ಇದೇ ಜೂನ್ 8, 2026 ರಿಂದ ಜುಲೈ 4, 2026 ರವರೆಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಅಪರೂಪದ ಮತ್ತು ಅತ್ಯಂತ ಪ್ರಭಾವಶಾಲಿ ವಿದ್ಯಮಾನ ಸಂಭವಿಸುತ್ತಿದೆ. ನವಗ್ರಹಗಳಲ್ಲಿ ಅತ್ಯಂತ ಶುಭ ಗ್ರಹಗಳಾದ ದೇವಗುರು ಬೃಹಸ್ಪತಿ (ಗುರು) ಮತ್ತು ದೈತ್ಯಗುರು ಶುಕ್ರಾಚಾರ್ಯ (ಶುಕ್ರ) ಕರ್ಕಾಟಕ ರಾಶಿಯಲ್ಲಿ ಒಂದಾಗುತ್ತಿದ್ದಾರೆ.
ಕರ್ಕಾಟಕ ರಾಶಿಯಲ್ಲಿ ಗುರು ಈಗಾಗಲೇ ತನ್ನ ಉಚ್ಚ ಸ್ಥಾನದಲ್ಲಿದ್ದಾನೆ (Exalted). ಈಗ ಅದರೊಂದಿಗೆ ಸುಖ, ಭೋಗ, ಐಶ್ವರ್ಯ ಕಾರಕನಾದ ಶುಕ್ರನು ಬಂದು ಸೇರುವುದರಿಂದ “ಗುರು-ಶುಕ್ರ ಯುತಿ” ಏರ್ಪಡುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇವರಿಬ್ಬರೂ ಪರಸ್ಪರ ಶತ್ರು ಗ್ರಹಗಳಾಗಿದ್ದರೂ, ಇಬ್ಬರೂ ನೈಸರ್ಗಿಕ ಶುಭ ಗ್ರಹಗಳಾಗಿರುವುದರಿಂದ ಈ ಯುತಿಯು ಜಗತ್ತಿನಾದ್ಯಂತ ಮತ್ತು ದ್ವಾದಶ ರಾಶಿಗಳ ಮೇಲೆ ವ್ಯಾಪಕ ಧನಾತ್ಮಕ ಹಾಗೂ ಮಿಶ್ರ ಪ್ರಭಾವವನ್ನು ಬೀರುತ್ತದೆ.
ಗುರು-ಶುಕ್ರ ಯುತಿಯ ಶಾಸ್ತ್ರೋಕ್ತ ಹಿನ್ನೆಲೆ (ಶ್ಲೋಕ)
ಜ್ಯೋತಿಷ್ಯ ಶಾಸ್ತ್ರದ ಪ್ರಸಿದ್ಧ ಗ್ರಂಥಗಳಲ್ಲಿ ಗುರು ಮತ್ತು ಶುಕ್ರ ಗ್ರಹಗಳು ಒಂದೇ ಮನೆಯಲ್ಲಿದ್ದಾಗ ಉಂಟಾಗುವ ಫಲವನ್ನು ಈ ಕೆಳಗಿನಂತೆ ವಿವರಿಸಲಾಗಿದೆ:
ಜ್ಞಾನವಿಜ್ಞಾನಶಾಸ್ತ್ರಜ್ಞಃ ಕಾವ್ಯನಾಟಕಕೃದ್ಭವೇತ್।
ಸುಖೀ ಧನಸಮೃದ್ಧಶ್ಚ ಗುರುಶುಕ್ರೇ ಕಲಾಪ್ರಿಯಃ॥
ಭಾವಾರ್ಥ:
ಯಾವ ಜಾತಕದಲ್ಲಿ ಅಥವಾ ಗೋಚಾರದಲ್ಲಿ ಗುರು ಮತ್ತು ಶುಕ್ರರು ಒಂದೇ ರಾಶಿಯಲ್ಲಿ ಇರುತ್ತಾರೋ, ಅಂತಹ ಸಮಯದಲ್ಲಿ ಜ್ಞಾನ ಮತ್ತು ವಿಜ್ಞಾನದ ತಾರ್ಕಿಕ ಬೆಳವಣಿಗೆಯಾಗುತ್ತದೆ. ಜನರು ಕಾವ್ಯ, ಸಾಹಿತ್ಯ, ಕಲೆ ಮತ್ತು ನಾಟಕಗಳಲ್ಲಿ ಆಸಕ್ತಿ ತಳೆಯುತ್ತಾರೆ. ಸಮಾಜದಲ್ಲಿ ಸುಖ ಮತ್ತು ಧನ ಸಮೃದ್ಧಿ ಹೆಚ್ಚುತ್ತದೆ. ಭೌತಿಕ ಸುಖಗಳ ಜೊತೆಗೆ ಆಧ್ಯಾತ್ಮಿಕ ಚಿಂತನೆಯೂ ಜಾಗೃತವಾಗುತ್ತದೆ.
ನಿಮ್ಮ ಜಾತಕದಲ್ಲಿ ಹಂಸ ಯೋಗವಿದೆಯೇ? ಸುಖ, ಶಾಂತಿ, ಅಖಂಡ ಭಾಗ್ಯದ ರಾಜಯೋಗ
ದ್ವಾದಶ ರಾಶಿಗಳ ಮೇಲೆ ಗುರು-ಶುಕ್ರ ಯುತಿಯ ದೀರ್ಘ ಫಲಪ್ರದ ಮಾಹಿತಿ
ಜುಲೈ 4ರ ವರೆಗೆ ಕರ್ಕಾಟಕ ರಾಶಿಯಲ್ಲಿ ನಡೆಯುವ ಈ ಶುಭ ಗ್ರಹಗಳ ಮಿಲನವು ನಿಮ್ಮ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಲಿದೆ ಎಂಬ ವಿವರ ಇಲ್ಲಿದೆ:
1. ಮೇಷ ರಾಶಿ
ಮೇಷ ರಾಶಿಯವರಿಗೆ ಈ ಯುತಿಯು ನಾಲ್ಕನೇ ಮನೆಯಲ್ಲಿ (ಸುಖ ಸ್ಥಾನ) ಸಂಭವಿಸುತ್ತಿದೆ.
- ಧನಾತ್ಮಕ ಪ್ರಭಾವ: ಭೂಮಿ, ವಾಹನ ಅಥವಾ ಹೊಸ ಮನೆ ಖರೀದಿಸುವ ಯೋಗವಿದೆ. ಕುಟುಂಬದಲ್ಲಿ ನೆಮ್ಮದಿ ಇರಲಿದ್ದು, ತಾಯಿಯ ಕಡೆಯಿಂದ ಸಂಪೂರ್ಣ ಸಹಕಾರ ಸಿಗಲಿದೆ. ಆಸ್ತಿ ವಿವಾದಗಳು ಬಗೆಹರಿಯಲಿವೆ.
- ಎಚ್ಚರಿಕೆ: ಅತಿಯಾದ ಐಷಾರಾಮಿ ಜೀವನಕ್ಕೆ ಹಣ ವ್ಯಯ ಮಾಡುವುದನ್ನು ನಿಯಂತ್ರಿಸಿ.
2. ವೃಷಭ ರಾಶಿ
ವೃಷಭ ರಾಶಿಯ ಅಧಿಪತಿ ಶುಕ್ರನೇ ಆಗಿರುವುದರಿಂದ, ಈ ಯುತಿಯು ನಿಮ್ಮ ಮೂರನೇ ಮನೆಯಲ್ಲಿ (ಪರಾಕ್ರಮ ಸ್ಥಾನ) ನಡೆಯುತ್ತಿದೆ.
- ಧನಾತ್ಮಕ ಪ್ರಭಾವ: ನಿಮ್ಮ ಸೃಜನಶೀಲತೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಕಲೆ, ಮಾಧ್ಯಮ, ಮತ್ತು ಬರವಣಿಗೆ ಕ್ಷೇತ್ರದಲ್ಲಿ ಇರುವವರಿಗೆ ಅಪಾರ ಕೀರ್ತಿ ಸಿಗಲಿದೆ. ಸಣ್ಣ ಪ್ರವಾಸಗಳು ಲಾಭದಾಯಕವಾಗಿರುತ್ತವೆ.
- ಎಚ್ಚರಿಕೆ: ಒಡಹುಟ್ಟಿದವರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರದಂತೆ ಜಾಗ್ರತೆ ವಹಿಸಿ.
3. ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಯುತಿಯು ಎರಡನೇ ಮನೆಯಲ್ಲಿ (ಧನ ಸ್ಥಾನ) ಆಗುತ್ತಿದೆ.
- ಧನಾತ್ಮಕ ಪ್ರಭಾವ: ಆರ್ಥಿಕವಾಗಿ ಇದು ಸುವರ್ಣ ಕಾಲ. ದೀರ್ಘಕಾಲದಿಂದ ಸಿಲುಕಿಕೊಂಡಿದ್ದ ಹಣ ಕೈ ಸೇರಲಿದೆ. ನಿಮ್ಮ ಮಾತಿನ ಚಾತುರ್ಯದಿಂದ ಕಠಿಣ ಕೆಲಸಗಳನ್ನೂ ಸುಲಭವಾಗಿ ಮುಗಿಸುತ್ತೀರಿ. ವ್ಯಾಪಾರದಲ್ಲಿ ಲಾಭ ದುಪ್ಪಟ್ಟಾಗಲಿದೆ.
- ಎಚ್ಚರಿಕೆ: ಹೂಡಿಕೆ ಮಾಡುವಾಗ ಆತುರ ಬೇಡ, ಹಿರಿಯರ ಸಲಹೆ ಪಡೆಯಿರಿ.
4. ಕರ್ಕಾಟಕ ರಾಶಿ
ನಿಮ್ಮದೇ ರಾಶಿಯ ಒಂದನೇ ಮನೆಯಲ್ಲಿ (ಲಗ್ನ ಸ್ಥಾನ) ಉಚ್ಚ ಗುರು ಮತ್ತು ಶುಕ್ರರ ಮಿಲನವಾಗುತ್ತಿದೆ.
- ಧನಾತ್ಮಕ ಪ್ರಭಾವ: ನಿಮ್ಮ ಆಕರ್ಷಣೆ ಮತ್ತು ಸಮಾಜದಲ್ಲಿನ ಗೌರವ ದುಪ್ಪಟ್ಟಾಗಲಿದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರಲಿದೆ. ಮಾನಸಿಕ ಪ್ರಶಾಂತತೆ ನಿಮ್ಮದಾಗಲಿದೆ.
- ಎಚ್ಚರಿಕೆ: ಅಹಂಕಾರ ತಲೆಗೇರದಂತೆ ನೋಡಿಕೊಳ್ಳಿ, ಆರೋಗ್ಯದ ಕಡೆ ಗಮನವಿರಲಿ.
5. ಸಿಂಹ ರಾಶಿ
ಸಿಂಹ ರಾಶಿಯವರಿಗೆ ಈ ಯುತಿಯು ಹನ್ನೆರಡನೇ ಮನೆಯಲ್ಲಿ (ವ್ಯಯ ಸ್ಥಾನ) ಸಂಭವಿಸುತ್ತಿದೆ.
- ಧನಾತ್ಮಕ ಪ್ರಭಾವ: ವಿದೇಶಿ ವ್ಯವಹಾರಗಳಿಂದ ಲಾಭವಾಗಲಿದೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಗಳಿಗಾಗಿ ಹಣ ವ್ಯಯ ಮಾಡಲಿದ್ದೀರಿ. ಕೋರ್ಟ್ ಕಚೇರಿ ಕಲಾಪಗಳಲ್ಲಿ ಜಯ ಸಿಗಬಹುದು.
- ಎಚ್ಚರಿಕೆ: ಅನಗತ್ಯ ಖರ್ಚುಗಳು ಹೆಚ್ಚಾಗಲಿವೆ. ಕಣ್ಣಿನ ಸಮಸ್ಯೆ ಅಥವಾ ನಿದ್ರಾಹೀನತೆ ಕಾಡಬಹುದು.
6. ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಈ ಯುತಿಯು ಹನ್ನೊಂದನೇ ಮನೆಯಲ್ಲಿ (ಲಾಭ ಸ್ಥಾನ) ನಡೆಯುತ್ತಿದೆ.
- ಧನಾತ್ಮಕ ಪ್ರಭಾವ: ಇದು ಅತ್ಯಂತ ಲಾಭದಾಯಕ ಸಮಯ. ಒಂದಕ್ಕಿಂತ ಹೆಚ್ಚು ಮೂಲಗಳಿಂದ ಆದಾಯ ಬರಲಿದೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ಸ್ನೇಹಿತರ ವಲಯದಿಂದ ದೊಡ್ಡ ಸಹಾಯ ಸಿಗಲಿದೆ.
- ಎಚ್ಚರಿಕೆ: ಷೇರು ಮಾರುಕಟ್ಟೆಯಲ್ಲಿ ಅತಿಯಾದ ರಿಸ್ಕ್ ತೆಗೆದುಕೊಳ್ಳಬೇಡಿ.
7. ತುಲಾ ರಾಶಿ
ತುಲಾ ರಾಶಿಯ ಅಧಿಪತಿ ಶುಕ್ರ. ಈ ಯುತಿಯು ನಿಮ್ಮ ಹತ್ತನೇ ಮನೆಯಲ್ಲಿ (ಕರ್ಮ ಸ್ಥಾನ) ಆಗುತ್ತಿದೆ.
- ಧನಾತ್ಮಕ ಪ್ರಭಾವ: ಉದ್ಯೋಗ ರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಲಿದ್ದೀರಿ. ಮೇಲಧಿಕಾರಿಗಳಿಂದ ಮೆಚ್ಚುಗೆ, ಹೊಸ ಜವಾಬ್ದಾರಿಗಳು ಸಿಗಲಿವೆ. ನಿರುದ್ಯೋಗಿಗಳಿಗೆ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಸಿಗುವ ಯೋಗವಿದೆ.
- ಎಚ್ಚರಿಕೆ: ಕೆಲಸದ ಒತ್ತಡದಿಂದಾಗಿ ಕುಟುಂಬಕ್ಕೆ ಸಮಯ ಕೊಡುವುದು ಕಷ್ಟವಾಗಬಹುದು.
8. ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಯುತಿಯು ಒಂಬತ್ತನೇ ಮನೆಯಲ್ಲಿ (ಭಾಗ್ಯ ಸ್ಥಾನ) ಸಂಭವಿಸುತ್ತಿದೆ.
- ಧನಾತ್ಮಕ ಪ್ರಭಾವ: ಅದೃಷ್ಟವು ನಿಮ್ಮ ಕೈಹಿಡಿಯಲಿದೆ. ದೀರ್ಘಾವಧಿಯ ಪ್ರವಾಸ ಅಥವಾ ತೀರ್ಥಯಾತ್ರೆ ಕೈಗೊಳ್ಳುವಿರಿ. ಉನ್ನತ ಶಿಕ್ಷಣ ಬಯಸುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಕಾಲ. ಪಿತೃಾರ್ಜಿತ ಆಸ್ತಿಯಿಂದ ಲಾಭವಾಗಲಿದೆ.
- ಎಚ್ಚರಿಕೆ: ತಂದೆಯ ಆರೋಗ್ಯದ ಕಡೆ ಸ್ವಲ್ಪ ನಿಗಾ ಇರಲಿ.
9. ಧನು ರಾಶಿ
ಧನು ರಾಶಿಯ ಅಧಿಪತಿ ಗುರು. ಈ ಯುತಿಯು ನಿಮ್ಮ ಎಂಟನೇ ಮನೆಯಲ್ಲಿ (ಆಯುಷ್ಯ/ರಹಸ್ಯ ಸ್ಥಾನ) ನಡೆಯುತ್ತಿದೆ.
- ಧನಾತ್ಮಕ ಪ್ರಭಾವ: ಸಂಶೋಧನೆ, ಜ್ಯೋತಿಷ್ಯ ಮತ್ತು ನಿಗೂಢ ಶಾಸ್ತ್ರಗಳಲ್ಲಿ ಆಸಕ್ತಿ ಹೆಚ್ಚಲಿದೆ. ಇನ್ಷೂರೆನ್ಸ್ ಖರೀದಿ ಅಥವಾ ಹಠಾತ್ ಧನಲಾಭದ ಯೋಗವಿದೆ.
- ಎಚ್ಚರಿಕೆ: ಆರೋಗ್ಯದಲ್ಲಿ ಏರುಪೇರಾಗಬಹುದು, ವಿಶೇಷವಾಗಿ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗರೂಕರಾಗಿರಿ. ವಾಹನ ಚಲಾಯಿಸುವಾಗ ಎಚ್ಚರ.
10. ಮಕರ ರಾಶಿ
ಮಕರ ರಾಶಿಯವರಿಗೆ ಈ ಯುತಿಯು ಏಳನೇ ಮನೆಯಲ್ಲಿ (ಕಳತ್ರ ಸ್ಥಾನ) ಆಗುತ್ತಿದೆ.
- ಧನಾತ್ಮಕ ಪ್ರಭಾವ: ದಾಂಪತ್ಯ ಜೀವನ ಮಧುರವಾಗಿರುತ್ತದೆ. ಸಂಗಾತಿಯ ಹೆಸರಿನಲ್ಲಿ ಮಾಡುವ ವ್ಯವಹಾರಗಳು ಯಶಸ್ವಿಯಾಗುತ್ತವೆ. ಪಾರ್ಟನರ್ ಷಿಪ್ ವ್ಯವಹಾರ ಲಾಭ ತರಲಿದೆ. ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಸೂಕ್ತ ಸಮಯ.
- ಎಚ್ಚರಿಕೆ: ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ, ಸಣ್ಣ ವಿಷಯಗಳನ್ನು ದೊಡ್ಡದು ಮಾಡಬೇಡಿ.
11. ಕುಂಭ ರಾಶಿ
ಕುಂಭ ರಾಶಿಯವರಿಗೆ ಈ ಯುತಿಯು ಆರನೇ ಮನೆಯಲ್ಲಿ (ಶತ್ರು/ರೋಗ ಸ್ಥಾನ) ಸಂಭವಿಸುತ್ತಿದೆ.
- ಧನಾತ್ಮಕ ಪ್ರಭಾವ: ಶತ್ರುಗಳ ಮೇಲೆ ಜಯ ಸಿಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ದೀರ್ಘಕಾಲದ ಸಾಲಗಳನ್ನು ತೀರಿಸಲು ಇದು ಉತ್ತಮ ಸಮಯ.
- ಎಚ್ಚರಿಕೆ: ಆರೋಗ್ಯದ ಮೇಲೆ ಹೂಡಿಕೆ ಮಾಡಬೇಕಾಗಬಹುದು. ಸಿಹಿ ಪದಾರ್ಥಗಳ ಸೇವನೆ ಕಡಿಮೆ ಮಾಡಿ (ಮಧುಮೇಹ ಇರುವವರು ಜಾಗ್ರತೆ ವಹಿಸಿ).
12. ಮೀನ ರಾಶಿ
ಮೀನ ರಾಶಿಯ ಅಧಿಪತಿ ಗುರು. ಈ ಯುತಿಯು ನಿಮ್ಮ ಐದನೇ ಮನೆಯಲ್ಲಿ (ಬುದ್ಧಿ/ಸಂತಾನ ಸ್ಥಾನ) ನಡೆಯುತ್ತಿದೆ.
- ಧನಾತ್ಮಕ ಪ್ರಭಾವ: ಸಂತಾನಕ್ಕಾಗಿ ಪ್ರಯತ್ನಿಸುತ್ತಾ ಇರುವವರಿಗೆ ಶುಭ ವಾರ್ತೆ ಸಿಗಲಿದೆ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದ್ದು, ಮದುವೆಯಾಗಿ ಬದಲಾಗುವ ಸಾಧ್ಯತೆ ಇದೆ. ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಬುದ್ಧಿವಂತಿಕೆ ಮತ್ತು ಕ್ರಿಯಾಶೀಲತೆ ಹೆಚ್ಚಲಿದೆ.
- ಎಚ್ಚರಿಕೆ: ಪ್ರೇಮ ವಿಷಯಗಳಲ್ಲಿ ಅತಿಯಾದ ಭಾವುಕತೆ ಬೇಡ.
ನಿಮ್ಮ ಜಾತಕದಲ್ಲಿ ಮಾಲವ್ಯ ಯೋಗವಿದೆಯೇ? ಐಷಾರಾಮಿ, ಕಲಾತ್ಮಕ ಜೀವನದ ರಾಜಯೋಗ
ಸಾಮಾನ್ಯ ಪರಿಹಾರಗಳು
ಈ ಯುತಿಯ ಶುಭ ಫಲಗಳನ್ನು ಹೆಚ್ಚಿಸಿಕೊಳ್ಳಲು ಮತ್ತು ನಕಾರಾತ್ಮಕತೆಯನ್ನು ಕಡಿಮೆ ಮಾಡಲು ಜುಲೈ 4ರ ವರೆಗೆ ಈ ಕೆಳಗಿನ ಪರಿಹಾರಗಳನ್ನು ಮಾಡಬಹುದು:
- ಗುರುವಾರ: ವಿಷ್ಣು ಸಹಸ್ರನಾಮ ಪಠಣ ಮಾಡಿ ಅಥವಾ ಆಲಿಸಿ. ಬಾಳೆಗಿಡಕ್ಕೆ ನೀರು ಹಾಕಿ.
- ಶುಕ್ರವಾರ: ಮಹಾಲಕ್ಷ್ಮಿ ದೇವಿಯ ಫೋಟೋ ಅಥವಾ ವಿಗ್ರಹದ ಮುಂದೆ ಬಿಳಿ ರಂಗೋಲಿ ಹಾಕಿ, ತುಪ್ಪದ ದೀಪ ಹಚ್ಚಿ ಆರಾಧಿಸಿ. ಹೆಣ್ಣು ಮಕ್ಕಳಿಗೆ ಸಿಹಿ ನೀಡಿ.
- ದಾನ: ಹಳದಿ ಬಣ್ಣದ ಬೇಳೆ ಅಥವಾ ಬಿಳಿ ಬಣ್ಣದ ಅಕ್ಕಿ/ಸಕ್ಕರೆಯನ್ನು ದಾನ ಮಾಡಿ.
ಲೇಖನ- ಶ್ರೀನಿವಾಸ ಮಠ









