Sri Gurubhyo Logo

ಐದು ವರ್ಷದೊಳಗಿನ ಮಕ್ಕಳ ಶ್ರೇಯಸ್ಸಿಗಾಗಿ ಮಾಡುವಂಥ ಬಾಲ ಮಾರ್ಕಂಡೇಯ ಹೋಮದ ಬಗ್ಗೆ ನಿಮಗೆಷ್ಟು ಗೊತ್ತು?

Bala Markandeya Homa
ಬಾಲ ಮಾರ್ಕಂಡೇಯ ಹೋಮ

ಈ ಲೇಖನದಲ್ಲಿ ಬಹಳ ಮುಖ್ಯವಾದ ಹೋಮವೊಂದರ ಬಗ್ಗೆ ತಿಳಿಸಿಕೊಡಲಾಗುತ್ತಿದೆ. ಅದರಲ್ಲೂ ಐದು ವರ್ಷದೊಳಗಿನ ಮಕ್ಕಳು ಮನೆಯಲ್ಲಿ ಇದ್ದಲ್ಲಿ ಇದನ್ನು ಕಡ್ಡಾಯವಾಗಿ ಓದಬೇಕು. ಈ ಹೋಮದ ಹೆಸರು ಬಾಲ ಮಾರ್ಕಂಡೇಯ ಹೋಮ. ಯಾವುದೇ ಮಗುವಿಗೆ ಐದು ವರ್ಷ ತುಂಬುವ ತನಕ ಪ್ರತಿ ವರ್ಷ ಈ ಹೋಮ ಮಾಡಿಕೊಳ್ಳುವುದು ಮುಖ್ಯ. ಆ ಮಗುವಿನ ಜನ್ಮ ಮಾಸದಲ್ಲಿ ಅದರ ನಕ್ಷತ್ರಕ್ಕೆ ತಾರಾ ಬಲ ಇರುವಂಥ ದಿನವನ್ನು ನೋಡಿಕೊಂಡು, ಮನೆಯಲ್ಲಿ ಮಾಡಿಸಬಹುದು. ಒಂದು ವೇಳೆ ಮನೆಯಲ್ಲಿ ಮಾಡಿಸುವುದಕ್ಕೆ ಅನುಕೂಲ ಇಲ್ಲದ ಪಕ್ಷದಲ್ಲಿ ನದಿ ತೀರದಲ್ಲಿ, ದೇವಾಲಯಗಳಲ್ಲಿ ಮಾಡಿಸಬಹುದು. ಮಾರ್ಕಂಡೇಯರ ಬಗ್ಗೆ ಕಥೆ ಗೊತ್ತಿರುವವರಾದರೆ ಈ ಬಾಲ ಮಾರ್ಕಂಡೇಯ ಹೋಮದ ಪ್ರಾಶಸ್ತ್ಯ ತುಂಬ ಸವಿಸ್ತಾರವಾಗಿ ವಿವರಿಸುವ ಅಗತ್ಯ ಇಲ್ಲ. 

ಮಾರ್ಕಂಡೇಯರ ಆಯುಷ್ಯ ಮೊದಲಿಗೆ ಏಳು ವರ್ಷ ಎಂದಿರುತ್ತದೆ. ಆಗ ಆ ಬಾಲಕನ ಆಯುಷ್ಯ ವೃದ್ಧಿ ಆಗಲಿ ಎಂಬ ಕಾರಣಕ್ಕೆ ಪೋಷಕರು ಆ ಹುಡುಗನಿಗೆ ಎಲ್ಲರಿಂದ ಆಶೀರ್ವಾದ ಮಾಡಿಸುತ್ತಿರುತ್ತಾರೆ. ಹಾಗೆ ಕೊನೆಗೆ ಶಿವನ ಅನುಗ್ರಹ ಪಡೆದ ಮಾರ್ಕಂಡೇಯರು ಆ ದೇವರ ಅನುಗ್ರಹ ಪಡೆದು, ಏಳು ಜನ ಚಿರಂಜೀವಿಗಳ ಸಾಲಿಗೆ ಎಂಟನೆಯವರಿಗೆ ಸೇರ್ಪಡೆ ಆಗುತ್ತಾರೆ. ಯಾರು ಉಳಿದ ಆ ಏಳು ಮಂದಿ ಚಿರಂಜೀವಿಗಳು ಅಂದರೆ, ಅಶ್ವತ್ಥಾಮ, ಬಲಿ ಚಕ್ರವರ್ತಿ, ವೇದವ್ಯಾಸ, ಆಂಜನೇಯ, ವಿಭೀಷಣ, ಕೃಪಾಚಾರ್ಯ, ಪರಶುರಾಮರು ಇವರೇ ಆ ಏಳು ಮಂದಿ.

ಮಗು ಹೆಣ್ಣೋ ಅಥವಾ ಗಂಡೋ ಅದಕ್ಕೆ ಐದು ವರ್ಷ ಪೂರ್ಣ ಆಗುವ ತನಕ ಪ್ರತಿ ವರ್ಷ ಈ ಬಾಲ ಮಾರ್ಕಂಡೇಯ ಹೋಮ ಮಾಡಿಸುವುದು ಉತ್ತಮ. ಕುಟುಂಬದಲ್ಲಿ ನಿರಂತರವಾಗಿ ಪೂಜೆ ಮಾಡಿಕೊಂಡು ಬರುತ್ತಿರುವ ಪುರೋಹಿತರ ಮೂಲಕವೇ ಇದನ್ನು ಮಾಡಿಸಬಹುದು. ಇಲ್ಲದಿದ್ದಲ್ಲಿ ಕೆಲವರು ಕರ್ನಾಟಕದಿಂದ ಹೊರಗೆ ಅಥವಾ ಭಾರತದಿಂದಲೇ ಹೊರಗೆ ಇರುವವರು ಇರುತ್ತಾರೆ. ಅಂಥವರು ನಂಬಿಕಸ್ತ ವ್ಯಕ್ತಿಗಳಿಂದ ಈ ಹೋಮವನ್ನು ಮಾಡಿಸಿ, ಅದಕ್ಕೆ ಸಂಕಲ್ಪವನ್ನು ನೀಡಬಹುದು. 

ಕೆರೆ ತೊಂಡನೂರು ಎಂಬ ಮಹಾ ಕ್ಷೇತ್ರದ ಪ್ರಹ್ಲಾದ ಪ್ರತಿಷ್ಠಾಪಿತ ಯೋಗ ನರಸಿಂಹ, ನಂಬಿ ನಾರಾಯಣ, ಧರ್ಮರಾಯ ಸ್ಥಾಪಿತ ಪಾರ್ಥಸಾರಥಿ

ಆ ಸಂದರ್ಭದಲ್ಲಿ ಹೋಮದ ನೇರ ಪ್ರಸಾರವನ್ನು ನೋಡುವ ಅವಕಾಶ ಇದ್ದಲ್ಲಿ ಸಂಕಲ್ಪ, ಹೋಮದ ಅಗ್ನಿಪ್ರತಿಷ್ಠೆ, ಪೂರ್ಣಾಹುತಿ ಹೀಗೆ ಮುಖ್ಯ ಘಟ್ಟದಲ್ಲಿ  ವಿಡಿಯೋ ಮೂಲಕವಾಗಿಯೇ ಪಾಲ್ಗೊಳ್ಳಬಹುದು. ಐದು ವರ್ಷದೊಳಗೆ ಯಾವುದೇ ಮಗುವಿಗೆ ಇರಬಹುದಾದ ಗ್ರಹಚಾರ ವಶಾತ್ ಸಮಸ್ಯೆಗಳು, ಬಾಲ ಗ್ರಹಾದಿ ದೋಷಗಳು, ಶರೀರ ಪೀಡೆ ಹೀಗೆ ನಾನಾ ಬಗೆಯ ದೋಷಗಳಿಗೆ ಈ ಬಾಲ ಮಾರ್ಕಂಡೇಯ ಹೋಮ ಪರಿಹಾರ ಎಂಬಂತೆ ಆಗುತ್ತದೆ.

ಇದನ್ನು ಮಾಡಿಸುವ ಮುನ್ನ ತಾರಾ ಬಲವನ್ನು ನೋಡಿಕೊಳ್ಳಬೇಕು. ಆ ಮಗುವಿನ ಜನ್ಮ ನಕ್ಷತ್ರ ಇದ್ದಲ್ಲಿ ಉತ್ತಮ. ಇಲ್ಲದಿದ್ದಲ್ಲಿ ಸಂಪತ್ ತಾರೆ, ಕ್ಷೇಮತಾರೆ, ಸಾಧಕ ತಾರೆ ಇಂಥ ಉತ್ತಮ ದಿನಗಳನ್ನೇ ಆರಿಸಿಕೊಂಡು, ಆ ದಿನ ಈ ಹೋಮವನ್ನು ಮಾಡಬೇಕು. ಮಾರ್ಕಂಡೇಯ ಹೋಮದ ಜತೆಗೆ ನವಗ್ರಹ ಪೂಜೆ, ನಕ್ಷತ್ರ ಶಾಂತಿ ಹಾಗೂ ಆಯುಷ್ಯ ಹೋಮ ಕೂಡ ಆಗುತ್ತದೆ. ಇವೆಲ್ಲ ಆ ಮಗುವಿನ ರಕ್ಷಣೆಗೆ ನೆರವಾಗುತ್ತವೆ. ಹುಟ್ಟಿದ ಹಬ್ಬವನ್ನು ಅದ್ಧೂರಿಯಾಗಿ ಆಚರಿಸ ಬಯಸುವುದು ತುಂಬ ಸಹಜ. ಒಂದು ವೇಳೆ ನಂಬಿಕೆ ಇದ್ದಲ್ಲಿ, ಜತೆಗೆ ಬಾಲ ಮಾರ್ಕಂಡೇಯ ಹೋಮದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು, ಇದನ್ನು ಮಾಡಿಸಿಕೊಂಡರೆ ಮಗುವಿಗೆ ಉತ್ತರೋತ್ತರ ಅಭಿವೃದ್ಧಿ ಆಗುತ್ತದೆ.

ಈ ಹೋಮವನ್ನು ಮಾಡಿದ ದಿನ ಬ್ರಹ್ಮಚಾರಿಗಳ ಪೂಜೆ, ಅವರಿಗೆ ವಸ್ತ್ರ ಸಮರ್ಪಣೆ, ದಕ್ಷಿಣೆ ಮೊದಲಾದವು ನೀಡುವುದು ಸಹ ಉತ್ತಮ ಫಲದಾಯಕ. ಇದರ ಜತೆಗೆ ನವ ಧ್ಯಾನಗಳನ್ನು ದಾನ ಮಾಡುವುದು ಸಹ ಒಳ್ಳೆಯದು. ಅನುಷ್ಠಾನದಲ್ಲಿ ಇರುವಂಥವರಿಗೆ ಒಂದು ದಿನಕ್ಕೆ ಅವರಿಗೆ ಆಗುವಷ್ಟು ಅಡುಗೆಗೆ ಪದಾರ್ಥಗಳನ್ನು ದಾನ ಮಾಡುವುದು ಸಹ ಈ ಬಾಲ ಮಾರ್ಕಂಡೇಯ ಹೋಮದ ದಿನದ ಫಲಗಳನ್ನು ವೃದ್ಧಿ ಮಾಡುತ್ತವೆ.

ಅಂದಹಾಗೆ, ಬಾಲ ಮಾರ್ಕಂಡೇಯ ಹಾಗೂ ಮಾರ್ಕಂಡೇಯ ಹೀಗೆ ಎರಡೂ ಹೆಸರುಗಳಲ್ಲಿ ಹೋಮವನ್ನು ಮಾಡಲಾಗುತ್ತದೆ. ಮೊದಲನೆಯದು, ಬಾಲ ಮಾರ್ಕಂಡೇಯ ಹೋಮವು ಮಕ್ಕಳ ಆರೋಗ್ಯ, ಆಯುಷ್ಯದ ವೃದ್ಧಿಗಾಗಿ ಮಾಡಿದಲ್ಲಿ, ಮಾರ್ಕಂಡೇಯ ಹೋಮವನ್ನು ಷಷ್ಟ್ಯಪೂರ್ತಿ, ಅಂದರೆ ಅರವತ್ತು ವರ್ಷ ತುಂಬುವ ಸಂದರ್ಭದಲ್ಲಿ ಮಾಡಲಾಗುತ್ತದೆ. ಇವುಗಳು ಮುಖ್ಯವಾಗಿ ಕರ್ತೃವಿನ ಆರೋಗ್ಯ, ಆಯುಷ್ಯದ ರಕ್ಷಣೆ ಮಾಡುತ್ತದೆ.   

ಈ ಬಾಲ ಮಾರ್ಕಂಡೇಯ ಹೋಮವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹೀಗೆ ನಾಲ್ಕು ವರ್ಣದವರೂ ಮಾಡಬಹುದು. ಅಷ್ಟೇ ಅಲ್ಲ, ಈ ಆಚರಣೆಯಲ್ಲಿ ನಂಬಿಕೆ- ವಿಶ್ವಾಸ ಇರುವಂಥ ಯಾರು ಬೇಕಾದರೂ ಮಾಡಿಸಬಹುದು.

– ವಿದ್ವಾನ್ ಮಂಜುನಾಥ್ ಭಾರದ್ವಾಜ್ (ಜ್ಯೋತಿಷಿಗಳು- ಪುರೋಹಿತರು), ಜಾತಕಗಳನ್ನು ಮಾಡಿಸಲು, ಪೌರೋಹಿತ್ಯಕ್ಕೆ ಹಾಗೂ ಜ್ಯೋತಿಷಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಭೇಟಿ ಮಾಡುವುದಕ್ಕೆ ಮೊಬೈಲ್ ಫೋನ್ ಸಂಖ್ಯೆ- 8050789904 ಸಂಪರ್ಕಿಸಿ.

Latest News

Related Posts