ಕರ್ನಾಟಕ ರಾಜ್ಯದಲ್ಲಿ ಅದೆಷ್ಟೋ ಪ್ರಖ್ಯಾತ ಹಾಗೂ ಶಕ್ತಿಶಾಲಿಯಾದ ದೇವಸ್ಥಾನಗಳಿವೆ. ಈ ಲೇಖನದಲ್ಲಿ ವಿಶಿಷ್ಟವಾದ ದೇವಸ್ಥಾನವೊಂದರ ಬಗ್ಗೆ ಪರಿಚಯ ಮಾಡಿಕೊಡುವುದು ಉದ್ದೇಶವಾಗಿದೆ. ಈ ದೇವಾಲಯದ ಹೆಸರು ಪೆರ್ಡೂರು ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನ. ಇದು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಉಡುಪಿಗೆ ಈ ದೇವಾಲಯ ಹತ್ತಿರದಲ್ಲಿದೆ. ಶಿವಮೊಗ್ಗದ ತೀರ್ಥಹಳ್ಳಿ ಕಡೆಯಿಂದ ಆಗುಂಬೆ- ಸೋಮೇಶ್ವರ- ಹೆಬ್ರಿ ಮಾರ್ಗವಾಗಿ ತೆರಳಬಹುದು. ಉಡುಪಿಯಿಂದ ಪೆರ್ಡೂರಿಗೆ 22 ಕಿಲೋಮೀಟರ್ ನಷ್ಟು ದೂರ, 40ರಿಂದ ಐವತ್ತು ನಿಮಿಷದ ಹಾದಿ ಇದಾಗಿದೆ.
ಬಾಳೇಹಣ್ಣುಪ್ರಿಯ ಅನಂತಪದ್ಮನಾಭ
ಇಲ್ಲಿನ ಅನಂತಪದ್ಮನಾಭ ಸ್ವಾಮಿ ದೇವರ ವೈಶಿಷ್ಟ್ಯ ಏನೆಂದರೆ, ಕದಳೀಫಲ ಅಂದರೆ ಬಾಳೇಹಣ್ಣಿನ ಸಮರ್ಪಣೆ ಮಾಡುವುದು ವಿಶೇಷ. ಸೇವಾಲಯದ ಹೊರಭಾಗದಲ್ಲೇ ಬಾಳೇಹಣ್ಣಿನ ಮಳಿಗೆ ಇದೆ. ಇಲ್ಲಿ ಸಾವಿರ- ಎರಡು ಸಾವಿರ ಹೀಗೆ ಹಣ್ಣುಗಳನ್ನು ಖರೀದಿಸಿ, ಸಮರ್ಪಿಸುತ್ತಾರೆ. ಇದರ ಜತೆಗೆ ದೇಹದ ಯಾವುದಾದರೂ ನಿರ್ದಿಷ್ಟ ಭಾಗದಲ್ಲಿ ಸಮಸ್ಯೆ ಇದ್ದಲ್ಲಿ ಅದರ ಆಕಾರವನ್ನು ಬೆಳ್ಳಿಯಲ್ಲಿ ಮಾಡಿಸಿ, ದೇವರ ಹುಂಡಿಯಲ್ಲಿ ಅರ್ಪಿಸಲಾಗುತ್ತದೆ.
ಕೆರೆ ತೊಂಡನೂರು ಎಂಬ ಮಹಾ ಕ್ಷೇತ್ರದ ಪ್ರಹ್ಲಾದ ಪ್ರತಿಷ್ಠಾಪಿತ ಯೋಗ ನರಸಿಂಹ, ನಂಬಿ ನಾರಾಯಣ, ಧರ್ಮರಾಯ ಸ್ಥಾಪಿತ ಪಾರ್ಥಸಾರಥಿ
ಉದಾಹರಣೆಗೆ ಕೆಲವು ಮಕ್ಕಳಲ್ಲಿ ಮಾತು ಬರುವುದು ತಡವಾದಲ್ಲಿ ಈ ದೇವರಿಗೆ ಹರಸಿಕೊಳ್ಳುತ್ತಾರೆ. ಅದು ಪೂರೈಸಿದ ಮೇಲೆ ಸಣ್ಣದಾಗಿ ಬೆಳ್ಳಿಯಲ್ಲಿ ನಾಲಗೆಯನ್ನು ಮಾಡಿಸಿ, ಈ ದೇವರಿಗೆ ಕಾಣಿಕೆ ಸಮೇತ ಅರ್ಪಿಸಲಾಗುತ್ತದೆ. ಅದೇ ರೀತಿ, ಕಣ್ಣು, ಕಿವಿ, ಕೈ- ಕಾಲುಗಳ ಸಮಸ್ಯೆಗೂ ಹಾಗೇ ನಡೆದುಕೊಳ್ಳಲಾಗುತ್ತದೆ.
ಸಂಕ್ರಮಣ ದಿನಗಳಂದು ವಿಶೇಷ ಪೂಜೆ
ಇನ್ನು ಈ ದೇವಾಲಯದಲ್ಲಿ ಪ್ರತಿ ಸಂಕ್ರಮಣದಲ್ಲೂ ವಿಶೇಷ ಪೂಜೆ ಇರುತ್ತದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅದರಲ್ಲೂ ಸಿಂಹ ಸಂಕ್ರಮಣ ಪೆರ್ಡೂರು ಅನಂತಪದ್ಮನಾಭ ದೇವಾಲಯದಲ್ಲಿ ಬಹಳ ವಿಶೇಷ. ಆ ದಿನ ವೆಂಕಟರಮಣ ಈ ದೇಗುಲಕ್ಕೆ ಬರುತ್ತಾನೆ ಎಂಬುದು ಪ್ರತೀತಿ. ಆ ದಿನ ನವ ವಿವಾಹಿತರು ದೇಗುಲಕ್ಕೆ ಬಂದು ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ. ಇನ್ನು ಮೀನ ಸಂಕ್ರಮಣ ದಿನದಂದು ಈ ದೇವಾಲಯದಲ್ಲಿ ರಥೋತ್ಸವ ನಡೆಯುತ್ತದೆ. ಇದು ಪ್ರತಿ ವರ್ಷ ನಡೆಯುವ ವಿಶೇಷ ಆಗಿದೆ.
ಐತಿಹ್ಯ
ಈ ದೇಗುಲಕ್ಕೆ ಎಂಟುನೂರಾ ಐವತ್ತು ವರ್ಷಗಳ ಇತಿಹಾಸ ಇದೆ. ಕೃಷ್ಣ ಶರ್ಮ ಎಂಬ ಬ್ರಾಹ್ಮಣನ ಕನಸಿನಲ್ಲಿ ದೇವರು ಬಂದು, ನಾನು ಶಿಲೆಯಲ್ಲಿ ಇದ್ದೀನಿ, ನನ್ನನ್ನು ಪೂಜೆ ಮಾಡು ಎಂದು ಹೇಳಿದಂತಾಯಿತಂತೆ. ಆತ ಶಿಲೆಯನ್ನು ಹುಡುಕುತ್ತಾ ಹೊರಟನಂತೆ. ಆಗ ಮನೆಯಲ್ಲಿ ಹಾಲನ್ನು ಕೊಡದೇ ಇದ್ದ ಹಸುವೊಂದು ಆ ಶಿಲೆಯ ಮೇಲೆ ಹಾಲನ್ನು ನೀಡುತ್ತಿತ್ತಂತೆ. ಅದನ್ನು ಕಂಡು ಅಲ್ಲಿ ಪರೀಕ್ಷಿಸಿದಾಗ ವಿಗ್ರಹ ಕಂಡುಬಂದಿದೆ. ಪೇರುಂಡು ಎಂಬ ಹೆಸರಿನಿಂದ ಪೇರುಂಡೂರು ಎಂಬುದು ಪೆರ್ಡೂರು ಎಂದಾಯಿತು.
ಆ ವಿಗ್ರಹವನ್ನು ತರುವಾಗ ದಾರಿಯಲ್ಲಿ ಬಾಳೇಹಣ್ಣು ಮಾರಾಟ ಮಾಡುವನು ಅದನ್ನು ನಿರ್ಲಕ್ಷ್ಯ ಮಾಡಿದನಂತೆ. ಆ ನಂತರ ಆತನಿಗೆ ನಾನಾ ಸಮಸ್ಯೆಗಳಾಯಿತು. ಆ ನಂತರ ಅವನು ದೇವರಿಗೆ ಬಾಳೇಹಣ್ಣು ಸಮರ್ಪಣೆ ಮಾಡಿದ ಮೇಲೆ ಸಮಸ್ಯೆಗಳು ಬಗೆಹರಿಯಿತು ಎಂದು ದೇವಾಲಯದಲ್ಲೇ ಪೂಜೆಯ ಭಾಗವಾಗಿರುವ ರಮೇಶ್ ಅವರು “ಶ್ರೀಗುರುಭ್ಯೋ.ಕಾಮ್”ಗೆ ಮಾಹಿತಿ ನೀಡಿದರು.
ಸೂರಾಲರಸರು ನೀಡಿದ ಭೂಮಿ
ದೇವಾಲಯದ ಒಳಗೆ ಎರಡು ಶಾಸನಗಳಿವೆ. ಅದು ಹಳೇಗನ್ನಡದಲ್ಲಿದೆ. ಸ್ಥಳೀಯರು ಹಾಗೂ ಇಲ್ಲಿಯ ಪೂಜೆಯಲ್ಲಿ ಭಾಗವಾಗಿರುವ ರಮೇಶ್ ಅವರು ಹೇಳುವಂತೆ ವಿಜಯ ನಗರದ ಅರಸರ ಸಾಮಂತರಾಗಿದ್ದ ಸೂರಾಲರಸರು ಈ ದೇವಾಲಯಕ್ಕೆ ಭೂಮಿ ನೀಡಿದ್ದಾರೆ. ಆ ವಂಶಸ್ಥರು ಇವತ್ತಿಗೂ ದೇವಾಲಯಕ್ಕೆ ನಡೆದುಕೊಳ್ಳುತ್ತಾರೆ.
ಇನ್ನು ಪೆರ್ಡೂರು ಅನಂತಪದ್ಮನಾಭ ಸ್ವಾಮಿಯ ಪೂಜೆಯ ಹೊಣೆ ಅಡಿಗ ಕುಟುಂಬದವರು. ಸದ್ಯಕ್ಕೆ ರಘುಪ್ರಸಾದ ಅಡಿಗರು ಪ್ರಧಾನ ಅರ್ಚಕರಾಗಿದ್ದಾರೆ. ಈ ದೇವಸ್ಥಾನಕ್ಕೆ ಬಹಳ ಹತ್ತಿರದ ವಿಮಾನ ನಿಲ್ದಾಣ ಅಂದರೆ ಮಂಗಳೂರು ವಿಮಾನ ನಿಲ್ದಾಣವಾಗಿದೆ. ಮಂಗಳೂರಿನಿಂದ ಈ ದೇವಾಲಯಕ್ಕೆ ಒಂದೂವರೆ ಗಂಟೆಯ ಪ್ರಯಾಣ ಆಗುತ್ತದೆ.
ಹರಕೆಯ ಕ್ರಮ
ಇಲ್ಲಿ ಭಕ್ತರು ಮೊದಲಿಗೆ ತಮ್ಮ ಹರಕೆಯನ್ನು ಹೇಳಿಕೊಳ್ಳುತ್ತಾರೆ. ಆ ನಂತರ ಅದು ನೆರವೇರಿದ ಮೇಲೆ ದೇವರಿಗೆ ಬಾಳೇಹಣ್ಣನ್ನು ಸಮರ್ಪಣೆ ಮಾಡುತ್ತಾರೆ. ಅದನ್ನು ದೇವರಿಗೆ ಅರ್ಪಿಸಿದ ಮೇಲೆ ವಾಪಸ್ ಭಕ್ತರಿಗೆ ನೀಡಲಾಗುತ್ತದೆ. ಅದನ್ನು ಆ ದಿನ ಅಲ್ಲಿಗೆ ಬಂದಂಥ ಭಕ್ತರಿಗೆ ಹಂಚಬಹುದಾಗಿದೆ.
ಇನ್ನು ಆರಂಭದ ಹೇಳಿದಂತೆ ಬೆಳ್ಳಿ ನಾಲಗೆ, ಕಣ್ಣು, ಕೈ- ಕಾಲು, ಕಿವಿಯನ್ನು ಸಹ ಆಯಾ ಭಕ್ತರ ಹರಕೆಗೆ ತಕ್ಕಂತೆ ಅರ್ಪಿಸಲಾಗುತ್ತದೆ.
ದೇವಾಲಯದ ಸಮಯ
ಪೆರ್ಡೂರು ಅನಂತ ಪದ್ಮನಾಭ ದೇವಾಲಯ ಬೆಳಗ್ಗೆ ಆರೂವರೆಗೆ ತೆರೆಯಲಾಗುತ್ತದೆ. ಆದರೆ ಪೂಜೆ ಶುರುವಾಗುವುದು ಬೆಳಗ್ಗೆ ಏಳು ಗಂಟೆಯಿಂದ. ಆಗಿನಿಂದ ರಾತ್ರಿ ಎಂಟು ಗಂಟೆಯ ತನಕ ದೇವಾಲಯ ತೆರೆದಿರುತ್ತದೆ.
ಒಂದು ದಿನದಲ್ಲಿ ಹದಿನಾಲ್ಕು ಬಗೆಯ ಪೂಜೆಗಳು ಇಲ್ಲಿನ ದೇವಾಲಯದಲ್ಲಿ ಆಗುತ್ತದೆ. ಇನ್ನು ಒಂದು ದಿನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬಾಳೇಹಣ್ಣನ್ನು ಇಲ್ಲಿ ಹರಕೆ ಹೊತ್ತಂಥ ಭಕ್ತರು ಸಮರ್ಪಣೆ ಮಾಡುತ್ತಾರೆ. ಒಂದಕ್ಕೆ ಇಷ್ಟು ಅಂತಲೂ ಕೆಲವೊಮ್ಮೆ ಕೇಜಿ ಲೆಕ್ಕದಲ್ಲೂ ದೇವಾಲಯದ ಹೊರ ಭಾಗದಲ್ಲಿ ಬಾಳೇಹಣ್ಣನ್ನು ಖರೀದಿಸಬಹುದು.