ಪ್ರಕೃತಿಯ ನಿಯಮದಂತೆ ಹೆಣ್ಣುಮಕ್ಕಳು ರಜಸ್ವಲೆ ಆಗುವುದು ಒಂದು ಸಹಜ ಪ್ರಕ್ರಿಯೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಬ್ಬ ಹೆಣ್ಣುಮಗಳು ಮೊದಲ ಬಾರಿಗೆ ಋತುಮತಿಯಾದ ಸಮಯದ ಕುಂಡಲಿಯನ್ನು ರಚಿಸುವುದರಿಂದ, ಆಕೆಯ ಮುಂದಿನ ವಿವಾಹ ಜೀವನ, ಸಂತಾನ ಸುಖ ಹಾಗೂ ವೈಯಕ್ತಿಕ ಭವಿಷ್ಯದ ಬಗ್ಗೆ ಕೆಲವು ಮಹತ್ವದ ಸೂಚನೆಗಳನ್ನು ಪಡೆಯಬಹುದು ಎಂಬ ನಂಬಿಕೆಯಿದೆ. ರಜಸ್ವಲಾ ಸಮಯದ ವಿವಿಧ ಅಂಶಗಳ ಶುಭಾಶುಭ ವಿವರಗಳನ್ನು ಈ ಕೆಳಗೆ ನೀಡಲಾಗಿದೆ:
1. ಮಾಸ, ತಿಥಿ ಮತ್ತು ವಾರಗಳ ಪ್ರಭಾವ
- ಮಾಸ: ಚೈತ್ರ, ಜ್ಯೇಷ್ಠ, ಆಷಾಢ, ಭಾದ್ರಪದ, ಕಾರ್ತಿಕ ಮತ್ತು ಪುಷ್ಯ ಮಾಸಗಳು ಸಾಧಾರಣ ಫಲ ನೀಡುತ್ತವೆ. ಇನ್ನುಳಿದ ಮಾಸಗಳು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ.
- ತಿಥಿ: ಬಿದಿಗೆ, ಚೌತಿ, ಷಷ್ಠಿ, ಅಷ್ಟಮಿ, ನವಮಿ, ದ್ವಾದಶಿ, ಚತುರ್ದಶಿ ಮತ್ತು ಅಮಾವಾಸ್ಯೆ ತಿಥಿಗಳು ಶುಭವಲ್ಲ. ಉಳಿದ ತಿಥಿಗಳು ಉತ್ತಮ ಫಲವನ್ನು ನೀಡುತ್ತವೆ.
- ವಾರ: ಬುಧವಾರ, ಗುರುವಾರ ಮತ್ತು ಶುಕ್ರವಾರಗಳು ಅತ್ಯಂತ ಶುಭಕರ. ಉಳಿದ ವಾರಗಳು ಸಾಧಾರಣ ಶುಭ ಫಲವನ್ನು ನೀಡುತ್ತವೆ.
2. ನಕ್ಷತ್ರ ಮತ್ತು ಯೋಗಗಳ ವಿವರ
- ನಕ್ಷತ್ರ: ಭರಣಿ, ಮೃಗಶಿರಾ, ಆರಿದ್ರಾ, ಆಶ್ಲೇಷ, ಚಿತ್ತಾ, ವಿಶಾಖ, ಅನೂರಾಧ ಮತ್ತು ಜ್ಯೇಷ್ಠ ನಕ್ಷತ್ರಗಳು ಶುಭಕರವಲ್ಲ ಎಂದು ಹೇಳಲಾಗಿದೆ.
- ಯೋಗ: ವಿಷ್ಣಂಭ, ಅತಿಗಂಡ, ಶೂಲ, ಗಂಡ, ವ್ಯಾಘಾತ, ವಜ್ರ, ವ್ಯತಿಪಾತ, ಪರಿಘ, ಇಂದ್ರ ಮತ್ತು ವರಿಯಾನ್ ಯೋಗಗಳನ್ನು ಹೊರತುಪಡಿಸಿ ಉಳಿದ ಯೋಗಗಳು ಶುಭಪ್ರದವಾಗಿವೆ.
3. ಕರಣ, ರಾಶಿ ಮತ್ತು ಲಗ್ನಗಳು
- ಕರಣ: ಬಲ, ಕೌಲವ, ಭದ್ರ, ಶಕುನಿ ಮತ್ತು ಕಿಂಸ್ತುಘ್ನ ಕರಣಗಳನ್ನು ಹೊರತುಪಡಿಸಿ ಉಳಿದ ಕರಣಗಳು ಶುಭಕರ.
- ರಾಶಿ: ಮೇಷ, ಕರ್ಕ, ವೃಶ್ಚಿಕ, ಮಕರ ಮತ್ತು ಮೀನ ರಾಶಿಗಳನ್ನು ಹೊರತುಪಡಿಸಿ ಉಳಿದ ರಾಶಿಗಳು ಶುಭ ಫಲ ನೀಡುತ್ತವೆ.
- ಲಗ್ನ: ವೃಷಭ, ಸಿಂಹ, ಕನ್ಯಾ, ಧನುಸ್ಸು ಮತ್ತು ಮೀನ ಲಗ್ನಗಳು ಈ ಸಮಯಕ್ಕೆ ಅತ್ಯಂತ ಶುಭಪ್ರದವಾಗಿವೆ.
4. ಸಮಯ ಮತ್ತು ಉಡುಗೆಯ ಮಹತ್ವ
- ಹೋರಾ: ರವಿ, ಕುಜ ಮತ್ತು ಶನಿ ಹೋರಾ ಕಾಲಗಳನ್ನು ಹೊರತುಪಡಿಸಿ ಉಳಿದ ಹೋರಾ ಕಾಲಗಳು ಶುಭಕರ.
- ಸಮಯ: ಪ್ರಾತಃಕಾಲ (ಬೆಳಗಿನ ಜಾವ) ರಜಸ್ವಲೆಯಾಗುವುದು ಅತ್ಯಂತ ಶುಭಕರವೆಂದು ಪರಿಗಣಿಸಲಾಗಿದೆ.
- ವಸ್ತ್ರ: ರಜಸ್ವಲೆಯಾದ ಸಮಯದಲ್ಲಿ ಧರಿಸಿರುವ ಬಟ್ಟೆ ಕಪ್ಪು ಅಥವಾ ಕೆಂಪು ಬಣ್ಣದ್ದಾಗಿರಬಾರದು. ಉಳಿದ ಬಣ್ಣದ ವಸ್ತ್ರಗಳು ಶುಭದಾಯಕ.
ಪುಣ್ಯಾಹ ವಾಚನ- ಪಂಚಗವ್ಯ ಪ್ರಾಶನ: ಈ ಶುದ್ಧೀಕರಣ ವಿಧಿಯ ಮಹತ್ವ, ಪ್ರಯೋಜನಗಳೇನು?
ಅಂಶ ನಿರ್ಣಯ (ಪ್ರಾಮುಖ್ಯತೆ)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೇಲಿನ ಪ್ರತಿಯೊಂದು ಅಂಶಕ್ಕೂ ತನ್ನದೇ ಆದ ಪ್ರಾಮುಖ್ಯತೆಯಿದೆ (Points/Weightage):
- ತಿಥಿ: 1 ಅಂಶ
- ನಕ್ಷತ್ರ: 4 ಅಂಶಗಳು
- ವಾರ: 8 ಅಂಶಗಳು
- ಧರಿಸಿದ್ದ ವಸ್ತ್ರ: 100 ಅಂಶಗಳು
- ಋತುಮತಿಯಾದ ಸಮಯ: 100 ಕ್ಕೂ ಅಧಿಕ ಅಂಶಗಳು
ಕೊನೆ ಮಾತು: ಈ ಮೇಲಿನ ವಿವರಗಳನ್ನು ಗಮನಿಸಿದರೆ, ಹೆಣ್ಣುಮಕ್ಕಳು ಮೊದಲ ಬಾರಿ ರಜಸ್ವಲೆಯಾದಾಗ ಅವರು ಧರಿಸಿದ್ದ ವಸ್ತ್ರದ ಬಣ್ಣ ಮತ್ತು ಆ ಸಮಯಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯ ನೀಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ. ಈ ಮಾಹಿತಿಯು ಸಾಂಪ್ರದಾಯಿಕ ನಂಬಿಕೆ ಮತ್ತು ಶಾಸ್ತ್ರದ ಮಾಹಿತಿಗಾಗಿ ನೀಡಲಾಗಿದೆ.
ಲೇಖನ- ಶ್ರೀನಿವಾಸ ಮಠ









