ಕರ್ನಾಟಕ ವಿಧಾನಸಭಾ ಚುನಾವಣೆ 2023ರ ದಿನಾಂಕಗಳ ಘೋಷಣೆಯನ್ನು ಇಂದು (ಮಾರ್ಚ್ 29, 2023) ಮಾಡಲಾಗಿದೆ. ಮೇ ಹತ್ತನೇ ತಾರೀಕಿನಂದು ಮತದಾನ ಹಾಗೂ ಮೇ ಹದಿಮೂರನೇ ತಾರೀಕಿನಂದು ಮತ ಎಣಿಕೆ ನಡೆದು, ಫಲಿತಾಂಶ ಘೋಷಣೆ ಆಗಲಿದೆ. ಇಂಥ ಸನ್ನಿವೇಶದಲ್ಲಿ ಕರ್ನಾಟಕ ಚುನಾವಣೆಯ ಫಲಿತಾಂಶ ಏನಾಗಬಹುದು ಎಂಬ ಬಗ್ಗೆ ಜ್ಯೋತಿಷ್ಯದ ಲೆಕ್ಕಾಚಾರದಲ್ಲಿ ಉಡುಪಿಯ ಕಾಪು ಮೂಲದ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ‘ಶ್ರೀಗುರುಭ್ಯೋ.ಕಾಮ್’ ಜತೆಗೆ ಹಂಚಿಕೊಂಡಿರುವ ಮಾಹಿತಿಗಳನ್ನು ನಿಮ್ಮೆದುರು ಇಡಲಾಗುತ್ತಿದೆ. ಅಂದ ಹಾಗೆ ಈ ಲೇಖನವು ಸಂಪೂರ್ಣವಾಗಿ ಜ್ಯೋತಿಷಿಗಳ ಅಭಿಪ್ರಾಯದ ಮೇಲೆ ನಿಂತಿದೆ.
“ಜನಪದ ಕ್ಷೇತ್ರಾಧಿಪತಿ ಪ್ರಸಕ್ತ ಆಡಳಿತ ಸೂಚಕ ರವಿಯ ಜತೆ, ನಿಪುಣ ಯೋಗದಲ್ಲಿ ಇದ್ದ, ದಿಗ್ಬಲದಲ್ಲಿ ಗುರುವಿನ ಹಂಸ ಮಹಾಯೋಗದಲ್ಲಿ, ಕೇಸರಿ ಯೋಗದಲ್ಲಿ ಇದ್ದಾನೆ. ಅಂದರೆ ಕೇಂದ್ರದಲ್ಲಿ ಯಾವುದಿದೆಯೋ ಅದು. ತೃಪ್ತಿಕರವಾದ ಹಾಗೂ ಯಾವುದೇ ಹಂಗಿಗೆ ಬೀಳಬೇಕಿಲ್ಲದ ಸರ್ಕಾರದ ಸೂಚನೆ ಇದು. ಆದರೆ ರವಿಯಿಂದ ಯೋಗದ ಭಂಗದ ಸೂಚನೆಯನ್ನೂ ಹೇಳಬೇಕಾಗುತ್ತದೆ.
“ಇಂದಿನ ಮುಹೂರ್ತದ ಮಿಥುನ ಲಗ್ನಕ್ಕೆ ಕರ್ಮ ಸ್ಥಾನವೇ ಮೀನ. ಕರ್ಮಾಧಿಪತಿಯೊಡನೆ, ಕರ್ಮಸ್ಥಾನದ ಷಷ್ಟಾಧಿಪತಿಯು ಕರ್ಮಾಧಿಪತಿಯನ್ನು ಅಸ್ತ ಮಾಡಲಿದ್ದಾನೆ. ಅಂದರೆ ಒಳಕಲಹಗಳು ಯೋಗವನ್ನು ಹಾಳು ಮಾಡಲಾರವು ಎನ್ನುವ ಹಾಗಿಲ್ಲ.ಅದಕ್ಕೇ ಯೋಗಸ್ಯ ಪರಿರಕ್ಷಣಂ ಕ್ಷೇಮಃ ಎಂದಿದ್ದು.
“ಇಂದಿನ ಮುಹೂರ್ತ ಲಗ್ನ ಮಿಥುನ. ಅಲ್ಲಿಗೆ ಕರ್ಮಸ್ಥಾನ ಮೀನ ಆಗುತ್ತದೆ. ಕರ್ಮಸ್ಥಾನಾಧಿಪತಿ, ಕರ್ಮಸ್ಥಾನದ ಷಷ್ಟಾಧಿಪತಿ ರವಿಯೊಡನೆ ಇರುವುದು ಕರ್ಮ ಭಂಗಕ್ಕೂ ಸೂಚನೆಯೂ ಆಗುತ್ತದೆ.
ಐದು ವರ್ಷದೊಳಗಿನ ಮಕ್ಕಳ ಶ್ರೇಯಸ್ಸಿಗಾಗಿ ಮಾಡುವಂಥ ಬಾಲ ಮಾರ್ಕಂಡೇಯ ಹೋಮದ ಬಗ್ಗೆ ನಿಮಗೆಷ್ಟು ಗೊತ್ತು?
“ಈ ರಾಜ್ಯದ ಧರ್ಮ ಸಂಪ್ರದಾಯದ ಧ್ವಜವನ್ನು ಎತ್ತಿ ಹಿಡಿದ ದೊರೆಗಳಾದ ವಿಜಯನಗರ, ಕೆಂಪೇಗೌಡರಂತಹ ರಾಜರುಗಳನ್ನು ಗೌರವಿಸುವ ನಿಷ್ಠೆ ಉಳ್ಳವರಿಗೆ ವಿಜಯ ಮಾಲೆ ದೊರೆಯಲಿದೆ. ಸತ್ಯ ನಿಷ್ಠುರವಾಗಿ, ತನ್ನದೇ ಪಕ್ಷದವರು ಎಂಬ ಮುಲಾಜಿಗೆ ಸಹ ಒಳಗಾಗದವರು, ಈ ಹಿಂದಿನಿಂದ ನೇರಾನೇರ ಅನಿಸಿದ್ದನ್ನು ಹೇಳುತ್ತಾ ಬಂದಿರುವಂಥ ವ್ಯಕ್ತಿಯು ಸಿಂಹಾಸನ ಏರಬಹುದು.ದಕ್ಷ ಆಡಳಿತವನ್ನೂ ಕೊಡಬಹುದು.
“ಇನ್ನೂ ಹೇಳಬೇಕು ಎಂದರೆ ತುಲಾ ಲಗ್ನ, ರಾಶಿ ಸಂಜಾತರಿಗೆ ಅವಕಾಶ ಇದೆ. ಕುಜ- ಶುಕ್ರ ಯುತಿಯಲ್ಲಿ ಜನಿಸಿದವರಿಗೆ ಅವಕಾಶ ಇದೆ. ಆದರೆ ಇದನ್ನು ಭಂಗ ಮಾಡಿಕೊಂಡರೆ ಯಾರೇನೂ ಮಾಡಲಾಗದು. ಆದರೆ ಹಾಗೆ ಆಗಲಿಕ್ಕಿಲ್ಲ ಎಂಬ ಆತ್ಮ ವಿಶ್ವಾಸ ಇದೆ.ಯಾಕೆಂದರೆ ಚುನಾವಣಾ ಕಾಲದಲ್ಲಿ ಕರ್ಮಾಧಿಪ ಗುರುವಿನ ಮೌಢ್ಯ (ಅಸ್ತ) ಮುಗಿದಿರುತ್ತದೆ,” ಎಂದು ಹೇಳಿದ್ದಾರೆ ಪ್ರಕಾಶ್ ಅಮ್ಮಣ್ಣಾಯ.
ಚುನಾವಣೆ ಘೋಷಣೆ ಆಧಾರದಲ್ಲಿ ಕರ್ನಾಟಕದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಎಂಬ ಅಭಿಪ್ರಾಯ ಖ್ಯಾತ ಜ್ಯೋತಿಷಿ ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ಆದರೆ ಬಿಜೆಪಿ ಸ್ಪಷ್ಟ ಬಹುಮತ ಎಂದು ಹೇಳದೆ ಕೇವಲ ಗುಣ ಲಕ್ಷಣಗಳನ್ನು ಹೇಳಿದುದರಿಂದ ಇದು ಬಿಜೆಪಿಯದ್ದೇ ಇರಬಹುದು ಎಂದು ತಿಳಿಯಬಹುದಾಗಿದೆ. ಹಾಗೂ ರಾಜ್ಯದಲ್ಲಿ ಬಹುಮತದಿಂದಲೇ ಆಯ್ಕೆ ಆಗಲಿದೆ ಎಂಬುದನ್ನು ಸಹ ಹೇಳಿದಂತಾಗುತ್ತದೆ. ಇನ್ನು ಮುಖ್ಯಮಂತ್ರಿ ಹುದ್ದೆಯ ವಿಚಾರವಾಗಿ ನೋಡುವುದಾದರೆ, ಯಾವ ಪ್ರಮುಖ ನಾಯಕರು ತುಲಾ ಲಗ್ನದವರು ಮತ್ತು ಕುಜ- ಶುಕ್ರ ಜನ್ಮ ಜಾತಕದಲ್ಲಿ ಒಂದೇ ಮನೆಯಲ್ಲಿ ಇರುವುದು ಯಾರಿಗೆ ಎಂಬುದನ್ನು ನೋಡಬೇಕಾಗಿದೆ.
ಮಾರ್ಚ್ 29, 2023ಕ್ಕೆ ಚುನಾವಣೆ ದಿನಾಂಕ ಘೋಷಣೆ ಹೊತ್ತಿಗೆ ಗ್ರಹ ಸ್ಥಿತಿ ಹೀಗಿದೆ:
ಮಿಥುನ ಲಗ್ನ
ಮಿಥುನ: ಚಂದ್ರ
ಮಿಥುನ: ಕುಜ
ಕುಂಭ: ಶನಿ
ಮೀನ: ರವಿ
ಮೀನ: ಬುಧ
ಮೀನ: ಗುರು
ಮೇಷ: ಶುಕ್ರ
ಮೇಷ: ರಾಹು
ತುಲಾ: ಕೇತು
ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಉಡುಪಿ ಜಿಲ್ಲೆಯ ಕಾಪು ಮೂಲದ ಜ್ಯೋತಿಷಿಗಳು. ವಿವಿಧ ಚುನಾವಣೆಗಳ ಸಂದರ್ಭದಲ್ಲಿ ಕರಾರುವಾಕ್ ಭವಿಷ್ಯ ನುಡಿದು, ಇಡೀ ರಾಜ್ಯದ ಗಮನ ಸೆಳೆದವರು. ವಿವಿಧ ಜ್ಯೋತಿಷ್ಯ ಸಮಸ್ಯೆಗಳಿಗೆ ಪರಿಣಾಮಕಾರಿಯಾದ ಪರಿಹಾರವನ್ನು ಸೂಚಿಸುವುದಕ್ಕೆ ಖ್ಯಾತಿ ಪಡೆದಿದ್ದಾರೆ.