Sri Gurubhyo Logo

2024 Taurus Yearly Horoscope: 2024ನೇ ಇಸವಿಯ ವೃಷಭ ರಾಶಿ ವಾರ್ಷಿಕ ಜ್ಯೋತಿಷ ಭವಿಷ್ಯ

Taurus Yearly Horoscope 2024
ವೃಷಭ ರಾಶಿ ಸಾಂಕೇತಿಕ ಚಿತ್ರ

ರಾಶಿಚಕ್ರದ ಎರಡನೇ ರಾಶಿ ವೃಷಭ. ಶುಕ್ರ ರಾಶ್ಯಾಧಿಪತಿಯಾದ ಈ ರಾಶಿಗೆ 2024ನೇ ಇಸವಿ ಹೇಗಿರುತ್ತದೆ ಎಂಬುದನ್ನು ವಿವರಿಸುವ ಲೇಖನ ಇದು. ನಿಮಗೆ ಗೊತ್ತಿರಬೇಕಾದದ್ದು ಏನೆಂದರೆ, ಇದು ಗೋಚಾರ ಫಲ. ವೈಯಕ್ತಿಕ ಜಾತಕವನ್ನು ಸಹ ಒಮ್ಮೆ ಪರಿಶೀಲಿಸಿಕೊಳ್ಳುವುದು ಮುಖ್ಯ. ಕೃತ್ತಿಕಾ ನಕ್ಷತ್ರದ ಎರಡು, ಮೂರು ಹಾಗೂ ನಾಲ್ಕನೇ ಪಾದ, ರೋಹಿಣಿ ನಕ್ಷತ್ರದ ಒಂದು, ಎರಡು, ಮೂರು ಮತ್ತು ನಾಲ್ಕು, ಮೃಗಶಿರಾ ಒಂದು, ಎರಡು ಪಾದ ಇವಿಷ್ಟು ಸೇರಿ ವೃಷಭ ರಾಶಿ ಆಗುತ್ತದೆ. ಇನ್ನು ಕೃತ್ತಿಕಾ ನಕ್ಷತ್ರದ ಅಧಿಪತಿ ರವಿ, ರೋಹಿಣಿಗೆ ಚಂದ್ರ ಮತ್ತು ಮೃಗಶಿರಾ ನಕ್ಷತ್ರಕ್ಕೆ ಕುಜ ಗ್ರಹ ಅಧಿಪತಿಯಾಗುತ್ತದೆ.

ವೈಯಕ್ತಿಕ ಜಾತಕ ಪರಿಶೀಲನೆಯನ್ನು ಮಾಡಿಸಿಕೊಳ್ಳುವ ಮುನ್ನ ನಿಮ್ಮ ಬಳಿ ಜನ್ಮ ಜಾತಕ ಇರಬೇಕಾಗುತ್ತದೆ. ಒಂದು ವೇಳೆ ನಿಮ್ಮ ಬಳಿ ಜನ್ಮ ಜಾತಕ ಇಲ್ಲ ಎಂದಾದಲ್ಲಿ ಅದನ್ನು ಮೊದಲು ಮಾಡಿಸಿಟ್ಟುಕೊಳ್ಳಿ. ಷೋಡಶ ವರ್ಗ, ಅಷ್ಟಕ ವರ್ಗ, ರಾಶಿ ಕುಂಡಲಿ, ನವಾಂಶ ಕುಂಡಲಿ ಹೀಗೆ ಎಲ್ಲ ಮಾಹಿತಿ ಒಳಗೊಂಡಂಥ ಸಂಪೂರ್ಣ ಜಾತಕ ಮಾಡಿಸಿಟ್ಟುಕೊಳ್ಳುವುದು ಉತ್ತಮ. 

ಅದಕ್ಕೂ ಮೊದಲು ಕೆಲವು ವಿಚಾರಗಳ ಬಗ್ಗೆ ನಿಮಗೆ ಮಾಹಿತಿ ಇರಬೇಕು. ಏನೆಂದರೆ, ಇದು ಗೋಚಾರ ಫಲ. ಗ್ರಹಗಳು, ಅದರಲ್ಲೂ ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಶನಿ, ಗುರು ಹಾಗೂ ರಾಹು- ಕೇತು ಇವುಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡು ಹೇಳುವಂಥ ಸಾಮಾನ್ಯ ಫಲ. ನಿರ್ದಿಷ್ಟವಾಗಿ ಆಯಾ ವ್ಯಕ್ತಿಗೆ ಆಯಾ ಸಮಯ ಹೇಗಿದೆ ಎಂಬುದನ್ನು ತಿಳಿಸಬೇಕಾದರೆ ವ್ಯಕ್ತಿಗತವಾದ ಜನ್ಮ ಜಾತಕದ ಪರಿಶೀಲನೆ ಮಾಡಲೇಬೇಕು. ಹಾಗೂ ಅದರಲ್ಲಿ ದಶಾ- ಭುಕ್ತಿ ಹಾಗೂ ಮತ್ತಿತರ ಅಂಶಗಳ ತುಲನೆಯನ್ನು ಮಾಡಲೇಬೇಕಾಗುತ್ತದೆ. 

ಇನ್ನು ವರ್ಷ ಫಲವನ್ನು ಆರಂಭಿಸೋಣ.

ರಾಹು (ಜನವರಿಯಿಂದ ಡಿಸೆಂಬರ್ ತನಕ ಮೀನ ರಾಶಿಯಲ್ಲಿ)

ಹನ್ನೊಂದನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ಭೂಮಿಗೆ ಸಂಬಂಧಿಸಿದ ವ್ಯಾಜ್ಯಗಳು ನಿಮಗೆ ಈಗಾಗಲೇ ಇದೆ ಎಂದಾದರೆ ಅದನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದೆ. ಇನ್ನು ನಿಮ್ಮಲ್ಲಿ ಕೆಲವರು ಈಗಾಗಲೇ ಹಣ ಕಟ್ಟಿಯಾಗಿದೆ, ಸೈಟು ಅಥವಾ ಮನೆ ಅಥವಾ ವಿಲ್ಲಾ ಅಥವಾ ಅಪಾರ್ಟ್ ಮೆಂಟ್ ನಮಗೆ ಹಸ್ತಾಂತರ ಆಗುವುದಷ್ಟೇ ಬಾಕಿ ಇದೆ. ಅದಕ್ಕಾಗಿ ಕಾಯುತ್ತಾ ಇದ್ದೇವೆ ಎನ್ನುವವರು ಇದ್ದಲ್ಲಿ ಅಂಥವರಿಗೆ ನಿರೀಕ್ಷೆ ನಿಜವಾಗಲಿದೆ. ಆದರೆ ಒಂದು ಸಂಗತಿ ನಿಮಗೆ ಅರ್ಥವಾಗಬೇಕಾದದ್ದು ಏನೆಂದರೆ, ಈ ವಿಷಯದಲ್ಲಿ ನಿಮ್ಮ ಶ್ರಮ ಹೆಚ್ಚು ಬೇಕಾಗುತ್ತದೆ. ಅಂದರೆ ಪದೇಪದೇ ಫಾಲೋ ಅಪ್ ಮಾಡಬೇಕು. ಆಯಾ ಕಾಲಕ್ಕೆ ಸಲ್ಲಿಸಬೇಕಾದ ದಾಖಲೆ, ವ್ಯಕ್ತಿಗಳನ್ನು ಭೇಟಿ ಮಾಡಬೇಕು. ಆಲಸ್ಯ ತೋರದೆ ಭೇಟಿ ಆಗಬೇಕು. ಯಾರು ಕಾರು ಅಥವಾ ಇದೇ ಮೊದಲ ಬಾರಿಗೆ ಎಂಬಂತೆ ದ್ವಿಚಕ್ರ ವಾಹನಗಳನ್ನು ಖರೀದಿಸಬೇಕು ಅಂದುಕೊಂಡಿದ್ದೀರಿ ಅಂಥವರಿಗೆ ಖರೀದಿಸುವ ಯೋಗ ಇದೆ. ಜತೆಗೆ ವಿದೇಶಗಳಿಗೆ ಅಲ್ಪ ಸಮಯಕ್ಕಾದರೂ ಭೇಟಿ ನೀಡುವ ಅವಕಾಶ ದೊರೆಯಲಿದೆ. ನಿಮ್ಮ ಸಾಮರ್ಥ್ಯವನ್ನು ಸಾಬೀತು ಮಾಡುವುದಕ್ಕೆ ಅವಕಾಶಗಳು ದೊರೆಯಲಿವೆ. ಆದರೆ ಈ ಅವಧಿಯಲ್ಲಿ ಎಷ್ಟೇ ದುಡ್ಡಿನ ಹರಿವು ಬಂದರೂ ಅದನ್ನು ಉಳಿಸಿಕೊಳ್ಳುವುದು ಸವಾಲಿನ ಸಂಗತಿ ಆಗಿರುತ್ತದೆ. ಉದ್ಯಮಿಗಳು, ವ್ಯಾಪಾರಿಗಳಿಗೆ ದಿಢೀರ್ ಲಾಭ ಹಾಗೂ ಸಿಕ್ಕಾಪಟ್ಟೆ ಆದಾಯ ಕಾಣಿಸಿಕೊಳ್ಳುತ್ತದೆ. ಆದರೆ ಇದು ಶಾಶ್ವತವಾಗಿರುತ್ತದೆ ಎಂಬ ಭ್ರಮೆಗೆ ಬೀಳಬೇಡಿ. ಹಾಗೆ ಅಂದುಕೊಂಡು ಏನಾದರೂ ಸಿಕ್ಕಾಪಟ್ಟೆ ಕಮಿಟ್ ಮೆಂಟ್ ಗಳನ್ನು ಮಾಡಿಕೊಂಡಲ್ಲಿ ಆ ನಂತರ ಒದ್ದಾಟ ಆಗುತ್ತದೆ.

2024 Aries Yearly Horoscope: 2024ನೇ ಇಸವಿಯ ಮೇಷ ರಾಶಿ ವಾರ್ಷಿಕ ಜ್ಯೋತಿಷ ಭವಿಷ್ಯ

ಕೇತು (ಜನವರಿಯಿಂದ ಡಿಸೆಂಬರ್ ತನಕ ಕನ್ಯಾ ರಾಶಿಯಲ್ಲಿ)

ಐದನೇ ಮನೆಯಲ್ಲಿ ಕೇತು ಸಂಚರಿಸಲಿದ್ದು, ಮಕ್ಕಳ ಆರೋಗ್ಯ, ಶಿಕ್ಷಣ, ಉದ್ಯೋಗ, ವೃತ್ತಿ- ವ್ಯಾಪಾರ, ವ್ಯವಹಾರಗಳು, ವಿವಾಹದ ವಿಚಾರಗಳು ಚಿಂತೆಗೆ ಕಾರಣ ಆಗುತ್ತವೆ. ಈ ಹಿಂದೆ ಯಾವಾಗಲೋ ನಿಮ್ಮಿಂದ ಆಗಿದ್ದ ತಪ್ಪುಗಳು ಈಗ ಸಮಸ್ಯೆ ನೀಡಲು ಶುರುವಾಗುತ್ತದೆ. ಒಂದು ವೇಳೆ ಸರ್ಕಾರಿ ನೌಕರಿಯಲ್ಲಿ ಇದ್ದಲ್ಲಿ ಇಲಾಖೆ ವಿಚಾರಣೆಗಳು ನಡೆಯಬಹುದು. ಅಥವಾ ಈಗಾಗಲೇ ವಿಚಾರಣೆ ನಡೆಯುತ್ತಿತ್ತು ಅಂತಾದಲ್ಲಿ ಅದರ ವರದಿಯನ್ನು ಈಗ ನೀಡಬಹುದು. ಒಟ್ಟಿನಲ್ಲಿ ಇದರಿಂದ ನಿಮಗೆ ಸಮಸ್ಯೆ ಆಗುವುದಂತೂ ನಿಶ್ಚಿತ. ಇನ್ನು ಯಾವುದೇ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಈ ಹಿಂದಿನ ನಿಮ್ಮ ಅನುಭವದ ಆಧಾರದಲ್ಲಿ ತೆಗೆದುಕೊಳ್ಳುವುದಕ್ಕೆ ಹೋದಲ್ಲಿ ಅಷ್ಟೇನೂ ಸಹಾಯ ಆಗುವುದಿಲ್ಲ. ನೀವು ಇತರರಿಗೆ ಸಹಾಯ ಮಾಡುತ್ತೇನೆ ಎಂಬ ಧೋರಣೆಯಿಂದ ಯಾವುದಾದರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರೋ ನಿಂದೆ, ಆಕ್ಷೇಪ, ಆರೋಪಗಳನ್ನು ಕೇಳಿಸಿಕೊಳ್ಳಬೇಕಾಗುತ್ತದೆ. ಈ ಅವಧಿಯಲ್ಲಿ ಸಿಟ್ಟು ಜಾಸ್ತಿ ಆಗುತ್ತದೆ. ಆ ಸಿಟ್ಟಿನಿಂದಾಗಿ ಕೆಲವು ಮುಖ್ಯ ಸಂಗತಿಗಳನ್ನೇ ನೀವು ಗಮನಿಸದೆ, ಇದರಿಂದ ಅವಮಾನದ ಪಾಲಾಗುವ ಸಾಧ್ಯತೆಗಳಿವೆ. ಆದ್ದರಿಂದ ಯಾರ ಮೇಲಾದರೂ ಆರೋಪ ಹೊರಿಸುತ್ತಿದ್ದೀರಿ ಅಂತಾದಲ್ಲಿ ಒಂದಕ್ಕೆ ನಾಲ್ಕು ಬಾರಿ ಸರಿಯಾಗಿ ವಿಶ್ಲೇಷಣೆಯನ್ನು ಮಾಡಿ, ಆ ನಂತರ ಮಾತನಾಡಿ.

ಪರಿಹಾರ: ಗಣಪತಿಯ ಆರಾಧನೆ ಮಾಡಿ.

ಗುರು (ಜನವರಿಯಿಂದ ಏಪ್ರಿಲ್ ಮೇಷದಲ್ಲಿ ಹಾಗೂ ಮೇ ತಿಂಗಳಿಂದ ಡಿಸೆಂಬರ್ ತನಕ ವೃಷಭದಲ್ಲಿ)

ಈ ವರ್ಷದ ಮೊದಲ ನಾಲ್ಕು ತಿಂಗಳು ಗುರು ವ್ಯಯ ಸ್ಥಾನದಲ್ಲಿ ಇರುತ್ತದೆ. ಈ ವೇಳೆ ವಿನಾ ಕಾರಣದ ಖರ್ಚು, ವಂಚಕರಿಂದ ಮೋಸ ಹೋಗುವುದು, ನೀವು ಸಾಲವಾಗಿ ಕೊಟ್ಟಿರುವ ದುಡ್ಡು ಇನ್ನು ವಾಪಸ್ ಬರುವುದಿಲ್ಲ ಎಂಬಿತ್ಯಾದಿ ಫಲಗಳನ್ನು ಕಾಣುತ್ತೀರಿ. ಮುಖ್ಯವಾಗಿ ಈ ಸಮಯದಲ್ಲಿ ಹೂಡಿಕೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಕಾನೂನು ಸಲಹೆಗಳು ಎಲ್ಲಿ ಅಗತ್ಯ ಇದೆಯೋ ಅಲ್ಲೆಲ್ಲ ಸೂಕ್ತ ನೆರವನ್ನು ಪಡೆದುಕೊಂಡ ನಂತರವೇ ಮುಂದುವರಿಯಿರಿ. ಮೇ ತಿಂಗಳಿಂದ ನಿಮ್ಮದೇ ಜನ್ಮ ರಾಶಿಯಲ್ಲಿ ಗುರು ಸಂಚರಿಸುವಾಗ ಆರೋಗ್ಯ ಸಮಸ್ಯೆಗಳು ಜಾಸ್ತಿ ಆಗುತ್ತದೆ. ಅದರಲ್ಲೂ ದೇಹ ತೂಕ ಹೆಚ್ಚಿದೆ ಎಂಬಂಥವರು, ಡಯಾಬಿಟೀಸ್, ನರಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರು ಎಚ್ಚರಿಕೆಯಿಂದ ಇರಬೇಕು. ನೀವು ಆರೋಗ್ಯವಾಗಿಯೇ ಇದ್ದೀರಿ ಅಂತಾದರೂ ಈ ಸಂದರ್ಭದಲ್ಲಿ ಸಮಸ್ಯೆ ಕಾಣಿಸಿಕೊಳ್ಳಬಹುದು. ವ್ಯಾಪಾರ- ವ್ಯವಹಾರ ಮಾಡುತ್ತಿರುವವರಿಗೆ ಏಕಾಏಕಿ ನಷ್ಟಗಳು ಕಾಣಿಸಿಕೊಳ್ಳಬಹುದು. ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವವರು, ಟ್ಯಾಕ್ಸ್ ಕನ್ಸಲ್ಟೆಂಟ್ ಗಳು, ವೈದ್ಯಕೀಯ ವೃತ್ತಿಯಲ್ಲಿ ಇರುವವರು, ಡೇರಿ- ಕೃಷಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಭಾರೀ ಇಳಿಕೆ ಕಾಣಿಸಲಿದೆ. ಅಥವಾ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಉದ್ಯೋಗ ಸ್ಥಳದಲ್ಲಿ ನಿಮಗೆ ಸಿಗಬೇಕಾದ ಮಾನ್ಯತೆ, ಗೌರವ, ವೇತನ ಹೆಚ್ಚಳ, ಬಡ್ತಿ ಮೊದಲಾದವು ಬೇರೆಯವರ ಪಾಲಾಗುತ್ತದೆ. ಯಾವುದೇ ಕಾರಣಕ್ಕೂ ಕೆಲಸ ಬಿಡುವುದಕ್ಕೋ ಅಥವಾ ಬದಲಾಯಿಸುವುದಕ್ಕೋ ಹೋಗಬೇಡಿ. ಇನ್ನು ಹೊಸ ವ್ಯಾಪಾರ, ವ್ಯವಹಾರ ಅಥವಾ ಉದ್ಯಮಕ್ಕೆ ಹಣ ಹೂಡಿಕೆ ಮಾಡಬೇಡಿ.

ಪರಿಹಾರ: ನೀವು ಗುರುಗಳಾಗಿ ಭಾವಿಸುವಂಥವರಿಗೆ ಗುರುವಾರದಂದು ಒಮ್ಮೆ ವಸ್ತ್ರ ಸಮರ್ಪಣೆಯನ್ನು ಮಾಡಿ.

ಶನಿ (ಜನವರಿಯಿಂದ ಡಿಸೆಂಬರ್ ತನಕ ಕುಂಭ ರಾಶಿಯಲ್ಲಿ)

ನಿಮ್ಮ ಕರ್ಮ ಸ್ಥಾನದಲ್ಲಿ ಶನಿ ಸಂಚಾರ ಮಾಡುವುದರಿಂದ ತಂದೆ- ತಾಯಿ, ಅಜ್ಜಿ- ತಾತ, ಸೋದರಮಾವ, ಚಿಕ್ಕಪ್ಪ- ದೊಡ್ಡಪ್ಪ ಇವರ ಆರೋಗ್ಯವನ್ನು ಜೋಪಾನವಾಗಿ ನೋಡಿಕೊಳ್ಳಿ. ಉದ್ಯೋಗ ಸ್ಥಳದಲ್ಲಿ ನಿಮಗೆ ವಹಿಸಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ಮಾಡಿ. ನಿಮ್ಮ ಕೆಲಸವನ್ನು ಯಾವುದೇ ಕಾರಣಕ್ಕೂ ಬೇರೆಯವರಿಗೆ ವಹಿಸಿಕೊಡುವುದಕ್ಕೆ ಹೋಗಬೇಡಿ. ವಿದೇಶಗಳಲ್ಲಿ ಕೆಲಸ ಮಾಡುವಂಥವರು ನಿಮಗೆ ಬರಬೇಕಾದ ಹಣವನ್ನು ಆಯಾ ಸಮಯಕ್ಕೆ ಪಡೆದುಕೊಳ್ಳುವುದು ಉತ್ತಮ. ಒಂದು ವೇಳೆ ಒಟ್ಟಿಗೆ ತೆಗೆದುಕೊಳ್ಳುತ್ತೇನೆ ಅಥವಾ ಅಗತ್ಯ ಇದ್ದಾಗ ಕೇಳಿ ಪಡೆಯುತ್ತೇನೆ ಎಂದೇನಾದರೂ ಅಂದುಕೊಂಡಲ್ಲಿ ಹಣ ನಿಮ್ಮ ಕೈ ಸೇರದಿರುವ ಸಾಧ್ಯತೆಗಳು ಹೆಚ್ಚಿವೆ. ನಾನು ಹೇಳಿದಂತೆಯೇ ಆಗಬೇಕು ಎಂದು ಸಂಗಾತಿ ಜತೆಗೆ ವಾದ ಮಾಡುವುದಕ್ಕೋ ಅಥವಾ ಜಗಳಕ್ಕೋ ಹೋಗಬೇಡಿ. ಒಂದು ವೇಳೆ ಈ ರೀತಿ ನೀವು ತಮಾಷೆಗೆ ಅಂತ ಆರಂಭಿಸಿದರೂ ಆ ನಂತರ ಅದು ವಿಕೋಪಕ್ಕೆ ಹೋಗುವ ಅವಕಾಶಗಳು ಇರುತ್ತವೆ. ನೀವು ಯಾವುದೇ ಉದ್ಯೋಗ, ವೃತ್ತಿಯಲ್ಲಿಯೇ ಇದ್ದರೂ ಉತ್ತಮ ಫಲಿತಾಂಶ ನಿರೀಕ್ಷಿಸುವುದು ಕಷ್ಟ.

(ಲೇಖಕರು- ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904, 9980300790 ಸಂಪರ್ಕಿಸಿ.)

Latest News

Related Posts