ಇದೇ ಮೇ ತಿಂಗಳ 14ರಂದು ಬುಧ ಗ್ರಹವು ವೃಷಭ ರಾಶಿಗೆ ಪ್ರವೇಶಿಸುತ್ತಿದೆ. ಜ್ಯೋತಿಷ್ಯದಲ್ಲಿ ಬುಧನನ್ನು ಬುದ್ಧಿವಂತಿಕೆ, ಸಂವಹನ ಮತ್ತು ವ್ಯಾಪಾರದ ಕಾರಕ ಎಂದು ಪರಿಗಣಿಸಲಾಗುತ್ತದೆ. ಈ ಸಂಚಾರವು ಹನ್ನೆರಡು ರಾಶಿಗಳ ಮೇಲೆ ಬೀರುವ ಪ್ರಭಾವದ ವಿವರ ಇಲ್ಲಿದೆ:
ಮೇಷ ರಾಶಿ
ಮೇಷ ರಾಶಿಯವರಿಗೆ ಬುಧನ ಈ ಸಂಚಾರವು ಎರಡನೇ ಮನೆಯಲ್ಲಿ ನಡೆಯುವುದರಿಂದ ಆರ್ಥಿಕ ಲಾಭದ ಮುನ್ಸೂಚನೆ ದೊರೆಯುತ್ತದೆ. ನಿಮ್ಮ ಮಾತು ಬಹಳ ಪ್ರಭಾವಶಾಲಿಯಾಗಿ ಇರಲಿದ್ದು, ಕೌಟುಂಬಿಕ ಸಮಸ್ಯೆಗಳನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವಿರಿ. ಹೂಡಿಕೆ ಮಾಡಲು ಇದು ಉತ್ತಮ ಸಮಯ. ವ್ಯಾಪಾರಿಗಳಿಗೆ ಹೊಸ ಅವಕಾಶಗಳು ಸಿಗಲಿವೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಲಿದೆ. ಆದರೆ ಅತಿಯಾದ ಆತ್ಮವಿಶ್ವಾಸದಿಂದ ಯಾರಿಗೂ ಭರವಸೆ ನೀಡಬೇಡಿ. ಆರೋಗ್ಯದ ದೃಷ್ಟಿಯಿಂದ ಹಲ್ಲು ಅಥವಾ ಕಣ್ಣಿನ ಸಣ್ಣಪುಟ್ಟ ಸಮಸ್ಯೆಗಳು ಆಗಬಹುದು, ಜಾಗ್ರತೆ ವಹಿಸಿ.
ವೃಷಭ ರಾಶಿ
ನಿಮ್ಮದೇ ರಾಶಿಯಲ್ಲಿ ಬುಧನ ಸಂಚಾರ ಇರುವುದರಿಂದ ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆ ಕಂಡುಬರಲಿದೆ. ನಿರ್ಧಾರ ತೆಗೆದುಕೊಳ್ಳುವ ನಿಮ್ಮ ಸಾಮರ್ಥ್ಯ ವೃದ್ಧಿಸುತ್ತದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ. ಇನ್ನು ಸಮಾಜದಲ್ಲಿ ಗೌರವ ಹೆಚ್ಚಲಿದ್ದು, ಸಂಗಾತಿಯೊಂದಿಗೆ ಉತ್ತಮ ಬಾಂಧವ್ಯ ಇರಲಿದೆ. ನೀವು ಈ ಹಿಂದೆ ಮಾಡಿದ್ದ ಯೋಜನೆಗಳು ಈಗ ಫಲ ನೀಡಲು ಆರಂಭಿಸುತ್ತವೆ. ಬರವಣಿಗೆ ಅಥವಾ ಸೃಜನಶೀಲ ಕ್ಷೇತ್ರದಲ್ಲಿ ಇರುವವರಿಗೆ ಈ ಸಮಯ ಅತ್ಯಂತ ಲಾಭದಾಯಕ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ.
ಮಿಥುನ ರಾಶಿ
ನಿಮ್ಮ ರಾಶ್ಯಾಧಿಪತಿ ಬುಧನು 12ನೇ ಮನೆಗೆ ಪ್ರವೇಶಿಸುವುದರಿಂದ ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇದೆ. ಅನಗತ್ಯ ಪ್ರವಾಸಗಳು ಹೋಗುವಂತೆ ಆಗಲಿದೆ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಾ ಇರುವವರಿಗೆ ಶುಭ ಸುದ್ಧಿ ಸಿಗಲಿದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಅಗತ್ಯ. ನಿದ್ರಾಹೀನತೆ ಕಾಡಬಹುದು. ಹೂಡಿಕೆ ಮಾಡುವಾಗ ಎಚ್ಚರಿಕೆ ಇರಲಿ, ಯೋಚಿಸದೆ ಹಣ ಹಾಕಬೇಡಿ. ಕಾನೂನು ವಿಚಾರಗಳಲ್ಲಿ ಜಾಗರೂಕರಾಗಿರಿ. ಅಧ್ಯಾತ್ಮದ ಕಡೆ ಮನಸ್ಸು ವಾಲುವುದರಿಂದ ನೆಮ್ಮದಿ ಸಿಗಲಿದೆ. ಗುಪ್ತ ಶತ್ರುಗಳ ಬಗ್ಗೆ ಸ್ವಲ್ಪ ಎಚ್ಚರವಿರಲಿ.
ಕರ್ಕಾಟಕ ರಾಶಿ
ಬುಧನ ಸಂಚಾರವು ನಿಮ್ಮ ಲಾಭ ಸ್ಥಾನದಲ್ಲಿ ಆಗುತ್ತಿರುವುದರಿಂದ ಆರ್ಥಿಕವಾಗಿ ಇದು ಉತ್ತಮ ಕಾಲ. ದೀರ್ಘಕಾಲದ ಬಾಕಿ ಉಳಿದಿರುವ ಹಣ ಕೈ ಸೇರಲಿದೆ. ಪ್ರಭಾವಿ ವ್ಯಕ್ತಿಗಳ ಪರಿಚಯ ಆಗಲಿದ್ದು, ಅದು ಭವಿಷ್ಯದಲ್ಲಿ ನೆರವಾಗಲಿದೆ. ಹಿರಿಯ ಸೋದರ- ಸೋದರಿಯರಿಂದ ಸಹಕಾರ ಸಿಗಲಿದೆ. ಸಾಮಾಜಿಕವಾಗಿ ನಿಮ್ಮ ಖ್ಯಾತಿ ಹೆಚ್ಚಲಿದೆ. ಹೊಸ ವ್ಯಾಪಾರ ಆರಂಭಿಸಲು ಅಥವಾ ವಿಸ್ತರಿಸಲು ಇದು ಪ್ರಶಸ್ತ ಸಮಯ. ಪ್ರೇಮ ಜೀವನದಲ್ಲಿ ಮಾಧುರ್ಯವಿರುತ್ತದೆ. ಸ್ನೇಹಿತರೊಂದಿಗೆ ಸಮಯ ಕಳೆಯುವಿರಿ ಮತ್ತು ನಿಮ್ಮ ಗುರಿಗಳನ್ನು ತಲುಪಲು ಸುಲಭವಾಗಲಿದೆ.
ಮುಂದಿನ 30 ವರ್ಷಗಳ ಶನಿ ಸಂಚಾರ: ಯಾರಿಗೆ ಸಾಡೇಸಾತಿ? ಯಾರಿಗೆ ಮುಕ್ತಿ? ಸಂಪೂರ್ಣ ಪಟ್ಟಿ ಇಲ್ಲಿದೆ
ಸಿಂಹ ರಾಶಿ
ಹತ್ತನೇ ಮನೆಯಲ್ಲಿ ಬುಧನ ಸಂಚಾರವು ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರಗತಿಯನ್ನು ತರಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಲಿದೆ ಮತ್ತು ಬಡ್ತಿಯ ಸಾಧ್ಯತೆ ಇದೆ. ಉದ್ಯಮಿಗಳಿಗೆ ದೊಡ್ಡ ಒಪ್ಪಂದಗಳು ಸಿಗಬಹುದು. ಪೋಷಕರ ಆರೋಗ್ಯ ಸುಧಾರಿಸಲಿದೆ. ಹೊಸ ಆಸ್ತಿ ಅಥವಾ ವಾಹನ ಖರೀದಿಸುವ ಯೋಗವಿದೆ. ಸಾರ್ವಜನಿಕವಾಗಿ ಮಾತನಾಡುವಾಗ ನಿಮ್ಮ ಚಾತುರ್ಯ ಗೊತ್ತಾಗಲಿದೆ. ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳಿ. ಒಟ್ಟಾರೆಯಾಗಿ ಇದು ಯಶಸ್ಸಿನ ಸಮಯವಾಗಿದ್ದು, ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ಕನ್ಯಾ ರಾಶಿ
ಭಾಗ್ಯ ಸ್ಥಾನದಲ್ಲಿ ಬುಧನ ಸಂಚಾರವು ನಿಮ್ಮ ಅದೃಷ್ಟವನ್ನು ಬೆಳಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ. ದೂರದ ಪ್ರಯಾಣಗಳು ಲಾಭದಾಯಕವಾಗಿ ಇರಲಿವೆ. ತಂದೆಯ ಸಂಪೂರ್ಣ ಬೆಂಬಲ ನಿಮ್ಮ ನಿರ್ಧಾರಗಳಿಗೆ ಸಿಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಲಿದೆ. ಸ್ಥಗಿತಗೊಂಡಿದ್ದ ಕೆಲಸಗಳು ಪುನರಾರಂಭಗೊಳ್ಳಲಿವೆ. ಕೆಲಸದ ನಿಮಿತ್ತ ವಿದೇಶ ಪ್ರಯಾಣದ ಅವಕಾಶಗಳು ಒದಗಿ ಬರಬಹುದು. ಹೊಸದನ್ನು ಕಲಿಯಲು ಇದು ಸಕಾಲ.
ತುಲಾ ರಾಶಿ
ಎಂಟನೇ ಮನೆಯಲ್ಲಿ ಬುಧನ ಸಂಚಾರವು ಮಿಶ್ರಫಲ ನೀಡಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ, ವಿಶೇಷವಾಗಿ ಚರ್ಮದ ಸಮಸ್ಯೆಗಳ ಬಗ್ಗೆ ಗಮನ ವಹಿಸಿ. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಶೀಘ್ರವಾಗಿ ನಂಬಬೇಡಿ. ಸಂಶೋಧನೆ ಮತ್ತು ವಿಜ್ಞಾನ ಕ್ಷೇತ್ರದಲ್ಲಿ ಇರುವವರಿಗೆ ಇದು ಉತ್ತಮ ಸಮಯ. ಅನಗತ್ಯ ವಿವಾದಗಳಿಂದ ದೂರವಿರಿ. ಗುಪ್ತವಾಗಿ ಕೆಲಸಗಳನ್ನು ಪೂರ್ಣಗೊಳಿಸುವುದು ಉತ್ತಮ. ಹಠಾತ್ ಧನಲಾಭದ ಸಾಧ್ಯತೆಯೂ ಇದೆ. ನಿಮ್ಮ ಮಾತುಗಳು ಕೆಲವೊಮ್ಮೆ ತಪ್ಪು ತಿಳಿವಳಿಕೆಗೆ ಕಾರಣವಾಗಬಹುದು, ಹಾಗಾಗಿ ಯೋಚಿಸಿ ಮಾತನಾಡಿ.
ವೃಶ್ಚಿಕ ರಾಶಿ
ಏಳನೇ ಮನೆಯಲ್ಲಿ ಬುಧನ ಸಂಚಾರವು ವೈವಾಹಿಕ ಜೀವನದಲ್ಲಿ ಮತ್ತು ಪಾಲುದಾರಿಕೆಯಲ್ಲಿ ಸುಧಾರಣೆ ತರಲಿದೆ. ನಿಮ್ಮ ಜೀವನಸಂಗಾತಿಯೊಂದಿಗೆ ಈ ತನಕ ಇದ್ದ ಅಭಿಪ್ರಾಯ ಭೇದಗಳು ದೂರವಾಗಲಿವೆ. ವ್ಯಾಪಾರದಲ್ಲಿ ಪಾಲುದಾರರೊಂದಿಗೆ ಇರುವ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಹೊಸ ಸಹಭಾಗಿತ್ವಕ್ಕೆ ಇದು ಒಳ್ಳೆಯ ಸಮಯ. ಸಮಾಜದಲ್ಲಿ ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ನ್ಯಾಯಾಲಯದ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ದೈನಂದಿನ ಕೆಲಸಗಳಲ್ಲಿ ಚುರುಕುತನ ಇರಲಿದೆ. ಕಲೆ ಮತ್ತು ಸಾಹಿತ್ಯದ ಕಡೆಗೆ ಒಲವು ಹೆಚ್ಚಲಿದೆ. ಪ್ರೇಮ ವಿವಾಹಕ್ಕೆ ಅನುಕೂಲಕರ ಸಮಯವಿದು.
ಧನು ರಾಶಿ
ಆರನೇ ಮನೆಯಲ್ಲಿ ಬುಧನ ಸಂಚಾರವು ಸ್ವಲ್ಪ ಸವಾಲನ್ನು ನೀಡಲಿದೆ. ಕೆಲಸದ ಸ್ಥಳದಲ್ಲಿ ಸ್ಪರ್ಧೆ ಹೆಚ್ಚಲಿದೆ. ಶತ್ರುಗಳು ನಿಮ್ಮ ಮೇಲೆ ಮೇಲುಗೈ ಸಾಧಿಸಲು ಯತ್ನಿಸುತ್ತಾರೆ. ಆದರೆ ನಿಮ್ಮ ಬುದ್ಧಿವಂತಿಕೆಯಿಂದ ಆ ಪ್ರಯತ್ನಗಳನ್ನು ವಿಫಲ ಆಗುವಂತೆ ಮಾಡುವಿರಿ. ಸಾಲದ ಹೊರೆ ಕಡಿಮೆಯಾಗುವ ಸಾಧ್ಯತೆ ಇದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ವಾದ-ವಿವಾದಗಳಿಂದ ದೂರವಿರುವುದು ಒಳಿತು. ಕಠಿಣ ಪರಿಶ್ರಮಕ್ಕೆ ತಕ್ಕಂತೆ ಪ್ರತಿಫಲ ಸಿಗಲು ಸ್ವಲ್ಪ ಸಮಯ ಬೇಕಾಗಬಹುದು. ಆಹಾರ ಪದ್ಧತಿಯಲ್ಲಿ ಶಿಸ್ತು ಅಳವಡಿಸಿಕೊಳ್ಳಿ.
ನಿಮ್ಮ ಅದೃಷ್ಟ ರತ್ನ ಯಾವುದು? ರಾಶಿ ಮತ್ತು ಲಗ್ನಕ್ಕೆ ಅನುಗುಣವಾಗಿ ರತ್ನ ಧರಿಸುವ ಶಾಸ್ತ್ರೋಕ್ತ ಕ್ರಮಗಳು
ಮಕರ ರಾಶಿ
ಐದನೇ ಮನೆಯಲ್ಲಿ ಬುಧನ ಸಂಚಾರವು ನಿಮಗೆ ಬೌದ್ಧಿಕವಾಗಿ ಬಹಳ ಲಾಭ ನೀಡಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವರು. ಪ್ರೇಮ ಸಂಬಂಧಗಳಲ್ಲಿ ಗಾಢತೆ ಬರಲಿದೆ. ಮಕ್ಕಳಿಂದ ಶುಭ ಸುದ್ಧಿ ಕೇಳುವಿರಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಲಾಭದ ನಿರೀಕ್ಷೆಯಿದೆ. ಸೃಜನಾತ್ಮಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಹವ್ಯಾಸಗಳನ್ನೇ ವೃತ್ತಿಯನ್ನಾಗಿ ಮಾಡಿಕೊಳ್ಳಲು ಇದು ಸಕಾಲ. ಹೊಸ ಯೋಜನೆಗಳನ್ನು ರೂಪಿಸಲು ಬುದ್ಧಿ ಚುರುಕಾಗಿ ಕೆಲಸ ಮಾಡಲಿದೆ. ಆರ್ಥಿಕವಾಗಿ ಪರಿಸ್ಥಿತಿ ಸದೃಢವಾಗಲಿದೆ.
ಕುಂಭ ರಾಶಿ
ನಾಲ್ಕನೇ ಮನೆಯಲ್ಲಿ ಬುಧನ ಸಂಚಾರವು ಕೌಟುಂಬಿಕ ಸುಖವನ್ನು ಹೆಚ್ಚಿಸಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ತಾಯಿಯ ಕಡೆಯಿಂದ ಸಂಪೂರ್ಣ ಸಹಕಾರ ಮತ್ತು ಪ್ರೀತಿ ಸಿಗಲಿದೆ. ಆಸ್ತಿ ಅಥವಾ ವಾಹನ ಖರೀದಿಯ ಚಿಂತನೆ ಫಲಪ್ರದವಾಗಲಿದೆ. ವೃತ್ತಿ ಜೀವನದಲ್ಲಿ ಸ್ಥಿರತೆ ಕಂಡುಬರಲಿದೆ. ಮನೆಯ ನವೀಕರಣಕ್ಕೆ ಹಣ ಖರ್ಚಾಗಲಿದೆ. ಕಚೇರಿಯಲ್ಲಿ ನಿಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ಅವಕಾಶಗಳು ಸಿಗಲಿವೆ. ನಿಮ್ಮ ಮನಸ್ಸು ಶಾಂತವಾಗಿದ್ದು, ಕಾರ್ಯಕ್ಷಮತೆ ಹೆಚ್ಚಲಿದೆ. ಹತ್ತಿರದ ಸಂಬಂಧಿಗಳನ್ನು ಭೇಟಿಯಾಗಲಿದ್ದೀರಿ.
ಮೀನ ರಾಶಿ
ಮೂರನೇ ಮನೆಯಲ್ಲಿ ಬುಧನ ಸಂಚಾರವು ನಿಮ್ಮ ಧೈರ್ಯ ಮತ್ತು ಪರಾಕ್ರಮವನ್ನು ಹೆಚ್ಚಿಸಲಿದೆ. ಕಿರಿಯ ಸೋದರ- ಸೋದರಿಯರಿಂದ ಸಹಾಯ ಸಿಗಲಿದೆ. ಸಣ್ಣ ಪ್ರವಾಸಗಳು ಲಾಭದಾಯಕವಾಗಿ ಇರಲಿವೆ. ಸಂವಹನ ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ ಪ್ರಗತಿ ಇದೆ. ನಿಮ್ಮ ಮಾತುಗಳಿಂದ ಜನರನ್ನು ಸುಲಭವಾಗಿ ಆಕರ್ಷಿಸುವಿರಿ. ಕೌಶ ಅಭಿವೃದ್ಧಿಗೆ ಇದು ಒಳ್ಳೆಯ ಸಮಯ. ನಿಮ್ಮ ಪ್ರಯತ್ನಗಳಿಗೆ ತಕ್ಕ ಫಲ ಸಿಗಲಿದೆ. ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಇರಲಿ. ನಿಮ್ಮ ನಿರ್ಧಾರಗಳಲ್ಲಿ ದೃಢತೆ ಇರಲಿದ್ದು, ಯಶಸ್ಸು ನಿಮ್ಮದಾಗಲಿದೆ.
ಲೇಖನ- ಶ್ರೀನಿವಾಸ ಮಠ









