಾಶಿಯಲ್ಲಿ ಜ್ಞಾನಕಾರಕ ಗುರು ಮತ್ತು ವೈಭವಕಾರಕ ಶುಕ್ರ ಇರುತ್ತದೆಯಾದ್ದರಿಂದ ಬುಧನ ಸೇರ್ಪಡೆಯೊಂದಿಗೆ ತ್ರಿಗ್ರಹ ಯೋಗ ಸೃಷ್ಟಿಯಾಗುತ್ತದೆ. ಜುಲೈ 4ರಂದು ಶುಕ್ರನು ಸಿಂಹ ರಾಶಿಗೆ ಪ್ರವೇಶಿಸುವವರೆಗೂ ಈ ಅಪರೂಪದ ಸಂಯೋಗ ಇರಲಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಅತ್ಯಂತ ಶುಭದಾಯಕವಾದ ‘ಸರಸ್ವತಿ ಯೋಗ’ಕ್ಕೆ ನಾಂದಿ ಹಾಡಲಿದೆ.
ಶ್ಲೋಕ:
ಕೇಂದ್ರೇಕೋಣೇಗುರುಬುಧಶುಕ್ರೈಃಬಲಸಂಯುತೈಃ∣
ಸರಸ್ವತೀಸಮುತ್ಪನ್ನಾಜಾತಃಕೀರ್ತಿಧನೈರ್ಯುತಃ∣∣
ಅರ್ಥ: ಜನ್ಮ ಕುಂಡಲಿಯಲ್ಲಾಗಲಿ ಅಥವಾ ಗೋಚಾರದಲ್ಲಾಗಲಿ ಕೇಂದ್ರ ಸ್ಥಾನಗಳು (1,4,7,10) ಅಥವಾ ತ್ರಿಕೋಣ ಸ್ಥಾನಗಳಲ್ಲಿ (1,5,9) ಗುರು, ಬುಧ ಮತ್ತು ಶುಕ್ರ ಗ್ರಹಗಳು ಬಲಶಾಲಿಯಾಗಿ ಜೊತೆಯಾದಾಗ ಅಥವಾ ಪರಸ್ಪರ ದೃಷ್ಟಿ ಬೀರಿದಾಗ ‘ಸರಸ್ವತಿ ಯೋಗ’ ಸೃಷ್ಟಿಯಾಗುತ್ತದೆ.
ಪ್ರಸ್ತುತ ಗೋಚಾರದಲ್ಲಿ, ಗುರು ಮತ್ತು ಶುಕ್ರರೊಂದಿಗೆ ಬುಧನ ಸಾಮೀಪ್ಯವೂ ಇರುವುದರಿಂದ, ಈ ಕಾಲಘಟ್ಟದಲ್ಲಿ ಆಲೋಚನಾ ಶಕ್ತಿ (ಬುಧ), ಜ್ಞಾನ (ಗುರು) ಮತ್ತು ಸೃಜನಶೀಲತೆ ಹಾಗೂ ಕಲೆ (ಶುಕ್ರ) ಮೂರೂ ಸಮನ್ವಯಗೊಳ್ಳುತ್ತವೆ. ಇದು ಜ್ಞಾನ ಮತ್ತು ಪ್ರತಿಭೆಯ ಅಪೂರ್ವ ಸಂಗಮವಾಗಿದ್ದು, ಸಾಹಿತ್ಯ, ಬರವಣಿಗೆ, ಮಾಧ್ಯಮ, ಶಿಕ್ಷಣ, ಕಲೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಇರುವವರಿಗೆ ಅದ್ಭುತ ಫಲಗಳನ್ನು ನೀಡುತ್ತದೆ.
ಸರಸ್ವತಿ ಯೋಗದ ಸಾಮಾನ್ಯ ಫಲಗಳು
- ಬುದ್ಧಿಮತ್ತೆಯ ವಿಕಾಸ: ಕಠಿಣ ನಿರ್ಧಾರಗಳನ್ನು ಅತ್ಯಂತ ಚತುರತೆಯಿಂದ ತೆಗೆದುಕೊಳ್ಳುವ ಸಾಮರ್ಥ್ಯ ಹೆಚ್ಚುತ್ತದೆ.
- ವಾಕ್ ಚಾತುರ್ಯ: ಮಾತಿನ ಪ್ರಭಾವ ಹೆಚ್ಚಾಗಲಿದ್ದು, ಸಂವಹನ ಮಾಧ್ಯಮ, ಉಪನ್ಯಾಸಕರು ಮತ್ತು ಬರಹಗಾರರಿಗೆ ಸಮಾಜದಲ್ಲಿ ಮನ್ನಣೆ ಸಿಗುತ್ತದೆ.
- ಆರ್ಥಿಕ ವೃದ್ಧಿ: ಬುಧ ಮತ್ತು ಗುರುವಿನ ಶುಭ ದೃಷ್ಟಿಯಿಂದಾಗಿ ವ್ಯಾಪಾರ-ವ್ಯವಹಾರಗಳಲ್ಲಿ ಅನಿರೀಕ್ಷಿತ ಲಾಭ ಹಾಗೂ ಹೊಸ ಹೂಡಿಕೆಗೆ ಉತ್ತಮ ಅವಕಾಶಗಳು ಒದಗಿಬರುತ್ತವೆ.
ಲಕ್ಷ್ಮೀನಾರಾಯಣ ಯೋಗ ಎಂದರೇನು? ಜಾತಕದಲ್ಲಿ ಈ ಯೋಗವಿದ್ದರೆ ಸಿಗುವ ಅದೃಷ್ಟದ ಫಲಗಳೇನು?
ದ್ವಾದಶ ರಾಶಿಗಳ ಮೇಲಿನ ಗೋಚಾರ ಫಲಗಳು
ಕರ್ಕಾಟಕ ರಾಶಿಯಲ್ಲಿ ಘಟಿಸುವ ಈ ತ್ರಿಗ್ರಹ ಸಂಯೋಗವು ಹನ್ನೆರಡು ರಾಶಿಗಳ ಮೇಲೆ ಬೀರುವ ಗೋಚಾರ ಫಲಗಳು ಈ ಕೆಳಗಿನಂತಿವೆ:
1. ಮೇಷ ರಾಶಿ
ನಿಮ್ಮ ರಾಶಿಯಿಂದ 4ನೇ ಮನೆಯಲ್ಲಿ (ಸುಖ ಸ್ಥಾನ) ಈ ಯೋಗ ಸೃಷ್ಟಿಯಾಗುವುದರಿಂದ ಭೂಮಿ, ವಾಹನ ಮತ್ತು ಆಸ್ತಿ ಖರೀದಿಗೆ ಯೋಗವಿದೆ. ಕೌಟುಂಬಿಕ ಸೌಖ್ಯ ಹೆಚ್ಚಲಿದ್ದು, ತಾಯಿಯ ಕಡೆಯಿಂದ ಧನಲಾಭವಾಗುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ.
2. ವೃಷಭ ರಾಶಿ
3ನೇ ಮನೆಯಲ್ಲಿ (ಪರಾಕ್ರಮ ಸ್ಥಾನ) ಯೋಗ ಘಟಿಸುವುದರಿಂದ ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಸಣ್ಣ ಪ್ರವಾಸಗಳು ಲಾಭದಾಯಕವಾಗಿರಲಿವೆ. ಸಹೋದರ-ಸಹೋದರಿಯರೊಂದಿಗೆ ಬಾಂಧವ್ಯ ಸುಧಾರಿಸಲಿದೆ. ಬರವಣಿಗೆ ಮತ್ತು ಕಲಾ ಕ್ಷೇತ್ರದಲ್ಲಿರುವವರಿಗೆ ಇದು ಸುವರ್ಣ ಕಾಲ.
3. ಮಿಥುನ ರಾಶಿ
ನಿಮ್ಮ ರಾಶ್ಯಾಧಿಪತಿ ಬುಧನು 2ನೇ ಮನೆಗೆ (ಧನ ಸ್ಥಾನ) ಬರುವುದರಿಂದ ಆರ್ಥಿಕ ಪರಿಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆ ಕಂಡುಬರಲಿದೆ. ಇನ್ನು ಬಾರದು ಎಂದುಕೊಂಡ ಹಣ ಕೈಸೇರಲಿದೆ. ನಿಮ್ಮ ಮಾತಿನ ಪ್ರಭಾವದಿಂದ ಕಠಿಣ ಕೆಲಸಗಳನ್ನೂ ಸುಲಭವಾಗಿ ಪೂರೈಸಿಕೊಳ್ಳುತ್ತೀರಿ.
ಮನದ ಇಷ್ಟಾರ್ಥ ಪೂರೈಸುವ ತಂಜಾವೂರಿನ ಸತ್ಯಂಧೇಶ್ವರ ಸ್ವಾಮಿ ಗಣಪತಿ ಕ್ಷೇತ್ರ
4. ಕರ್ಕಾಟಕ ರಾಶಿ
ನಿಮ್ಮದೇ ರಾಶಿಯಲ್ಲಿ (ಲಗ್ನ ಸ್ಥಾನ) ಈ ಸರಸ್ವತಿ ಯೋಗ ಸೃಷ್ಟಿಯಾಗುತ್ತಿರುವುದರಿಂದ ಅತ್ಯಂತ ಗರಿಷ್ಠ ಶುಭ ಫಲಗಳು ನಿಮಗೆ ಸಿಗಲಿವೆ. ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಆರೋಗ್ಯ ಸುಧಾರಿಸಲಿದೆ. ಹೊಸ ಉದ್ಯೋಗಾವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
5. ಸಿಂಹ ರಾಶಿ
12ನೇ ಮನೆಯಲ್ಲಿ (ವ್ಯಯ ಸ್ಥಾನ) ಈ ಸಂಯೋಗ ಇರುವುದರಿಂದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಕಾರ್ಯಗಳಿಗಾಗಿ ಖರ್ಚು ವೆಚ್ಚಗಳು ಹೆಚ್ಚಾಗಲಿವೆ. ವಿದೇಶಿ ಸಂಪರ್ಕಗಳಿಂದ ಲಾಭವಾಗುವ ಸಾಧ್ಯತೆ ಇದೆ. ಈ ಬದಲಾವಣೆಯು ನಿಮಗೆ ಭಾರೀ ಯಶಸ್ಸನ್ನು ನೀಡಲಿದೆ.
6. ಕನ್ಯಾ ರಾಶಿ
ನಿಮ್ಮ ರಾಶಿಯಿಂದ 11ನೇ ಮನೆಯಲ್ಲಿ (ಲಾಭ ಸ್ಥಾನ) ಯೋಗ ರೂಪುಗೊಳ್ಳುತ್ತಿರುವುದರಿಂದ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಿರಿಯ ಅಧಿಕಾರಿಗಳು ಅಥವಾ ಪ್ರಭಾವಿ ವ್ಯಕ್ತಿಗಳ ಬೆಂಬಲ ಸಿಗಲಿದೆ. ದೀರ್ಘಕಾಲದ ಆಸೆಗಳು ಈ ಅವಧಿಯಲ್ಲಿ ಈಡೇರಲಿವೆ.
ಅಖಂಡ ಶ್ರೀಮಂತ ಯೋಗ: ನಿಮ್ಮ ಜಾತಕದಲ್ಲಿ ಈ ಅದೃಷ್ಟದ ಯೋಗವಿದೆಯೇ? ಇಲ್ಲಿದೆ ಸಂಪೂರ್ಣ ವಿವರ!
7. ತುಲಾ ರಾಶಿ
10ನೇ ಮನೆಯಲ್ಲಿ (ಕರ್ಮ ಸ್ಥಾನ) ತ್ರಿಗ್ರಹ ಯೋಗ ಇರುವುದರಿಂದ ಉದ್ಯೋಗದಲ್ಲಿ ಪ್ರಗತಿ, ಬಡ್ತಿ ಅಥವಾ ವರ್ಗಾವಣೆಯ ಯೋಗವಿದೆ. ಹೊಸ ಉದ್ಯಮ ಆರಂಭಿಸಲು ಯೋಚಿಸುತ್ತಿದ್ದರೆ ಈ ಸಮಯ ಸೂಕ್ತವಾಗಿದೆ. ತಂದೆಯವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ.
8. ವೃಶ್ಚಿಕ ರಾಶಿ
9ನೇ ಮನೆಯಲ್ಲಿ (ಭಾಗ್ಯ ಸ್ಥಾನ) ಈ ಯೋಗ ಇರುವುದರಿಂದ ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿರಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶ ಪ್ರಯಾಣ ಬೆಳೆಸಲು ಬಯಸುವ ವಿದ್ಯಾರ್ಥಿಗಳಿಗೆ ಕಾಲ ಪಕ್ವವಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ನಲ್ಲಮಲ ಕಾಡಿನ ಸಿದ್ಧರ ತಪೋಭೂಮಿಯಲ್ಲಿ ಇಷ್ಟಾರ್ಥ ನೆರವೇರಿಸುವ ಅಪೂರ್ವ ಶಕ್ತಿ ದೇವತೆ ಇಷ್ಟಕಾಮೇಶ್ವರಿ ದೇವಿ
9. ಧನು ರಾಶಿ
8ನೇ ಮನೆಯಲ್ಲಿ (ಆಯುಷ್ಯ) ಈ ಸಂಯೋಗವಿರುವುದರಿಂದ ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗರೂಕರಾಗಿರಬೇಕು. ಆರೋಗ್ಯದ ಕಡೆ ಗಮನವಿರಲಿ. ಆದರೆ ಸಂಶೋಧನೆ, ಗೂಢ ವಿಜ್ಞಾನ ಮತ್ತು ಜ್ಯೋತಿಷ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಈ ಅವಧಿ ಅನಿರೀಕ್ಷಿತ ಯಶಸ್ಸನ್ನು ತರಲಿದೆ.
10. ಮಕರ ರಾಶಿ
7ನೇ ಮನೆಯಲ್ಲಿ (ಕಳತ್ರ ಸ್ಥಾನ) ಸರಸ್ವತಿ ಯೋಗ ಸೃಷ್ಟಿಯಾಗುವುದರಿಂದ ವೈವಾಹಿಕ ಜೀವನದಲ್ಲಿ ಮಧುರತೆ ಇರಲಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಪಾಲುದಾರಿಕೆ ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ನಿರೀಕ್ಷಿಸಬಹುದು.
ರಾಜ ಶ್ಯಾಮಲಾ ದೇವಿ: ಜ್ಞಾನ, ವಾಕ್ ಸಿದ್ಧಿ, ಕಲೆ ಮತ್ತು ರಾಜಕೀಯ ಯಶಸ್ಸಿನ ಶಕ್ತಿದೇವತೆ
11. ಕುಂಭ ರಾಶಿ
6ನೇ ಮನೆಯಲ್ಲಿ (ಶತ್ರು/ರೋಗ ಸ್ಥಾನ) ಗ್ರಹಗಳ ಸಂಯೋಗವಿರುವುದರಿಂದ ಕೋರ್ಟ್ ಕಚೇರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯಲು ದಾರಿ ಸುಗಮವಾಗಲಿದೆ. ಆದರೆ, ಆರೋಗ್ಯ ಮತ್ತು ಆಹಾರ ಪದ್ಧತಿಯಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಅಗತ್ಯ.
12. ಮೀನ ರಾಶಿ
5ನೇ ಮನೆಯಲ್ಲಿ (ಪೂರ್ವಪುಣ್ಯ/ಸಂತಾನ ಸ್ಥಾನ) ಈ ಯೋಗವಿರುವುದರಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫಲಿತಾಂಶ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಂತಾನ ಅಪೇಕ್ಷಿತರ ಪ್ರಯತ್ನ ಫಲ ನೀಡಲಿದೆ. ಷೇರು ಮಾರುಕಟ್ಟೆಯಲ್ಲಿ ಬುದ್ಧಿವಂತಿಕೆಯ ಹೂಡಿಕೆ ಲಾಭ ತರಲಿದೆ.
ವಿಶೇಷ ಸೂಚನೆ: ಈ ಅವಧಿಯಲ್ಲಿ ‘ಓಂ ಐಂ ಸರಸ್ವತ್ಯೈ ನಮಃ’ ಎಂಬ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಯೋಗದ ಶುಭ ಫಲಗಳು ಮತ್ತಷ್ಟು ವೃದ್ಧಿಯಾಗುತ್ತವೆ.
ಲೇಖನ- ಶ್ರೀನಿವಾಸ ಮಠ









