ಚಾರ್ ಧಾಮ್ ಯಾತ್ರೆಗೆ ಸರ್ಕಾರದಿಂದ 20,000 ರೂಪಾಯಿ ಧನಸಹಾಯ

Infographic poster of Karnataka Government's Chardham Yatra Subsidy Scheme 2026-27 showing pilgrims in front of the Kedarnath temple and details about the Rs 20,000 financial assistance.
ಕರ್ನಾಟಕ ಸರ್ಕಾರದ ಚಾರ್ ಧಾಮ್ ಯಾತ್ರೆ ಧನಸಹಾಯ ಯೋಜನೆ 2026-27: ಅರ್ಹ ಯಾತ್ರಾರ್ಥಿಗಳಿಗೆ ತಲಾ ರೂ. 20,000 ಸಹಾಯಧನ ಪಡೆಯಲು ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಆಹ್ವಾನ.

2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಚಾರ್ ಧಾಮ್ ಯಾತ್ರೆ ಕೈಗೊಂಡಿರುವ ಯಾತ್ರಾರ್ಥಿಗಳಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ. ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು  ಅರ್ಹ ಯಾತ್ರಾರ್ಥಿಗಳಿಗೆ ತಲಾ ರೂ. 20,000 (ಇಪ್ಪತ್ತು ಸಾವಿರ ರೂಪಾಯಿಗಳು)ಗಳ ಸಹಾಯಧನವನ್ನು ನೀಡಲು ಇಲಾಖೆಯು ಅರ್ಜಿಗಳನ್ನು ಆಹ್ವಾನಿಸಿದೆ.

ಯಾತ್ರಾರ್ಥಿಗಳು 16.06.2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಸಹಾಯ ಆಗುವಂಥ ಮಾಹಿತಿ ಈ ಕೆಳಕಂಡಂತೆ ಇವೆ.

ಅರ್ಹತಾ ಮಾನದಂಡಗಳು

ಈ ಯೋಜನೆಯ ಲಾಭ ಪಡೆಯಲು ಯಾತ್ರಾರ್ಥಿಗಳು ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕಿರುತ್ತದೆ:

  1. ರಾಜ್ಯದ ನಿವಾಸಿ: ಯಾತ್ರಾರ್ಥಿಯು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಕಾಯಂ ನಿವಾಸಿ ಆಗಿರಬೇಕು.
  2. ವಯೋಮಿತಿ: 45 ವರ್ಷ ಮೇಲ್ಪಟ್ಟ ಯಾತ್ರಾರ್ಥಿಗಳು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.
  3. ಯಾತ್ರಾ ಸ್ಥಳಗಳು: ಯಾತ್ರಾರ್ಥಿಯು ಕಡ್ಡಾಯವಾಗಿ ಉತ್ತರಾಖಂಡದ ನಾಲ್ಕು ಧಾಮಗಳಾದ ಬದರಿನಾಥ್, ಕೇದಾರ್‌ನಾಥ್, ಯಮುನೋತ್ರಿ ಮತ್ತು ಗಂಗೋತ್ರಿ ಕ್ಷೇತ್ರಗಳಿಗೆ ಭೇಟಿ ನೀಡಿರಬೇಕು.
  4. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15.11.2026 ರ ಸಂಜೆ 5.30 ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
  5. ಅನುದಾನ ಹಂಚಿಕೆ: ಸರ್ಕಾರದ ಮಾರ್ಗಸೂಚಿ ಮತ್ತು ಅನುದಾನದ ಲಭ್ಯತೆಗೆ ಅನುಗುಣವಾಗಿ ಧನಸಹಾಯ ವಿತರಿಸಲಾಗುತ್ತದೆ.
  6. ಅರ್ಜಿ ಸಲ್ಲಿಸುವ ವಿಧಾನ: ಯಾತ್ರಾರ್ಥಿಗಳು ತಮ್ಮ ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಸೇವಾ ಸಿಂಧು ವೆಬ್ ಪೋರ್ಟಲ್(https://sevasindhuservices.karnataka.gov.in) ನಲ್ಲಿ 15.11.2026ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.

ಸಮೃದ್ಧಿಯ ಸಾಕಾರ ರೂಪ ಶ್ರೀಕರ ನಾರಾಯಣ; ಈ ಪೂಜೆಯ ಫಲಗಳೇನು?

ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕಾದ ದಾಖಲೆಗಳು

ಅರ್ಜಿ ಸಲ್ಲಿಸುವ ವೇಳೆ ನಿಮ್ಮ ಬಳಿ ಈ ಕೆಳಗಿನ ದಾಖಲೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳಿ:

  1. ಭಾವಚಿತ್ರ: ಪಾಸ್‌ಪೋರ್ಟ್ ಅಳತೆಯ ಇತ್ತೀಚಿನ ಭಾವಚಿತ್ರ.
  2. ಗುರುತಿನ ಚೀಟಿ: ಚುನಾವಣಾ ಗುರುತಿನ ಚೀಟಿ / ರೇಷನ್ ಕಾರ್ಡ್ / ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್.
  3. ಸ್ವಯಂ ದೃಢೀಕರಣ ಪತ್ರ: ರೂ. 100 ಗಳ ಇ-ಸ್ಟಾಂಪ್ ಪೇಪರ್‌ನಲ್ಲಿ (E-Stamp Paper) “ಈ ಹಿಂದೆ ಸರ್ಕಾರದ ಸಹಾಯಧನವನ್ನು ಪಡೆದಿಲ್ಲ” ಎಂದು ಸ್ವಯಂ ದೃಢೀಕರಿಸಿ, ನೋಟರಿ ಮೊಹರು ಮತ್ತು ಸಹಿಯೊಂದಿಗೆ ದೃಢೀಕರಣ ಪತ್ರವನ್ನು ಅಪ್‌ಲೋಡ್ ಮಾಡಬೇಕು.
  4. ನೋಂದಣಿ ಪ್ರತಿ: ಯಾತ್ರೆ ಕೈಗೊಳ್ಳುವ ಮುನ್ನ ಯಾತ್ರೆಗೆ ನೋಂದಾಯಿಸಿಕೊಂಡ ಪ್ರತಿ.
  5. ಪ್ರಮಾಣ ಪತ್ರ: ಯಾತ್ರೆ ಮುಗಿದ ನಂತರ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ನೀಡಲಾದ ಪ್ರಮಾಣ ಪತ್ರ (ಇದರಲ್ಲಿ ಕಡ್ಡಾಯವಾಗಿ 4 ಧಾಮಗಳ ಹೆಸರು ನಮೂದಾಗಿರಬೇಕು).

ಪ್ರಮುಖ ಸೂಚನೆಗಳು

  • ವೆಬ್‌ಸೈಟ್: ಹೆಚ್ಚಿನ ವಿವರಗಳಿಗಾಗಿ ಇಲಾಖೆಯ ಅಧಿಕೃತ ವೆಬ್ ಸೈಟ್ https://itms.kar.nic.in ಗೆ ಭೇಟಿ ನೀಡಿ.
  • ಅರ್ಜಿ ಸ್ಥಿತಿ: ಅರ್ಜಿ ಸಲ್ಲಿಸಿದ ಯಾತ್ರಾರ್ಥಿಗಳು ತಮ್ಮ ಅರ್ಜಿಯ ಹಂತದ ಬಗ್ಗೆ ಆಗಿಂದಾಗ್ಗೆ ತಮ್ಮ ಲಾಗಿನ್ (Login) ಮೂಲಕ ಪರಿಶೀಲಿಸಿಕೊಳ್ಳಬಹುದು.
  • ಬ್ಯಾಂಕ್ ಖಾತೆ ಮತ್ತು ಆಧಾರ್ ಜೋಡಣೆ: ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ತಮ್ಮ ಬ್ಯಾಂಕ್ ಖಾತೆಯು ಚಾಲ್ತಿಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹಾಗೂ ಆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಸೀಡ್ (Seed) ಹಾಗೂ NPCI Active ಮಾಡಿಸಿರಬೇಕು. ತಪ್ಪಿದಲ್ಲಿ ಧನಸಹಾಯ ಜಮೆ ಆಗದಿದ್ದರೆ ಅದಕ್ಕೆ ಯಾತ್ರಾರ್ಥಿಗಳೇ ನೇರ ಹೊಣೆಯಾಗುತ್ತಾರೆ.
  • ಕಾಲಮಿತಿ: ನಿಗದಿತ ಅವಧಿ ಮುಗಿದ ನಂತರ ಸಹಾಯಧನ ಕೋರಿ ಸಲ್ಲಿಸುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

ಲೇಖನ- ಶ್ರೀನಿವಾಸ ಮಠ

ಶ್ರೀನಿವಾಸ ಮಠ

ಸಂಪಾದಕರು, ಶ್ರೀಗುರುಭ್ಯೋ.ಕಾಮ್

ಪತ್ರಿಕೋದ್ಯಮದಲ್ಲಿ ಹದಿನೆಂಟು ವರ್ಷಕ್ಕೂ ಹೆಚ್ಚು ಅನುಭವ ಇರುವ ಲೇಖಕ. ಕನ್ನಡದ ಪ್ರಮುಖ ದಿನಪತ್ರಿಕೆಗಳು ಹಾಗೂ ವಾರಪತ್ರಿಕೆ ಮತ್ತು ಆನ್ ಲೈನ್ ವೆಬ್ ಪೋರ್ಟಲ್ ಗಳಲ್ಲಿ ವಿವಿಧ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವೈದಿಕ ಜ್ಯೋತಿಷ್ಯವನ್ನು ಪದ್ಧತಿಯಿಂದ ಅಭ್ಯಾಸ ಮಾಡಿರುವಂಥ ಇವರು, ಈ ತನಕ ಮೂರು ಸಾವಿರಕ್ಕೂ ಹೆಚ್ಚು ಜ್ಯೋತಿಷ್ಯ ಲೇಖನಗಳನ್ನು ವಿವಿಧ ವೆಬ್ ಪೋರ್ಟಲ್ ಗಳಿಗಾಗಿ ಬರೆದಿದ್ದಾರೆ. ಅಧ್ಯಾತ್ಮ, ಜ್ಯೋತಿಷ್ಯ ಹಾಗೂ ಧಾರ್ಮಿಕ ವಿಷಯಗಳಲ್ಲಿ ಅಳವಾದ ಜ್ಞಾನ ಮತ್ತು ನಿರಂತರ ಅಧ್ಯಯನ ಇರುವಂಥ ಶ್ರೀನಿವಾಸ ಮಠ ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸವಿದ್ದು, ಜ್ಯೋತಿಷ್ಯವನ್ನು ವೃತ್ತಿಯಾಗಿ ಸ್ವೀಕರಿಸಿದ್ದಾರೆ.

Latest News

Related Posts